ಕನ್ನಡನಾಡಿನ ಅನರ್ಘ್ಯ ರತ್ನಗಳು
– ರೋಹಿತ್ ಚಕ್ರತೀರ್ಥ
ನಮ್ಮ ನಾಡು ಕವಿಪುಂಗವರಿಗೆ, ಸಮಾಜಸುಧಾರಕರಿಗೆ, ಶಾಸ್ತ್ರಕೋವಿದರಿಗೆ ನೆಲೆ ಕೊಟ್ಟ ಪುಣ್ಯಭೂಮಿ. ಇಲ್ಲಿ ಶತಶತಮಾನಗಳಿಂದ ಅನೇಕಾನೇಕ ಸಂತರು, ಪ್ರಾಜ್ಞರು, ವಿಚಾರವಾಧಿಗಳು ಆಗಿಹೋಗಿದ್ದಾರೆ. ಈಗಿನ ಇಪ್ಪತ್ತೊಂದನೇ ಶತಮಾನದಲ್ಲೂ ಅಂತಹ ಪುಣ್ಯಪುರುಷರು ಮತ್ತೆಮತ್ತೆ ನಮ್ಮ ಈ ಕರುನಾಡಿನಲ್ಲಿ ಹುಟ್ಟಿಬರುತ್ತಲೇ ಇರುವುದು ನಮ್ಮೆಲ್ಲರ ಪೂರ್ವಜನ್ಮದ ಸುಕೃತ ಎಂದೇ ತಿಳಿಯಬೇಕು. ಇಂದಿನ ಈ ಸುದಿನದಂದು ಅಂತಹ ಕೆಲ ಪುಣ್ಯಪುರುಷ/ಮಹಿಳೆಯರನ್ನು, ಸಮಾಜದ ಚಿಂತನೆಯ ಧಾಟಿಯನ್ನೇ ಬದಲಾಯಿಸಬಲ್ಲ ಪ್ರವರ್ತಕರನ್ನು ನೆನೆಯೋಣ.
ಪ್ರೊ. ಭಗ್‍ವಂತ – ಇವರೊಬ್ಬ ಸಮಾಜಸುಧಾರಕ ಕಮ್ ಪಂಡಿತ ಕಮ್ ವಿಚಾರವಾದಿ ಕಮ್ ಜಾತ್ಯತೀತ ಕಮ್ ಇನ್ನೇನೇನೋ ಆಗಿರುವ ಪುಣ್ಯಪುರುಷರು. ಇವರು ಜಗತ್ತಿನ ಉಳಿದೆಲ್ಲಾ ದೇಶಗಳನ್ನು ಬಿಟ್ಟು ನಮ್ಮ ಭರತಖಂಡವನ್ನು, ಅದರಲ್ಲೂ ಕರ್ನಾಟಕವನ್ನು ತನ್ನ ಅವತಾರಕ್ಕಾಗಿ ಆರಿಸಿಕೊಂಡದ್ದೇ ನಮ್ಮೆಲ್ಲರ ಪುಣ್ಯ. ಭಗ್‍ವಂತ್ ಅವರು ತನ್ನ ದಿವ್ಯಚಕ್ಷುಗಳಿಂದ ಈ ಸಮಾಜದ ಧರ್ಮ-ಪಂಥಗಳಲ್ಲಿ ಅಡಗಿರುವ ವಾರೆಕೋರೆಗಳನ್ನು ಹೊರಗೆಳೆದುಹಾಕಿ ಸಮಾಜಕ್ಕೆ ಭರಿಸಲಾರದ ಸಹಾಯ ಮಾಡಿದ್ದಾರೆ. ಇವರಿಗೆ ಹಿಂದೂ ಧರ್ಮದ ಭಗವದ್ಗೀತೆ ಎಂದರೆ ತುಂಬಾ ಪ್ರೀತಿ. ಅದನ್ನು ನೂರಾರು ಸಲ ಪಾರಾಯಣ ಮಾಡಿ, ಇದುವರೆಗೆ ಪಂಡಿತವರೇಣ್ಯರಿಗೆ ಕಾಣದ ಅರ್ಥಗಳನ್ನು ಹುಡುಕಿ ಹೊರತೆಗೆದ ಸಾಹಸಿ ಅವರು. ಭಗ್‍ವಂತ್ ಭಾರತದಲ್ಲಲ್ಲದೆ ದೂರದ ಸೌದಿಯಲ್ಲೋ ವ್ಯಾಟಿಕನ್‍ನಲ್ಲೋ ಹುಟ್ಟಿ ಅಲ್ಲಿನ ಧರ್ಮಗ್ರಂಥಗಳನ್ನು ಈ ರೀತಿ ಹೊಗಳಿದ್ದರೆ ಅವರಿಗೆ ಅಲ್ಲಿನ ಮಠಾಧಿಪತಿಗಳು ಮತ್ತು ಸರ್ಕಾರಗಳು ಅಲೌಕಿಕ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸುತ್ತಿದ್ದವು. ಭಗ್‍ವಂತ ಅವರ ಯೋಚನಾಸರಣಿ ಎಷ್ಟು ವೇಗವಾದದ್ದೆಂದರೆ ಅವರೊಬ್ಬ ಅಚಿಂತ್ಯವಾಗ್ಮಿ (ಅಂದರೆ ಚಿಂತಿಸದೆ ಮಾತಾಡಬಲ್ಲ ಸಮರ್ಥ) ಎಂದೇ ಹೇಳಬಹುದು. ಇವರು ನಾಲ್ಕು ದಶಕಗಳ ಕಾಲ ಕಲಿಸಿ ಬೆಳೆಸಿದ ಬುದ್ಧಿಜೀವಿಗಳ ಸಂತತಿ ನಮ್ಮ ರಾಜ್ಯದಲ್ಲಿ ಪಾರ್ತೇನಿಯಂ ವನೌಷಧಿಯಂತೆ ಎರ್ರಾಬಿರ್ರಿ ಬೆಳೆದು ನಾಡುನುಡಿಯ ಸೇವೆಯಲ್ಲಿ ನಿರತವಾಗಿದೆ. ಭಗ್‍ವಂತರ ಚಿಂತನೆಯ ಪ್ರಭೆಯ ಮುಂದೆ ಆದಿಕವಿ ವಾಲ್ಮೀಕಿಯ ಪ್ರತಿಭೆಯೂ ಮಂಕುಹೊಡೆಯುತ್ತದೆ ಎಂದು ಧಾರಾಳವಾಗಿ ಹೇಳಬಹುದು. ಇವರಿಗೆ ನೊಬೆಲ್ ಕೊಟ್ಟರೂ ಕಡಿಮೆಯೇ. ಆದರೆ, ಸದ್ಯಕ್ಕೆ ಇವರ ಉಜ್ವಲಪ್ರತಿಭೆಗೆ ಮುಕುಟಪ್ರಾಯವಾದ ಒಂದು ಕರ್ನಾಟಕರತ್ನವನ್ನೋ ಪಂಪಪ್ರಶಸ್ತಿಯನ್ನೋ ಸರಕಾರ ಅವಶ್ಯ ಕೊಟ್ಟು ಕನ್ನಡಿಗರಿಗೆ ನೆಮ್ಮದಿ ತರಬೇಕು. ಇಲ್ಲವಾದರೆ, ಇವರ ಪಾಂಡಿತ್ಯದ ಪ್ರಭೆಗೆ ಕನ್ನಡದ ಅಳಿದುಳಿದ ಸ್ವಸ್ಥಮಿದುಳುಗಳು ಉರಿದುಹೋದಾವು!
ಮಿಸ್ ದಶಕಂಠಿ – ಇವರು ಕನ್ನಡದ ಉದಯೋನ್ಮುಖ ಪ್ರತಿಭೆಗಳ ಸಾಲಲ್ಲಿ ಎದ್ದುಕಾಣುವ ಒಂದು ವ್ಯಕ್ತಿತ್ವ. ಯೆಲ್ಲೋ ಹರಿದುಹೋಗಬಹುದಾಗಿದ್ದ ಪ್ರತಿಭೆಯನ್ನು ಅವರು ಸಂಪೂರ್ಣವಾಗಿ ತನ್ನ ಪತ್ರಿಕೆಯ ಶ್ರೇಯೋಭಿವೃದ್ಧಿಗಾಗಿ ಹರಿಸಿ ಕನ್ನಡವನ್ನು ಪಾವನವಾಗಿಸಿದ್ದಾರೆ. ಸರಕಾರಗಳು ಜಿ ಕೆಟಗರಿಯ ನಿವೇಶನಗಳ ಆಸೆ ತೋರಿಸಿದಾಗಲೂ, ಇಪ್ಪತ್ತೈದು ಲಕ್ಷ ರುಪಾಯಿಯ ಡೀಲ್‍ಗಳನ್ನು ಪದೇಪದೇ ಮುಂದಿಟ್ಟಾಗಲೂ ಅಂತಹ ಆಮಿಷಗಳಿಗೆ ಬಲಿಬೀಳದೆ ಪತ್ರಿಕೆಯನ್ನು ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಕಟ್ಟಿ ಬೆಳೆಸಿ ಕನ್ನಡದ ನಂಬರ್ ಒನ್ ಸ್ಥಾನಕ್ಕೆ ಏರಿಸಿದ ಅಸಾಧಾರಣ ದಿಟ್ಟೆ ಎನ್ನಬಹುದು. ಇವರ ಸಾರಸ್ವತಸೇವೆ ಕನ್ನಡಕ್ಕೆ ಲಭಿಸದೇ ಹೋಗುತ್ತಿದ್ದರೆ, ಕನ್ನಡದ ಜಾಣೆಜಾಣೆಯರೆಲ್ಲ ಇನ್ನೂ ಕೋಣಕೋಣೆಯರಾಗೇ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಎಂಥಾ ಘೋರ ಸಂಗತಿಯಲ್ಲವೆ?
ಕನ್ನಡನಾಡಲ್ಲಿ ನ್ಯಾಯನೀತಿಯಿಂದ ಬದುಕಲಾರದೆ ಜೀವ ಕಳೆದುಕೊಂಡ ಸಾಹಸಿಗಳ ಬಗ್ಗೆ ದಶಕಂಠಿಯವರಿಗೆ ವಿಶೇಷ ಪ್ರೀತಿ, ಅಭಿಮಾನ. ಅಂಥವರ ಜೀವನದ ಕತೆಯನ್ನು ಎಳೆಎಳೆಯಾಗಿ ಬಿಡಿಸಿ ಜನರ ಮುಂದಿಟ್ಟು ಇತಿಹಾಸದ ಪುನರ್ನಿರ್ಮಾಣ ಮಾಡಿದ ಮಹಾ ಇತಿಹಾಸಜ್ಞೆ ಎನ್ನಬಹುದು. ಇವರ ನಿಸ್ವಾರ್ಥ, ಪ್ರಾಮಾಣಿಕ, ನಿಷ್ಠ, ಎದೆಗುಂದದ, ಸತ್ಯಪರ, ನೀತಿಯುತ, ಜನಪರ ಕಾಳಜಿಯ ಅಭೂತಪೂರ್ವ ಪತ್ರಿಕೋದ್ಯಮ ಸೇವೆಗೆ ಪುಲಿಟ್ಜರ್ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಗೊಯೆಂಕಾ ಅಥವಾ ಟೀಯೆಸ್ಸಾರ್ ಹೆಸರಿನ ಪ್ರಶಸ್ತಿಗಳು ಬಂದರೆ, ಅದು “ಪ್ರಶಸ್ತಿಯೇ ತನ್ನನ್ನು ಗೌರವಿಸಿಕೊಂಡಿತು” ಎನ್ನುವಂತೆ ಆಯಾ ಗಣ್ಯರಿಗೇ ಸಲ್ಲಬಹುದಾದ ಮರ್ಯಾದೆ.
