ಸತ್ಯ ಕೂಡ ಚಲನಶೀಲ ಎಂದರಿವು ಮೂಡಿಸಿದ ಅನಂತಮೂರ್ತಿ
-ಡಾ ಅಶೋಕ್ ಕೆ ಆರ್.

ಜಾತ್ಯತೀತವಾಗಿಯೇ ಬದುಕಿ ಬರೆದು ಬೆಳೆದ ಅವರು ಕುಮಾರಸ್ವಾಮಿ, ದೇವೇಗೌಡರನ್ನು ಇದ್ದಕ್ಕಿದ್ದಂತೆ ಬೆಂಬಲಿಸಿಬಿಡುತ್ತಾರೆ, ಕೆಲವೇ ವರುಷಗಳಲ್ಲಿ ಜೀವನಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಕಾಂಗ್ರೆಸ್ಸನ್ನು ಸಿದ್ಧರಾಮಯ್ಯನವರ ಮೇಲಿನ ನಂಬುಗೆಯಿಂದ ಗೆಲ್ಲಿಸಿ ಎಂದು ಪತ್ರಿಕಾ ಹೇಳಿಕೆ ಕೊಡುತ್ತಾರೆ. ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಅದರಷ್ಟೇ ಅಪಾಯಕಾರಿ ಎಂಬ ಅರಿವಿದ್ದೂ ಕಾಂಗ್ರೆಸ್ಸಿಗೆ ಮತಹಾಕಿ ಎಂದು ಹೇಳಿಬಿಡುತ್ತಾರೆ. ಇನ್ನೊಂದೈದು ವರುಷಗಳು ಅವರು ಬದುಕಿದ್ದರೆ ಮೋದಿ ಸಂಪೂರ್ಣ ಸರಿಯಿಲ್ಲದಿದ್ದರೂ ಪರ್ಯಾಯಗಳಿಲ್ಲದ ಕಾರಣ, ಇರುವ ಪರ್ಯಾಯಗಳು ಮೋದಿಗಿಂತ ಅಪಾಯಕಾರಿಯಾಗಿರುವ ಕಾರಣ ಮೋದಿಯನ್ನೇ ಗೆಲ್ಲಿಸಿದರೆ ಒಳ್ಳೆಯದೇನೋ ಎಂದು ಹೇಳಿಕೆ ನೀಡಿದ್ದರೂ ಅನಂತಮೂರ್ತಿಯವರ ಬಗೆಗೆ ಅಚ್ಚರಿಯಾಗುತ್ತಿರಲಿಲ್ಲ. ಇದು ಅವಕಾಶವಾದಿತನ, ಸ್ವಾರ್ಥಕ್ಕಾಗಿ ಕ್ಷಣಕ್ಕೊಂದು ಬಣ್ಣ ಬದಲಿಸುವ ನೀಚತನ – ಇನ್ನು ಅನೇಕಾನೇಕ ರೀತಿಯಲ್ಲಿ ಅವರನ್ನು ಟೀಕಿಸಿದ್ದರೂ ಅವರದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತಿರಲಿಲ್ಲವೇನೋ. ಯಾಕೆಂದರೆ ಅನಂತಮೂರ್ತಿ (ನಾನವರನ್ನು ಅವರ ಬರಹಗಳ ಮೂಲಕ ತಿಳಿದುಕೊಂಡಂತೆ) ಇದ್ದಿದ್ದೇ ಹಾಗೆ. ಸತ್ಯವೆಂಬುದು ಅವತ್ತಿನ ಆ ಮಟ್ಟಿಗಿನ ವಾಸ್ತವವೇ ಹೊರತು ಅದು ಸರ್ವಕಾಲಿಕ ಸತ್ಯವಾಗಲು ಸಾಧ್ಯವೇ ಇಲ್ಲ ಎಂಬುದು ಅವರ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ.
ಉಂಡವರ ತೇಗು ಉಳಿದವರ ಕೊರಳ ಉರುಲಾಗದಿರಲಿ – ಯು.ಆರ್.ಎ
ಅನಂತಮೂರ್ತಿ ಕೆಲವರಿಗೆ ಮೇಷ್ಟ್ರಾಗಿ, ಕೆಲವರಿಗೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಯಾಗಿ, ಇನ್ನು ಹಲವರಿಗೆ ಚಳುವಳಿಕಾರನಾಗಿ ದಕ್ಕಿದರೆ ಬಹುತೇಕರಿಗೆ ಅವರು ದಕ್ಕಿದ್ದು ಅವರ ಬರಹಗಳ ಮೂಲಕ ಲೇಖಕರಾಗಿ. ಅವರ ಕೆಲವು ಇತ್ತೀಚಿನ ಲೇಖನಗಳನ್ನು ಓದುತ್ತಿದ್ದಾಗ ಅವರ ಹಳೆಯ ಲೇಖನಗಳಲ್ಲಿ ಇದಕ್ಕೆ ತದ್ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಂತಿತ್ತಲ್ಲ ಎಂಬ ಆಲೋಚನೆ ಮೂಡಿದರೆ ಅದು ಸಮಾಜದ ಚಲನಶೀಲತೆಯ ಬಗೆಗಿನ ನಂಬುಗೆಯನ್ನು ಧೃಡಪಡಿಸುತ್ತಿತ್ತೇ ಹೊರತು ಅನಂತಮೂರ್ತಿಯವರ ಅನುಕೂಲ ಸಿದ್ಧಾಂತವನ್ನಲ್ಲ. ಒಂದು ಇಸಂಅನ್ನು ಒಪ್ಪಿಕೊಂಡವರು ಆ ಇಸಂನಲ್ಲಿ ತಪ್ಪುಗಳಿದ್ದಾಗ್ಯೂ ಅದನ್ನೇ ಅಪ್ಪಿ ಒಪ್ಪಬೇಕೆನ್ನುವವರಿಗೆ ಅನಂತಮೂರ್ತಿ ದ್ವಂದ್ವದ ಮೂರ್ತಿಯಾಗಿ ಕಂಡಿದ್ದರೆ ಅಚ್ಚರಿಪಡಬೇಕಿಲ್ಲ. ಹಳೆಯ ಅಭಿಪ್ರಾಯ ತಪ್ಪಾಗಿದ್ದರೆ ಅದನ್ನು ಒಪ್ಪುವ ಗುಣ ಎಲ್ಲರಲ್ಲೂ ಕಾಣುವುದು ಕಷ್ಟಸಾಧ್ಯ. ಮತ್ತಷ್ಟು ಓದು
ಪಾರತಂತ್ರ್ಯದಿಂದ ಮುಕ್ತವಾಗದ ಸ್ವಾತಂತ್ರ್ಯ
ಡಾ. ಸಂತೋಷ್ ಕುಮಾರ್ ಪಿ.ಕೆ.
(ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ)
ಆಗಸ್ಟ್ ತಿಂಗಳು ಬಂದಿತೆಂದರೆ ಸ್ವಾತಂತ್ರ ದಿನಾಚರಣೆಯ ಸಂಭ್ರಮಕ್ಕೆ ಎಲ್ಲೆಡೆಯೂ ಭರ್ಜರಿ ಸಿದ್ಧತೆ ನಡೆಯವುದು ಸರ್ವೇಸಾಮಾನ್ಯ. ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳ ಮೇಲೆ ದೇಶದ ತ್ರಿವರ್ಣ ಬಾವುಟ ಹಾರಾಡುವುದು ನಮ್ಮ ದೇಶವು ಸ್ವತಂತ್ರ ಪಡೆದ ಸಂಕೇತವಾಗಿ ಗೋಚರಿಸುತ್ತದೆ. ಒಂದು ರಾಷ್ಟ್ರೀಯ ಹಬ್ಬವನ್ನಾಗಿ ಸ್ವತಂತ್ರ ದಿನಾಚರಣೆಯನ್ನು ಆಚರಿಸುವ ಮೂಲಕ ದೇಶದ ಜನರಲ್ಲಿ ಐತಿಹಾಸಿಕ ನೆನಪನ್ನು ಮರುಕಳಿಸುವ ಮೂಲಕ ದೇಶಪ್ರೇಮವನ್ನು ಬೆಳೆಸಲು ಪ್ರಯತ್ನಿಸಲಾಗುತ್ತದೆ. ರಾಷ್ಟ್ರೀಯ ಹಬ್ಬದ ಅಂಗವಾಗಿ ರಾಜಕೀಯ ನೇತಾರರು, ವಿವಿಧ ಕ್ಷೇತ್ರಗಳ ಗಣ್ಯರು ವರ್ಷಂಪ್ರತಿ ರಾಷ್ಟ್ರದ ಸಮಸ್ಯೆಗಳನ್ನು ಮತ್ತು ಮುಂದೆ ಆಗಬೇಕಿರುವ ಕಾರ್ಯಗಳನ್ನು ನೆನಪಿಸುವತ್ತ ತಮ್ಮ ಮಾತನ್ನು ಕೇಂದ್ರೀಕರಿಸಿರುತ್ತಾರೆ.
ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ನೇತಾರರ ಭಾಷಣಗಳನ್ನು ಆಲಿಸಿದರೆ ಒಂದು ರೀತಿಯ ಅತೃಪ್ತಿ ಅವರ ಮಾತುಗಳಲ್ಲಿ ಕಂಡುಬರುತ್ತದೆ. ಭಾರತವು ಸ್ವಾತಂತ್ರ ಪಡೆದು 6 ದಶಕ ಕಳೆದರೂ ನಮ್ಮ ನಿರೀಕ್ಷೆಗಳು ಈಡೇರಿಲ್ಲ ಎಂಬುದೇ ಆ ಅತೃಪ್ತಿಗೆ ಕಾರಣವಾಗಿದೆ. ರಾಷ್ಟ್ರವು ಅಭಿವೃದ್ಧಿಯಾಗ ಬೇಕಾದ ಮಟ್ಟಿಗೆ ಅಭಿವೃದ್ದಿಯಾಗದಿರುವುದು, ಮಹಿಳೆಯರಿಗೂ ಸಮಾನತೆ ಸ್ವಾತಂತ್ರ ದೊರಕದಿರುವುದು, ಕಾರ್ಮಿಕರ ಮೇಲಿನ ಶೋಷಣೆ ಜರುಗುತ್ತಿರುವುದು ಹಾಗೂ ರೈತ ಮೇಲಿನ ಅನ್ಯಾಯಗಳು ಹೀಗೆ ಇತ್ಯಾದಿ ಸಮಸ್ಯೆಗಳು ಇನ್ನೂ ಸಹ ಜೀವಂತವಾಗಿವೆ ಎಂದು ಸಾಕ್ಷಿ ಸಮೇತರಾಗಿ ಮಾತನಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಇದರ ಅರ್ಥ, ನಿಜವಾಗಿ ಭಾರತ ಸ್ವತಂತ್ರ ಪಡೆದು ಏನನ್ನು ಸಾಧಿಸಬೇಕಾಗಿತ್ತೋ ಅದನ್ನು ಸಾಧಿಸಿಲ್ಲ ಎಂಬುದು ಮಾತ್ರ ಮೇಲಿನ ಎಲ್ಲಾ ಅಂಶಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಅತೃಪ್ತಿ ಮತ್ತು ಸಮಾಜದಲ್ಲಿ ಜನಸಾಮಾನ್ಯರಿಗೆ ಇನ್ನೂ ಸ್ವಾತಂತ್ರ ದೊರಕಿಲ್ಲ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿರುವುದರಿಂದ ಇಂದು ನಾವು ಅಂತಹ ಸಮಸ್ಯೆಗಳ ಕುರಿತು ಬೇರೆ ರೀತಿಯಲ್ಲಿ ಆಲೋಚಿಸಬೇಕಾಗಿದೆ. ಮತ್ತಷ್ಟು ಓದು
ಸಂಸ್ಕೃತ ಸಪ್ತಾಹ ಮತ್ತು ಆರ್ಯ-ದ್ರಾವಿಡ ವಾದವೆಂಬ ಸತ್ತ ಕುದುರೆ
– ಪ್ರವೀಣ್ ಪಟವರ್ಧನ್ (ಪ್ರ ಕೊ ಪ )
ಸ್ನೇಹಿತರೊಬ್ಬರು, ‘Breaking India’ ಪುಸ್ತಕ ಓದುತ್ತಿದ್ದರೆ ನಿದ್ದೆಯೇ ಬರುವುದಿಲ್ಲ , ಯೋಚನೆಯಲ್ಲಿ ಮುಳುಗಿಸುತ್ತದೆ, ನಮ್ಮ ದೇಶ ಭಾರತವನ್ನು ವಿಭಜಿಸುವಲ್ಲಿನ ಪಾತ್ರಧಾರಿಗಳ ಬಗ್ಗೆ, ಆ ವಿಭಜಿಸುವ ತಂತ್ರಕ್ಕೆ ಬೆನ್ನೆಲುಬು ಇಲ್ಲದಿದ್ದರೂ ದೇಶವನ್ನು ಬೆರಗುಗೊಳಿಸುವಂತೆ ಹೆಣೆದ ಸುಳ್ಳಿನ ಕಂತೆಯನ್ನು, ಅವರ ಕಾರ್ಯತಂತ್ರವನ್ನೂ ಲೇಖಕರಾದ ರಾಜೀವ್ ಮಲ್ಹೋತ್ರಾ ತಿಳಿಸಿದ್ದಾರೆಂದು ತಿಳಿದಾಗಲೇ ಆ ಪುಸ್ತಕವನ್ನು ಕೊಂಡು ಓದುವ ಸಾಹಸಕ್ಕೆ ಮುಂದಾದೆ. 600 ಪುಟಕ್ಕೂ ಮೀರಿದ ಈ ಪುಸ್ತಕವನ್ನು ಓದಲಾರಂಭಿಸಿದ್ದು ಇತ್ತೀಚೆಗಿನ ಹೊಸ ವಿವಾದವೊಂದು ಸೃಷ್ಟಿಯಾದ ಬಳಿಕವೇ. ಪುಸ್ತಕದಲ್ಲಿ ಬರೋಬ್ಬರಿ 60 ಪುಟಗಳ ವಿವಿಧ ಆಧಾರ ಗ್ರಂಥಗಳನ್ನು ಉಲ್ಲೇಖಿಸಿರುವ ರಾಜೀವ್ ಮಲ್ಹೋತ್ರ, ಅರವಿಂದನ್ ನೀಲಕಂದನ್ ಇನ್ನೆಷ್ಟು ಅಧ್ಯಯನ ಮಾಡಿರಬೇಕು ಎಂಬುದನ್ನು ಊಹಿಸಲೂ ಅಸಾಧ್ಯ.
ವಿವಾದ:
ಆಗಸ್ಟ್ ತಿಂಗಳ ಎರಡನೆಯ ವಾರವನ್ನು ಸಂಸ್ಕೃತ ಸಪ್ತಾಹವೆಂದು ಘೋಷಿಸಿ ಆ ವಾರ ಸಿ.ಬಿ.ಎಸ್.ಸಿ (ಬೋರ್ಡ್) ಪಠ್ಯಕ್ರಮದ ವ್ಯಾಪ್ತಿಗೆ ಬರುವ ಎಲ್ಲಾ ಹದಿನೈದು ಸಾವಿರ ಶಾಲೆಗಳು ಸಂಸ್ಕೃತ ಸಪ್ತಾಹವನ್ನು ಆಚರಿಸಬೇಕೆಂದು ಬೋರ್ಡ್ ಸೂಚನೆಯನ್ನು ಹೊರಡಿಸಿತು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಗೊಳಗಾಯಿತು. ಕಟ್ಟಾ ಕನ್ನಡಾಭಿಮಾನಿಗಳು ಇದನ್ನು ವಿರೋಧಿಸಿದರು. ಸಂಸ್ಕೃತಕ್ಕೆ ಮಾನ್ಯತೆ ನೀಡುವ ಕೇಂದ್ರ ಸರ್ಕಾರ ನಮ್ಮ ದೇಶದ ಪ್ರತಿಯೊಂದು ಭಾಷೆಗೂ ಈ ತರಹದ ಚಟುವಟಿಕೆಯನ್ನು ಹಮ್ಮಿಕೊಳ್ಳುವ ಯೋಜನೆ ಮಾಡಬೇಕು. ಅದರ ಬದಲು ಸಂಸ್ಕೃತಕ್ಕೇನು ವಿಶೇಷ ಎಂದೆಲ್ಲಾ ಚರ್ಚಿಸತೊಡಗಿದರು. ಬೋರ್ಡ್‌ನ ಈ ತಾರತಮ್ಯ (?) ನೀತಿಯನ್ನೂ ಖಂಡಿಸಿದರು. ಈ ಬಗೆಯ ಸಂಸ್ಕೃತ ಒಲವು ಮಾತೃಭಾಷೆಯನ್ನು ಕಡೆಗಣಿಸುತ್ತದೆಂಬುದೇ ಹಲವರ ಮೂಲ ಆಪಾದನೆಯಾಗಿತ್ತು. ಈ ತರಹದ ಚರ್ಚೆಗೆ ಕೆಲ ಉತ್ತರಗಳನ್ನು ಹುಡುಕೋಣ. ಜೊತೆಗೆ ಈ ಚರ್ಚೆಯನ್ನು ನಮ್ಮಗಳ ನಡುವೆ ಮುಂದಿಟ್ಟ ಕಾರಣಗಳನ್ನೂ ಕೆಲ ಮಟ್ಟಿಗೆ ಮೆಲಕು ಹಾಕೋಣ.
ಮತ್ತಷ್ಟು ಓದು
ಬ್ರಾಹ್ಮಣರೆಂಬ ರೋಮನ್ ಕ್ಯಾಥೋಲಿಕ್ಕರು
ಡಾ.ಸಂತೋಷ್ ಕುಮಾರ್ ಪಿ.ಕೆ
ಭಾರತದ ಸಮಾಜ ಉದ್ದಾರವಾಗಬೇಕಾದರೆ ಇಲ್ಲಿಯ ಸಾಮಾಜಿಕ ಕೊಳೆಯನ್ನು ತೆಗೆಯಬೇಕು ಎಂಬುದು ಸುಧಾರಣಾವಾದಿಗಳು ಹಾಗೂ ಪ್ರಗತಿಪರರ ಮೂಲಮಂತ್ರವಾಗಿದೆ. ಇಂತಹ ಕಾರ್ಯವನ್ನು ಕೈಗೊಳ್ಳಲು ಸಮಾಜವನ್ನೇ ಹಿಡಿತದಲ್ಲಿಟ್ಟುಕೊಂಡು ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳುತ್ತಿರುವ ಪುರೋಹಿತಶಾಹಿಯನ್ನು ನಾಶಮಾಡುವುದೇ ಅವರ ಗುರಿಯಾಗಿದೆ. ಆದರೆ ಪುರೋಹಿತಶಾಹಿಯ ಸಮಸ್ಯೆ ಭಾರತದ ಬ್ರಾಹ್ಮಣರನ್ನು ನೋಡಿಬಿಟ್ಟರೆ ಅರ್ಥವಾಗುವುದಿಲ್ಲ. ಅದರ ಬದಲು ಆ ಪರಿಕಲ್ಪನೆ ಹಿಂದಿರುವ ಸತ್ಯಾಂಶಗಳನ್ನು ನಾವು ಗಮನಿಸಬೇಕಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಪುರೋಹಿತಶಾಹಿ ಎಂಬುದು ಪ್ರೀಸ್ಟ್ ಹುಡ್ ನ ತರ್ಜುಮೆಯಾಗಿದೆ. ಆದರೆ ಇದು ಸರಿಯಾದ ಅನುವಾದವಲ್ಲ, ಕಾರಣ ಅದಕ್ಕೆ ಸಮನಾದ ಪದ ಕನ್ನಡದಲ್ಲಿ ಇಲ್ಲ ಎಂಬುದಷ್ಟೇ ಅಲ್ಲ ಬದಲಿಗೆ ಆ ಪರಿಭಾಷೆಯೇ ನಮಗೆ ಅರ್ಥವಾಗುವುದಿಲ್ಲ. ಜೊತೆಗೆ ಯಾವುದನ್ನು ಪ್ರೀಸ್ಟ್ ಹುಡ್ ಎಂದು ಪರಿಭಾವಿಸಲಾಗುತ್ತಿದೆಯೋ ಅಂತಹ ವಿದ್ಯಮಾನವೇ ಭಾರತದಲ್ಲಿ ಇಲ್ಲ.
