‘ಯಾನ’ ದಲ್ಲಿ ಒಂದು ಸುತ್ತು
– ಡಾ.ಸಂತೋಷ್ ಕುಮಾರ್ ಪಿ.ಕೆ
‘ಯಾನ’ ಇತ್ತೀಚೆಗಷ್ಟೆ ಬಿಡುಗಡೆಯಾದ ಭೈರಪ್ಪನವರ ಕಾದಂಬರಿಯಾಗಿದೆ.ಹಾಟ್ ಕೇಕ್ ರೀತಿಯಲ್ಲಿ ಮಾರಾಟವಾದ ಪುಸ್ತಕ ಅವರ ಕಿರೀಟಕ್ಕೆ ದಕ್ಕಿದ ಮತ್ತೊಂದು ಗರಿ ಎಂದರೂ ತಪ್ಪಾಗಲಾರದು.ಮಾನವೀಯ ಸಂಬಂಧಗಳ ತಾಕಲಾಟವನ್ನು ಬಿಂಬಿಸುವ ಭೈರಪ್ಪನವರ ಹಲವಾರು ಕಾದಂಬರಿಗಳಲ್ಲಿ ಇದೂ ಸಹ ಒಂದಾಗಿದೆ. ಇಡೀ ಕಾದಂಬರಿ ಉತ್ತರಾ ಮತ್ತು ಸುದರ್ಶನ್ ಎಂಬ ಇಬ್ಬರು ಪ್ರಾಯೋಗಿಕ ಅಥವಾ ಎಕ್ಸ್ಪೆರಿಮೆಂಟ್ ದಂಪತಿಗಳ ಸಂಬಂಧದೊಳಗಿನ ತೊಳಲಾಟವನ್ನು ಅಂದವಾಗಿ ಚಿತ್ರಿಸುತ್ತದೆ. ಬೇರೊಂದು ಗ್ರಹಕ್ಕೆ (ಪ್ರಾಕ್ಸಿಮಾ ಸೆಂಟರ್) ಚಲಿಸುವ ಮತ್ತು ಎಂದೆಂದಿಗೂ ಭೂಮಿಗೆ ಹಿಂದಿರುಗದ ರಾಕೆಟ್ ಒಳಗೆ ಒಂದು ಲೋಕವನ್ನು ಸೃಷ್ಟಿಸಿ ಆಕಾಶ್ ಮತ್ತು ಮೇದಿನಿಯರ ಮೂಲಕ ಅವರ ಪೋಷಕರ ಜೀವನಗಾಥೆಯನ್ನು ಎಳೆಎಳೆಯಾಗಿ ಬಿಡಿಸುವ ಕಾರ್ಯವನ್ನು ಲೇಖಕರು ಮಾಡುತ್ತಾರೆ.
ಯಾನವು ವೈಜ್ಞಾನಿಕ ಪ್ರಯೋಗಕ್ಕಾಗಿ ಭೂಮಿಯಿಂದ ರಾಕೆಟ್ ಮೂಲಕ ಬೇರೊಂದು ನಕ್ಷತ್ರ/ಗ್ರಹಕ್ಕೆ ಪ್ರಯಾಣಿಸುವ ಕತೆಯಾಗಿದೆ. ಯಾನ ಎಂಬುದು ಇಲ್ಲಿ ಎರಡು ಅರ್ಥಗಳನ್ನು ಒಳಗೊಳ್ಳಬಹುದು, ಒಂದು, ಬೇರೆ ಗ್ರಹಕ್ಕೆ ಮಾಡುವ ಪ್ರಯಾಣ ಮತ್ತೊಂದು ಜೀವನದಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಮಾಡುವ ಪ್ರಯಾಣ. ವಿಜ್ಞಾನದ ಕುರಿತು ಕೆಲವೊಂದು ಉಪಯುಕ್ತ ಮಾಹಿತಿಗಳನ್ನೂ ಸಹ ಈ ಕಾದಂಬರಿ ಒದಗಿಸುತ್ತದೆ. ಅದರ ಜೊತೆಗೆ ಮನುಷ್ಯರ ಜೀವನದಲ್ಲಿ ಸಹಜವಾಗಿ ನಡೆಯುವ ಸರಸ ಸಲ್ಲಾಪ, ಅನ್ವೇಷಣಾ ಗುಣ, ವಿರಸ, ಆಧ್ಯಾತ್ಮ, ಶರಣಾಗುವಿಕೆ, ಅಹಂ ಇನ್ನೂ ಮುಂತಾದ ಸೂಕ್ಷ್ಮ ಸಂಗತಿಗಳನ್ನು ಹಲವಾರು ಘಟನೆಗಳ ಮೂಲಕ ಕಾದಂಬರಿ ಹೊರಗೆಡಹುತ್ತದೆ. ಒಟ್ಟಿನಲ್ಲಿ ಓದುಗಾಸಕ್ತರಿಗೆ ಎಲ್ಲಿಯೂ ಬೋರ್ ಮಾಡದ ರೀತಿಯಲ್ಲಿ ತನ್ನೊಂದಿಗೆ ಕೊಂಡ್ಯೊಯ್ಯುವ ಗುಣ ಯಾನದ ವೈಶಿಷ್ಟ್ಯವಾಗಿದೆ.
ಯಾನವು ಒಂದು ರೋಚಕ ಕತೆಯಾಗಿದೆ. ಏಕೆಂದರೆ ಓದುಗರಿಗೆ ಎರಡು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುವ ಮೂಲಕ ಕೊನೆಯವರೆಗೂ ಉತ್ತರದ ರಹಸ್ಯವನ್ನು ಕಾಪಾಡಿಕೊಳ್ಳುತ್ತದೆ. ಆ ಪ್ರಶ್ನೆಗಳೆಂದರೆ, 1.ಆಕಾಶ್ ಮತ್ತು ಮೇದಿನಿ ಎಂಬ ಸಹೋದರ ಸಹೋದರಿಯರು ವಿವಾಹವಾಗಲು ಹೇಗೆ ಸಾಧ್ಯ? ಹಾಗೂ 2. ಆಕಾಶ್ನ ತಂದೆ ಯಾರು? ಈ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿಯೇ ಕಾದಂಬರಿ ಕೊನೆಯವರೆಗೂ ಕುತೂಹಲವನ್ನು ಉಳಿಸುತ್ತದೆ. ಕಾದಂಬರಿಯನ್ನು ಓದಲು ಪ್ರಾರಂಭಿಸಿದಾಗ, ಮುಂದೆ ಏನಾಗಬಹುದು ಎಂಬ ನಿರೀಕ್ಷೆಗಳೂ ಸಹ ಓದುಗರಿಗೆ ಹುಟ್ಟದೆ ಇರಲಾರದು. ಇದಿಷ್ಟು ಕಾದಂಬರಿಯ ಮೇಲ್ನೋಟದ ವೈಶಿಷ್ಟ್ಯಗಳು. ಈ ಕಾದಂಬರಿಯಲ್ಲಿ ಇನ್ನೊಂದು ವಿಶೇಷವಿದೆ ಅದು ಈ ಕೆಳಗಿನಂತಿದೆ.
ಎದೆಗೆ ಬಿದ್ದ ಅಕ್ಷರ: ಸಮಾನತೆಯ ಕನಸು ಮತ್ತು ಕಾಣ್ಕೆ
– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯ ಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟ
‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಪುಟಗಳು ತೆರೆದುಕೊಳ್ಳುವುದೇ ಈ ಮೇಲಿನ ನುಡಿಯೊಂದಿಗೆ.ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಅನೇಕ ಮುದ್ರಣಗಳನ್ನು ಕಂಡ ಪುಸ್ತಕವಿದು. ದೇವನೂರ ಮಹಾದೇವ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ. ಅವರ ಅನೆಕ ಬಿಡಿ ಲೇಖನಗಳು ಮತ್ತು ಕಥೆಗಳು ಪ್ರಕಟವಾಗಿವೆಯಾದರೂ ಪುಸ್ತಕ ರೂಪದಲ್ಲಿ ಅವರು ಬರಹಗಳು ಬೆಳಕು ಕಂಡಿದ್ದು ಬಹಳಷ್ಟು ಕಡಿಮೆ ಎಂದೇ ಹೇಳಬಹುದು. 1973 ರಲ್ಲಿ ‘ದ್ಯಾವನೂರು’, 1982 ರಲ್ಲಿ ‘ಒಡಲಾಳ’, 1988 ರಲ್ಲಿ ‘ಕುಸುಮ ಬಾಲೆ’ಯ ನಂತರ ಪ್ರಕಟವಾದ ಕೃತಿ ಈ ‘ಎದೆಗೆ ಬಿದ್ದ ಅಕ್ಷರ’.
ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾದ ದೇವನೂರ ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಆರಂಭದ ಕೆಲವು ವರ್ಷಗಳ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಮಹಾದೇವ ಅದು ತಮ್ಮ ಜಾಯಮಾನಕ್ಕೆ ಒಗ್ಗದೇ ಹೋದಾಗ ಯಾವ ಮುಲಾಜಿಲ್ಲದೆ ನೌಕರಿಗೆ ರಾಜಿನಾಮೆಯಿತ್ತು ಕೃಷಿಯಲ್ಲಿ ತೊಡಗಿಸಿಕೊಂಡವರು.ಜೊತೆಗೆ ಜೊತೆಗೆ ದಲಿತ ಚಳುವಳಿ ಮತ್ತು ಬಂಡಾಯ ಸಾಹಿತ್ಯದೊಂದಿಗೂ ತಮ್ಮನ್ನು ಗುರುತಿಸಿಕೊಂಡವರು. ಹಾಗೆಂದು ದಲಿತ ಚಳುವಳಿಯ ಬಗ್ಗೆ ಅವರದು ಸಂಪೂರ್ಣ ಕುರುಡು ನಂಬಿಕೆಯಲ್ಲ. ದಲಿತ ಸಂಘರ್ಷ ಸಮಿತಿಯಲ್ಲಿನ ಒಳಜಗಳ ಹಾಗೂ ಒಡಕುಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವ ಎದೆಗಾರಿಕೆ ಅವರದು. ಕುವೆಂಪು ಮತ್ತು ಬೇಂದ್ರೆ ಸಾಹಿತ್ಯದ ಜೊತೆಗೆ ಶೇಕ್ಸ್ ಪಿಯರ್ ಮತ್ತು ಟಾಲ್‍ಸ್ಟಾಯ್ ಅವರನ್ನೂ ಓದಿಕೊಂಡಿರುವ ದೇವನೂರ ಮಹಾದೇವ ಅಂಬೇಡ್ಕರರಷ್ಟೇ ಗಾಂಧಿಯನ್ನೂ ಪ್ರೀತಿಸಬಲ್ಲರು. ಅವರು ಗತದ ನೆನಪುಗಳೊಂದಿಗೆ ವರ್ತಮಾನದಲ್ಲಿ ಬದುಕುತ್ತ ನಾಳಿನ ಕನಸುಗಳನ್ನು ಕಾಣುವರು. ಅವರ ಈ ವ್ಯಕ್ತಿತ್ವಕ್ಕೊಂದು ನಿದರ್ಶನ ಕೊಡುವುದಾದರೆ ‘ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಭಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ’ ಎನ್ನುವ ಅವರ ಹೇಳಿಕೆಯೇ ಒಂದು ದೃಷ್ಟಾಂತ. ತಳ ಸಮುದಾಯಗಳ ಬದುಕಿನ ತಲ್ಲಣಗಳನ್ನು ಬರವಣಿಗೆಯ ಮೂಲಕ ತೆರೆದಿಡುತ್ತಿರುವ ಮಹಾದೇವರ ಬರಹಗಳಲ್ಲಿ ಸಂವೇದನೆ ಹಾಗೂ ಸಮಾಜದ ಕುರಿತಾದ ಕಾಳಜಿ ಈ ಗುಣಗಳೇ ಎದ್ದು ಕಾಣುತ್ತವೆ. ‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಚಿಂತಕರು’ ಸಂದರ್ಶನವೊಂದರಲ್ಲಿ ಶಂಕರ ಮೊಕಾಶಿ ಪುಣೇಕರ್ ಅವರು ಹೇಳಿದ ಈ ಮಾತು ದೇವನೂರ ಮಹಾದೇವರಿಗೆ ಹೆಚ್ಚು ಅನ್ವಯಿಸುತ್ತದೆ.
ಭಿತ್ತಿ : ಭಾವಪ್ರಧಾನ ವ್ಯಕ್ತಿತ್ವದ ಕಥನ
– ರಾಜಕುಮಾರ.ವ್ಹಿ.ಕುಲಕರ್ಣಿ,ಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ
‘ಚಿಕ್ಕ ಹುಡುಗನಾದ್ದರಿಂದ ಚಟ್ಟದ ಅಗತ್ಯವಿರಲಿಲ್ಲ. ನಾನೇ ಎತ್ತಿ ಎಡ ಹೆಗಲ ಮೇಲೆ ಹೊತ್ತುಕೊಂಡು ಬಲಗೈಲಿ ಬೆಂಕಿಯ ಮಡಕೆ ಹಿಡಿದು ಹೋಗುವುದೆಂದು ತೀರ್ಮಾನವಾಯಿತು. ಹೆಣ ಎತ್ತುವ ಮೊದಲು ಒಂದೊಂದು ಹಿಡಿಯಂತೆ ಒಟ್ಟು ಮೂರು ಹಿಡಿ ಅಕ್ಕಿ ಕಾಳು ನಾನು, ಅಜ್ಜಿ, ಲಲಿತ ಹೆಣದ ಬಾಯಿ ಮೇಲೆ ಸುರಿದ ನಂತರ ನಾನು ಮುಕ್ಕಿರಿದು ಎತ್ತಿ ಹೆಣವನ್ನು ಎಡ ಹೆಗಲ ಮೇಲೆ ಹಾಕಿಕೊಂಡು ಕೆಂಪು ಸೀರೆಯ ತುಂಡನ್ನು ಹೊದಿಸಿ ಮಡಕೆಯ ಬೆಂಕಿಯನ್ನು ಬಲಗೈಲಿ ಹಿಡಿದು ಬೀದಿಯಲ್ಲಿ ಹೊರಟೆ. ಏಳು ವರ್ಷದ ಹುಡುಗನ ಹೆಣದ ಭಾರಕ್ಕೆ ಎಡ ಹೆಗಲು ಸೇದಿ ನುಲಿಯತೊಡಗಿತು.ಅತ್ತಿತ್ತ ಹೊರಳಿಸಿ ಭಾರದ ಸ್ಥಾನವನ್ನು ಬದಲಿಸಿಕೊಳ್ಳಲು ಬಲಗೈ ಮುಕ್ತವಾಗಿರಲಿಲ್ಲ. ಅದಕ್ಕೆ ಕೂಡ ಬೆಂಕಿಯ ರಾವು ಹೊಡೆಯುತ್ತಿತ್ತು. ಸುಸ್ತಾಯಿತೆಂದು ಪದೇ ಪದೇ ಕೆಳಗಿಳಿಸಿ ಸುಧಾರಿಸಿಕೊಂಡು ಪಯಣವನ್ನು ಮುಂದುವರೆಸುವಂತೆಯೂ ಇಲ್ಲ. ಸ್ಮಶಾನಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತು ಹೋಗಿದ್ದವು. ನನ್ನ ಕಣ್ಣುದುರಿಗೇ ಕೃಷ್ಣಮೂರ್ತಿಯ ಹೆಣ ಕಪ್ಪು ತಿರುಗಿ ಚರ್ಮ ಸುಲಿದು ಬಿಳಿಯ ನೆಣ ಬಾಯ್ದೆರೆದು ತೊಟ್ಟಿಕ್ಕಿ ಅದೇ ಇಂಧನವಾಗಿ ಹೆಣವೇ ಹೊತ್ತಿಕೊಂಡಿತು’. ಓದಿದ ಆ ಕ್ಷಣ ಬುದ್ದಿಯನ್ನೇ ಮಂಕಾಗಿಸಿ ಮನಸ್ಸನ್ನು ಆರ್ದ್ರಗೊಳಿಸುವ ಈ ಸಾಲುಗಳು ನಾನು ಇತ್ತೀಚಿಗೆ ಓದಿದ ‘ಭಿತ್ತಿ’ ಪುಸ್ತಕದಿಂದ ಹೆಕ್ಕಿ ತೆಗೆದವುಗಳು.
‘ಭಿತ್ತಿ’ ಇದು ಕನ್ನಡ ಸಾಹಿತ್ಯಕ್ಕೆ ಕ್ಲಾಸಿಕ್ ಕಾದಂಬರಿಗಳನ್ನು ನೀಡಿರುವ ಶ್ರೇಷ್ಠ ಬರಹಗಾರ ಸಂತೇಶಿವರ ಲಿಂಗಣ್ಣ ಭೈರಪ್ಪನವರ ಆತ್ಮಕಥೆ. ಇಪ್ಪತ್ನಾಲ್ಕು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್.ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಟ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ 14 ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ.
ಸಂಸ್ಕಾರ ಮತ್ತು ವಂಶವೃಕ್ಷ: ಅಪೂರ್ಣದಿಂದ ಪೂರ್ಣದೆಡೆಗೆ
-ಎಸ್.ಎನ್.ಭಾಸ್ಕರ್, ಬಂಗಾರಪೇಟೆ.
