ವಿಷಯದ ವಿವರಗಳಿಗೆ ದಾಟಿರಿ

ಜೂನ್ 1, 2017

1

ಒಂದು ಹೊತ್ತು ಉಪವಾಸ ಮಾಡಿ, ಅದರ ಹಣದಲ್ಲಿ ಗೋವುಗಳನ್ನು ಉಳಿಸಿಕೊಳ್ಳುವ ವಿನೂತನ ಅಭಿಯಾನ #GiveUpAMeal ಹಿಂದಿನ ಕತೆ..

‍ನಿಲುಮೆ ಮೂಲಕ

ಅಜಿತ್ ಶೆಟ್ಟಿ
ಹೆರಂಜೆ ದೊಡ್ಡಮನೆ.

ಗೋಹತ್ಯೆ ತಡೆಗಾಗಿನ ಕೂಗು ಭಾರತದಲ್ಲಿ ಬಹಳ ಹಿಂದಿನದು, ಇತ್ತೀಚಿನ ಡಿಜಿಟಲ್ ಇಂಡಿಯಾ ಯುಗದಲ್ಲಿ ಅದು ಸೋಷಿಯಲ್ ಮೀಡಿಯದಲ್ಲೂ ಸದ್ದು ಮಾಡುತ್ತಿದೆ.. ನಮ್ಮ ಯುವಕರು ಗೋಹತ್ಯೆ ನಿಲ್ಲಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಡಿದುಕೊಳ್ಳುವಾಗ ಸೋಕಾಲ್ಡ್ ಪ್ರಗತಿಪರರು ಸೋಷಿಯಲ್ ಮೀಡಿಯದಲ್ಲಿರುವ ಮಂದಿಗೆ ತಲೆ ಇಲ್ಲ, ಅವರಿಗೆ ಅಷ್ಟು ಪ್ರೀತಿ ಇದ್ದರೆ ಒಂದೆರಡು ಗೋವುಗಳನ್ನು ಸಾಕಲಿ, ಗೋಶಾಲೆ ನಡೆಸಲಿ ಹೀಗೆ ಹಲವಾರು ಪ್ರಶ್ನೆಗಳನ್ನೊಡ್ಡಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ನಮ್ಮ ಯುವಕರ ಕೂಗು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಇದೆಯಾ ಅಥವಾ ನಿಜವಾಗಲೂ ಗೋವುಗಳನ್ನು ಉಳಿಸಿಕೊಳ್ಳುವ ಕಾಳಜಿ ಇದೆಯಾ, ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರ ಎಂದು ನೋಡಿದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಡೆದ ಒಂದು ಅಭಿಯಾನ ಯುವ ಜನತೆ ಬಗ್ಗೆ ಹೆಮ್ಮೆ ಮೂಡಿಸುತ್ತದೆ ಎಂದು ಭಾವಿಸುತ್ತೇನೆ. ಈ ಅಭಿಯಾನದ ಒಳಗೆ ಹೋಗುವ ಮೊದಲು ಅಭಿಯಾನದ ಪೂರ್ವ ಪ್ರೇರಣೆಯ ಕಡೆ ಒಮ್ಮೆ ಗಮನ ಹರಿಸೋಣ. ನಮ್ಮ ದೇಶದಲ್ಲಿ ಗೋವು ಪ್ರತಿ ರೈತನ ಬೆನ್ನೆಲುಬು, ದೇಶಿ ಗೋವುಗಳು ಅವನತಿ ಹೊಂದಿದರೆ ರಾಸಾಯನಿಕ ಮುಕ್ತ ಕೃಷಿ ಎನ್ನುವುದು ಕನಸಾಗುವುದು ನಿಶ್ಚಿತ. ಇಂತಹ ಸತ್ಯಗಳು ನಮ್ಮ ಸಮಾಜಕ್ಕೆ, ಜನನಾಯಕರಿಗೆ ಗೊತ್ತಿಲ್ಲ ಅಂತೇನು ಇಲ್ಲ.. ಆದರೂ ಓಲೈಕೆ ರಾಜಕಾರಣಕ್ಕಾಗಿ ಗೋಹತ್ಯೆಯನ್ನು ನಿಲ್ಲಿಸಲಾಗುತ್ತಿಲ್ಲ, ನಾವು ಗಾಂಧೀಜಿ ಅನುಯಾಯಿಗಳು ಎಂದವರೇ ದಶಕಗಳ ಕಾಲ ದೇಶವನ್ನು ಆಳಿದರೂ ಗಾಂಧಿ ಕನಸನ್ನು ನನಸು ಮಾಡದೆ ಹೊಣೆಗೇಡಿಗಳಂತೆ ವರ್ತಿಸಿದ್ದಾರೆ. ಇವೆಲ್ಲವುಗಳ ನಡುವೆ ಬರಗಾಲದಿಂದ ಸಾಯುತ್ತಿರುವ ಜಾನುವಾರುಗಳನ್ನು ಉಳಿಸಿ ರೈತನ ಬಾಳನ್ನು ಬಲಗೊಳಿಸುವ ಪ್ರಾಮಾಣಿಕ ಕಾರ್ಯವನ್ನಾದರೂ ಮಾಡುತ್ತಾರೆ ಎಂದುಕೊಂಡರೆ ಅದನ್ನು ಮಾಡದೇ ಅದರಲ್ಲೂ ಭ್ರಷ್ಟಾಚಾರ ಮಾಡಿಕೊಂಡು ಮಜ ಮಾಡುತ್ತಿದ್ದಾರೆ.. ಇಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಮಠಗಳು, ಸಂಘ ಸಂಸ್ಥೆಗಳು ರೈತರ ಬೆನ್ನಿಗೆ ನಿಂತು ಗೋಶಾಲೆಗಳನ್ನು ತೆರೆದು ಗೋವುಗಳನ್ನು ಉಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದರ ಒಂದು ಭಾಗವಾಗಿ ರಾಮಚಂದ್ರ ಪುರ ಮಠವು ಸಹ ೧೪ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆದು ಗೋವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಇವೆಲ್ಲವುಗಳ ನಡುವೆ ಮಲೈ ಮಹದೇಶ್ವರ ಬೆಟ್ಟದಲ್ಲಿ ಬರಗಾಲ ತಾಂಡವವಾಡುತ್ತಿದೆ. ಹಳ್ಳಿಯ ಜಮೀನಿನಲ್ಲಿ ಒಂದು ಹುಲ್ಲು ಕಡ್ಡಿಯನ್ನೂ ಹುಡುಕಾಡುವ ಪರಿಸ್ತಿತಿ.. ಆಗ ಅಲ್ಲಿನ ರೈತರು ಪಾರಂಪರಿಕವಾಗಿ ತಮ್ಮ ಗೋವುಗಳನ್ನು ಕಾಡಿನಲ್ಲಿ ಮೇಯಿಸಲು ಹೊರಟಾಗ ಸರ್ಕಾರವೇ ಗೋವುಗಳನ್ನು ಕಾಡಿನಲ್ಲಿ ಮೇಯಿಸದಂತೆ ತಡೆದ ಪರಿಣಾಮ ಸಾವಿರಾರು ಗೋವುಗಳು ರೈತರ ಮುಂದೆ ಉಸಿರು ಬಿಟ್ಟವು. ಬೇರೆ ದಾರಿ ಕಾಣದೇ ರೈತರು ರಾಘವೇಶ್ವರ ಶ್ರೀಗಳಿಗೆ ನಮ್ಮ ಗೋವುಗಳನ್ನು ಉಳಿಸಿಕೊಡಿ ಎಂದು ಗೋಗರೆದಾಗ ಒಂದು ನಯಾ ಪೈಸೆ ಹಣವಿಲ್ಲದೆ ದೇವರ ಮೇಲೆ ಭಾರ ಹಾಕಿ ಆಯಿತು ಎಂದು ಭರವಸೆ ಕೊಟ್ಟರು. ನಂತರ ಗೋವನ್ನುಳಿಸುವ ಮಹತ್ಕಾರ್ಯಕ್ಕಿಳಿದ ರಾಘವೇಶ್ವರ ಶ್ರೀಗಳು ಗೋ ಬಿಕ್ಷಾ ಅಭಿಯಾನಕ್ಕೆ ಚಾಲನೆ ಕೊಟ್ಟರು.. ಅಲ್ಲಿಂದ ನಡೆದದ್ದೆಲ್ಲವೂ ಒಂದು ಪವಾಡವೆನ್ನಬಹುದು.

