ಪುಕಾರೋ ದಿಲೇ ಸೇ , ನಮೋ ಫಿರ್ ಸೇ
– ರಾಕೇಶ್ ಶೆಟ್ಟಿ
ರಾಜ್ಯ ವಿಧಾನಸಭೆಯ ಚುನಾವಣೆಯ ನಂತರ ಕಚೇರಿಯಲ್ಲಿ, ನನ್ನ ತಂಡದವರು ಹೀಗೆ ಹರಟೆ ಹೊಡೆಯುತ್ತ ಕುಳಿತಿದ್ದರು. ಮಾತಿನ ಮಧ್ಯೆ, ನೀನು ಯಾವ ಪಕ್ಷಕ್ಕೆ ವೋಟ್ ಹಾಕಿದ್ದು? ಒಬ್ಬಳನ್ನು ಕೇಳಿದರು. ಆಕೆ ಕಾಂಗ್ರೆಸ್ಸಿಗೆ ಎಂದಳಷ್ಟೇ! ಸುತ್ತ ಮುತ್ತಲಿದ್ದವರೆಲ್ಲಾ, OMG!, What? ಅಂತೆಲ್ಲಾ ಉದ್ಗಾರ ತೆಗೆದರು. ಈ ಕಾಲದಲ್ಲೂ ಕಾಂಗ್ರೆಸ್ಸಿಗೆ ಮತ ನೀಡುವ ವಿದ್ಯಾವಂತರಿದ್ದಾರಲ್ಲಪ್ಪ ಎನ್ನುವುದು ಅವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ಸಿಗೆ ಯಾಕೆ ಮತ ನೀಡಿದೆ ಎಂದು ಕೇಳಿದರೆ,ಮೊದಲಿಗೆ ಅವಳದು ಶುದ್ಧ ಕಾರ್ಪೊರೇಟ್ ಜಗತ್ತಿನವರ ಡಿಪ್ಲೋಮಾಟಿಕ್ ಉತ್ತರದಂತೆ,ಅವೆಲ್ಲಾ ಟೂ ಪರ್ಸನಲ್ ಯು ನೋ ಎಂದಳು,ನಂತರ ಮುಂದುವರೆದು ನನಗೆ ಮೋದಿಯವರ ವಿರುದ್ಧ ಕಂಪ್ಲೇಂಟುಗಳಿವೆ ಅದಕ್ಕೆ ಎಂದಳು. ಅದೇನು ಕಂಪ್ಲೇಂಟು? ಅಂತ ಕೇಳಿದರೆ ಉತ್ತರವಿಲ್ಲ.
ಮತ್ತೊಬ್ಬರು ಆಂಧ್ರದವರು.ಫಲಿತಾಂಶದ ದಿನ, ಬಿಜೆಪಿ ಗೆಲ್ಲಬಾರದು ಎನ್ನುತ್ತಿದ್ದರು. ಬಿಜೆಪಿ ಯಾಕೆ ಗೆಲ್ಲಬಾರದು? ಅಂತ ಕೇಳಿದೆ.ನನಗೆ ಮೋದಿ ಕಂಡರೆ ಆಗುವುದಿಲ್ಲ ಎಂದರು.ಯಾಕೆ ಎಂದರೇ ಅವರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡದೇ ಮೋಸ ಮಾಡಿದ್ದಾರೆ ಆ ಕಾರಣಕ್ಕೆ ಅವರು ಇಲ್ಲೂ ಗೆಲ್ಲಬಾರದು ಎನ್ನುವ ಉತ್ತರ. ಆಂಧ್ರಕ್ಕೆ ಅವರು ಮೋಸ ಮಾಡಿದ್ದಾರೆ ಅಂತ ನಿನಗೆ ಹೇಗೆ ಗೊತ್ತು? ಎಂದರೆ,ಎಲ್ಲರೂ ಹೇಳುತ್ತಿದ್ದಾರಲ್ಲ ಎನ್ನುವ ಉತ್ತರ.ತಕ್ಷಣವೇ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಕುರಿತು ಅರುಣ್ ಜೈಟ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ಅವರ ಗಮನಕ್ಕೆ ತಂದು ತೋರಿಸಿದೆ. ಯುಪಿಎ ಎಡವಟ್ಟಿನಿಂದ ವಿಭಜನೆಯಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಆಂಧ್ರಪ್ರದೇಶಕ್ಕೆ ಸಂಪೂರ್ಣ ಹಣಕಾಸಿನ ನೆರವು ನೀಡಲು ಕೇಂದ್ರ ಬದ್ಧವಾಗಿದೆ. ಆದರೆ,ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವುದನ್ನು ೧೪ನೇ ಹಣಕಾಸು ಸಮಿತಿ ಕೇವಲ ಈಶಾನ್ಯ ರಾಜ್ಯಗಳಿಗೆ ಮಾತ್ರ ಸೀಮಿತಗೊಳಿಸಿದೆ.ಹಾಗಾಗಿ ಆ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ವಿಶೇಷ ಸ್ಥಾನಮಾನ ಪಡೆದ ರಾಜ್ಯಕ್ಕೆ ಕೇಂದ್ರದಿಂದ ಶೇ.೯೦ರಷ್ಟು ಅನುದಾನ ಸಿಗುತ್ತದೆ,ಉಳಿದ ರಾಜ್ಯಗಳಿಗೆ ಶೇ. ೬೦ರಷ್ಟು ಸಿಗುತ್ತದೆ.ಆಂಧ್ರಪ್ರದೇಶಕ್ಕೂ ಕೇಂದ್ರದಿಂದ ಶೇ.೯೦ ರಷ್ಟು ಅನುದಾನ ಕೊಡಲು ನಾವು ಬದ್ಧರಿದ್ದೇವೆ ಎಂದಿದ್ದರು. ಒಟ್ಟಾರೆಯಾಗಿ ವಿಶೇಷ ರಾಜ್ಯದ ಸ್ಥಾನಮಾನ ನೀಡಲು ೧೪ನೇ ಹಣಕಾಸು ಆಯೋಗದ ಅಡ್ಡಿಯಿದ್ದರೂ,ಅದಕ್ಕೆ ಸರಿಸಮಾನವಾದ ವಿಶೇಷ ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿತ್ತು. ನಿಮ್ಮ ಚಂದ್ರಬಾಬು ನಾಯ್ಡು ಅವರೇ ರಾಜಕೀಯ ಲಾಭಕ್ಕಾಗಿ,ಎನ್ಡಿಎ ತೊರೆದು ಈಗ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದೇ.ಎಂತ ಲಾಭ ಎಂದರು? ನಿಮ್ಮ ವೈಎಸಾರ್ ಪಕ್ಷದ ಜಗನ್, ಈ ವಿಶೇಷ ಸ್ಥಾನಮಾನದ ನಿರಾಕರಣೆಯ ಕತೆ ಹೇಳಿಕೊಂಡೇ ಆಡಳಿತ ವಿರೋಧಿ ಅಲೆ ಎಬ್ಬಿಸಿ ಬಿಡುತ್ತಾನೋ ಎಂಬ ಭಯದಿಂದಲೂ ಇದ್ದಿರಬಹುದು ಎಂದೇ. ನಾಯ್ಡು ಅಭಿಮಾನಿಯಾದ ಅವರು ಒಪ್ಪಲು ಸಿದ್ಧರಿರಲಿಲ್ಲ,ಆದರೆ ಕೇಂದ್ರ ಸರ್ಕಾರ ಕೊಡಲು ಸಿದ್ಧವಿತ್ತು,ಆಂಧ್ರವೇ ಪಡೆಯಲಿಲ್ಲ ಎನ್ನುವುದು ಅವರಿಗೆ ಅರ್ಥವಾಗಿತ್ತು.
ಮೇಲಿನ ಎರಡು ಉದಾಹರಣೆಗಳು,ಓದು ಬರಹ ಕಲಿತಿರುವ ಆದರೆ,Politically Uneducated ಆಗಿರುವ ವರ್ಗದ್ದು. ಈ ವರ್ಗಕ್ಕೆ ಸೇರಿದ ಹಲವಾರು ಜನರಿಗೆ ನರೇಂದ್ರ ಮೋದಿಯವರ ಸರ್ಕಾರದ ಮೇಲೆ ಎಂತೆಂತದೋ ಚಿಲ್ಲರೆ ಕಾರಣಗಳಿಗೆ ಕೋಪವಿದೆ. ಇಂತಹ ವರ್ಗವನ್ನು ಮುಟ್ಟಲು ಕಾಂಗ್ರೆಸ್ ಹಾಗೂ ಗಂಜಿಗಿರಾಕಿಗಳ ಸುಳ್ಳಿನ ಫ್ಯಾಕ್ಟರಿಗಳು ಸಂಬಳ ಕೊಟ್ಟು ಕೆಲಸ ಮಾಡಿಸುತ್ತಿವೆ.ಮೋದಿ ಸರ್ಕಾರದ ವಿರುದ್ಧ ಅಪಪ್ರಚಾರಕ್ಕೆಂದೇ ಇತ್ತೀಚಿಗೆ ಥರ್ಡ್ ಪಾರ್ಟಿ ಕ್ಯಾಮ್ಪೇನುಗಳನ್ನು ಶುರು ಮಾಡಿದ್ದಾರೆ. ಅದರಲ್ಲೊಬ್ಬ ಉದ್ದ ನಾಮವನ್ನೆಳೆದುಕೊಂಡು,ರೌಡಿಯಂತೆ ಕಾಣುವವನಿಗೆ ಕೇಸರಿ ಬಟ್ಟೆ ತೊಡಿಸಿ, ರೆಸ್ಟೋರೆಂಟಿನ ಒಳಗೆ ನುಗ್ಗಿಸಿ, ಪಿಜ್ಜಾ-ಬರ್ಗರ್ ತಿನ್ನುವಂತಿಲ್ಲ, ದೇಸಿ ಆಹಾರ ತಿನ್ನು ಎನ್ನುವುದು, ಮಾಲ್ ಒಳಗೆ ನುಗ್ಗಿಸಿ ಆ ಬಟ್ಟೆ ಹಾಕಬೇಡ ಸೀರೆಯನ್ನೇ ಉಡಬೇಕು ಎನ್ನುವುದು,ವಿಡಿಯೋದ ಕಡೆಯಲ್ಲಿ, ಇಂತಹ ಭಾರತ ನಮಗೆ ಬೇಕೇ? ಎನ್ನುವ ಆತಂಕ ಭರಿತ ಪ್ರಶ್ನೆಯಿಂದ ಮುಗಿಸುವುದು. ಇಂತಹ ವಿಡಿಯೋಗಳ ಟಾರ್ಗೆಟ್ ಇರುವುದು ಈ Politically Uneducated ವರ್ಗವೇ ಎನ್ನುವುದು ಗಮನಿಸಬೇಕಾದ ವಿಚಾರ.
೨೦೧೯ರ ಚುನಾವಣೆಯನ್ನು ನೇರಾನೇರ ಗೆಲ್ಲುವುದು ಸಾಧ್ಯವಿಲ್ಲ.ಹಾಗಾಗಿಯೇ ಮೋದಿ ಅಧಿಕಾರ ಹಿಡಿದರೆ ಏನೆಲ್ಲಾ ಅನಾಹುತಗಳಾಗಬಹುದು ಎಂದು ಬೊಬ್ಬೆ ಹಾಕಲಾಗಿತ್ತೋ ಅದೆಲ್ಲವನ್ನು ವಿರೋಧ ಪಕ್ಷಗಳೇ ಮಾಡಿಸಿ ಕಡೆಗೆ ‘ನೋಡಿ ನಾವ್ ಹೇಳಿರ್ಲಿಲ್ವಾ’ ಈಗ ಹಾಗೇ ಆಯಿತು ಎನ್ನುವ ಸ್ಟಾಟರ್ಜಿಯನ್ನೇ ಅನುಸರಿಸುತ್ತಿದ್ದಾರೆ.
ಉದಾಹರಣೆಗೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗೋವಿನ ವಿಷಯದಲ್ಲಿ ನಡೆದ ಹಿಂಸಾಚಾರದಂತಹ ಕ್ರೈಮುಗಳನ್ನು ಯಾರು ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಸಾಬೀತಾಗುವ ಮೊದಲೇ ಸಂಘಪರಿವಾರ ಎಂದು ಗೂಬೆ ಕೂರಿಸುವ ಕೆಲಸಗಳನ್ನು ಮಾಡಿಸಲಾಗುತ್ತಿದೆ.ಈ ರೀತಿಯ ಘಟನೆಗಳು ನಡೆದಾಗಲೆಲ್ಲ,ಕ್ಯಾಮೆರಾ ರೆಡಿ ಇಟ್ಟುಕೊಂಡು ಕಾಯುತ್ತಿರುವ ದೆಹಲಿ ಲ್ಯೂಟೆನ್ಸ್ ಮೀಡಿಯಾಗಳು ರಾಷ್ಟ್ರೀಯ ವಿಪತ್ತೊಂದು ಘಟಿಸಿದೆ ಎನ್ನುವಷ್ಟು ಬೊಬ್ಬೆ ಹೊಡೆಯುತ್ತವೆ. ಮತ್ತೊಮ್ಮೆ ಇವರ ಟಾರ್ಗೆಟ್ Politically Uneducated ವರ್ಗ. ಇವರೆಲ್ಲ ಸೋಷಿಯಲ್ ಮೀಡಿಯಾದಲ್ಲೋ,ಆಫೀಸಿನ ಕ್ಯಾನ್ಟಿನಿನಲ್ಲೋ ಕುಳಿತು ಮೋದಿ ವಿರುದ್ಧ ಕಮೆಂಟ್ ಪಾಸ್ ಮಾಡಿಕೊಂಡು ನೆಗೆಟಿವ್ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಸರ್ಕಾರದ ಸಾಧನೆಗಳನ್ನು ಜನರ ಮನಸ್ಸಿಗೆ ನಾಟುವಂತೆ ದಾಟಿಸುವ ಕೆಲಸ ಅಷ್ಟರ ಮಟ್ಟಿಗೆ ಆಗುತ್ತಿಲ್ಲ.ಆ ಮನುಷ್ಯ ಮೋದಿ ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ರಜೆ ಪಡೆಯದೇ,ಕೆಲಸ ಮಾಡುವುದನ್ನೇ ಬದುಕಾಗಿಸಿಕೊಂಡು ಕಾರ್ಯ ನಿರತರಾಗಿದ್ದಾರೆ. ಅವರ ಸಾಧನೆಗಳನ್ನು ಜನರ ಬಳಿಗೆ ತಲುಪಿಸಬೇಕಾದ ಸಂಸದರು ನಿಜವಾಗಿಯೂ ಆ ಕೆಲಸಗಳನ್ನು ಮಾಡುತ್ತಿದ್ದಾರೆಯೇ ಎನ್ನುವುದು ಪ್ರಶ್ನೆ.
ಈ ನಾಲ್ಕು ವರ್ಷಗಳಲ್ಲಿ ಬಹುತೇಕ ರಂಗಗಳಲ್ಲಿ ಭಾರತ ಯಶಸ್ಸಿನತ್ತ ದಾಪುಗಾಲಿಟ್ಟಿದೆ. ಮೊದಲಿಗೆ ಅಂತರರಾಷ್ಟ್ರೀಯ ವ್ಯವಹಾರ ಸಂಬಂಧಗಳ ಬಗ್ಗೆಯೇ ನೋಡುವುದಾದರೆ, ಈ ಮನುಷ್ಯ ಕಾಲಿಗೆ ಚಕ್ರ ಕಟ್ಟಿಕೊಂಡವರಂತೇ ಜಗತ್ತಿನ ಸಣ್ಣ-ಪುಟ್ಟ ರಾಷ್ಟ್ರಗಳಿಗೂ ಹೋಗಿ ಛಾಪು ಒತ್ತಿ ಬಂದಿದ್ದಾರೆ. ಅಂತರರಾಷ್ಟ್ರೀಯ ಯೋಗದಿನದ ಆಚರಣೆಯಿಂದ, ಯೋಗ ಇಂದು ವಿಶ್ವದ ಮೂಲೆ ಮೂಲೆಗೂ ಹರಡುತ್ತಲಿದೆ.ವಿಶ್ವದ ಆಧ್ಯಾತ್ಮಿಕ ರಾಜಧಾನಿ ಭಾರತವೆನ್ನುವುದರ ಸ್ಪಷ್ಟ ಸಂದೇಶವಿದು. ಹಿಂದೆಲ್ಲಾ ಭಾರತದ ಪ್ರಧಾನಿಗಳೆಂದರೆ ಅಷ್ಟಕಷ್ಟೇ ಎಂಬಂತಿದ್ದ ವರ್ಲ್ಡ್ ಎಕನಾಮಿಕ್ ಫೋರಂನಂತಹ ವೇದಿಕೆಯಲ್ಲಿ ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಮಾತನಾಡಿದ್ದು. ಅಂತರರಾಷ್ಟ್ರೀಯ ಸಾಗರೋತ್ತರ ವ್ಯವಹಾರಗಳ ಸಮಿತಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಿರಬಹುದು,MTCR ಸ್ಥಾನ ಪಡೆದಿದ್ದರಬಹುದು ಅಥವಾ ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತರ ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದ ಪರವಾಗಿ ನಿಂತಿದ್ದೇನು ಕಡಿಮೆ ಸಾಧನೆಯೇ? ಮೋದಿಯವರ ವಿದೇಶ ಪ್ರವಾಸವನ್ನು ಟೀಕಿಸುವ ಗಂಜಿಗಿರಾಕಿಗಳಿಗೆ ಈ ಸಾಧನೆಗಳೆಲ್ಲ ಗೊತ್ತಿಲ್ಲದೇ ಏನಿಲ್ಲ.ಆದರೆ ಸತ್ಯ ಹೇಳಿದರೆ ಗಂಜಿ ಕೇಂದ್ರ ಉಳಿಯಬೇಕಲ್ಲ?
ಬಿಜೆಪಿ ಪಕ್ಷದ ಮೂಲ ಅಜೇಂಡಾಗಳಾಗಿದ್ದ ರಾಮಮಂದಿರ ನಿರ್ಮಾಣ,ಯುನಿಫಾರ್ಮ್ ಸಿವಿಲ್ ಕೋಡ್ ನಂತಹ ಸೂಕ್ಷ್ಮ ವಿಷಯವನ್ನೂ ಅತ್ಯಂತ ಚಾಣಾಕ್ಷ ರೀತಿಯಲ್ಲಿ ನಿಭಾಯಿಸುತ್ತಿರುವುದು ಮೋದಿ ಸರ್ಕಾರದ ಹೆಗ್ಗಳಿಕೆ.ಸುಪ್ರೀಂ ಕೋರ್ಟಿನಲ್ಲಿ ತ್ವರಿತಗತಿಯಲ್ಲಿ ನಡೆಯಲಿರುವ ರಾಮಮಂದಿರ ವಿವಾದವೇ ಮುಖ್ಯವಾಗಿ ಉತ್ತರ ಭಾರತದ ಎದುರಾಳಿ ಪಕ್ಷಗಳ ನಿದ್ದೆಗೆಡಿಸಿದೆ.ಕಳೆದ ೭೦ ವರ್ಷಗಳಿಂದ ಮುಸ್ಲಿಂ ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರ ನೋಡುತ್ತಿದ್ದ ಕಾಂಗ್ರೆಸ್ ಮತ್ತಿತ್ತರ ಸೆಕ್ಯುಲರ್ ಪಕ್ಷಗಳೂ ಟ್ರಿಪಲ್ ತಲಾಖ್ ವಿವಾದಕ್ಕೆ ಕೇಂದ್ರ ಇತಿಶ್ರೀ ಹಾಡಿದ್ದರಿಂದ ಚಿಂತಾಕ್ರಾಂತವಾಗಿದ್ದರೇ,ಇತ್ತ ಮುಸ್ಲಿಂ ಮಹಿಳೆಯರು ತಮ್ಮನ್ನು-ತಮ್ಮ ಬದುಕುವ ಹಕ್ಕನ್ನು ಗೌರವಿಸುವ,ರಕ್ಷಿಸುವ ಧೈರ್ಯವುಳ್ಳ ನಾಯಕನನ್ನು ಮೋದಿಯವರಲ್ಲಿ ಕಾಣುತ್ತಿದ್ದಾರೆ. ಯುನಿಫಾರ್ಮ್ ಸಿವಿಲ್ ಕೋಡಿನ ವಿಷಯವೂ ಸದ್ಯ ಲಾ ಕಮಿಷನ್ ಎದುರಿಗೆ ಜಾರಿಯಲ್ಲಿದೆ. ಹಾಗೆ ನೋಡಿದರೆ ತಕ್ಕ ಮಟ್ಟಿಗೆ ಹಿನ್ನಡೆಯಾಗಿರುವುದು ಕಾಶ್ಮೀರದ ವಿಷಯದಲ್ಲಿಯೇ.
ಮಹಿಳೆಯರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಸಂಪುಟದ ಪವರ್ಫುಲ್ ಖಾತೆಗಳಿರುವುದೇ ಮಹಿಳಾ ಸಚಿವರ ಬಳಿ. ಮಹಿಳಾ ಸಬಲೀಕರಣದ ಬದಲು ಮಹಿಳೆಯರಿಗೆ ನೇತೃತ್ವ ವಹಿಸಿಕೊಡುವುದು ನಮ್ಮ ಸರ್ಕಾರದ ಧ್ಯೇಯ ಎನ್ನುವಂತಿದೆ ಮೋದಿಯವರ ನಡೆ.ಮೆಟರ್ನಿಟಿ ಆಕ್ಟ್ ಗೆ ತಿದ್ದುಪಡಿ ತರುವ ಮೂಲಕ ಖಾಸಗಿ ಕಂಪೆನಿಯ ಮಹಿಳಾ ಉದ್ಯೋಗಿಗಳಿಗೆ ೬ ತಿಂಗಳ ವೇತನ ಸಹಿತ ರಜೆ ಸಿಗುವಂತೆ ಮಾಡಲಾಗಿದೆ.ಭೇಟಿ ಬಚಾವೋ ಭೇಟಿ ಪಡವೋ ಅಭಿಯಾನದ ಮೂಲಕ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ನೀಡುವ ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ.
ಮೋದಿ ಸರ್ಕಾರದ ಮೇಲೆ ಗಂಜಿಗಿರಾಕಿಗಳು ಮಾಡುವ ಆರೋಪ, ಮೋದಿಯವರದ್ದು ಕಾರ್ಪೊರೇಟ್ ಸರ್ಕಾರ, ಅಂಬಾನಿ-ಅಧಾನಿಯಂತವರಿಗೆ ಮಾತ್ರ ಅಚ್ಛೆದಿನ್ ಗಳು ಬಂದಿವೆ ಎನ್ನುವುದು. ಆದರೆ ಈ ಮನುಷ್ಯ ಕೆಂಪುಕೋಟೆಯ ಮೇಲೆ ನಿಂತು ಮಾತನಾಡುವುದು ನನ್ನ ಭಾರತ ಬಯಲು ಶೌಚಾಲಯ ಮುಕ್ತವಾಗಬೇಕು ಎಂದು.ಸ್ವಾತಂತ್ರ್ಯದ ನಂತರ ೬೭ ವರ್ಷಗಳಲ್ಲಿ ನಿರ್ಮಾಣವಾಗಿದ್ದು ೬ ಕೋಟಿಯಷ್ಟು ಟಾಯ್ಲೆಟ್ ಗಳಾದರೇ, ಈ ನಾಲ್ಕು ವರ್ಷಗಳಲ್ಲಿ ನಿರ್ಮಾಣವಾಗಿದ್ದು ೭.೨೫ ಕೋಟಿಯಷ್ಟು ಟಾಯ್ಲೆಟ್ ಗಳು. ೩೮% ಪ್ರತಿಶತದಷ್ಟಿದ್ದ ಸ್ಯಾನಿಟೇಷನ್ ಕವರೇಜ್ ನಾಲ್ಕು ವರ್ಷಗಳಲ್ಲಿ ೮೩% ಆಗಿದೆ. ದೀನ್ ದಯಾಳ್ ಉಪಾದ್ಯಾಯ ಗ್ರಾಮಜ್ಯೋತಿ ಯೋಜನೆಯ ಮೂಲಕ ದೇಶದ ಪ್ರತಿ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಪೂರೈಸುವ ಕೆಲಸ ಚಾಲ್ತಿಯಲ್ಲಿದೆ. ೨೦೧೮ರ ಡಿಸೆಂಬರ್ ವೇಳೆಗೆ ಈ ಗುರಿ ಸಾಧಿಸುವ ಭರವಸೆಯೂ ಇದೆ. ಬ್ರೆಜಿಲ್ ದೇಶದ ಜನಸಂಖ್ಯೆಯನ್ನು ಮೀರಿಸುವ ಮಟ್ಟದಲ್ಲಿ ಉಚಿತ LED ಬಲ್ಬುಗಳನ್ನು ವಿತರಿಸಲಾಗಿದೆ (೨೯. ಕೋಟಿ). ಇನ್ನು ಮಧ್ಯಮ-ಕೆಳ ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ಕಾರ್ಡಿಯಾಕ್ ಸ್ಟೆಂಟ್,ಕೃತಕ ಮಂಡಿ ಚಿಪ್ಪಿನ ಬೆಳೆಯನ್ನು ೫೦-೭೦% ಪ್ರತಿಶತದವರೆಗೆ ಇಳಿಸಲಾಗಿದೆ. ಲಕ್ಷಗಟ್ಟಲೆ ಖರ್ಚಿನ ಬಾಬತ್ತಾಗಿದ್ದ ಈ ಆಪರೇಷನ್ನುಗಳನ್ನು ಜನಸಾಮಾನ್ಯರು ಸಾವಿರಗಳಲ್ಲಿ ಮುಗಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಸೃಷ್ಟಿಯಾಗಿದೆ. ಪ್ರಧಾನಮಂತ್ರಿ ಜನೌಷಧಿ ಕೇಂದ್ರವೂ ಕ್ರಾಂತಿಕಾರಕ ಬದಲಾವಣೆ ತಂದಿದೆ . ದುಬಾರಿ ಔಷಧಗಳು ಇಲ್ಲಿ ಕೈಗೆಟುಕುವ ದರದಲ್ಲಿ ದೊರೆಯುತ್ತಿವೆ. ಬಡವನ ದುಡಿಮೆಯ ಹಣ ಔಷಧದಲ್ಲೇ ಪೋಲಾಗದಂತೆ ನೋಡಿಕೊಳ್ಳುವ ಈ ಯೋಜನೆಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ತಲುಪಿಸುವಲ್ಲಿ ಸಂಸದರು,ಪಕ್ಷ ಸೋತಿದೆ ಎನ್ನಬಹುದೇನೋ. ಹಾಗೆಯೇ ಈ ಕೇಂದ್ರಗಳು ಇನ್ನಷ್ಟು ಹೆಚ್ಚಬೇಕಿದೆ ಕೂಡ.
ಶ್ರೀಮಂತರ ಪರವಿರುವ ಈ ಮೋದಿಯವರ ಅವಧಿಯಲ್ಲೇ ಅಮೆರಿಕಾದ ಜನಸಂಖ್ಯೆಯಷ್ಟು ಜನ್ ಧನ್ ಅಕೌಂಟುಗಳು (೩೧.೫೨ ಕೋಟಿ) ತೆರೆಯಲ್ಪಟ್ಟಿವೆ.ಮೋದಿಯವರ ಕಾಲದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುವುದು ಕೃತಕ ಬುದ್ಧಿಮತ್ತೆಯ ರಾಹುಲ್ ಗಾಂಧಿಯಂತವರ ಆರೋಪ.ಅದಾದರೂ ನಿಜವೇ ಎಂದು ನೋಡಲು ಹೋದರೇ, ಯುಪಿಎ ಕಾಲದಲ್ಲಿ ಭಾರತದಲ್ಲಿ ಇದ್ದಿದ್ದು ಕೇವಲ ೨ ಮೊಬೈಲ್ ತಯಾರಿಕಾ ಘಟಕಗಳು, ಈಗ ಇರುವುದು ೧೨೦ ಘಟಕಗಳು. ಆಗ ೬ ಕೋಟಿಯಷ್ಟು ಮೊಬೈಲ್ ಸೆಟ್ಟುಗಳು ಉತ್ಪಾದನೆಯಾಗುತ್ತಿದ್ದರೆ, ಈಗ ೨೨. ಕೋಟಿಯಷ್ಟು ಉತ್ಪಾದನೆಯಿದೆ. ಆಗಿನ ಉತ್ಪಾದನೆಯ ಟರ್ನ್ ಓವರ್ ೧೮ ಸಾವಿರ ಕೋಟಿಯಷ್ಟಿದ್ದರೆ, ಈ ನಾಲ್ಕು ವರ್ಷಗಳಲ್ಲಿ ೧.೩೨ ಲಕ್ಷ ಕೋಟಿಯಷ್ಟಾಗಿದೆ. ಉದ್ಯೋಗ ಸೃಷ್ಟಿಯಾಗದೇ ಇದೆಲ್ಲ ಹೇಗೆ ಸಾಧ್ಯವಾಯಿತು? ರಾಹುಲ್ ಗಾಂಧಿಯಂತಹ ರೊಬೋಟುಗಳು ಈ ಕೆಲಸ ಮಾಡುತ್ತಿವೆಯೇ? ಮುದ್ರಾಯೋಜನೆ,ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗಳ ಮೂಲಕ ಹೊಸ ಉದ್ಯಮಗಳು, ಉದ್ಯಮಿಗಳು ಹುಟ್ಟಿಕೊಂಡಿವೆ. ಸರ್ವಿಸ್ ಸೆಕ್ಟರಿನಲ್ಲಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. ನಿನ್ನೆಯಷ್ಟೇ ದೆಹಲಿ-ಮೀರತ್ ನಡುವಿನ ೧೪ ಲೇನ್ ಗಳ ರಸ್ತೆ ಉದ್ಘಾಟನೆಯಾಗಿದೆ. ವಾಜಪೇಯಿಯವರ ಕಾಲದಲ್ಲಿ ಶುರುವಾಗಿ ಯುಪಿಎ ಕಾಲದಲ್ಲಿ ನಿಂತು ಹೋಗಿದ್ದ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ ಶರವೇಗದಲ್ಲಿ ಸಾಗಿದೆ. ೨೦೧೪ರ ವೇಳೆಗೆ ೫೩% ಅಷ್ಟಿದ್ದ ಗ್ರಾಮೀಣ ರಸ್ತೆಗಳು ಈಗ ೮೨%ಗೆ ತಲುಪಿವೆ. ಮೊದಲಿಗೆ ದಿನಕ್ಕೆ ೧೨ ಕಿಮೀಗಳಷ್ಟು ನಡೆಯುತ್ತಿದ್ದ ರಸ್ತೆಯ ನಿರ್ಮಾಣದ ವೇಗ ಈಗ ದಿನಕ್ಕೆ ೨೭ ಕಿಮೀಯಷ್ಟು ಏರಿಕೆ ಕಂಡಿದೆ.
ನನ್ನ ಅಂಕಣದ ಮಿತಿಯಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಇಷ್ಟಕ್ಕೆ ನಿಲ್ಲಿಸ ಬೇಕಾಗಿದೆ.ಪಟ್ಟು ಹಾಕಿ ಕುಳಿತರೆ ಪುಸ್ತಕವನ್ನೇ ಬರೆಯಬಹುದಾದಷ್ಟು ಅಭಿವೃದ್ಧಿಯ ಯಶೋಗಾಥೆಯ ಸರಕುಗಳಿವೆ. ಇಷ್ಟೆಲ್ಲಾ ಇದ್ದೂ Politically Uneducated ವರ್ಗ ಮೋದಿಯವರನ್ನು ವಿರೋಧಿಸುತ್ತಿದೆ,ಏನೂ ಮಾಡಿಲ್ಲವೆಂಬ ಹುಸಿ ಬೊಬ್ಬೆಗೆ ದನಿಯಾಗುತ್ತಿದೆ ಎಂದರೇ,ಸರ್ಕಾರದ ಸಾಧನೆಗಳನ್ನು ಜನರಬಳಿಗೆ ತಲುಪಿಸಲು ಸಂಸದರು ಹಾಗೂ ಒಂದು ಪಕ್ಷವಾಗಿ ಬಿಜೆಪಿ ಹೊಸ ವಿಧಾನವನ್ನು ಕಂಡುಕೊಳ್ಳಬೇಕಿದೆ.೨೦೧೯ರಲ್ಲಿ ಮೋದಿಯವರ ಗೆಲುವು ದೇಶದ ಹಿತದೃಷ್ಟಿಯಿಂದ ಅತ್ಯವಶ್ಯಕ.ಎದುರಾಳಿಗಳು ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಎಂತಹದ್ದೇ ನೀಚಮಟ್ಟಕ್ಕೂ ಇಳಿಯಬಲ್ಲರು. ವಿರೋಧಿಗಳನ್ನು ಹಣಿಯಲು ನಾವೆಷ್ಟರ ಮಟ್ಟಿಗೆ ತಯಾರಾಗಿದ್ದೇವೆ? “ಪುಕಾರ್ ದಿಲ್ ಸೇ ನಮೋ ಫಿರ್ ಸೇ” ಎನ್ನುವ ಘೋಷ ವಾಕ್ಯದ ಜೊತೆಗೆ ಎಷ್ಟು ಮನೆ-ಮನಗಳಿಗೆ ಮೋದಿಯವರ ಸರ್ಕಾರದ ಯಶೋಗಾಥೆ ತಲುಪಿಸಲಿದ್ದೇವೆ? ಪ್ರಶ್ನೆಗಳನ್ನು ಕೇಳಿಕೊಂಡು ಮುಂದಿನ ಯುದ್ಧಕ್ಕೆ ಸಜ್ಜಾಗಬೇಕಾದ ಸಮಯವಿದು.
Reblogged this on Suddimitra.com.
What ?