ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ
-ರಾಮಚಂದ್ರ ಹೆಗಡೆ
ಇಂದು ಅಂತಾರಾಷ್ಟ್ರೀಯ ಯೋಗದಿನ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವ ಈ ಹೊತ್ತು ನಾವು ನೆನೆಯಲೇಬೇಕಾದ ಒಬ್ಬ ಸಾಧಕರೆಂದರೆ ಯೋಗಾಚಾರ್ಯ, ಅಭಿನವ ಧನ್ವಂತರಿ ಅಂತಲೇ ಪ್ರಸಿದ್ಧರಾದ , ಸುಮಾರು ೫೦ ವರ್ಷಗಳ ಹಿಂದೆಯೇ ಯೋಗದಲ್ಲಿ ಅಪಾರ ಸಾಧನೆ ಮಾಡಿ ಸಾವಿರಾರು ಶಿಷ್ಯರನ್ನು ತಯಾರು ಮಾಡಿ ರಾಜ್ಯದ ಮೂಲೆಮೂಲೆಗಳಿಗೆ ಯೋಗಸಂದೇಶ ತಲುಪಿಸಿದ ಮಹಾನುಭಾವ, ಯೋಗವೆಂದರೆ ಅವರು ಎಂಬಷ್ಟರ ಮಟ್ಟಿಗೆ ಮನೆಮಾತಾದ ಯೋಗಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಯವರು. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ತಾವೇ ಯೋಗದಲ್ಲಿ ಬಹುದೊಡ್ಡ ಸಾಧಕರಾಗಿದ್ದರು. ತಮ್ಮ ಗುರು ‘ಶಿವಾನಂದ’ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ‘ಪೂಜೆ’ಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. 1943ರಲ್ಲಿ ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಜನರ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು. ತಾವು ನೀಡುತ್ತಿದ್ದ ಆಯುರ್ವೇದ ಔಷಧಿ ಯಿಂದ ಲಕ್ಷಾಂತರ ರೋಗಿಗಳ ಬದುಕಲ್ಲಿ ಬೆಳಕು ತಂದವರು. ಚಿತ್ರದುರ್ಗ ಜಿಲ್ಲೆಯ ಪುಟ್ಟ ಹಳ್ಳಿಯೊಂದನ್ನು ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದ ಸಾಧನೆ ಪೂಜ್ಯರದು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಲ್ಲಾಡಿಹಳ್ಳಿ ಆಶ್ರಮ ಮಾಡಿದ ಕ್ರಾಂತಿ ದೊಡ್ಡದು. ಮತ್ತಷ್ಟು ಓದು