ಪಾಶ್ಚಾತ್ಯರು ಅದರಲ್ಲಿಯೂ ವಿಶೇಷವಾಗಿ ಕ್ರೈಸ್ತರಲ್ಲಿನ ಕ್ಯಾಥೋಲಿಕ್ಕರಲ್ಲಿ ಈ ಪ್ರೀಸ್ಟ್ ಹುಡ್ ಕಲ್ಪನೆ ಮತ್ತು ಅದರ ಸ್ಥಾನಬೆಳೆಯಿತು. ಕ್ರಿಶ್ಚಿಯನ್ ಚರ್ಚುಗಳಲ್ಲಿ ಪ್ರೀಸ್ಟ್ ಹುಡ್ ಎಂಬ ಸ್ಥಾನವಿದೆ. ಪ್ರೀಸ್ಟ್ ಎಂಬವನು ಜನರು ಹಾಗೂ ಗಾಡ್ ನಡುವೆ ಮಧ್ಯವರ್ತಿಯಾಗಿ ರಿಲಿಜನ್ನಿನ ಆಚರಣೆಗಳನ್ನು ನಡೆಸಿಕೊಡುತ್ತಾನೆ. ಅವನಿಗೆ ಈ ಅಧಿಕಾರವನ್ನು ಚರ್ಚಿನ ವ್ಯವಸ್ಥೆ ನೀಡಿರುತ್ತದೆ. ಹಾಗೂ ಅದು ಗಾಡ್ ಕ್ರೈಸ್ತನೊಬ್ಬನಿಗೆ ನೀಡಬಹುದಾದ ಸರ್ವಶ್ರೇಷ್ಠ ಸ್ಥಾನಮಾನ ಎಂಬುದಾಗಿ ಅವರ ಪವಿತ್ರಗ್ರಂಥವು ಹೇಳುತ್ತದೆ. ಚರ್ಚಿನ ವ್ಯವಸ್ಥೆಯು ಎಲ್ಲಾ ಕ್ರಿಶ್ಚಿಯನ್ನರಿಗೂ ಒಂದೇ ರೀತಿ ಅನ್ವಯವಾಗುತ್ತದೆಯಾದ್ದರಿಂದ ಪ್ರೀಸ್ಟ್ನ ಅಧಿಕಾರಕ್ಕೆ ಎಲ್ಲರೂ ಸಮಾನವಾಗಿ ಒಳಗಾಗುತ್ತಾರೆ. ಕ್ಯಾಥೋಲಿಕರು ತಮ್ಮ ಚರ್ಚಿನಲ್ಲಿ ಈ ವ್ಯವಸ್ಥೆಯನ್ನು ತೀರಾ ಕಠಿಣವಾಗಿ ಪಾಲಿಸಿಕೊಂಡು ಬಂದಿದ್ದರು.ಇವರ ಪ್ರಧಾನ ಕೆಲಸ ಜನರಿಗೂ ಮತ್ತು ಗಾಡ್ ಗೂ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುವ ಮೂಲಕ ರಿಲಿಜನ್ನನ್ನು ಮತ್ತು ಅದರ ಸಮುದಾಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಆಗಿತ್ತು. ಆದ್ದರಿಂದಲೇ ಪ್ರತೀ ಭಾನುವಾರವು ಗಾಡ್ ನನ್ನು ಸ್ಮರಿಸಲು ಪ್ರಾರ್ಥನೆಯನ್ನು ಮಾಡಲೇಬೇಕು ಎಂದು ಚರ್ಚ್ ನಲ್ಲಿ ಎಲ್ಲರನ್ನು ಸೇರಿಸುವ ಕಾರ್ಯವೂ ಅವರದ್ದೇ ಆಗಿತ್ತು.
ಮತ್ತಷ್ಟು ಓದು
ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 2
– ಪ್ರೊ.ರಾಜಾರಾಮ್ ಹೆಗಡೆ,
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.
ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’- ಭಾಗ 1
3. ಇಪ್ಪತ್ತನೆಯ ಶತಮಾನದ ನಾಲ್ಕನೆಯ ದಶಕದಿಂದ ಆರನೆಯ ದಶಕದ ವರೆಗೆ ಕನ್ನಡ ರಾಷ್ಟ್ರೀಯತೆಯ ಇತಿಹಾಸವನ್ನು ನಿರ್ವಚಿಸಿದ ಶಂಬಾ ಜೋಶಿಯವರು ಈ ಇತಿಹಾಸದ ಒಂದು ಮಹತ್ವಪೂರ್ಣ ಘಟ್ಟವನ್ನು ಪ್ರತಿಬಿಂಬಿಸುತ್ತಾರೆ. ಅವರು ಈ ಇತಿಹಾಸದ ರೂಪುರೇಷೆಗಳನ್ನು ಆಲೂರರ ಮಾದರಿಯಿಂದ ಪಡೆದುಕೊಂಡು ಅದನ್ನು ವಿಭಿನ್ನ ದಿಕ್ಕುಗಳಲ್ಲಿ ವಿಸ್ತರಿಸುತ್ತಾರೆ. ಈ ಪ್ರಯತ್ನದಲ್ಲಿ ಕನ್ನಡ ಎಂಬ ಗುರುತನ್ನು ಮತ್ತಷ್ಟು ಸತ್ವಪೂರ್ಣ ಪ್ರಭೇದವನ್ನಾಗಿ ರೂಪಿಸಿ ಅದಕ್ಕೆ ಇತಿಹಾಸವು ಒಂದು ಮೂಲಭೂತವಾದ ಅಗತ್ಯ ಎಂಬುದನ್ನು ನಿರೂಪಿಸಲಿಕ್ಕೆ ಇತಿಹಾಸದ ದರ್ಶನವನ್ನು ತಂದು ಅದಕ್ಕೆ ಸೇರಿಸುತ್ತಾರೆ. ಅವರ ‘ಕನ್ನಡದ ನೆಲೆ’ ಕೃತಿಯಲ್ಲಿ (1939) ಇದು ವ್ಯಕ್ತವಾಗಿದೆ. ಇಲ್ಲಿನ ಅವರ ಪ್ರಾರಂಭಿಕ ಜಿಜ್ಞಾಸೆಯ ಪ್ರಕಾರ ಕನ್ನಡಿಗರ ಮೂಲ ಜನಾಂಗವು ಯಾವುದು? ಅವರ ಗುಣಸ್ವಭಾವಗಳು ಎಂಥವು? ಎಂಬುದನ್ನು ತಿಳಿಯದೇ ಕನ್ನಡ ಸಂಸ್ಕೃತಿ ಸ್ಪಷ್ಟವಾಗಿ ಅರಿವಿಗೆ ಬಾರದು. ಈ ಅರಿವನ್ನು ಹೊಂದಲಿಕ್ಕೆ ಇತಿಹಾಸ ಅತ್ಯಗತ್ಯ. ಇತಿಹಾಸ ಎಂದರೆ ಸತ್ಯಶೋಧನೆ, ಅದು ಸ್ವ ಸ್ವರೂಪ ಜ್ಞಾನ, ಇದರ ಜ್ಞಾನವಿಲ್ಲದೇ ನಾಡನ್ನು ಕಟ್ಟುವುದು ಸಾಧ್ಯವಿಲ್ಲ. ಈ ರೀತಿ ಶಂಬಾ ಜೋಶಿಯವರು ಪಾಶ್ಚಾತ್ಯ ವ್ಶೆಜ್ಞಾನಿಕ ಇತಿಹಾಸದ ದರ್ಶನವನ್ನು ತಿಳಿಸುತ್ತಾರೆ. ಅವರ ಇತರ ಕೃತಿಗಳಲ್ಲಿಯೂ ಪ್ರಾರಂಭದಲ್ಲಿ ಇಂಥ ಹೇಳಿಕೆಗಳು ಬರುತ್ತವೆ. ಅಂದರೆ ಕನ್ನಡತ್ವದ ಸ್ವ ಸ್ವರೂಪ ದರ್ಶನ ಇಂದು ಆಗಬೇಕಾದ ಮೂಲಭೂತ ಕೆಲಸವಾಗಿದ್ದು, ತಾವು ಆ ಕಾಯಕದಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ಭಾವಿಸಿಕೊಂಡಿದ್ದು ಸ್ಪಷ್ಟ. ಈ ಸ್ವ-ಸ್ವರೂಪ ಐತಿಹಾಸಿಕ ವಿವರಗಳಿಂದ ಎದ್ದು ಬರುತ್ತದೆ. ಈ ವಿವರಗಳಲ್ಲಿ ರಾಜಮನೆತನಗಳ ಇತಿಹಾಸಕ್ಕೆ ಪ್ರಮುಖ ಸ್ಥಾನವಿಲ್ಲ, ಬದಲಾಗಿ ಕನ್ನಡತ್ವದ ಶೋಧನೆಯೇ ಅದರ ಪ್ರಮುಖ ಗುರಿ.
