ವಿಗ್ರಹಾರಾಧನೆಯ ರಹಸ್ಯ ತತ್ವ
– ಮಂಜುನಾಥ ಅಜ್ಜಂಪುರ
ಮಹರ್ಷಿ ಅರವಿಂದರಂತಹ ಋಷಿಮುನಿಗಳು, ಆನಂದಕುಮಾರಸ್ವಾಮಿ, ಸ್ಟೆಲ್ಲಾ ಕ್ರ್ಯಾಮ್ರಿಶ್, ಅಲಿಸ್ ಬೋನರ್ರಂತಹ ವಿದ್ವಾಂಸರು ಹಿಂದೂ ವಿಗ್ರಹಾರಾಧನೆಯ ಬಗೆಗೆ ಅಧ್ಯಯನ ಮಾಡಿದ್ದಾರೆ, ಧ್ಯಾನಿಸಿದ್ದಾರೆ, ಚಿಂತನೆ ನಡೆಸಿದ್ದಾರೆ. ಮಾನವ ಕೋಟಿಯ ಮನೋಭೂಮಿಕೆಯ ಸಾಮಾನ್ಯ ಮಿತಿಗಳನ್ನು ಮೀರಿದ, ದಾಟಿದ ರೂಪ – ಸತ್ತ್ವ – ಗುಣಲಕ್ಷಣಗಳನ್ನು ಈ ಹಿಂದೂ ವಿಗ್ರಹಗಳಲ್ಲಿ ಕಾಣುತ್ತೇವೆ, ಎಂದು ಅವರೆಲ್ಲಾ ದೃಢವಾಗಿ ಗಟ್ಟಿಯಾಗಿ ಹೇಳುತ್ತಾರೆ. ಇವು ಮನುಷ್ಯರ – ಪ್ರಾಣಿಪಕ್ಷಿಗಳ ಕೇವಲವಾದ ಭೌತಿಕ ರೂಪಗಳ ನೆರಳಚ್ಚುಗಳು ಅಲ್ಲ, ಎಂದೂ ಹೇಳಿದ್ದಾರೆ. ಅವು ಅನಂತತೆಯನ್ನು – ಅಸೀಮವಾದುದನ್ನು ಒಂದು ಪರಿಮಿತಿಯಲ್ಲಿ – ಸೀಮಿತ ಸ್ವರೂಪದಲ್ಲಿ ಕಾಣುವಂತಹ, ಅಮೂರ್ತವಾದುದನ್ನು ಮೂರ್ತಸ್ವರೂಪದಲ್ಲಿ ನೋಡುವಂತಹ ಪರಿಕಲ್ಪನೆಗಳು, ಎನ್ನುತ್ತಾರೆ. ಅವು ಅವುಗಳ ಭೌತಿಕ ಸ್ವರೂಪಗಳನ್ನು ಮೀರಿದ ಅತೀತವಾದುದನ್ನು ಹೇಳುತ್ತವೆ; ಬಹಿರಂಗದಿಂದ ಅಂತರಂಗದೆಡೆಗೆ ನಮ್ಮ ಆಲೋಚನೆಗಳು – ಚಿಂತನೆಗಳು ಹರಿಯುವಂತೆ ಮಾಡುತ್ತವೆ, ಎಂದಿದ್ದಾರೆ.
ಹಿಂದೂ ಶಿಲ್ಪಶಾಸ್ತ್ರಗಳು, ಶಿಲೆಯಲ್ಲಿ – ಲೋಹದಲ್ಲಿ ಮತ್ತು ಬೇರೆ ಬೇರೆ ವಸ್ತು ಬಳಸಿ ಈ ಹಿಂದೂ ವಿಗ್ರಹಗಳನ್ನು ಕೆತ್ತುವಾಗ, ರೂಪಿಸುವಾಗ ಏನೆಲ್ಲಾ ಮಾಡಬೇಕು, ಯಾವೆಲ್ಲಾ ಬಾಹ್ಯರೂಪದ ತಾಂತ್ರಿಕವಾದ ಸೂತ್ರ – ವಿಧಾನಗಳನ್ನು ಅನುಸರಿಸಬೇಕು, ಎನ್ನುವುದನ್ನು ಮಾತ್ರವೇ ಹೇಳುವುದಿಲ್ಲ. ಒಂದು ದೇವತೆಯ ಮೂರ್ತಿಯನ್ನು ಕೆತ್ತುವ – ನಿರ್ಮಿಸುವ ಪೂರ್ವದಲ್ಲಿ, ಆ ದೇವತೆಯ ಸ್ವರೂಪ ಲಕ್ಷಣಗಳನ್ನು ಮನೋಭೂಮಿಕೆಯಲ್ಲಿ ಕಲ್ಪಿಸಿಕೊಳ್ಳುವುದಕ್ಕೆ ಮೊದಲು, ಶಿಲ್ಪಿಯು – ಕಲಾವಿದನು ಎಷ್ಟು ಸಮಯ ಉಪವಾಸವಿರಬೇಕು, ಎಷ್ಟೆಷ್ಟು ಮತ್ತು ಹೇಗೆ ಹೇಗೆ ಪ್ರಾರ್ಥನೆ ಮಾಡಬೇಕು ಮತ್ತು ತನ್ನನ್ನು ತಾನು ಹೇಗೆಲ್ಲಾ ಶುದ್ಧೀಕರಣ ಮಾಡಿಕೊಳ್ಳಬೇಕು, ಎಂಬುದರ ಬಗೆಗೆ ವಿಸ್ತೃತವಾದ ಸಂಹಿತೆಯನ್ನೇ ತಿಳಿಸುತ್ತವೆ. ತದನಂತರವೇ, ಮೂರ್ತಿ ನಿರ್ಮಿಸಲು ಅನುಮತಿ ದೊರೆಯುತ್ತದೆ. ಭೂಮಂಡಲದ ತುಂಬ ವ್ಯಾಪಿಸಿರುವ – ಕಾಣುವ ಬಹುಸಂಖ್ಯೆಯ ದೈವಿಕವಾದ ಶಿಲ್ಪಗಳಲ್ಲಿ – ಚಿತ್ರಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ, ಚಿದಂಬರಂ ದೇವಾಲಯದ ನಟರಾಜ, ಸಾರನಾಥದ ಬುದ್ಧ, ವಿದಿಶಾ ನಗರದ ವರಾಹಮೂರ್ತಿಗಳಂತಹ ಅಪೂರ್ವ ಪ್ರತಿಮೆಗಳ ನಿರ್ಮಿತಿಯ ಆಂತರ್ಯವನ್ನು – ಮಹತ್ತ್ವವನ್ನು, ಈ ಹಿಂದೂ ಶಿಲ್ಪಶಾಸ್ತ್ರಗಳ ಉದಾತ್ತ ನಿಯಮಗಳು ಮಾತ್ರ ವಿವರಿಸಬಲ್ಲವು. ಅಂತಹ ಮಹೋನ್ನತ ವಾದ ಸಂಹಿತೆಯ ಪರಿಚಯವಿಲ್ಲದ ಆಧುನಿಕ ಶಿಲ್ಪಿಗಳು, ಮೂಲ ಶಿಲ್ಪಕಲಾಕೃತಿ ಗಳಂತಹ ಕೌತುಕಗಳನ್ನು – ವಿಸ್ಮಯಗಳನ್ನು ಸೃಷ್ಟಿಸಲಾರರು ಮತ್ತು ಬರಿಯ ಅಣಕುರೂಪಗಳನ್ನು ಮಾತ್ರ ನೀಡಬಲ್ಲರು.
ಮತ್ತಷ್ಟು ಓದು