ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 17, 2016

3

ಅಂದು ಜೆ ಎನ್ ಯು, ಇಂದು ಬೆಂಗಳೂರು

‍ನಿಲುಮೆ ಮೂಲಕ

– ತನ್ಮಯೀ ಪ್ರೇಮ್ ಕುಮಾರ್

downloadಜೆಎನ್‌ಯುನಲ್ಲಿ ನಡೆದ ದೇಶದ್ರೋಹದ ಕೆಲಸಗಳು, ಘೋಷಣೆಗಳು, ಬೌದ್ಧಿಕ ದಾರಿದ್ರ್ಯತನವನ್ನು, ವೈಚಾರಿಕ ಗುಲಾಮಿತನದ ಪರಿಸ್ಥಿತಿ ಕಂಡು ಮರುಗಿದ್ದೆ. ಎಷ್ಟೋ ಅಸಹನೆಯ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆ, ವಿಚಾರ ಸಂಕಿರಣ, ಆಂದೋಲನದ ಭಾಗವಾಗಿದ್ದೆ ಕೂಡ. ಆದರೆ ಶಾಂತಿಪ್ರಿಯ ಬೆಂಗಳೂರಿನಲ್ಲಿ ಇಂಥದೇ ಘಟನೆ ನಡೆಯಬಹುದೆಂಬ ಕಲ್ಪನೆ ಕನಸಿನಲ್ಲೂ ಬಂದಿರಲಿಲ್ಲ. ಮೊನ್ನೆ ಜೆಎನ್‌ಯು ವಿವಿಯ ಸ್ನೇಹಿತೆಯೊಬ್ಬಳು ಸಿಕ್ಕಾಗಲೂ ಕರ್ನಾಟಕ ಇಂಥ ಘಟನೆಗಳಿಂದ ಮುಕ್ತವಾಗಿದೆ ಎಂಬ ಗರ್ವದಿಂದ ಮಾತನಾಡಿದ್ದೆ. ಮೊನ್ನೆಯವರೆಗೆ ಎಲ್ಲರ ನಂಬಿಕೆಯೂ ಅದೇ ಆಗಿತ್ತು. ಆದರೆ ಆಗಸ್ಟ್ 13ರ ಸಂಜೆ ಭಾರತ 70ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿ ನಿಂತ ಸಂದರ್ಭದಲ್ಲಿ ನಮ್ಮ ವಿಶ್ವಾಸಕ್ಕೆ, ನೆಮ್ಮದಿಯ ಬಾಳಿಗೆ ಕೊಡಲಿ ಪೆಟ್ಟು ಬೀಳುವಂತ ಘಟನೆ ನಡೆದಿದೆ.

ಯಾವ ಕಾಶ್ಮೀರ ಭಾರತದ ಶಿರವಾಗಿ ಕಂಗೊಳಿಸು ತ್ತಿದೆಯೋ, ಭಾರತದ ಅಖಂಡತೆಗೆ, ಸಾರ್ವಭೌಮತ್ವಕ್ಕೆ ಮುಕುಟಪ್ರಾಯವಾಗಿ ನಿಂತಿದೆಯೋ ಅಂಥ ಕಾಶ್ಮೀರವನ್ನು ಸ್ವತಂತ್ರ ಭಾರತದಿಂದ ಛಿದ್ರ ಮಾಡುವ ಪ್ರತ್ಯೇಕತಾವಾದಿ ಗಳ, ಬಂಡಾಯಗಾರರ ದನಿಯಾಗಿ ಬೆಂಗಳೂರಲ್ಲಿ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ ಎನ್ನುವ ಸಂಸ್ಥೆಯೊಂದು ಮಾನವ ಹಕ್ಕುಗಳ ಕುರಿತಾದ ಕಾರ್ಯಕ್ರಮವೆನ್ನುವ ಮುಖವಾಡ ಹಾಕಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವ “Failures in Accountability for Human Rights violations by Security force personnel in Jammu and Kashmir’  ಅಜೆಂಡಾದಲ್ಲಿ ಹಮ್ಮಿಕೊಂಡಿತ್ತು. ಭಾರತೀಯ ಸೇನೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಅವರಿಂದ ಇಡೀ ಕಾಶ್ಮೀರದ ಜನತೆಗೆ ಅನ್ಯಾಯವಾಗಿದೆ, ಹಿಂಸಾಚಾರ ಮತ್ತು ಗಲಭೆಯನ್ನು ಸೇನೆಯೇ ನಡೆಸುತ್ತಿದೆ, ಅಮಾಯಕರನ್ನು ಕೊಲ್ಲುತ್ತಿದೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುತ್ತಿದೆ ಎಂಬಂತೆ ಬಿಂಬಿಸುವ ರಂಗನಾಟಕದಿಂದ ಕಾರ್ಯಕ್ರಮ ಆರಂಭಿಸಲಾಗಿತ್ತು.