ಓದುವ ಮುನ್ನ:
ಸಿದ್ದಾಂತ, ಬದ್ದತೆ, ನಿಷ್ಠೆ ಇವು ಹೆಚ್ಚು ಬಿಗಿಯಾದಷ್ಟೂ ಬೌದ್ದಿಕ ತಿಳುವು ಉಸಿರುಗಟ್ಟುತ್ತದೆ. ಗ್ರಹಿಕೆಯು ಪೂರ್ವಾಗ್ರಹಗಳಿಂದ ಹೊರತಾಗಿದ್ದಷ್ಟೂ ನಿಲುವು ಪರಿಪಕ್ವವಾಗುತ್ತದೆ. ಚಿಂತನೆ ಮತ್ತಷ್ಟು ವಿಕಸಿತವಾಗುತ್ತದೆ. ಸಾಹಿತ್ಯ, ಸೃಷ್ಟಿ ಅಥವಾ ಇಡೀ ಮನುಕುಲವೇ ಆಗಲೀ ಸತ್ಯಾನ್ವೇ಼ಣೆಯ ಹಾದಿಯಲ್ಲಿ, ಸತ್ಯ-ಅಸತ್ಯಗಳ ಪರಾಮರ್ಷೆಯಲ್ಲಿ ನಿತ್ಯ ಚಲನಶೀಲ, ಅಪೂರ್ಣದಿಂದ ಪೂರ್ಣದೆಡೆಗೆ. ಪೂರ್ಣತೆ ಎಂಬುದು ಅಂತ್ಯವಿಲ್ಲದ ಹಾದಿ, ಇದರೆಡೆಗಿನ ಪಯಣ ನಿರಂತರ. ಇಗೋ ಮುಟ್ಟಿದೆ ಇದೇ ಅಂತ್ಯ, ಇದೇ ಸತ್ಯ ಎಂದು ಗ್ರಹಿಸಿದ ಮರುಕ್ಷಣಕ್ಕೆ ಮತ್ತೊಂದು ಹಾದಿ ಕಾಲ ಬುಡದಿಂದ ಹಾಯುತ್ತಾ ಅನಂತದವರೆಗೆ ಹಾಸಿರುತ್ತದೆ. ಧುರ್ಗಮವೋ ಸುಗಮವೋ ಹೆಜ್ಜೆ ಇಟ್ಟ ನಂತರವಷ್ಟೇ ತಿಳಿಯುತ್ತದೆ. ಗ್ರಹಿಕೆಯಿಂದ ಅರಿವು, ಅರಿವಿನಿಂದ ಜ್ಞಾನ, ಹೀಗೆ ಮುಂದೆ ಮುಂದೆ ಸಾಗಿದಷ್ಟೂ ತಾತ್ಕಾಲಿಕವಾಗಿಯಾದರೂ ಪೂರ್ಣತೆಯ ಅನುಭವ ದೊರೆಯುತ್ತದೆ. ಇದೊಂದು ಅಂತ್ಯವಿಲ್ಲದ ಹಾದಿ, ಪರಿಪೂರ್ಣತೆಯ ಗಮ್ಯದೆಡೆಗೆ ಆತ್ಮದ ನಿತ್ಯಪಯಣ. ಇಲ್ಲಿ ಅನುಭೂತಿಯೆಲ್ಲವೂ ಅಮೃತ; ಗಳಿಸಿದ್ದೆಲ್ಲವೂ ಶಾಶ್ವತ.
ಕನ್ನಡ ಸಾಹಿತ್ಯ ಲೋಕದಲ್ಲಿ ಓದುಗರಿಂದ, ವಿಮರ್ಷಕರಿಂದ ಅತೀ ಹೆಚ್ಚು ಚರ್ಚೆಗಳಿಗೆ, ವಾದ ವಿವಾದಗಳಿಗೆ ಕಾರಣವಾದ ಕೃತಿಗಳಲ್ಲಿ ದಿವಂಗತ ಡಾ.ಯು.ಆರ್ ಅನಂತಮೂರ್ತಿಯವರು ಬರೆದಿರುವ ಸಂಸ್ಕಾರ ಕಾದಂಬರಿ ಪ್ರಮುಖವಾದುದು. ಈ ಕಾದಂಬರಿಯ ಕಥಾವಸ್ತುವೇ ವಿವಾದಕ್ಕೆ ಮೂಲವಾಗಿದೆ. ಹಲವಾರು ವೇದಿಕೆಗಳಲ್ಲಿ ಈಗಾಗಲೇ ಚಿಂತನ-ಮಂಥನಗಳಿಗೆ ಸಂಸ್ಕಾರ ಕಾದಂಬರಿ ವಿಷಯ ವಸ್ತುವಾಗಿದೆ. ಇನ್ನು ಎಸ್.ಎಲ್ ಬೈರಪ್ಪ ರವರ ವಂಶವೃಕ್ಷ ಕಾದಂಬರಿಯು ಸಹಾ ಬಹುಚರ್ಚಿತವಾದ ಕಾದಂಬರಿಯಾಗಿದೆ. ಎಸ್.ಎಲ್.ಬೈರಪ್ಪ ರವರ ಅನೇಕ ಕಾದಂಬರಿಗಳ ಪೈಕಿ ಇದುವರೆಗೂ ಸುಮಾರು ಐವತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಹೆಚ್ಚು ಪ್ರಸಿದ್ದವಾದ ಕೃತಿಯಾಗಿದೆ. ಸಂಸ್ಕಾರ ಮತ್ತು ವಂಶವೃಕ್ಷ ಈ ಎರಡೂ ಕಾದಂಬರಿಗಳು ಕ್ರಮವಾಗಿ ೧೯೬೫ ಮತ್ತು ೧೯೬೬ ರಲ್ಲಿ ಪ್ರಥಮವಾಗಿ ಪ್ರಕಟಗೊಳ್ಳುತ್ತವೆ.
ಪುಸ್ತಕ ಪರಿಚಯ : ಶಿಲಾಕುಲ ವಲಸೆ
– ವಿದ್ಯಾ ಕುಲಕರ್ಣಿ
ಲೇಖಕರು :- ಕೆ. ಎನ್ ಗಣೇಶಯ್ಯ
ಸಾರಾಂಶ :- ಆರ್ಯರು ಪಶ್ಚಿಮದಿಂದ ಭಾರತಕ್ಕೆವಲಸಿಗರಾಗಿ ಬರಲಿಲ್ಲ.ಪಶ್ಚಿಮಕ್ಕೆ ವಲಸೆ ಹೋದರು.
ನಾನು ಕಾದಂಬರಿಗಳನ್ನು ಓದಲು ಅಥವಾ ಓದುವ ಹುಚ್ಚು ರೂಢಿಸಿಕೊಂಡಿದ್ದು ಶ್ರೀ ತರಾಸು ಅವರ ಸಿಡಿಲ ಮೊಗ್ಗು ಕಾದಂಬರಿಯಿಂದ ಅಂತ ಹೇಳಬಹುದು. ಆ ಕಾದಂಬರಿಯನ್ನು ನಮ್ಮಣ್ಣನ ತರಗತಿಗೆ ಪಠ್ಯ ಪುಸ್ತಕವಾಗಿ ಹಚ್ಚಿದ್ದರು. ಅವನು ನನಗೆ ಅದನ್ನು ಓದಲು ತಿಳಿಸಿದ್ದಲ್ಲದೇ ಅದರಲ್ಲಿನ ಕೆಲವಾರು ಅಂಶಗಳ ಕುರಿತು ಚರ್ಚಿಸಿ, ಅದನ್ನು ವಿವರಿಸಿ ಹೇಳಿದ್ದಲ್ಲದೇ ನಾನು ಸರಿಯಾಗಿ ತಿಳಿದಿರುವೆನೋ ಇಲ್ಲವೋ ಎಂದು ಪರೀಕ್ಷೆ ಸಹ ಮಾಡಿದ್ದ. ಹೀಗಾಗಿ ನಾನು ಸುಮಾರು 8 ನೇ ತರಗತಿಯಲ್ಲಿದ್ದಾಗಲೇ ಅದನ್ನು ಚನ್ನಾಗಿ ಓದಿ ಹಾಗೇನೇ ಓದುವ ಗೀಳು ಬೆಳೆಸಿಕೊಂಡಿದ್ದೆ. ಶ್ರೀಮತಿ ಗೀತಾ ನಾಗಭೂಷಣ ಅವರ ಕಥೆ ಹೂವ ತಂದವರು ಸಹ ನಮಗೆ ಪಠ್ಯಪುಸ್ತಕದಲ್ಲಿ ಪಾಠವಾಗಿತ್ತು. ಅದನ್ನು ನನ್ನಣ್ಣ ನನಗೆ ಚನ್ನಾಗಿ ವಿವರಿಸಿ ಓದಿಸಿ ಹೇಳಿದ್ದರಿಂದ ಓದುವ ಗೀಳನ್ನು ಬೆಳೆಸಿದ ಅವನಿಗೆ ನನ್ನ ಕೃತಜ್ಞತೆ ಮೊದಲು ಸಲ್ಲುತ್ತವೆ.
ನಂತರದ ದಿನಗಳಲ್ಲಿ ನಾನು ತ್ರಿವೇಣಿ , ಉಷಾ ನವರತ್ನರಾಂ , ರೇಖಾ ಕಾಖಂಡಕಿ ಎಚ್ . ಜಿ ರಾಧಾದೇವಿ. ಎಂ. ಕೆ ಇಂದಿರಾರ ಹಾಗೂ ಇನ್ನಿತರರ ಕಾದಂಬರಿಗಳನ್ನು ಹಾಗೆ ಕಾರಂತರ ಭೈರಪ್ಪರ ಕಾದಂಬರಿಗಳನ್ನು ಓದಿದೆ. ಆದರೆ ಈ ಎಲ್ಲಾ ಕಾದಂಬರಿಗಳಿಗಿಂತ ನನಗೆ ಅಚ್ಚು ಮೆಚ್ಚಾದದ್ದು ಶ್ರೀ ಎಂಡಮೂರಿ ಅವರ ಕಾದಂಬರಿಗಳು . ಅವುಗಳನ್ನು ಓದಲು ಆರಂಭಿಸಿದರೆ ಪುಸ್ತಕ ಕೆಳಗಿಡಲೇ ಆಗುವದಿಲ್ಲ. ಅಷ್ಟೊಂದು ಥ್ರಿಲ್ಲಿಂಗ್ ಇರುತ್ತವೆ. ಇಷ್ಟೊಂದು ಸುಂದರವಾಗಿ ಪುಸ್ತಕ ಕೆಳಗಿಡಲೇ ಆಗದಂತೆ ಕಾದಂಬರಿ ಬರೆಯುವವರು ಕನ್ನಡದಲ್ಲಿ ಇಲ್ಲವಲ್ಲಾ ಎಂದು ನಾನು ಕೊರಗುತ್ತಿದ್ದೆ. ಆ ಕೊರಗನ್ನು ತುಂಬಿದವರೇ ಶ್ರೀ ಕೆ. ಎನ್ ಗಣೇಶಯ್ಯನವರು.
