ಮತದಾರರ ಮೋದಿ Vs ಬೆಂಗಳೂರು ಮಾಫಿಯಾ
– ರಾಕೇಶ್ ಶೆಟ್ಟಿ
‘ನಾವು ಗೆದ್ದಿರುವ ಕ್ಷೇತ್ರಗಳನ್ನು ಕಳೆದುಕೊಳ್ಳಬಾರದು ಅಣ್ಣ. ಈ ಹಿಂದೆ ಯುಟಿ ಖಾದರ್ ಅಪ್ಪನ ಕಾಲದಲ್ಲೇ ಉಳ್ಳಾಲದಲ್ಲಿ ಬಿಜೆಪಿಯಿಂದ ಜಯರಾಮ ಶೆಟ್ಟರು ಗೆದ್ದಿದ್ದರು. ನಂತರದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕೋಪಿಸಿಕೊಂಡು ದಳಕ್ಕೆ ಹೋಗಿ ಸ್ಪರ್ಧಿಸಿ ವೋಟ್ ಡಿವೈಡ್ ಮಾಡಿದರು.ಹಾಗೆ ಕಾಂಗ್ರೆಸ್ಸಿನ ಯು.ಟಿ ಫರೀದ್ ಗೆದ್ದರು. ಉಳ್ಳಾಲ ನಮ್ಮ ಕೈ ಬಿಟ್ಟು ಹೋಯಿತು. ಅಲ್ಲಿಂದ ಇಲ್ಲಿನವರೆಗೆ ನಮಗೆ ಆ ಕ್ಷೇತ್ರವನ್ನು ಮತ್ತೆ ಗೆಲ್ಲಲಿಕ್ಕಾಗಿಲ್ಲ ನೋಡಿ’ ನನ್ನ ತಮ್ಮನಂತಹ ಮಿತ್ರ ರಾಜೇಶ್ ನರಿಂಗಾನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ ಮಾತು ನನಗೀಗ ನೆನಪಾಯ್ತು. ನೆನಪು ಮಾಡಿಸಲು ಕಾರಣವಾಗಿದ್ದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಒಳಬೇಗುದಿ.
ಬೆಂಗಳೂರು ದಕ್ಷಿಣದ ಬಗ್ಗೆ ಮಾತನಾಡುವ ಮೊದಲು, ರಾಜರಾಜೇಶ್ವರಿ ನಗರ,ಜಯನಗರದ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಬೇಕು.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಅತಿ ಪ್ರಮುಖ ನಾಯಕರು ಹಠಾತ್ ನಿಧನರಾಗುವ ಮೂಲಕ ಪಕ್ಷಕ್ಕೆ ನಷ್ಟವಾಗಿದೆ. ಆದರೆ ಈ ರೀತಿಯ ಹಠಾತ್ ಆಘಾತಗಳು ಈ ಪಕ್ಷದ ಆರಂಭದಿಂದಲೇ ಶುರುವಾಗಿದೆ. ಪಕ್ಷದ ಆಧಾರ ಸ್ತಂಭದಂತಿದ್ದ ಶ್ಯಾಂ ಪ್ರಸಾದ್ ಮುಖರ್ಜಿ,ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕೊಲೆಗಳು ಮೊದಲನೇ ಆಘಾತಗಳು. ಅದರಿಂದ ಚೇತರಿಸಿಕೊಂಡೇ ಪಕ್ಷ ಇಲ್ಲಿವರೆಗೂ ಬಂದು ನಿಂತಿದೆ. ಪ್ರಮೋದ್ ಮಹಾಜನ್,ಗೋಪಿನಾಥ್ ಮುಂಡೆ,ಪರಿಕ್ಕರ್, ಅನಂತಕುಮಾರ್,ವಿಜಯಕುಮಾರ್ ಇವೆಲ್ಲ ಇತ್ತೀಚಿನ ಆಘಾತಗಳು.