ಅವರ ‘ ಕರ್ಣಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ ಯಲ್ಲಿ ಪಾಶ್ಚಾತ್ಯ ವ್ಶೆಜ್ಞಾನಿಕ ಇತಿಹಾಸದ ಮತ್ತೊಂದು ಗ್ರಹಿಕೆ ಕಾಣಿಸಿಕೊಂಡಿದೆ: ಇತಿಹಾಸ ಒಂದು ಮಾನವವಾದೀ ಹುಡುಕಾಟವಾಗಿದೆ. ನೆನ್ನೆಯ ಸಂಗತಿಗಳು ನಮ್ಮ ಬಾಲ್ಯಸಂಗತಿಗಳಿದ್ದ ಹಾಗೇ. ಇಲ್ಲಿ ದೈವವಾದಕ್ಕೆ ಶರಣಾದರೆ ನಮ್ಮ ಕತೃತ್ವವನ್ನು ಕಳೆದುಕೊಂಡುಬಿಡುತ್ತೇವೆ. ‘ಇಂದು ತಮ್ಮ ನಾಡಿನ ಹೆಸರನ್ನೂ ಉಳಿಸಿಕೊಳ್ಳಲು ಸಾಧ್ಯವಾಗದ ಇವರು ಅಂದು ಅದು ಹೇಗೆ ಮಹೋನ್ನತ ಕತೃತ್ವವನ್ನು ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳಲು ಇತಿಹಾಸ ಜ್ಞಾನ ಬೇಕು. ರಾಷ್ಟ್ರ ಚರಿತೆ ವ್ಯಕ್ತಿ ಚರಿತೆಯ ಸಮಷ್ಟಿ ಆಬಿವ್ಯಕ್ತಿಯಾಗಿದೆ. ಪುರಾಣಕಥೆಗಳನ್ನು ನಂಬಿ ಇತಿಹಾಸವನ್ನು ಸೃಷ್ಟಿಸಿದರೆ ಮನುಷ್ಯ ಸಾಮರ್ಥ್ಯದ ನಿಜ ಸಂಗತಿ ತಿಳಿಯಲಾರದು. ಈ ರೀತಿ ಕನ್ನಡ ನಾಡು ಇನ್ನೂ ನಿರ್ಮಾಣವಾಗಬೇಕಾದ ವಾಸ್ತವವಾಗಿರುವುದರಿಂದ ಇತಿಹಾಸವನ್ನು ಮನುಷ್ಯ ಕತೃತ್ವವನ್ನು ಜಾಗೃತಿಗೊಳಿಸುವ ಸಾಧನವನ್ನಾಗಿ ಬಳಸಿಕೊಳ್ಳಬೇಕಾದರೆ ಅದನ್ನೂ ಮಾನವವಾದೀ ನೆಲೆಯಮೇಲೇ ನಿಲ್ಲಿಸುವ ಅಗತ್ಯವನ್ನು ಜೋಶಿಯವರು ಗುರುತಿಸುತ್ತಾರೆ. ಅಂದರೆ ಇತಿಹಾಸವು ಮನುಷ್ಯ ಸತ್ಯಗಳ ಶೋಧನೆಯೇ ಆಗಬೇಕು. ಆದರೆ ಈ ಮಾನವವಾದೀ ಇತಿಹಾಸವು ಪಾಶ್ಚಾತ್ಯ ಮಾನವವಾದದ ಇತರ ಮುಖಗಳನ್ನೂ ಹೊತ್ತೇ ಬರುವುದನ್ನೂ ಗಮನಿಸಬಹುದು. ಉದಾಹರಣೆಗೆ, ಈ ಇತಿಹಾಸವು ಮಾನವರ ಉಗಮ, ವಿಕಾಸಗಳ ಕುರಿತು ಶೋಧಿಸುತ್ತದೆ, ಇದು ಮಾನವ ಜ್ಞಾನೋಪಲಬ್ಧಿಯ ಇತಿಹಾಸವಾಗಿದೆ. ಮತ್ತಷ್ಟು ಓದು
ಸಾಮಾನ್ಯನ ಕಣ್ಣಲ್ಲಿ ಕರಾವಳಿ ಕೋಮುವಾದ
-ಪ್ರಸಾದ್ ಗಣಪತಿ
ಪದೇ ಪದೇ ಕರಾವಳಿಯಲ್ಲಿ ಗಲಭೆಯಾದಾಗ ಕರಾವಳಿ ಕೋಮುವಾದ, ಕರಾವಳಿ ತಾಲಿಬಾನ್ ಎನ್ನುವ ಮಾತುಗಳು ಕೇಳಿ ಬರುತ್ತವೆ. ಪಕ್ಷವೊಂದರ ಆಡಳಿತಾವಧಿಯಲ್ಲಿ ನಡೆದ ಒಂದು ಸಮುದಾಯದ ಓಲೈಕೆ ನೀತಿಗಳು, ಹಾಗೂ ಒಂದು ಸಮುದಾಯದ ಮೇಲಿನ ಹಲ್ಲೆಗಳ ಬಗ್ಗೆ ತಳೆದ ಮೃದು ನೀತಿಗಳು ಈ ಅಸಹನೆ ಇದರ ಬೆನ್ನಿಗಿದ್ದಾವೆ ಎಂದು ಯಾರು ಹೇಳುವುದಿಲ್ಲ. ಪುತ್ತೂರಿನ ಹಿಂದೂ ಯುವತಿ ಸೌಮ್ಯ ಭಟ್ ಳನ್ನು ಇರಿದು ಕೊಂದಿದ್ದು, ಕಾಟಿಪಳ್ಳದಲ್ಲಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ, ಬಳ್ಕುಂಜೆ ರೇಪ್ ಮತ್ತು ಆತ್ಮಹತ್ಯೆ, ಲವ್ ಜಿಹಾದ್ ಮತ್ತು ಸಾಮಾಜಿಕ ತಾಣಗಳಲ್ಲಿ ಬೆತ್ತಲೆ ಚಿತ್ರಗಳ ( ಹಿಂದೂ ಯುವತಿಯರ ಚಿತ್ರ) ಈ ರೀತಿಯ ಪ್ರಕರಣಗಳಾದಗ ಸುಮ್ಮನಿರುವ ಬುದ್ಧಿ ಜೀವಿ ಬಳಗ, ಇನ್ನೊಂದು ಸಮುದಾಯದ ಮೇಲೆ ಹಲ್ಲೆ ನಡೆದಾಗ ಮಾತನಾಡುವುದು, ದೂರದೂರಲ್ಲಿ ಕುಳಿತು ಒಂದು ಪ್ರದೇಶದ ಜನರನ್ನು ಕೋಮುವಾದಿಗಳೆನ್ನುವುದು ಸತ್ಯಕ್ಕೆ ಅಪಚಾರವೆಸಗುವ ಕೆಲಸ. ಹಿಂದೆ ರೆಸಾರ್ಟ್ ಅಟ್ಯಾಕ್ ಆದಾಗ ಬರೆದ ಒಂದು ಲೇಖನದಲ್ಲಿ ನನ್ನ ಗ್ರಹಿಕೆಯನ್ನು ಬರೆದಿದ್ದೇನೆ.