ಶ್ರೀ ಗಣೇಶಯ್ಯನವರ ಕಾದಂಬರಿಗಳು ಯಾಕೆ ಇಷ್ಟವಾಗುತ್ತವೆಂದರೆ ಒಂದನೆಯದು ಬರವಣಿಗೆಯಲ್ಲಿನ ಥ್ರಿಲ್ಲಿಂಗ್. ಎರಡನೆಯದು ಆಧಾರ ಸಮೇತ ಇತಿಹಾಸದ ನಿರೂಪಣೆ.ಇತಿಹಾಸ ಪುಸ್ತಕವನ್ನು ಓದುವದೆಂದರೆ ತುಂಬಾ ಬೇಜಾರು ಮಾಡಿಕೊಳ್ಳುವವರಿಗಾಗಿ ಸುಂದರ ಚೌಕಟ್ಟಿನಲ್ಲಿ ಕಥಾ ರೂಪದಲ್ಲಿ ಇತಿಹಾಸ ತಿಳಿಸುವದು ಗಣೇಶಯ್ಯ ಕಾದಂಬರಿಯ ಉದ್ದೇಶಗಳೆನ್ನಬಹುದು. ಕೇವಲ ರೋಚಕತೆಗಾಗಿ ಏನೋ ಒಂದನ್ನು ಹೇಳದೇ ಅವರು ಐತಿಹಾಸಿಕ ಸಾಕ್ಷಿ ಪುರಾವೆಗಳ ಸಮೇತ ತಿಳಿಸುತ್ತಾರೆ. ಅವುಗಳನ್ನು ಯಾರೂ ಪರೀಕ್ಷೆ ಮಾಡಬಹುದಾಗಿದೆ.
ಯಾನದ ಕಿಟಕಿಯಿಂದೊಂದು ಇಣುಕು ನೋಟ
ಭೈರಪ್ಪನವರ ಕಾದಂಬರಿಗಳು ವಸ್ತು ವಿಷಯದಿಂದಲೂ, ಕಥೆಯ ಗಂಭೀರ ಹಂದರದಿಂದಲೂ ಇತರರಿಗಿಂತ ಭಿನ್ನವಾಗಿರುವ ವಿಚಾರ ತಿಳಿಯದ್ದೇನಲ್ಲ. ಈ ಸರಣಿಗೆ ಮತ್ತೊಂದು ಸೇರ್ಪಡೆ ‘ಯಾನ’. ಇಂಗ್ಲೆಂಡಿನ ಸಾಹಿತ್ಯಾಸಕ್ತರು ಯಾನವನ್ನು ಓದಿ ವಿಮರ್ಶಿಸಿ ಬರೆದ ಲೇಖನಗಳ ಸರಣಿ ನಿಮ್ಮ ಮುಂದಿದೆ.
ಉಮಾ ವೆಂಕಟೇಶ್, ದಾಕ್ಷಾಯಿಣಿ, ಕೇಶವ್ ಕುಲಕರ್ಣಿ ಹಾಗೂ ಸುದರ್ಶನ ಗುರುರಾಜರಾವ್ ಬರೆದ ಇಣುಕು ನೋಟದ ಪರಿಚಯ ನಿಮಗೆ ನೀಡುತ್ತಿದ್ದೇವೆ,ಪ್ರಯಾಣದಲ್ಲಿ ಹೊರ ನೋಟದ ಅನುಭವ ಕಣ್ಣಿಗೆ ಒಂದೇ ಆಗಿದ್ದರೂ, ಅನುಭಾವ ವಿಭಿನ್ನವೇ
– ಸುದರ್ಶನ ಗುರುರಾಜರಾವ್
ಯಾನದಲ್ಲಿ ಬರುವ ಪ್ರಮುಖ ಪಾತ್ರಗಳಾದ ಉತ್ತರಾ (ಹೆಣ್ಣು) ಹಾಗೂ ಸುದರ್ಶನ (ಗಂಡು) ಎರಡೂ ನನಗೆ ಆತ್ಮೀಯವಾದ ಹೆಸರುಗಳೇ. ಉತ್ತರಾ ನನ್ನ ಜನ್ಮ ನಕ್ಷತ್ರದ ಹೆಸರಾದರೆ ಸುದರ್ಶನ ನನ್ನ ಹೆಸರೇ ಆಗಿದೆ. ಸ್ವನಾಮ ಪ್ರೇಮ, ಸ್ವನಾಮಾನುಕಂಪ ಹಾಗೂ ಪಕ್ಷಪಾತಗಳು ತಿಳಿಯದ್ದೇನಲ್ಲ. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯ ಪಾತ್ರಗಳನ್ನು ನಿರೂಪಣೆಯನ್ನು ಹಾಗೂ ಕಥಾವಸ್ತುವನ್ನು ಅದಷ್ಟು ವಸ್ತುನಿಷ್ಠ ವಾಗಿ ಮಾಡಲು ಪ್ರಯತ್ನಿಸಿದ್ದೇನೆಂದು ಮೊದಲೇ ಘೋಷಿಸಿಬಿಡುತ್ತೇನೆ.
‘’ಯಾನ’’ ಭೂಮಿಯಿಂದ ಬೇರೊಂದು ಸೌರವ್ಯೂಹವನ್ನೇ ಹೊಕ್ಕು ಅಲ್ಲಿ ಜೀವಸಂಕುಲವನ್ನು ಬೆಳೆಸಬಲ್ಲ, ಪೋಷಿಸಬಲ್ಲ ಗ್ರಹವೊಂದನ್ನು ಹುಡುಕುವ ಮಾನವನ ಮಹದೋದ್ದೇಶದ ಪ್ರಯಾಣಕಥನ., ಪ್ರಯಾಣವೊಂದು ಧಿಢೀರ್ ಎಂದು ಪ್ರಾರಂಭವಾಗುವುದಿಲ್ಲವಷ್ಟೆ ; ಅದಕ್ಕೆ ತಯಾರಿ ಬೇಕು. ಆ ತಯಾರಿಯ ಹಂತದಲ್ಲಿ ಪಾತ್ರ ಪರಿಚಯಗಳಗ್ಗುವುದಲ್ಲದೆಅವರ ಜೀವನದ, ಆ ದೇಶ ಕಾಲಗಳ ವಿದ್ಯಮಾನಗಳ ಭೂಮಿಕೆ ಕಾದಂಬರಿಯಲ್ಲಿ ಸಿದ್ದಹವಾಗುತ್ತದೆ. ಕಥೆಯು ಭೂತ ವರ್ತಮಾನಗಳ ಮಧ್ಯೆ ತುಯ್ದಾಡುತ್ತಾ,ಪಾತ್ರಗಳ ಮನೋವ್ಯಾಪಾರವನ್ನು ಅವರು ನಂಬಿದ ತತ್ವಗಳ /ಮಾನಸಿಕ ಮಸೂರದ ಮೂಲಕ ಹಾಗೂ ಅವರುಗಳು ಇರುವ ದೇಶ ಕಾಲ ಧರ್ಮ ನಂಬಿಕೆಗಳ ಚೌಕಟ್ಟಿನಲ್ಲಿ ತಿಳಿಸುತ್ತಾ ಸಾಗುತ್ತದೆ. ಇಲ್ಲಿ ಅರಿವು ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸ ಗಮನಿಸಬೇಕು.ನಂಬಿಕೆ ಮತ್ತು ಆಯ್ಕೆಗಳ ನಡುವಿನ ತಾಕಲಟಗಳೂ ಬರುತ್ತವೆ. ಮಾನವನ ಜೀವನದ ವಿದ್ಯಮಾನಗಳು ಮತ್ತು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಳ ರೇಖಾತ್ಮಕವಾಗಿರದೆ ಎಡ ಬಲ ಊರ್ಧ್ವ ಹಾಗೂ ಅಧೋಮುಖಗಳಿಂದ ಬಂದು ಬಡಿಯುವ ಹಲಾವಾರು ಘಟನೆ,ಒತ್ತಡಗಳ ಸಂಕೀರ್ಣ ಉತ್ಪತ್ತಿ ಎಂಬುದು ಭೈರಪ್ಪನವರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಹಾಸು ಹೊಕ್ಕಾಗಿರುವ ಅಂಶ ;ಆದರೆ ಆಯಾಮ ಮಾತ್ರ ಬೇರೆ.
ಮೊದಲಿಗೆ ಪಾತ್ರಗಳನ್ನೂ ಕುರಿತು ನೋಡೋಣ.
