ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 16, 2014

9

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫

‍ನಿಲುಮೆ ಮೂಲಕ

– ಮು. ಅ. ಶ್ರೀರಂಗ ಬೆಂಗಳೂರು

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ SL Bhairappa Vimarshe - Nilume
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪

                                                                                
                                                                                         ಆವರಣ —- ಅನಾವರಣ
                                                                                 
ಹೊಸ ಕನ್ನಡ ಸಾಹಿತ್ಯದ ಇತ್ತೀಚಿನ ಮೂವತ್ತು ನಲವತ್ತು ವರ್ಷಗಳಲ್ಲಿ ಎಸ್ ಎಲ್ ಭೈರಪ್ಪನವರ “ಆವರಣ” ಕಾದಂಬರಿಯಷ್ಟು ವಿವಾದಿತ ಕೃತಿ ಬಹುಶಃ ಬೇರೊಂದು ಇರಲಾರದೆನಿಸುತ್ತದೆ. “ಧರ್ಮ ಕಾರಣ” ಮತ್ತು”ಅನುದೇವ ಹೊರಗಣವನು” ಎಂಬ ಎರಡು ಕೃತಿಗಳ ಬಗ್ಗೆ ವಿವಾದವಾಗಿತ್ತು. ಆದರೆ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ನಂತರದಲ್ಲಿ “ಧರ್ಮಕಾರಣ”ವನ್ನು ಬ್ಯಾನ್ ಮಾಡಲಾಯಿತು. “ಆವರಣದ ವಾದ-ವಿವಾದಗಳಲ್ಲಿ”ಸಾಹಿತ್ಯ ಮತ್ತು ಸಾಹಿತ್ಯೇತರ ಕಾರಣಗಳು ಸೇರಕೊಂಡಿದ್ದವು. ಕನ್ನಡದ ನಾಲ್ಕೈದು ಪ್ರಮುಖ ದಿನ ಪತ್ರಿಕೆಗಳಲ್ಲಿ ಈ ಚರ್ಚೆ ಸುಮಾರು ಆರು ತಿಂಗಳುಗಳ ಕಾಲ ನಡೆಯಿತು. Front line ಮತ್ತು The pioneer ಎಂಬ ಇಂಗ್ಲಿಷ್ ಪತ್ರಿಕೆಗಳಲ್ಲಿ ಆವರಣ ಕುರಿತಂತೆ ವಿಮರ್ಶೆ ಪ್ರಕಟವಾಯ್ತು . ಜತೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ನಾಲ್ಕೈದು ಪ್ರಮುಖ ನಗರಗಳಲ್ಲಿ ಆವರಣದ ಬಗ್ಗೆ ಸಭೆಗಳು,ವಿಚಾರಗೋಷ್ಠಿಗಳು ನಡೆದವು.

ಆವರಣಆವರಣ ಕಾದಂಬರಿ ಬಗ್ಗೆ ಐದು ವಿಮರ್ಶೆಯ ಕೃತಿಗಳು ನನ್ನ ಗಮನಕ್ಕೆ ಬಂದಿವೆ. ಇಲ್ಲಿ ನಾನು ಪಟ್ಟಿಮಾಡಿರುವುಗಳನ್ನುಬಿಟ್ಟು ಇತರೆ ವಿಮರ್ಶೆಯ ಕೃತಿಗಳೂ ಬಂದಿರಬಹುದು. ಆ ಬಗ್ಗೆ ಸದ್ಯದಲ್ಲಿ ನನ್ನ ಬಳಿ ಯಾವುದೇ ಮಾಹಿತಿಯಿಲ್ಲ.

 1. ಆವರಣ ಅನಾವರಣ (ಎನ್ ಎಸ್ ಶಂಕರ್)
 2. ‘ಆವರಣ”ವೆಂಬ ವಿಕೃತಿ (ಸಂಪಾದಕರು: ಗೌರಿ ಲಂಕೇಶ್)
 3. ಆವರಣ ಮಾಧ್ಯಮ ಮಂಥನ (ಸಂಪಾದಕರು:ಬಿ ಎಸ್ ಚಂದ್ರಶೇಖರ್)
 4. ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ ‘ಆವರಣ’ದ ಸಂಕಥನ  (ಅಜಕ್ಕಳ ಗಿರೀಶ್ ಭಟ್)
 5. ‘ಆವರಣ’ಅವಲೋಕನ  (ಸಂಪಾದಕರು:ಎಲ್ ಎಸ್ ಶೇಷಗಿರಿರಾವ್)

ಇವುಗಳಲ್ಲಿ ಆವರಣ ಅವಲೋಕನ ಎಂಬ ಪುಸ್ತಕ ಬೆಂಗಳೂರಿನ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ನನಗೆ ಎರಡು ಮೂರು ವರ್ಷಗಳಿಂದಲೂ ಸಿಗುತ್ತಿಲ್ಲ. ಕೊನೆಗೆ ಆ ಪುಸ್ತಕದ ಪ್ರಕಾಶಕರನ್ನೇ ಸಂಪರ್ಕಿಸಿದಾಗ ಅವರ ಬಳಿಯೂ ಇಲ್ಲ ಮತ್ತು ಸದ್ಯದಲ್ಲಿ ಅದರ ಮರು ಮುದ್ರಣ ಮಾಡುವ ಯೋಚನೆಯೂ ಇಲ್ಲ ಎಂದರು. ಹೀಗಾಗಿ ಆ ಪುಸ್ತಕವನ್ನು ನಾನು ಓದಲು ಆಗಿಲ್ಲ. ಇನ್ನು ಉಳಿದ ನಾಲ್ಕು ವಿಮರ್ಶೆಯ  ಕೃತಿಗಳಲ್ಲಿ ಚರ್ಚೆಗೆ ಒಳಗಾಗಿರುವ “ಇತಿಹಾಸದ ವಸ್ತುನಿಷ್ಠತೆ” ಮತ್ತು “ಇತಿಹಾಸದ ಸತ್ಯ” ಈ ಸಂಗತಿಗಳ ಬಗ್ಗೆ ಈ ಕೆಳಕಂಡ ಮೂರು ಉಲ್ಲೇಖಗಳನ್ನು ಗಮನಿಸ ಬೇಕಾಗಿದೆ.  ಈ ಉಲ್ಲೇಖಗಳು ನಾನು ಆ ನಾಲ್ಕು ಕೃತಿಗಳ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಹಿನ್ನೆಲೆಯಾಗಿರುತ್ತವೆ.

