ಕರ್ನಾಟಕ ಸ್ವಾಭಿಮಾನವನ್ನು ಬಹಮನಿಗಳಿಗೆ ಒತ್ತೆಯಿಡಲು ಹೊರಟಿದ್ದ ಕಾಂಗ್ರೆಸ್
– ರಾಕೇಶ್ ಶೆಟ್ಟಿ
“ಅದೋ ಅದೋ ವಿಜಯನಗರದ ಸ್ಥಾಪನೆ,ವಿಜಯನಗರದ ಏಳಿಗೆ,ವಿಜಯನಗರದ ವೈಭವ. ಹಾ! ವಿಜಯನಗರದ ನಾಶ…” ಎಂದು ಕನ್ನಡ ರಾಷ್ಟ್ರವೀರ ಎಚ್ಚಮನಾಯಕನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಡಾ.ರಾಜ್ ಕುಮಾರ್ ಅವರು ಹೇಳುವಾಗ, ಕರ್ನಾಟಕ ಸ್ವಾಭಿಮಾನಕ್ಕಾಗಿ ಮಿಡಿಯುವ ಪ್ರತಿ ಕನ್ನಡಿಗನ ಮನದಲ್ಲೂ ತೀವ್ರ ವೇದನೆ,ಆಕ್ರೋಶದ ಅನುಭವವಾಗುತ್ತದೆ. ಆಗಲೇಬೇಕು ಕೂಡ.ಆದರೆ ಈ ಮಾತು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕನ್ನಡಿಗರಿಗೆ ಅನ್ವಯವಾಗುವುದಿಲ್ಲ. ಕರ್ನಾಟಕ ಸ್ವಾಭಿಮಾನವನ್ನು ವೋಟ್ ಬ್ಯಾಕಿಂಗೆ ಅಡವಿಟ್ಟ ಕಾಂಗ್ರೆಸ್ ಪಕ್ಷಕ್ಕೆ ವಿಜಯನಗರ ಸಾಮ್ರಾಜ್ಯ ನೆನಪಾಗಲಿಲ್ಲ,ಅವರಿಗೆ ನೆನಪಾಗಿದ್ದು ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯವನ್ನು ನಾಮಾವಶೇಷ ಮಾಡಿದ ಬಹಮನಿ ಸುಲ್ತಾನರದ್ದು.ಉತ್ತರದಲ್ಲಿ ಮಹಮ್ಮದ್ ಬಿನ್ ತುಘಲಕನ ಕಾಲದಲ್ಲಿ ಹುಟ್ಟಿಕೊಂಡ ಬಹಮನಿ ಸುಲ್ತಾನರನ್ನು ದಕ್ಷಿಣದ ತುಘಲಕ್ ಸರ್ಕಾರ ನೆನಪಿಸಿಕೊಂಡಿದ್ದು ಕಾಕತಾಳೀಯವೋ,ಪುನರ್ಜನ್ಮದ ನೆನಪೋ ಗೊತ್ತಿಲ್ಲ.ಆದರೆ ಇಂತಹ ದರಿದ್ರ ಸರ್ಕಾರವನ್ನು ಸಹಿಸಿಕೊಳ್ಳಬೇಕಾದ ಕರ್ಮ ನಮ್ಮದು.
ಹೊರದೇಶದ ಆಕ್ರಮಣಕಾರರ ಅದರಲ್ಲೂ ಮುಖ್ಯವಾಗಿ ಇಸ್ಲಾಮ್ ದಾಳಿಕೋರರ ಬರ್ಬರತೆ,ಕ್ರೌರ್ಯವೆಂತದ್ದು ಎನ್ನುವುದನ್ನು ಉತ್ತರ ಭಾರತ ಶತಮಾನಗಳ ಕಾಲ ಅನುಭವಿಸಿದೆ. ಈ ವಿಷಯದಲ್ಲಿ ದಕ್ಷಿಣ ಭಾರತದ ಅದೃಷ್ಟ ಚೆನ್ನಾಗಿಯೇ ಇತ್ತು.ಬಹುಶಃ ದಕ್ಷಿಣದ ರಾಜರು ಇಸ್ಲಾಮಿ ದಾಳಿಕೋರರ ಭಯ ನಮಗಿಲ್ಲ ಎಂಬ ಭ್ರಮೆಯಲ್ಲಿಯೇ ಬದುಕುತ್ತಿದ್ದರೋ ಏನೋ,ಆದರೆ ಅದು ಅಲ್ಲಾವುದ್ದೀನ್ ಖಿಲ್ಜಿಯ ಕಾಲದವರೆಗೂ ಮಾತ್ರವೇ.ಖಿಲ್ಜಿಯ ದಂಡನಾಯಕ ಮತಾಂತರಿ ಮಲ್ಲಿಕಾಫರ್, ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಮೇಲೆ ದಾಳಿಗೆ ಮುಹೂರ್ತವಿಟ್ಟ.ಆ ಸಂಧರ್ಭದಲ್ಲಿ ಹೊಯ್ಸಳ ಮಹಾರಾಜ ಮುಮ್ಮಡಿ ಬಲ್ಲಾಳ ವೀರ ತಮಿಳುನಾಡಿನ ತಿರುವಣ್ಣಾಮಲೈನಲ್ಲಿದ್ದ. ಮಲ್ಲಿಕಾಫರನ ಸ್ಥಾನದಲ್ಲಿ ವೀರ ಸೇನಾನಿಯಿದ್ದಿದ್ದರೇ, ಬಲ್ಲಾಳನು ಇದ್ದಾಗಲೇ ರಾಜಧಾನಿಗೆ ಮುತ್ತಿಗೆ ಹಾಕುವ ಧೈರ್ಯ ತೋರುತ್ತಿದ್ದನೋ ಏನೋ,ಆದರೆ ಎಷ್ಟಾದರೂ ಮತಾಂಧ ದಾಳಿಕೋರನಲ್ಲವೇ ಪೃಥ್ವಿರಾಜ ಚೌಹಾಣನ ಕಾಲದಿಂದಲೂ ಇವರು ಗೆದ್ದುಕೊಂಡು ಬಂದಿದ್ದು ಕಪಟದಿಂದಲೇ.ಮಲ್ಲಿಕಾಫರನ ಜಿಹಾದಿ ಸೈನ್ಯ ಸತತ ೧೩ ದಿನಗಳ ಕಾಲ ಹೊಯ್ಸಳರ ಭವ್ಯ ರಾಜಧಾನಿಯನ್ನು ನಾಶಮಾಡಿ ದ್ವಾರಸಮುದ್ರವನ್ನು, “ಹಾಳಾದ ಬೀಡು” ಎನ್ನುವಂತೆ ಮಾಡಿತು,ಜನರ ಬಾಯಿಯಲ್ಲಿ “ಹಳೇಬೀಡು” ಆಗಿ ಹೋಯಿತು. ಈ ವಿನಾಶವೂ ಮುಂಬರಲಿರುವ ಭವ್ಯ ಸಾಮ್ರಾಜ್ಯದ ಮುನ್ನುಡಿಯೇ ಆಗಿ ಹೋಯಿತು.ಹಾಗೊಂದು ಮುನ್ನುಡಿ ಬರೆಯಲು ಹೊರಟ ಹೊಯ್ಸಳ ದೊರೆ ಮುಮ್ಮಡಿ ಬಲ್ಲಾಳ ವೀರನಿಗೆ ಆಗ ಇನ್ನೂ ೮೨ರ ವಯಸ್ಸು ಅಷ್ಟೇ!