ವಿಷಯದ ವಿವರಗಳಿಗೆ ದಾಟಿರಿ

Archive for

10
ಮಾರ್ಚ್

ದಾಸ ಸಾಹಿತ್ಯ ಮಾರುವೇಷದ ಕಾರ್ಯಾಚರಣೆ – ಕನಕದಾಸ ಬಲೆಯೊಳಗೆ ಬಿದ್ದ ಮಿಕ !!!

– ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು,ವಿವೇಕಾನಂದ ಕಾಲೇಜು, ಪುತ್ತೂರು

ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳು ಹೇಗಿರಬೇಕು ಎನ್ನುವ ಚರ್ಚೆ ಬಹುಕಾಲದಿಂದಲೂ ನಡೆದುಬಂದಿದೆ. ಶಿಕ್ಷಣ ತಜ್ಞರು ಶೈಕ್ಷಣಿಕ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ , ವಿದ್ಯಾರ್ಥಿಗಳ ಮನೋಭಾವ, ಬದಲಾದ ಕಾಲಮಾನ, ಔದ್ಯೋಗಿಕ ಅವಕಾಶ ಇವೇ ಮೊದಲಾದ ಸಂಗತಿಗಳನ್ನು ಕಣ್ಮುಂದೆ ಇರಿಸಿಕೊಂಡು ಪಠ್ಯಗಳನ್ನು ಸಿದ್ಧ ಮಾಡಬೇಕಾಗುತ್ತದೆ. ಪ್ರಾಥಮಿಕ ಶಾಲಾ ಪಠ್ಯದಿಂದ ತೊಡಗಿ ಸ್ನಾತಕೋತ್ತರರ ಪದವಿಯಂತಹ ಉನ್ನತ ಶಿಕ್ಷಣದ ವರೆಗಿನ ಪಠ್ಯಗಳಿಗೂ ಅದರದ್ದೇ ಆದ ಉದ್ದೇಶ ಮತ್ತು ಗುರಿ ಇರುತ್ತದೆ. ಪಠ್ಯವೊಂದು ಅಂತಿಮವಾಗಿ ಓದುವ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವಂತೆಯೂ,ಕುತೂಹಲವನ್ನು ಬೆಳೆಸುವಂತೆಯೂ ಇರಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಪಠ್ಯವೊಂದನ್ನು ಓದಿದ ವಿದ್ಯಾರ್ಥಿಯು ಮುಂದೆ ಆ ವಿಷಯದಲ್ಲಿ ಇನ್ನಷ್ಟು ಸಂಗತಿಗಳನ್ನು ಆಸಕ್ತಿಯಿಂದ ಓದುವಂತೆ ಪ್ರೆರೇಪಿಸಬೇಕೇ ವಿನಃ ಅದು ಓದಿನ ಕೊನೆಯಾಗುವಂತೆ ಮಾಡಬಾರದು ಎನ್ನುವುದೂ ಸತ್ಯ. ವಿದ್ಯಾರ್ಥಿಗಳ ಆಲೋಚನೆಯನ್ನು ವಿಸ್ತರಿಸುವಲ್ಲಿ, ಮನಸ್ಸನ್ನು ಇನ್ನಷ್ಟು ಮುಕ್ತವಾಗಿ ಇರಿಸುವಲ್ಲಿ ಪೂರಕವಾಗಿರಬೇಕೇ ಹೊರತು ಅವರ ಆಲೋಚನೆಗಳಿಗೆ ಪೂರ್ಣವಿರಾಮ ಹಾಕಿ ಯಾರೋ ಹೇರಿದ ಚಿಂತನೆಯ ದಾಸ್ಯಕ್ಕೆ ತಳ್ಳಬಾರದು.

ಉದಾಹರಣೆಗೆ,ಪದವಿ ಹಂತದಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಮೇಜರ್ ವಿಷಯವಾಗಿ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಾಗ ಕನ್ನಡ ಸಾಹಿತ್ಯದ ವಿಸ್ತಾರ, ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವಂತೆ ಪ್ರಾತಿನಿಧಿಕ ಪಠ್ಯಗಳನ್ನು ಅಭ್ಯಾಸಿಸಲಾಗುತ್ತದೆ. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ವಿಷಯವನ್ನು ಅಭ್ಯಾಸ ಮಾಡಿದರೂ ಓದಿದ ಪ್ರಾತಿನಿಧಿಕ ಪಠ್ಯಗಳು ಬೇರೆ ಬೇರೆ ಯಾದರೂ ಅವುಗಳ ನಡುವೆ ಒಂದು ಸಾಮಾನ್ಯ ಸ್ವರೂಪ ಸಮಾನವಾಗಿರುತ್ತದೆ. ಇದಕ್ಕಾಗಿ ಈಗಾಗಲೇ ಒಪ್ಪಿತವಾದ ಮಾದರಿಯೂ ಇದೆ.

ಸಾಹಿತ್ಯ ಪಠ್ಯದ ಭಾಗವೇ ಆಗಿ ಸಾಹಿತ್ಯ ಚರಿತ್ರೆಯನ್ನೂ ಓದುವಾಗ ಈಗಾಗಲೇ ಪ್ರಾಜ್ಞರಿಂದ ರಚನೆಯಾದ ಸಾಹಿತ್ಯ ಚರಿತ್ರೆಯ ಸಂಗ್ರಹರೂಪವನ್ನು ಪಠ್ಯವಾಗಿ ನೀಡಲಾಗುತ್ತದೆ. ಪಠ್ಯ ಪುಸ್ತಕಗಳ ಸಂಪಾದಕರು ಬೇರೆ ಬೇರೆ ಸೆಮಿಸ್ಟರ್‍ಗಳಿಗೆ ಹಂಚಿಹೋಗುವಂತೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ವಿವಿಧ ಪ್ರಕಾರ, ಸಾಹಿತ್ಯ ರೂಪಗಳ ಉಗಮ ವಿಕಾಸದ ಕುರಿತು ಚರಿತ್ರೆಯನ್ನು ಸಂಗ್ರಹಿಸಿ ನೀಡುತ್ತಾರೆ. ಆ ಮೂಲಕ ಭವಿಷ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳೂ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ರಾಜ್ಯಾದ್ಯಂತ ಒಂದೇ ಮಾದರಿಯ ಚರಿತ್ರೆಯ ಪಠ್ಯಗಳು ಅನುಕೂಲಕರವಾಗಿ ಒದಗಿ ಬರುತ್ತಿತ್ತು. ಸಾಹಿತ್ಯ ಚರಿತ್ರೆ ಎನ್ನುವುದು ವಸ್ತುನಿಷ್ಟವಾಗಿ ಅಧಿಕೃತ ದಾಖಲೆಗಳ ನೆರವಿನಿಂದ ರೂಪುಗೊಳ್ಳುವ ಒಂದು ಶಾಸ್ತ್ರ. ಹಲವು ಮಾದರಿಯ ಸಾಹಿತ್ಯ ಚರಿತ್ರೆ ಕೃತಿಗಳು ನಮ್ಮೆದುರಿಗಿದ್ದರೂ ವಿದ್ಯಾರ್ಥಿಗಳು ತರಗತಿ ಪಠ್ಯವಾಗಿ ಓದಬೇಕಾದ ಚರಿತ್ರೆಯಂತೂ ಅತಿಯಾದ ವಿಶ್ಲೇಷಣೆಯ ಭಾರದಿಂದ ಕುಸಿದು, ಲೇಖಕರ ಸೈದ್ಧಾಂತಿಕ ದೃಷ್ಟಿ ಧೋರಣೆಯಿಂದ ದಾರಿ ತಪ್ಪಿಸುವಂತಿರಬಾರದು. ವಿವಿಧ ಕಾಲಘಟ್ಟದ ಸಾಹಿತ್ಯ ಪ್ರಕಾರಗಳನ್ನು ಅವುಗಳ ಸಾಮಾನ್ಯ ಸ್ವರೂಪ, ಗುಣ ಲಕ್ಷಣ,ಸಾಹಿತ್ಯಿಕ ವೈಶಿಷ್ಟ್ಯ ಮತ್ತು ಆ ಕಾಲಘಟ್ಟದ ಒಂದಷ್ಟು ಮುಖ್ಯರಾದ ಕೃತಿಕಾರರ ಪರಿಚಯವನ್ನು ಇಲ್ಲಿ ನೀಡಬೇಕಾಗುತ್ತದೆ. ಇದು ಹೊಸದಾಗಿ ಓದಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿ ಯಾವುದೇ ಪೂರ್ವಾಗ್ರಹಗಳಿಲ್ಲದೆ, ತನ್ನದೇ ಅನುಭವ-ನಿಲುವುಗಳಿಂದ ಕೃತಿಗಳನ್ನು ಅಧ್ಯಯನ ಮಾಡಲು ಸಾದ್ಯವಾಗುತ್ತದೆ.ಈ ರೀತಿಯ ಅಭ್ಯಾಸ ನಡೆದಾಗ ಸಾಹಿತ್ಯದ ನಿಷ್ಪಕ್ಷಪಾತ ಗ್ರಹಿಕೆ ಮೌಲ್ಯಮಾಪನಕ್ಕೆ ಸಾದ್ಯವಾಗುತ್ತದೆ. ರಂ.ಶ್ರಿ.ಮುಗಳಿ, ಎಂ.ಎಂ.ಕಲ್ಬುರ್ಗಿ, ಕೀರ್ತಿನಾಥ ಕುರ್ತಕೋಟಿ,ಎಲ್.ಎಸ್.ಶೇಷಗಿರಿರಾವ್ ಮೊದಲಾದವರು ವೈಯಕ್ತಿಕವಾಗಿ, ಬೆಂಗಳೂರು, ಮೈಸೂರು ವಿ.ವಿ.ಗಳು ಸಾಹಿತ್ಯ ಚರಿತ್ರೆಯ ಹಲವು ಸಂಪುಟಗಳನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳ ಪಠ್ಯಕ್ಕೆ ಇವುಗಳನ್ನು ಆಕರವಾಗಿ ಬಳಸಿಕೊಳ್ಳಲಾಗುತ್ತಿತ್ತು.

ಮತ್ತಷ್ಟು ಓದು »