– ಸಂತೋಷ್ ತಮ್ಮಯ್ಯ

“ಹೊಸ ಪೇಶ್ವೆಗಳ ವಿರುದ್ಧ ನಾವು ಹೋರಾಟ ಮಾಡಲು ನಮಗೆ ಯಾವ ಚುನಾವಣಾ ರಾಜಕೀಯದಿಂದಲೂ ಸಾಧ್ಯವಿಲ್ಲ. ಅದಕ್ಕೆ ಬೀದಿ ಕಾಳಗವನ್ನೇ ಮಾಡಬೇಕು. ದಲಿತರ ಮೇಲಿನ ದೌರ್ಜನ್ಯಕ್ಕೆ ಬೀದಿ ಕಾಳಗವೊಂದೇ ಪರಿಹಾರ ”
ಜಿಗ್ನೇಸ್ ಮೆವಾನಿ ಎಂಬ ಜನಪ್ರತಿನಿಧಿ ಕೋರೆಗಾಂವ್‌ನಲ್ಲಿ ಒದರಿದ್ದು ಹೀಗೆ. ಈ ಮಾತುಗಳನ್ನು ಕೇಳಿದ ವಲ್ಸದ್ ಕ್ಷೇತ್ರದ ಮತದಾರರಿಗೆ ಶ್ರೀಖಂಡ್ ತಿಂದಂತಾಗಿರಬಹುದು. ಏಕೆಂದರೆ ಕೇವಲ ಹದಿನೈದು ದಿನಗಳ ಹಿಂದೆಯಷ್ಟೆ ಅವರು ತಮ್ಮ ಹಕ್ಕು, ತಮ್ಮ ಉದ್ಧಾರ, ನಮ್ಮ ಪ್ರಜಾಪ್ರಭುತ್ವ, ನಮಗಾಗಿ ಬಂದ ಅವತಾರಿ ಪುರುಷ ಎಂದೆಲ್ಲಾ ಹೊಗಳಿ ಆತನನ್ನು ಆರಿಸಿದ್ದರು. ಆದರೆ ಹದಿನೈದೇ ದಿನದಲ್ಲಿ ಆತ ಪ್ರಜಾಪ್ರಭುತ್ವವೆಂದರೆ ನನ್ನ ಎಕ್ಕಡ ಎನ್ನುವಂಥಾ ಹೇಳಿಕೆಯನ್ನು ನೀಡಿ ಕ್ಷೇತ್ರದ ಜನಕ್ಕೆ ಒಳ್ಳೆಯ ಉಡುಗೋರೆಯನ್ನೇ ಕೊಟ್ಟ! ಗುಜರಾತಿನಲ್ಲಿ ಬಿಜೆಪಿ ಗೆದ್ದಿದ್ದರೂ ಜಿಗ್ನೇಶ್ ಗೆಲುವು ಅಪಾಯಕಾರಿ ಎಂದಿದ್ದವರ ಭವಿಷ್ಯವನ್ನು ಆತ ಇಷ್ಟು ಬೇಗನೆ ನಿಜ ಮಾಡುತ್ತಾನೆಂದು ದೇಶ ಅಂದುಕೊಂಡಿರಲಿಲ್ಲ. ಆದರೆ ಜಿಗ್ನೇಶ್ ಬುದ್ಧಿಜೀವಿಗಳ ಹಲವರ್ಷಗಳ ಶ್ರಮದ ಫಲ ಎಂಬುದನ್ನು ಆರಂಭದಲ್ಲೇ ಕೆಲವರು ಅರಿತಿದ್ದರು. ನಿಜ, ಆತ ಬುದ್ಧಿಜೀವಿಗಳ ಅಸ್ಪಷ್ಟ ಕನಸ್ಸಿಗೆ ಸ್ಪಷ್ಟ ರೂಪ ಕೊಟ್ಟವನು. ಎಗ್ಗಿಲ್ಲದೆ ಮಾತಾಡುವ, ಮುಗ್ದರನ್ನು ಸುಲಭವಾಗಿ ವಂಚಿಸುವ, ಬಿಸಿ ರಕ್ತದ, ಹುಚ್ಚು ಮಾತಿನ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಆದರೆ ಪಕ್ಷೇತರನಾಗಿ ನಿಂತು ಚುನಾವಣೆ ಗೆಲ್ಲಬಲ್ಲ ಸಾಮರ್ಥ್ಯದ, ಪರಂಪರೆಯ ಬಗ್ಗೆ ಕೆಂಡಕಾರಬಲ್ಲ, ಮುಸಲ್ಮಾನನಂತೆ ಯೋಚಿಸಬಲ್ಲ, ಕಮ್ಯುನಿಸ್ಟನಂತೆ ಮಾತಾಡಬಲ್ಲ, ಆದರೆ ಅವರಾರೂ ಆಗಿರದ, ಕಡ್ಡಾಯವಾಗಿ ದಲಿತನೇ ಆಗಿರಬೇಕಾದ ಆಕೃತಿಯೊಂದರ ಹುಡುಕಾಟದಲ್ಲಿದ್ದ ಬುದ್ಧಿಜೀವಿಗಳಿಗೆ ಸಿಕ್ಕವನು ಈ ಜಿಗ್ನೇಶ್ ಮೆವಾನಿ. ಬುದ್ಧಿಜೀವಿಗಳ ಕೈಪಿಡಿಯ ಪ್ರಕಾರ ಕನ್ಹಯ್ಯನೆಂಬವನು ಎಷ್ಟಾದರೂ ಭೂಮಿಹಾರ್ ಬ್ರಾಹ್ಮಣ. ಆತ ಧೀರ್ಘಕಾಲ ಬಾಳಿಕೆಗೆ ಬಾರದವನು! ಹಾಗಾಗಿ ಜಿಗ್ನೇಶ್ ಎಂಬ ಬುದ್ಧಿಜೀವಿಗಳು ಕೆತ್ತಿದ ಆಕಾರ ಹದಿನೈದೇ ದಿನದಲ್ಲಿ ಪ್ರಜಾಪ್ರಭುತ್ವವನ್ನು ಹಂಗಿಸಿ, ಮಹಾರಾಷ್ಟ್ರಕ್ಕೆ ಬೆಂಕಿ ಹಾಕಿ, ಹೆಣ ಬೀಳಿಸಿ ಹೋಗಿದ್ದ. ಇಲ್ಲದಿದ್ದರೆ ಭೀಮಾ-ಕೋರೇಗಾಂವ್ ವಿಜಯದ ೨೦೦ನೇ ವರ್ಷಾಚರಣೆ ಸಂದರ್ಭದಲ್ಲಿ ಏಕಾಏಕಿ ಬೀದಿ ಕಾಳಗ ಯಾಕಾಗಬೇಕಿತ್ತು? ಅಂಥ ಯಾವ ಕಾರಣ ತಾನೇ ಇತ್ತು? ಮೊದಲ ಬಲಿಗಾಗಿ ಜಿಗ್ನೇಶ ಕೋರೆಗಾಂವನ್ನೇ ಏಕೆ ಆರಿಸಿಕೊಂಡ? ಈ ಸಂಗತಿ ಎಷ್ಟು ಆಳದಲ್ಲಿದೆಯೋ ಅಷ್ಟೇ ಸೂಕ್ಷ್ಮವಾಗಿಯೂ ಇದೆ.