ಒಂದೆಡೆ ಈಗಾಗಲೇ ಗೋಶಾಲೆಗಳನ್ನು ನಡೆಸುತ್ತಿರುವುದರಿಂದ ಹಣಕಾಸಿನ ಮುಗ್ಗಟ್ಟು.. ಇನ್ನೊಂದೆಡೆ ಸಂಕಷ್ಟದಲ್ಲಿದ್ದ ಗೋವುಗಳು.. ದೇವರ ಮೇಲೆ ಭಾರ ಹಾಕಿ ಗೋವುಗಳನ್ನು ಉಳಿಸಿಕೊಳ್ಳಲು ಹೊರಟ ಮಠದ ಅಭಿಯಾನಕ್ಕೆ ಯುವಕರ ತಂಡ ನೆರವಾಗಲು ನಿಶ್ಚಯಿಸಿ ಒಂದು ಅಭಿಯಾನ ಮಾಡಲು ಪೂರ್ವ ತಯಾರಿ ಮಾಡಿಕೊಳ್ಳಲಾರಂಭಿಸಿತು. ಆ ಪೂರ್ವ ತಯಾರಿಯ ಸಮಯದಲ್ಲಿ ಸರಿ ಸುಮಾರು ಒಂದು ತಿಂಗಳ ಹಿಂದೆ ನನಗೆ ಅಭಿಯಾನದ ರೂವಾರಿ ಗಿರೀಶ್ ಆಳ್ವರಿಂದ ಒಂದು ಸಂದೇಶ ಬಂತು. ನಮ್ಮಂತ ಒಂದೇ ಮನಸ್ಥಿತಿಯುಳ್ಳ ಯುವಕರನ್ನು ಒಂದು ಗ್ರೂಪಿಗೆ ಸೇರಿಸಬೇಕು, ಅದರ ಉದ್ದೇಶ ಸೋಷಿಯಲ್ ಮೀಡಿಯ ಮೂಲಕ ವಿಶೇಷ ತಂತ್ರಗಾರಿಕೆಯ ಮುಖಾಂತರ ದೇಶವ್ಯಾಪಿ ಒಂದು ಆಂದೋಲನವನ್ನ ಮಾಡಿ ತನ್ಮೂಲಕ ಮಲೇ ಮಹದೇಶ್ವರದ ಬೆಟ್ಟದ ತಪ್ಪಲಿನಲ್ಲಿ ಮೇವಿಲ್ಲದೆ ಸಾಯುತ್ತಿರುವ ಸಾವಿರಾರು ಗೋವುಗಳ ಪ್ರಾಣವನ್ನ ರಕ್ಷಣೆ ಮಾಡುವಂತಾದ್ದು. ಇದೊಂದು ಗೋ ರಕ್ಷಣೆಯ ಪುಣ್ಯದ ಕೆಲಸ. ಇದಕ್ಕೆ ನಮಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಇರುವವರು ಬೇಕು, ನಮ್ಮ ಜೊತೆ ಈ ಪುಣ್ಯದ ಕೆಲಸದಲ್ಲಿ ಭಾಗಿಯಾಗಿ ಅಂದ್ರು. ನಾನು ಒಂದು ರೈತ ಕುಟುಂಬದಿಂದ ಬಂದವನಾದ್ದರಿಂದ ಗೋವುಗಳನ್ನ‌ ಸಾಕುವುದರ ಹಿಂದಿನ ನೋವು ನಲಿವಿನ ಸಂಪೂರ್ಣ ಅರಿವು ಇರುವುದರಿಂದ ‌ತಕ್ಷಣೆವೇ ಒಪ್ಪಿಕೊಂಡೆ.

ರಾಮಚಂದ್ರಾಪುರ ಮಠ,‌ ಇತರ ಮಠಾಧೀಶರ ನೇತೃತ್ವದಲ್ಲಿ ಮಠದ ಭಕ್ತರು ಮತ್ತೆ ಕಾರ್ಯಕರ್ತರು ಗೋ ಪ್ರಾಣ ಭಿಕ್ಷೆ ಎನ್ನುವ ಅಭಿಯಾನದ ಮುಖಾಂತರ ಊರೂರು ತಿರುಗಿ ಸಾರ್ವಜನಿಕರ, ಮಠದ ಭಕ್ತರ ದೇಣಿಗೆಗಳನ್ನ ಸಂಗ್ರಹಿಸಿ ಅದರಿಂದ ಬೆಟ್ಟದ ತಪ್ಪಲಿನಲ್ಲಿ ಇರುವ ಗೋವುಗಳ ಪ್ರಾಣ ಉಳಿಸಲು ವಿನಿಯೋಗಿಸುತ್ತಿದ್ದಾರೆ ಎಂದು ಈ ಗುಂಪಿಗೆ ಸೇರಿಕೊಂಡ ಮೇಲೆ ನನಗೆ ತಿಳಿಯಿತು.

ನಾವು ಸೋಷಿಯಲ್ ಮೀಡಿಯಾದಲ್ಲಿ ಹಮ್ಮಿಕೊಂಡಿರುವ #GiveUpAMeal ಅಭಿಯಾನ ಇದರದ್ದೇ ಒಂದು ಭಾಗ. ಇನ್ನು ನಾನು  ಭಾಗಿಯಾಗಿರುವ #GiveUpAMeal ತಂಡದಲ್ಲಿ ನಮ್ಮ ಜವಾಬ್ದಾರಿ ಏನೆಂದರೆ ಟ್ವಿಟರ್ ಮತ್ತೆ ಫೇಸ್‌ಬುಕ್ ಮುಖಾಂತರ ಸೋಷಿಯಲ್ ಮೀಡಿಯಾದಲ್ಲಿ ಇರುವವರನ್ನ ಸಂಪರ್ಕಿಸಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಪ್ರದೇಶಗಳಲ್ಲಿರುವ ಗೋಪಾಲಕರ ಸತ್ಯಗಳನ್ನು ಸಚಿತ್ರವಾಗಿ ತಲುಪಿಸುವುದು, ಮತ್ತು ಸಮಾಜದ ಎಲ್ಲಾ ವರ್ಗದವರ ಗಮನ ಸೆಳೆಯುವುದು.. ನಾವು ಈ #GiveUpAMeal ಅಭಿಯಾನವನ್ನ ನಡೆಸಿ ಪ್ರತಿ ಸೋಮವಾರ ಸೋಷಿಯಲ್ ಮೀಡಿಯಾದಲ್ಲಿ ಇರುವ ನಮ್ಮ ಸ್ನೇಹಿತರನ್ನು ಸಂಪರ್ಕಿಸಿ ಪ್ರತೀ ಸೋಮವಾರ ಒಂದೊತ್ತಿನ ಊಟವನ್ನ ಬಿಟ್ಟು ಅದರ ಹಣವನ್ನು ಗೋ ರಕ್ಷಣೆಯ ಪುಣ್ಯಕಾರ್ಯಕ್ಕೆ ದಾನವಾಗಿ ನೀಡಿ ಎಂದು ವಿನಂತಿಸುವುದು. ಅದರೊಂದಿಗೆ ಸಮಸ್ಯೆಯ ತೀವ್ರತೆಯ ಬಗ್ಗೆ ಮಾಧ್ಯಮಗಳನ್ನು ಮತ್ತು ರಾಜಕಾರಣಿಗಳನ್ನ ಎಚ್ಚರಿಸುವುದು.

ಇಲ್ಲಿ ಸೋಶಿಯಲ್ ಮೀಡಿಯಾದಲ್ಲಿ #GiveUpAMeal ಅನ್ನುವ ಅಭಿಯಾನದ ಮುಖಾಂತರ ನಾವು ರಾಜ್ಯದ ದೇಶದ ಉದ್ದಗಲಕ್ಕೂ ಈ ಗೋರಕ್ಷಣೆಯ ಕುರಿತು ಡಂಗುರ ಸಾರುತ್ತಾ, ತನ್ಮೂಲಕ ಧಾನಿಗಳನ್ನ ಸಂಪರ್ಕಿಸಿ ಧನ ಶೇಖರಣೆ ಮಾಡುತ್ತಾ, ಪ್ರತಿ ವಾರವೂ ಹೊಸ ಹೊಸ ವಿಧಾನಗಳಿಂದ ಜನ ಮಾನಸದ ಮನ ಮುಟ್ಟತೊಡೆಗಿದೆವು. ಬರೆ ಟ್ವಿಟರ್ ಮತ್ರ ಸಾಲದೂ, ಫೇಸ್‌ಬುಕ್ ನಲ್ಲೂ Give Up A Meal ಅನ್ನುವ ಪೇಜನ್ನ‌ ಸೃಷ್ಟಿ ಮಾಡಿ ಬೆಟ್ಟ ತಪ್ಪಲಿನಲ್ಲಿ ದಿನಂ ಪ್ರತಿ ನಡೆಯುತ್ತಿರುವ ಗೋ ಸೇವೆಯನ್ನ ದಾನಿಗಳ ಸಾರ್ವಜನಿಕರ ಗಮನಕ್ಕೆ ತರುವ ಕೆಲಸ ಶುರುವಾಯಿತು. ಪ್ರತೀ ದಿನ ಮೇವು ಸರಬರಾಜು ಆಗಿರುವ ಪಟ್ಟಿಯನ್ನು, ಚಿತ್ರಗಳನ್ನು ನಮ್ಮ ಫೇಸ್‌ಬುಕ್  ಪೇಜಲ್ಲಿ ಪ್ರಕಟಿಸುವುದು. ಬೆಟ್ಟ ತಪ್ಪಲಿಗೆ ಹೋಗಿ ಬಂದ ನಮ್ಮ ಸೋಶಿಯಲ್ ಮೀಡಿಯಾ ಸ್ನೇಹಿತರ ಅನುಭವಗಳನ್ನು‌ ಹಂಚುವುದು. ಸುದ್ದಿ ಮಾಧ್ಯಮಗಳನ್ನ ಸಂಪರ್ಕಿಸಿವುದು ಇತ್ಯಾದಿ. ಆದರೆ ಈ ಕೆಲಸ ಅಂದುಕೊಂಡಷ್ಟು ಸುಲಭವಾದ ಕೆಲಸವಲ್ಲ. ಈ ಅಭಿಯಾನ ಮಾಡಲು ನಾವು ಮಾಡಿಕೊಂಡ ಕೋರ್ ಗ್ರೂಪ್ ಅಷ್ಟು ದೊಡ್ಡದಿರಲಿಲ್ಲ. ನಮ್ಮ ಕೊರ್ ಗ್ರೂಪಿನಲ್ಲಿ ನಾವು ಹದಿನಾರು ಮಂದಿ ಇದ್ದು, ಒಂದಿಬ್ಬರು ಮಠದ ಪೂರ್ಣಾವಧಿ ಸ್ವಯಂಸೇವಕರು ಬಿಟ್ಟರೆ ಉಳಿದವ್ರೆಲ್ಲ ಬೇರೆ ಬೇರೆ ಉದ್ಯೋಗದಲ್ಲಿದ್ದು, ಆತ್ಮ ತೃಪ್ತಿಗಾಗಿ, ಯಾವುದೇ ಪ್ರಚಾರ ಅಥವಾ ಇನ್ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಇಲ್ಲಿ ತಮ್ಮನ್ನ ತೊಡಗಿಸಿಕೊಂಡವರು. ಈ ಹದಿನಾರು ಮಂದಿಯ ತಂಡ, ಇಡೀ ಅಭಿಯಾನದ ರೂಪುರೇಷೆಯನ್ನ ನಿರ್ಧರಿಸುತ್ತೆ. ಈ ಗುಂಪಿಲ್ಲಿ ನಮಗೆ ಇದ್ದ ಮೊದಲ ಸವಾಲು ಅಂದ್ರೆ ನಮ್ಮ #GiveUpAMeal  ಅಭಿಯಾನವನ್ನ  ಸೊಷಿಯಲ್ ಮೀಡಿಯದಲ್ಲಿ ಸುಮಾರು ಹತ್ತು ಲಕ್ಷ ಮಂದಿಗೆ ತಲುಪಿಸುವಂತದ್ದು. ಇದು ನಿಜಕ್ಕೂ ನಮ್ಮ ಈ ಹದಿನಾರು ಮಂದಿಯ ಚಿಕ್ಕ ಗುಂಪಿಗೆ ದೊಡ್ಡ ಸವಾಲೇ ಆಗಿತ್ತು. ನಾವು ಕೆಲವೊಂದು ವಿಶೇಷ ಮಾರ್ಗೋಪಾಯಗಳನ್ನ ಬಳಸಿಕೊಂಡು 17 ನೇ ಎಪ್ರೀಲ್ 2017 ರ ಸೋಮವಾರದಂದು ನಮ್ಮ ಗುರಿಯಾದ ಒಂದು ಮಿಲಿಯನ್ ಅಂದ್ರೆ ಹತ್ತು ಲಕ್ಷಕ್ಕು ಹೆಚ್ಚು ಮಂದಿಯನ್ನ ತಲುಪಿದೆವು, ಇದು ನಮ್ಮ  ಒಟ್ಟು ಅಭಿಯಾನದಲ್ಲೇ ಒಂದು ಬಹು ದೊಡ್ಡ ಸಾಧನೆ. ಇದು ನಮ್ಮ ಇಡೀ ತಂಡದ ಸಾಮೂಹಿಕ ಪರಿಶ್ರಮಕ್ಕೆ ಮತ್ತೆ ನಾವು ಕಂಡುಕೊಂಡ ವಿಶೇಷ ಮಾರ್ಗೋಪಾಯಗಳಿಗೆ ಸಿಕ್ಕ ಜಯ. ನಂತರದ ದಿನಗಳಲ್ಲಿ ನಿರಂತರವಾಗಿ ಸಮಾಜಿಕ ಜಾಲತಾಣಗಳಲ್ಲಿ ಬ್ಲಾಗ್ ಗಳನ್ನ ಬರೆಯುತ್ತಾ ಈ ಕ್ಯಾಂಪೈನ್ ಗೆ ಮತ್ತಷ್ಟು ಪ್ರಚಾರ ಕೊಟ್ಟು, ಸಮಾಜದ ಎಲ್ಲಾ ವರ್ಗದ ಗಣ್ಯರನ್ನ ಈ ಆಭಿಯಾನಕ್ಕೆ ಕರೆತರುವಲ್ಲಿ ಕೊಂಚ ಮಟ್ಟಿನ ಸಫಲತೆಯನ್ನ ಕಂಡಿದ್ದೇವೆ.