ಡಾ. ಎಗ್‍ಬುರ್ಜಿ – ಎಗ್‍ಬುರ್ಜಿಯವರು ಕನ್ನಡನಾಡಿನ ವಿಶ್ವವಿದ್ಯಾಲಯವೊಂದರ ಕುಲಪತಿಗಳಾಗಿ ಯಥಾನುಶಕ್ತಿ ಅಲ್ಲಿ ಜ್ಞಾನಲಯ ಮಾಡಿದ ಪ್ರತಿಭಾವಂತ. ಈ ನಾಡಿನ ಕಲ್ಲುಕಲ್ಲುಗಳೂ ಇವರ ಹೆಸರನ್ನು ಯೋಚಿಸಿ ಕಣ್ಣೀರಿಡುತ್ತವೆ – ಇವರಿಲ್ಲದೆ ತಮ್ಮ ಇತಿಹಾಸ ಹೇಳುವವರು ಯಾರಿದ್ದರು ಎಂದು. ಸುಳ್ಳುಪಳ್ಳುಗಳ ಆಗರವೆಂದು ಉಳಿದವರು ಉಪೇಕ್ಷೆ ಮಾಡಿದ್ದ ಮಾರ್ಗದಲ್ಲಿ ದಿಟ್ಟವಾಗಿ ನಡೆದು ಉಳಿದ ಬುದ್ಧಿಜೀವಿಗಳಿಗೆ ಮಾದರಿಯಾದವರು ಎಗ್‍ಬುರ್ಜಿ. ಗಿಡಗಳಿಗೆ ಜೀವವಿದೆ ಎಂದು ಜೆ.ಸಿ.ಬೋಸ್ ಹೇಳಿದಂತೆಯೇ, ಕಲ್ಲುಗಳಲ್ಲಿ ದೇವರಿಲ್ಲ ಎಂಬ ಎಗ್‍ಬುರ್ಜಿಗಳ ಹೇಳಿಕೆಯೂ ವಿಶ್ವಪ್ರಸಿದ್ಧವಾಗಿದೆ. ಇದನ್ನು ಎಗ್‍ಬುರ್ಜಿ ಪ್ರಯೋಗ ಎಂದೇ ಕರೆಯಲಾಗುತ್ತದೆ.
ಎಗ್‍ಬುರ್ಜಿಗಳು ಮಹಾ ಸಮತಾವಾದಿ. ಅಂದರೆ, ಯಾವುದೇ ಕಾರ್ಯಕ್ರಮಕ್ಕೆ ಕರೆದರೂ, ಆ ಕಾರ್ಯಕ್ರಮದ ಆಶಯವನ್ನು ನೋಡದೆ ಅವರು ತನ್ನ ಒಂದಂಶದ ಹೇಳಿಕೆಯನ್ನೇ ಎಲ್ಲಕಡೆಯೂ ಕೊಡುತ್ತಾರೆ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿಯುವುದೇ ಇವರ ಜೀವನದ ಏಕಮಾತ್ರ ಧ್ಯೇಯ ಎನ್ನುವುದು ಮತ್ತೆಮತ್ತೆ ಸಾಬೀತಾಗಿದೆ. ಎಗ್‍ಬುರ್ಜಿಗಳ ಮಾತುಗಳನ್ನು ಮಹಾಜನತೆ ಕೇಳಿಸಿಕೊಂಡಷ್ಟೂ ಅಂತಹ ಕಾರ್ಯಕ್ರಮಗಳ ಬುಕ್‍ಸ್ಟಾಲುಗಳಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಪುಸ್ತಕಗಳು ಬಿಸಿದೋಸೆಯಂತೆ ಖರ್ಚಾಗಿರುವುದೇ ಇದಕ್ಕೆ ಅನನ್ಯಸಾಕ್ಷಿ. ಇವರ ಪ್ರತಿಭೆ ಮತ್ತು ಬಾಯಿಯನ್ನು ಪರಿಗಣಿಸಿ ಹೇಳುವುದಾದರೆ, ಸರಕಾರ ಕೊಡುವ ಹತ್ತುಲಕ್ಷದ ಪ್ರಶಸ್ತಿ ಯಾವ ಲೆಕ್ಕಕ್ಕೂ ಅಲ್ಲ ಎನ್ನಬೇಕು.
