ಸಾಮಾನ್ಯನ ಕಣ್ಣಲ್ಲಿ ಕರಾವಳಿ ಕೋಮುವಾದ
-ಪ್ರಸಾದ್ ಗಣಪತಿ
ಪದೇ ಪದೇ ಕರಾವಳಿಯಲ್ಲಿ ಗಲಭೆಯಾದಾಗ ಕರಾವಳಿ ಕೋಮುವಾದ, ಕರಾವಳಿ ತಾಲಿಬಾನ್ ಎನ್ನುವ ಮಾತುಗಳು ಕೇಳಿ ಬರುತ್ತವೆ. ಪಕ್ಷವೊಂದರ ಆಡಳಿತಾವಧಿಯಲ್ಲಿ ನಡೆದ ಒಂದು ಸಮುದಾಯದ ಓಲೈಕೆ ನೀತಿಗಳು, ಹಾಗೂ ಒಂದು ಸಮುದಾಯದ ಮೇಲಿನ ಹಲ್ಲೆಗಳ ಬಗ್ಗೆ ತಳೆದ ಮೃದು ನೀತಿಗಳು ಈ ಅಸಹನೆ ಇದರ ಬೆನ್ನಿಗಿದ್ದಾವೆ ಎಂದು ಯಾರು ಹೇಳುವುದಿಲ್ಲ. ಪುತ್ತೂರಿನ ಹಿಂದೂ ಯುವತಿ ಸೌಮ್ಯ ಭಟ್ ಳನ್ನು ಇರಿದು ಕೊಂದಿದ್ದು, ಕಾಟಿಪಳ್ಳದಲ್ಲಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ, ಬಳ್ಕುಂಜೆ ರೇಪ್ ಮತ್ತು ಆತ್ಮಹತ್ಯೆ, ಲವ್ ಜಿಹಾದ್ ಮತ್ತು ಸಾಮಾಜಿಕ ತಾಣಗಳಲ್ಲಿ ಬೆತ್ತಲೆ ಚಿತ್ರಗಳ ( ಹಿಂದೂ ಯುವತಿಯರ ಚಿತ್ರ) ಈ ರೀತಿಯ ಪ್ರಕರಣಗಳಾದಗ ಸುಮ್ಮನಿರುವ ಬುದ್ಧಿ ಜೀವಿ ಬಳಗ, ಇನ್ನೊಂದು ಸಮುದಾಯದ ಮೇಲೆ ಹಲ್ಲೆ ನಡೆದಾಗ ಮಾತನಾಡುವುದು, ದೂರದೂರಲ್ಲಿ ಕುಳಿತು ಒಂದು ಪ್ರದೇಶದ ಜನರನ್ನು ಕೋಮುವಾದಿಗಳೆನ್ನುವುದು ಸತ್ಯಕ್ಕೆ ಅಪಚಾರವೆಸಗುವ ಕೆಲಸ. ಹಿಂದೆ ರೆಸಾರ್ಟ್ ಅಟ್ಯಾಕ್ ಆದಾಗ ಬರೆದ ಒಂದು ಲೇಖನದಲ್ಲಿ ನನ್ನ ಗ್ರಹಿಕೆಯನ್ನು ಬರೆದಿದ್ದೇನೆ.
ದೃಶ್ಯ ಮಾಧ್ಯಮದಲ್ಲಿ ಒಂದೇ ಸವನೆ ಮಂಗಳೂರಿನ ಪಡೀಲ್‌ನಲ್ಲಿ ನಡೆದ ಯುವಕ- ಯುವತಿಯರ ಮೇಲಿನ ಹಲ್ಲೆಯನ್ನು ನೋಡುತ್ತಾ ಯಾವುದು ಸರಿ ? ಯಾವುದು ತಪ್ಪು ? ಎಂದು ನಿರ್ಧರಿಸಲಾಗದ ಸ್ಥಿತಿಯಲ್ಲಿ ಜನರು ಇರಬಹುದುದಾದ ಈ ಹೊತ್ತಿನಲ್ಲಿ ನನ್ನ ಅಭಿಪ್ರಾಯ ಬರೆಯುತ್ತಿರುವೆ. ಸಾಮಾನ್ಯವಾಗಿ ಕೋಮುವಾದ, ಧರ್ಮ ರಕ್ಷಣೆಯ ಕೃತ್ಯವೆಂದು ಹೇಳಲ್ಪಡುತ್ತಿರುವ ಇವು ಇನ್ನೊಂದು ಮಗ್ಗುಲಲ್ಲಿ ನೋಡಿದರೆ ಸಾಂಸ್ಕೃತಿಕ,ಸಾಮಾಜಿಕ, ಸಂಘರ್ಷವಾಗಿ ಗೋಚರಿಸುತ್ತವೆ. ಸಾಮಾನ್ಯವಾಗಿ ಇಲ್ಲಿ ಏನು ನಡೆಯುತ್ತಿದೆ ಎಂದು ಇತರೆ ಪ್ರದೇಶದಲ್ಲಿ ಕುಳಿತವರಿಗೆ ಅರ್ಥವಾಗುವುದು ಕೊಂಚ ಕಷ್ಟ.