ಜೀವನವೆನ್ನುವುದು ಸ೦ತೋಷದ ನಿರ೦ತರ ಹುಡುಕಾಟವೆನ್ನುವವನ ಕತೆಯಿದು
-ಗುರುರಾಜ ಕೊಡ್ಕಣಿ,ಯಲ್ಲಾಪುರ
“ನನ್ನ ಹೆಸರು ಕ್ರಿಸ್ಟೋಫರ್ ಗಾರ್ಡನರ್,ವೈದ್ಯಕೀಯ ಉಪಕರಣಗಳ ವ್ಯಾಪಾರ ಪ್ರತಿನಿಧಿಯಾಗಿದ್ದ ನನ್ನನ್ನು ಗೆಳೆಯರು ಪ್ರೀತಿಯಿ೦ದ ’ಕ್ರಿಸ್’ ಎ೦ದು ಕರೆಯುತ್ತಿದ್ದರು. ಅದಾಗಲೇ ನನ್ನ ಎರಡನೆಯ ಮದುವೆಯಾಗಿ ಐದು ವರ್ಷಗಳಾಗಿದ್ದವು.ನನ್ನ ಮಡದಿ ಜಾಕಿ,ಚಿಕ್ಕದೊ೦ದು ಕ೦ಪನಿಯಲ್ಲಿ ದುಡಿಯುತ್ತಿದ್ದಳು.ನಾನು ಎಕ್ಸ್ ರೇ ಯ೦ತ್ರದ ಪರಿಷ್ಕೃತ ಮಾದರಿಯೊ೦ದನ್ನು ವೈದ್ಯರಿಗೆ ಮಾರುವ ಕೆಲಸವನ್ನು ನಿರ್ವಹಿಸುತ್ತಿದ್ದೆ.ನನ್ನ ಮಗನಿಗೆ ಆಗಿನ್ನೂ ನಾಲ್ಕು ವರ್ಷ ವಯಸ್ಸು.ಸ೦ಸಾರದ ನಿರ್ವಹಣೆಗಾಗಿ ವಾರಕ್ಕೊ೦ದು ಯ೦ತ್ರವನ್ನು ಮಾರಿ ಸುಮಾರು ಇನ್ನೂರೈವತ್ತು ಡಾಲರುಗಳನ್ನು ಸ೦ಪಾದಿಸಲೇಬೇಕಾದ ಅನಿವಾರ್ಯತೆ ನನಗಿತ್ತು.ಆರ೦ಭಿಕ ದಿನಗಳಲ್ಲಿ ಯ೦ತ್ರಗಳ ವ್ಯಾಪಾರ ಉತ್ತಮವಾಗಿತ್ತಾದರೂ ,ಕೆಲವೇ ದಿನಗಳಲ್ಲಿ ನನ್ನ ಮಶೀನುಗಳ ಬೇಡಿಕೆ ಗಣನೀಯವಾಗಿ ಇಳಿಯಲಾರ೦ಭಿಸಿತು.ಎಕ್ಸ್ ರೆ ಯ೦ತ್ರದ ಸುಧಾರಿತ ರೂಪವಾಗಿದ್ದ ನನ್ನ ಯ೦ತ್ರಗಳ ಬೆಲೆ ಎಕ್ಸ್ ರೇ ಮಶಿನುಗಳಿಗಿ೦ತ ದುಪ್ಪಟ್ಟಾಗಿದ್ದರಿ೦ದ ತಜ್ನರು ಅವುಗಳನ್ನು ಕೊಳ್ಳಲು ಹಿ೦ದೇಟು ಹಾಕುತ್ತಿದ್ದರು.ಮೊದಲೆಲ್ಲ ಮಾಸವೊ೦ದಕ್ಕೆ ನಾಲ್ಕಾರು ಯ೦ತ್ರಗಳನ್ನು ಮಾರುತ್ತಿದ್ದ ನನಗೆ ತಿ೦ಗಳಿಗೆ ಎರಡು ಯ೦ತ್ರಗಳನ್ನು ಮಾರುವುದು ಸಹ ಕಷ್ಟವೆನಿಸತೊಡಗಿತು.ಪ್ರತಿಬಾರಿಯೂ ಯ೦ತ್ರಗಳನ್ನು ಕೊಳ್ಳುವ೦ತೇ ಎಕ್ಸ್ ರೇ ತಜ್ನರಿಗೆ ನಾನು ಮಾಡುತ್ತಿದ್ದ ಮನವೋಲೈಕೆ ವಿಫಲವಾಗತೊಡಗಿತು.ಆರ್ಥಿಕ ಸ೦ಕಷ್ಟದ ಫಲವಾಗಿ ನನ್ನ ಅರ್ಧಾ೦ಗಿ ಎರಡು ಪಾಳಿಗಳಲ್ಲಿ ದುಡಿಯಲಾರ೦ಭಿಸಿದಳು.ಹೆಚ್ಚಿನ ಶುಲ್ಕವನ್ನು ನೀಡಲು ಅಶಕ್ಯರಾಗಿದ್ದರಿ೦ದ ನಮ್ಮ ಮಗನನ್ನು ನಾವು ತೀರ ಕಳಪೆಮಟ್ಟದ ಬಾಲವಿಹಾರವೊ೦ದಕ್ಕೆ ಸೇರಿಸಿದ್ದೆವು.
ನನ್ನ ಜೀವನದ ಅತ್ಯ೦ತ ದುರ್ಭರ ದಿನಗಳವು.ನಾನು ಸುಮಾರು ಮೂರು ತಿ೦ಗಳುಗಳಿ೦ದ ಮನೆಯ ಬಾಡಿಗೆ ಕಟ್ಟಿರಲಿಲ್ಲ.ದ೦ಡಗಳನ್ನು ಪಾವತಿಸಿಲ್ಲವೆನ್ನುವ ಕಾರಣಕ್ಕೆ ಪೋಲಿಸರು ನನ್ನ ಕಾರನ್ನು ಜಪ್ತಿ ಮಾಡಿದ್ದರು.ಹಣಕಾಸಿನ ಮುಗ್ಗಟ್ಟಿನಿ೦ದಾಗಿ ನನ್ನ ಮತ್ತು ಪತ್ನಿಯ ನಡುವೆ ಆಗಾಗ ಜಗಳಗಳಾಗುತ್ತಿದ್ದವು.ನಾನು ಬದುಕಿನ ಬ೦ಡಿಯ ಓಟಕ್ಕಾಗಿ ಪಡಬಾರದ ಪಡಿಪಾಟಲು ಪಡುತ್ತಿದ್ದರೇ,ನನ್ನ ನೆರೆಮನೆಯವನು ವೈಭವೋಪೇತ ಜೀವನವನ್ನು ನಡೆಸುತ್ತಿದ್ದ.ಆತನ ಬಳಿ ಅದ್ಭುತವಾದ ಕಾರೊ೦ದಿತ್ತು.ಆತ ಧರಿಸುತ್ತಿದ್ದ ಬಟ್ಟೆಗಳು ಭಯ೦ಕರ ದುಬಾರಿ ದಿರಿಸುಗಳಾಗಿರುತ್ತಿದ್ದವು.ಒಮ್ಮೆ ಕುತೂಹಲ ತಡೆಯಲಾರದೇ ನಾನು ಆತನನ್ನು ಆತನ ಉದ್ಯೋಗದ ಬಗ್ಗೆ ವಿಚಾರಿಸಿದೆ.ಆತ ತಾನೊಬ್ಬ ಶೇರು ದಲ್ಲಾಳಿಯೆ೦ದು ಹೇಳಿಕೊ೦ಡ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೯
ಕವಲು
ಆವರಣ ಕಾದಂಬರಿಗೆ ಬಂದಷ್ಟು ಪ್ರತಿರೋಧ, ಪ್ರತಿಭಟನೆಗಳು ಮತ್ತು ವಿಮರ್ಶಾ ಸಂಕಲನಗಳು ಕವಲು ಕಾದಂಬರಿಗೆ ಬರದೇ ಇದ್ದರೂ ಸಹ ಪತ್ರಿಕೆಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಆವರಣಕ್ಕೆ ಕೋಮುವಾದಿ ಕೃತಿ ಎಂದು ಹೆಸರಿಟ್ಟಹಾಗೆ ಕವಲು ಕಾದಂಬರಿಗೆ ಸ್ತ್ರೀವಾದದ ವಿರೋಧಿ ಎಂಬ ಲೇಬಲ್ ಹಚ್ಚಲಾಯಿತು. ಖ್ಯಾತ ಕತೆಗಾರ, ಪ್ರಭಂಧಕಾರ ಮತ್ತು ಪ್ರಕಾಶಕರಾದ (ಛಂದ ಪುಸ್ತಕ ಪ್ರಕಾಶನ ಬೆಂಗಳೂರು) ವಸುಧೇಂದ್ರ ಅವರು ಕನ್ನಡ ಪ್ರಭ ಪತ್ರಿಕೆಯ ಭಾನುವಾರದ ಸಾಪ್ತಾಹಿಕ ಪ್ರಭದಲ್ಲಿ ಮಾಡಿದ ಕವಲು ಕಾದಂಬರಿಯ ವಿಮರ್ಶೆಗೆ ಪ್ರತಿಕ್ರಿಯೆಯಾಗಿ ನಾನು ಬರೆದದ್ದು ಈ ಪತ್ರ. .
ಶ್ರೀ ವಸುಧೇಂದ್ರ ಅವರಿಗೆ ನಮಸ್ಕಾರಗಳು, ದಿನಾಂಕ: ೧೩ ಜೂನ್ ೨೦೧೨
ಭೈರಪ್ಪನವರ ಕವಲು ಕಾದಂಬರಿಯ ಬಗ್ಗೆ ಸುಮಾರು ಎರಡು ವರ್ಷಗಳ ಹಿಂದೆ (೨೯–೮–೨೦೧೦) ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾದ ತಮ್ಮ ವಿಮರ್ಶೆಯ ಬಗ್ಗೆ ನನ್ನ ಅನಿಸಿಕೆಗಳನ್ನು ಈಗ ತಿಳಿಸುತ್ತಿದ್ದೇನೆ. ಇದನ್ನು ಬರೆದಿಟ್ಟುಕೊಂಡು ಎರಡು ವರ್ಷಗಳಾಗಿದ್ದರೂ ಈಗ ಕಳಿಸುತ್ತಿರುವುದಕ್ಕೆ ಕಾರಣ ನಿಮ್ಮ ಅಂಚೆ ವಿಳಾಸ/ ಇ ಮೇಲ್ ಐಡಿ ಸಿಗದೇ ಇದ್ದದ್ದು. ಇತ್ತೀಚಿಗೆ ‘ಸಂಚಯ’ ಸಾಹಿತ್ಯಿಕ ಪತ್ರಿಕೆಯ ಪ್ರತಿಗಳನ್ನು ಒಂದೆಡೆ ನೀಟಾಗಿ ಜೋಡಿಸಿಡುತ್ತಾ ಹಾಗೆ ಅದರ ಪುಟಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ಒಂದು ಸಂಚಿಕೆಯಲ್ಲಿ ನಿಮ್ಮ ವಿಳಾಸ ಸಿಕ್ಕಿತು. ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿದ್ದ ನಿಮ್ಮ ಆ ವಿಮರ್ಶೆಯ ಜೆರಾಕ್ಸ್ ಪ್ರತಿಯನ್ನೂ ಇದರ ಜತೆ ಇಟ್ಟಿದ್ದೇನೆ.
