ಕಮ್ಯುನಿಸಂ ಎಂಬ ಕಾಡಿನ ಬೆಂಕಿಗೆ ಅಂಬೇಡ್ಕರ್ ಸುಟ್ಟು ಹೋಗಬೇಕೆ?
– ಡಾ. ರೋಹಿಣಾಕ್ಷ ಶಿರ್ಲಾಲು,ಸಹಾಯಕ ಪ್ರಾಧ್ಯಾಪಕ
ಕನ್ನಡ ವಿಭಾಗ, ವಿವೇಕಾನಂದ ಕಾಲೇಜು,ಪುತ್ತೂರು.
ಒಂದೆಡೆ ರಕ್ತಕ್ರಾಂತಿಯನ್ನು ಆಹ್ವಾನಿಸುವ ಕಮ್ಯುನಿಸಂ, ಇನ್ನೊಂದಡೆ ರಕ್ತರಹಿತ ಬದಲಾವಣೆಯನ್ನು ನಿರೀಕ್ಷಿಸುವ ಬೌದ್ಧ ತತ್ವ. ಒಂದೆಡೆ ನೂರಾರು ವರ್ಷಗಳಿಂದ ಶೋಷಣೆ, ಅನ್ಯಾಯಗಳಿಗೆ ಒಳಗಾದ ದಲಿತ ಸಮಾಜ, ಇನ್ನೊಂದೆಡೆ ದಲಿತರೊಳಗೆ ಕಾಣಿಸಿಕೊಳ್ಳಲಾರಂಭಿಸಿದ ಎಚ್ಚರ , ಆವೇಶಗಳು ಸುಲಭದಲ್ಲಿ ಕಮ್ಯೂನಿಸಂನ ತೋಪಿಗೆ ಸಿಡಿಮದ್ದಾಗುವ ಅಪಾಯ, ಇದು ಅಂಬೇಡ್ಕರ್ ಮುಂದಿದ್ದ ಸನ್ನಿವೇಶದ ಕಿರು ಚಿತ್ರಣ. ಒಂದು ಬುದ್ಧನ ಮಾರ್ಗ , ಇನ್ನೊಂದು ಕಾರ್ಲ್ ಮಾರ್ಕ್ಸ್ ನ ಮಾರ್ಗ. ವಿಶ್ವ ತನ್ನ ಮಾರ್ಗವನ್ನು ಈಗ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಲೇ ಬೌದ್ಧಧರ್ಮದ ಮಾರ್ಗದಲ್ಲೇ ಉನ್ನತಿಯನ್ನು ಸಾಧಿಸಲು ಸಾಧ್ಯವೆಂದು ಆತ್ಮವಿಶ್ವಾಸದಿಂದ ನುಡಿದ, ನಡೆದ ಅಂಬೇಡ್ಕರ್. ಇದು ಅಂಬೇಡ್ಕರ್ ಮುಂದಿದ್ದ ಕವಲು ದಾರಿ ಮಾತ್ರವಲ್ಲ, ವರ್ತಮಾನದಲ್ಲಿನ ದಲಿತ ಚಳವಳಿಗಳ, ವಿಚಾರವಾದಿಗಳ ಮುಂದಿನ ಕವಲು ದಾರಿಯೂ ಹೌದು. ಅಂಬೇಡ್ಕರ್ ಅವರ ಅಂತಿಮ ಆಯ್ಕೆ ಬುದ್ಧನೋ? ಕಾರ್ಲ್‍ಮಾಕ್ರ್ಸೋ? ಈ ಪ್ರಶ್ನೆ ಬಹಳ ಮುಖ್ಯವಾದುದು ಕೂಡ. ಒಂದೆಡೆ ಮಾರ್ಕ್ಸ್ ವಾದಿಗಳು ಮರೆಯಿಂದ ಅಂಬೇಡ್ಕರ್ ವಿಚಾರಗಳನ್ನು ಮಾತನಾಡುತ್ತಾ , ಕಾರ್ಲ್ ಮಾರ್ಕ್ಸ್ನ ವಿಚಾರಗಳೇ ಅಂಬೇಡ್ಕರ್ ವಿಚಾರವೂ ಆಗಿತ್ತು ಎಂಬಂತೆ ತೋರಿಸುತ್ತಿದ್ದಾರೆ. ಇನ್ನೊಂದೆಡೆ ಕರ್ನಾಟಕವೂ ಸೇರಿದಂತೆ ದೇಶದೆಲ್ಲೇಡೆ ದಲಿತ ಚಳವಳಿಗಳು ಹುಟ್ಟಿ , ಉತ್ಕರ್ಷಕ್ಕೆ ತಲುಪಿ , ಹತ್ತಾರು ಚೂರುಗಳಾಗಿ ಒಡೆದು ಈ ಚಳವಳಿಗಳ ಮುಖ ಅಂಬೇಡ್ಕರ್ ಬದಲು ಮಾರ್ಕ್ಸ್, ಲೆನಿನ್‍ಗಳಾಗಿ, ಕ್ರಾಂತಿ, ಬೆಂಕಿಯ ವಿಚಾರಕ್ಕೆ ಅಂಬೇಡ್ಕರ್ ಮುಖವಾಡವನ್ನು ತೊಡಿಸುತ್ತಿದ್ದಾರೆ. ಹಾಗಾದರೆ ಸ್ವತಃ ಅಂಬೇಡ್ಕರ್ ಕಾರ್ಲ್ ಮಾರ್ಕ್ಸ್, ಕಮ್ಯುನಿಸಂ ಬಗೆಗೆ ತಳೆದಿದ್ದ ನಿಲುವು ಏನು? ಎನ್ನುವುದನ್ನು ಪರಿಶೀಲಿಸುತ್ತಾ, ನಮ್ಮ ಬೌದ್ಧಿಕ ವಲಯ ಅಂಬೇಡ್ಕರ್ ಅವರನ್ನು ಅರ್ಥೈಸಿಕೊಂಡ ಬಗೆಯನ್ನು ಚರ್ಚಿಸುವುದೇ ಈ ಬರವಣಿಗೆಯ ಉದ್ದೇಶ.