ಶ್ರೀ ದ್ವಾರಕಾಧೀಶ – ಬುದ್ಧಿಜೀವಿಗಳಲ್ಲೇ ಅತ್ಯಂತ ಸುಂದರವಾದ ಭಗವಂತನ ಹೆಸರನ್ನು ಇಟ್ಟುಕೊಂಡಿರುವ ದ್ವಾರಕಾಧೀಶರು ಕನ್ನಡದ, ಕನ್ನಡಿಗರ ಆಸ್ತಿ. ನಮ್ಮ ನಾಡಿನಲ್ಲಿ ಯಾವುದೇ ವೈಚಾರಿಕ ಗಲಭೆ ಎದ್ದರೂ ಅದನ್ನು ಬಳಸಿಕೊಂಡು ಟಿಆರ್ಪಿ ಏರಿಸಿಕೊಳ್ಳಲು ಹವಣಿಸುವ ಟಿವಿ ಚಾನೆಲುಗಳ ಪಾಲಿಗೂ ಅವರೊಂದು ಅನರ್ಘ್ಯ ರತ್ನವೇ ಸರಿ. ಕನ್ನಡದ ಯಾವ ಚಾನೆಲ್ ಕರೆದರೂ ಅವರು ಹೋಗಿ ತನ್ನ ವಿಚಾರಧಾರೆಯನ್ನು ಹರಿಸುತ್ತಾರೆ. ಪುರೋಹಿತಶಾಹಿ, ಬ್ರಾಹ್ಮಣರು, ವೈದಿಕತೆ, ಸಂಸ್ಕೃತ, ದಲಿತ ಸಂವೇದನೆ, ಶೂದ್ರಸಂಸ್ಕೃತಿ, ಜಾತ್ಯತೀತತೆ, ಬಂಡವಾಳಶಾಹಿ, ಪುರೋಗಾಮಿ, ಬಲಪಂಥ – ಹೀಗೆ ಬುದ್ಧಿಜೀವಿಗಳ ನಿಘಂಟಿನ ಎಲ್ಲಾ ಪದಗಳನ್ನೂ ಒಂದೇ ವಾಕ್ಯದಲ್ಲಿ ಹೇಳಿ ಗಿನ್ನೆಸ್ ದಾಖಲೆ ಮಾಡುವ ತಾಕತ್ತಿರುವ ದ್ವಾರಕಾಧೀಶರನ್ನು “ನಡೆದಾಡುವ ನಿಘಂಟು” ಎಂದೇ ಹೇಳಬಹುದು. ಸಂಸ್ಕೃತದ ಬಗ್ಗೆ ಇವರ ಪ್ರೀತಿ ಅತ್ಯಂತ ಹೃದಯಸ್ಪರ್ಶಿಯಾಗಿದೆ. ದ್ವಾರಕಾಧೀಶರ ಮಾತುಗಳನ್ನು ಕೇಳಿಯೇ ಸಂಸ್ಕೃತದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರ ಸಂಖ್ಯೆ ಗಣನೀಯ.
ಕುರುಡರಾಗಿದ್ದ ಸೂರದಾಸರು ಕೃಷ್ಣನನ್ನು ನೋಡಿದ ಮೇಲೆ ಮತ್ತೆ ಅಂಧತ್ವ ಪ್ರಾಪ್ತಿಯಾಗಲಿ ಎಂದು ಬಯಸಿದರಂತೆ. ಹಾಗೆಯೇ ದ್ವಾರಕಾಧೀಶರ ಮಾತುಗಳನ್ನು ಐದು ನಿಮಿಷ ಕೇಳುವ ಭಾಗ್ಯ ಪಡೆದ ಕಿವುಡ ಮತ್ತೆ ತನಗೆ ಕಿವುಡುತನ ಪ್ರಾಪ್ತಿಯಾಗಲಿ ಎಂದು ಹಂಬಲಿಸದೇ ಇರಲಾರ. ಒಮ್ಮೆ ಕೇಳಿದರೆ ಜೀವಮಾನವಿಡೀ ನೆನಪಿಟ್ಟುಕೊಳ್ಳಬಹುದಾದ ಅಂತಹ ವಿಚಾರತೀವ್ರತೆ ಇವರದ್ದು! ದ್ವಾರಕಾಧೀಶರಿಗೂ ಅತಿಶೀಘ್ರದಲ್ಲಿ ಯಾವುದಾದರೂ ಕೆಟಗರಿಯಲ್ಲಿ ಒಂದು ಪ್ರಶಸ್ತಿ ಕೊಟ್ಟುಬಿಡಬೇಕೆಂದು ಅವರ ಅಭಿಮಾನಿಗಳ ಆಗ್ರಹ.