ದೃಶ್ಯ ಮಾಧ್ಯಮದಲ್ಲಿ ಒಂದೇ ಸವನೆ ಮಂಗಳೂರಿನ ಪಡೀಲ್‌ನಲ್ಲಿ ನಡೆದ ಯುವಕ- ಯುವತಿಯರ ಮೇಲಿನ ಹಲ್ಲೆಯನ್ನು ನೋಡುತ್ತಾ ಯಾವುದು ಸರಿ ? ಯಾವುದು ತಪ್ಪು ? ಎಂದು ನಿರ್ಧರಿಸಲಾಗದ ಸ್ಥಿತಿಯಲ್ಲಿ ಜನರು ಇರಬಹುದುದಾದ ಈ ಹೊತ್ತಿನಲ್ಲಿ ನನ್ನ ಅಭಿಪ್ರಾಯ ಬರೆಯುತ್ತಿರುವೆ. ಸಾಮಾನ್ಯವಾಗಿ ಕೋಮುವಾದ, ಧರ್ಮ ರಕ್ಷಣೆಯ ಕೃತ್ಯವೆಂದು ಹೇಳಲ್ಪಡುತ್ತಿರುವ ಇವು ಇನ್ನೊಂದು ಮಗ್ಗುಲಲ್ಲಿ ನೋಡಿದರೆ ಸಾಂಸ್ಕೃತಿಕ,ಸಾಮಾಜಿಕ, ಸಂಘರ್ಷವಾಗಿ ಗೋಚರಿಸುತ್ತವೆ. ಸಾಮಾನ್ಯವಾಗಿ ಇಲ್ಲಿ ಏನು ನಡೆಯುತ್ತಿದೆ ಎಂದು ಇತರೆ ಪ್ರದೇಶದಲ್ಲಿ ಕುಳಿತವರಿಗೆ ಅರ್ಥವಾಗುವುದು ಕೊಂಚ ಕಷ್ಟ.
ಅವರೆಲ್ಲರೂ ಪ್ರತಿಭಾವಂತರೇ ಆದರೆ…..
ಭಾರತದಲ್ಲಿ ಹಗರಣಗಳು ಹೊಸದಲ್ಲ, ಹಗರಣಗಳ ಕುರಿತ ರಾಜಕೀಯ ಮತ್ತು ರಾಜಕೀಯೇತರ ಗದ್ದಲ, ಪ್ರತಿಭಟನೆಗಳು ಹೆಚ್ಚಾಗಿ ಚಳುವಳಿಗಳಾಗಿ ಮಾರ್ಪಟ್ಟ ನಂತರ ಅಧಿಕಾರದಲ್ಲಿರುವ ಪಕ್ಷಗಳು ಆ ಹಗರಣದ ತನಿಖೆಗೆ ವಿವಿಧ ಹಂತದ ತನಿಖಾ ಆಯೋಗಗಳನ್ನು ರಚಿಸುವುದೂ ಹೊಸದಲ್ಲ. ಸಿ.ಐ.ಡಿ ಪೋಲೀಸರಿಂದ ಹಿಡಿದು ನ್ಯಾಯಂಗ, ಸದನ ಸಮಿತಿ, ಸಿ.ಬಿ.ಐ ಸಂಸ್ಥೆಗಳೆಲ್ಲವನ್ನೂ ತನಿಖೆ ಮಾಡಲು ನಿಯೋಜಿಸುವುದು ಸಾಮಾನ್ಯ. ವಿಪರ್ಯಾಸದ ಸಂಗತಿಯೆಂದರೆ ಇಂತಹ ಎಷ್ಟೋ ತನಿಖಾ ಸಂಸ್ಥೆಗಳು ನೀಡಿದ ಅನೇಕಾನೇಕ ವರದಿಗಳು ಅನುಷ್ಠಾನಗೊಳ್ಳದೆ ಸರಕಾರದ ಯಾವುದೋ ಒಂದು ಕಛೇರಿಯಲ್ಲಿ ಧೂಳು ಹಿಡಿದು ಹಾಳಾಗುತ್ತವೆಯೇ ಹೊರತು ತನಿಖಾ ಆಯೋಗ ನೀಡಿದ ಸಲಹೆ ಸೂಚನೆಗಳನ್ನು ಯಥಾವತ್ತಾಗಿ ಜಾರಿಗೆ ತರುವುದು ಅಪರೂಪದ ಸಂಗತಿಯೇ ಆಗಿಹೋಗಿದೆ.
ಸಲಹೆ ಸೂಚನೆಗಳು ಜಾರಿಗೆ ಬರದಿರಲು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ, ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ಅನಿವಾರ್ಯತೆ, ಅಧಿಕಾರಸ್ಥ ಪಕ್ಷಗಳೇ ಬದಲಾವಣೆಗೊಳ್ಳುವುದು ಮತ್ತು ಕೆಲವು ಸಂದರ್ಭದಲ್ಲಿ ಆರೋಪಕ್ಕೊಳಗಾದವರು ಮತ್ತು ವಿವಿಧ ಕಾರಣಗಳಿಂದ ಅವರಿಗೆ ಬೆಂಬಲ ನೀಡುವವರು ಪ್ರತಿಭಟನೆಯ ರೂಪದಲ್ಲಿ ವಿರೋಧ ವ್ಯಕ್ತಪಡಿಸುವುದು. ಬಿಜೆಪಿಯ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ಸಿಗೆ ಅವಕಾಶ ನೀಡಿದ ಕರ್ನಾಟಕದ ಮತದಾರ ಕಳೆದೊಂದೂವರೆ ವರುಷದಿಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಭ್ರಮನಿರಸನಕ್ಕೊಳಗಾಗಿರುವುದೇ ಅಧಿಕ. ಮತ್ತಷ್ಟು ಓದು
ಓದುಗ, ಸಾಹಿತ್ಯ ಮತ್ತು ವಿಮರ್ಶಕ- ಭಾಗ -೧
– ಮು.ಅ ಶ್ರೀರಂಗ ಬೆಂಗಳೂರು
ಹೊಸಗನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗನಾಗಿ ನನ್ನ ಪ್ರಾರಂಭದ ಹೆಜ್ಜೆಗಳಿಂದ ಇಲ್ಲಿಯ ತನಕದ ಸುಮಾರು ನಲವತ್ತು ವರ್ಷಗಳ ಪಯಣವನ್ನು ‘ನಿನ್ನೆಗೆ ನನ್ನ ಮಾತು’ ಎಂಬ ಲೇಖನಗಳ ಸರಣಿಯಲ್ಲಿ ಈಗಾಗಲೇ ‘ನಿಲುಮೆ’ ಬ್ಲಾಗಿನಲ್ಲಿ ಬರೆದಿದ್ದೇನೆ. (ದಿನಾಂಕ ೫/೧೨/೧೩, ೩/೧/೨೦೧೪, ೪/೨/೧೪, ೧೩/೩/೧೪ ಮತ್ತು ೨೫/೪/೧೪. ಇದರಲ್ಲಿ ಮೊದಲ ಎರಡು ಭಾಗಗಳು ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಮತ್ತು ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ). ನಂತರ ೨/೬/೧೪ರಂದು ‘ಸಾಹಿತ್ಯ ಮತ್ತು ವಿಮರ್ಶೆ’ ಎಂಬ ಲೇಖನವನ್ನು ಇದೇ ಬ್ಲಾಗಿನಲ್ಲಿ ಬರೆದಿದ್ದೇನೆ. ಅವುಗಳ ಮುಂದುವರಿಕೆಯಾಗಿ ಈ ಲೇಖನವನ್ನು ಓದುಗರು ಗಮನಿಸಬಹುದು. ಅಥವಾ ಇದೊಂದನ್ನೇ ಪ್ರತ್ಯೇಕ ಲೇಖನವಾಗಿಯೂ ಓದಬಹುದು.
