ವಿಷಯದ ವಿವರಗಳಿಗೆ ದಾಟಿರಿ

Archive for

29
ಮಾರ್ಚ್

2019 : ನವಭಾರತ Vs ಬ್ರಿಟಿಷ್ ಇಂಡಿಯಾ ನಡುವಿನ ಚುನಾವಣೆ

– ರಾಕೇಶ್ ಶೆಟ್ಟಿ

೨೦೧೯ ಚುನಾವಣೆಯ ದಿನಾಂಕ ಘೋಷಣೆಯಾಗಿ ಮೊದಲ ಹಂತದ ಚುನಾವಣೆಯೂ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದೂ ಹೋಗಲಿದೆ. ಈ ಬಾರಿಯ ಚುನಾವಣೆಯ ಮೇಲೆ ಇಡೀ ದೇಶ ಮಾತ್ರವಲ್ಲ ಜಗತ್ತಿನ ಕಣ್ಣೂ ಇದೆ. ೨೦೧೪ರ ಚುನಾವಣೆಯೂ ಹೀಗೆಯೇ ಇತ್ತು.೨೦೧೪ರ ಚುನಾವಣೆ ಭಾರತದ ರಾಜಕೀಯದಲ್ಲಿ ಢಾಳಾಗಿ ಮಿಳಿತವಾಗಿರುವ  ಜಾತಿ,ಹಣ,ರಿಲಿಜಿಯನ್,ಓಲೈಕೆ ಇತ್ಯಾದಿಗಳನ್ನು ಜನತೆಯೇ ನಿವಾಳಿಸಿ ಬಿಸಾಡಿದ,ದೇಶದ ಚಿಂತನೆಯ ದಿಕ್ಕನ್ನು ಬದಲಿಸಿದ ಚುನಾವಣೆ ಎನ್ನಬಹುದು.

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದ ಚುನಾವಣಾ ರಾಜಕೀಯವನ್ನು ಬಹುಶಃ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.ಮೊದಲನೆಯದು ೪೭ ರಿಂದ ೭೦ರ ದಶಕದವರೆಗಿನ ನೆಹರೂ ಕುಟುಂಬದ ರಾಜಕಾರಣ (ಶಾಸ್ತ್ರೀಜಿಯವರ ಸಮಯ ಬಿಟ್ಟು). ೭೦ರ ದಶಕದ ಆದಿಯಿಂದ ೯೦ರ ದಶಕದವರೆಗಿನ ಇಂದಿರಾ ಕಾಂಗ್ರೆಸ್ಸಿನ ಸರ್ವಾಧಿಕಾರಿ ತುರ್ತುಪರಿಸ್ಥಿತಿ ವಿರೋಧಿ ಹಾಗೂ ರಾಮಜನ್ಮಭೂಮಿ ಚಳವಳಿಯರವರೆಗಿನ ರಾಜಕಾರಣ. ೯೦ರ ದಶಕದ ಆದಿಯಿಂದ – ೨೦೧೩ರ ಕೊನೆಯವರೆಗಿನ ಸೆಕ್ಯುಲರಿಸಂ-ಹಿಂದುತ್ವದ ರಾಜಕಾರಣ. ಈ  ನಾಲ್ಕು ಭಾಗಗಳಲ್ಲಿ ನಿಚ್ಚಳ ಬಹುಮತದ ಸರ್ಕಾರಗಳು ರೂಪುತಳೆದಿದ್ದು ನೆಹರೂ ಕಾಲದ ಸ್ವಾತಂತ್ರ್ಯ ಹೋರಾಟದ ಹ್ಯಾಂಗ್ ಓವರ್ ಹಾಗೂ ವಿರೋಧ ಪಕ್ಷಗಳಿಲ್ಲದ ಕಾಲದಲ್ಲಿ,ಇಂದಿರಾ  ಹತ್ಯೆಯ ನಂತರದ ಚುನಾವಣೆಯಲ್ಲಿ ಹಾಗೂ ಕಳೆದ ೨೦೧೪ ರ ಚುನಾವಣೆಯಲ್ಲಿ.

ಮೊದಲ ಎರಡು ಚುನಾವಣೆಯ ವಿಷಯಗಳೇನೂ ಚರ್ಚಿಸ ಬೇಕಾದ ವಿಷಯಗಳೇನೂ ಅಲ್ಲ. ಇನ್ನುಳಿಯುವುದು ೨೦೧೪ರ ಚುನಾವಣೆಯ ವಿಷಯ. ಯಾಕೆ ೨೦೧೪ರ ಚುನಾವಣೆಯ ವಿಷಯ ಮುಖ್ಯವಾಗುತ್ತದೆ ಎಂದರೇ,ಯಾವುದೇ ಜಾತಿ-ರಿಲಿಜಿಯನ್-ಓಲೈಕೆ-ಬಿಟ್ಟಿ ಭಾಗ್ಯ ಯೋಜನೆಗಳಿಲ್ಲದೇ, ಗುಜರಾತಿನಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಅಭಿವೃದ್ಧಿಯ,ನವಭಾರತದ ಕನಸು ಕಟ್ಟಿಕೊಟ್ಟಿದ್ದರು ನರೇಂದ್ರ ಮೋದಿಯವರು.ಆದರೆ ವಿಪಕ್ಷಗಳಿಗೆ ಮೋದಿಯವರ ಅಭಿವೃದ್ಧಿ ಅಜೆಂಡದ ಅಸ್ತ್ರ್ರಕ್ಕೆ ಪ್ರತಿಯಾಗಿ ವಿಭಿನ್ನವಾದ ಅಥವಾ ಅದಕ್ಕಿಂತಲೂ ಉತ್ತಮವಾದ ಅಜೇಂಡಾವನ್ನು ಸೆಟ್ ಮಾಡಲಾಗಲೇ ಇಲ್ಲ. ಅವರು ೨೦೦೨ರ ಗುಜಾರಾತಿನಲ್ಲೇ ಉಳಿದುಹೋದರು. ಇತ್ತ ಮೋದಿಯವರು ನವಭಾರತದ ಅಲೆಯಲ್ಲಿ ೨೦೧೪ರ ಮೇ ತಿಂಗಳಲ್ಲಿ ಸಂಸತ್ತಿಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು. ಮತ್ತಷ್ಟು ಓದು »