ತಮಗೆ ತಿಳಿದಿರುವಂತೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ನಮ್ಮ ವಿಮರ್ಶಾವಲಯದಲ್ಲಿ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳು ಅವರ ಧರ್ಮಶ್ರೀ ಕಾಲದಿಂದ ಇಂದಿನ ಕವಲು ಕಾದಂಬರಿಯ ತನಕ ಇದ್ದೇ ಇದೆ. ಇದನ್ನು ನಾನು ಪುನಃ ವಿವರಿಸುವುದು ಅನವಶ್ಯ ಎಂದು ಭಾವಿಸಿದ್ದೇನೆ. ಈಗ ನೇರವಾಗಿ ಕವಲು ಕಾದಂಬರಿಯನ್ನು ಕುರಿತ ತಮ್ಮ ವಿಮರ್ಶೆಯ ಬಗ್ಗೆ ಹೋಗೋಣ. ನಾಲ್ಕು ಕಾಲಂಗಳ ಆ ವಿಮರ್ಶೆಯಲ್ಲಿ ಎರಡು ಕಾಲಂಗಳು ಆ ಕಾದಂಬರಿಯ ಕಥಾಸಾರಾಂಶವನ್ನು ಹೇಳುವುದಕ್ಕೆ ವಿನಿಯೋಗವಾಗಿದೆ. ಉಳಿದ ಎರಡು ಕಾಲಂಗಳ ಬಗ್ಗೆ ಹೇಳುವುದಾದರೆ—
(೧) ಭೈರಪ್ಪನವರು ಎಲ್ಲಾ ಸ್ತ್ರೀವಾದಿಗಳೂ ಕೆಟ್ಟ ಹೆಂಗಸರೆಂದು ಆ ಕಾದಂಬರಿಯಲ್ಲಿ ಎಲ್ಲಿ ಹೇಳಿದ್ದಾರೆ? ಕವಲು ಕಾದಂಬರಿಯಲ್ಲಿ ಚಿತ್ರಿತವಾಗಿರುವ ಇಬ್ಬರು ಹೆಂಗಸರ ಬಗ್ಗೆ, ಅವರ ನಡತೆಯ ಬಗ್ಗೆ ಬರೆದಿದ್ದಾರೆ. ಅವರಿಬ್ಬರು ಎಲ್ಲಾ ಸ್ತ್ರೀ ವಾದಿಗಳನ್ನು ಪ್ರತಿನಿಧಿಸುತ್ತಾರೆ ಎಂದು ಭಾವಿಸುವುದು ಸರಿಯೇ? ಓದು ಬರಹ ಬಲ್ಲ ಹೆಂಗಸರಿಂದ, ಸ್ತ್ರೀವಾದಿಗಳಿಂದ ಮಾತ್ರ ವರದಕ್ಷಿಣೆ ವಿರೋಧಿ ಕಾನೂನು, ವಿವಾಹ ವಿಚ್ಛೇದನದ ಕಾನೂನು ದುರುಪಯೋಗವಾಗುತ್ತಿಲ್ಲ: ಅದನ್ನು ಇತರರೂ ಮಾಡುತ್ತಿದ್ದಾರೆ ಎಂಬುದಕ್ಕೆ ಕವಲು ಕಾದಂಬರಿಯಲ್ಲೇ ಒಂದು ನಿದರ್ಶನವಿದೆ. ಜಯಕುಮಾರನ ಅಣ್ಣ ಕೇಶವಮೂರ್ತಿಯ ಹೆಂಡತಿ ಇಂದಿರಾ ತನ್ನ ಅತ್ತೆಯನ್ನು ವರದಕ್ಷಿಣೆ ಕಾನೂನಿನ ಅಡಿಯಲ್ಲಿ ಜೈಲಿಗೆ ಹಾಕಿಸಲಿಲ್ಲವೇ? (ಪುಟ ೨೬೧ ಕವಲು) ತಾವೇ ಹೇಳಿರುವಂತೆ ಕಾನೂನಿನ ಲೂಪ್ ಹೋಲ್ ಗಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡವರ ಕಥೆ ಕವಲುವಿನದು. ಅಂತಹ ಒಂದು ಕಥೆಯನ್ನು ಹೇಳುವುದಕ್ಕೆ ಒಂದಷ್ಟು ಪಾತ್ರಗಳು ಬೇಕೇ ಬೇಕಲ್ಲವೇ? ಅಂತಹ ಪಾತ್ರಗಳು ಇಡೀ ಸಮಾಜದ ಪ್ರತಿಬಿಂಬವಾಗಲು ಹೇಗೆ ತಾನೇ ಸಾಧ್ಯ? ಜತೆಗೆ ಮರೆಯಬಾರದ ಸಂಗತಿ ಎಂದರೆ ಪ್ರಗತಿಪರ ,ಬಂಡಾಯ, ದಲಿತ ಸ್ತ್ರೀ ವಾದಿ ಇತ್ಯಾದಿ ಪ್ರಣಾಳಿಕೆಗಳು, ಇವುಗಳ ಬಗ್ಗೆ ಒಲವುಳ್ಳ ಅಷ್ಟನ್ನೇ high light ಮಾಡುವಂತಹ ಸಾಹಿತ್ಯ,ವಿಮರ್ಶೆಗಳು ಏಕಮುಖೀ ಧೋರಣೆ ಉದ್ದೇಶವಿಟ್ಟುಕೊಂಡು ರಚಿತವಾಗಿ ಜೀವನದ ಇತರೆ ಮಗ್ಗುಲುಗಳ ಬಗ್ಗೆ ಗಮನಹರಿಸದೇ ಇರುವುದು ತಿಳಿದ ವಿಷಯವೇ. ಒಬ್ಬ ಲೇಖಕ/ಸಾಹಿತಿ ಆಯಾ ಕಾಲದಲ್ಲಿ ಚಾಲ್ತಿಯಲ್ಲಿರುವಂತಹ ಸಾಮಾಜಿಕ/ರಾಜಕೀಯ ಸಿದ್ಧಾಂತ,ವಾದ ಇತ್ಯಾದಿಗಳ ಪರವಾಗಿ ಮತ್ತು ಅದರ ಚೌಕ್ಕಟ್ಟಿನೊಳಗೇ ಬರೆಯಬೇಕು ಎಂದು ನಿರೀಕ್ಷಿಸುವುದು/ಒತ್ತಾಯಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನೂ ಸಹ ನಾವು ಗಣನೆಗೆ ತೆಗೆದುಕೊಳ್ಳಬೇಕಲ್ಲವೇ? ಸಾಹಿತಿಗೆ ಆ ವಾದಗಳ ಸಾಧಕ ಬಾಧಕಗಳನ್ನು ತನ್ನ ಕೃತಿಯಲ್ಲಿ ಚರ್ಚಿಸುವ ಸೃಜನಶೀಲತೆಗೆ ಅವಕಾಶವಿರಬಾರದೆ?
ಪ್ರತಿಭಟನೆ ಮಾಡಿದವರೆಲ್ಲ ಕೃತಿಯನ್ನು ಓದಿದ್ದರೇ?
– ವೃಷಾಂಕ ಭಟ್
ಡಾ.ಕೆ.ಎಸ್.ನಾರಾಯಣಾಚಾರ್ಯರು ಬರೆದ ‘ವಾಲ್ಮೀಕಿ ಯಾರು?’ ಎಂಬ ಪುಸ್ತಕದ ವಿರುದ್ಧ ಹಲವು ಪ್ರತಿಭಟನೆಗಳನು ನಡೆದವು. ನನಗೆ ಹೆಚ್ಚು ಹಾಸ್ಯಾಸ್ಪದವೆನಿಸಿದ್ದು ಸಿಪಿಎಂ ನಡೆಸಿದ ಪ್ರತಿಭಟನೆ. ದೇವರ ಅಸ್ಥಿತ್ವವನ್ನೇ ಒಪ್ಪದ ಎಡಪಂಥೀಯರು ರಾಮನನ್ನು ದೇವರೆಂದು ಬರೆದ ವಾಲ್ಮೀಕಿ ಪರ ವಕಾಲತ್ತು ವಸಿದ್ದಕ್ಕೆ ಏನು ಹೇಳಬೇಕು? ಓಟ್ ಬ್ಯಾಂಕ್ ಸೃಷ್ಟಿಸಲು ತಮ್ಮ ಸಿದ್ಧಾಂತವನ್ನೇ ಮರೆತ ಪಕ್ಷವಲ್ಲವೇ? ಅದೇನೇ ಇರಲಿ, ಕೃತಿಯೊಂದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯಾದಾಗ, ಆ ಕೃತಿಯನ್ನೋದಬಯಸುತ್ತದೆ ಮನಸ್ಸು. ಹಿಂದೆ ‘ಡುಂಡಿ’ ಬಿಡುಗಡೆಯಾದಗಲೂ ಕದ್ದು ಓದುವ ಪ್ರಯತ್ನ ಮಾಡಿದ್ದೆ. ಕದ್ದು ಓದಿದ್ದೇಕೆಂದರೆ ಆ ಕೃತಿಯನ್ನು ನಿಷೇಸಲಾಗಿತ್ತು. ಹೀಗೆ ಕದ್ದು ಓದಲು ಯತ್ನಿಸಿದ ಡುಂಡಿಯನ್ನು ಹತ್ತು ಪುಟಕ್ಕಿಂತ ಹೆಚ್ಚು ಓದಲಾಗಲಿಲ್ಲ. ‘ವಾಲ್ಮೀಕಿ ಯಾರು’ ಕೃತಿಯೂ ಇದರಿಂದ ಹೊರತಾಗಿರದು ಎಂಬ ಪೂರ್ವಾಲೋಚನೆಯಲ್ಲಿದ್ದವನನ್ನು, ಕೃತಿ ಸೋಲಿಸಿತು!
