ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 16, 2016

ಕನ್ನಡದ ಮೊದಲ ಕೋಮುವಾದಿ ಈ ಮುಮ್ಮಡಿ ಬಲ್ಲಾಳ ವೀರ!

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

hoಕ್ರಿ.ಶ ೧೩೧೦. ಅದು ಮುಸಲ್ಮಾನರ ರಂಜಾನ್ ತಿಂಗಳಿನ ೨೨ನೇ ದಿನ, ಭಾನುವಾರ. ಆ ಪವಿತ್ರ ತಿಂಗಳಿನ ೨೧ ದಿನಗಳೂ ಮುಸಲ್ಮಾನರು ದಕ್ಷಿಣ ಭಾರತದಲ್ಲಿ ನಿರಂತರ ಲೂಟಿ ನಡೆಸಿದ್ದರು. ಕಾಫಿರರ ಕೊಲೆ ಮಾಡಿದ್ದರು, ವಿಗ್ರಹ ಭಂಜನೆ ನಡೆಸಿದ್ದರು, ಮತಾಂತರಗಳು ನಡೆದಿದ್ದವು.

ರಂಜಾನಿನ ೨೨ನೇ ದಿನದಂದು ಅವರು ಲೂಟಿಗೆ ಆರಿಸಿಕೊಂಡದ್ದು ಶ್ರೀಮಂತ ದ್ವಾರಸಮುದ್ರವನ್ನು. ಮಲ್ಲಿಕಾಫರ್ ಎಂಬ ಒಂದು ಕಾಲದ ಬ್ರಾಹ್ಮಣ ಮತಾಂತರವಾದೊಡನೆಯೇ ವಿಪರೀತ ಕ್ರೂರಿಯೂ, ಮಾತೃ ಧರ್ಮದ ದ್ವೇಷಿಯೂ ಆಗಿ ಬದಲಾಗಿದ್ದ. ಹಿಂದೂ ಧರ್ಮದ ಯಾವ ನರವನ್ನು ಮೀಟಿದರೆ ಲಾಭ ಎಂಬುದನ್ನು ಉಳಿದ ದಾಳಿಕೋರರಿಗಿಂತ ಆತ ಚೆನ್ನಾಗಿ ಬಲ್ಲವನಾಗಿದ್ದ. ಅಲ್ಲಾವುದ್ದೀನ್ ಖಿಲ್ಜಿಯ ಕೂಲಿ ಮಾಡುತ್ತಿದ್ದ ಆತ ದಣಿಯನ್ನು ಮೆಚ್ಚಿಸಲು ಏನು ಮಾಡಲೂ ಹಿಂಜರಿಯುತ್ತಿರಲಿಲ್ಲ. ದ್ವಾರಸಮುದ್ರವನ್ನು ಲೂಟಿಮಾಡಬೇಕು ಎಂದು ಆತನೇ ಮುಹೂರ್ತ ನಿಗದಿಪಡಿಸಿದ್ದ. ಏಕೆಂದರೆ ಆ ಹೊತ್ತಲ್ಲಿ ದ್ವಾರಸಮುದ್ರದ ರಾಜ ರಾಜಧಾನಿಯಲ್ಲಿರಲಿಲ್ಲ. ನಿಶ್ಚಯವಾದಂತೆ ದ್ವಾರಸಮುದ್ರದ ಮೇಲೆ ದಾಳಿಯಾಯಿತು. ನಿರಂತರ ೧೩ ದಿನ ಲೂಟಿ ನಡೆಯಿತು. ದೇವಸ್ಥಾನಗಳು ಧ್ವಂಸವಾದವು. ಅತ್ತ ರಾಜ ರಾಜಧಾನಿಗೆ ದೌಢಾಯಿಸಿ ಬಂದಾಗ ಕಾಲ ಮಿಂಚಿಹೋಗಿತ್ತು. ಮಲ್ಲಿಕಾಫರನಿಗೆ ಶರಣಾಗದೆ ಆತನಿಗೆ ಬೇರೆ ದಾರಿಯಿರಲಿಲ್ಲ. ದುಷ್ಟ ಮಲ್ಲಿಕಾಫರ್ ಆತನಿಗೆ ಎರಡು ಆಯ್ಕೆಗಳನ್ನು ನೀಡಿದ. ಒಂದೋ ಇಸ್ಲಾಮಿಗೆ ಮತಾಂತರವಾಗಬೇಕು. ಇಲ್ಲವೇ ತಮಿಳು ಪಾಂಡ್ಯರನ್ನು ಗೆಲ್ಲಲು ಸಹಾಯ ಮಾಡಬೇಕು ಮತ್ತು ದ್ವಾರಸಮುದ್ರದಲ್ಲಿ ಮುಸಲ್ಮಾನ ಸೈನ್ಯವನ್ನು ಇರಿಸಿಕೊಳ್ಳಬೇಕು. ರಾಜ ಮತಾಂತರಕ್ಕೆ ಒಪ್ಪಿಗೆ ನೀಡಲಿಲ್ಲ. ಉಳಿದ ಷರತ್ತುಗಳಿಗೆ ಒಪ್ಪಿದ. ಮಲ್ಲಿಕಾಫರ್ ದ್ವಾರಸಮುದ್ರದ ಸೈನ್ಯದ ಬಲದಿಂದ ತಮಿಳು ಪಾಂಡ್ಯರನ್ನು ಗೆದ್ದು ಲೂಟಿಗೈದು ದೆಹಲಿಗೆ ಹೊರಟುಹೋದ.

ಆದರೆ ದ್ವಾರಸಮುದ್ರದಲ್ಲಿ ರಾಜ ಗಹನವಾದ ಚಿಂತನೆಯನ್ನು ಮಾಡುತ್ತಿದ್ದ. ಏಕೆಂದರೆ ಆತ ಹೊಯ್ಸಳನಾಗಿದ್ದ. ಅದರಲ್ಲೂ ಮುಮ್ಮಡಿ ಬಲ್ಲಾಳನಾಗಿದ್ದ. ವೀರ ಬಲ್ಲಾಳನೆಂದೇ ಖ್ಯಾತನಾಗಿದ್ದ. ಆಗಷ್ಟೇ ಆತನಿಗೆ ೨೮ ವರ್ಷ ವಯಸ್ಸಾಗಿತ್ತು. ಯಾವ ಉದ್ದೇಶದಿಂದ ತನ್ನ ಸಾಮ್ರಾಜ್ಯ ನಿರ್ಮಾಣವಾಗಿತ್ತೋ ಆ ಉದ್ದೇಶಕ್ಕೆ ನಾನೇ ತಿಲಾಂಜಲಿ ಇಡಬೇಕೇ ಎಂದು ಮರುಗಿದ. ಸುದತ್ತ ಮುನಿಯ ಆಶೀರ್ವಾದ, ಸಳನ ಪರಾಕ್ರಮ ನೆನಪಾಯಿತು. ಚೆನ್ನಕೇಶವನನ್ನು ರಕ್ಷಿಸಿಕೊಳ್ಳಲಾಗದಿದ್ದರೆ ನಾನ್ಯಾವ ಹೊಯ್ಸಳರ ಕುಡಿ ಎಂದು ಕೊರಗಿದ. ರಾಜನೇನು? ಸಮಸ್ತ ಸಾಮ್ರಾಜ್ಯವೇ ಮುಸಲ್ಮಾನರ ದಾಳಿಯಿಂದ ಆಘಾತಗೊಂಡಿತ್ತು. ಏಕೆಂದರೆ ಅದು ಅದುವರೆಗೆ ಕಂಡುಕೇಳರಿಯದ ಆಕ್ರಮಣ. ಮುಸಲ್ಮಾನರ ಆಕ್ರಮಣದ ಕಲ್ಪನೆಯೇ ಅದುವರೆಗೆ ದಕ್ಷಿಣಕ್ಕೆ ಇರಲಿಲ್ಲ. ಯುದ್ಧ ಕಾಲದಲ್ಲಿ ಪ್ರಕ್ಷುಬ್ದತೆ ಇರುತ್ತದೆಯಾದರೂ ಮುಸಲ್ಮಾನರ ದಾಳಿಯ ಸ್ವರೂಪ ಪ್ರಳಯಕಾಲವನ್ನು ನೆನಪಿಸಿತ್ತು. ಹಿಂದೂ ಶಾಸ್ತ್ರಗಳ ಯುದ್ಧನೀತಿಗಳೆಲ್ಲಾ ಇನ್ನು ಪ್ರಯೋಜನವಿಲ್ಲ ಎಂಬಂತಾಗಿತ್ತು. ಮಹಾರಾಜ ಬಲ್ಲಾಳ ಅದನ್ನೇ ಯೋಚಿಸಿದ. ಸಾಮ್ರಾಜ್ಯಗಳು ತಮ್ಮ ತಮ್ಮ ಪರಮಾಧಿಕಾರಕ್ಕಾಗಿ ಹೋರಾಡುವುದನ್ನು ಬಿಟ್ಟು ಧರ್ಮರಕ್ಷಣೆಗೆ ನಿಲ್ಲಬೇಕೆಂಬುದನ್ನು ಆತ ಮೊದಲು ಅರ್ಥ ಮಾಡಿಕೊಂಡ. ನೂರು ವರ್ಷಗಳ ಹಿಂದೆ ಉತ್ತರದಲ್ಲಿ ಪ್ರಥ್ವಿರಾಜನಿಗೆ ಯಾವುದು ಮನಸ್ಸಿಗೆ ಬಂದಿತ್ತೋ ಅದು ದಕ್ಷಿಣದಲ್ಲಿ ಮುಮ್ಮಡಿ ಬಲ್ಲಾಳನಿಗೆ ಅರಿವಾಗಿತ್ತು. ಈ ಮುಸಲ್ಮಾನರನ್ನು ಈಗಲೇ ಮಟ್ಟಹಾಕದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಬಲ್ಲಾಳ ತಿಳಿದುಕೊಂಡ.ಇನ್ನು ನನ್ನ ಬದುಕು ಮುಸಲ್ಮಾನರ ನಾಶಕ್ಕೆ ಮುಡಿಪು ಎಂದು ಪ್ರತಿಜ್ಞೆ ಮಾಡಿಕೊಂಡ.

ಆದರೆ ಆತನ ಮುಂದೆ ಬೆಟ್ಟದಂಥ ಸವಾಲುಗಳಿದ್ದವು. ಅಸಲಿಗೆ ಹೊಯ್ಸಳ ಸಾಮ್ರಾಜ್ಯವೇ ಎರಡು ಹೋಳಾಗಿತ್ತು. ತನ್ನ ದಾಯಾದಿಯಾಗಿದ್ದ ರಾಮನಾಥ ಪ್ರತ್ಯೇಕ ರಾಜಧಾನಿಯನ್ನು ಕಟ್ಟಿಕೊಂಡು ಆಳುತ್ತಿದ್ದ ಮತ್ತು ದ್ವಾರಸಮುದ್ರದ ಮೇಲೆ ದ್ವೇಷ ಕಾರುತ್ತಿದ್ದ. ಒಡೆದ ಸಾಮ್ರಾಜ್ಯದಲ್ಲಿ ಹಲವು ಸಣ್ಣಪುಟ್ಟ ಸಂಸ್ಥಾನಗಳು ತಲೆ ಎತ್ತಿದ್ದವು. ಅಷ್ಟರ ಹೊತ್ತಿಗೆ ಪ್ರಬಲ ಚೋಳರೂ ನಾಶವಾಗಿ ದಕ್ಷಿಣದ ಎಲ್ಲೆಲ್ಲೂ ಅರಾಜಕತೆ ಕಾಣುತ್ತಿತ್ತು. ಪಾಂಡ್ಯರು ಇದ್ದಬದ್ದರ ಜೊತೆಗೆಲ್ಲಾ ಕಾಲುಕೆರೆದು ಕಾದಾಟಕ್ಕಿಳಿಯುತ್ತಿದ್ದರು. ಇದರ ನಡುವೆಯೇ ಮೂರನೇ ಬಲ್ಲಾಳ ಮುಸ್ಲಿಮರ ದಾಳಿಯನ್ನು ಎದುರಿಸುವುದಕ್ಕಾಗಿ ಸಂಘಟಿತ ರೂಪದ ಹೋರಾಟಕ್ಕೆ ಪ್ರಯತ್ನಿಸಿದ. ಆದರೆ ಅದು ನಿಷ್ಪಲವಾಯಿತು. ನಂತರ  ಬಲ್ಲಾಳ ಬಲಪ್ರಯೋಗಕ್ಕಿಳಿದ. ಹತೋಟಿಗೆ ಬಾರದ ಹಲವು ಸಂಸ್ಥಾನಗಳನ್ನು ಮುಲಾಜಿಲ್ಲದೆ ಮಟ್ಟಹಾಕಿದ. ಸೆವುಣರನ್ನು ಸೋಲಿಸಿ ಸಾಮ್ರಾಜ್ಯಕ್ಕೆ ವಿಲೀನಗೊಳಿಸಿಕೊಂಡ. ಕಾಕತೀಯರನ್ನು ಬಗ್ಗುಬಡಿದ. ದಾಯಾದಿಗಳಿಗೆ ಬೆಂಬಲ ನೀಡುತ್ತಿದ್ದ ಪಾಂಡ್ಯರನ್ನು ಸೋಲಿಸಿ ವಿಭಜಿತ ಹೊಯ್ಸಳ ಸಂಸ್ಥಾನವನ್ನು ಒಟ್ಟುಗೂಡಿಸಿದ. ಈಗ ತಮಿಳುನಾಡಿನ ಬಹುಭಾಗ ಹೊಯ್ಸಳ ಸಾಮ್ರಾಜ್ಯಕ್ಕೆ ವಿಲೀನವಾಗಿತ್ತು. ಅಷ್ಟರಹೊತ್ತಿಗೆ ಕೆಲವು ಸಣ್ಣಪುಟ್ಟ ಸಂಸ್ಥಾನಗಳು ಬಲ್ಲಾಳನಿಗೆ ವಿಧೇಯತೆಯನ್ನು ತೋರಿಸಲಾರಂಭಿಸಿದವು. ಈಗ ಮೂರನೇ ಬಲ್ಲಾಳ ತನ್ನ ಅಸಲಿ ಆಟವನ್ನು ಆಡತೊಡಗಿದ. ತನ್ನ ಸಾಮ್ರಾಜ್ಯದಲ್ಲಿ ಇರಿಸಿಕೊಂಡಿದ್ದ ಮುಸಲ್ಮಾನ ಸೈನ್ಯವನ್ನು ಒದ್ದು ಹೊರಕಳಿಸುವ ಕಾರ್ಯಕ್ಕಿಳಿದ. ಸಾಮ್ರಾಜ್ಯಕ್ಕೆ ಮುಸಲ್ಮಾನರೇ ಶತ್ರುಗಳು ಎಂದು ಆತ ಎಲ್ಲಾ ಸಾಮಂತರಿಗೆ ಸೂಚನೆ ನೀಡಿದ. ಸಮಸ್ತ ಹೊಯ್ಸಳ ಸಾಮ್ರಾಜ್ಯ ಮುಸಲ್ಮಾನ ಮುಕ್ತವಾಯಿತು.

ದೆಹಲಿಯಲ್ಲಿದ್ದ ಮಲ್ಲಿಕಾಫರ್ ಬಲ್ಲಾಳನ ವಿರುದ್ದ ಕೆಂಡಮಂಡಲಾಗಿ ಮತ್ತೆ ೧೩೧೮ರಲ್ಲಿ ಭಾರತದಲ್ಲಿ ಹೊಸ ಭರವಸೆಯೊಂದು ಮೂಡಿತು. ಆದರೆ ಬಲ್ಲಾಳ ಅಷ್ಟಕ್ಕೆ ಸುಮ್ಮನಾಗಲಿಲ್ಲ. ದಕ್ಷಿಣ ಭಾರತದಿಂದಲೇ ಮುಸಲ್ಮಾನರನ್ನು ನಿರ್ನಾಮ ಮಾಡಬೇಕೆಂದು ಪಣತೊಟ್ಟಿದ್ದ. ಅದೇ ಹೊತ್ತಿಗೆ ಮಹಮ್ಮದ್ ಬಿನ್ ತುಘಲಕ್ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ಬದಲಾಯಿಸಿದ್ದ. ಮತ್ತು ಮಧುರೈಯಲ್ಲಿ ಸುಲ್ತಾನರು ಬೀಡುಬಿಟ್ಟು ನಗರವನ್ನು ಕೊಳ್ಳೆ ಹೊಡೆಯುತ್ತಿದ್ದರು. ನಿತ್ಯ ನರಮೇಧ ನಡೆಯುತ್ತಿತ್ತು. ಮೀನಾಕ್ಷಿ ದೇವಸ್ಥಾನದ ಬಾಗಿಲು ಹಾಕಿ ಎಷ್ಟೋ ವರ್ಷಗಳು ಕಳೆದಿತ್ತು. ಅರ್ಚಕರನ್ನು ಹುಡುಕಿ ಹುಡುಕಿ ಕೊಂದು ಅವರ ತಲೆಗಳನ್ನು ಬೀದಿಗಳಲ್ಲಿ ಪ್ರದರ್ಶನಕ್ಕಿಡಲಾಗುತ್ತಿತ್ತು. ಬಲ್ಲಾಳನ ದೃಷ್ಟಿ ಅದರ ಮೇಲೆ ಬಿತ್ತು. ಆದರೆ ಅದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಹಿಂದು ರಾಜನೊಬ್ಬ ಆಕ್ರಮಣ ಮಾಡಿದರೆ ಸಮಸ್ತ ಮುಸಲ್ಮಾನ ಸಂಸ್ಥಾನಗಳು ಒಟ್ಟುಗೂಡುತ್ತವೆಂಬುದು ಬಲ್ಲಾಳನಿಗೆ ಗೊತ್ತಿತ್ತು. ಏಕೆಂದರೆ ಎಲ್ಲಾ ಮುಸಲ್ಮಾನ ಸಂಸ್ಥಾನಗಳು ಕುರಾನಿನ ಅನುಸಾರ ನಡೆಯುತ್ತವೆ ಎಂಬುದನ್ನು ಆತ ಅಧ್ಯಯನ ಮಾಡಿದ್ದ. ಅದಕ್ಕಾಗಿ ತನ್ನ ಸೈನ್ಯವನ್ನು ಬಲಪಡಿಸತೊಡಗಿದ. ಅದುವರೆಗೆ ಅರೆಕಾಲಿಕ ಯೋಧರಾಗಿದ್ದವರನ್ನು ಪೂರ್ಣ ಪ್ರಮಾಣದ ಸೈನಿಕರನ್ನಾಗಿ ನೇಮಿಸಿಕೊಂಡ. ಯುದ್ದಕಾಲದಲ್ಲಿ ತುರಾತುರಿಯಲ್ಲಿ ಜಮೆಯಾಗುವ ಸೈನ್ಯದ ಆವಾಂತರಗಳನ್ನು ತಪ್ಪಿಸಿದ. ಸುಸಜ್ಜಿತ ಮತ್ತು ಶಾಸ್ವತ ಸೈನ್ಯವನ್ನು ಕಟ್ಟಿದ. ಅದುವರೆಗೆ ರಾಜಧಾನಿಯಲ್ಲಿ ಮಾತ್ರ ಜಮೆಯಾಗುತ್ತಿದ್ದ ಸೈನಿಕರನ್ನು ಬಲ್ಲಾಳ ಗಡಿಗಳಲ್ಲಿ ನೇಮಕ ಮಾಡಿದ.

ಸಾಮ್ರಾಜ್ಯದ ವಿಸ್ತಾರಕ್ಕೆ ಅನುಗುಣವಾಗಿ ಮೂರು ಮೂಲೆಗಳಲ್ಲಿ ಮೂರು ರಾಜಧಾನಿಗಳನ್ನು ರಚಿಸಿದ. ದಕ್ಷಿಣದಲ್ಲಿ ದ್ವಾರಸಮುದ್ರ, ಪೂರ್ವದಲ್ಲಿ ತಿರುವಣ್ಣಾಮಲೈ ಮತ್ತು ಉತ್ತರದಲ್ಲಿ ಕುಂದಣಿಯನ್ನು ರಾಜಧಾನಿಯನ್ನಾಗಿ ಪರಿವರ್ತಿಸಿ ಮುಸಲ್ಮಾನರ ವಿರುದ್ಧ ನಿರ್ಣಾಯಕ ಯುದ್ಧಕ್ಕೆ ಸಜ್ಜಾದ. ಧರ್ಮಭೀರುಗಳೂ ಪರಾಕ್ರಮಿಗಳೂ ಆಗಿದ್ದ ಹಕ್ಕ ಬುಕ್ಕರನ್ನು ಆನೆಗೊಂದಿಯಲ್ಲಿ ದಳಪತಿಗಳನ್ನಾಗಿ ನೇಮಿಸಿ ಸಾಮ್ರಾಜ್ಯವನ್ನು ಶಕ್ತಿಶಾಲಿಯಾಗಿಸಿದ. ಹೊಯ್ಸಳ ಸಾಮ್ರಾಜ್ಯ ಈಗ ಮೈಸೂರಿನಿಂದ ತಿರುವಣ್ಣಾಮಲೈವರೆಗೆ ವಿಸ್ತರಿಸಿತ್ತು. ತಿರುವಣ್ಣಾಮಲೈಯನ್ನು ರಾಜಧಾನಿ ಮಾಡಿದ ಬಲ್ಲಾಳ ಮಧುರೈ ಸುಲ್ತಾನರ ದಾರಿಯನ್ನು ಕಟ್ಟಿ ವೊದಲ ಪೆಟ್ಟುಕೊಟ್ಟ. ಸಾಮ್ರಾಜ್ಯದ ಎಲ್ಲೆಲ್ಲೂ ಮುಸಲ್ಮಾನರ ವಿರುದ್ಧ ಆಕ್ರೋಶ ಹಬ್ಬುವಂತೆ ಬಲ್ಲಾಳ ನೋಡಿಕೊಂಡ. ತಮಿಳು ನಾಡಿನಲ್ಲಿ ಬಾಗಿಲು ಮುಚ್ಚಿದ ಮಧುರೆ ಮೀನಾಕ್ಷಿ ದೇವಸ್ಥಾನದ ವಿಷಯವನ್ನೇ ಬಲ್ಲಾಳ ಧಾಳವನ್ನಾಗಿ ಮಾಡಿಕೊಂಡ. ಇದರಿಂದ ಜನ ಸ್ವಯಂಪ್ರೇರಿತರಾಗಿ ಸೈನ್ಯಕ್ಕೆ ಸೇರತೊಡಗಿದರು. ಬಲ್ಲಾಳ ಈಗ ಹೆಚ್ಚಾಗಿ ತಿರುವಣ್ಣಾಮಲೈಯಲ್ಲೇ ಇರತೊಡಗಿದ. ಮಧುರೈ ಸುಲ್ತಾನರ ಚಲನವಲನಗಳನ್ನು ಗಮನಿಸುತ್ತಿದ್ದ ಬಲ್ಲಾಳ ೧೩೪೨ರಲ್ಲಿ ಮುಸಲ್ಮಾನರ ವಿರುದ್ಧ ನಿರ್ಣಾಯಕ ಯುದ್ಧವನ್ನು ಘೋಷಿಸಿದ. ಕಣ್ಣಾನೂರಿನ(ತಮಿಳುನಾಡು) ಬಳಿ ಕೊಪ್ಪಂ ಎಂಬಲ್ಲಿ ನಡೆದ ಭೀಕರ ಕದನದಲ್ಲಿ ಬಲ್ಲಾಳನ ಸೈನ್ಯ ಮುಸಲ್ಮಾನರನ್ನು ಹಿಗ್ಗಾಮುಗ್ಗಾ ಬಡಿದುಹಾಕಿತು. ಇನ್ನೇನು ಮಧುರೈಗೆ ಅಚ್ಛೇ ದಿನ್ ಬರುವುದರಲ್ಲಿತ್ತು. ಅಷ್ಟರಲ್ಲಿ ಬಲ್ಲಾಳ ಹಿಂದೂ ಭೋಳೆ ಸ್ವಭಾವಕ್ಕೆ ಬಲಿಯಾದ. ಸೋಲುತ್ತಿದ್ದ ಸುಲ್ತಾನ ಹದಿನಾಲ್ಕು ದಿನಗಳ ಕದನವಿರಾಮದ ಬೇಡಿಕೆಯನ್ನು ಬಲ್ಲಾಳನ ಎದುರು ಇಟ್ಟ. ಹಿಂದೂ ಶಾಸ್ತ್ರ ಬಲ್ಲ ಬಲ್ಲಾಳ ಭಾರೀ ಉದಾರತೆಯಿಂದ ಅದಕ್ಕೆ ಸಮ್ಮತಿಸಿದ.

ಮೊಟ್ಟಮೊದಲ ಭಾರಿಗೆ ಮುಸಲ್ಮಾನರ ಅಪಾಯವನ್ನು ಗ್ರಹಿಸಿದ ಬಲ್ಲಾಳ ಅವರ ಜನ್ಮದಾತ ಕುತಂತ್ರಕ್ಕೆ ಬಲಿಯಾದ. ಧರ್ಮಯುದ್ಧದ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡಿದ್ದ ಹಿಂದೂ ಅರಸನಿಗೆ ಕೊನೆಗೂ ಜಿಹಾದ್ ನ ಮರ್ಮ ಅರ್ಥವಾಗದೇಹೋಯಿತು. ಯಾವಾಗ ಬಲ್ಲಾಳ ಕದನವಿರಾಮಕ್ಕೆ ಒಪ್ಪಿದನೋ ಸುಲ್ತಾನ ಇನ್ನೊಂದು ಉಪಾಯ ಹೂಡಿದ. ಯುದ್ಧದಿಂದ ನಷ್ಟ, ನಿಮ್ಮ ಬೇಡಿಕೆಗಳೇನೆಂದು ತಿಳಿಸಿದರೆ ಯುದ್ಧ ಕೊನೆಗೊಳಿಸೋಣ ಎಂದು ಹೇಳಿ ಕಳುಹಿಸಿದ. ಅದನ್ನು ಕೇಳಿದ ಬಲ್ಲಾಳ ಖುಷಿಯಿಂದ ಉಬ್ಬಿಹೋದ. ಮಧುರೈ ಮೀನಾಕ್ಷಿಯ ಮುಕ್ತಿಯಾಯಿತೆಂದು ತಿರುವಣ್ಣಾಮಲೈ ಅರುಣಾಚಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಅಂಗರಕ್ಷಕರೊಡನೆ ಮಧುರೈಗೆ ಹೊರಟ. ಸುಲ್ತಾನರಿಗೆ ಮೋಸ ಹೊಸದಾಗಿ ಕಲಿಯಬೇಕೆ? ಮಾತಿಗೆ ತಪ್ಪುವುದನ್ನು ಅವರಂತೆ ಇನ್ನಾರು ತಾನೇ ಚೆನ್ನಾಗಿ ತಿಳಿದವರಿದ್ದಾರೆ? ರಾಜಧಾನಿಯಿಂದ ಹೊರಟ ಹೊಯ್ಸಳ ನರೇಶ ತಿರುಗಿ ಬರಲಿಲ್ಲ. ಮರುದಿನ ಆತನ ದೇಹವನ್ನು ಸಿಗಿದು ಭತ್ತದ ಹೊಟ್ಟನ್ನು ತುಂಬಿಸಿ ಮಧುರೈ ಕೋಟೆ ಬಾಗಿಲಲ್ಲಿ ನೇತುಹಾಕಲಾಯಿತು. ಮುಸಲ್ಮಾನ ಇತಿಹಾಸಕಾರ ಇಬನ್ ಬಟೂಟ ಅದನ್ನು ಕಂಡು “ಇಂಥ ಕ್ರೌರ್ಯವನ್ನು ನಾನು ಎಲ್ಲೂ ಕಂಡಿಲ್ಲ” ಎಂದು ಬರೆದುಕೊಂಡ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಹಿಂದೂ ರಾಷ್ಟ್ರೀಯತೆಯ ಮಹತ್ತ್ವ ಕಂಡುಕೊಂಡ ಅರಸ ಮತಾಂಧತೆಗೆ ಧಾರುಣವಾಗಿ ಬಲಿಯಾದ. ಮಧುರೈ ಮತ್ತೆ ನರಕವಾಯಿತು. ಹೊಯ್ಸಳ ಸಾಮ್ರಾಜ್ಯ ಪತನವಾಯಿತು. ಸುಲ್ತಾನರ ಚಿಲ್ಲರೆ ಸೈನ್ಯ ಹಿಂದೂಗಳನ್ನು ಹೀನಾಯವಾಗಿ ಬಡಿದು ಕೊಂದರು. ಪ್ರತಿಭಾವಂತ, ಪರಾಕ್ರಮಿ, ಯುದ್ಧನಿಪುಣ, ತಂತ್ರಗಾರ ಬಲ್ಲಾಳ ಮೋಸಕ್ಕೆ ಬಲಿಯಾದ. ಹಾಗಾದರೆ ಮುಸಲ್ಮಾನರ ವಿರುದ್ಧ ಯುದ್ಧಕ್ಕೆ ಇವೆಲ್ಲವೂ ಅನವಶ್ಯಕವೇ? ಮೋಸ, ನಮಕ್ ಹರಾಮ್ತನವೇ ಅವರಲ್ಲಿ ಸಮ್ಮತವೇ? ಕಾಫಿರರನ್ನು ಕೊಲ್ಲಲು ಯಾವ ದಾರಿಯಾದರೂ ಆಗಬಹುದೇ?

ಆದರೆ ಇನ್ನೇನು ಗೆದ್ದೇಬಿಡುತ್ತಿದ್ದ ಬಲ್ಲಾಳ ಯಾಕೆ ಸುಲ್ತಾನನ ಮಾತಿಗೆ ಮರುಳಾದ? ಪ್ರಬಲನಾಗಿದ್ದ ತಾನೇ ಯಾಕೆ ದುರ್ಬಲ ತುರುಕರ ಬಳಿ ಹೋದ? ಮುಸಲ್ಮಾನರ ಅಪಾಯವನ್ನು ಅಷ್ಟು ಚೆನ್ನಾಗಿ ಅರಿತಿದ್ದ ಬಲ್ಲಾಳನಂತ ಬಲ್ಲಾಳನೇ ಪೆದ್ದುತನವನ್ನು ಏಕೆ ಪ್ರದರ್ಶಿಸಿದ್ದ? ಇವಕ್ಕೆಲ್ಲಾ ಉತ್ತರಗಳಿಲ್ಲ. ಇತಿಹಾಸದಲ್ಲಿ  ಇಂಥ ಉದಾಹರಣೆಗಳು ನಿರಂತರ ಸಿಗುತ್ತವೆ. ಪದೇ ಪದೇ ಎಡವಿದ ಕುರುಹುಗಳು ಪತ್ತೆಯಾಗುತ್ತವೆ. ಇಂದಿಗೂ ಅಂಥದ್ದೇ ಮಾನಸಿಕತೆಯನ್ನು ಕಾಣುತ್ತೇವೆ. ಅಂದೂ ಇಂದೂ ಅಪಾಯಕಾರಿಯಾದುದು ಯಾವುದೆಂಬುದು ಎಲ್ಲರಿಗೂ ಗೊತ್ತಿದ್ದರೂ, ಸತ್ಯ ಯಾವುದೆಂಬುದು ಪ್ರಮಾಣಿತವಾದರೂ ಮುಸಲ್ಮಾನರ ಕ್ರೌರ್ಯಕ್ಕ, ಮೋಸಕ್ಕೆ ಆಳುವವರು ಬಲಿಯಾಗುತ್ತಲೇ ಇದ್ದಾರೆ. ಆಗ್ರ ಶೃಂಗಸಭೆಯಲ್ಲಿ ಕೈ ಕುಲುಕಿ ಹೋದ ಮುಶ್ರಫ್ ಕಾರ್ಗಿಲ್ ಮೂಲಕ ಮೋಸ ಮಾಡಿದ. ಪ್ರತ್ಯೇಕತಾವಾದಿಗಳು ದೇಶದ್ರೋಹಿಗಳೆಂಬುದು ಗೊತ್ತಿದ್ದರೂ ಇಂದಿಗೂ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳೊಡನೆ ಮಾತುಕತೆಗಳು ನಡೆಯುತ್ತವೆ. ಕೋಮುಗಲಭೆ ಮುಗಿಸಿ ಶಾಂತಿ ಸಭೆಗೆ ಬಂದು ಕೂರುವ ಮತಾಂಧರನ್ನು ನೋಡಿದಾಗ ಆ ಮುಮ್ಮಡಿ ಬಲ್ಲಾಳ ನೆನಪಾಗುತ್ತಾನೆ. ಅವನೇ ಬಲಿಯಾದ ಮೇಲೆ ಇನ್ನು ಇವರೆಲ್ಲಾ ಯಾವ ಮರದ ತೊಗಟೆ?

ಆದರೆ, ಅಂಥ ವೀರ ಬಲ್ಲಾಳನ ಬಗ್ಗೆ ಪಠ್ಯಪುಸ್ತಕಗಳು ಹೇಳುವುದು ಬರೀ ಎರಡು ಸಾಲುಗಳನ್ನು ಮಾತ್ರ. ‘ಆತ ಸೆವುಣರನ್ನು ಮತ್ತು ಕಾಕತೀಯರನ್ನು ಸೋಲಿಸಿದ’ ಎಂಬ ಮಾಹಿತಿಯನ್ನು ಬಿಟ್ಟರೆ ಮುಸಲ್ಮಾನರ ಹೆಡೆಮುರಿ ಕಟ್ಟಿದವನು, ಮುಸಲ್ಮಾನ ಮುಕ್ತ ಸಾಮ್ರಾಜ್ಯವನ್ನೇ ಧ್ಯೇಯವಾಗಿ ಹೊಂದಿದ್ದವನು ಎನ್ನುವುದನ್ನು ಅಪ್ಪಿತಪ್ಪಿಯೂ ಹೇಳುವುದಿಲ್ಲ. ಅಷ್ಟೇಕೆ ಯಾವ ಮುಸಲ್ಮಾನರ ವಿರುದ್ಧದ ಹಿಂದೂ ವಿಜಯವನ್ನೂ ಇತಿಹಾಸ ಸರಿಯಾಗಿ ದಾಖಲಿಸುವುದಿಲ್ಲ. ಆದರೆ ಹಿಂದೂ ಸೋಲನ್ನು ಅದು ವಿಜೃಂಭಿಸದೆ ಬಿಟ್ಟಿಲ್ಲ. ಮುಸಲ್ಮಾನರನ್ನು ಹಿಂದೂ ಅರಸರು ಸೋಲಿಸಿದರು ಎನ್ನುವುದು ವರ್ತಮಾನದ ಮುಸಲ್ಮಾನರಿಗೆ ನೋವುಂಟಾಗುವುದು ಎನ್ನುವುದಾದರೆ ಹಿಂದೂಗಳ ವಿಜಯದ ಕಥೆಯೇನು? ಭಾರತೀಯ ಇತಿಹಾಸದ ಅಡಿಗಡಿಗೆ ಇಂಥ ಹಲವು ಕಥೆಗಳು ಸಿಗುತ್ತವೆ. ಎಲ್ಲೆಲ್ಲಿ ಸೋಲಿನ ಇತಿಹಾಸ ಎಂದು ಕಾಣುತ್ತೇವೋ ಅಲ್ಲೆಲ್ಲಾ ಇಂಥ ಮುಚ್ಚಿಹೋದ ಅದೆಷ್ಟೋ ಪ್ರೇರಣೆಯ ಪ್ರಸಂಗಗಳಿರುತ್ತವೆ. ಇಸವಿಗಳೆಂಬ ತೇಪೆ ಹಚ್ಚುವ ಸಾಧನದಿಂದ ಸತ್ಯವನ್ನು ವ್ಯವಸ್ಥಿತವಾಗಿ ಮರೆಮಾಡಲಾಗುತ್ತದೆ. ಕಮ್ಯುನಿಸ್ಟ್ ಇತಿಹಾಸಕಾರರ ಕಣ್ಣು ಎಲ್ಲವನ್ನೂ ವರ್ಗ ಸಂಘರ್ಷದಿಂದಲೇ ಕಂಡಿವೆ. ಅಂಥ ಪುಸ್ತಕಗಳೇ ಉಳಿದವರಿಗೆ ಆಕರಗ್ರಂಥಗಳೂ ಆಗಿವೆ.

ಹಾಗೆ ಇತಿಹಾಸದಲ್ಲಿ ಬಹುವಾಗಿ ತಿರುಚಲ್ಪಟ್ಟು, ಕನ್ನಡನಾಡನ್ನು ರಕ್ಷಿಸಿದ ವ್ಯಕ್ತಿತ್ವ ಈ ಮುಮ್ಮಡಿ ಬಲ್ಲಾಳನದ್ದು. ಈ ಬಲ್ಲಾಳನ ಬಗ್ಗೆ ಕಮ್ಯುನಿಸ್ಟರು ಚಿತ್ರವಿಚಿತ್ರವಾದ ಕಥೆಗಳನ್ನು ಬರೆದರು. ಕನ್ನಡಿಗನೊಬ್ಬ ನೆರೆರಾಜ್ಯದಲ್ಲಿ ರಾಜಧಾನಿ ಕಟ್ಟಿದ್ದ. ಅಲ್ಲಿನ ಜನರ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದ, ಆತ ನಮ್ಮ ಗೌರವ ಎಂಬ ಭಾವನೆ, ಗೌರವ ಯಾವ ಕನ್ನಡ ಸಂಘಟನೆಗಳಿಗೂ ಇಲ್ಲ. ಏಕೆಂದರೆ ಬಲ್ಲಾಳನಿಗಿದ್ದ ಮುಸಲ್ಮಾನನ ದ್ವೇಷ. ಒಂದು ವೇಳೆ ಬಲ್ಲಾಳನ ಕಾಲದಲ್ಲಿ ಮುಸಲ್ಮಾನರ ಬದಲು ಬ್ರಿಟಿಷರೇನಾದರೂ ಇದ್ದಿದ್ದರೆ ಆತನ ಪ್ರತಿಮೆ ಎಂದೋ ನಿರ್ಮಾಣವಾಗುತ್ತಿತ್ತು ಮತ್ತು ಯಾವುದೋ ಒಂದು ಜಾತಿ ಬಂದು ಈತ ನಮ್ಮ ಪೂರ್ವಿಜ ಎಂದು ಹಕ್ಕು ಚಲಾಯಿಸುತ್ತಿದ್ದರು. ಆದರೆ ಬಲ್ಲಾಳ ಜಾತಿಯನ್ನು ಮೀರಿದವನು, ಭಾಷೆಯ ಬೇಲಿಯಾಚೆಗೂ ನಿಲ್ಲುವವನು, ಮುಸಲ್ಮಾನೇತರ ಸಾಮ್ರಾಜ್ಯವೇ ಸುಭದ್ರ ಸಾಮ್ರಾಜ್ಯ ಎಂದು ಮೊದಲು ಕಂಡುಕೊಂಡವನು. ಹಾಗಾಗಿ ಎಲ್ಲರಿಗೂ ಮೂರನೇ ಬಲ್ಲಾಳನ ಹೆಸರೆತ್ತಲು ಏನೋ ಒಂದು ಭಯ. ಕೋಮುವಾದವಾಗುವ ಅಪಾಯ. ಬಲ್ಲಾಳನನ್ನು ಅಧ್ಯಯನ ಮಾಡಿದರೆ ಎಲ್ಲಿ ಭಜರಂಗದಳ ಸಾಹಿತ್ಯವಾಗಿ ಹೋಗುವುದೋ ಎನ್ನುವ ಹೆದರಿಕೆ. ನಾಡಗೀತೆಯಲ್ಲಿ ಅವರ ಹೆಸರಿಲ್ಲ. ಇವರದ್ದು ಕೊನೆಯಲ್ಲಿದೆ. ಇನ್ನೊಬ್ಬರಾರೆಂದೇ ಗೊತ್ತಿಲ್ಲ ಎಂದು ಉದ್ದುದ್ದಕ್ಕೆ ಮಾತಾಡುವವರಿಗೆ ಬಲ್ಲಾಳ ಗೊತ್ತಿಲ್ಲ ಅಥವಾ ಗೊತ್ತಿಲ್ಲದಂತೆ ನಟಿಸುತ್ತಿದ್ದಾರೆ.  ವಿಜಯನಗರಕ್ಕೂ ವೀರ ಬಲ್ಲಾಳನೇ ಸೂರ್ತಿ ಎನ್ನುವ ಸಂಗತಿಯನ್ನೂ ಕೂಡಾ ಯಾರೂ ಬರೆಯುತ್ತಿಲ್ಲ. ಅಷ್ಟೊಂದು ಭಯ!

ಬಲ್ಲಾಳನ ಬಗ್ಗೆ ಯಾರೇನೇ ಹೇಳಿಕೊಳ್ಳಲಿ. ಬೇಕಾದರೆ ಮುಮ್ಮಡಿ ಬಲ್ಲಾಳ ಕರ್ನಾಟಕದ ಮೊದಲ ಕೋಮುವಾದಿ ಎಂದಾದರೂ ಕರೆಯಲಿ. ಹಿಂದುಗಳ ಪಾಲಿಗೆ ಬಲ್ಲಾಳ ಯಾವತ್ತೂ ಪ್ರಾತಃಸ್ಮರಣೀಯ.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments