ನಮ್ಮೂರ ಹಬ್ಬ : ನಮ್ಮೂರ ಜಾತ್ರೆ
– ಆದರ್ಶ
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲೇಖನ
ಜಾತ್ರೆಯೆಂದರೆ ಸಾಕು.. ಥಟ್ಟನೆ ಮನಸ್ಸು ಬಾಲ್ಯಕ್ಕೋಡುತ್ತದೆ!
ಅಪ್ಪನ ಬೆನ್ನುಹತ್ತಿ ಹೆಗಲ ಮೇಲೆ ಕೂತು ಪುಟ್ಟ ಕಣ್ಣುಗಳನ್ನ ಇಷ್ಟಗಲ ಅರಳಿಸಿ ನೋಡಿದ್ದ ಇಡೀ ಜಾತ್ರೆಯ ಪನೋರಮಿಕ್ ನೋಟ ಮತ್ತೆ ಅಷ್ಟೇ ರಂಗು ರಂಗಾಗಿ ತೆರೆದುಕೊಳ್ಳುತ್ತದೆ..
ಶಿವಮೊಗ್ಗದಿಂದ ಸಾಗರ, ಹೊಸನಗರ, ಶಿಕಾರಿಪುರಗಳಿಗೆ ಹೋಗುವ ಮಾರ್ಗದಲ್ಲಿ ಮಲೆನಾಡಿನ ಪ್ರವೇಶ ದ್ವಾರದಂತಿರುವ ನಮ್ಮೂರು “ಆನಂದಪುರ”ದ ಕಡ್ಲೆಹಕ್ಲು ಮಾರಿಕಾಂಬಾ ಜಾತ್ರೆಯೆಂದರೆ ನಮ್ಮ ಮಟ್ಟಿಗೆ ಅದು ಬಹುದೊಡ್ಡ ಹಬ್ಬ! ಶಿರಸಿ ಮಾರಿಕಾಂಬಾ, ಸಾಗರದ ಮಾರಿಕಾಂಬಾ, ಆನಂದಪುರದ ಕಡ್ಲೆಹಕ್ಲು ಮಾರಿಕಾಂಬಾ ಈ ಮೂವರೂ ಅಕ್ಕ ತಂಗಿಯರೆಂಬ ಪ್ರತೀತಿಯಿದೆ. ಹಾಗಾಗಿ 3 ವರ್ಷಕ್ಕೊಮ್ಮೆ ಮೊದಲಿಗೆ ಶಿರಸಿಯ ಹಿರಿಯಕ್ಕನ ಜಾತ್ರೆ, ನಂತರ ಸಾಗರದ ಜಾತ್ರೆ, ಕೊನೆಯಲ್ಲಿ ನಮ್ಮೂರ ಜಾತ್ರೆ ನಡೆಯುತ್ತದೆ. ನಮ್ಮ ಸಂಸ್ಕೃತಿಯಲ್ಲಿ ದೈವವನ್ನೂ ಮರ್ತ್ಯ ಸಂಬಂಧಗಳಲ್ಲಿ(ಅಕ್ಕ-ತಂಗಿ) ಬೆಸೆದು ವಾತ್ಸಲ್ಯದಿಂದ ಕಾಣುವುದು ಸೋಜಿಗವಲ್ಲದೇ ಮತ್ತೇನು?!
ಈಗ ಜಾತ್ರೆಯಲ್ಲಿ ಕಳೆದುಹೋಗೋ ಮೊದಲು ನಮ್ಮೂರಿನ ಹೃದಯಭಾಗ ಸಂತೆಮಾಳದಲ್ಲಿರುವ ಮಾರಿಗುಡಿಗೆ ಹೋಗಿ ಅಮ್ಮನ ದರ್ಶನ ಮಾಡಿಬಿಡೋಣ ಬನ್ನಿ! ಗುಡಿ ಅಂದ್ರೆ ಮತ್ತೇನಿಲ್ಲ.. ಒಂದು ಪುರಾತನ ಅಶ್ವತ್ಥ ವೃಕ್ಷದ ಸುತ್ತ ಚಿಕ್ಕ ಕಟ್ಟೆ.. ಮರದ ಬುಡದಲ್ಲಿ ಅರಿಶಿನ-ಕುಂಕುಮ ಲೇಪಿತವಾದ ಗುಂಡು ಕಲ್ಲು ರೂಪಿ ಮಾರಮ್ಮ.. ನಾಲ್ಕಾರು ತ್ರಿಶೂಲಗಳು.. ಇಷ್ಟೇ! ಜಾತ್ರೆ ಸಂದರ್ಭ ಹೊರತುಪಡಿಸಿದರೆ ಬಾಕಿಯಂತೆ ಇಲ್ಲಿ ಯಾವುದೇ ಪೂಜೆ-ಪುನಸ್ಕಾರಗಳು ನಡೆಯೋದಿಲ್ಲ. ಊರಿನ ಹೆಣ್ಣುಮಕ್ಕಳು ಯಾವುದಾದರೂ ಶುಕ್ರವಾರ/ಮಂಗಳವಾರಗಳಂದು ಅಥವಾ ಮಕ್ಕಳಿಗೆ ಸಿಡುಬು ಇತ್ಯಾದಿ ಖಾಯಿಲೆಯಾದಾಗ ಮಾತ್ರ ಅಮ್ಮನನ್ನ ನೆನಪಿಸಿಕೊಂಡು ಹರಕೆ ಹೊತ್ತು ತೆಂಗಿನಕಾಯಿ, ಮೊಸರನ್ನ ನೈವೇದ್ಯ ಮಾಡುತ್ತಾರಷ್ಟೇ.. ಇಷ್ಟರಿಂದಲೇ ಸಂತೃಪ್ತಳಾಗುವ ಮಾರಮ್ಮ ಯಾವುದೇ ಮಹಾಮಾರಿ ಊರೊಳೊಗೆ ಕಾಲಿಡದಂತೆ ಕಾಯುತ್ತಾ, ಭಕ್ತಮಕ್ಕಳನ್ನು ಹರಸುತ್ತಾ ಇಲ್ಲಿ ನೆಲೆಸಿದ್ದಾಳೆ. ಉಗ್ರ ಕ್ಷುದ್ರದೇವತೆಯಾಗಿ, ಸೌಮ್ಯ ಮಾತೃಸ್ವರೂಪಿಯಾಗಿ ಅವರವರ ಭಾವಕ್ಕೆ ತಕ್ಕಂತೆ ಒಲಿಯುವ ದೇವಿಯೆಂದರೆ ಭಯ, ಭಕ್ತಿ, ಪ್ರೀತಿ, ನಂಬಿಕೆ ಎಲ್ಲವೂ ಒಮ್ಮೆಗೇ ಉಂಟಾಗುತ್ತವೆ. ಈ ಮಾರಿಗುಡಿಯನ್ನ ಬಿಟ್ಟರೆ ಊರಾಚೆ ಬಯಲಲ್ಲಿ ಮಾರಮ್ಮನ ತವರು ಮನೆಯೆಂಬೊಂದು ಕಟ್ಟೆ ಥರದ ಜಾಗವಿದೆ. ಜಾತ್ರೆಯಲ್ಲಲ್ಲದೇ ಉಳಿದ ದಿನಗಳಲ್ಲಿ ಊರಿನ ಯಾರೂ ಇತ್ತ ಸುಳಿಯುವುದಿಲ್ಲ.
ಸರಿ, ಮಾರಮ್ಮನ ದರ್ಶನವಾಯ್ತಲ್ಲ.. ಇನ್ನು ಜಾತ್ರೆ ವಿಚಾರ ಕೇಳಿ. ಜಾತ್ರೆಯ ಮೊದಲ ಹಂತವಾಗಿ ಊರಿನ ಪ್ರಮುಖರೆಲ್ಲ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಸೇರಿ ಉತ್ಸವದ ದಿನಾಂಕವನ್ನ ನಿಶ್ಚಯ ಮಾಡ್ತಾರೆ. ವಿಶೇಷವೆಂದರೆ ಚುನಾವಣೆ ಸಮಯದಲ್ಲಿ ಎಷ್ಟೇ ಕಚ್ಚಾಡಿ, ಕೆಸರೆರಚಾಡಿದ್ದರೂ ಜಾತ್ರೆಯ ವಿಷಯದಲ್ಲಿ ಮಾತ್ರ ಎಲ್ಲ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಪಕ್ಷ, ಧರ್ಮ, ಜಾತಿ ಎಲ್ಲಕ್ಕೂ ಅತೀತರಾಗಿ ಜನರು ಒಂದಾಗುತ್ತಾರೆ.. ಅಮ್ಮನ ಮಕ್ಕಳಷ್ಟೇ ಆಗಿ ಉತ್ಸವ ನಡೆಸುತ್ತಾರೆ!