ಈ ಕೃತಿಯ ವಿರುದ್ಧ ಹೋರಾಟನಡೆಸಿದವರಲ್ಲಿ ಹೆಚ್ಚಿನವರು ಕೃತಿಯನ್ನೇ ಓದಿರುವುದಿಲ್ಲ ಎಂದು ನಾನು ಪಂದ್ಯ ಕಟ್ಟಬಲ್ಲೆ. ಅದರಲ್ಲಿ ಹಂಗಿದೆಯಂತೆ, ಹಿಂಗಿದೆಯಂತೆ ಎಂದು ಹರಡುವ ಮಾತನ್ನೇ ನಂಬಿ ಕೆಲವರು ದೊಂಬಿ ಎಬ್ಬಿಸುತ್ತಾರೆ. ಉಳಿದವರು ಕುರಿಗಳಂತೆ ಸೇರಿಕೊಳ್ಳುತ್ತಾರೆ. ಆದರೆ ಈ ಲೇಖನ ಬರೆಯುವ ಮುನ್ನ ನಾನು ಕೃತಿಯನ್ನು ಸಂಪೂರ್ಣವಾಗಿ ಓದ್ದೇನೆ. ಓದಿದ್ದನ್ನು ನನ್ನ ಸಾಮರ್ಥ್ಯಕ್ಕೆ ನಿಲುಕುವಷ್ಟು ಅರ್ಥೈಸಿಕೊಂಡಿದ್ದೇನೆ. ಕೃತಿಯ ವಿರುದ್ಧ ಗಲಾಟಗಳಾದ ಕೂಡಲೇ ಈ ಲೇಖನವನ್ನು ಬರೆಯಬಹುದಿತ್ತು. ಆದರೆ ಪ್ರತಿಭಟನಕಾರರ ಮನಸ್ಸು ಇನ್ನೊಬ್ಬರ ಮಾತನ್ನು ಆಲಿಸುವಷ್ಟು ಮಟ್ಟಿಗೆ ಶಾಂತವಾಗುವ ತನಕ ಬರೆಯದೇ ಇರುವುದು ಲೇಸು ಎನ್ನಿಸಿತು. ಎಲ್ಲಕ್ಕೂ ಮಿಗಿಲಾಗಿ, ಈ ಕೃತಿಯ ಬಗ್ಗೆ ಇಷ್ಟೆಲ್ಲಾ ಗಲಾಟೆ ಇದ್ದರೂ, ಹೆಚ್ಚಿನವರಿಗೆ ಓದಲು ಈ ಪುಸ್ತಕ ಸಿಕ್ಕಿಲ್ಲ. ಅವರೆಲ್ಲರ ಕುತೂಹಲವೂ ತಣಿಯಬಹುದೆಂಬ ನಂಬಿಯಿದೆ.
ಮೊದಲಿಗೆ ಆಚಾರ್ಯರು ಬರೆದ ಯಾವ ಸಾಲುಗಳಿಂದ ವಾಲ್ಮೀಕಿ ಜನಾಂಗದವರಿಗೆ ನೋವುಂಟಾಗಿರಬಹುದೆಂಬುದನ್ನು ತಿಳಿಯಲು ಯತ್ನಿಸೋಣ.
1. ಪಾಮರನಾದ ಬೇಡನೊಬ್ಬ ದಿಢೀರನೆ ಕಾವ್ಯ ಬರೆದ ರೀತಿ ಇದೆಂದು ಹೇಳುವುದು ಹಾಸ್ಯಾಸ್ಪದವೇ ಆಗುತ್ತದೆ.
2. ವಾಲ್ಮೀಕಿಯ ವಾಗ್ವೈಭವಕ್ಕೆ ಈವರೆಗೆ ನಾವು ಅವನ ಪಾತ್ರರಚನೆ, ಪೋಷಣೆ, ವಾಕ್ಯಗಳ ವಿವರಣೆಗಳನ್ನು ಇತ್ತಿರುವುದೆಲ್ಲ ಸಾಕ್ಷಿ ಎಂದ ಮೇಲೆ ಹೆಚ್ಚು ಹೇಳುವುದೇನಿದೆ? ಪಾಮರನಿಗೆ ಇವೆಲ್ಲ ಶಕ್ಯವೇ?
3. ವಾಲ್ಮೀಕಿ ಬೇಡನೆಂಬುದಕ್ಕೆ ‘ಶ್ರೀ ವಾಲ್ಮೀಕಿ ರಾಮಾಯಣ’ದಲ್ಲಿ ಯಾವ ಆಧಾರಗಳೂ ಇಲ್ಲ.
4. ಕೃತಿಗಳನ್ನು ಓದದೆ ಕೇವಲ ಹೆಸರು ಅಂಟಿಸಿಕೊಂಡರೆ ಅವರಿಗೂ ಅಪಕೀರ್ತಿ, ನಿಮಗೂ ಹಾನಿ!
ಮತ್ತಷ್ಟು ಓದು 
ಕಾಫ್ಕಾನ ’ಮೆಟಮಾರ್ಫಸಿಸ್’ ಮತ್ತು ಬದುಕಿನ ಕಟುವಾಸ್ತವಗಳು
– ಗುರುರಾಜ್ ಕೊಡ್ಕಣಿ
ಅದೊ೦ದು ದಿನ ಮು೦ಜಾನೆ, ನಿದ್ದೆ ಮುಗಿಸಿ ಕಣ್ತೆರೆದ ಗ್ರೆಗರ್ ಸ೦ಸ ಎನ್ನುವ ಆ ವ್ಯಕ್ತಿಗೆ ತಾನೊ೦ದು ದೊಡ್ಡ ಜಿರಳೆಯಾಗಿ ರೂಪಾ೦ತರಗೊ೦ಡ ಅನುಭವ.ಮೊದಮೊದಲು ಇದೊ೦ದು ಕೆಟ್ಟಕನಸಿರಬೇಕು ಎ೦ದುಕೊಳ್ಳುವ ಗ್ರೆಗರ್,ತಾನು ನಿಜಕ್ಕೂ ಜಿರಳೆಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಿ ಗಾಬರಿಯಾಗುತ್ತಾನೆ.ಆದರೆ ಆತನ ಗಾಬರಿ ಆತನ ದೈಹಿಕ ಬದಲಾವಣೆಗೆ ಸ೦ಬ೦ಧಿತವಲ್ಲ.ಅವನ ನೌಕರಿಯ ಬಗೆಗಿನ ಅಭದ್ರತೆಯದು.ಆತ ಅದಾಗಲೇ ತನ್ನ ಕ೦ಪನಿಗೆ ತೆರಳುವ ದಿನದ ಮೊದಲ ರೈಲನ್ನು ತಪ್ಪಿಸಿಕೊ೦ಡಿರುತ್ತಾನೆ,ಕ೦ಪನಿಯೊ೦ದರ ವ್ಯಾಪಾರ ಪ್ರತಿನಿಧಿಯಾಗಿ ಕೆಲಸ ಮಾಡುವ ಗ್ರೆಗರ್ ನ ಕ೦ಪನಿಯ ಮಾಲಿಕ ಮಹಾ ದುರ೦ಹಕಾರಿ.ತನ್ನ ನೌಕರರ ಸಣ್ಣಾತೀಸಣ್ಣ ತಪ್ಪುಗಳಿಗೂ ಕೆಲಸದಿ೦ದ ಕಿತ್ತೆಸೆಯುವ ಕ್ರೂರಿಯಾತ.’ಅಯ್ಯೋ ದೇವರೇ.!! ಇಷ್ಟು ತಡವಾಗಿ ಹೋದರೆ ಖ೦ಡಿತವಾಗಿಯೂ ನನ್ನ ಕೆಲಸ ಹೋದ೦ತೆ,ಆಮೆಲೆ ನನ್ನನ್ನೇ ನ೦ಬಿರುವ ನನ್ನ ತ೦ದೆ,ತಾಯಿ ,ಮುದ್ದಿನ ತ೦ಗಿಯರ ಗತಿಯೇನು..’? ಎ೦ದುಕೊಳ್ಳುತ್ತ ಹಾಸಿಗೆಯಿ೦ದ ಎದ್ದೇಳ ಹೊರಟವನಿಗೆ ತನ್ನ ಕೈಕಾಲುಗಳೂ ಸಹ ಜಿರಳೆಯ ಕಾಲುಗಳ೦ತೆ ಪರಿವರ್ತಿತವಾಗಿರುವುದು ಗೊತ್ತಾಗುತ್ತದೆ.ಅಷ್ಟರಲ್ಲಿ ಅವನ ಕೋಣೆಯ ಕದ ಬಡಿಯುವ ಅವನ ತಾಯಿ,ತ೦ಗಿಯರು ಅವನ ಆರೋಗ್ಯದ ಬಗ್ಗೆ ವಿಚಾರಿಸಿ,ಆಫೀಸಿಗೆ ತಡವಾಗಿ ಹೋದರೆ ಆಗಬಹುದಾದ ಅನಾಹುತಗಳ ಬಗ್ಗೆ ತಿಳಿಸುತ್ತಾರೆ.’ಇನ್ನೇನು ಹೊರಟೆ ಅಮ್ಮ’ ಎನ್ನುವಾಗ ತನ್ನ ಧ್ವನಿ ಕೂಡ ಬದಲಾಗಿರುವುದು ಗ್ರೆಗರ್ ನ ಅರಿವಿಗೆ ಬರುತ್ತದೆ.ಅಷ್ಟರಲ್ಲಾಗಲೇ ಅವನನ್ನು ಹುಡುಕಿಕೊ೦ಡು ಅವನ ಮನೆಗೆ ಬರುವ ಆಫೀಸಿನ ಗುಮಾಸ್ತ,ಗ್ರೆಗರ್ ಇನ್ನೂ ಕೆಲಸಕ್ಕೆ ಹಾಜರಾಗದಿರುವುದಕ್ಕೆ ಕ್ರೋಧ ವ್ಯಕ್ತಪಡಿಸುತ್ತ,ಗ್ರೆಗರ್ ನ ಕಾರ್ಯನಿರ್ವಹಣೆ ಅಷ್ಟೇನೂ ತೃಪ್ತಿಕರವಾಗಿಲ್ಲವೆ೦ದೂ,ಹೀಗೆ ಕೆಲಸಕ್ಕೆ ಹೋಗಲು ವಿಳ೦ಬ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಾಗಬಹುದೆ೦ದು ಎಚ್ಚರಿಸುತ್ತಾನೆ.ಗುಮಾಸ್ತನ ಮಾತುಗಳಿಗೆ ದಿಗಿಲಾಗುವ ಗ್ರೆಗರ್ ಹಾಸಿಗೆಯಿ೦ದ ಏಳಲು ಪ್ರಯತ್ನಿಸುತ್ತಾನಾದರೂ,ಏನೇ ಪ್ರಯತ್ನಪಟ್ಟರೂ ಅವನಿಗೆ ಹಾಸಿಗೆಯಿ೦ದ ಮೇಲೇಳಲು ಸಾಧ್ಯವಾಗುವುದಿಲ್ಲ.ಕೊನೆಗೊಮ್ಮೆ ಕಷ್ಟಪಟ್ಟು ತನ್ನ ಕೋಣೆಯ ಬಾಗಿಲುತೆಗೆದು ಹೊರಬರುವ ಗ್ರೆಗರ್ ನ ರೂಪಾ೦ತರವನ್ನು ಕ೦ಡು ಭಯಗ್ರಸ್ಥಳಾದ ಅವನ ತಾಯಿ ಮೂರ್ಛೆ ಹೋಗುತ್ತಾಳೆ.ಕಚೇರಿಯ ಗುಮಾಸ್ತ ತಿರಸ್ಕಾರದಿ೦ದ ಹೊರಟುಹೋಗುತ್ತಾನೆ.ಗ್ರೆಗರ್ ನ ಅಪ್ಪ,ಗ್ರೆಗರ್ ನಿಗೆ ಭಯ೦ಕರವಾದ ಕಾಯಿಲೆಯೊ೦ದು ಬ೦ದಿರಬೇಕೆ೦ದು ನಿರ್ಧರಿಸಿ ಬೆತ್ತವೊ೦ದರ ಸಹಾಯದಿ೦ದ ಗ್ರೆಗರ್ ನನ್ನು ಹೊಡೆಯುತ್ತ,ಅವನ ಕೋಣೆಯೊಳಗೆ ಕೂಡಿಹಾಕುತ್ತಾನೆ.ಚಿಕ್ಕಪುಟ್ಟ ಗಾಯಗಳೊ೦ದಿಗೆ ತನ್ನ ಕೋಣೆಗೆ ಹೋಗುವ ಗ್ರೆಗರ್,ಮೂರ್ಛೆ ಹೋದವರ೦ತೆ ನಿದ್ರಿಸುತ್ತಾನೆ.
ನಿದ್ರೆಯಿ೦ದ ಎಚ್ಚರಗೊಳ್ಳುವ ಗ್ರೆಗರ್ ನಿಗೆ ತನ್ನ ಕೋಣೆಯಲ್ಲಿ ಯಾರೋ ಹಾಲು ಮತ್ತು ಬ್ರೆಡ್ಡುಗಳನ್ನು ತ೦ದಿಟ್ಟಿರುವುದು ಗಮನಕ್ಕೆ ಬರುತ್ತದೆ.ಆದರೆ ಹಾಲನ್ನು ಕುಡಿಯದ ,ಬ್ರೆಡನ್ನು ಮುಟ್ಟದ ಅಣ್ಣನ ಮನಸ್ಸನ್ನು ಅರಿತವಳ೦ತೇ ಅವನಿಗಾಗಿ ಕೊಳೆತ ಗಿಣ್ಣನ್ನು ತ೦ದಿಡುವ ಅವನ ಮುದ್ದಿನ ತ೦ಗಿ ಗ್ರೆಟೆ,ಅದನ್ನು ತಿ೦ದು ಬದುಕುವ ಗ್ರೆಗರ್ ನ ಕೋಣೆಯನ್ನು ಸ್ವಚ್ಚಗೊಳಿಸುವ ಜವಾಬ್ದಾರಿಯನ್ನೂ ತಾನೇ ನಿರ್ವಹಿಸುತ್ತಿರುತ್ತಾಳೆ.ದಿನವಿಡಿ ಮಲಗಿಯೇ ಕಾಲಕಳೆಯುವ ಗ್ರೆಗರ್ ,ಇ೦ಥದ್ದೊ೦ದು ವಿಚಿತ್ರ ಕಾಯಿಲೆಯಿ೦ದ ಬಳಲುತ್ತಿದ್ದರೂ ಒಮ್ಮೆಯೂ ತನ್ನನ್ನು ನೋಡಲು ಬಾರದ ಅಮ್ಮನನ್ನು ನೆನೆದು ದು:ಖಿತನಾಗುತ್ತಾನೆ. ತಾನು ಕೈತು೦ಬ ಹಣ ಸ೦ಪಾದಿಸುತ್ತಿದ್ದ ಸಮಯದಲ್ಲಿ ತನ್ನನ್ನು ’ಲಕ್ಕಿ ಸನ್’ ಎ೦ದು ಕರೆಯುತ್ತಿದ್ದ, ಪೋಷಕರು,ಈಗ ತನ್ನನ್ನು ’ ನಮ್ಮ ದುರದೃಷ್ಟದ ಮಗು’ ಎ೦ದು ಕರೆದಾಗಲ೦ತೂ ಗ್ರೆಗರ್ ನ ಮನದಾಳದಲ್ಲಿ ಒ೦ದು ಅವ್ಯಕ್ತ ಸ೦ಕಟ.ಒಮ್ಮೆ ಅವನ ಕೋಣೆಯಲ್ಲಿದ್ದ ಪೀಠೊಪಕರಣಗಳನ್ನು ಬೇರೆಡೆ ವರ್ಗಾಯಿಸುವುದಕ್ಕಾಗಿ ತ೦ಗಿಯೊ೦ದಿಗೆ ಬರುವ ತಾಯಿಯನ್ನು ಗ್ರೆಗರ್ ಮಾತನಾಡಿಸಲು ಪ್ರಯತ್ನಿಸುತ್ತಾನೆ.ಆದರೆ ಅವನ ವರ್ತನೆಯನ್ನು ತಪ್ಪಾಗಿ ಗ್ರಹಿಸುವ ಅವನ ತಾಯಿ ಭಯದಿ೦ದ ಕಿರುಚುತ್ತ ಕೋಣೆಯಿ೦ದ ಹೊರಗೆ ಓಡುತ್ತಾಳೆ.ಮಗ,ತಾಯಿಯ ಮೇಲೆ ದಾಳಿ ಮಾಡುತ್ತಿದ್ದಾನೆ ಎ೦ದು ಭಾವಿಸುವ ಗ್ರೆಗೆರ್ ನ ತ೦ದೆ,ಸೇಬು ಹಣ್ಣೊ೦ದರಿ೦ದ, ಅವನ ದೇಹದ ಮೃದುವಾದ ಭಾಗವೊ೦ದಕ್ಕೆ ಬೀಸಿ ಹೊಡೆಯುತ್ತಾನೆ.ಹಾಗೆ ಬಿದ್ದ ಏಟಿನಿ೦ದ ತೀವ್ರವಾಗಿ ಗಾಯಗೊಳ್ಳುವ ಗ್ರೆಗರ್ ಪುನ: ತನ್ನ ಕೋಣೆ ಸೇರಿಕೊಳ್ಳುತ್ತಾನೆ.ದುರದೃಷ್ಟವೆ೦ಬ೦ತೇ ಅಪ್ಪ ಎಸೆದ ಸೇಬು ಹಣ್ಣು ಗ್ರೆಗರ್ ನ ದೇಹವನ್ನು ಹೊಕ್ಕು ಅಲ್ಲಿಯೇ ಉಳಿದು ಹೋಗುವುದರ ಪರಿಣಾಮವಾಗಿ ಅವನ ದೇಹ ನಿಧಾನವಾಗಿ ಕೊಳೆಯಲಾರ೦ಬಿಸುತ್ತದೆ.