ಮಿಸ್ಟರ್ ಬೆಂಕಿಚೆಂಡು – ಕನ್ನಡದ ಅತ್ಯಧಿಕ ಪ್ರಸಾರದ ಪತ್ರಿಕೆಗಳಲ್ಲಿ ಎರಡನೆ ಸ್ಥಾನದಲ್ಲಿರುವ ಬೆಂಕಿ ಪತ್ರಿಕೆಯ ಸಂಪಾದಕರು ಇವರು. ರಾಮಾಯಣವನ್ನು ಬರೆದ ವಾಲ್ಮೀಕಿ ಸಜ್ಜನರನ್ನು ಹೊಡೆದುರುಳಿಸಿ ದೋಚುವ ಡಕಾಯಿತನಾಗಿದ್ದನೆಂಬುದು ಐತಿಹ್ಯ. ಆದರೂ ಅವನು ಕೊಟ್ಟಿರುವ ಮಹಾಕಾವ್ಯದೆದುರು ಪೂರ್ವಾಶ್ರಮದ ವಿಚಾರಗಳು ಗೌಣವಾಗುತ್ತವೆ. ಹಾಗೆ ಪೂರ್ವಾಶ್ರಮದ ಪ್ರಸಂಗಗಳನ್ನು ಬೆದಕದೆ ನೋಡುವುದಾದರೆ, ಬೆಂಕಿಚೆಂಡು ಕನ್ನಡದ ಮಟ್ಟಿಗೆ ಸದ್ಯಕ್ಕೆ ಅತ್ಯಂತ ಪ್ರಚಾರದಲ್ಲಿರುವ ಪ್ರಚಾರಪ್ರಿಯ ಬುದ್ಧಿಜೀವಿಗಳು ಎಂದು ನಿಸ್ಸಂದೇಹವಾಗಿ ಹೇಳಬಹುದು. ಭೈರಪ್ಪ ಅವರ ಕಾದಂಬರಿಗಳ ಒಂದು ಪುಟವನ್ನೂ ಓದದೆ ಅವುಗಳ ಮೇಲೆ ಅತ್ಯಂತ ತಳಸ್ಪರ್ಶಿಯಾದ ಅಧ್ಯಯನಪೂರ್ಣ ವಿಮರ್ಶೆ ಬರೆಯಬಲ್ಲ ಇವರಂತಹ ಪ್ರತಿಭಾವಂತ ಬರಹಗಾರ ಮತ್ತೆಂದೂ ಕನ್ನಡಕ್ಕೆ ಸಿಕ್ಕಲಾರರು. ಹಾಗಾಗಿ ಅವರನ್ನು ಉಳಿಸಿಕೊಳ್ಳುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ. ಉಳಿದ ಬುದ್ಧಿಜೀವಿಗಳಂತೆ ಭಗವದ್ಗೀತೆ, ಹಿಂದೂ ಧರ್ಮಗಳೇ ಬೆಂಕಿಚೆಂಡು ಅವರ ಅಧ್ಯಯನದ ವಿಷಯಗಳಾದರೂ ಇತ್ತೀಚೆಗೆ ಭೈರಪ್ಪ ವಿಷಯದಲ್ಲಿ ಪಿಎಚ್‍ಡಿ ಮಹಾಪ್ರಬಂಧ ಬರೆಯಲು ಕೂತಿರುವುದು ಸಾಹಿತ್ಯಾಸಕ್ತರ ಕುತೂಹಲಕ್ಕೆ ಕಾರಣವಾಗಿದೆ. ಭೂಗತ ಮತ್ತು ಆಕಾಶದಾಚೆಯ – ಎರಡೂ ವಿಷಯಗಳನ್ನು ‘ಲೀಲಾಜಾಲ’ವಾಗಿ ಬರೆಯಬಲ್ಲ ಬೆಂಕಿಗೆ ಸರಕಾರ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಕೊಡದಿದ್ದರೆ ಈ ವರ್ಷ ಖಂಡಿತಾ ಕೊಡಲೇಬೇಕು.
ಇವರಲ್ಲದೆ ನಮ್ಮ ಕರುನಾಡ ಪುಣ್ಯಭೂಮಿಯಲ್ಲಿ ಜನ್ಮ ತಳೆದು ಈ ನೆಲವನ್ನು ಪಾವನಗೊಳಿಸಿದ ಇನ್ನೂ ಬಹಳಷ್ಟು ಮಹನೀಯರು ಇದ್ದಾರೆ. ಅವರೆಲ್ಲರನ್ನೂ ಪರಿಚಯಿಸುತ್ತಾ ಹೋದರೆ ಬರೆಯುವ ನನ್ನ ಕೈಗಳು ಸೇದುಹೋದಾವು, ಓದುವ ನಿಮ್ಮ ಕಣ್ಣುಗಳು ಇಂಗಿಹೋದಾವು! ಹಾಗಾಗಿ, ಈ ಪಟ್ಟಿಯಲ್ಲಿ ಬರದೆ ತಪ್ಪಿಸಿಕೊಂಡ ಮಹನೀಯರನ್ನು ಮುಂದಿನವರ್ಷದ ಇದೇ ದಿನ ಇದೇ ಸಮಯಕ್ಕೆ ಪರಿಚಯಿಸೋಣವಂತೆ. ಈ ಪಟ್ಟಿಗೆ ಇನ್ನೂ ಹೊಸದಾಗಿ ಸೇರ್ಪಡೆಯಾಗಲು ಕಾಯುತ್ತಿರುವ ತರುಣ ಬುದ್ಧಿಜೀವಿಗಳನ್ನೂ ಈ ಸಂದರ್ಭದಲ್ಲಿ ಅತ್ಯಂತ ಪ್ರೀತಿಯಿಂದ ನೆನೆಯಲೇಬೇಕು. ಈ ಪ್ರತಿಭಾವಂತರು ಇರುವುದರಿಂದಲೇ ನಮ್ಮ ಬದುಕಲ್ಲಿ ರಂಜನೆ, ಪ್ರಚೋದನೆಗಳ ರಸ ಬತ್ತದೆ ಹರಿಯುತ್ತಿದೆ. ಇವರ ಸಂತತಿ ಸಾವಿರವಾಗಲಿ!
—–
ಇಲ್ಲಿ ಬಂದಿರುವ ಎಲ್ಲ ಪಾತ್ರಗಳೂ ಕಾಲ್ಪನಿಕ.
ಹಾಗೊಂದು ವೇಳೆ ಹೋಲಿಕೆ ಕಂಡದ್ದೇ ಆದರೆ, ಈ ಹಿಂದಿನ ವಾಕ್ಯವನ್ನು ಮತ್ತೊಮ್ಮೆ ಓದಬೇಕಾಗಿ ವಿನಂತಿ.