(೧) ‘…. ದೇಶದ ಚರಿತ್ರೆಯನ್ನು ಕಲಿಯಬೇಕೆ,ಮರೆಯಬೇಕೆ? ಕಲಿಯಬೇಕೆಂದರೆ ಅದರಲ್ಲಿ ಬರುವ ಮತ ವೈಷಮ್ಯ ಸೂಚನೆಯ ಪ್ರಕರಣಗಳನ್ನು  ಅಕ್ಬರ್-ಪ್ರತಾಪಸಿಂಹ, ಔರಂಗಜೇಬ್-ಶಿವಾಜಿ,ನಮ್ಮ ನವಾಬರು-ಒಡೆಯರು, ಇಂತಹ ಪ್ರಕರಣಗಳನ್ನು ಏನು ಮಾಡಬೇಕು? ಅವು ಬೇರೆ ರೀತಿಯಲ್ಲಿ ಹೇಗೋ ಹಾಗೆ ಭಾವಿಸಿ ಚರಿತ್ರೆಯನ್ನು ತಿದ್ದತಕ್ಕದ್ದೇ,ಹೇಗೆ. ಚರಿತ್ರೆಯ ಪಾಠಕ್ಕೆ ಮೂರರಲ್ಲೊಂದು ಗತಿ ಬರಬೇಕಾಗುತ್ತದೆ. (i) ಮರೆತುಬಿಡುವುದು  (ll) ಯಥಾರ್ಥವನ್ನು ಅನುಕೂಲವಾಗಿ ತಿದ್ದಿಬಿಡುವುದು  (iii) ಯಥಾರ್ಥವನ್ನು ಯಥಾವತ್ತಾಗಿಯೇ ಹೇಳುವುದು. ಇದರಲ್ಲಿ ಮೊದಲನೆಯದು ಅಸಾಧ್ಯವಾಗಿರುವಂತೆ ಅನುಚಿತವೂ ಹೌದು. ಎರಡನೆಯದೂ ಹಾಗೆಯೇ. ಮೂರನೆಯದೊಂದೇ ನೀತಿ ದೃಷ್ಟಿಯಿಂದ ಯುಕ್ತವಾದದ್ದು. ಹಾಗಾದರೆ ಯಥಾರ್ಥ ಕಥನದಲ್ಲಿರುವ ಖಾರ-ಘಾಟುಗಳಿಗೆ ಪ್ರತಿಕ್ರಿಯೆ ಹೇಗೆ? ಎಂದರೆ ಅದು ನಮ್ಮ ಐತಿಹಾಸಿಕ ಬುದ್ಧಿಯ ಪರಿಷ್ಕಾರದಿಂದಲೇ ಆಗಬೇಕಾದದ್ದು. ನಾವು ಚರಿತ್ರೆಯನ್ನು ” ಮತ ದೃಷ್ಟಿ”ಯಿಂದ ಓದುವ ಹವ್ಯಾಸವನ್ನು ಬಿಟ್ಟು “ತತ್ವಾನೇಷಣ” ದೃಷ್ಟಿಯಿಂದ ಓದುವ ಅಭ್ಯಾಸವನ್ನು ಸಂಪಾದಿಸಬೇಕು.  ….. ಪ್ರತಿಯೊಂದು ಜನಾಂಗದ ಚರಿತ್ರೆಯಲ್ಲಿಯೇ ಹುಳುಕುಗಳು ಎಷ್ಟೋ ಇರುತ್ತವೆ. ತಾನು ಪಾಪರಹಿತನೆಂದು ಹೇಳಿಕೊಳ್ಳಬಲ್ಲ ವ್ಯಕ್ತಿ ಎಷ್ಟು ದುರ್ಲಭನೋ, ತನ್ನ ಚರಿತ್ರೆಯು ನಿರ್ದುಷ್ಟವೆಂದು ಹೇಳಿಕೊಳ್ಳಬಲ್ಲ ಜನಾಂಗವೂ ಹಾಗೆಯೇ. ದೋಷವೆಂಬುದು ಹೀಗೆ ಸರ್ವಸಾಮಾನ್ಯವಾಗಿರುವಾಗ, ಅನ್ಯೋನ್ಯ ಸಹಾನುಭೂತಿ ಸಹನೆ, ಉದಾರತೆ ಇವು ಎಲ್ಲ ಜನರಿಗೂ ಸಮಾನ ಕರ್ತವ್ಯವಾಗಿರುತ್ತವೆ…… ”
(ಸುಮಾರು ತೊಂಬತ್ತು ವರ್ಷಗಳ ಹಿಂದೆ ಡಿವಿಜಿ ಅವರು ಬರೆದು ಪ್ರಕಟಿಸಿರುವ ‘ಶ್ರೀ ವಿದ್ಯಾರಣ್ಯ ವಿಜಯ’ಎಂಬ ನಾಟಕಕ್ಕೆ ಬರೆದ ವಿಜ್ಞಾಪನೆ ಎಂಬ ಮುನ್ನುಡಿ.   ಅನಂತ ಕಲ್ಲೋಳ  ಆವರಣ ಮಾಧ್ಯಮ-ಮಂಥನ  ಪುಟ ೧೧೪ ೨೦೦೯)

(೨) ೧೯೬೯-೭೦ರ ಸುಮಾರಿನಲ್ಲಿ ದಿಲ್ಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ಅನುಸಂಧಾನ ಸಂಸ್ಥೆಯವರು(ncert) ಇತಿಹಾಸದ, ಭಾಷೆಯ,ಸಮಾಜಶಾಸ್ತ್ರದ ಪಠ್ಯಗಳಲ್ಲಿ ಸೇರಿಕೊಂಡಿರುವ “ಮುಳ್ಳಿನ ಬೀಜಗಳನ್ನು” ಶೋಧಿಸಿ ತೆಗೆದುಹಾಕುವ ಕೆಲಸಕ್ಕೆ ಒಂದು ಸಮಿತಿಯನ್ನು ನೆಹರೂ-ಇಂದಿರಾಗಾಂಧಿಯವರ ಕುಟುಂಬಕ್ಕೆ ಹತ್ತಿರದವರೂ, ಮಾಜಿ ರಾಯಭಾರಿಯೂ ಆಗಿದ್ದ ಜಿ. ಪಾರ್ಥಸಾರಥಿಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದಾಗ ಭೈರಪ್ಪನವರನ್ನು ಒಬ್ಬ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದರು. ಆ ಸಮಿತಿಯಲ್ಲಿ ಎರಡು  ದಿನಗಳೂ ಘಜ್ಞಿಮಹಮದ್,ಔರಂಗಜೇಬ,ಇವರುಗಳ ಬಗ್ಗೆ ಮತ್ತು ಕಾಶಿ,ಮಥುರಾ ದೇವಾಲಯಗಳ ಬಗ್ಗೆ ಇರುವ ಇತಿಹಾಸದ ಸತ್ಯಗಳನ್ನು ಅಲ್ಪ ಸಂಖ್ಯಾತರ ಮನಸ್ಸನ್ನು ನೋಯಿಸದ ಹಾಗೆ,ಮಕ್ಕಳ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತದ ಹಾಗೆ ಪುನರ್ ರೂಪಿಸಬೇಕು ಎಂಬ ಪ್ರಸ್ತಾಪಕ್ಕೆ ಭೈರಪ್ಪನವರು ವಿರೋಧ ವ್ಯಕ್ತಪಡಿಸಿದಾಗ ಮೂರನೇ ಸಲ ಸಭೆ ಸೇರುವಹೊತ್ತಿಗೆ ಭೈರಪ್ಪನವರನ್ನು ಆ ಸಮಿತಿಯಿಂದಲೇ ತೆಗೆದುಹಾಕಿದರಂತೆ.  ನಂತರ ncert ಯು ಇತಿಹಾಸವನ್ನು “ಪುನರ್ ರೂಪಿಸಿ”,ತಿದ್ದಿ ಪುಸ್ತಕಗಳನ್ನು ರಚಿಸಿದರಂತೆ.
(ಹೆಚ್ಚಿನ ವಿವರಗಳಿಗೆ ನೋಡಿ- ಭೈರಪ್ಪನವರ ಸಂಧರ್ಭ-ಸಂವಾದ ಪುಟ ೩೧೯-೩೨೨  ೨೦೧೧)

(೩) ಇತಿಹಾಸದ ಪ್ರಕಾಂಡ ಪಂಡಿತರೂ,ಸಂಶೋಧಕರೂ ಆದ ಆರ್ ಸಿ ಮುಜಂದಾರರ ಸಂಪಾದಕತ್ವದಲ್ಲಿ ಭಾರತೀಯ ದೃಷ್ಟಿಯಿಂದ ರಚಿಸಲಾದ The History and culture of the Indian people ಎಂಬ ಹೆಸರಿನ ಹನ್ನೊಂದು ಸಂಪುಟಗಳ ರಚನೆ  ರಾಜ್ಯಾಂಗ ರಚನಾ ಸಭೆಯ ಸದಸ್ಯರೂ,ಭಾರತೀಯ ವಿದ್ಯಾಭವನದ ಸಂಸ್ಥಾಪಕರೂ ಆದ ಕನ್ನಯ್ಯಲಾಲ್ ಮುನ್ಷಿ ಅವರ ಯೋಜನೆಯಂತೆ ನೆರವೇರಿತು. ನಂತರದಲ್ಲಿ ಆ ಇತಿಹಾಸದ ಗ್ರಂಥಗಳನ್ನು ಭಾರತದ ಎಲ್ಲಾ ಭಾಷೆಗಳಿಗೂ ಅನುವಾದಿಸಬೇಕೆಂಬ ಪ್ರಸ್ತಾವನೆಯನ್ನು National Book Trust (NBT) ಮುಂದಿಟ್ಟಾಗ ಅವು ಇತಿಹಾಸದ ಗ್ರಂಥಗಳಾಗಿದ್ದರಿಂದ ಈ ಪ್ರಸ್ತಾಪವು Ichr (Indian council for historical research)ಗೆ ಕಳುಹಿಸಲಾಯಿತು. ಆಗ ಅಲ್ಲಿದ್ದ ಮಾರ್ಕ್ಸಿಸ್ಟ್ ವಿದ್ವಾಂಸರು ಮುಜಂದಾರರ  ಆ ಹನ್ನೊಂದು ಸಂಪುಟಗಳನ್ನು ತಿರಸ್ಕರಿಸಿ ಪರ್ಯಾಯ ಗ್ರಂಥಗಳನ್ನು ಸೂಚಿಸಿದವು. ಅವು ಆರ್ ಎಸ್ ಶರ್ಮ,ಎಸ್ ಗೋಪಾಲ,ರೊಮಿಲಾಥಾಪರ್,ಬಿಪಿನ್ ಚಂದ್ರ,ಇರ್ಫಾನ್ ಹಬೀಬ್,ಮೆಹಮದ್ ಹಬೀಬ್,ಸತೀಶ್ ಚಂದ್ರ,ಇ ಎಂ ಎಸ್ ನಂಬೂದರಿಪಾದ್ ಮತ್ತು ರಜನಿ ಪಾಮೆದತ್ ಇವರುಗಳ ಸುಮಾರು ಇಪ್ಪತ್ತು ಗ್ರಂಥಗಳು. ಇವರೆಲ್ಲಾ ಕಮ್ಯುನಿಸ್ಟ್ ವಿಚಾರಧಾರೆಗಳಿಗೆ ಸೇರಿದವರು ಎಂಬುದು ಗಮನಿಸಬೇಕಾದ ಅಂಶ. (ಹೆಚ್ಚಿನ ವಿವರಗಳಿಗೆ ನೋಡಿ ಪುಟ ೩೨೩-೩೨೫ ಅದೇ)

ಆವರಣ ಕುರಿತಂತೆ ಬಂದಿರುವ ವಿಮರ್ಶೆಗಳಲ್ಲಿ ನಾನು ಓದಿರುವ ಮೊದಲ ಮೂರು ಕೃತಿಗಳಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ಎರಡು  ಅಂಶಗಳು.