ಆರಂಭದಲ್ಲಿ ಕೋರೆಗಾಂವ್ ವಿಜಯ ಮತ್ತು ಮಹರ್ ಗಳ ನಡುವೆ ಒಂದು ವಿಚಿತ್ರ ನಂಟನ್ನು ರೂಪಿಸಿದ್ದೇ ಈ ಸೆಕ್ಯುಲರಿಸ್ಟರು. ಮಹಾರಾಷ್ಟ್ರದ ಜನಸಂಖ್ಯೆಯ ಶೇ.೧೦ರಷ್ಟಿರುವ ಮಹರರು ಹುಟ್ಟು ಶೂರರು ಮತ್ತು ಶ್ರಮಜೀವಿಗಳು. ಶಿವಾಜಿಯ ಕಾಲದಿಂದಲೂ ಅವರು ಮರಾಠ ಸಂಸ್ಥಾನದ ಆಧಾರಸ್ತಂಭಗಳಾಗಿದ್ದವರು. ಸೈನಿಕವಾಗಿ ಮಹರ್ ಗಳಿಗೆ ಸಿಕ್ಕ ಗೌರವ ಸಮಾಜದಲ್ಲಿ ಸಿಗುತ್ತಿರಲಿಲ್ಲ. ಮಹರ್ ಗಳಷ್ಟೆ ಅಲ್ಲ ಮರಾಠಾ ಸೈನ್ಯದ ನಲ್ವತ್ತೆಂಟಕ್ಕೂ ಹೆಚ್ಚಿನ ಜಾತಿಗಳಿಗೂ ಅದು ಸಿಗುತ್ತಿರಲಿಲ್ಲ. ಮೊದಲಿನಿಂದಲೂ ಯೋಧ ಸಂಸ್ಕೃತಿಯಲ್ಲೇ ಧನ್ಯತೆ ಕಾಣುತ್ತಿದ್ದ ಈ ಜನಾಂಗಗಳು ಅದರತ್ತ ಯೋಚಿಸಲೂ ಇರಲಿಲ್ಲ. ಆದರೆ ಯಾವಾಗ ಪೇಶ್ವೆಗಳು ಮುಸಲ್ಮಾನರಿಗೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವವನ್ನು ಕೊಡಲಾರಂಭಿಸಿದರೋ, ಕೊನೆಯ ಪೇಶ್ವೆಗಳು ತಮ್ಮ ಅಸಲಿ ಉದ್ದೇಶವನ್ನು ಯಾವಾಗ ಮರೆಯತೊಡಗಿದರೋ ಆಗ ಮಹರ್ ಮತ್ತು ಪೇಶ್ವೆ ಸಂಬಂಧ ಕೊಂಚ ಹಳಸತೊಡಗಿತು. ಆದರೆ ಅದು ಯಾವ ಕಾರಣಕ್ಕೂ ಜಾತಿಯ ಕಾರಣದಿಂದ ಆಗಿರಲಿಲ್ಲ ಎಂಬುದು ಉಲ್ಲೇಖಾರ್ಹ. ಒಂದು ವೇಳೆ ಪೇಶ್ವೆಗಳು ಮಹರರನ್ನು ಅಸ್ಪೃಶ್ಯರಂತೆ ಕಂಡಿದ್ದರೆ ಸಂಪೂರ್ಣ ಪೇಶ್ವಾ ಸೇನೆಯಲ್ಲಿ ಒಬ್ಬನೇ ಒಬ್ಬ ಮಹರ್ ಸೈನಿಕ ಇರಬಾರದಿತ್ತು. ಆದರೆ ಎಲ್ಲಾ ಕಾಲದಲ್ಲೂ ಪೇಶ್ವೆ ಸೈನ್ಯದಲ್ಲಿ ಮಹರರು ಇದ್ದೇ ಇದ್ದರು. ಹೇಗೆ ಎರಡನೆ ಮಹಾಯುದ್ಧದಲ್ಲಿ ಬ್ರಿಟಿಷ್ ಪಡೆ ಮತ್ತು ನೇತಾಜಿ ಪಡೆಗಳೆರಡರಲ್ಲೂ ಭಾರತೀಯ ಸೈನಿಕರಿದ್ದರೋ ಹಾಗೆ ಪೇಶ್ವೆ ಮತ್ತು ಬ್ರಿಟಿಷ್ ಯುದ್ಧಗಳಲ್ಲಿ ಇತ್ತಂಡಗಳಲ್ಲೂ ಮಹರ್ ಸೈನಿಕರಿದ್ದರು! ಅಂಥಲ್ಲಿ ಕೋರೇಗಾಂವ್ ಕದನ ಮಹರ್ ಮತ್ತು ಪೇಶ್ವೆ ಕದನವಾಗಲು ಹೇಗೆ ಸಾಧ್ಯ? ಪುಣೆಯ ಕೊನೆಯ ಪೇಶ್ವೆಯ ಕಾಲದವರೆಗೆ ಕೂಡಾ ಪೇಶ್ವೆ-ಮಹರ್ ಸಂಬಂಧ ಉತ್ತಮವಾಗಿತ್ತೆಂಬುದಕ್ಕೆ ಸಾಕಷ್ಟು ಉಲ್ಲೇಖಗಳು ಮರಾಠಾ ಇತಿಹಾಸದಲ್ಲಿ ಸಿಗುತ್ತವೆ.