ಇಡೀ ನಾಟಕದಲ್ಲಿ ಉಗ್ರ ಬುರ್ಹಾನ್ ವನಿಯನ್ನು ಮುಗ್ಧ ಜನನಾಯಕ, ಆತನೊಬ್ಬ ಶಹೀದ್, ನಕಲಿ ಎನ್‌ಕೌಂಟರ್ ಮೂಲಕ ಸತ್ತನೆನ್ನುವ ಆತ ಮತ್ತೆ ಮತ್ತೆ ಹುಟ್ಟಿ ಬರಲಿ ಎನ್ನುವ ಆಶಯ, ಮಾತು, ಹಾಡುಗಳೇ ತುಂಬಿಕೊಂಡಿದ್ದವು. ನಂತರದ ಭಾಗವಾಗಿ ಚರ್ಚಾಗೋಷ್ಠಿ ಏರ್ಪಾಡಾಗಿತ್ತು. “Indian Express’ನಲ್ಲಿದ್ದ ಹಿರಿಯ ಪತ್ರಕರ್ತರೂ, ಕಾಶ್ಮೀರಿ ಪಂಡಿತರೂ ಆದ ಓ ಮಟ್ಟುರವರು ಮೊದಲಿಗೆ ‘ಭಾರತೀಯ ಸೇನೆ ಇಡೀ ಜಗತ್ತಿನ ಅತ್ಯಂತ ಸದೃಢವಾದ, ವ್ಯವಸ್ಥಿತವಾದ ಸೇನೆ’ ಎಂಬ ಒಂದೇ ಮಾತಿಗೆ ಅಲ್ಲಿದ್ದ ಕೆಲ ಯುವಕರು ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸ ಬೇಕಾಯ್ತು. ನಂತರ ಮಟ್ಟುರವರಿಗೆ ಆಯೋಜಕರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಬಿಡಲೇ ಇಲ್ಲ. ಅಲ್ಲಿದ್ದ ಉಳಿದೆಲ್ಲ ಪ್ಯಾನಲಿಸ್ಟ್‌ಗಳು ಭಾರತೀಯ ಸೇನೆಯ ವಿರುದ್ಧವಾಗಿ, ಪೊಲೀಸರ ವಿರುದ್ಧವಾಗಿ ಪ್ರತ್ಯೇಕತಾವಾದಿ ಗಳನ್ನು ಬೆಂಬಲಿಸುವ, ಸೈನಿಕರನ್ನು ಅಲ್ಲಿಂದ ವಾಪಸು ಕರೆಸಿಕೊಳ್ಳಿ ಎನ್ನುವ ಮಾತನಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ರ‍್ಯಾಪರ್ ಒಬ್ಬ ‘ಕಾಶ್ಮೀರವನ್ನು ಪಡೆದೇ ತೀರುತ್ತೇವೆ, ಹೊಸ ದೇಶವಾಗಿ’ ಎಂಬರ್ಥದ ರ‍್ಯಾಪ್ ಸಾಂಗ್ ಹಾಡಿ ಕೊನೆಯಲ್ಲಿ‘ಆಜಾದಿ’ ಅಂತ ಕೂಗಿ ಅಲ್ಲಿದ್ದ ಯುವಕರನ್ನು ರೊಚ್ಚಿಗೆಬ್ಬಿಸಿದ್ದ. ‘ಕಾಶ್ಮೀರ್ ಮಾಂಗೇ ಆಜಾದಿ’, ‘ಹಮ್ ಲೇ ಕೆ ರಹೆಂಗೆ ಆಜಾದಿ’, ‘ಭಾರತ್ ಕಿ ಬರ್ಬಾದಿ ತಕ್ ಜಂಗ್ ರಹೇಗಿ’ ಎನ್ನುವ ಘೋಷಣೆಗಳು ದೊಡ್ಡ ಪ್ರಮಾಣದಲ್ಲಿ ಮೊಳಗಿದವು.ಕೇವಲ ಬೆರಳೆಣಿಕೆಯಷ್ಟು ಕಾಶ್ಮೀರಿ ಪಂಡಿತರು, RK ಮಟ್ಟುರವರನ್ನು ಒಳಗೊಂಡಂತೆ ಎಬಿವಿಪಿಯ ನಾವು ಇಬ್ಬರು ಕಾರ್ಯಕರ್ತರು ‘ ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಎಂದು ಘೋಷಣೆ ಕೂಗುತ್ತಾ ಹೊರಬಂದು ಪೊಲೀಸರ ಸಹಾಯದಿಂದ ಕಾರ್ಯಕ್ರಮ ವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದೆವು. ಸೇನೆಯ ವಿರುದ್ಧ ಘೋಷಣೆ ಕೂಗಿದವರನ್ನು ಈ ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದೆವು. ಇವೆಲ್ಲ ಘಟನೆಗಳಿಗೆ ಪೊಲೀಸರು ಸಾಕ್ಷಿ ಯಾಗಿದ್ದರೂ ಮೂಕವಾಗಿ ನಿಂತಿದ್ದು ಮಾತ್ರ ವಿಪರ್ಯಾಸ!ಆದರೆ ಪೊಲೀಸರು ಹೊರಬಂದ ಗುಂಪನ್ನು ಆ ಜಾಗದಿಂದ ವಾಪಸು ಹೋಗಿ ಎನ್ನುವ ಹಂತದಲ್ಲಿದ್ದರು ಅಷ್ಟು ಹೊತ್ತಿಗೆ ಇನ್ನೂ ಒಂದಷ್ಟು ಮಂದಿ ಪರಿಷತ್‌ನ ಕಾರ್ಯಕರ್ತರು ಸೇರಿದ್ದರು.