ಒಂದು ವಾರ ನನ್ನ‌ ಕೆಲ ಸ್ನೇಹಿತರ ಜೊತೆ ಆನ್ ಲೈನ್ ಪ್ರಚಾರ ಮಾಡುತ್ತ ಇದರ ವ್ಯಾಪ್ತಿ ಮತ್ತೆ ಇದರ ಪ್ರಭಾವಗಳನ್ನ ಕಂಡು ರೋಮಾಂಚನವಾಯಿತು. ನಾವು ಕಾಪಾಡಲು ಹೊರಟಿರೋದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಇರುವ ಸುಮಾರು ಒಂದು ಲಕ್ಷ “ಹಳ್ಳಿಕಾರ”, “ಬರಗೂರ್” ಮತ್ತೆ “ಆಲಂಬಾಡಿ ಎಂಬ ದೇಸೀ ತಳಿಗಳನ್ನು. ೧೮ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಈ ಹಸುಗಳು, ಸರಿ ಸುಮಾರು ೧೬೦ ಹಳ್ಳಿಗಳ ೧೮,೦೦೦ ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ, (ಇದರಲ್ಲೂ ಹಿಂದುಳಿದ ಮತ್ತೆ ಬುಡಕಟ್ಟು ಕುಟಂಬಗಳ ಸಂಖ್ಯೆಯೇ ಹೆಚ್ಚು)ಜೀವನೋಪಾಯವಾಗಿವೆ. ಈ ರೈತರ ಬಳಿ ಸುಮಾರು ೫೦ ರಿಂದ ೧೦೦ ಹಸುಗಳಿರುತ್ತವೆ. ಈ ದೇಸೀ ತಳಿಗಳು ಹಾಲಿನ ಉತ್ಪನ್ನಕ್ಕಿಂತ ಗೊಬ್ಬರಕ್ಕೆ ಹೆಚ್ಚು ಉಪಯೋಗ. ಇವುಗಳ ಸಗಣಿಯಿಂದ ನೈಸರ್ಗಿಕ ಗೊಬ್ಬರವನ್ನ ತಯಾರಿಸಿ ತಮ್ಮ ಜಮೀನುಗಳಿಗೆ ಉಪಯೋಗಿಸುತ್ತಾರೆ. ಮತ್ತೆ ಇದನ್ನ ಮಾರಿಕೊಂಡು ಇವರ ಜೀವನವನ್ನು ತಲೆಮಾರುಗಳಿಂದ ಸಾಗಿಸುತ್ತಾ ಬಂದಿದ್ದಾರೆ. ಈ ರಾಸುಗಳು ಕೇವಲ ನೈಸರ್ಗಿಕವಾಗಿ ಬೆಳೆದ ಹಸಿರು ಹುಲ್ಲು, ಸೊಪ್ಪು ಗಿಡಗಳನ್ನಷ್ಟೆ ತಿನ್ನುವುದು. ಬೇಸಿಗೆ ಸಂದರ್ಭದಲ್ಲಿ ಇವುಗಳನ್ನು ರೈತರು ಮಲೆ ಮಹದೇಶ್ವರ ಬೆಟ್ಟಕ್ಕೆ ಒಯ್ದು ಅಲ್ಲೇ ಸುಮಾರು ಎರಡು ತಿಂಗಳುಗಳ ಕಾಲ ಕಾಡಲ್ಲೇ ಉಳಿದು ದೊಡ್ಡಿಗಳನ್ನ ಮಾಡಿ ಮೇಯಿಸುತ್ತಿದ್ದರು. ಮರಳಿ ನಾಡಿಗೆ ಇನ್ನು ಬರುವುದು ನಾಡಿನಲ್ಲಿ ಮಳೆ ಬಂದು ಹಸಿರು ಚಿಗುರಿ ಹಸುಗಳಿಗೆ ಮೇವಿನ ಅನುಕೂಲ ಆದ ಮೇಲೆಯೇ. ಈ ಪದ್ಧತಿಯನ್ನ ಇಲ್ಲಿ ದನಗಾಹಿಗಳು ಮೈಸೂರಿನ ರಾಜರು, ಬ್ರಿಟಿಷರ ಕಾಲದಿಂದಲೂ ರೂಡಿಸಿಕೊಂಡು ಬಂದಥಾದ್ದು. ಇವರಲ್ಲಿ ಇರುವ ಇನ್ನೊಂದು ವಿಶೇಷತೆ ಅಂದ್ರೆ ಇವರು ಹಸುಗಳನ್ನ ಹಾಲಿಗಾಗಿ ಎಂದೂ ಸಾಕಿದವರಲ್ಲ. ಆಕಳಿನ ಕರು ಕುಡಿದು ಬಿಟ್ಟಿದ್ದನ್ನ ಮಾತ್ರ ಇವರು ತಮ್ಮ ದಿನ ಬಳಕೆಗೆ ಉಪಯೋಗ ಮಾಡುತ್ತಾರೆ.