(೧) ಭೈರಪ್ಪನವರು ಇತಿಹಾಸದ ಒಂದು ಪಾರ್ಶ್ವದ (one sided) ಚಿತ್ರಣವನ್ನಷ್ಟೇ ನೀಡಿದ್ದಾರೆ .

(೨) ಹಳೆಯದನ್ನು ಕೆದಕಿ ತೆಗೆದಿರುವುದರಿಂದ ಒಂದು ವಿಚಾರಧಾರೆಯ ನಿರ್ದಿಷ್ಟ ಓದುಗರನ್ನು ಓಲೈಸುವ ಮತ್ತು ಈಗಾಗಲೇ ಭೈರಪ್ಪನವರ ಮೇಲೆ ಶಾಶ್ವತವಾಗಿ ಸ್ಥಾಪಿತವಾಗಿರುವ “ಜನಪ್ರಿಯತೆಯ ತಂತ್ರ”.

ಇದುವರೆಗೆ ಆವರಣ ಕುರಿತಂತೆ ಬಂದಿರುವ ವಿಮರ್ಶೆಗಳಲ್ಲಿ ಅಜಕ್ಕಳ ಗಿರೀಶ್ ಭಟ್ ಅವರ “ಬುದ್ಧಿಜೀವಿ vs ಬೌದ್ಧಿಕ ಸ್ವಾತಂತ್ರ್ಯ-ಆವರಣ ಸಂಕಥನ”  ಕೃತಿಯು (ಪ್ರಕಾಶಕರು-ಚಿಂತನ ಬಯಲು ಮೊಡಂಕಾಪು ಬಂಟ್ವಾಳ ದ.ಕ.) ಯಾವುದೇ ಪೂರ್ವಗ್ರಹಗಳಿಲ್ಲದೆ ಒಂಭತ್ತು ಅಧ್ಯಾಯಗಳಲ್ಲಿ ಆವರಣದಲ್ಲಿರುವ ಇಂದಿನ ಮತ್ತು ಹಿಂದಿನ ಸಂಗತಿಗಳನ್ನು ವಿವರವಾಗಿ,ಪ್ರತಿ ಪುಟಗಳಲ್ಲೂ ಸಾಕಷ್ಟು ಅಡಿ ಟಿಪ್ಪಣಿಗಳೊಂದಿಗೆ ಚರ್ಚಿಸಿದೆ. ಇತರ ಮೂರು ವಿಮರ್ಶಾಕೃತಿಗಳಲ್ಲಿ ಇರುವ ಕೆಲವು ಕಲ್ಪಿತ/generalize ಹೇಳಿಕೆಗಳು ಇದರಲಿಲ್ಲ. ಈ ದೃಷ್ಟಿಯಿಂದ ಈ ಕೃತಿಯ ಬಗ್ಗೆ ನಾನು ಮತ್ತೆ ಬರೆಯುವಂತಹುದೇನೂ ಇಲ್ಲ. ಗಿರೀಶ್ ಭಟ್ ಅವರ ಕೃತಿಯಲ್ಲಿನ ಕೆಲವು ಉಲ್ಲೇಖಗಳನ್ನು ನನ್ನ ಈ ಲೇಖನಗಳ ಸರಣಿಯ   ಕೊನೆಯಲ್ಲಿ .ಅನುಬಂಧವಾಗಿ  ಕೊಡುತ್ತೇನೆ. ಆವರಣ ಕಾದಂಬರಿಯನ್ನು ಈವರೆಗೆ ನಮ್ಮ ಪತ್ರಿಕೆಗಳ ವಿಮರ್ಶೆಗಳು,ಬುದ್ಧಿಜೀವಿಗಳು ತಮ್ಮ ವಾದಗಳಿಂದ,ಶಬ್ಧಗಳ ಮೋಡಿಯ ಜಾಲದಿಂದ ಯಾವ ರೀತಿ ಅಪವ್ಯಾಖ್ಯನಗೊಳಿಸಿದ್ದಾರೆ ಎಂಬುದನ್ನು ತಿಳಿಯಲು ಆಸಕ್ತಿಯಿರುವವರು “…… ಆವರಣ ಸಂಕಥನ”  ಕೃತಿಯನ್ನು ಅವಶ್ಯವಾಗಿ ಓದಬೇಕಾಗಿದೆ.ಇಷ್ಟು ಪ್ರಸ್ತಾವನೆಯ ನಂತರ ಎನ್ ಎಸ್ ಶಂಕರ್ ಅವರ “ಆವರಣ ಅನಾವರಣ”ಎಂಬ ವಿಮರ್ಶಾಕೃತಿಯ ಬಗ್ಗೆ ನಾವುಗಳು ಸಂವಾದ ನಡೆಸಬಹುದೆನಿಸುತ್ತದೆ. ಈ ಪುಸ್ತಕದ ಪ್ರಕಾಶಕರಾದ “ಆದಿಮ”ದ ಕೋಟಿಗಾನಹಳ್ಳಿ ರಾಮಯ್ಯನವರು “ಸಾಂಸ್ಕೃತಿಕ ರಾಜಕಾರಣದ ಎರಡನೇ ಮುಖ ಎಂಬ ತಮ್ಮ ಮುನ್ನುಡಿಯಲ್ಲಿ ಅಪಾಯಕಾರಿ ಆವರಣವನ್ನು ಮನುಷ್ಯರೆಲ್ಲಾ ಒಂದೇ ಎಂದು ನೋಡುವ ಜಾತ್ಯತೀತ/ಧರ್ಮಾತೀತ ತಾತ್ವಿಕತೆಯ ಮೂಲಕವೇ ಎದುರಿಸಿ ಮೌಲ್ಯ ಮಾಪನ ಮಾಡುವುದು ಇಂದಿನ ತುರ್ತು ಬೌದ್ಧಿಕ ಅಗತ್ಯಗಳಲ್ಲೊಂದು ಎನ್ನುವ ಮೂಲಕ ಬುದ್ಧಿಜೀವಿಯ ಪೋಸ್ ಕೊಟ್ಟುಕೊಂಡಿದ್ದಾರೆ. ಜಾತಿ ಮತ್ತು ಧರ್ಮಗಳಿಗೆ ಅತೀತವಾದ ತಾತ್ವಿಕತೆಯೆಂಬುದು ಒಂದು “ಊಹಾ ಪ್ರಮೇಯ”ವಾಗಬಲ್ಲುದೆ ಹೊರತು ವಾಸ್ತವವಾಗಲಾರದು. ಇನ್ನು ಈ ಸಾಂಸ್ಕೃತಿಕ ರಾಜಕಾರಣಕ್ಕೆ ಮೂರನೇ ಮುಖವೂ ಒಂದಿದೆ. ಅದು “ಅಲ್ಪ ಸಂಖ್ಯಾತ ಮತ್ತು ಬಹು ಸಂಖ್ಯಾತ”ಎಂಬ ಅಪ್ಪಟ politically correct ಆದ ವಾದ.

ಜಾತಿ/ಧರ್ಮಾತೀತ ತಾತ್ವಿಕತೆಯ ಪ್ರತಿಪಾದಕರೇ ಇದರ ಪಾಲಕರು ಮತ್ತು ಪೋಷಕರು. ಶಂಕರ್ ಅವರ “ಆವರಣ-ಅನಾವರಣ” ಎಂಬ ವಿಮರ್ಶೆಯ ಕೃತಿಯ ಪುಟ ೨ ರಿಂದ ೧೬ರ ತನಕ ಆ ಕಾದಂಬರಿಯ ಸಾರಾಂಶ ಮತ್ತು ಆಗಾಗ ಅದರ ಬಗ್ಗೆ ಭಾಷ್ಯ,ಟೀಕೆ,ಟಿಪ್ಪಣಿಗಳಿವೆ. ಹೀಗಾಗಿ ಅದರ ಬಗ್ಗೆ ಹೇಳುವಂತಹುದೇನೂ ಇಲ್ಲ. ಅಲ್ಲಿನ ಮೂರ್ನಾಲಕ್ಕು ಅಂಶಗಳನ್ನು ಮಾತ್ರ ಗಮನಿಸಬಹುದು