೧೭೭೫ರಲ್ಲಿ ಎರಡನೆ ಬಾಜಿರಾವ್ ಪಟ್ಟಕ್ಕೆ ಬಂದಿದ್ದ. ಸದಾ ಉಪಟಳ ನೀಡುತ್ತಿದ್ದ ನಿಜಾಮರು ಬಾಜಿರಾಯನ ಮೇಲೆ ಮುಗಿಬಿದ್ದರು. ಖರ್ಡೆ ಎಂಬಲ್ಲಿ ತುರ್ಕರ ಪಡೆ ಮತ್ತು ಹಿಂದು ಸೈನ್ಯ ಮುಖಾಮುಖಿಯಾಯಿತು. ಮಹರ್ ಯೋಧರು ಪ್ರಾಣಪಣಕ್ಕಿಟ್ಟಾದರೂ ಬಾಜಿರಾಯನಿಗೆ ವಿಜಯಮಾಲೆ ಹಾಕಲು ಸಿದ್ಧರಾದರು. ಅಂದು ಮಹರ್ ಪಡೆಯ ಮುಂದಾಳಾಗಿದ್ದವ ಶಿದನಾಕ ಎಂಬ ಮಹಾ ಪರಾಕ್ರಮಿ. ಈತ ಒಂದು ಕಾಲದಲ್ಲಿ ಮರಾಠಾ ಸೈನ್ಯದಲ್ಲಿ ದಂತಕಥೆಯಾಗಿದ್ದ, ಪೋರ್ಚುಗೀಸರಿಗೆ ಸಾಕಷ್ಟು ಬಾರಿ ನೀರುಕುಡಿಸಿದ್ದ ತುಕಾರಾಮ ಮಹರನ ಮೊಮ್ಮಗ. ಮರಾಠ ಸೈನ್ಯ ಸೇನೆ ಜಮೆಗೊಳಿಸಿ ಕಾಯುತ್ತಿತ್ತು. ಮೈದಾನದ ಒಂದು ಭಾಗದಲ್ಲಿ ಶಿದನಾಕ ತನ್ನ ಸೈನ್ಯಕ್ಕೆ ಡೇರೆ ಹಾಕಿದ್ದರೆ ಮತ್ತೊಂದೆಡೆ ಪೇಶ್ವೆ ಬ್ರಾಹ್ಮಣರ ಸೈನ್ಯ ಡೇರೆ ಹಾಕಿತ್ತು. ಒಳ್ಳೆಯದ್ದಿದ್ದಲ್ಲಿ ಕೆಟ್ಟದ್ದೂ ಇರುವಂತೆ, ಮೌಲ್ಯಗಳಿದ್ದಲ್ಲಿ ವಿಕೃತಿಗಳೂ ಇರುವಂತೆ ಮರಾಠರ ಕಾಲದಲ್ಲಿ ಅವೆರಡೂ ಇದ್ದವು. ಇದನ್ನು ಸಹಿಸದ ಓರ್ವ ಮರಾಠಾ ಸೈನಿಕ “ಈಗಿಂದೀಗಲೇ ದಲಿತ ಮಹರ್ ಡೇರೆಯನ್ನು ದೂರಕ್ಕೆ ಸ್ಥಳಾಂತರಿಸಬೇಕು”ಎಂದು ಪೇಶ್ವೆಗಳಲ್ಲಿ ದೂರಿತ್ತ. ದೂಸ್ರಾ ಮಾತಾಡದೆ ಎರಡನೆ ಬಾಜಿರಾವ್ ಎರಡೂ ಡೇರೆಗಳ ಮಧ್ಯೆ ಬಂದು ನಿಂತು ಹೀಗೆಂದು ಗುಡುಗಿದ, “ಇದು ಯುದ್ಧಭೂಮಿ. ಇಲ್ಲಿ ಚಾಂಡಾಲತ್ವ ಮತ್ತು ಮೈಲಿಗೆ ಎಂಬ ಪದಗಳಿಗೆ ಆಸ್ಪದವಿಲ್ಲ. ಇಲ್ಲಿ ಯಾರ ಖಡ್ಗ ಹರಿತವಾಗಿದ್ದು ವೈರಿಗಳ ರಕ್ತವನ್ನು ಹೀರುತ್ತದೋ ಆತನೇ ನಿಜವಾದ ನಾಯಕ. ಶಿದನಾಕನ ಡೇರೆ ಅಲ್ಲಿಂದ ಒಂದಿಂಚೂ ಕದಲದು” ಎಂದು ಆರ್ಭಟಿಸಿದ. ಮರುದಿನ ಯುದ್ಧದಲ್ಲಿ ಮಹರ್ ಪಡೆ ವೀರಾವೇಷದಿಂದ ಹೋರಾಡಿ ನಿಜಾಮರ ಸೈನ್ಯವನ್ನು ಹಿಮ್ಮೆಟ್ಟಿಸಿತು. ಶಿದನಾಕನ ಪರಾಕ್ರಮವನ್ನು ಮೆಚ್ಚಿದ ಪೇಶ್ವೆ ತುಂಬಿದ ಸಭೆಯಲ್ಲಿ ಆತನಿಗೆ ಬಂಗಾರದ ಕಡಗವನ್ನು ಸ್ವತಃ ತೊಡಿಸಿದ! ಎಲ್ಲಿತ್ತು ಅಸ್ಪೃಶ್ಯತೆ? ಇಷ್ಟೇ ಅಲ್ಲ, ಅದಕ್ಕೂ ಮೊದಲು ಮರಾಠಾ ಸೈನ್ಯದಲ್ಲಿ ಪಾಚಗಢದ ರಾಯನಾಯಕ, ಹವಾಲ್ದಾರ್ ಸುಭನಾಕ ವಾಘನಾಕ, ಹವಾಲ್ದಾರ್ ಮದನಾಕ ಯೇಸನಾಕ, ಹವಲ್ದಾರ್ ಧೊಂಡನಾಕ ಪುಂಡನಾಕ, ರಾಯನಾಕರೆಂಬ ಖ್ಯಾತ ಮಹರ್ ಯೋಧರಿದ್ದರು. ಅಸ್ಪೃತೆಯಿಂದ ನರಳಿ ಭಾಷಣಕಾರನಾಗಬಹುದು, ಬರಹಗಾರನೂ ಆಗಬಹುದು. ಸೇಡನ್ನೂ ತೀರಿಸಿಕೊಳ್ಳಬಹುದು. ಆದರೆ ರಾಜನಿಷ್ಠ ಯೋಧರಾಗುವುದು ಹೇಗೋ ಗೊತ್ತಿಲ್ಲ, ಜಿಗ್ನೇಶ್ ಮೆವಾನಿಯೇ ಹೇಳಬೇಕು. ಕೋರೆಗಾಂವ್ ಹೋರಾಟದಲ್ಲಿ ಬ್ರಿಟಿಷರು ಅಲ್ಪಸಂಖ್ಯೆಯ ಮಹರಿಂದ ಅಪಾರ ಸಂಖ್ಯೆಯ ಪೇಶ್ವೆಗಳ ಸೈನ್ಯವನ್ನು ಸೋಲಿಸಿದ್ದು ಬಹುದೊಡ್ಡ ಸಾಧನೆ ಎನ್ನುವುದಾದರೆ ಅದಕ್ಕಿಂತಲೂ ಅಪಾರವಾದ ಮತ್ತು ಭೀಕರವಾದ ತುರ್ಕರನ್ನು ಪೋರ್ಚುಗೀಸರನ್ನು ಚಿಪಳೂಣ ಯುದ್ಧದಲ್ಲೂ ವಸಯೀ ಯುದ್ಧದಲ್ಲೂ ಗೆದ್ದ ಸಂಗತಿ ಸಾಧನೆ-ಸ್ವಾಭಿಮಾನ ಎನಿಸಿಕೊಳ್ಳುವುದಿಲ್ಲವೇಕೆ? ಅವುಗಳ ವಿಜಯ ಸ್ತಂಭಗಳೇಕೆ ಮಹಾರಾಷ್ಟ್ರದಲ್ಲಿಲ್ಲ? ಅದರ ವಿಜಯೋತ್ಸವವೇಕೆ ಮಹರ್ ಗಳಿಗೆ ಇಂದಿಗೂ ನೆನಪಾಗುವುದಿಲ್ಲ? ಜಿಗ್ನೇಶನ ಮಾತಿನ ಹಿಂದೆ ಇಂಥ ದೊಡ್ಡ ಫೌಂಡೇಶನ್ನೇ ಇದೆ!
ಮಹರರ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಏನೋ ಒಂದು ಎಡವಟ್ಟು ಅಲ್ಲಿ ನಡೆದಿರುವುದನ್ನು ನೋಡಬಹುದು. ಅಲ್ಲಿ ಮೈಮರೆತ ಪೇಶ್ವೆಗಳು, ಎಚ್ಚರತಪ್ಪಿದ ಮಹರರು, ಅವಕಾಶ ಬಳಸಿಕೊಂಡ ಬ್ರಿಟಿಷರು ಎಲ್ಲರೂ ಕಾಣುತ್ತಾರೆ. ಅಂಬೇಡ್ಕರರೂ ಕೂಡಾ ಆ ಸೂಕ್ಷ್ಮವನ್ನು ವಿವರಿಸುತ್ತಾ ‘ಒಂದು ಪ್ರದೇಶದ ಕೆಳ ಸಮುದಾಯಕ್ಕೆ ತಮ್ಮನ್ನು ಆಕ್ರಮಿಸಲು ಬಂದ ಶತ್ರುಗಳೂ ಕೂಡಾ ಒಮ್ಮೊಮ್ಮೆ ತಮ್ಮನ್ನು ಉದ್ದರಿಸಲು ಬಂದವರಂತೆ ಕಾಣಿಸುತ್ತಾರೆ. ಹಾಗನಿಸುವುದು ಸಹಜ ಮತ್ತು ಅದರಲ್ಲಿ ಆಶ್ಚರ್ಯವಿಲ್ಲ’ ಎಂದು ಹೇಳುತ್ತಾರೆ. ಕೆಲವು ಮಹರರು ಬ್ರಿಟಿಷರನ್ನು ಹಾಗಂದುಕೊಂಡರು. ಆದರೆ ಮುಂದೆ ಅವರ ಪರಿಸ್ಥಿತಿ ಅತ್ಯಂತ ಕ್ರೂರವಾಯಿತು. ಯಾವ ಮಹರ್ ಸೈನ್ಯವನ್ನು ಬಳಸಿ ಬ್ರಿಟಿಷರು ಸಾಮ್ರಾಜ್ಯ ಕಟ್ಟಿದ್ದರೋ ಮುಂದೆ ಅದೇ ಮಹರ್ ರೆಜಿಮೆಂಟನ್ನು ಬ್ರಿಟಿಷರೇ ವಿಸರ್ಜಿಸಿದ್ದರು! ಇಲ್ಲಿ ಯಾರ ಪರ ಯಾರಿದ್ದ ಹಾಗಾಯಿತು? ಕೋರೆಗಾಂವ್ ವಿಜಯಾಚರಣೆಯೊಂದೇ ಮಹರ್ ಸ್ವಾಭಿಮಾನದ ಪ್ರತೀಕ ಎಂದು ದಲಿತ ಹೋರಾಟಗಾರರು ಭಾವಿಸುವುದಾದರೆ ಅಂಥಾ ದಲಿತ ಹೋರಾಟಗಾರರನ್ನು ವಿಷಾದಿಸುವುದೊಂದೇ ಉಳಿದಿರುವ ದಾರಿ. ಏಕೆಂದರೆ ಇಂದಿಗೂ ಭಾರತೀಯ ಸೈನ್ಯದಲ್ಲಿ ಮಹರ್ ರೆಜಿಮೆಂಟ್ ಅತ್ಯಂತ ಪರಾಕ್ರಮಿ ಯೋಧರ ಪಡೆ. ಕೋರೆಗಾಂವ್ ಯುದ್ಧದಲ್ಲಿ ಬಲಿದಾನಿಗಳಾದವರು 22 ಮಹರ್ ಗಳಾದರೆ 41ರಿಂದೀಚೆಗೆ ದೇಶಕ್ಕೆ ಪ್ರಾಣ ಕೊಟ್ಟ ಮಹರ್ ಗಳು 400ಕ್ಕೂ ಹೆಚ್ಚು. ಅಲ್ಲದೆ ಇಂದಿನ ಮಹರ್ ರೆಜಿಮೆಂಟಿನಲ್ಲಿ 21 ಬೆಟಾಲಿಯನ್‌ಗಳೇ ಇವೆ. 1 ಪರಮವೀರ ಚಕ್ರ, 4 ಮಹಾವೀರ ಚಕ್ರ, 29 ವೀರ ಚಕ್ರ, 1 ಕೀರ್ತಿ ಚಕ್ರ, 12 ಶೌರ್ಯ ಚಕ್ರ, 22 ವಿಶಿಷ್ಠ ಸೇನಾ ಮೆಡಲ್, 63 ಸೇನಾ ಮೆಡಲ್‌ಗಳಿಂದ ಇಂದಿನ ಮಹರ್ ಸೈನ್ಯ ಯುದ್ಧಾಲಂಕೃತ. ಜಿಗ್ನೇಶನನ್ನು ಅಭಿನವ ಅಂಬೇಡ್ಕರ್ ಎನ್ನುವವರಿಗೆ ಇವೆಲ್ಲಾ ಅರ್ಥವಾಗುತ್ತದೆ ಎಂಬ ಭರವಸೆಯಂತೂ ಇಲ್ಲ.ಕೋರೆಗಾಂವ್-೨೦೦, ಹೊಸ ಅವತಾರಿಯ ಹುಚ್ಚಾಟ, ಗಲಭೆಗಳ ತರುವಾಯ ಕೂಡ ಕೆಲವು ಪ್ರಶ್ನೆಗಳು ಕಾಡುತ್ತವೆ.
ಬ್ರಿಟಿಷರ ವಿರುದ್ಧದ ಕೊರೇಗಾಂವ್ ವಿಜಯ ಸ್ವಾಭಿಮಾನದ ಪ್ರತೀಕ ಎಂದಾದರೆ ಟಿಪ್ಪುಸೋಲಿಗೆ ಬ್ರಿಟಿಷರೊಂದಿಗೆ ಕೈಜೋಡಿಸಿದ ಕೊಡವರದ್ದು ಸ್ವಾಭಿಮಾನದ ವಿಜಯವಾಗುವುದಿಲ್ಲವೇಕೆ? ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಟಿಪ್ಪುವಿಗೆ ಸ್ವಾತಂತ್ರ್ಯ ಹೋರಾಟಗಾರನ ಪಟ್ಟ ಕಟ್ಟಬಹುದಾದರೆ ಪೇಶ್ವೆಗಳನ್ನೇಕೆ ಸ್ವಾತಂತ್ರ್ಯಹೋರಾಟಗಾರರು ಎನ್ನಬಾರದು? ಕೊಡವರಿಗೆ ಬ್ರಿಟಿಷರ ಬಾಲಬಡುಕರು ಎನ್ನುವವರು ಮಹರರಿಗೂ ಹಾಗೆ ಹೇಳುವ ಧೈರ್ಯ ತೋರುವರೇ? ಮೈಸೂರಿನಲ್ಲಿ ಟಿಪ್ಪುಬದಲು ಪೇಶ್ವೆಗಳಿದ್ದಿದ್ದರೆ ಅಥವಾ ಕೋರೆಗಾಂವ್‌ನಲ್ಲಿ ಪೇಶ್ವೆಗಳ ಜಾಗದಲ್ಲಿ ಟಿಪ್ಪುಇದ್ದಿದ್ದರೆ ಬುದ್ಧಿಜೀವಿಗಳ ವಾದವೇನಿರುತ್ತಿತ್ತು?
ಅಂದಹಾಗೆ ಬರ್ಬಾದಿ ಘೋಷಣೆ ಮಾಡುವ ಉಮರ್ ಖಾಲಿದನ ಗೆಳೆಯ ಜಿಗ್ನೇಶನಿಗೆ ಮಹರ್ ರೆಜಿಮೆಂಟಿನ ರಣಘೋಷ ‘ಬೋಲೋ ಹಿಂದುಸ್ಥಾನ್ ಕೀ ಜಯ್’ ಎಂಬುದಂತೂ ತಿಳಿದಿಲ್ಲ. ತಿಳಿದರೂ ಖಾಲಿದನ ಗೆಳೆತನವನ್ನಂತೂ ಆತ ಬಿಡಲಾರ! ಏಕೆಂದರೆ ಆತ ಬುದ್ಧಿಜೀವಿಗಳಿಂದ ಸೋರಿದ ಕೊಳಕಿಂದ ತಯಾರಾದ ಅಚ್ಚು.
Like this:
Like ಲೋಡ್ ಆಗುತ್ತಿದೆ...
Related