ಜನಮಾನಸದ “ಚಾಚಾ ಚೌಧರಿ” – ಪ್ರಾಣ್ ಕುಮಾರ್ ಶರ್ಮಾ
–ರಾಘವೇಂದ್ರ ಅಡಿಗ ಎಚ್ಚೆನ್.
(ಖ್ಯಾತ ವ್ಯಂಗ್ಯಚಿತ್ರಕಾರ, ‘ಚಾಚಾ ಚೌಧರಿ’, ‘ರಾಮನ್’, ‘ಶ್ರೀಮತಿ’, ‘ಪಿಂಕಿ’ ಇವೇ ಮೊದಲಾದ ಸದಾ ಕಾಲ ನೆನಪಿನಲ್ಲಿ ಉಳಿಯುವಂತಹಾ ಪಾತ್ರಗಳ ಸೃಷ್ಟಿಕರ್ತರಾಗಿದ್ದ ಪ್ರಾಣ್ ಕುಮಾರ್ ಶರ್ಮ ಇದೇ ಆಗಸ್ಟ್ ೦6 ರಂದು ದೆಹಲಿಯ ಗುರ್ಗಾಂವ್ ನಲ್ಲಿ ನಿಧನರಾಗಿದ್ದಾರೆ. ಈ ಸಮಯದಲ್ಲಿ ಪ್ರಾಣ್ ಎಂಬ ವ್ಯಂಗ್ಯಚಿತ್ರಕಾರನ ಬದುಕಿನ ಚಿತ್ರಣವನ್ನೊಮ್ಮೆ ಅವಲೋಕಿಸೋಣ……)
ಬಾಲ್ಯ – ವೃತ್ತಿ ಬದುಕು
ಇಂದಿನ ಪಾಕಿಸ್ತಾನದಲ್ಲಿನ ಲಾಹೋರ್ ಬಳಿಯ ಕಸೂರ್ ಎಂಬ ಚಿಕ್ಕ ಗ್ರಾಮದಲ್ಲಿ 1938, ಆಗಸ್ಟ್ 15 ರಂದು ಪ್ರಾಣ್ ಕುಮಾರ್ ಶರ್ಮಾರವರ ಜನನವಾಯಿತು. 1947 ರ ಬಳಿಕ ಪ್ರಾಣ್ ರವರ ಕುಟುಂಬ ಗ್ವಾಲಿಯರ್ ನಗರಕ್ಕೆ ತನ್ನ ವಾಸವನ್ನು ಬದಲಾಯಿಸಿತು.ಪ್ರಾಣ್ ರವರು ಗ್ವಾಲಿಯರ್ ನ ಇವ್ನಿಂಗ್ ಕ್ಯಾಂಪ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಬಳಿಕ ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ನಾಲ್ಕು ವರ್ಷಗಳ ಫೈನ್ ಆರ್ಟ್ಸ್(ಚಿತ್ರಕಲಾ ತರಬೇತಿ) ಪದವಿ ಶಿಕ್ಷಣವನ್ನುಪಡೆದುಕೊಂಡರು.
ತಮ್ಮ ವೃತ್ತಿ ಬದುಕಿನ ಪ್ರಾರಂಭದಲ್ಲಿ ಕೆಲಕಾಲ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡಿದ್ದ ಪ್ರಾಣ್ 1960 ರಲ್ಲಿ ದೆಹಲಿ ಮೂಲದ ‘ಮಿಲಾಪ್’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅಲ್ಲಿ ವರು ‘ಬಾಬು’ ಎನ್ನುವ ಪಾತ್ರವನ್ನು ಸೃಷ್ಟಿಸಿವ್ಯಂಗ್ಯಚಿತ್ರಗಳನ್ನು ರಚಿಸಿದ್ದರು. 1969 ರಲ್ಲಿ ಹಿಂದಿ ನಿಯತಕಾಲಿಕೆ ‘ಲಾಟ್ ಪಾಟ್’ ಗಾಗಿ ಅವರು ರಚಿಸಿದ ‘ಚಾಚಾ ಚೌಧರಿ’ ವ್ಯಂಗ್ಯಚಿತ್ರ ಪಾತ್ರವು ಅವರಿಗೆ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ತಂದುಕೊಟ್ಟಿತು. ಪ್ರಾಣ್ ಚಾಚಾ ಚೌಧರಿಯ ಪಾತ್ರವನ್ನು ಸೃಷ್ಟಿಸಿದವೇಳೆಯಲ್ಲಿ ದೇಶಾದ್ಯಂತ ಜನರು ಸೂಪರ್ ಮ್ಯಾನ್, ಪ್ಯಾಂಟಮ್ ನಂತಹಾ ವ್ಯಂಗ್ಯಚಿತ್ರ ಸರಣಿಯನ್ನು ಮೆಚ್ಚಿಕೊಂಡಿದ್ದರು. ಅವೆಲ್ಲವೂ ವಿದೇಶೀ ಮೂಲದ ವ್ಯಂಗ್ಯಚಿತ್ರಗಳಾಗಿದ್ದವು. ಆದರೆ ಪ್ರಾಣ್ ರವರ ‘ಚಾಚಾ ಚೌಧರಿ’ಪ್ರಾರಂಭವಾದ ಅತ್ಯಂತ ಶೀಘ್ರದಲ್ಲಿ ದೇಸವಿದೇಶಗಳ ಜನರು ಮೆಚ್ಚುವಂತಾಯಿತು. ಪ್ರಾಣ್ ರವರೇ ತಮ್ಮ ಒಂದು ಸಂದರ್ಶನದಲ್ಲಿ ಚಾಚಾ ಚೌಧರಿ ಪಾತ್ರದ ಕುರಿತು ಈ ರೀತಿಯಾಗಿ ಅಭಿಪ್ರಾಯ ಪಟ್ಟಿದ್ದಾರೆ – “Each family has its own wise old man. He solved his problems with common sense, but with a touch of humor. Humor is the basis of my cartoon.” ‘ರಾಮನ್’, ‘ಪಿಂಕಿ’, ‘ಬಿಲ್ಲೂ’, ‘ಶ್ರೀಮತಿ’ ಇವೇ ಮೊದಲಾದವು ಪ್ರಾಣ್ ಕುಮಾರ್ ಶರ್ಮಾರವರ ಇತರೆ ವ್ಯಂಗ್ಯಚಿತ್ರ ಪಾತ್ರಗಳಾಗಿದ್ದವು. ಮತ್ತಷ್ಟು ಓದು
ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೇಕೆ ಇವರಿಗೆ ಈ ಪರಿ ಕೋಪ?”
– ರಾಕೇಶ್ ಶೆಟ್ಟಿ
ಫೇಸ್ಬುಕಿನಲ್ಲಿ ದಿನಕ್ಕೆ ಅದೆಷ್ಟು ಲಕ್ಷ ಸ್ಟೇಟಸ್ ಅಪ್ಡೇಟ್ ಗಳು ಬರುತ್ತವೆಯೋ ಗೊತ್ತಿಲ್ಲ.ಅವುಗಳಲ್ಲಿ ಜೊಳ್ಳು-ಕಾಳು ಎಲ್ಲವೂ ಇರುತ್ತವೆ.ಇತ್ತೀಚೆಗೆ ನಮ್ಮ ಮೀಡಿಯಾಗಳಲ್ಲಿ “ಪ್ರಭಾ” ಎನ್ನುವವರ ಫೇಸ್ಬುಕ್ ಟಿಪ್ಪಣಿಯ ಮೇಲೆ “ವಿ.ಆರ್ ಭಟ್” ಅವರು ಮಾಡಿದ ಪ್ರತಿಕ್ರಿಯೆ ದೊಡ್ಡ ವಿವಾದವನ್ನೇ ಸೃಷ್ಟಿಸಿ, ಭಟ್ಟರ ಮೇಲೆ ಕೇಸು ದಾಖಲಾಗಿ ಅವರ ಬಂಧನವೂ ಆಯಿತು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಆ ಸ್ಟೇಟಸ್ಸಿನಲ್ಲಿ,ಪ್ರಭಾ ಅವರು “ಪುರೋಹಿತಶಾಹಿ” ಗಳನ್ನು ಟೀಕಿಸಿ ಅವರ ಮೇಲೆ ಸಿಟ್ಟು ಮಾಡಿಕೊಂಡು ಬರೆದಿದ್ದರು. ಭಟ್ಟರ ಕಮೆಂಟಿನ ಗಲಾಟೆಯಲ್ಲಿ ಕಳೆದು ಹೋಗಿದ್ದು, ಪ್ರಭಾ ಅವರು ಬರೆದ ಸ್ಟೇಟಸ್ಸಿನಲ್ಲಿದ್ದ “ಪುರೋಹಿತಶಾಹಿ”ಯ ಬಗ್ಗೆ ಆಗಬೇಕಿದ್ದ ಚರ್ಚೆ.
ಈ ಲೇಖನವನ್ನು ಓದುತ್ತಿರುವ ಬಹುತೇಕ ಜನ ಸಾಮಾನ್ಯರಿಗೆ “ಪುರೋಹಿತಶಾಹಿ” ಎಂದರೇನು ಎನ್ನುವ ಪ್ರಶ್ನೆ ಮೂಡಿದ್ದರೆ ಆಶ್ಚರ್ಯವೇನಿಲ್ಲ. ಹಾಗಾಗಿ ಪುರೋಹಿತಶಾಹಿಯನ್ನು ಅರ್ಥವೇನು ನೋಡೋಣ.
ಪುರೋಹಿತರು ಎಂದರೆ ದೇವರು ಮತ್ತು ಮಾನವನ ನಡುವಿನ ಮಧ್ಯವರ್ತಿಗಳು ಹಾಗೂ ಧರ್ಮದ ಏಕಸ್ವಾಮ್ಯ (ಒಂದರ್ಥದಲ್ಲಿ Copy Rights) ವನ್ನು ಹೊಂದಿದ್ದಾರೆ. ಶಾಹಿ ಎಂದರೆ ಆಳ್ವಿಕೆ ಎಂದರ್ಥ. ಪುರೋಹಿತರ ಆಳ್ವಿಕೆಯೇ “ಪುರೋಹಿತಶಾಹಿ”.
ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೆಕೆ ಇವರಿಗೆ ಈ ಪರಿ ಕೋಪ?”
ಬುದ್ಧಿಜೀವಿಗಳ Definitionನ ಪ್ರಕಾರ “ಪುರೋಹಿತಶಾಹಿ”ಯೆಂದರೆ ದೇವರ ಬಗ್ಗೆ ಭಯ ಮೂಡಿಸಿ ಜನರನ್ನು ಮೂರ್ತಿ ಪೂಜೆಗಳಲ್ಲಿ ತೊಡಗಿಸಿ,ನೆಪ ಹೇಳಿ ಜೇಬು ತುಂಬಿಸಿಕೊಳ್ಳುವವರು ಮತ್ತು ಭವಿಷ್ಯ ಇತ್ಯಾದಿ ನೆಪದಲ್ಲಿ ಮೋಸ ಮಾಡುವವರು” ಅನ್ನುವ ಧಾಟಿಯಲ್ಲಿರುತ್ತದೆ. (ಬಹುಷಃ ಇದಕ್ಕಿಂತ ಉತ್ತಮ Definition ಇದ್ದರೂ ಇರಬಹುದು)
ಒಟ್ಟಾರೆಯಾಗಿ ಬುದ್ಧಿಜೀವಿಗಳ ಈ ಪುರೋಹಿತಶಾಹಿಯ ಕುರಿತ ಮೇಲಿನ Definition ಅನ್ನು ಅರ್ಥಮಾಡಿಕೊಂಡಾಗ ತಿಳಿಯುವುದೇನೆಂದರೆ, “ದೇವರು ಮತ್ತು ಜನರ ನಡುವಿನ ಮಧ್ಯವರ್ತಿಗಳಾದ ಈ ಪುರೋಹಿತರು ಜನರನ್ನು ನಮ್ಮ ಧರ್ಮ ಗ್ರಂಥಗಳು ಮತ್ತು ಆಚರಣೆಗಳಿಂದ ದೂರವಿರಿಸಿ ಮೂರ್ತಿ ಪೂಜೆಯ ಮೂಲಕ ಮೋಸ ಮಾಡಿ ಸಮಾಜವನ್ನು/ಧರ್ಮವನ್ನು ಹಾಳು ಮಾಡುತಿದ್ದಾರೆ”
ನಮ್ಮ ಬುದ್ಧಿಜೀವಿಗಳ ಈ ವಾದದ ಮೂಲವನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.ಆಗ ನಮಗೆ ಮುಂದಿನ ಚರ್ಚೆಯ ಹಾದಿ ಸುಲಭವಾಗಾಹುದು.