(೧) ಗಾಂಧಿವಾದಿಯಾಗಿದ್ದ ನರಸಿಂಹೇಗೌಡ ತಮ್ಮ ಮಗಳು ಲಕ್ಷ್ಮಿ ಮತಾಂತರಗೊಂಡು ಅಮೀರನನ್ನು ಮದುವೆಯಾಗಿದ್ದೇ ಕಾರಣವಾಗಿ ಅಮೂಲಾಗ್ರವಾಗಿ ಮುಸ್ಲಿಂ ಆಳ್ವಿಕೆಯ ಅಧ್ಯಯನಕ್ಕೆ ‘ಸತ್ಯಶೊಧನೆಗೆ’ತಾನೇ ಮುಡಿಪಾಗಿಬಿಡುತ್ತಾನೆ ಎಂದಿದ್ದಾರೆ. (ಪುಟ  ೨ ಅದೇ). ಮಹಾತ್ಮ ಗಾಂಧಿಯವರು ಬದುಕಿದ್ದಾಗಲೇ ಅವರ ಕೆಲವು ವಿಚಾರಗಳನ್ನು ಒಪ್ಪದವರು ಅವರಿಂದ ಬೇರ್ಪಟ್ಟಿದ್ದರು ಅಥವಾ ಅಸಮಾಧಾನಗೊಂಡಿದ್ದರು ನೆಹರೂ ಅವರನ್ನು ಗಾಂಧೀಜಿ ಅವರು ಆತ ನನ್ನ ಹೃದಯ ಇದ್ದಂತೆ ಎಂದು ಹೇಳುತ್ತಿದ್ದರು. ಆದರೆ ಅಂತಹ ನೆಹರೂ ಅವರೇ ಪ್ರಧಾನಿಯಾದ ನಂತರ ಗಾಂಧೀಜಿ ಅವರ ವಿಚಾರಧಾರೆಗಳಿಂದ ದೂರಸರಿದದ್ದು ವರ್ತಮಾನದ ಸತ್ಯ. ಈ ಬಗ್ಗೆ ಅಜಕ್ಕಳ ಗಿರೀಶ್ ಭಟ್ ಅವರು ಹೇಳಿರುವ ‘ಮಗಳ  ಧರ್ಮಾಂತರದಂತಹ ವೈಯಕ್ತಿಕ ಬದುಕಿನ ಘಟನೆಯ ಸಂದರ್ಭದಲ್ಲಿ ಗಾಂಧಿವಾದದ ಪ್ರಖರತೆ ಮರೆತು ಹೋಗುವುದು ಅಂತಹ ಅಸಹಜ ಸಂಗಂತಿಯಾಗಿಯೇನೂ ಕಾಣುವುದಿಲ್ಲ. ಆದರೆ ನರಸಿಂಹೇಗೌಡರು ವೈಯಕ್ತಿಕ ಆಘಾತದ ಸಂದರ್ಭದಲ್ಲಿ …….. ಇಂದಿನ ಎಲ್ಲಾ ಮುಸ್ಲಿಮರ ಮೇಲೆ ಹೊರಿಸುವ ಆರೋಪ ಸುಳ್ಳು ಎಂದು ತೋರಿಸಲು ಕಾದಂಬರಿ ಸಾಕಷ್ಟು ಯತ್ನಿಸುವುದಿಲ್ಲ …. ಅಮೀರನ ಪಾತ್ರ ಚಿತ್ರಣದ ಮೂಲಕ ಸಣ್ಣ ಮಟ್ಟಿನ ಪ್ರಾಯಶ್ಚಿತ್ತವಾಗುತ್ತದೆ ಅಷ್ಟೇ’ ಎಂಬುದು ಗಮನಿಸಬೇಕಾದ ಅಂಶ(.ಆವರಣ ಸಂಕಥನ ಪುಟ ೪೩-೪೪  ೨೦೦೭).

(೨) ‘ಜಾತಿ ಇಲ್ಲ ಎಂದವನನ್ನು ಹಿಂದೂ ಧರ್ಮವು ಕ್ಷಣಮಾತ್ರವೂ ಸಹಿಸಿಲ್ಲ! ವೈದಿಕರು ಬೌದ್ಧ ಧರ್ಮವನ್ನು ಓಡಿಸಿದ್ದೇ ಅದಕ್ಕಾಗಿ…’ ಎಂದು ಶಂಕರ್ ಆಪಾದಿಸಿದ್ದಾರೆ. (ಆವರಣ-ಅನಾವರಣ ಪುಟ ೧೧). ಈ ಬಗ್ಗೆ ಭೈರಪ್ಪನವರು ತಮ್ಮ ಸಂದರ್ಭ-ಸಂವಾದ ಕೃತಿಯಲ್ಲಿ ಡಾ।। ಬಿ ಆರ್ ಅಂಬೇಡ್ಕರ್ ಅವರು The decline and  fall of  Budhisam  ಎಂಬ ವಿಭಾಗದಲ್ಲಿ (Writings and speeches volume III ,Govt of Maharashtra ೧೯೮೭ pp ೨೨೯-೩೮) “ಮುಸ್ಲಿಂ ದಾಳಿಕೋರರು ಬೌದ್ಧ ವಿಶ್ವವಿದ್ಯಾಲಯಗಳಾದ ನಾಳಂದ,ವಿಕ್ರಮಶೀಲ,ಜಗದ್ದಲ, ಒದಂತಪುರಿ ಮೊದಲಾದವುಗಳನ್ನು ನೆಲಸಮ ಮಾಡಿ ಭಿಕ್ಕುಗಳ ಸಮೂಹವನ್ನು ಕಗ್ಗೊಲೆಮಾಡಿದುದನ್ನು, ತಪ್ಪಿಸಿಕೊಂಡ ಭಿಕ್ಕುಗಳು ನೇಪಾಳ,ಟಿಬೇಟುಗಳಿಗೆ  ಓಡಿ ಹೋಗಿ ಜೀವ ಉಳಿಸಿಕೊಂಡುದನ್ನು ವಿವರಿಸಿ ನಂತರದಲ್ಲಿ ಇದು  ಭಾರತದಲ್ಲಿ ಬುದ್ಧನ ಧರ್ಮಕ್ಕೆ ಎರಗಿದ ಅತ್ಯಂತ ಘೋರ ಅನಾಹುತವಾಗಿದೆ. ಹಿಂದೂ ಧರ್ಮವನ್ನು ಹಿಯಾಳಿಸಲು ತಮಗೆ ಅನುಕೂಲವಾದಾಗ ಡಾ।।ಅಂಬೇಡ್ಕರರ ವಿಚಾರಗಳ ಆಯ್ದ ತುಣುಕುಗಳನ್ನು ಉದ್ಧರಿಸುವ ಮಾರ್ಕ್ಸ ವಾದಿಗಳು ಅಂಬೇಡ್ಕರರ ಈ ಮಾತುಗಳನ್ನು ಉಪಾಯವಾಗಿ ತೇಲಿಸಿಬಿಡುತ್ತಾರೆ ಎಂದು ವಿವರಿಸಿದ್ದಾರೆ.(ಪುಟ ೩೨೨-೩೨೩ ಅದೇ). ಹಿಂದೂ ಧರ್ಮ =ಬ್ರಾಹ್ಮಣಧರ್ಮ  ಎಂದು ಎಲ್ಲ ಪ್ರಗತಿಪರರಂತೆ ಶಂಕರ್ ಅವರೂ ಅದನ್ನೇ ಉಚ್ಚರಿಸುತ್ತಾ ಹೋಗುತ್ತಾರೆ. ಮೇಲಿನ ಶಂಕರ್ ಅವರ ಉಲ್ಲೇಖ(೨)ರ ಒಂದೇ ವಾಕ್ಯದಲ್ಲಿ ಹಿಂದುಧರ್ಮ=ವೈದಿಕರು ಎಂದು ಎರಡೇ ಪದಗಳ ಅಂತರದಲ್ಲಿ ಬದಲಾಗಿ ಹೋಗಿದೆ!

(೩) ಆವರಣ ಕಾದಂಬರಿಯಲ್ಲಿ ಲಕ್ಷ್ಮಿ(ರಜಿಯಾ)” ಮೇಲು ಕೀಳು ಎಂಬ ಶ್ರೇಣಿಕರಣದ ಅಂಶಗಳನ್ನು ತಿರಸ್ಕರಿಸಿ ಸರ್ವರೂ ಸಮಾನರೆಂಬ ತತ್ವದ ಆಧಾರದ ಮೇಲೆ ನಮ್ಮ ಸಂವಿಧಾನ ರಚನೆ ಮಾಡಿಕೊಂಡಿಲ್ಲವೇ?” ಎಂದು ಹೇಳಿದ  ಮಾತುಗಳು   ಶಂಕರ್ ಅವರ ಟೀಕೆಗೆ ಗುರಿಯಾಗಿದೆ. (ಪುಟ ೧೩-೧೪ ಆವರಣ-ಅನಾವರಣ).

ನಮ್ಮ ಸಂವಿಧಾನ ರಚನೆಯ ಪ್ರಕ್ರಿಯೆ ಬಗ್ಗೆ History of Indian Constitution ಎಂಬ web page ನಲ್ಲಿರುವ Forgotten fathers of the constitution ಎಂಬ ಶೀರ್ಷಿಕೆಯಲ್ಲಿರುವ ಕೆಲವು ಮಾಹಿತಿಗಳನ್ನು ಈ ಸಂದರ್ಭದಲ್ಲಿ ತಿಳಿಯುವುದು ಅವಶ್ಯ. Constitution ರಚಿಸಿದ ಸಮಿತಿಯಲ್ಲಿದ್ದ ಪ್ರಮುಖರು ೧. ಡಾ. ಬಿ ಆರ್ ಅಂಬೇಡ್ಕರ್ (ಅಧ್ಯಕ್ಷರು) ೨. ಬೆನೆಗಲ್ ನರಸಿಂಗರಾವ್ ೩. ಸೈಯದ್ ಮೊಹಮದ್ ಸಾದುಲ್ಲ ೪. ಎಂ ಎ ಅಯ್ಯಂಗಾರ್ ೫. ಎನ್ ಗೋಪಾಲಸ್ವಾಮಿ ಅಯ್ಯಂಗಾರ್ ೬. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ೭. ಜಿ ದುರ್ಗಾಬಾಯಿ ೮. ಟಿ ಟಿ ಕೃಷ್ಣಮಾಚಾರಿ ೯. ಎಚ್ ಸಿ ಮುಖರ್ಜಿ ೧೦. ಕೆ ಎಂ ಮುನ್ಷಿ ೧೧. ಎನ್ . ಮಾಧವರಾವ್ ೧೨. ಬಿ ಪಟ್ಟಾಭಿ ಸೀತಾರಾಮಯ್ಯ. ಇವರುಗಳ ಜತೆಗೆ ೨೦೫ ಚುನಾಯಿತ ಮತ್ತು ನಾಮ ನಿರ್ದೇಶನಗೊಂಡ ಸದಸ್ಯರು ಮತ್ತು ಬೆಳಕಿಗೆ ಬಾರದ ಇತರ ಎಷ್ಟೋ ಮಂದಿ ಸೇರಿ ಭಾರತದ ಸಂವಿಧಾನವನ್ನು reasonable and not effected by emotions ರೀತಿಯಲ್ಲಿ ರಚಿಸಿದರು ಎಂದಿದೆ.

ಈ ಬಗ್ಗೆ ಬರೆಯುತ್ತ ಭೈರಪ್ಪನವರು ‘ಮೇಲ್ಕಾಣಿಸಿದವರು ರಚಿಸಿದ ಸಂವಿಧಾನದ ಕರಡನ್ನು ಅಂಬೇಡ್ಕರರು ಸಮಿತಿಯ ಅಧ್ಯಕ್ಷರು ಮತ್ತು ಕಾನೂನು ಸಚಿವರಾಗಿದ್ದುದರಿಂದ ಚರ್ಚೆ ಮತ್ತು ಅನುಮೋದನೆಗೆ ಮಂಡಿಸಿದರು. ಈ ಪಟ್ಟಿಯಲ್ಲಿ ಬಹುತೇಕ ಮಂದಿ ಮೇಲುಜಾತಿ ಎಂದು ಪರಿಗಣಿತರಾಗಿದ್ದವರು.ಅಸ್ಪೃಶ್ಯತೆಯನ್ನು ಅಪರಾಧವೆಂದು ಪರಿಗಣಿಸಿ ದಲಿತರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಇರಬೇಕೆಂದು ನಿರ್ಧರಿಸಿದವರೂ  ಅವರೇ’. (ವಿವರಗಳಿಗೆ ನೋಡಿ ಸಂದರ್ಭ-ಸಂವಾದ  ಪುಟ ೨೨೮-೨೨೯ ಮತ್ತು ಕರಡು ಸಮಿತಿಯಲ್ಲಿದ್ದವರು ಸಂವಿಧಾನದಲ್ಲಿರುವ  ಯಾವ ಯಾವ ಕಾನೂನುಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದಕ್ಕೆ ಈ ಹಿಂದೆ ಸೂಚಿಸಿದ web page ಅನ್ನೂ ಗಮನಿಸಿ). ಇದು  ಸಂವಿಧಾನದ ರಚನೆಯ ಹಿಂದಿರುವ ಅಂಬೇಡ್ಕರರ ಹಿರಿಮೆಯನ್ನು ಹೇಳುವುದರ ಜತೆಗೆ ಇತರರು ನಿರ್ವಹಿಸಿದ ಜವಾಬ್ದಾರಿಗಳಿಗೆ ಗೌರವ ಸಲ್ಲಿಸುವುದೂ ಆಗಿದೆ. ಸಂವಿಧಾನದ ರಚನೆ ಹೇಗೆ ನಡೆಯಿತು ಎಂಬುದು ಶಂಕರ್ ಅವರಿಗೆ ತಿಳಿದಿಲ್ಲ ಎಂದಷ್ಟೇ  ಹೇಳಬಹುದು.ಆವರಣ ಮತ್ತು ಭೈರಪ್ಪನವರನ್ನು ಏನಕೇನಪ್ರಕಾರೇಣ ಟೀಕಿಸಬೇಕು;ಅಷ್ಟೇ ಅವರ ಉದ್ದೇಶ.

(೪) ‘ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳು ಸಿಡಿದು ಬಾಂಗ್ಲಾದೇಶ  ಉದಯವಾದಾಗಲೇ ಹಿಂದೂ-ಮುಸ್ಲಿಂ ಜನಾಂಗ ಭೇದ ಹಾಗೂ ಮುಸ್ಲಿಂ ರಾಷ್ಟ್ರದ ತತ್ವ ನುಚ್ಚುನೂರಾಗಿ ಹೋದರೂ …… ‘(ಪುಟ ೧೭-೧೮ ಆವರಣ ಅನಾವರಣ) ಇದು ಶಂಕರ್ ಅವರ ಇನ್ನೊಂದು ಸಂಶೋಧನೆ!. ಬಾಂಗ್ಲಾ ದೇಶ ಉದಯವಾದ ನಂತರ ನಡೆದ ವಿದ್ಯಮಾನಗಳ ಬಗ್ಗೆ ಸಾಮಾನ್ಯ ಜ್ಞಾನ ಇರುವ ಯಾರೇ ಆದರೂ ಇಷ್ಟು ಬಿಡುಬೀಸಾದ ಮಾತನ್ನು ಆಡಲಾರರು. ಟಿಪ್ಪು ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಈ ಸಲದ ಕೊಡಗಿನ ಸಾಹಿತ್ಯ ಸಮ್ಮೇಳನದ ಸಮಯದಲ್ಲೂ ಟಿಪ್ಪು ವಿಷಯ ಸಾಕಷ್ಟು ಕಾವು ಮೂಡಿಸಿತ್ತು. ಟಿವಿ ವಾಹಿನಿಗಳಲ್ಲಿ,ಪತ್ರಿಕೆಗಳಲ್ಲಿ ಚರ್ಚೆ ನಡೆಯಿತು. ಹೀಗಾಗಿ ಪುನಃ ಅದರ ಬಗ್ಗೆ ವಿವರಿಸುವ ಅವಶ್ಯಕತೆ ಇಲ್ಲ. ಆಸಕ್ತರು ಭೈರಪ್ಪನವರ ಸಂದರ್ಭ-ಸಂವಾದ ಕೃತಿಯಲ್ಲಿರುವ ದೀರ್ಘವಾದ ಚರ್ಚೆಯನ್ನು ಗಮನಿಸಬಹುದು.

(೫) ಓದುಗರನ್ನು ದಾರಿತಪ್ಪಿಸುವ “ಐನಾತಿ ತಂತ್ರ”ವನ್ನು ಶಂಕರ್ ಅವರು ಒಂದೆರೆಡು ಬಾರಿ ಮಾಡುತ್ತಾರೆ.(ಈ “ಐನಾತಿ ತಂತ್ರ”ಎಂಬುದು ಶಂಕರ್ ಅವರೇ ಭೈರಪ್ಪನವರನ್ನು ಟೀಕಿಸಲು ಉಪಯೋಗಿಸಿರುವ ಪದಗಳು. ಆವರಣ ಅನಾವರಣ ಪುಟ ೨೦)

(i) ಭೈರಪ್ಪನವರು ಆವರಣ ಕಾದಂಬರಿಯಲ್ಲಿ ಆಕ್ಬರ್ ಬಗ್ಗೆ ಏನೂ ಹೇಳಿಲ್ಲ ಎಂದು ಪುಟ ೧೯ರಲ್ಲಿ ಹೇಳುತ್ತಾರೆ.  ಆದರೆ ಅವನ ಬಗ್ಗೆ ಒಂದು ಪಾತ್ರದ ಮೂಲಕ ಹೇಳಿಸಿದಾಗ “ಎಂಥ ಐನಾತಿ ತಂತ್ರ” ಎಂದು ( ಪುಟ ೨೦ ರಲ್ಲಿ) ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಶಂಕರ್ ಅವರು  ಕನ್ನಡ ವಿಮರ್ಶೆಯಲ್ಲಿ ಬಳಸಿ ಬಳಸಿ ಸವೆದು ಹೋಗಿರುವ(jargon) ಪದಗಳ ವಾಕ್ಯಗಳ ಹಿಂದೆ ಅವಿತುಕೊಳ್ಳುವ ಪ್ರಯತ್ನ ಮಾಡುತ್ತಾರೆ.

(ii) ಖ್ವಾಜಾಜಹಾನ್ ಮತ್ತು ತಬಸ್ಸುಂ (ಇಬ್ಬರೂ  ಹಿಂದೂ ಧರ್ಮದಿಂದ ಮುಸ್ಲಿಂ ಗೆ ಬಲವಂತವಾಗಿ ಮತಾಂತರವಾಗಿ ಬೇರೆ ಬೇರೆ ಸ್ಥಳಗಳಲ್ಲಿ ಗುಲಾಮರಾಗಿದ್ದ ಗಂಡ ಮತ್ತು ಹೆಂಡತಿ). ತಬಸ್ಸುಂ ಅಮೀರನೊಬ್ಬನ ರಖಾವ್ ಆಗಿದ್ದಳು. ಐದಾರು ವರ್ಷಗಳ ನಂತರ ಇವರ ಭೇಟಿಗೆ  ಅದೇ ಆಮೀರ ಊರಲ್ಲಿಲ್ಲದೆ ಇರುವಾಗ ಆತನ ದನಗಳ ಕೊಟ್ಟಿಗೆಯಲ್ಲಿ ಏರ್ಪಾಡು ಮಾಡಿರುತ್ತಾರೆ. ಈ ಕುರಿತು ಶಂಕರ್ ಅವರ ವ್ಯಾಖ್ಯಾನ ಹೀಗಿದೆ ‘ಖ್ವಾಜನ ಮನಸ್ಸಿನಲ್ಲಿ ಆ ಮಿಲನ ಎಂಥ ಹೃದಯ ವಿದ್ರಾವಕ ಸಂದರ್ಭವಾಗಿರಬಹುದು. ಏನೆಲ್ಲಾ ಭಾವಾವಿಷ್ಠ ಹೊಯ್ದಾಟಗಳಿರಬೇಕು. ಇಲ್ಲ ಭೈರಪ್ಪನವರ ನಿರೂಪಣೆ ಅದಾವುದನ್ನೂ ಶೋಧಿಸುವುದಿಲ್ಲ ……. ಹಸುಗಳ ಬಗ್ಗೆ ಯೋಚಿಸುತ್ತಾನೆ ‘(ಅದೇ ಪುಟ ೨೪). ಆದರೆ ಖ್ವಾಜಾ ತಬಸ್ಸುಂ ಭೇಟಿಗೆ ಬಂದಾಗಲಿಂದ ವಾಪಸ್ಸು ಹೋಗುವ ತನಕ ಅವರಿಬ್ಬರ ನಡುವೆ ನಡೆದ ಮಾತುಗಳು,ಮಾನಸಿಕ ತುಮುಲಗಳು ಸುಮಾರು ಐದು ಪುಟಗಳಷ್ಟಿದೆ(ನೋಡಿ ಆವರಣ ಪುಟ ೧೩೦-೧೩೫ ಎರಡನೇ ಮುದ್ರಣ ೨೦೦೭). ಶಂಕರ್ ಅವರು ಆ ಪುಟಗಳನ್ನು ಓದಿದ್ದಾರೋ ಇಲ್ಲವೋ ಎಂಬ ಅನುಮಾನ ಬರುವುದು ಸಹಜ. ಏಕೆಂದರೆ ಪ್ರಗತಿಪರ, ಮಾರ್ಕ್ಸ್ ವಾದಿ ಚಿಂತಕರಾಗಿರುವ ಶಂಕರ್ ಅವರಿಗೆ ಹಸುಗಳನ್ನು ಕಂಡಾಕ್ಷಣ ಭೈರಪ್ಪನವರನ್ನು ಮುಸ್ಲಿಂ ವಿರೋಧಿ ಮತ್ತು ಸಂಘಪರಿವಾರದ ಸಕ್ರಿಯ ಸದಸ್ಯರೆಂದು ಆದಷ್ಟು ಹೆಚ್ಚು ಬಾರಿ ಹೇಳುವ ಚಪಲ ಯಾವಾಗಲೂ ಕಾಡುತ್ತಿರುತ್ತದೆ. ಆ ಗುಲಾಮರಿಬ್ಬರ ಭೇಟಿಯನ್ನು ಬೇಗಂ, ಅಮೀರ ಇಲ್ಲದಿರವಾಗ ಮತ್ತು  ಅವನ ಆಪ್ತರ ಕಣ್ತಪ್ಪಿಸಿ ಯಾರೂ ಅಷ್ಟಾಗಿ ಗಮನಕೊಡದ ದನದ ಕೊಟ್ಟಿಗೆಯಲ್ಲಿ ಬಿಟ್ಟು ಜನಾನದಲ್ಲಿ ಮಾಡಿಸಲು ಸಾಧ್ಯವೇ? ಈ ಭೇಟಿಯ ಸಂದರ್ಭದಲ್ಲಿನ ಒಂದೆರೆಡು ಮನಕಲಕುವ ಸನ್ನಿವೇಶಗಳನ್ನು ನೋಡಿ.

(ಅ) “ಶ್ಯಾಮಲೆ(ತಬಸ್ಸುಂ) ಕೂಡ ನನ್ನ ಮಗುವಿನ ತಾಯಿ ……ಹತ್ತಿರ ಹೋಗಿ ಅವಳ ನೆತ್ತಿಯನ್ನು ಅಂಗೈಯಿಂದ  ಮುಟ್ಟಿ ಸವರುವ ಆಶೆಯಾಯಿತು. ಆದರೆ ನನ್ನನ್ನು ಭೇಟಿಯಾಗಲು ಈ ದನದ ಕೊಟ್ಟಿಗೆಗೆ ಕಳಿಸಿರುವಾಗ ನಾನು ನಪುಂಸಕನೆಂದು ಗೊತ್ತಿದ್ದರೂ ನಮ್ಮಿಬ್ಬರನ್ನು ಬೇಹುಕಾಯಲು ಯಾರನ್ನಾದರೂ ನಿಯೋಜಿಸಿದ್ದಾರೆಂದು ಜನಾನಾದ ರೀತಿ ರಿವಾಜುಗಳನ್ನು ಬಲ್ಲ ಮನಸ್ಸು ಎಚ್ಚರಿಸಿತು. ನೆತ್ತಿ ಮುಟ್ಟಿ ನೇವರಿಸಿದ ಅಪರಾಧವೇ ಸಾಕು ……. ಮರಣದಂಡನೆಯನ್ನು ವಿಧಿಸಲು(ಆವರಣ ಪುಟ ೧೩೩)

(ಆ) ಹೆಣ್ಣಾಳು ಓಡಿ ಓಡಿ ಬಂದು ‘ಅಮೀರ ಸಾಹೇಬರು ಹಿಂತಿರುಗಿದ್ದಾರೆ. ನಿನ್ನನ್ನ ಕರೀತಿದ್ದಾರೆ. ಎಲ್ಲಿ ಹೋದಳು ಎಂದರು. ಇಲ್ಲಿ ಬೇರೆಯೋರ ಕೈಲಿ ಮಾತನಾಡುಕ್ಕೆ ಬೇಗಂ ಸಾಹಿಬಾರೇ ಅವಕಾಶ ಮಾಡಿಕೊಟ್ಟರು ಅಂತ ಗೊತ್ತಾದರೆ ಪರಿಣಾಮ ನೆಟ್ಟಗಿರುಲ್ಲ ಬೇಗ ನಡಿ’ ಎಂದಳು. ಶ್ಯಾಮಲೆಯ ಮುಖ ಭಯದಿಂದ ಕಂಪಿಸಿತು … (ಪುಟ ೧೩೫ ಆವರಣ). ದನಗಳ ಕೊಟ್ಟಿಗೆಯಲ್ಲಿ ಕಂಡ ಹಸುಗಳ ಬಗ್ಗೆ ಖ್ವಾಜಾಜಹಾನ್ ಯೋಚಿಸಿದ್ದು ಕೇವಲ ಮೂರು ಸಾಲಿನಷ್ಟಿದೆ.  ಒಂದುವೇಳೆ ಈ ಮೂರು ಸಾಲುಗಳು ಇಲ್ಲದಿದ್ದರೆ , ಮುಸ್ಲಿಮರ ದನದ ಕೊಟ್ಟಿಗೆಯಲ್ಲಿದ್ದರೂ ಹುಟ್ಟಿನಿಂದ ಹಿಂದು ಆದ ಖ್ವಾಜನ ಗಮನ  ಹಸುಗಳ ಕಡೆ ಹರಿಯದೇ ಇದ್ದದ್ದು,ಅವುಗಳ ಬಗ್ಗೆ ಯೋಚಿಸದೇ ಇದ್ದದ್ದು ಆಶ್ಚರ್ಯ ಎಂದು ಇದೇ ಶಂಕರ್ ಅವರು ಟೀಕಿಸುತ್ತಿದ್ದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಬೆಂಗಳೂರಿನಿಂದ ಪ್ರಕಟವಾಗುವ tabloid(=less serious) ಮಾದರಿಯ ವಾರಪತ್ರಿಕೆಯೊಂದರಲ್ಲಿ ಪ್ರಕಟವಾದ ಆವರಣದ “ಮೌಲ್ಯಮಾಪನ” ಮಾಡಿದ್ದ ಲೇಖನದ ವಿಸ್ತೃತ ರೂಪವೇ ಈ ‘ಆವರಣ ಅನಾವರಣ’ ಎಂಬ ಪುಸ್ತಕ.Tabloid ಓದುಗರನ್ನು ಗಮನದಲ್ಲಿಟ್ಟು ಕೊಂಡು ಮಾಡಿದ ವಿಮರ್ಶೆ.

ಮುಂದಿನ ಮುಖಾಮುಖಿ : ‘ಆವರಣ’ವೆಂಬ ವಿಕೃತಿ (ಸಂಪಾದಕರು:ಗೌರಿ ಲಂಕೇಶ್)

ಚಿತ್ರ ಕೃಪೆ : https://www.facebook.com/Slbhyrappanovelist

9 ಟಿಪ್ಪಣಿಗಳು Post a comment
 1. M.A.Sriranga
  ಫೆಬ್ರ 16 2014

  ಎರಡು ತಿದ್ದುಪಡಿಗಳು —
  ೧. “…. ಪ್ರತಿಯೊಂದು ಜನಾಂಗದ ಚರಿತ್ರೆಯಲ್ಲಿಯೇ …. ” ಎಂಬುದನ್ನು “…… ಪ್ರತಿಯೊಂದು ಜನಾಂಗದ ಚರಿತ್ರೆಯಲ್ಲಿಯೂ ………. ” ಎಂದೂ ಮತ್ತು
  ೨. ಖ್ವಾಜಾ ಜಹಾನ್ ಮತ್ತು ತಬಸ್ಸುಂ (ಇಬ್ಬರೂ ………..) ಎಂಬುದನ್ನು (ಖ್ವಾಜಾ ಜಹಾನ್ ಮತ್ತು ತಬಸ್ಸುಂ ಇಬ್ಬರೂ …………) ಎಂದು ಓದಿಕೊಳ್ಳಬೇಕಾಗಿ ವಿನಂತಿ.

  ಉತ್ತರ
 2. aani
  ಫೆಬ್ರ 20 2014

  [[ಹಿಂದೂಗಳ ಆತ್ಮ ಗೌರವ ನಶಿಸಿದ್ದು….ಎನ್ನುವ ಶಬ್ದವೇ ತಮಾಷೆಯದ್ದು. ಮುಸ್ಲಿಂ ಆಡಳಿತ ಗಾರರು ಈ ದೇಶಕ್ಕೆ ಬರುವ ಮೊದಲು ನೀವು ಗುರುತಿಸುವ ಹಿಂದೂಗಳು ಆತ್ಮ ಗೌರವದೊಂದಿಗೆ ಬಾಳಿದ್ದರೆ? ಹಿಂದುಗಳೆಂದರೆ ನಿಮ್ಮ ದೃಷ್ಟಿಯಲ್ಲಿ ಬ್ರಾಹ್ಮಣರು ಮಾತ್ರವೇ? ಸಹಸ್ರಾರು ವರ್ಷಗಳ ಕಾಲ ಈ ನೆಲದ ಮಕ್ಕಳಾದ ಶೂದ್ರರು, ದಲಿತರ ಆತ್ಮ ಗೌರವ ಬ್ರಾಹ್ಮಣರ ಪಾದದಡಿಯಲ್ಲಿ ನಲುಗುತ್ತಿತ್ತು. ಹಲವು ಸಾವಿರ ವರ್ಷ ಈ ಭಾರತವನ್ನು ಪರೋಕ್ಷವಾಗಿ ಆಳಿದವರು ಬ್ರಾಹ್ಮಣರೇ. ಮುಸ್ಲಿಂ ಆಡಳಿತಗಾರರು ಬಂದಾಗ ಬ್ರಾಹ್ಮಣರ ಬುಡ ಅಲ್ಲಾಡಿತು. ದಲಿತರು, ಶೂದ್ರರು ಸಣ್ಣದೊಂದು ನಿಟ್ಟುಸಿರನ್ನು ಬಿಟ್ಟರು]]
  ಬ್ಲಾಗ ಒಂದರಲ್ಲಿ ಬಷೀರ್ ಭೈರಪ್ಪ ನವರ ಆವರಣ ಕಾದಂಬರಿಯ ವಿಮರ್ಷೆಯಲ್ಲಿ ಹೀಗೆ ಹೇಳುತ್ತಾರೆ. ಅದಕ್ಕೆ ನಾನು ಕೆಳಗಿನಂತೆ ಉತ್ತರ ನೀಡಿದೆ . ನನ್ನ ಕಮೆಂಟನ್ನು ಆ ಬ್ಲಾಗಿನವರು ಪ್ರಕಟಿಸಲಿಲ್ಲ ಕಾರಣ ಇಲ್ಲಿ ಪ್ರತಿಕ್ರಿಯಿಸಿರುವೆ.
  ಪ್ರೀತಿಯ ಬಶಿರ ಅವರೆ ನೀವು ತಿಳಿದಂತೆ ಬ್ರಾಹ್ಮಣರ ಬುಡ ಅಲ್ಲಾಡಿದಂತೆ ಭಾರತದ ಬೌದ್ಧರೂ ಹೇಳಹೆಸರಿಲ್ಲದಂತಾದರು. ಅದನ್ನು ಜಾಣತನದಿಂದ ಮರೆಸುವಿರಿ. ಇವತ್ತಿನ ಅಪಘಾನಿಸ್ತಾನ, ಪಾಕಿಸ್ತಾನ ಪೂರ್ತಿ ಬೌದ್ಧರ ನಾಡಾಗಿದ್ದವು. ಇವತ್ತು ಹೆಸರು ಹೇಳಲು ಕೂಡ ಬೌದ್ದ ಅವಶೇಷಗಳು ಅಲ್ಲಿಲ್ಲ. ಇದೆಲ್ಲ ಯಾರಿಂದ ಆಯಿತು? ಮುಸಲ್ಮಾನರು ಭಾರತಕ್ಕೆ ಬರುವ ಮೊದಲು ಈ ದೇಶದಲ್ಲಿ 25 ವಿಶ್ವವಿದ್ಯಾಲಯಗಳಿದ್ದವು ಕೆಲವು ಬೌದ್ಧ ಪ್ರಾಬಲ್ಯದವುಗಳಾಗಿದ್ದವು. ಅವನ್ನೆಲ್ಲ ಹಾಳುಗೆಡವಿದ್ದು ಯಾರು ಸ್ವಾಮಿ??? ಬೌದ್ಧರು ಕೆಳವರ್ಗದ ಶೂದ್ರರೇ ಆಗಿದ್ದರಲ್ಲ? ಅವರನ್ನೆಲ್ಲ ಈ ದೇಶ ಬಿಟ್ಟು ಓಡಿಸಿದ್ದು ಯಾರು ಸ್ವಾಮಿ? ಅಂಬೇಡ್ಕರ್ ಅವರ ಪುಸ್ತಕ ಓದಿ ತಿಳಿಯುತ್ತೆ . ಕೇವಲ 3% ಮಾತ್ರ ಇರುವ ಬ್ರಾಹ್ಮಣರು ಹೇಗೆ 97% ಜನರನ್ನು ಹಿಡಿತದಲ್ಲಿ ಇಟ್ಟುಕೊಂಡು ಆಡಳಿತ ಮಾಡಲು ಸಾಧ್ಯ್??!! ಇನ್ನು ರಾಜರುಗಳಲ್ಲಿ ಹೆಚ್ಚಿನವರು ಬೌದ್ಧರೇ ಮತ್ತು ಬೌದ್ಧ ಧರ್ಮ ಪ್ರೋತ್ಸಾಹಿಸುವವರೇ ಇದ್ದರಲ್ಲ? ಕರ್ನಾಟಕದ ಇತಿಹಾಸದಲ್ಲಂತೂ ಕೇವಲ ಕುರುಬ ಒಕ್ಕಲಿಗ ಬೇಡ ಜೈನ ಜಾತಿಯವರೇ ಆಡಳಿತ ಮಾಡಿದ್ದಾರಲ್ಲ? (ಡಾ. ಸರಜೂ ಕಾಟ್ಕರ್ ಅವರ ಶಿವಾಜಿಯ ಮೂಲ ಕನ್ನಡ ನೆಲ ಪುಸ್ತಕ ಓದಿ.) ಆದರೂ ಪರೋಕ್ಷವಾಗಿ ಬ್ರಾಹ್ಮಣರು ಹೇಗೆ ಆಳಿದರೆನ್ನುತ್ತೀರಿ? ಇದು ನಿಜವೇ ಆಗಿದ್ದರೆ ಭಾರತದ ಶೇ 90% ಜನರನ್ನು ತಾವು ಹೇಳಿದಂತೆ ಕೇಳುವಂತೆ ಪ್ರಭಾವಿಸಿದವರು ಮುಸಲ್ಮಾನರನ್ನೂ ಪ್ರಭಾವಿಸಬಹುದಿತ್ತಲ್ಲಾ? (ನಿಮ್ಮ ಅಬಭಿಪ್ರಾಯ ಹೀಗೂ ಇರಬಹುದು . ಮುಸಲ್ಮಾನರು ದಲಿತರಂತೆ ಶೂದ್ರರಂತೆ ಬ್ರಾಹ್ಮಣರ ಬಲೆಗೆ ಬೀಳಲಿಲ್ಲ ಅವರು ಚಾಣಾಕ್ಷರಾಗಿದ್ದರು. ಆದರೆ ಈಗಲೂ ನಿಮ್ಮ ಎಣೆಕೆ ತಪ್ಪೇ. ಏಕೆಂದರೆ ಭಾರತದ ದಲಿತ ಶೂದ್ರರೆ ಮತಾಂತರ ಹೊಂದಿ ಮುಸಲ್ಮಾನರಾದವರಲ್ಲವೆ? ಇನ್ನೊಂದು ರೀತಿಯಲ್ಲಿ ನೀವು ಹಾಗೆ ಭಾವಿಸುವದಾದರೆ ದಲಿತ ಮತ್ತು ಶೂದ್ರರನ್ನು ಮತಿಹೀನರೆಂದು ಹೀಯಾಳಿಸಿದಂತೆಯೂ ಆಗುತ್ತದೆ. ) ಭಾರತದ ಬೌದ್ಧ ರಾಜರನ್ನೂ ಪ್ರಭಾವಿಸಿ ಹೊರದೇಶಗಳಲ್ಲಿ ಹಿಂದೂ ಧರ್ಮವೇ ಬೆಳೆಯುವಂತೆಯೂ ಮಾಡುತ್ತಿದ್ದರಲ್ಲವೆ? ಹಾಗೇಕೆ ಮಾಡಲಿಲ್ಲ ? ಪುರಾಣಕಾಲದಲ್ಲೂ ಕೂಡ ಬ್ರಾಹ್ಮಣರು ತಮ್ಮವರೇ ಆಗಿದ್ದ ರಾವಣ, ಬಲಿ, ಹಿರಣ್ಯಾಕ್ಷ, ಹಿರಣ್ಯಕಶಿಪು, ನರಕ, ತಾರಕ, ದಕ್ಷಬ್ರಹ್ಮ ಇಂಥವರನ್ನು ಬೆಂಬಲಿಸದೇ ಆ ದುಷ್ಟರನ್ನು ಸಂಹಾರ ಮಾಡಿದವರು ಯಾವುದೇ ಜಾತಿಯವರಾಗಿರಲಿ ದೇವರೆಂದು ಪೂಜಿಸುವದು ಕಂಡು ಬರುತ್ತದಲ್ಲಾ??? (ಉದಾಹರಣೆಗೆ ಶಿವ, ರಾಮ, ವರಾಹ, ನರಸಿಂಹ, ವಾಮನ ಕೃಷ್ಣ ) ಇಂಥ ಜನಾಂಗದ ಮೇಲೆ ಇಲ್ಲದ ಗೂಬೆ ಕೂರಿಸಲು ಕಾರಣಗಳೆನು ?? ನಿಮಗೂ ರಾಜಕೀಯ ಹಿತಾಸಕ್ತಿ ಕಾರಣವಲ್ಲವೆ? ಆತ್ಮೀಯ ಬಷೀರ್ ಒಮ್ಮೆ ಪ್ರಾಂಜಲ ಮನದಿಂದ ವಸಾಹತುಶಾಹಿ ಚಿಂತನೆ ಬದಿಗಿರಿಸಿ, ಎಡಚರ ವಿಚಾರ ಬದಿಗಿರಿಸಿ, ಮುಸ್ಲೀಂ ಎಂಬ ಪೂರ್ವಾಗ್ರಹ ಭಾವನೆ ಬದಿಗಿರಿಸಿ ಭಾರತೀಯರ ಇತಿಹಾಸ ಓದಿ .ನೀವು ಕೂಡ ಮುಸ್ಲಿಂ ದಬ್ಬಾಳಿಕೆಯ ಬಲಿಪಶುಗಳೇ . ಒಂದು ಕಾಲದಲ್ಲಿ ನಿಮ್ಮ ಪೂರ್ವಿಕರು ಅಪಾರ ಯಾತನೆ ಅನುಭವಿಸಿದವರೆ . ಅವರು ಮತಾಂತರ ಹೊಂದುವಾಗ ಪಟ್ಟ ವೇದನೆ ಹಿಂಸೆ ಒಮ್ಮೆ ಸ್ಮರಿಸಿಕೊಳ್ಳಿ. ಔರಂಗಜೇಬನ, ಷಹಜಹಾನನ ಆಸ್ಥಾನ ಇತಿಹಾಸಕಾರರೇ ಬರೆದ ಪುಸ್ತಕ ಓದಿ. ಆವಾಗಲೂ ನಿಮ್ಮ ಅಭಿಪ್ರಾಯ ಬದಲಾಗದಿದ್ದರೆ ನಿಮ್ಮನ್ನು ಅಲ್ಲಾನೂ ಹಿಂದೂಗಳ ದೇವರು ಕ್ಷಮಿಸಲಿ .

  ಉತ್ತರ
  • vidya
   ಫೆಬ್ರ 21 2014

   [[ಬ್ರಾಹ್ಮಣರು ತಮ್ಮವರೇ ಆಗಿದ್ದ ರಾವಣ, ಬಲಿ, ಹಿರಣ್ಯಾಕ್ಷ, ಹಿರಣ್ಯಕಶಿಪು, ನರಕ, ತಾರಕ, ದಕ್ಷಬ್ರಹ್ಮ ಇಂಥವರನ್ನು ಬೆಂಬಲಿಸದೇ ಆ ದುಷ್ಟರನ್ನು ಸಂಹಾರ ಮಾಡಿದವರು ಯಾವುದೇ ಜಾತಿಯವರಾಗಿರಲಿ ದೇವರೆಂದು ಪೂಜಿಸುವದು ಕಂಡು ಬರುತ್ತದಲ್ಲಾ??? (ಉದಾಹರಣೆಗೆ ಶಿವ, ರಾಮ, ವರಾಹ, ನರಸಿಂಹ, ವಾಮನ ಕೃಷ್ಣ )]] ಆನಿ ಅವರೆ ನೀವು ಹೇಳಿದಂತೆ ರಾವಣ ಬಲಿ, ಹಿರಣ್ಯಾಕ್ಷ , ಹಿರಣ್ಯ ಕಶಿಪು, ದಕ್ಷ ಇವರು ಬ್ರಾಹ್ಮಣರಾಗಿದ್ದರೆಂದು ಗೊತ್ತಿದೆ. ಆದರೆ ನರಕ ತಾರಕ ಇವರು ಬ್ರಾಹ್ಮಣರೆಂದು ನನಗೆ ಗೊತ್ತಿಲ್ಲ. ಈ ವಿಚಾರ ಎಲ್ಲಿ ಹೇಳಲ್ಪಟ್ಟಿದೆ ತಿಳಿಸುವಿರಾ??

   ಉತ್ತರ
 3. ಗಿರೀಶ್
  ಫೆಬ್ರ 21 2014

  aani
  ಬಶೀರ ನಂತಹ ಎಡಚರ ಮುಖವಾಡದಲ್ಲಿರುವ ಒಸಾಮನ ಕ್ಷುದ್ರ ಸಂತತಿಗಳು ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಉತ್ಪತ್ತಿಯಾಗುತ್ತಿದ್ದಾರೆ. ಅವರು ದಲಿತರೆಂಬ ರಕ್ಷಣಾ ಕವಚ ತೊಟ್ಟುಕೊಂಡೇ ಅಖಾಡಕ್ಕೆ ಇಳಿಯುತ್ತಾರೆ.

  ಉತ್ತರ

Trackbacks & Pingbacks

 1. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬ | ನಿಲುಮೆ
 2. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭ | ನಿಲುಮೆ
 3. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮ | ನಿಲುಮೆ
 4. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯ | ನಿಲುಮೆ
 5. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments