ನೋಡಿ ಸ್ವಾಮಿ .. ನಾವಿರೋದು ಹೀಗೆ.. !!
- ಸುಜಿತ್ ಕುಮಾರ್
ಮೊನ್ನೆ ಆ ದೃಶ್ಯಗಳನ್ನು ನೋಡಿ ಯಾಕೋ ನಮ್ಮ ಶಂಕರ್ ನಾಗ್ ನೆನಪಾದ್ರು. ಅದು ಶಂಕರ್ ನಾಗ್ ಅನ್ನೋದಕ್ಕಿಂತ ಶಂಕರ್ ನಾಗ್ ಅಭಿನಯದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಚಿತ್ರದ ಟೈಟಲ್ ಹಾಡು ನೆನಪಾಯಿತು ಎನ್ನಬಹುದು. ನಗರದ ಗಲ್ಲಿಮೂಲೆಗಲ್ಲಿ ತನ್ನ MAT ಬೈಕಿನ ಮೇಲೆ ಕೂತು ಹಾಡುತ್ತಾ ಸಾಗುವ ಚಿತ್ರದ ದೃಶ್ಯದ ತುಣುಕು, ದಿನ ಬೆಳಗಾದರೆ ಬೆಳ್ಳನೆಯ ಬಟ್ಟೆಗಳನ್ನು ತೊಟ್ಟು ‘ನಾನೇ ಸಾಚಾ ಆತ ಮಾತ್ರ ನೀಚ’ ಎಂಬಂತೆ ಎಲ್ಲೆಂದರಲ್ಲಿ ಬೈಯುವ ಭಾಷಣಗಳನ್ನು ಮಾಡುತ್ತಾ ಓಟಿಗಾಗಿ ಊರೂರು ಸುತ್ತುತ್ತಾ ಕೊನೆಗೆ ಅಪ್ಪಿ ತಪ್ಪಿ ಆತನೇ ಎದುರಿಗೆ ಪ್ರತ್ಯಕ್ಷವಾದರೆ ‘ಹಿಂದಿ ಚೀನೀ ಬಾಯಿ ಬಾಯಿ’ ಎಂಬುವಂತೆ ತಬ್ಬಿಕೊಂಡು ಮುತ್ತಿಡುವುದೊಂದೇ ಬಾಕಿ ಏನೋ ಎಂಬ ಧಾಟಿಯಲ್ಲಿ ನಟಿಸುತ್ತಾ ನಿಲ್ಲುವ ರಾಜಕಾರಣಿಗಳನ್ನು ನೆನೆಪಿಸುತ್ತಿತ್ತು. ಅವರುಗಳ ಹಿಂದೆಯೇ ನಮ್ಮ ಶಂಕರ್ ಗುರು ‘ನೋಡಿ ಸ್ವಾಮಿ ಇವ್ರ್ ಇರೋದೇ ಹೀಗೆ’ ಎಂದು ಹಾಡಿದಂತೆ ಭಾಸವವಾಗುತ್ತಲಿತ್ತು. ನಿಂತ ನೆರಳಿಗೆ ಆಗದ ಮಾಜಿ ಸಿಎಮ್ ಗಳಿಬ್ಬರು ವೇದಿಕೆಯೊಂದರ ಮೇಲೆ ಕೈ ಕೈ ಕುಲುಕುತ್ತಾ ‘ಪಾಲಿಟಿಕ್ಸ್ ಅಪಾರ್ಟ್, ನಾವಿಬ್ಬರು ಅತ್ಯುತ್ತಮ ಸ್ನೇಹಿತರು’ ಎಂದಾಗ ನೆರೆದಿದ್ದ ನೂರಾರು ಅಭಿಮಾನಿಗಳು ತಲೆಯನ್ನು ಕೆರೆದುಕೊಳ್ಳುತ್ತಾ ಒಬ್ಬರನ್ನೊಬ್ಬರು ಮಿಕ ಮಿಕ ನೋಡತೊಡಗಿದಂತೂ ಸುಳ್ಳಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳಾಗಿ ಅಂತವರ ಬಾಯಿಂದ ಇಂಥ ಹಿರಿಯ ಮಾತುಗಳು ಬರುವುದು ತಪ್ಪೇನಿಲ್ಲ. We Should Appreciate that. ಆದರೆ ಇಂದು ಹೀಗಂದು ನಾಳೆ ಮತ್ತದೇ ಮೈ ಮೈ.. ತು ತು .. ಎಂದು ಬೆಂಕಿಕಾರುವ ಮಾತುಗಳಾದರು ಏತಕ್ಕೆ ಸ್ವಾಮಿ? ಮಿಗಿಲಾಗಿ ಇಂತಹ ಪೊಳ್ಳು ಮಾತುಗಳ ಸರದಾರರಾಗಿ ಅವರುಗಳಿಗೇ ಇರದ ವೈರತ್ವವನ್ನು ಒಬ್ಬ ಕಾಮನ್ ಸಿಟಿಸನ್ ಆಗಿ ನಾವ್ಯಕ್ಕೆ ಕಟ್ಟಿಕೊಳ್ಳಬೇಕು ಹೇಳಿ? ಮತ್ತಷ್ಟು ಓದು