ದಿನಾಂಕ ನಿಗದಿಯಾಯಿತೆಂದರೆ ಜಾತ್ರೆಗೆ ನಾಂದಿ ಹಾಡಿದಂತೆಯೇ ಲೆಕ್ಕ. ನಂತರದ ಕೆಲಸ ಕೋಣದ ಆಯ್ಕೆ! ಆಯ್ಕೆಯೆಂದರೆ ಹೊಸದಾಗಿ ಹುಡುಕಿ ತರುವುದೇನಿಲ್ಲ.. ಹಿಂದಿನ ಜಾತ್ರೆಯಲ್ಲೇ ಒಂದು ಕೋಣವನ್ನು ಮುಂದಿನ ಜಾತ್ರೆಗೆ ಅಂತ ಬಿಟ್ಟು ಬೆಳೆಸಿ ಆಗಿರತ್ತೆ. ಈಗ ಅದರ ಮೈ ತೊಳೆದು ಸಿಂಗರಿಸಿ ಪ್ರತಿಯೊಂದು ಮನೆ ಬಾಗಿಲಿಗೂ ಕರೆತಂದು ಚಂದ ವಸೂಲಿ ಮಾಡುತ್ತಾರೆ. ಎಲ್ಲ ಮನೆಯವರೂ ಅದರ ಹಣೆಗೆ ಎಣ್ಣೆ ಹಚ್ಚಿ ಪೂಜೆ ಮಾಡಿ ಕಳಿಸುವುದು ಸಂಪ್ರದಾಯ. ಕೋಣ ಮನೆಗೆ ಬಂದು ಹೋಯಿತೆಂದರೆ ಅಧಿಕೃತವಾಗಿ ಜಾತ್ರೆಯ ಸಂಭ್ರಮ ಶುರುವಾಯಿತು ಅಂತಲೇ! ಜನರಲ್ಲಿ ಏನೋ ಉತ್ಸಾಹ, ಲವಲವಿಕೆ.. ಹಾಗೇ ಕೋಣಕ್ಕೂ ಖುಷಿಯಾಗುತ್ತೇನೋ! ತನಗೂ ಪೂಜೆ ಮಾಡ್ತಿದ್ದಾರೆ, ಹೊಟ್ಟೆತುಂಬ ತಿನ್ನಲಿಕ್ಕೆ ಕೊಡ್ತಿದ್ದಾರೆ ಅಂತ.. ಜಾತ್ರೆಯ ದಿನ ತನ್ನ ಕೊರಳು ಉರುಳಿ ಬೀಳತ್ತೇಂತ ಅದಕ್ಕೆಲ್ಲಿ ಕನಸಾಗ್ಬೇಕು ಪಾಪ..!
ಕೋಣದ ಮನೆ ಮನೆ ಭೇಟಿ ಕಾರ್ಯಕ್ರಮ ಮುಗಿದ ಮೇಲೆ ದೂರದೂರುಗಳಲ್ಲಿ ನೆಲೆಸಿರುವ ನೆಂಟರಿಗೆಲ್ಲ ಜಾತ್ರೆಗೆ ಬನ್ನಿ ಅಂತ ಕರೆ ಕಳಿಸುವ ಕೆಲಸ. ಊರಹಬ್ಬ, ಜಾತ್ರೆ, ಉತ್ಸವಗಳೆಂದರೆ ಅದು ಕಾರಣಾಂತರಗಳಿಂದ ಊರುಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ನೆಲೆಸಿರುವ ಬಂಧು-ಬಾಂಧವರು, ಸ್ನೇಹಿತರೆಲ್ಲ ವರ್ಷಕ್ಕೊಮ್ಮೆಯಾದರೂ ತಮ್ಮೂರಿಗೆ ಬಂದು ತಮ್ಮ ಜನರೊಂದಿಗೆ ಕೂಡಲು, ಬೆರೆಯಲು ಇರುವ ಖುಷಿಯ ಅವಕಾಶವೇ ಸರಿ! ಇಂಥ ಆಚರಣೆಗಳ ಹಿಂದೆ ನಮ್ಮ ಪೂರ್ವಿಕರ ಆಶಯವೂ ಬಹುಷಃ ಇದೇ ಇದ್ದಿರಬೇಕು.
ಜಾತ್ರೆಯ ದಿನ ಸಮೀಪಿಸುತ್ತಿದ್ದ ಹಾಗೇ ಆಟೋ ಒಂದಕ್ಕೆ ಮೈಕ್ ಸಿಕ್ಕಿಸಿಕೊಂಡು ಸುತ್ತಮುತ್ತಲ ಎಲ್ಲ ಹಳ್ಳಿಗಳಲ್ಲೂ ನಮ್ಮೂರಿನ ಶಂಕ್ರಣ್ಣ ಘೋಷಣೆ ಕೂಗುತ್ತಾ ಹೊರಟರೆಂದರೆ ಸಾಕು.. ಅವರ ಕಂಚಿನ ಕಂಠ, ಮಜವಾದ ಮಾತುಗಳು.. ಆತ್ಮೀಯ ಬಂಧುಗಳೇ, ಅಕ್ಕ ತಂಗಿಯರೇ, ಅಣ್ಣತಮ್ಮಂದಿರೇ, ಹುಡುಗ ಹುಡುಗಿಯರೇ, ಅಜ್ಜ ಅಜ್ಜಿಯರೇ! ಇದೇ ಮಾರ್ಚ್ 1,2 ಹಾಗೂ ಮೂರನೇ ತಾರೀಖು ಆನಂದಪುರದ ಶ್ರೀ ಕಡ್ಲೆಹಕ್ಲು ಮಾರಿಕಾಂಬಾ ಜಾತ್ರೆ….. ಅಂತೆಲ್ಲ ಸಾಗುವ ಅವರ ಮಾತಿನ ಶೈಲಿಯೇ ಚೆಂದ.
ಜಾತ್ರೆಗೆ ಒಂದು ವಾರ ಬಾಕಿಯಿದೆ ಎನ್ನುವಾಗ ಹಬ್ಬದ ಸಂತೆ ಏರ್ಪಡಿಸ್ತಾರೆ. ನಮ್ಮೂರಿನ ಸಾಮಾನ್ಯ ಸಂತೆ ಪ್ರತೀ ಬುಧವಾರ ನಡೆಯುತ್ತದಾದರೂ ಇದು ಜಾತ್ರೆಯ ಪ್ರಯುಕ್ತ ವಿಶೇಷ ಸಂತೆ. ಜಾತ್ರೆಯ ದಿನ ಬರಲಿರುವ ನೆಂಟರ ಉದರ ಪೋಷಣೆಗಾಗಿ ಈ ಸಂತೆಯಲ್ಲಿ ಊರಿನ ಜನರು ಜೋರಾಗೇ ವ್ಯಾಪಾರ ನಡೆಸುತ್ತಾರೆ. ಬೇರೆ ಊರುಗಳ ವಣಿಕರೂ ಬಂದು ಮಾಳದಲ್ಲಿ ಟೆಂಟ್ ಹಾಕಿ ಅಂಗಡಿ ಇಡುತ್ತಾರೆ. ಊರಾಚೆ ಬಯಲಿನಲ್ಲಿ ತವರು ಮನೆ ಜಾಗ ಮತ್ತು ಗಂಡನಮನೆಯೆಂಬ ಮಾರಿಗುಡಿಯಲ್ಲಿ ದೊಡ್ಡ ದೊಡ್ಡ ಪೆಂಡಾಲ್ ಏಳುತ್ತವೆ. ಬೆಳಿಗ್ಗೆ ಶಾಲೆಗೆ ಹೋಗುವಾಗ ಬಟಾಬಯಲಿದ್ದ ಸ್ಥಳದಲ್ಲಿ ಸಂಜೆ ಮನೆಗೆ ವಾಪಸ್ಸಾಗುವ ಹೊತ್ತಿಗೆ ಎದ್ದಿರುತ್ತಿದ್ದ ಕಮಾನು, ಪೆಂಡಾಲು, ಗೋಪುರ, ಶಾಮಿಯಾನಗಳನ್ನ ನೋಡಿ ಅತೀವ ಆಶ್ಚರ್ಯಕ್ಕೆ ಒಳಗಾಗ್ತಿದ್ದ ನಮಗೆ ಯಾವುದೋ ಮಾಯಾಲೋಕಕ್ಕೆ ಕಾಲಿಟ್ಟ ಅನುಭವ ಅದು!
ಉತ್ಸವದ ಪೂಜಾ ಕೈಂಕರ್ಯ ಒಟ್ಟು ಮೂರು ದಿನ ನಡೆಯುತ್ತದೆ. ಮೊದಲನೇ ದಿನ ತವರು ಮನೆ ಪೆಂಡಾಲಿನಲ್ಲಿ ಮರದಲ್ಲಿ ಮಾಡಿದ ಮಾರಿಕಾಂಬೆಯ ದೊಡ್ಡ ಮೂರ್ತಿಯನ್ನು ಪ್ರತಿಷ್ಠಾಪಿಸಿರುತ್ತಾರೆ. ಅದನ್ನು ಕೆತ್ತುವ ಕುಶಲಿಗಳ ವರ್ಗವೇ ಬೇರೆಯಿದೆ. ನಾಲ್ಕಾಳೆತ್ತರದ ರಕ್ತವರ್ಣದ ಕಾಷ್ಟ ಮೂರ್ತಿ ನಾಲಿಗೆ ಹೊರಚಾಚಿ, ಕಣ್ಣರಳಿಸಿ ನಿಂತಿರುವುದನ್ನು ನೋಡುವಾಗ ರೌದ್ರ, ಸೌಮ್ಯ ಎರಡೂ ಭಾವಗಳು ಸಮನಾಗಿ ಮೇಳೈಸಿ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದ ಮೂರ್ತ ಸ್ವರೂಪವಾಗಿ, ಅದ್ವೈತದ ಪ್ರತೀಕವಾಗಿ ತಾಯಿಯ ಮುಖ ಗೋಚರಿಸುತ್ತದೆ.
ಕಾಷ್ಟ ಮೂರ್ತಿಯ ಸ್ಥಾಪನೆಯಾದ ನಂತರ ಜಾತ್ರೆಯ ಮೊದಲ ದಿನ ಸಂಜೆ ಬ್ರಾಹ್ಮಣ ಪುರೋಹಿತರು ಪ್ರಾಣಪ್ರತಿಷ್ಠೆ, ಆವಾಹನೆ, ಷೋಡಶೋಪಚಾರ ಪೂಜೆ ಇತ್ಯಾದಿಗಳನ್ನು ಸಾಂಗವಾಗಿ ನೆರವೇರಿಸುತ್ತಾರೆ. ಊರಿನ ಹೆಂಗಳೆಯರೆಲ್ಲ ತಾಯಿಯ ಉಡಿ ತುಂಬುವ ಮಂಗಳ ಸಾಮಗ್ರಿಗಳನ್ನ ಹೊತ್ತು ಉದ್ದದ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಮಹಾಮಂಗಳಾರತಿಯಾಗಿ ಪುರೋಹಿತರೆಲ್ಲ ವಿರಮಿಸಿದ ಮೇಲೆ ಹೆಣ್ಣುಮಕ್ಕಳ ಭಾವಪೂರ್ಣ ಆಚರಣೆಗಳು ಮೊದಲುಗೊಳ್ಳುತ್ತವೆ. ಗಂಡನ ಮನೆಗೆ ಹೊರಟು ನಿಂತ ಮಾರಮ್ಮನಿಗೆ ತವರು ಮನೆಯವರಾಗಿ ಮಡಿಲು ತುಂಬಿ ಸುಖವಾಗಿ ಹೋಗಿ ಬಾರಮ್ಮ ಎಂದು ಹಾರೈಸುತ್ತಾರೆ. ತಾಯಿ-ಮಕ್ಕಳ ಅಪ್ಪಟ ಮಧುರ ಬಾಂಧವ್ಯಕ್ಕೆ ಈ ಆಚರಣೆ ಇಂಬುಕೊಡುತ್ತದೆ.
ಉಡಿ ತುಂಬಿಸಿಕೊಂಡ ತಾಯಿ ಗಂಡನ ಮನೆಯೆಡೆಗೆ ಸಕಲ ರಾಜವೈಭವದೊಂದಿಗೆ ಉತ್ಸವದಲ್ಲಿ ಸಾಗುತ್ತಾಳೆ.. ರಾತ್ರಿ 11 ಗಂಟೆ ಸುಮಾರಿಗೆ ಉತ್ಸವ ಹೊರಟ ತಕ್ಷಣ ಒಂದೆಡೆ ನಾಲ್ಕಾರು ಕೋಳಿಗಳ ತಲೆ ಕಡಿದು ಬಲಿಯನ್ನ ಅರ್ಪಿಸಿದರೆ ಮತ್ತೊಂದೆಡೆ ಡೊಳ್ಳು ಕುಣಿತ, ವೀರಗಾಸೆ, ಛತ್ರಚಾಮರಗಳು, ಕೀಲುಕುದುರೆ, ಝಗಮಗ ದೀಪಗಳ ಬೆಳಕಲ್ಲಿ ಕುಣಿಯುವ ಪಾನಮತ್ತ ಜನರ ಮೆರವಣಿಗೆ ಎಲ್ಲವೂ ರಂಗೇರತೊಡಗುತ್ತವೆ.
ಜಾತ್ರೆಗೆಂದು ಬಿಟ್ಟ ಕೋಣವು ಉತ್ಸವದ ಜೊತೆಯಲ್ಲೇ ಠೀವಿಯಿಂದ ಹೆಜ್ಜೆ ಹಾಕುತ್ತದೆ.. ಮುಂಜಾನೆ 5 ಗಂಟೆ ಸುಮಾರಿಗೆ ಉತ್ಸವ ಗಂಡನ ಮನೆ ತಲುಪಿದಾಗ ಜನರ ಸಂಭ್ರಮ ಮುಗಿಲುಮುಟ್ಟಿದರೆ ಕಟುಕನ ಕತ್ತಿ ಕೋಣದ ಕತ್ತನ್ನು ಮುಟ್ಟುತ್ತದೆ! ಖಡ್ಗದ ಏಟಿಗೆ ಕೋಣದ ತಲೆ ಉರುಳಿ ಚಿಲ್ ಎಂದು ಬಿಸಿ ರಕ್ತ ಹಾರುತ್ತದೆ. ಪ್ರಾಣಿವಧೆ ನಿಷೇಧ ಕಾನೂನು ಜಾರಿಯಾದ ಮೇಲೆ ಈ ಆಚರಣೆಯು ಬಹಿರಂಗವಾಗಿ ಮಾಡಲ್ಪಡದೇ ಎಲ್ಲೋ ಕದ್ದು ಮುಚ್ಚಿ ನಡೆಯುತ್ತದೆ. ಪೊಲೀಸರೂ ಇದನ್ನು ತಪ್ಪಿಸುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಗಂಡನ ಮನೆಯಲ್ಲಿ ತಾಯಿಯ ಮೂರ್ತಿ ಪ್ರತಿಷ್ಠಾಪಿಸಿದ ಮೇಲೆ ಅತೀ ಕ್ರೂರವೆನಿಸುವ ಕ್ಷುದ್ರ ಪೂಜೆ ಜರುಗುತ್ತದೆ. ಅಂದು ಸಾತ್ವಿಕರ್ಯಾರೂ ಅತ್ತ ಸುಳಿಯುವುದಿಲ್ಲ. ಕೋಣದ ತಲೆಯನ್ನು ತಂದು ತಾಯಿಯ ಪಾದಗಳಲ್ಲಿಟ್ಟು ಅದರ ಮೇಲೆ ದೀಪ ಬೆಳಗಿಸಿ ರಕ್ತಷೇಚನ ಮಾಡುತ್ತಾರೆ. ಬಿದುರು ಬುಟ್ಟಿಯ ತುಂಬ ಅನ್ನ ಬಸಿದು ಅದಕ್ಕೆ ಕೋಣದ ರಕ್ತ ಕಲಸಿ ಊರ ಗಡಿಯ ಸುತ್ತ ಹರಡಿ ಬರಲಾಗುತ್ತದೆ. ಅದು ಊರಿಗೆ ರಕ್ಷೆಯ ಹಾಗೆ ಎಂದು ನಂಬಿಕೆ. ಆನಂತರ ಕೆಲವು ವರ್ಗಗಳ ಜನರು ಮೂರು ವರ್ಷಗಳಿಂದ ತಾವು ಕಟ್ಟಿಕೊಂಡಿದ್ದ ಹರಕೆಗಳನ್ನು ತೀರಿಸುವ ಸಲುವಾಗಿ ನೂರಾರು ಮೂಕಪ್ರಾಣಿಗಳನ್ನು ಬಲಿಕೊಟ್ಟು ಸಂತೆಮಾಳದ ನೆಲವನ್ನೆಲ್ಲ ರಕ್ತದಲ್ಲಿ ತೋಯಿಸಿಬಿಡುತ್ತಾರೆ. ಆ ದಿನ ಊರಿನ ತುಂಬಾ ಮಾಂಸದಡುಗೆಯ ವಾಸನೆ.. ಜಾತ್ರೆಗೆ ಬಂದ ನೆಂಟರ ಜೊತೆ ಜಬರ್ದಸ್ತಾಗಿ ಭರ್ಜರಿ ಬಾಡೂಟ ಸೇವನೆ.. ಅಂದು ಮಾತ್ರ ಶಾಖಾಹಾರಿಗಳು ಆ ಕೇರಿ/ಬೀದಿಗಳ ಕಡೆ ಮುಖ ಹಾಕುವ ಹಾಗಿಲ್ಲ!
ಜಾತ್ರೆಯ ಮೂರನೇ ದಿನ ಮತ್ತೆ ಬ್ರಾಹ್ಮಣರ ರಂಗ ಪ್ರವೇಶವಾಗಿ ಹೋಮ-ಹವನ, ಪೂರ್ಣಾಹುತಿ, ಪೂಜೆ, ಮಹಾ ಮಂಗಳಾರತಿಗಳೆಲ್ಲ ಸಂಪನ್ನಗೊಳ್ಳುತ್ತವೆ. ಬ್ರಾಹ್ಮಣರ ಮನೆಗಳಲ್ಲಿ ನೆಂಟರ ಜೊತೆ ಸಿಹಿ ಊಟ ಆಯಿತು ಅಂದರೆ ಅಲ್ಲಿಗೆ ಜಾತ್ರೆಯ ಪೂಜೆ, ಸಾಂಪ್ರದಾಯಿಕ ಆಚರಣೆಗಳೆಲ್ಲ ಬಹುಮಟ್ಟಿಗೆ ಮುಗಿದಂತೆಯೇ ಲೆಕ್ಕ! ಇನ್ನೇನಿದ್ದರೂ ಬೆಂಡು-ಬತ್ತಾಸು, ಸರ-ಬಳೆ, ಆಟಗಳ ಜಾತ್ರೆ ಶುರು! ಮಕ್ಕಳ ಪಾಲಿನ ಅಸಲಿ ಸಂಭ್ರಮ ಶುರುವಾಗುವುದೇ ಆಗ! ಸಂಜೆ ಬಾನಿನಂಚಿನಲ್ಲಿ ಸೂರ್ಯ ಕಾಣೆಯಾಗುತ್ತಿದ್ದಂತೆಯೇ ಊರ ಬೀದಿಗಳ ತುಂಬ ಚಿಕ್ಕ, ಪುಟ್ಟ, ದೊಡ್ಡ ವಿದ್ಯುತ್ ದೀಪಸೂರ್ಯರ ಝಗಮಗ ಕಾಣತೊಡಗಿ ಕಣ್ಣು ಕೋರೈಸುತ್ತದೆ! ಒಂದು ಬದಿಯಲ್ಲಿ ಬಗೆಬಗೆ ತಿಂಡಿ ತಿನಿಸುಗಳ ಅಂಗಡಿಗಳಾದರೆ ಇನ್ನೊಂದು ಬದಿಯಲ್ಲಿ ಆಟದ ಸಾಮಾನು, ಬಳೆ, ಸರ, ಓಲೆ ಇತ್ಯಾದಿ ಆಭರಣ, ಅಲಂಕಾರ ಸಾಮಗ್ರಿಗಳ ಭಂಡಾರಗಳು! ಮತ್ತೊಂದು ಕಡೆ ದೊಡ್ಡ ದೊಡ್ಡ ಆಟದ ಯಂತ್ರಗಳು.. ಜಿಯಾಂಟ್ ವ್ಹೀಲ್, ಕೊಲಂಬಸ್, ತಿರುಗಣೆ.. ಸರ್ಕಸ್, ಜಾದೂ ಪ್ರದರ್ಶನಗಳು! ಅಪ್ಪ ಅಮ್ಮನ ಕೈ ಹಿಡಿದು ಈ ಅಭಿನವ ಇಂದ್ರಲೋಕಕ್ಕೆ ಕಾಲಿಡುವ ಮಕ್ಕಳ ಕಣ್ಣುಗಳಲ್ಲಿ ಮುಗಿಯದ ಬೆರಗು, ಖುಷಿ, ಉತ್ಸಾಹ! ಹುಡುಗಿಯರ ಮಂದೆ ಬಣ್ಣಬಣ್ಣದ ಬಳೆಗಳ ಬೆನ್ನತ್ತಿ ಅಂಗಡಿಗಳನ್ನ ಅಲೆಯುತ್ತಿದ್ದರೆ ಛೇಡಿಸಿ ಕಾಡುವ ಹುಡುಗರ ದಂಡು ಇವರ ಹಿಂದೆ ಹಿಂದೆ! ಜಾತ್ರೆ ಎಂಬುದು ಸಂಭ್ರಮದ ಸಮಾನಾರ್ಥಕ ಪದವೇ ಸರಿ!
ಅಪ್ಪನಿಂದ ಮಂಜೂರಾದ 10 ರೂಪಾಯಿಯ ಬಜೆಟ್ಟು ತಾತನ ದಯೆಯಿಂದ 15 ರೂ.ಗಳಿಗೇರಿ ಅಷ್ಟರಲ್ಲೇ ಇಡೀ ಜಾತ್ರೆಯನ್ನೇ ಕೊಂಡುಕೊಳ್ಳುವವನ ಹಾಗೆ ಬೀಗಿದ್ದು ಇಂದಿಗೂ ಮನದಲ್ಲಿ ಅಚ್ಚ ಹಸಿರು! ರಂಗುರಂಗಿನ ಮಿಣಿ ಮಿಣಿ ದೀಪಗಳ ಛಾವಣಿಯ ಕೆಳಗೆ ಅಮ್ಮನ ಕೈ ಹಿಡಿದು ಕುಣಿಯುತ್ತಾ ಕುಪ್ಪಳಿಸುತ್ತಾ ನಡೆದಿದ್ದನ್ನ ಮರೆಯಲು ಸಾಧ್ಯವೇ?! ಅಮ್ಮನ ದರ್ಶನಕ್ಕಾಗಿ ಸರತಿಯಲ್ಲಿ ನಿಂತ ನಮ್ಮಮ್ಮನ ಸೆರಗ ತುದಿಯನ್ನ ಜಗ್ಗುತ್ತಾ “ಇನ್ನೂ ಎಷ್ಟು ಹೊತ್ತಮ್ಮಾ… ಬಾ ಜಾತ್ರೆ ನೋಡಕ್ಕೆ ಹೋಗಣ, ನಾನು ಆಟ ಆಡ್ಬೇಕು ಬಾ..” ಅಂತ ಅವಸರಿಸುತ್ತಾ ಗೋಗರೆದು ಹಠ ಹಿಡಿದ ನೆನಪು ಹೊಂಗೆ ನೆರಳಷ್ಟೇ ತಂಪು! ಮಾರಮ್ಮನ ದರ್ಶನವಾದಾಗ ಅವಳ ರೂಪ ಕಂಡು ಭಕ್ತಿಗಿಂತ ಭಯವೇ ಉಕ್ಕಿ ಕಣ್ಮುಚ್ಚಿ ಕೈ ಮುಗಿದಿದ್ದು.. ಜಾತ್ರೆಯಲ್ಲಿ ಕೊಳ್ಳಬೇಕೆಂದು ಮನದಲ್ಲೇ ನೋಟ್ ಮಾಡಿಟ್ಟುಕೊಂಡಿರುತ್ತಿದ್ದ ಆಟದ ಸಾಮಾನು, ತಿನಿಸುಗಳ ಪಟ್ಟಿಯನ್ನ ಅಮ್ಮನಿಗೆ ನೆನಪಿಸುತ್ತಾ ಅಪ್ಪನನ್ನ ಪುಸಲಾಯಿಸಲಿಕ್ಕೆ ಅವಳ ಹತ್ರ ಅರ್ಜಿ ಹಾಕಿದ್ದು.. ಒಮ್ಮೆಯಂತೂ ಅಮ್ಮನ ಕೈ ತಪ್ಪಿ ಜಾತ್ರೆಯಲ್ಲಿ ಒಬ್ಬಂಟಿಯಾಗಿ ಕಂಗಾಲಾಗಿ ಅತ್ತಿದ್ದು.. ಮುಂದಿನ ವರ್ಷ ಸಾಗರದ ಜಾತ್ರೆಯಲ್ಲಿ ಮುನ್ನೆಚ್ಚರಿಕೆ ಕ್ರಮವೆಂಬಂತೆ ಅಂಗಿಯ ಜೇಬಿನಲ್ಲಿ 5 ರೂಪಾಯಿಯಿಟ್ಟು ಎಲ್ಲಾದರೂ ತಪ್ಪಿಸಿಕೊಂಡರೆ ಬಸ್ ಹತ್ತಿ ಊರಿಗೆ ಬಂದು ಬಿಡು ಎಂದು ಚಿಕ್ಕಮ್ಮ ಧೈರ್ಯ ಹೇಳಿ ಕಳಿಸಿದ್ದು.. ಜಾತ್ರೆಯಲ್ಲಿ ಮೊದಲ ಸಲ ಗೋಬಿ ಮಂಚೂರಿ ತಿಂದಾಗ “ಕೋಳಿ ತಿಂದು ಜಾತಿಕೆಟ್ಟ” ಎಂದು ಗೇಲಿಗೊಳಗಾಗಿದ್ದು.. ಅಮ್ಮನ ಪರ್ಸ್ ಕಳೆದುಹೋದಾಗ ಗಾಬರಿಗೊಂಡು ಪರಿಪರಿಯಾಗಿ ಬೇಡುತ್ತಾ ಹರಕೆ ಹೊತ್ತಿದ್ದು.. ಆ ಪರ್ಸ್ ಜಾತ್ರಾ ಸಮಿತಿಯವರಿಗೆ ಸಿಕ್ಕಿ ತಿರುಗಿ ತನ್ನ ಕೈ ಸೇರಿದಾಗ ಮಾರಮ್ಮನ ಪವಾಡಕ್ಕೆ ತಲೆಬಾಗಿ ಭಕ್ತಿಯಿಂದ ಅಮ್ಮನ ಕಣ್ಣಾಲಿಗಳು ತುಂಬಿದ್ದು.. ಯಾವುದೋ ಹೊಸ ಆಟಿಕೆ ಕೊಡಿಸಿರೆಂದು ಹಠ ಹಿಡಿದಾಗ ಅಪ್ಪನ ಕೆಂಗಣ್ಣು ಕಂಡು ಅಳು ನಿಲ್ಲಿಸಿ ಬಾಯಿಮುಚ್ಚಿದ್ದು.. ಪ್ರತೀ ಜಾತ್ರೆಗೂ ಹೆಚ್ಚೆಚ್ಚು ಅಪ್ಗ್ರೇಡ್ ಆಗಿ ಬರುತ್ತಿದ್ದ ದೊಡ್ಡ ದೊಡ್ಡ ತೊಟ್ಟಿಲು, ಕೊಲಂಬಸ್ಸನ ದೋಣಿಗಳಲ್ಲಿ ಕೂತು ಸಾಹಸ ಸಿಂಹನಾಗಿ ಮೆರೆದಿದ್ದು.. ಕಬ್ಬಿಣದ ಪಂಜರದಂಥಾ ಬಾವಿಯೊಳಗೆ ಕಾರು, ಬೈಕುಗಳನ್ನು ವ್ರೂಮ್ ವ್ರೂಮ್ ರೊಂಯ್ ರೊಂಯ್ ಎಂದು ಓಡಿಸುವ, ತಿರುಗಿಸುವ ಸಾಹಸ ಪ್ರದರ್ಶನಗಳನ್ನು ನೋಡಿ ಕಣ್ಣು ಬಾಯಿಬಿಟ್ಟಿದ್ದು! ಓಹ್! ಒಂದೇ ಎರಡೇ?! ಇದು ಕೊನೆಯೇ ಇಲ್ಲದ ನೆನಪುಗಳ ಮೆರವಣಿಗೆ..!
ಬಹಳ ವರ್ಷಗಳ ನಂತರ ಕಳೆದ ತಿಂಗಳು ಮತ್ತೆ ನಮ್ಮೂರ ಜಾತ್ರೆಗೆ ಹೋದಾಗ ಆಗಿದ್ದ ಬದಲಾವಣೆ ಒಂದೇ.. ಬಾಲ್ಯದಲ್ಲಿ ಭಯದಿಂದ, ರಕ್ಷಣೆಗಾಗಿ ಅಪ್ಪ ಅಮ್ಮನ ಕೈ ಹಿಡಿಯುತ್ತಿದ್ದ ಕೈಗಳು ಇಂದು ಪರಸ್ಪರರಿಗೆ ಭರವಸೆಯಾಗಿ, ಸುರಕ್ಷಾಭಾವ ತುಂಬುತ್ತಾ ಆಸರೆಯಾಗಿದ್ದವು.. ಅಪ್ಪ ಅಮ್ಮನ ಕೈಗಳು ನಮ್ಮವನ್ನ ಹಿಡಿದಿದ್ದವು!
ಇಷ್ಟು ವರ್ಷಗಳ ನಂತರವೂ, ಮತ್ತೆಷ್ಟು ವರ್ಷಗಳು ಕಳೆದರೂ ಜಾತ್ರೆಯೆಂಬ ಮಹಾ ಹಬ್ಬದ ಬಣ್ಣಗಳು ಮಾಸಲಾರವು! ಬೆರಗು ಮುಗಿಯಲಾರದು! ನೆನಪುಗಳು ಅಳಿಯಲಾರವು!
ಮುಂದಿನ ಸಲ ನಮ್ಮೂರ ಜಾತ್ರೆಗೆ ನೀವೂ ಬರ್ತೀರಿ ತಾನೇ?! ಬನ್ನಿ .. ಎಲ್ಲರೂ ಸಿಗೋಣ.. ಮತ್ತೆ ಜಾತ್ರೆಯಲ್ಲಿ ಕಳೆದುಹೋಗೋಣ!
Iam praveen iam from bijapur
ನನ್ನ ಚಿಕ್ಕ ವಯಸ್ಸಿನಲ್ಲಿ ನಡೆದ ನಿಜವಾದ ಘಟನೆ ಇದೆ ಎಂದು ಹೇಳಬಹುದು