ಪೊಲೀಸರು ಶಾಂತಿಯುತ ವಾದ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದಾಗ ಮಾತಿನ ಚಕಮಕಿ ಶುರುವಾಯಿತು. ದೇಶದ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇದ್ದದ್ದು  ವಿಷಾದದ ಸಂಗತಿ. ವಿದ್ಯಾರ್ಥಿ ಪರಿಷತ್ ಅಂದು ತಡರಾತ್ರಿಯವರೆಗೂ, ಮರುದಿನವೂ ಪ್ರತಿಭಟನೆ ಮುಂದುವರಿಸಿತು. ಪ್ರತಿಭಟನಾ ನಿರತ ABVP ನಮ್ಮನ್ನು ಬಂಧಿಸಿದ್ದು ವ್ಯಂಗ್ಯವೆಂದೇ ಹೇಳಬಹುದು. ಇನ್ನು ಜೆಎನ್‌ಯುನಲ್ಲಿ ಇಂಥ ಘಟನೆ ನಡೆದಾಗ ಅದು restrict ಗುಂಪಿನ, ಕ್ಯಾಂಪಸ್ ಒಳಗಿನ ವಿದ್ಯಾರ್ಥಿ ಕಾರ್ಯಕ್ರಮವಾಗಿತ್ತು. ಅದು ಎಲ್ಲರಿಗೂ ಮುಕ್ತವಾಗಿ ರಲಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆದಿದ್ದು ಮುಕ್ತ ಸಾರ್ವಜನಿಕ ಕಾರ್ಯಕ್ರಮ.