ಈಗ ಸಮಸ್ಯೆ ಏನಂದ್ರೆ, ಸುಮಾರು ಮೂರು ವರ್ಷಗಳಿಂದೀಚೆಗೆ ಈ ಮಲೆ ಮಹದೇಶ್ವರ ಬೆಟ್ಟಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಬೇಲಿಯನ್ನ ಹಾಕಲು ಪ್ರಾರಂಭಿಸಿ ಈ ಬೆಟ್ಟಗಳಿಗೆ ಗೋವುಗಳು ಹೋಗಿ ಮೇಯದಂತೆ ತಡೆದಿವೆ. ಅದೂ ಸಾಲದೆಂಬಂತೆ ಗಾಯದ ಮೇಲೆ ಬರೆಯ ರೀತಿ ಬರಗಾಲ ಆವರಿಸಿರುವುದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವ ಗೋವುಗಳಿಗೆ ಬೆಟ್ಟ ಬಿಟ್ಟರೆ ಮೇವಿಗಾಗಿ ಬೇರೆ ಯಾವುದೇ ಮೂಲಗಳಿಲ್ಲ. ಈ ರೈತರದ್ದು ಹಸುಗಳನ್ನ ಸಾಕುವುದು ಒಂದು ಉದ್ಯೋಗ ಅಲ್ಲ, ಬದಲಾಗಿ ಅದು ಅವರ ಜೀವನ ವಿಧಾನ. ಹಸು ಇಲ್ಲದೆ ಅವರ ಜೀವನ ಇಲ್ಲ. ಕೊಟ್ಟಿಗೆಯಲ್ಲಿ ಕರು ಹುಟ್ಟಿದರೆ ಮನೆಯಲ್ಲಿ ಮಗು ಒಂದು  ಹುಟ್ಟಿದಷ್ಟೇ ಖುಷಿ ಪಡುವ ಜನ. ತೀರಾ ಮುಗ್ಧರು, ನಾಗರಿಕ ಪ್ರಪಂಚದ ಲಾಭ ನಷ್ಟಗಳ ಲೆಕ್ಕಾಚಾರದಿಂದ ಬಹಳ ದೂರ ಉಳಿದವರು. ಈ ಹಸು ಸಾಕಾಣಿಕೆ ಇವರಿಗೆ ಪ್ರಕೃತಿಯೊಂದಿಗಿನ ಸಾಮರಸ್ಯವನ್ನ ಹೆಚ್ಚಿಸುತ್ತದೆ. ನಾನು ಮೊದಲೇ ಹೇಳಿದಂತೆ ಇವ್ರು ಹಸುಗಳನ್ನ ಸಾಕುವುದು ಗೊಬ್ಬರಕ್ಕಾಗಿ.. ಸದಾ ಹಸಿರನ್ನೇ ತಿನ್ನುವ ಈ ಹಸುಗಳ ಸಗಣಿ ಮತ್ತೆ ಗೊಬ್ಬರ ಬಹಳ ಶ್ರೇಷ್ಟವಾದದ್ದು. ಇವರು ಮಲೇ ಮಹದೇಶ್ವರ ಬೆಟ್ಟದಲ್ಲಿ ದೊಡ್ಡಿ ಮಾಡಿ ಇರುವಷ್ಟು ದಿನ ಹಸುಗಳು ಹಾಕಿದ ಸಗಣಿ ಹಾಗೆಯೇ ಪ್ರಕೃತಿಯ ಮಡಿಲಲ್ಲೆ ಬಿಟ್ಟು ಬರುತ್ತಾರೆ. ಇದರಿಂದ ಆ ಕಾಡುಗಳಿಗೆ ಸೊಂಪಾದ ಗೊಬ್ಬರ ಸಿಗುತ್ತದೆ. ಇದು ಅಲ್ಲಿ ಒಂದು ತರಹದ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳುವಲ್ಲಿ ಸಹಾಯ ಆಗುತ್ತೆ. ಇಂತಹ ಸಂದರ್ಭದಲ್ಲಿ ಆ ಬೆಟ್ಟಗಳ ಸುತ್ತಾ ಬೇಲಿ ಹಾಕಿ ಹಸುಗಳಿಗೆ ನಿರ್ಬಂಧ ಹೇರಿದರೆ ರೈತನಿಗೆ ಎಷ್ಟು ನಷ್ಟವೋ ಪ್ರಕೃತಿಗೂ ಅಷ್ಟೇ ನಷ್ಟವಿದೆ. ಈ ಪರಿಸ್ಥಿತಿಯನ್ನ ಅರಿತ ರಾಮಚಂದ್ರಾಪುರಮಠದ ಮಠಾಧೀಶರು ಈ ಗೋವುಗಳಿಗೆ ಮೇವನ್ನ ಒದಗಿಸುವ ಸಂಕಲ್ಪವನ್ನು ಮಾಡಿದರು. ಆದ್ರೆ ಇಷ್ಟು ಬೃಹತ್ ಗಾತ್ರದ ಗೋ ಸಮೂಹಕ್ಕೆ ಮೇವನ್ನ ಸರಬರಾಜು ಮಾಡುವುದು ತಮಾಷೆಯ ವಿಷಯವಲ್ಲ. ದೇಸಿ ತಳಿಗಳಿಗೆ ಬೇಸಿಗೆಯ ಸಮಯದಲ್ಲಿ (ಮಾರ್ಚ್, ಎಪ್ರಿಲ್, ಮೇ ಮತ್ತೆ ಜೂನ್ ತಿಂಗಳಲ್ಲಿ) ದಿನಕ್ಕೆ ಸುಮಾರು ೧೫ ಕೆ ಜಿ ಯಷ್ಟು ಮೇವು ಬೇಕಾಗುತ್ತೆ. ಆದ್ರೆ ಅಷ್ಟೊಂದು ಮೇವನ್ನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವ ಗೋವುಗಳಿಗೆ ಪೂರೈಸುವುದು ಸುಲಭದ ಮಾತಾಗಿರಲಿಲ್ಲ. ಅದಕ್ಕೆ ಸ್ವಾಮಿಗಳು ಪ್ರತಿ ಹಸುವು ಈ ಮೂರು ನಾಲ್ಕು ತಿಂಗಳುಗಳ ಕಾಲ ಜೀವಂತವಾಗಿರಲು ಎಷ್ಟು ಬೇಕೋ ಅಷ್ಟನ್ನಾದರೂ ಪೂರೈಸುವ ವ್ಯವಸ್ಥೆ ಮಾಡುತಿದ್ದಾರೆ. ಅಂದ್ರೆ ಒಂದು ಹಸುವಿಗೆ ಸುಮಾರು ಎರಡು ಕೆ ಜಿ ಯಷ್ಟು.

ಸರಿ ಸಂಕಲ್ಪ ಆಯಿತು ಇನ್ನು ಅದನ್ನ ಕಾರ್ಯಗತಗೊಳಿಸುವುದು ಒಂದು ಸವಾಲಿನ ಕೆಲಸ. ಇದಕ್ಕೆ ಮಠದ ಆಡಳಿತ ಮಂಡಳಿಯ ಸಂಪನ್ಮೂಲದ ಕ್ರೋಢೀಕರಣ ಮತ್ತೆ ಮೇವುಗಳನ್ನ ವಿತರಿಸುವ ವ್ಯವಸ್ಥೆ ಮಾಡಬೇಕು. ಈ ಎರಡು ಕೆಲಸಗಳು ಸಮಾನಾಂತರವಾಗಿ ಕಾರ್ಯಗತಗೊಳಿಸಬೇಕು. ಈ ಸಂದರ್ಭದಲ್ಲಿ ಮಠದ ಈ ಕೆಲಸದಲ್ಲಿ ಭಾಗಿಯಾಗಿದ್ದು ಮಠದ ಭಕ್ತರು ಮತ್ತು ಸ್ವಯಂ ಸೇವಕರು. ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಮಠದ ಸುಮಾರು ನೂರಕ್ಕು ಹೆಚ್ಚು ಸ್ವಯಂಸೇವಕರು( ಗೋ ಕಿಂಕರರು) ಮಠಾಧೀಶರ ಮಾತನ್ನ ಅನುಷ್ಟಾನಕ್ಕೆ ತರಲು ಹಗಲು ರಾತ್ರಿ ಎನ್ನದೆ ತಮ್ಮ ಮನೆ ಮಠ ಬಿಟ್ಟು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಗೋಮಾತೆಯ ಜೀವ ಉಳಿಸುವ ಈ ಪುಣ್ಯದ ಕೆಲಸದಲ್ಲಿ ತಮ್ಮನ್ನ ಅರ್ಪಿಸಿಕೊಂಡರು.

