ಅರ್ಧ ನಿಮಿಷದ ಅಂತರದಲ್ಲಿ ಕಂಚು ಕೈತಪ್ಪಿತು!
– ರೋಹಿತ್ ಚಕ್ರತೀರ್ಥ
ನಸುಕಿನ ನಾಲ್ಕು ಗಂಟೆ. ಬದರಿನಾಥದ ಗಡಗಡ ಚಳಿಯಲ್ಲೂ ಇಪ್ಪತ್ತನಾಲ್ಕರ ಯುವಕನೊಬ್ಬ ಅಲಾರಂ ಇಲ್ಲದೆ ದಡ್ಡನೆದ್ದು ಕೂತಿದ್ದಾನೆ. ಒಂದೇ ಒಂದು ನಿಮಿಷವನ್ನು ವ್ಯರ್ಥ ಮಾಡದೆ; ಉದಾಸೀನವೆಂದು ಮತ್ತೆ ರಗ್ಗುಹೊದ್ದು ಮಲಗದೆ; ಅಯ್ಯಯ್ಯಪ್ಪ ಥಂಡಿ ಎಂದು ನೆಪ ಹೇಳದೆ ಎದ್ದು ಮುಖಪ್ರಕ್ಷಾಲನ ಮಾಡಿ ತನ್ನ ಎಂದಿನ ತೆಳು ಸಡಿಲ ಅಂಗಿ ತೊಟ್ಟು, ಕಾಲುಗಳಿಗೆ ಶೂ ಧರಿಸಿ ಮನೆಯಿಂದ ಹೊರಬಿದ್ದಿದ್ದಾನೆ. ಮೊದಲು ಅಂಗಳ, ಬೀದಿ, ಕೇರಿ ಎನ್ನುತ್ತ ಕೊನೆಗೆ ಬದರಿಯ ಮುಖ್ಯರಸ್ತೆಗಳಲ್ಲಿ ಅವನ ಪಯಣ ಸಾಗಿದೆ. ಅತ್ತ ನಡಿಗೆಯೆನ್ನಲಾಗದ ಇತ್ತ ಓಟ ಎನ್ನಲೂ ಬಾರದ ವಿಚಿತ್ರವಾದೊಂದು ಗತಿಯಲ್ಲಿ ಅವನ ಚಲನೆಯಿದೆ. ಬಾತುಕೋಳಿಯೊಂದು ತನ್ನ ಇಕ್ಕೆಲಗಳನ್ನು ಬಾಗಿಸುತ್ತ ಬಳುಕಿಸುತ್ತ ಪುತುಪುತು ನಡೆದಂತೆ ತನ್ನ ಇಡೀ ಮೈಯನ್ನು ರಬ್ಬರಿನ ಕೋಲಿನಂತೆ ಅತ್ತಿತ್ತ ಬಾಗಿಸುತ್ತ ಅವನು ನಡೆಯುವುದನ್ನು ಬೆಳಗ್ಗೆ ಪೇಪರು, ಹಾಲು ತರಲು ಹೊರಟವರು ಕ್ಷಣಕಾಲ ನಿಂತು ವಿಸ್ಮಯದಿಂದ ನೋಡುತ್ತಾರೆ. ಬದರಿಗೆ ಪ್ರವಾಸಿಗಳಾಗಿ ಬಂದವರು ಇವನ ನೃತ್ಯದಂಥ ನಡಿಗೆಯೋಟ ಕಂಡು ಮುಸಿಮುಸಿ ನಗುತ್ತಾರೆ. ಇನ್ನು ಕೆಲವರು ಇಂಥದೊಂದು ದೃಶ್ಯ ಮತ್ತೆ ಜನ್ಮದಲ್ಲಿ ಸಿಕ್ಕದೇನೋ ಎಂಬಂತೆ ತಮ್ಮ ಕ್ಯಾಮೆರಾ, ಮೊಬೈಲುಗಳಲ್ಲಿ ಆತನನ್ನು ದಾಖಲಿಸಿಕೊಳ್ಳುತ್ತಾರೆ. ಇದ್ಯಾವುದರ ಪರಿವೆಯೂ ಇಲ್ಲದೆ; ದೊಗಳೆ ಬನಿಯನ್ನು ಬೆವರಿಂದ ತೊಯ್ದು ತೊಪ್ಪೆಯಾದ್ದನ್ನೂ ಲೆಕ್ಕಿಸದೆ ಆ ತರುಣ ಓಡಿಯೇ ಓಡಿದ್ದಾನೆ. ಸುತ್ತಲಿನ ಜಗತ್ತು ಅವನ ಪಾಲಿಗೆ ನಗಣ್ಯ. ನಡಿಗೆಯ ದಾರಿ ಬಿಟ್ಟರೆ ಮಿಕ್ಕಿದ್ದೇನೂ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲವೆಂಬಂತೆ ಏಕಾಗ್ರಚಿತ್ತದಿಂದ ಹೋಗುತ್ತಿರುವ ಆ ಯುವಕನ ಕಣ್ಮುಂದೆ ಅತ್ತಿತ್ತ ಕದಲದೆ ನಿಶ್ಚಲವಾಗಿ ನಿಂತುಬಿಟ್ಟಿರುವುದೊಂದೇ – ರಿಯೋ ಒಲಿಂಪಿಕ್ಸ್‍ನ ಪದಕ! ಮತ್ತಷ್ಟು ಓದು