ಜಾತ್ಯತೀತ ಅಲಿಯಾಸ್ ಪ್ರಗತಿಪರ ಆಕಾ ಬುದ್ಧಿಜೀವಿ ದಿನದ ಈ ಶುಭ ಸಂದರ್ಭದ ತಮ್ಮ ಸಕಾಲಿಕ ಲೇಖನಕ್ಕೆ ಧನ್ಯವಾದಗಳು!
ಸಾಂದರ್ಭಿಕ, ಸಮಯೋಚಿತ ಲೇಖನ. ಎಲ್ಲ ಪರಗತಿಪರ ಬಂಧುಗಳಿಗೆ ಪ್ರಗತಿಪರ-ಬುದ್ಧಿಜೀವಿ ದಿನಾಚರಣೆಯ ಶುಭಾಶಯಗಳು..
ಸಮಯೋಚಿತ ಬರಹ. ಬೆಂಕಿ,ಭೈರಪ್ಪ ಅವರನ್ನು ಓದಿಕಂಡಿಲ್ಲ ಎಂಬುದು ಆಶ್ಚರ್ಯಕರ.
ಯಾವಾಗಲೂ ಕೈಲಿ ಪುಸ್ತಕ ಇಟ್ಟುಕೊಂಡಿರುತ್ತೆ!
ಪುಸ್ತಕ ಕೈಲಿ ಹಿಡಿದವರೆಲ್ಲ ಓದ್ತಾರೆ ಅಂತೇನಿಲ್ಲ. ಸುಡುವವರೂ ಇರಬಹುದು. 🙂
xlnt
Cheap parody of leftist writers. But Thank God you didn’t use Darga Sir for your writing lust.
@Moderator: This article is a disgrace to Nilume.
Please read the last but one sentence in the article. Also the last one..
Writer is praising the gems of Karnataka, don’t know why its a disgrace.. 🙂
ಲೆಫ್ಟಿಸ್ಟ್ ಎಂಬ ಪದವನ್ನು ನಾನು ಬಳಸೇ ಇಲ್ಲ!! ಆದರೂ ನಿಮಗೆ ಅದರ “ವಾಸನೆ” ಅಷ್ಟು ಗಾಢವಾಗಿ ಹೇಗೆ ಬಡಿಯಿತು? ಮಹಾತ್ಮರನ್ನು ಹೊಗಳಿದರೂ disgrace ಅಂತೀರಲ್ಲ ಸ್ವಾಮಿ!!
ನಮಗೆ ಮಾತ್ರ ಮೂಗಿದೆ. ಬೇರೆಯವರಿಗೆ ಮೂಗಿಲ್ಲ ಅನ್ನುವ ಧೋರಣೆ ಇರುವಂತಿದೆ ಈ ಮಹಾನ್ ಲೇಖಕರಿಗೆ. ನಮ್ಮ ದೇಶದಲ್ಲಿ ಸಾವಿರಾರು ದಂತ ಕಥೆಗಳನ್ನು ಬರೆದ ಎಲ್ಲಾ ಲೇಖಕರು ಅಜರಾಮರರಾಗಿ ಹೋಗಿದ್ದಾರೆ. ದಂತ ಕಥೆಗಳೆಲ್ಲಾ ಊಹಾಪೋಹಗಳಿಂದ ತುಂಬಿ ತುಳುಕಿ ಹೋಗಿವೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಜೊತೆಗೆ ಕೆಲಸಕ್ಕೆ ಬಾರದ ಸಾವಿರಾರು ಜಾತಿಗಳು ಬೇರೆ ನಮ್ಮ ದೇಶವನ್ನು ಹಾಳು ಮಾಡಾಗಿದೆ. ಜಾತಿಗಳನ್ನು ಸೃಷ್ಟಿಸದವರೂ ಇಂತಹ ಅವಿವೇಕಿಗಳೇ ತಾನೆ? ಹೊಗಳಲು ಬರದಿದ್ದರೆ, ಕಡೇ ಪಕ್ಷ ನಾವು ಸುಮ್ಮನಿರುವುದನ್ನಾದರೂ ಕಲಿತರೆ ಒಳ್ಳೆಯದು.
+1
“ಹೊಗಳಲು ಬರದಿದ್ದರೆ, ಕಡೇ ಪಕ್ಷ ನಾವು ಸುಮ್ಮನಿರುವುದನ್ನಾದರೂ ಕಲಿತರೆ ಒಳ್ಳೆಯದು.” ನಿಮ್ಮ ಆ ಮಾತು ನನಗೆ ಇಷ್ಟವಾಯಿತು. ಅಂದಹಾಗೆ ಅದು ಬರೆದವರಿಗೆ ಅನ್ವಯಿಸುವುದಿಲ್ಲವೋ?
ಆನೆಯನ್ನು ನೋಡಿ ಶ್ವಾನ ಊಳಿಟ್ಟಂತಿದೆ.
ವಿ.ಸೂ. ಆನೆ ಮತ್ತು ಶ್ವಾನ ಕಾಲ್ಪನಿಕ ಪ್ರಾಣಿಗಳು. ಶ್ವಾನವನ್ನು ತಮಗೇನಾದರೂ ಆರೋಪಿಸಿಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ.
ಹೇ ಹೇ! ವ್ಯಂಗ್ಯ ಮರ್ಮಕ್ಕೆ ತಾಗುವಂತಿದೆ! ಕೃಷ್ಣಪ್ಪ ಸರ್ ಅವರ ಎಂದಿನ ಚುರುಕು ಕಮೆಂಟು ಪ್ರಸ್ತುತ ಚರ್ಚೆಯ ಕಳೆಯನ್ನು ಹೆಚ್ಚಿಸಿದೆ.
ನೀವು ಹೇಳಿದಂತೆ ಶ್ವಾನವನ್ನು ಖಂಡಿತವಾಗಿಯೂ ನನಗೆ ಅನ್ವಯಿಸಿಕೊಳ್ಳುವುದಿಲ್ಲ. ಅದನ್ನು ನಿಮಗೇ ಬಿಟ್ಟಿದ್ದೇನೆ. ಆನೆಯನ್ನು ನನಗೆ ಅನ್ವಯಿಸಿಕೊಳ್ಳುವುದರಲ್ಲಿ ಸಾರ್ಥಕತೆ ಇದೆ. 🙂
ವೆರಿಗುಡ್, ಆ ಶ್ವಾನವನ್ನು ನಾನು ಸಾಕಿಕೊಳ್ಳ್ಳುತ್ತೆನೆ. ಹಾಗೆಯೇ ’ಗಾತ್ರ’ ನೋಡಿಕೊಂಡು ಊಳಿಡುವಂತೆ ಅದಕ್ಕೆ ತರಬೇತಿ ನೀಡಲಿದ್ದೇನೆ.
ಅಂದಹಾಗೆ ಆ ಕಾಲ್ಪನಿಕ ಪ್ರಾಣಿ ಆನೆಯನ್ನು ನಾನು, ಪ್ರೊ.ಭಗವಂತ, ಮಿಸ್ ದಶಕಂಠಿ, ಡಾ.ಎಗ್ ಬುರ್ಜಿ, ಶ್ರೀ ದ್ವಾರಕಾಧೀಶ, ಮಿಸ್ಟರ್ ಬೆಂಕಿಚೆಂಡು ಇವರಿಗೆ ದಾನವಾಗಿ ಕೊಟ್ಟುಬಿಟ್ಟಿದ್ದೇನೆ. ಈಗ ತಾವೂ ಅದನ್ನು ಹಂಚಿಕೊಳ್ಳಲಿಚ್ಛಿಸಿರುವುದು ಸಂತೋಷದ ವಿಷಯವೇ ಆದರೂ, ಅವರಿಂದ ಅನುಮತಿ ಪಡೆಯಬೇಕಾಗಿರುವುದು ಅತ್ಯಗತ್ಯ.
ಕೃಷ್ಣಪ್ಪ ಸರ್ ಅವರ ಪ್ರತಿಕ್ರಿಯೆ ಮಾನವೀಯತೆಯ ಹಿರಿಮೆಯನ್ನು ಎತ್ತಿ ಹಿಡಿಡಿದೆ. ಆದರೆ ಪಾಷಾಣ ಹೃದಯದ ವೈದಿಕ ಪುಂಡರಿಗೆಲ್ಲಿ ಅರ್ಥವಾದೀತು ಮಾನವೀಯತೆಯ ಸಾರ ಸತ್ವ?
ಆನೆಯನ್ನು ದಾನ ಕೊಡುವುದು ವೈದಿಕರ ಸಂಪ್ರದಾಯ, ಈ ಎಡಪಂತೀಯರದ್ದೇನಿದ್ದರೂ ಕಿತ್ತು ತಿನ್ನುವುದು ಇಲ್ಲವೇ ಗಂಜಿ ಕೇಂದ್ರ ಆಶ್ರಯಿಸುವುದು. ಕಿತ್ತು ತಿನ್ನುವರಿಗೆ ದಾನ ಕೊಡಲು ಸಾಧ್ಯವೆ? 😀
ಗೋದಾನ, ಭೂದಾನ, ವಸ್ತ್ರದಾನ, ದಕ್ಷಿಣೆ ಇತ್ಯಾದಿಗಳನ್ನು ವೈದಿಕರು ಇತರರಿಂದ ಪಡೆದುಕೊಂಡಿರುವುದನ್ನು (ಮದುವೆ, ಗೃಹಪ್ರವೇಶ, ಪೂಜೆ ಇತ್ಯಾದಿಗಳಲ್ಲಿ) ನಾನು ನೋಡಿದ್ದೇನಪ್ಪ, ಇತರರು ವೈದಿಕರಿಂದ ದಾನಪಡೆದಿರುವ ನಿದರ್ಶನ ನನಗಂತೂ ಗೊತ್ತಿಲ್ಲ. ಅಂದಹಾಗೆ ’ಕಾಲ್ಪನಿಕ ಆನೆ’ ಎಂಬುದನ್ನೇಕೆ ಜಾಣತನದಿಂದ ಮರೆತಿದ್ದೀರಿ?
ಮದುವೆ,ಗೃಹಪ್ರವೇಶ ಇತ್ಯಾದಿಗಳು ಕೋರಿಕೆಯ ಮೇಲೆ ನಡೆಸಿಕೊಡುವ ಕೆಲಸಗಳು.
ನಿಮ್ಮ ಸ್ನೇಹಿತರುಗಳಾದ ಭಗವಂತನೇ ಮೊದಲಾದ ಹುಳಿಹಿಂಡುಕರು,ಅರೆಬೆಂದ ಪ್ರೊಫೆಸರುಗಳು, ಗುಪ್ತವಾಗಿ ಇತರಮೂಲಗಳಿಂದ ಗಂಜಿ ಸುರುವಿಕೊಂಡು ತಮ್ಮ ಮಾತ್ೃನಿಂದೆ ನಡೆಸುವ ಆಧುನಿಕ ಸರಕಾರಿ ಕ್ೃಪಾಪೋಷಿತ ಪಾಷಂಡಿಗಳು. ಯಾವುದನ್ನೂ ಆಳವಾಗಿ ತಿಳಿಯದೆ ಬಡಬಡಿಸುವ ಬುಡುಬುಡುಕೆಗಳು.
ನೀವೂ ಸಹ ದಮ್ಮು ಇದ್ದರೆ ತಾತ್ವಿಕ ನೆಲೆಯಲ್ಲಿ ರೋಹಿತ್‌ನನ್ನು ಅವರ ಪಾಯಿಂಟು ಗಳಿಗೆ ಪ್ರತಿವಾದ ಮಂಡಿಸಿ ನೋಡೋಣ.
‘ಕುಚೇಷ್ಟೆ’ ಕರು ಈ ಬಗ್ಗೆ ಗಮನಹರಿಸುವುದು ತಮ್ಮ ಪಾಂಡಿತ್ಯ ದರ್ಶನ ಮಾಡಿಸಲಿ.
ನಾಲ್ಕು ಲೈನು ಕಮೆಂಟಿನಲ್ಲಿ, ‘ಹುಳಿಹಿಂಡುಕರು, ಅರೆಬೆಂದ ಪ್ರೊಫೆಸರುಗಳು, ಪಾಷಂಡಿಗಳು, ಬುಡುಬುಡಿಕೆಗಳು, ಕುಚೇಷ್ಟಕರು’ – ಇದಿಷ್ಟು ಬೈಗುಳಗಳನ್ನು ಬಳಸಿದ್ದೀರಿ.
‘ಗುಪ್ತವಾಗಿ ಇತರ ಮೂಲಗಳಿಂದ ಗಂಜಿ ಸುರುವಿಕೊಂಡು, ಮಾತೃನಿಂದೆ ನಡೆಸುವ, ಯಾವುದನ್ನೂ ತಿಳಿಯದೆ ಬಡಬಡಿಸುವ’ – ಎಂಬ ನಿಂದನೆ ಪದಗಳನ್ನು ಬಳಸಿದ್ದೀರಿ.
’ದಮ್ಮು ಇದ್ದರೆ’ ಎಂದು ಬೆದರಿಕೆ ಹಾಕಿದ್ದೀರಿ, ‘ಪ್ರತಿವಾದ ಮಂಡಿಸಿ ನೋಡೋಣ’ ಎಂದು ಸವಾಲು ಎಸೆದಿದ್ದೀರಿ, ’ಮುಖಪರಿಚಯ ಕೂಡ ಇಲ್ಲದ ವ್ಯಕ್ತಿ (ಭಗವಂತ)ಯನ್ನು ’ನಿಮ್ಮ ಸ್ನೇಹಿತರು’ ಎಂದು ಸುಳ್ಳು ಹೇಳಿದ್ದೀರಿ- ನನ್ನ ಪ್ರತಿಕ್ರಿಯೆಯಲ್ಲಿ ಒಂದೂ ಕೆಟ್ಟಪದ ಬಳಸಿಲ್ಲವಲ್ಲ… ಇಷ್ಟೇಕೆ ಮೈ ಪರಚಿಕೊಂಡಿರಿ?
ಗಾತ್ರ ನೋಡಿಕೊಂಡು ಊಳಿಡುವ ತರಬೇತಿ?? ಯಪ್ಪ! ನಿಮಗೆ ಇಂತಹ ನಾಯಿಸೂಕ್ಷ್ಮಗಳೂ ತಿಳಿದಿವೆಯೇ? ಭೇಷ್. ನೀವೇ ಊಳಿಡುವಂತೆ ಮಾಡಿರಬೇಕಾದರೆ ನನ್ನ ಗಾತ್ರ ನಾಚಿಕೆ ಪಡುವಷ್ಟು ಚಿಕ್ಕದಿರಲಾರದು ಎಂಬ ಧೈರ್ಯ ನನಗೆ 🙂
ಏನು ಮಾಡೋದು, ಆ ನಾಯೀನ ಒಂದು ದಿನ ಕೂಡ ಸಾಕದೆ ಸಾಗಹಾಕಿ, ಆನೆಬಾಲ ಹಿಡಿದುಕೊಂಡುಬಿಟ್ಟಿರಿ…
ರೋಹಿತ್ ಅವರೇ, ನಿಮಗೆ ವ್ಯಕ್ತಿತ್ವಗಳ ಆಯ್ಕೆಗೆ ಶಭಾಶ್ಗಿರಿ ಕೊಡಲೇಬೇಕು. ತುಂಬ ಆಯ್ಕೆಗಳು ಇದ್ದಾಗ, ಹೆಕ್ಕಿ ಅದನ್ನು ಪಾಲಿಷ್ ಮಾಡಿ ಹಾಕೋದು ನೈಪುಣ್ಯತೆಯೆ ಸರಿ. ಮುಂದಿನ ಸಂಚಿಕೆಗಳಲ್ಲಿ ದಯವಿಟ್ಟು ಬೇರೆಯವರಿಗೂ (ಅಂದರೆ ಬಿಟ್ಟವರಿಗೆ) ಅನ್ಯಾಯ ಮಾಡದಂತೆ, ಹೆಕ್ಕಿ ಕೊಂಡಾಡಿ.