ಇನ್ನು ಮೇವನ್ನ ಹಂಚಲು ಗ್ರಾಮ ಪಂಚಾಯತಿಗೆ ಒಂದರಂತೆ ಮಠದ ಹದಿನೈದು ಮೇವು ವಿತರಣಾ ಕೇಂದ್ರಗಳನ್ನ ತೆರೆಯಲಾಯಿತು. ಪ್ರತೀ ಕೇಂದ್ರದಲ್ಲಿ ಸರಾಸರಿ ಎರಡು ಸಾವಿರ ಹಸುಗಳಿಗೆ ಒಂದು ಹೊತ್ತಿನ ಮೇವನ್ನ ಒದಗಿಸುವ ಕೆಲಸ ಪ್ರಾರಂಭವಾಯಿತು.. (ಕೌದಳ್ಳಿ, ಎರಂಬಾಡಿ, K V M ದೊಡ್ಡಿ, ಪಾಚಿ ದೊಡ್ಡಿ, MTದೊಡ್ಡಿ, ಮೀನ್ಯಾಮ, ಗುಂಡಾಪುರ, ಚೆನ್ನೂರು, ನರ್ರುಂಡಿ, ತೊರಾರೆ, ಮಾರಳ್ಳಿ, ದಿನಾಳ್ಳಿ,ಪುದುನಗರ, ನಾಲಾ ರೋಡ್, ಸಂದಾನಪಾಳ್ಯಗಳಲ್ಲಿ ವಿತರಣಾ ಕೇಂದ್ರಗಳನ್ನ ಸ್ಥಾಪನೆಯನ್ನ ಮಾಡಲಾಯಿತು)

ಇಲ್ಲೇ ಕೌದಳ್ಳಿ ವಿತರಣಾ ಕೇಂದ್ರ ಪಕ್ಕದಲ್ಲಿರುವ ರಾಮಾಪುರ ಎನ್ನವಲ್ಲಿ ಮಠದ ಭಕ್ತರೊಬ್ಬರು ತಮ್ಮ ಮನೆಯಲ್ಲೇ ಮಠದ ಸ್ವಯಂ ಸೇವಕರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಈ ಮನೆ/ಶಿಬಿರದಿಂದ ದಿನಂಪ್ರತಿ ಸ್ವಯಂಸೇವಕರು ಎಲ್ಲ ಹದಿನೈದು ಕೇಂದ್ರಗಳ ಮೇವು ವಿತರಣೆಯ ಉಸ್ತುವಾರಿಯನ್ನ ನೋಡಿಕೊಂಡು ದಿನಂಪ್ರತಿ ಬರುವ ಮೇವುಗಳು, ದಾನಿಗಳಿಂದ ಬಂದ ದೇಣಿಗೆಗಳ  ಲೆಕ್ಕಾಚಾರವನ್ನ ಅಚ್ಚುಕಟ್ಟಾಗಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ #GiveUpAMeal ಅಥವಾ #ಗೋಪ್ರಾಣಭಿಕ್ಷೆ ಅಭಿಯಾನ ಸಫಲವಾಗಲು ಪ್ರಮುಖ ಕಾರಣರೆಂದರೆ ತಮ್ಮ ಸರ್ವಸ್ವವೆಲ್ಲವನ್ನೂ ಬದಿಗೊತ್ತಿ ನಿಸ್ವಾರ್ಥವಾಗಿ ಹಗಲು ರಾತ್ರಿ ಎನ್ನದೆ ಗೋಸೇವೆಯ ಈ ಮಹಾ ಯಾಗದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೊಡಗಿಸಿಕೊಂಡ ನಿಷ್ಠಾವಂತ ಸ್ವಯಂಸೇವಕರು. ಇವರ ಸೇವೆ ತುಲನಾತೀತ. ಮಠದ ವತಿಯಿಂದ ನಡೆಯುತ್ತಿರುವ ಹದಿನೈದು ಮೇವು ವಿತರಣಾ ಕೇಂದ್ರದ ಸಂಪೂರ್ಣ ಜವಾಬ್ದಾರಿ ಇವರದ್ದೆ. ಆ ಹದಿನೈದೂ ಕೇಂದ್ರಗಳಿಗೆ ಮೇವು ಸರಿಯಾದ ಸಮಯದಲ್ಲಿ ಮತ್ತೆ ಸರಿಯಾದ ಪ್ರಮಾಣದಲ್ಲಿ ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಒಂದು ಟ್ರಕ್ ಮೇವು ಬಂದರೆ ಅದನ್ನ ಸುಮಾರು ಮೂರರಿಂದ ನಾಲ್ಕು ಕೇಂದ್ರಗಳಿಗೆ ವಿಂಗಡಿಸಿ ಅವುಗಳು ಸರಿಯಾದ ಸಮಯದಲ್ಲಿ ನಿಗದಿ ಪಡಿಸಿದ ವಿತರಣಾ ಕೇಂದ್ರಗಳಿಗೆ ತಲುಪಿಸಬೇಕಾದ ಜವಬ್ದಾರಿ ಇವರದ್ದೆ. ಎಷ್ಟೋ ಸಂದರ್ಭದಲ್ಲಿ ಮೇವು ಹೊತ್ತು ಬರುತ್ತಿದ್ದ ಟ್ರಕ್ಕುಗಳು ಮಾರ್ಗ ಮಧ್ಯ ಹಾಳಾಗಿ ಇಲ್ಲ ಹೂತುಹೋಗಿ ಇನ್ನೊಂದು ವಾಹನ ಮುಖೇನ ಮೇವುಗಳನ್ನ ಸಾಗಿಸಬೇಕಾದ ಪ್ರಮೇಯಗಳು ಬಂದೊದಗಿದೆ. ಇಷ್ಟೆ ಅಲ್ಲಾ.. ಆ ಹದಿನೈದು ಮೇವು ವಿತರಣಾ ಕೇಂದ್ರಗಳಿಗೆ ಸಂಬಂಧ ಪಟ್ಟ ಹಸುಗಳ ಯೋಗಕ್ಷೇಮವೂ ಇವರೇ ನೋಡಿಕೊಳ್ಳಬೇಕು. ಅಗತ್ಯ ಬಿದ್ದಾಗ ಶಿಬಿರದಿಂದ ದೂರದ ಹಳ್ಳಿಗಳಿಂದ ಪಶು ವೈದ್ಯರನ್ನ ಕರೆತಂದು ಇಡೀ ರಾತ್ರಿಯೆಲ್ಲಾ ಹಸುಗಳ ಬಳಿಯೇ ಕಾಲ ಕಳೆದು ಕಳೆದ ಉದಾಹರಣೆಗಳು ಬಹಳಷ್ಟಿವೆ. ಇಂತಹ ನಿಸ್ವಾರ್ಥ ಸ್ವಯಂಸೇವಕರ ತಪಸ್ಸಿನ ಫಲದಿಂದ ಹಸುಗಳ ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದು, ರೈತರು ತುಸು ನೆಮ್ಮದಿಯಿಂದ ಇದ್ದಾರೆ.

ಗೋರಕ್ಷಣೆಯ ಈ ಕೆಲಸದಲ್ಲಿ ಕೇವಲ ಸೋಶಿಯಲ್ ಮೀಡಿಯಾ ಕ್ಯಾಂಪೈನ್ ಮಾಡಿದ್ದ ನಮಗೆ ಅಲ್ಲಿನ ನೈಜ ವಸ್ತು ಸ್ಥಿತಿ ತಿಳಿಯಲು ಕುತೂಹಲ ತವಕ ಎರಡೂ ಹೆಚ್ಚಿತು. ಹಾಗಾಗಿ ನಾನೂ ಗಿರೀಶ್ ಆಳ್ವಾ ಮತ್ತೆ ಅಕ್ಷತಾ ಭಟ್ ಮೂರು ಜನ ಒಂದು ಶನಿವಾರ ಬೆಟ್ಟದತ್ತ ಹೊರಟೆವು. ನಾವು ಅಂದುಕೊಂಡಿದ್ದು ಬೆಳಿಗ್ಗೆ ಸುಮಾರು ೮ ಗಂಟೆಯ ಹೊತ್ತಿಗೆ ನಾವು ಕೌದಳ್ಳಿಯಲ್ಲಿದ್ದು ಆಕಳುಗಳಿಗೆ ಮೇವನ್ನ ವಿತರಿಸುವುದನ್ನ ನಾವೇ ನೋಡಬೇಕು ಅಥವಾ ಸಾಧ್ಯ ಆದರೆ ನಾವೇ ವಿತರಿಸಬೇಕು ಅಂತ. ಆದ್ರೆ ಹೊರಡುವಾಗ ಕೊಂಚ ವಿಳಂಬವಾಯಿತು.. ಮಧ್ಯೆ ರಸ್ತೆಯೂ ಸರಿ ಇರಲಿಲ್ಲ. ಜೊತೆಗೆ ಅಲ್ಲಿದ್ದ ನಮ್ಮ ಸ್ನೇಹಿತರನ್ನ ಸಂಪರ್ಕಿಸಲು ಮೊಬೈಲ್ ನೆಟ್ವರ್ಕ್ ಕೂಡ ಸಿಗುತ್ತಿರಲಿಲ್ಲ. ಅಂತೂ ಎಂಟು ಗಂಟೆಗೆ ತಲುಪಬೇಕಿದ್ದ ನಾವು ಸುಮಾರು ಹತ್ತು ಗಂಟೆಗೆ ಕೌದಳ್ಳಿ ಮೇವು ವಿತರಣಾ ಕೇಂದ್ರವನ್ನ  ತಲುಪಿದೆವು.

ಅಲ್ಲೆ ದಾರಿ ಬದಿಯಲ್ಲಿ ನಮ್ಮ ‌ಕಾರನ್ನ ನಿಲ್ಲಿಸಿ ರಸ್ತೆಯಿಂದ ಕಾಲ್ನಡಿಗೆ ದೂರದಲ್ಲಿದ್ದ ವಿತರಣಾ ಕೇಂದ್ರಕ್ಕೆ ಬಂದಾಗ ನಮಗೆ ಕಾಣಿಸಿದ್ದು    ಸಾವಿರ ಆಕಳುಗಳು. ಆಗಲೇ ಬಹಳಷ್ಟು ಹಸುಗಳು ಮೇವನ್ನ ತಿಂದು ತಮ್ಮ ದೊಡ್ಡಿಗೆ ಹಿಂತಿರುಗಿದ್ದವು. ನನಗಂತೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗೋವುಗಳ ಹಿಂಡನ್ನು ನೋಡಿದಾಗ ಸಂತೋಷ ದುಃಖ ಆಶ್ಚರ್ಯ ಎಲ್ಲಾ ಭಾವವೂ ಒಟ್ಟಿಗೆ ಬಂದವು. ಅಷ್ಟೊಂದು ಸಂಖ್ಯೆಯಲ್ಲಿ ಹಸುಗಳನ್ನ ಜೀವನದಲ್ಲಿ ನೋಡಿದ್ದೇ ಮೊದಲು. ಇನ್ನೊಮ್ಮೆ ಅವುಗಳ ಹಿಂಡಿಗೆ ದೃಷ್ಟಿ ಹಾಯಿಸಿದಾಗ ಗೋವುಗಳ ಪರಿಸ್ಥಿತಿ ಕಂಡು ಮರುಕ ಹುಟ್ಟಿತು. ಬರೀ ಮೂಳೆ ಚರ್ಮಗಳ ಹಂದರ. ಇಷ್ಟೊತ್ತಿಗಾಗಲೆ ಅಲ್ಲಿದ್ದ ಗ್ರಾಮಸ್ಥರು ನಮ್ಮನ್ನ‌ ಗಮನಿಸಿ ನಮ್ಮ ಬಳಿಗೆ ಬಂದರು. ಆಗ ನಾವು ಮಠದ ಕಡೆಯವರು ಹಸುಗಳ ಮೇವಿನ ಸಲುವಾಗಿ ನಾವೂ ಮಠದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ದೇವದೂತರನ್ನ ನೋಡಿದ ಹಾಗೆ ನೋಡುತಿದ್ದರು.. ಅದು ಅವರ ಮುಖಭಾವದಿಂದ ಸ್ಪಷ್ಟವಾಗಿ ಕಾಣುತಿತ್ತು. ನಾವು ಹಾಗೆಯೇ ಒಂದು ಸುತ್ತು ಮೇಯುತ್ತಿದ್ದ ಗೋವುಗಳ ಮಧ್ಯೆ ಹೋದೆವು, ಎಲ್ಲವೂ ಹಸಿ ಜೋಳದ ಹುಲ್ಲು. ಅದು ಅಂದು ಬೆಳಿಗ್ಗೆ ಬಂದ ಲೋಡಂತೆ. ಗ್ರಾಮಸ್ಥರು ಆಡಿಕೊಳ್ಳುತಿದ್ದ ಮಾತಿನಿಂದ ತಿಳಿಯಿತು..

ತುಸು ಬಿಸಿಲಿನಿಂದ ತಂಪಿಗೆ ಬಂದು ನಿಂತ ನಾವು, ಅಲ್ಲಿದ್ದ ಗ್ರಾಮಸ್ಥರನ್ನ ಮಾತನಾಡಿಸಿದಾಗ ಅವರ ನೋವು ದುಃಖ ಸಂಕಟಗಳ ನಿಜವಾದ ಅರಿವು ನಮಗಾಯಿತು. ರಾಮಚಂದ್ರಾಪುರ ಮಠ ನೆರವಿನ ಹಸ್ತ ಚಾಚದಿದ್ದಲ್ಲಿ ಇಂದು ಸಾವಿರಾರು ಹಸುಗಳ ಮಾರಣ ಹೋಮವೇ ಆಗಿರೋದು, ಇಲ್ಲ ಸರ್ಕಾರಿ ಅಧಿಕಾರಿಗಳೇ ಮೇವಿನ ಕೊರತೆಯ ನೆಪ ಒಡ್ಡಿ ಹಸುಗಳನ್ನ‌ ಕಸಾಯಿ ಖಾನೆಗೆ ಕಳಿಸಿರೋರು. ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣಲ್ಲಿ ಮಠಾಧೀಶರ ಬಗ್ಗೆ ಮಠದ ಬಗ್ಗೆ ಕೃತಾರ್ಥ ಭಾವ ಇದೆ. ಅದು ಅವರ ಮಾತಲ್ಲೇ ಗೋಚರಿಸುತ್ತೆ.

ನಾವು ಇತರರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಒರ್ವ ವಯೋ ವೃದ್ಧರು ನಮ್ಮ ಬಳಿ ಬಂದು, ಅವರು ಪಟ್ಟ ಬವಣೆಯನ್ನ ಹಂಚಿಕೊಂಡರು. ಅವರ ಹೆಸರು ದೊಡ್ಡಕಾಳ, ಕೌದಳ್ಳಿಯವರು. ಸಮಾರು ಐವತ್ತು ಹಸುಗಳನ್ನ ಸಾಕಿದ್ರು. ಈ ಬರದ ಪರಿಸ್ಥಿತಿಯಲ್ಲಿ ನಾಲ್ಕು ಹಸು ಪ್ರಾಣ ಕಳೆದುಕೊಂಡಿದ್ದಾವೆ. ಈಗ ಇವರ ಬಳಿ ಇರೋದು ಬರೇ ನಲವತ್ತಾರು ಹಸುಗಳು. ಸುಮಾರು ಮೂವತ್ತು ವರ್ಷಗಳಿಂದ ಇವರು ಹಸುಗಳನ್ನ ಸಾಕಿಕೊಂಡು ಬರ್ತಿದ್ದಾರೆ. ಆದ್ರೆ ಇತ್ತೀಚೆಗೆ ಎರಡು ಮೂರು ವರ್ಷಗಳಿಂದ ಈ ಬರ ಮತ್ತೆ ಕಾಯಂ ಆಗಿ ದನಗಳನ್ನ ಮೇಯಿಸಲು ಹೋಗುತ್ತಿದ್ದ ಕಾಡಿಗೆ ಬೇಲಿ ಹಾಕಿ ಹಸುಗಳಿಗೆ ಮೇವೆ ಇಲ್ಲದಂತೆ ಮಾಡಿದ ಸಂದರ್ಭದಲ್ಲಿ ಇವರದ್ದು, ಇವರು ಸಾಕಿರುವ ಹಸುವಿನದ್ದು ನರಕ ಯಾತನೆ. ಇವರು ಹಸುಗಳನ್ನ ಮೇಯಿಸಲು ಬೆಟ್ಟಕ್ಕೆ ಒಯ್ದಾಗ ಅಲ್ಲಿನ ವನ ಪಾಲಕರು ಇವರನ್ನ ಮನಸೋ ಇಚ್ಚೆ ತಳಿಸಿ ಇವರ ವಯಸ್ಸಿಗೂ ಬೆಲೆ ಕೊಡದೆ ವಾಚಾಮಗೋಚರವಾಗಿ ಇವರ ವಂಶವನ್ನೆಲ್ಲಾ ಹೀಯಾಳಿಸಿ ಅಲ್ಲೇ ಅಸುನೀಗಿದ ಗೋವುಗಳನ್ನು ಮಣ್ಣು ಮಾಡಲೂ ಬಿಡದೆ ಕಾಡಿನಿಂದ ಹೊರದಬ್ಬಿದ್ದಾರೆ.. ಇದನ್ನ ಹೇಳುವಷ್ಟರಲ್ಲಿ ಆ ಹಿರಿಯ ಜೀವ ಅತ್ತು ನೀರಾಯಿತು. ಬ್ರಿಟಿಷ್ ಸಾಮ್ರಾಜ್ಯದ ಕಾಲದಲ್ಲೂ ನಮಗೆ ಪಾಸುಗಳನ್ನ ಕೊಟ್ಟು ಕಾಡಿನಲ್ಲಿ ದನಗಳನ್ನ ಮೇಯಿಸಲು ಅವಕಾಶ ಕಲ್ಪಿಸುತ್ತಿದ್ದರು. ಈಗಿನವರು ಅದಕ್ಕಿಂತ ಕಡೆ. ಇಂತಹಾ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು? ಗೋವುಗಳಿಲ್ಲದೆ ನಮ್ಮ ಬಾಳಿಲ್ಲ. ಇದು ಬಿಟ್ಟು ಬೇರೆ ಉದ್ಯೋಗ ನಮಗೆ ಗೊತ್ತಿಲ್ಲ. ಸರ್ಕಾರ ನಾವು ಆರಿಸಿದ ಚುನಾಯಿತ ಪ್ರತಿನಿಧಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲಾ ನಾವು ಏನು ಮಾಡಬೇಕು ನೀವೇ ಹೇಳಿ. ಅಂದು ಆ ಮಠಾಧೀಶರು ನಮ್ಮ ನೆರವಿಗೆ ಬಾರದೆ ಹೋಗಿದ್ದರೆ ಇಂದು ನಮ್ಮ ಊರುಗಳಲ್ಲಿ ಹಸುಗಳ ಮಾರಣ ಹೋಮವೇ ನಡೆದು ಹೋಗಿರುವುದು ಎಂದರು. ಇವರ ನೋವಿನ ಕಥೆ ಕೇಳಿ ಮುಗಿಸುವಾಗ ನಮ್ಮ ಕಣ್ಣ ಅಂಚಿನಲ್ಲಿ ನೀರು ಜಿನುಗಿತ್ತು.

ಇಷ್ಟು ಹೊತ್ತಿಗೆ ಮಠದ ಸ್ವಯಂಸೇವಕರಲ್ಲಿ ಒಬ್ಬರಾಗಿರುವ ಹೆಗ್ಗಡೆಯವರು ನಮ್ಮ ಕಣ್ಣಿಗೆ ಬಿದ್ದರು. ಅವರಿಗೆ ನಮ್ಮ ಮುಖ ಪರಿಚಯವಿರಲಿಲ್ಲಾ, ನಮಗೆ ಅವರ ಮುಖ ಪರಿಚಯವಿರಲಿಲ್ಲ. ನಾವೇ ಕೇಳಿ ಮಾತನಾಡಿಸಿ ಅವರ ಪರಿಚಯ ಮಾಡಿಕೊಂಡೆವು. ಹಾಗೆಯೆ ಅವರಿಂದ ಈ ಮೇವಿನ ವಿತರಣೆಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಕೊಂಡೆವು. ಪ್ರತಿ ಮೇವು ವಿತರಣಾ ಕೇಂದ್ರಕ್ಕೂ ಪ್ರತೀ ದಿನ ಟ್ರಕ್ಕಿನಲ್ಲಿ ಮೇವಿನ ಸರಬರಾಜು ಮಾಡಬೇಕು. ಅನಾರೋಗ್ಯ ಪೀಡಿತ ಹಸುಗಳಿಗೆ ಪಶು ವೈದ್ಯರನ್ನ ಕರೆಯಿಸಿ ಚಿಕಿತ್ಸೆ ಕೊಡಿಸಬೇಕು. ಮೇವಿಗಾಗಿ ಕೆಲವೊಮ್ಮೆ ರೈತರ ನಡುವೆ ನಡೆಯುವ ಜಗಳಗಳನ್ನು ಬಗೆಹರಿಸಬೇಕು. ಒಟ್ಟಿನಲ್ಲಿ ಭಾರಿ ಜವಾಬ್ದಾರಿ ಮತ್ತೆ ತಲೆ ನೋವಿನ ಕೆಲಸ. ಆದರೆ ನಮ್ಮ ಇದಾವುದರಿಂದಲೂ ಕೊಂಚವೂ ಬೇಸರ ಪಡದೆ ಸದಾ ಲವಲವಿಕೆಯಿಂದ ಇರುವ ವ್ಯಕ್ತಿತ್ವ.

ಇಷ್ಟು ಹೊತ್ತಿಗಾಗಲೇ ಗಂಟೆ ಒಂದಾಗಿತ್ತು. ನಮ್ಮನ್ನ ಮಧ್ಯಾಹ್ನ ಊಟಕ್ಕೆ ರಾಮಾಪುರದಲ್ಲಿರುವ ಶಿಬಿರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ಬೆಂಗಳೂರಿಗೆ ಹೊರೆಟೆವು. ಕಾರಿನಲ್ಲಿ ಕೂತ ನಮ್ಮಲ್ಲಿ ಒಂದು ಸಾರ್ಥಕಭಾವ ಇತ್ತು

ಈ ಹದಿನಾರು ಮಂದಿ ಮತ್ತೆ ಬಹಳಷ್ಟು ಮಂದಿ ಸ್ವಯಂಸೇವಕರೊಂದಿಗಿನ ನನ್ನ ಅನುಭವ ಆತ್ಮಕ್ಕೆ ಹತ್ತಿರವಾದದ್ದು. ಇದರಿಂದ ನಾನು ವೈಯಕ್ತಿಕವಾಗಿ ಸಾಕಷ್ಟು ಕಲಿತೆ. ನಿಜ ಅರ್ಥದಲ್ಲಿ ಗೋವಿನ ಪ್ರಾಣ ರಕ್ಷಣೆಯಲ್ಲಿ ಭಾಗಿಯಾದ ಕೃತಾರ್ಥ ಭಾವ ನನಗಿದೆ.

1 ಟಿಪ್ಪಣಿ Post a comment
  1. ಜೂನ್ 12 2017

    good information sharing blog
    District News

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments