ಅತ್ತ ಮೋದಿ ಭಾಷಣ ಮಾಡುತ್ತಿದ್ದಾಗ ಎಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲಿಸ್ಟ್ ಒಬ್ಬರು ಅರಮನೆ ಗ್ರೌಂಡಲ್ಲಿ ಟ್ರಾಫಿಕ್ ನಿಭಾಯಿಸುತ್ತಿದ್ದರು…!
-ಕೃಷ್ಣ ಕಡೂರು
ಎಲ್ಲೋ ಸಾಗರದಾಚೆಯಿಂದ ಹಾರಿ ಬಂದ ಹಕ್ಕಿಯೊಂದು ಮಲೆನಾಡ ಕಾಡಿನಲ್ಲಿ ಹಿಕ್ಕೆ ಹಾಕಿ ಸುಂದರ ಪುಷ್ಪವನ್ನು ಅರಳಿಸುವ ಗಿಡವಾಗುತ್ತದೆ. ಆ ಹೂವಿನ ಸೌಂದರ್ಯಕ್ಕೆ ಮನಸೋತ ಕವಿ ಮನಸ್ಸೊಂದು ರಸೋತ್ಪತ್ತಿಯ ಕಾವ್ಯವನ್ನು ಸ್ರಷ್ಟಿಸುತ್ತದೆ. ಆ ಕಾವ್ಯರಸ ಜನಮಾನಸದಲ್ಲಿ ಬೇರೂರಿ ಪರಂಪರೆಯನ್ನು ರೂಪಿಸುವಲ್ಲಿಗೂ ವ್ಯಾಪಿಸುತ್ತವೆ. ಆದರೆ ಎಲ್ಲಿನದ್ದೋ ಒಂದು ಹಕ್ಕಿಗೆ ಇವಾವುವೂ ತಿಳಿಯುವುದಿಲ್ಲ. ತಿಳಿಯುವ ಹಂಬಲ, ಮನಸ್ಸು ಮನಸ್ಸು ಮತ್ತು ತಿಳಿದು ಮಾಡುವಂಥಾದ್ದೇನೂ ಆ ಹಕ್ಕಿಗೂ ಇಲ್ಲ.
ಎಲ್ಲೋ ಕಾಡಿನಲ್ಲಿ ತುಂತುರು ಹನಿಯನ್ನು ತಾನು ಹೀರಿಕೊಳ್ಳದೆ ಭೂಮಿಗೆ ಜಾರಿಸುವ ಎಲೆಯೊಂದಕ್ಕೆ, ಈ ಪುಟ್ಟ ಹನಿ ನದಿಯಾಗಿ, ಭೋರ್ಗೆರೆಯುವ ಜಲಪಾತವಾಗಿ, ಅನ್ನದ ಮೂಲವಾಗಿ, ಬೆಳಕಿನ ಮೂಲವಾಗುವುದು ಎಂದು ಆ ಎಲೆಗೂ ಗೊತ್ತಿಲ್ಲ. ಅದು ಗೊತ್ತಿದ್ದು ಆ ಹನಿಯನ್ನು ಭೂಮಿಗಿಳಿಸಿಲ್ಲ.
ಕೆಸರು ನೆಲದಲ್ಲಿ ಒಣಗಿದ ದೇಹವೊಂದು ಉತ್ತು, ಬಿತ್ತಿ, ಕಟಾವು ಮಾಡಿ ಬೆವರನ್ನೇ ಬಸಿಯುತ್ತಿರುವಾಗ ಆತನಿಗೂ ತಾನು ಬೆಳೆದ ತೆನೆ ರಾಜಾಸ್ಥಾನದಲ್ಲಿ ಮೃಷ್ಟಾನ್ನವಾಗುವುದೆಂದು ಆತನೂ ಯೋಚಿಸುವುದಿಲ್ಲ.
ನೀರೇ ಕಾಣದ ಒರಟು ನೆಲದ ಹೆಬ್ಬಂಡೆಯೊಂದು ಗರ್ಭಗುಡಿಯ ಲಿಂಗವಾಗಿ ತಂಪು ತಾಣದಲ್ಲಿರುವೆ ಎಂದು ಸ್ವತಃ ಬಂಡೆಯೂ ಅದನ್ನು ಕಡೆದವರೂ ಯೋಚಿಸುವುದಿಲ್ಲ.
ನಿಷ್ಕಾಮ ಕರ್ಮಕ್ಕೆ ಯೋಚನೆ-ಚಿಂತನೆಗಳ ಹಂಗಿಲ್ಲ. ಅವುಗಳನ್ನು ಕಟ್ಟಿಕೊಂಡು ಅವು ಹುಟ್ಟುವುದೂ ಇಲ್ಲ. ಅಷ್ಟೇ ಏಕೆ ಯಾವ ಮಣ್ಣಿಗೂ ತಾನು ಮುಂದೊಂದು ದಿನ ಕಾಲಿಂದ ತುಳಿಸಿಕೊಳ್ಳುವೆ, ಮಡಕೆಯಾಗುವೆ ಎಂಬ ಕಲ್ಪನೆಯನ್ನೂ ಮಾಡಿರುವುದಿಲ್ಲ. ಆದರೂ ಇವೆಲ್ಲವೂ ಆಗಿರುತ್ತದೆ. ಕಾರಣದ ಹಿಂದೆ ಬಲವಾದ ಕಾರ್ಯವಿರುತ್ತದೆ. ಕಾರ್ಯದ ಹಿಂದೆ ಕಾರಣವೂ ಇರುತ್ತದೆ. ಅದನ್ನೇ ಭಾರತೀಯ ತತ್ತ್ವಶಾಸ್ತ್ರ “ಕಾರ್ಯಕಾರಣ ಸಂಬಂಧ” ಎಂದು ಕರೆಯಿತು. ಸನಾತನದ ಆಚಾರ್ಯರುಗಳೆಲ್ಲವೂ, ವೈದಿಕೇತರ ಮತಗಳೂ ಪ್ರತಿಪಾದಿಸಿದ್ದು ಅದನ್ನೇ. ಲೌಕಿಕಾರ್ಥದಲ್ಲಿ ಹೇಳಬೇಕೆಂದರೆ ಅದು “ಪರೋಕ್ಷ ಯಜ್ಞಫಲ”.
ಇಷ್ಟೆಲ್ಲಾ ಹೇಳಹೊರಟಿರುವುದಕ್ಕೆ ಕಾರಣ ಮೊನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕಂಡ ಒಂದು ದೃಶ್ಯ.
ಮುಂಜಾನೆಯಿಂದನೇ ರಾಜ್ಯದ ಮೂಲೆ ಮೂಲೆಗಳಿಂದ ಅರಮನೆ ಮೈದಾನಕ್ಕೆ ಜನ ಧಾವಿಸುತ್ತಿದ್ದರು. ಹೊತ್ತೇರುತ್ತಿದ್ದಂತೆ ವಾಹನ ದಟ್ಟಣೆ, ಜನರ ಪ್ರವಾಹ ಅತಿಯಾಗುತ್ತಲೇ ಇತ್ತು. ಅರಮನೆ ಮೈದಾನಕ್ಕೆ ಸೇರುವ ರಸ್ತೆಗಳೆಲ್ಲವೂ ಕಿಷ್ಕಿಂಧೆಯಂತಾಗಿ ಧೂಳುಮಯವಾಗಿದ್ದರೂ ಜನರ ಕಣ್ಣು ಆಕಾಶಕ್ಕೆ ನೆಟ್ಟು ಹೆಲಿಕಾಪ್ಟರ್ ಸದ್ದಿಗೆ ನಿರೀಕ್ಷೆ ಮಾಡುತ್ತಿತ್ತು. ಕೆಲವರು ವೇದಿಕೆಯ ಸುತ್ತ ಠಾಳಾಯಿಸುತ್ತಿದ್ದರೆ ಇನ್ನು ಕೆಲವರು ಗರಿಗರಿ ಬಟ್ಟೆ ಧರಿಸಿ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು.
ನಾನು ಮೋದಿ ಅಭಿಯಾನಿಯಾಗಿರಬಹುದು, ಆದರೆ ಬಿಜೆಪಿಯಲ್ಲ, ಯಾವ ಪಕ್ಷಕ್ಕೂ ಸಲ್ಲುವವನಲ್ಲ. ಬೆಳಿಗ್ಗೆ ಒಂಭತ್ತು ಗಂಟೆಗೆ ನಾನು ಮೈದಾನ ಪ್ರವೇಶಿಸುತ್ತಿದ್ದಾಗ ಒಬ್ಬ ಮನುಷ್ಯ ಕೆಲವು ಯುವಕರೊಟ್ಟಿಗೆ ರಸ್ತೆಯಲ್ಲಿ ನಿಂತು ಟ್ರಾಫಿಕ್ ದಟ್ಟಣೆಯನ್ನು ನಿಭಾಯಿಸುತ್ತಿದ್ದರು. ಮಧ್ಯೆದಲ್ಲೊಮ್ಮೆ ಎದ್ದು ಬಂದಾಗಲೂ ಆ ಮನುಷ್ಯ ಹಾಗೇ ಇದ್ದರು. ಮತ್ತೆ ಆ ಮನುಷ್ಯ ನೆನಪಾಗಲಿಲ್ಲ.
ಮೋದಿ ಭಾಷಣ ಮುಗಿದ ನಂತರ ಮೈದಾನದಿಂದ ಹೊರಹೊರಟಾಗಲೂ ಅವರು ಅದೇ ತತ್ಮಯತೆಯಿಂದ ರಸ್ತೆ ನಿಭಾಯಿಸುತ್ತಿದ್ದಾಗ ದಂಗಾಗಿಹೋದೆ. ಅವರ ಬಿಳಿ ಬಟ್ಟೆ ಧೂಳುಮಯವಾಗಿತ್ತು. ಬಿಳಿಯಾದ ತಲೆಯಲ್ಲೂ ಧೂಳು ಮೆತ್ತಿಕೊಂಡಿತ್ತು. ಎಲ್ಲೋ ನೋಡಿದ್ದೇನೆ ಎಂದು ಗೆಳೆಯನನ್ನು ಕೇಳಿದಾಗ ಆತ ಇವರೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಎಂದ.
ಬಿಜೆಪಿಯಲ್ಲಿ ರಾಷ್ಟ್ರ ಕಾರ್ಯದರ್ಶಿಗಳೂ ಟ್ರಾಫಿಕ್ ನಿಭಾಯಿಸಬೇಕಾ? ಎಂದು ಕೇಳಿದೆ. ಆತ ನಸುನಕ್ಕು ” ನಾವಲ್ಲಿ ಮೋದಿ ಮಾತಿಗೆ ಚಪ್ಪಾಳೆ ತಟ್ಟುತ್ತಾ, ಘೋಷಣೆ ಕೂಗುತ್ತಿದ್ದೆವಲ್ಲಾ, ಆಗಲೂ ಇವರು ಹೀಗೆಯೇ ಕೈ ಆಡಿಸುತ್ತಾ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರು. ರ್ಯಾಲಿ ಯಶಸ್ವಿಯಾಗಿರುವುದು ಇಂಥವರಿಂದ” ಎಂದ.ನಾನು ” ಹಾಗಾದರೆ ಇವರಿಗೆ ವೇದಿಕೆ ಯಾಕೆ ಕೊಡಲಿಲ್ಲ?” ಎಂದೆ ” ಹತ್ತಬಹುದು, ಆದರೆ ಇವರು ಹತ್ತುವುದಿಲ್ಲ. ಅವರು ಆರೆಸ್ಸೆಸ್ ನಲ್ಲಿದ್ದವರು” ಎಂದ.
ಪೂರ್ತಿ ಅರ್ಥ ಆಗಲಿಲ್ಲ. ಮತ್ತಷ್ಟು ಗೊಂದಲವಾಯಿತು. ಏಕೆಂದರೆ ವೇದಿಕೆಯಲ್ಲಿ ನಾಯಕರು ಮಾತಾಡುತ್ತಿದ್ದಾಗ ಜನ ಅವರವರ ನಾಯಕರನ್ನು ವೇದಿಕೆಗೆ ಕರೆಯಿರಿ ಎಂದು ಬೊಬ್ಬೆ ಹಾಕುತ್ತಿದ್ದರು. ಇವರು ನೋಡಿದರೆ ಹೀಗೆ! ಅದಕ್ಕೆ ಗೆಳೆಯ – “ದೇಶದ ಎಲ್ಲೋ ಮೂಲೆಯಲ್ಲಿ ಹುಡುಗನೊಬ್ಬ ಆರೆಸ್ಸೆಸ್ ಶಾಖೆಗೆ ಹೋಗುತ್ತಾನೆ. ಕಳೆದ ೯೦ ವರ್ಷಗಳಿಂದಲೂ ಹುಡುಗರು ಕಬಡ್ಡಿ ಆಡುತ್ತಾ ಶಾಖೆಯಲ್ಲಿ ಕಳೆಯುತ್ತಿದ್ದಾರೆ. ಅವರು ಶಾಖೆಗೆ ಹೋದ ಕಾರಣಕ್ಕೆ ಇಂದು ಮೋದಿ ಎಂಬ ಪ್ರಧಾನಿ, ಯೋಗಿ ಎಂಬ ಮುಖ್ಯಮಂತ್ರಿ ದೇಶದಲ್ಲಿದ್ದಾರೆ. ಅದನ್ನು ಮರೆಯದ ಜನ ಹೀಗಿರುತ್ತಾರೆ. ಬಿಜೆಪಿಯಲ್ಲಿ ರಾಜಕಾರಣಕ್ಕಿಂತ ಸಂಘಟನೆಗೆ ಒತ್ತು” ಎಂದು ಹೇಳಿದ.
ಅರ್ಥವಾದರೂ ಅರಗಿಸಿಕೊಳ್ಳಲಾಗಲಿಲ್ಲ. ಏಕೆಂದ್ರೆ ಎಂದೋ ಆರೆಸ್ಸೆಸ್ ಗೆ ಹೋಗುತ್ತಿದ್ದ ಗೆಳೆಯ ಈ ಬಿ.ಎಲ್ ಸಂತೋಷ್ ಇನ್ಸ್ಟ್ರುಮೆಂಟಲ್ ಎಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲಿಸ್ಟ್ ಎಂದಾಗ ಮತ್ತಷ್ಟು ತಲೆಕೆಟ್ಟುಹೋಯಿತು.