ಸಂವಿಧಾನಬದ್ಧವಾಗಿ ಒಂದಾದ ಕಾಶ್ಮೀರವನ್ನು ಬೇರೆ ಮಾಡುವ ಪ್ರತ್ಯೇಕತಾ ವಾದದ ಕೂಗು, ಭಾರತದ ಅಖಂಡತೆಗೆ, ಏಕತೆಗೆವಿರುದ್ಧವಾಗಿ ಮಾತನಾಡುವ ದೇಶದ್ರೋಹದ ಕೂಗು ಪೊಲೀಸರೆದುರಿಗೇ ಭಾರತೀಯ ಸೈನ್ಯದ ವಿರುದ್ಧವಾಗಿ, ಭಾರತದ ಬರ್ಬಾದಿಗಾಗಿ ಕೂಗು ಎದ್ದಿತ್ತು. ಇದು ಕಾಶ್ಮೀರದಲ್ಲಲ್ಲ, ಅಲ್ಲಿಂದ ಸಾವಿರಾರು ಕಿಮೀ ದೂರದ ಬೆಂಗಳೂರಿನಲ್ಲಿ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೀಗೆ ಘೋಷಣೆ ಕೂಗುವ ದೇಶದ್ರೋಹಿಗಳು ಯಾರು? ಅವರ ಹಿಂದಿರುವ ಕಾಣದ ಶಕ್ತಿಗಳು ಯಾವುವು? ಎಲ್ಲಿವೆ?ಮಾನವ ಹಕ್ಕುಗಳ ಬಗೆಗೆ ಈಗ ಮಾತನಾಡುತ್ತಿರುವ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ’ಗೆ ಹಲವಾರು ಪ್ರಶ್ನೆಗಳನ್ನು ಕೇಳಬೇಕಿದೆ. ನೆಲೆ ಕಳೆದುಕೊಂಡಿರುವ ಸಾವಿರಾರು ಕಾಶ್ಮೀರ ಪಂಡಿತರ ಬಗೆಗೆ ಯಾಕೆ ಅವರು ದನಿಯೆತ್ತುವುದಿಲ್ಲ? ಭಾರತೀಯ ಸೈನಿಕರೆಡೆಗೆ ಕಲ್ಲು ತೂರುವಾಗ ಭಾರತೀಯ ಸೈನಿಕರು ಕೂಡ ಮನುಷ್ಯರು,ಅವರಿಗೂ ಮಾನವ ಹಕ್ಕುಗಳಿವೆ ಎಂದು ಮನದಟ್ಟಾಗುವುದಿಲ್ಲವೇಕೆ?ಪ್ರತ್ಯೇಕತಾವಾದಿಗಳ ಬ್ರೋಕನ್ ಫ್ಯಾಮಿಲೀಸ್ ಬಗೆಗೆ ಮಾತನಾಡುವ ಸಂಸ್ಥೆಗೆ ಸೈನಿಕರು ಬಲಿದಾನವಾದಾಗ ಅವರ ಕುಟುಂಬಗಳೂ ನೆಲೆ ಕಳೆದುಕೊಳ್ಳುತ್ತವೆ ಅನ್ನುವ, ಅವರದ್ದೂ ಬ್ರೋಕನ್ ಫ್ಯಾಮಿಲೀಸ್ ಆಗುತ್ತವೆ ಎನ್ನುವ ಸತ್ಯದ ಅರಿವಾಗುವುದು ಯಾವಾಗ?ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಬಗೆಗೆ  ಮಾತ್ರ ಮಾತನಾಡುವುದಿದ್ದರೆ ಪೊಲೀಸ್ ರಕ್ಷಣೆ ತೆಗೆದುಕೊಂಡಿದ್ದು ಯಾಕೆ? ಅಂದರೆ ಆಯೋಜಕರಿಗೆ ಈ ಎಲ್ಲಾ ಸಾಧ್ಯಾಸಾಧ್ಯತೆಗಳ ಬಗ್ಗೆ ಮೊದಲೇ ಅರಿವಿತ್ತು. ಆದರೂ ಕಾರ್ಯಕ್ರಮ ಆಯೋಜನೆಯಾಗಿತ್ತು.

ಇಲ್ಲವೆ ಇವೆಲ್ಲ ಪೂರ್ವ ನಿಯೋಜಿತ ಷಡ್ಯಂತ್ರವಾ? ಗುಪ್ತಚರ ಇಲಾಖೆಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೆ? ಇದ್ದರೆ ಇಂಥ ಕಾರ್ಯಕ್ರಮಕ್ಕೆ ಹೇಗೆ ಅವಕಾಶ ನೀಡುತ್ತಾರೆ? ಇಲ್ಲವಾದಲ್ಲಿ ಗುಪ್ತಚರ ಇಲಾಖೆ ಅಷ್ಟೊಂದು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆಯೇ? ದಿ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್‌ನ ಆಡಳಿತ ಮಂಡಳಿ ಇದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿದೆಯೆಂದರೆ ಮುಂಚಿತವಾಗಿ ಯಾವ ದಾಖಲೆಗಳ ವಿಷಯವನ್ನು ಆಧಾರವಾಗಿಟ್ಟುಕೊಂಡು ಅನುಮತಿ ನೀಡಿದೆ ಎನ್ನುವ ಪೂರ್ಣ ತನಿಖೆ ನಡೆಯಬೇಕಿದೆ.ಇನ್ನು ಕಾರ್ಯಕ್ರಮದ ಸಂಘಟಕರಾದ ಅಮ್ನೆಸ್ಟಿ ಸಂಸ್ಥೆ ಇದೇ ಕಾರ್ಯಕ್ರಮಗಳನ್ನು ದೆಹಲಿ ಸೇರಿದಂತೆ ಇತರ ಕಡೆಗಳಲ್ಲಿ ಕೂಡ ಹಮ್ಮಿಕೊಂಡಿದೆ. ಅವುಗಳನ್ನೂ ಕೂಡಲೇ ರದ್ದು ಮಾಡಿ ಸಂಸ್ಥೆಯ ಕುರಿತು ಸೂಕ್ತ ತನಿಖೆ ನಡೆಯಬೇಕಿದೆ. ಆರೋಪ ಮುಕ್ತವಾಗುವವರೆಗೊ ನಿಷೇಧ ಹೇರಬೇಕಿದೆ.

ಹೊರಗಿನ ಶತ್ರುಗಳನ್ನು ಮುಂದೆ ನಿಂತು ಹೋರಾಡಿ ಎದುರಿಸಬಹುದು. ಆದರೆ ದೇಶದೊಳಗಿನ ಶತ್ರುಗಳು ಯಾವತ್ತಿಗೂ ಅಪಾಯವೇ. ಜೆಎನ್‌ಯುನಲ್ಲಿ ಇಂಥ ಘಟನೆಗಳಾದಾಗ ಪರ-ವಿರೋಧಿ ಚರ್ಚೆ ಮಾಡಿ ಕೈ ಬಿಟ್ಟೆವು ಮತ್ತೆ ಇಂಥ ಘಟನೆ ಮರುಕಳಿಸದಂತೆ ಎಚ್ಚರವಾಗ ಬೇಕಿದೆ. ಎಲ್ಲಾ ಸಿದ್ಧಾಂತ, ಭಾಷೆ, ಧರ್ಮ, ಪ್ರಾಂತ್ಯ, ಜನಾಂಗವನ್ನೂ ಮೀರಿ ಅಖಂಡತೆಗೆ ಕಟಿಬದ್ಧರಾಗಿ ನಿಂತು ನವ ಭಾರತದ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ. ಕೈ ಮೀರಿ ಹೋಗುವ ಮುನ್ನ ಜಾಗೃತರಾಗೋಣ.

( ಆಗಸ್ಟ್ 16 ರಂದು  ವಿಶ್ವವಾಣಿಯಲ್ಲಿ ಪ್ರಕಟಿತವಾದ ಲೇಖನ )

3 ಟಿಪ್ಪಣಿಗಳು Post a comment
  1. vasu's avatar
    vasu
    ಆಗಸ್ಟ್ 17 2016

    Enquiry must must be conducted against the United theological College which is a Christian college for having allowed this function in their premises. I am doubtful that this theological college is also a part of Seditious activities taking shelter under minority rights.

    ಉತ್ತರ
  2. Goutham's avatar
    Goutham
    ಆಗಸ್ಟ್ 17 2016

    ಬೆಂಗಳೂರು ಅಥವಾ JNU ಎಲ್ಲೇ ಆಗಲಿ ದೇಶ ವಿರೋಧಿ ಘೋಷಣೆ ಕೂಗಿದರೆ ಅವರಿಗೆ ಕಾನೂನಿನ ರೀತ್ಯಾ ಶಿಕ್ಷೆಯಾಗಲಿ. ಆದರೆ ಜೆ ಎನ್ ಯೂ ನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ೦ದು ಸಾಬೀತಾಗಿಲ್ಲವಷ್ಟೆ. ಅಲ್ಲಿ ಸಿಕ್ಕಿರುವುದು ನಕಲಿ ವಿಡಿಯೋ ಎಂದು ಹೇಳಲಾಗುತ್ತಿದೆ. ಅದರ ಪ್ರಸ್ತಾಪ ಸರಿಯಲ್ಲ.

    ಉತ್ತರ
    • sudarshanarao's avatar
      ಆಗಸ್ಟ್ 20 2016

      Repeatedly it has been proven that the videos were not tweaked.
      There have been repeated attempts by the vested interests to raise anti national sentiments
      This is the first if its kind in south India
      They are testing waters. Only pedantic fools can’t see the pattern.

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments