ವಿಷಯದ ವಿವರಗಳಿಗೆ ದಾಟಿರಿ

ಮೇ 21, 2014

12

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭

‍ನಿಲುಮೆ ಮೂಲಕ

— ಮು. ಅ. ಶ್ರೀರಂಗ ಬೆಂಗಳೂರು

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧SL Bhairappa Vimarshe - Nilume

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬

 ಆವರಣ’ ಎಂಬ  ವಿ-ಕೃತಿ   ಸಂಗ್ರಹ:   ಗೌರಿ ಲಂಕೇಶ್

 (‘ನಿಲುಮೆ’ಯಲ್ಲಿ  ೧-೪-೧೪ರಂದು  ಪ್ರಕಟವಾದ  ಲೇಖನದ  ಮುಂದುವರೆದ  ಭಾಗ)
 
ಕೋ. ಚೆನ್ನಬಸಪ್ಪನವರು  (ಕೋ.ಚೆ)  ತಮ್ಮ  “ ಆವರಣ “ದಲ್ಲಿ  ಆವರಣ, ವಿಕ್ಷಿಪ್ತ  ಎಂಬ ಲೇಖನದಲ್ಲಿ (…… ವಿಕೃತಿ ಪುಟ ೪೮)  ಔರಂಗಜೇಬ ಮತ್ತು ಟಿಪ್ಪು ಸುಲ್ತಾನನ  ಆಳ್ವಿಕೆಯಲ್ಲಿನ ಕೆಲವು ಅಂಶಗಳನ್ನು  ಪಟ್ಟಿಮಾಡಿ  (ಅವುಗಳ ಅಂತರ್ಯವನ್ನು ಪೂರ್ತಿ ತಿಳಿಯುವ ಕೆಲಸಕ್ಕೆ ಕೈ ಹಾಕದೆ)  ‘ನೋಡಿ ಅವರಿಬ್ಬರೂ ಇಷ್ಟು ಒಳ್ಳೆಯ ಕೆಲಸಮಾಡಿದ್ದಾರೆ’ ಎಂದು ತೃಪ್ತಿಪಟ್ಟುಕೊಂಡಿದ್ದಾರೆ. ‘ಆವರಣ’ ಕಾದಂಬರಿ ಪ್ರಕಟವಾಗಿದ್ದು ಫೆಬ್ರವರಿ ೨೦೦೭ರಲ್ಲಿ. ಟಿಪ್ಪು ಬಗ್ಗೆ ೨೦೦೬ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ದೊಡ್ಡ ವಿವಾದವೆದ್ದು ಕರ್ನಾಟಕದ ಸಾಹಿತಿಗಳ,ಬುದ್ಧಿಜೀವಿಗಳ,ಚಿಂತಕರ ಜತೆಗೆ ಸಾಮಾನ್ಯ ಓದುಗರ ಲೇಖನ-ಪತ್ರಗಳಿಂದ ಪತ್ರಿಕೆಗಳ ಪುಟಗಳು ತುಂಬಿಹೋಗಿತ್ತು. ಆ ಸಮಯದಲ್ಲಿ ಭೈರಪ್ಪನವರು ‘ವಿಜಯಕರ್ನಾಟಕ’ ಪತ್ರಿಕೆಯಲ್ಲಿ ಸೆಪ್ಟೆಂಬರ್ ೨೪, ೨೦೦೬ರಂದು ಬರೆದ ಲೇಖನದಲ್ಲಿನ ಕೆಲವು ಅಂಶಗಳು ಕೋ.ಚೆ ಅವರಿಗೆ ಟಿಪ್ಪುವಿನ ಮೇಲೆ ಇರುವ ಪ್ರೇಮ,ಅಭಿಮಾನಕ್ಕೆ ಉತ್ತರ ನೀಡಬಲ್ಲವು ಎಂದು ಭಾವಿಸಿದ್ದೇನೆ. 
(೧) ಟಿಪ್ಪುವು ಮಕ್ಕಳನ್ನು ಯುದ್ಧಬಂಧಿಗಳಾಗಿ ಇಟ್ಟ ಕರಾರು ಯಾವುದು? ಯುದ್ಧದಲ್ಲಿ ಸೋತ ನಂತರ ಇಂತಿಷ್ಟು ಹಣವನ್ನು ಬ್ರಿಟಿಷರಿಗೆ ಕೊಡುವುದಾಗಿ ಅವನು ಒಪ್ಪಿಕೊಂಡ. ಸದ್ಯದಲ್ಲಿ ಕೈಲಿ ಹಣವಿರಲಿಲ್ಲ ……… ಒತ್ತೆ ಇಡಲು ಬೇರೇನೂ ಇರಲಿಲ್ಲ. ಟಿಪ್ಪುವಿನ ಬರೀ ಮಾತನ್ನು,ಆಣೆ  ಪ್ರಮಾಣಗಳನ್ನು ಬ್ರಿಟಿಷರು ನಂಬಿಹೋಗಬಹುದಿತ್ತೆ? ….. ಒತ್ತೆ ಇರಿಸಿಕೊಂಡ ಮಕ್ಕಳ ಯೋಗಕ್ಷೇಮವನ್ನು ಬ್ರಿಟಿಷರು ಚೆನ್ನಾಗಿಯೇ ನೋಡಿಕೊಂಡರು. 

(೨) ಟಿಪ್ಪುವನ್ನು ಕನ್ನಡದ ಕುವರನೆಂದು ಕೆಲವು ರಾಜಕಾರಣಿಗಳು ಭಾಷಣ ಮಾಡುವುದು ಹೊಸತಲ್ಲ. ಆದರೆ ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪು ಬದಲಿಸಿ ಫಾರಸಿ ಭಾಷೆಯನ್ನು ತಂದ…..  ಊರುಗಳ ಮೂಲ ಹೆಸರುಗಳನ್ನೆಲ್ಲಾ ಟಿಪ್ಪುವು ಬದಲಿಸಿದ್ದ. ಉದಾಹರಣೆಗಾಗಿ:- ಕೇರಳದ ಕಲ್ಲಿಕೋಟೆಯನ್ನು ಫರೂಕಾಬಾದ್, ಚಿತ್ರದುರ್ಗ—ಫಾರ್ರುಕ್ ಯಬ್ ಹಿಸ್ಸಾರ್ ,  ಕೊಡಗು–ಜಫರಾಬಾದ್,  ದೇವನಹಳ್ಳಿ–ಯೂಸಫಾಬಾದ್ ,  ……. ಮೈಸೂರು–ನಜರಾಬಾದ್ (ಈಗ ನಜರ್ ಬಾದ್ ಮೈಸೂರಿನ ಒಂದು ಮೊಹಲ್ಲಾ ಆಗಿದೆ)…… ಸಿರಾ– ರುಸ್ತುಮಾಬಾದ್ , ಸಕಲೇಶಪುರ–ಮಂಜ್ರಾಬಾದ್.
(೩) ಮಲಬಾರ್ ಮತ್ತು ಕೊಡಗುಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದ ಟಿಪ್ಪು ಮೈಸೂರು ಪ್ರಾಂತ್ಯದಲ್ಲಿ ಆ ದುಸ್ಸಾಹಸಕ್ಕೆ ಹೋಗಲಿಲ್ಲ. ೧೭೯೧ರಲ್ಲಿ ಮೂರನೇ ಮೈಸೂರು ಯುದ್ಧದಲ್ಲಿ ಸೋತು ಬ್ರಿಟಿಷರಿಗೆ ದೊಡ್ಡ ಮೊತ್ತದ ಸಂಪತ್ತು, ರಾಜ್ಯದ ಮುಖ್ಯ ಭಾಗಗಳನ್ನೂ ಒಪ್ಪಿಸಿ,ಮಕ್ಕಳನ್ನು ಯುದ್ಧ ಬಂಧಿಯಾಗಿ ಕೊಟ್ಟ ಮೇಲೆ ಶೃಂಗೇರಿ ಮಠಕ್ಕೆ ಕಾಣಿಕೆ ಸಲ್ಲಿಸುವ ಮೂಲಕ ಹಿಂದೂಗಳ ಅಸಮಾಧಾನವನ್ನು ಕಡಿಮೆಮಾಡಲು ಪ್ರಯತ್ನಿಸಿದುದನ್ನು ಇವತ್ತಿನ ಜಾತ್ಯಾತೀತವಾದಿಗಳು ದೊಡ್ಡದು ಮಾಡಿ ಅವನೊಬ್ಬ ಧರ್ಮ ಸಹಿಷ್ಣುವೆಂದು ಬಿಂಬಿಸುತ್ತಿದ್ದಾರೆ. ಅಫ್ಘಾನ್ ದೊರೆ ಜಿಮಾಳ್ ಶಾಹನಿಗೆ ಮತ್ತು ತುರ್ಕಿಯ ಖಲೀಫನಿಗೆ ಭಾರತದ ಮೇಲೆ ದಂಡೆತ್ತಿ ಬಂದು ಇಸ್ಲಾಂ ರಾಜ್ಯವನ್ನು ಸಂಪೂರ್ಣವಾಗಿ ಸ್ಥಾಪಿಸುವಂತೆ ಟಿಪ್ಪು ಕಾಗದ ಬರೆದಿದ್ದ. ೧೭೯೬ರಲ್ಲಿ ಮೈಸೂರಿನ ರಾಜರ ಅರಮನೆಯನ್ನು ಲೂಟಿಮಾಡಿದಾಗ ಅರಮನೆಯ ಗ್ರಂಥಾಲಯದಲ್ಲಿದ್ದ ಗ್ರಂಥಗಳು,ತಾಳೆಯೋಲೆಯ ಹಸ್ತಪ್ರತಿಗಳು ಮತ್ತು ಕಡತಗಳನ್ನು ಕುದುರೆಗಳಿಗೆ ಹುರುಳಿ ಬೇಯಿಸಲು ಇಂಧನವಾಗಿ ಉಪಯೋಗಿಸುವಂತೆ ಅಪ್ಪಣೆ ಮಾಡಿದ. 
(೪) ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು ,ತಮಿಳುನಾಡಿನ ಮುಸ್ಲಿಮರು  ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ,ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ  ಉರ್ದು ಮಾತನಾಡುವುದು, ಕನ್ನಡದಲ್ಲಿ ಓದಿ ಬರೆಯದೆ ಇರುವುದು, ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ದತಿಯಿಂದ. (ವಿವರಗಳಿಗೆ ನೋಡಿ:-ಸಂದರ್ಭ-ಸಂವಾದ, ಪುಟ ೨೯೩–೩೦೦ ,  ೨೦೧೧)
(೫) ಟಿಪ್ಪುವಿನ ಕತ್ತಿಯ ಮೇಲೆ ಅವನು ಕೆತ್ತಿಸಿರುವುದು ‘ನನ್ನ ಈ ವಿಜಯದ ಕತ್ತಿ ಕಾಫೀರರ (ಮುಸ್ಲಿಮೇತರರ) ನಾಶಕ್ಕಾಗಿ ಹೋರಾಡುತ್ತಿದೆ’. ದೇವಾಲಯವನ್ನು ಕೆಡವಿ ಟಿಪ್ಪುಕಟ್ಟಿಸಿರುವ  ಶ್ರೀರಂಗಪಟ್ಟಣದ   ಮಸೀದಿಯಲ್ಲಿನ ಪರ್ಷಿಯನ್ ಶಾಸನದ ಮೊದಲ ವಾಕ್ಯ, ‘ಕಾಫೀರರ ವಿರುದ್ಧ ಪ್ರವಾದಿ ಪೈಗಂಬರರಂತೆಯೇ ಹೋರಾಡಲು ನೀವೂ ಸಿದ್ಧರಾಗಿ’……..  (ಡಾ. ಎಂ ಚಿದಾನಂದಮೂರ್ತಿ , ಪುಟ ೨೬೮, ಸಂದರ್ಭ:ಸಂವಾದ   ೨೦೧೧)
ಕೋ. ಚೆ. ಅವರು ತಮ್ಮ ಲೇಖನದಲ್ಲಿ ಔರಂಗಜೇಬ ಮತ್ತು ಟಿಪ್ಪು ಹಿಂದೂಗಳನ್ನು ಬಲಾತ್ಕಾರವಾಗಿ ಮತಾಂತರ ಮಾಡಿದರು; ಕುಲಗೆಡಿಸಿದರು ಎಂದು ‘ಆವರಣ’ದ ಕಥೆಯಲ್ಲಿ ಭೈರಪ್ಪನವರು ಹೆಣೆದಿದ್ದಾರೆ. ಅವರನ್ನು ಬಲಾತ್ಕಾರವಾಗಿ ಮತಾಂತರಮಾಡಿದರೋ ಅಥವಾ ಹಿಂದೂ ಚಾತುರ್ವಣ ಪದ್ಧತಿಯಲ್ಲಿ ಪಂಚಮರಾಗಿದ್ದ ತಾರತಮ್ಯಕ್ಕೋ,ತುಳಿತಕ್ಕೋ,ಅನಾದರಕ್ಕೆ ಗುರಿಯಾಗಿದ್ದ ನತದೃಷ್ಟರು ಅದರಿಂದ ಬೇಸತ್ತು ತಾವಾಗಿಯೇ ಇಸ್ಲಾಂ ಧರ್ಮವನ್ನು ಅಂಗೀಕರಿಸಿದರೋ ಎಂಬುದನ್ನು ಸ್ವಾಮಿ ವಿವೇಕಾನಂದರು ತಮ್ಮ ಸಿಡಿಲವಾಣಿಯಿಂದ ಗರ್ಜಿಸಿದ್ದಾರೆ. ವಿವರಗಳಿಗೆ  ತಾವೇ ಸಂಪಾದಿಸಿರುವ ‘ಶ್ರೀ ವಿವೇಕಾನಂದರು ಸನಾತನವಾದಿಯೇ’ ಪುಸ್ತಕ ನೋಡಿ ಎಂದಿದ್ದಾರೆ. ಆದರೆ ಕೋ.ಚೆ. ಅವರು ಮತಾಂತರದ ಬಗ್ಗೆ ವಿವೇಕಾನಂದರು ಏನು ಹೇಳಿದ್ದಾರೆ ಎಂದು ಸಂಕ್ಷಿಪ್ತವಾಗಿಯಾದರೂ ಹೇಳಿಲ್ಲ. ತಮ್ಮ ವಾದಕ್ಕೆ ಒಂದು ಪುಸ್ತಕದ ಹೆಸರು ಹೇಳಿದಾಗ  ಪೂರಕವಾಗಿ ಅದರಲ್ಲಿನ  ನಾಲ್ಕಾರು ವಾಕ್ಯಗಳನ್ನು ಉಲ್ಲೇಖಿಸಬೇಕಾದ್ದು ವಿಮರ್ಶಕರ ಕರ್ತ್ಯವ್ಯ.. ಕೋ.ಚೆ. ಅವರು ಔರಂಗಜೇಬ ಮತ್ತು ಟಿಪ್ಪುವಿನ ಪರ ವಾದಿಸುವ ಭರದಲ್ಲಿ ಭೈರಪ್ಪನವರು ‘ಆವರಣ’ಕಾದಂಬರಿಯಲ್ಲೇ ಅನುಬಂಧವಾಗಿ ಕೊಟ್ಟಿರುವ ಸ್ವಾಮಿ ವಿವೇಕಾನಂದರ ಭಾಷಣದ ಇಂಗ್ಲಿಷ್ ಮತ್ತು ಅದರ ಕನ್ನಡಾನುವಾದವನ್ನು ಗಮನಿಸಿಲ್ಲ ಎಂದು ಕಾಣುತ್ತದೆ. ‘……… ಪ್ರವಾದಿ ಮೊಹಮ್ಮದರು ಕೆಲವು ಬೆರಗು ಗೊಳಿಸುವ ಸತ್ಯಗಳನ್ನು ನುಡಿದಿದ್ದಾರೆ. ನೀವು ಕೊರಾನನ್ನು ಓದಿದರೆ ಅತ್ಯಂತ ಬೆರಗುಗೊಳಿಸುವ ಸತ್ಯಗಳು  ಮೌಢ್ಯಗಳೊಡನೆ  ಬೆರೆತಿರುವುದನ್ನು ಕಾಣಬಹುದು. ಅದನ್ನು ಹೇಗೆ ವಿವರಿಸುತ್ತೀರಿ. …….. ಮಹಮ್ಮದರು ಪ್ರಪಂಚಕ್ಕೆ ಮಾಡಿದ ಒಳ್ಳೆಯದರ ಜೊತೆಗೆ ಅವರ  ಮತಾಂಧತೆಯಿಂದ  ಪ್ರಪಂಚಕ್ಕೆ ಆದ ಮಹಾ ಕೆಡುಕನ್ನು ಆಲೋಚಿಸಿ ! ಅವರ ಭೋದನೆಯ ಪರಿಣಾಮವಾಗಿ ಕಗ್ಗೊಲೆಯಾದ ಲಕ್ಷ ಲಕ್ಷಾಂತರ ಜನರನ್ನು,ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು, ಅನಾಥರಾದ ಮಕ್ಕಳನ್ನು, ಇಡಿ ಇಡಿಯಾಗಿ ನಾಶವಾದ ದೇಶಗಳನ್ನು, ಸಾಮೂಹಿಕವಾಗಿ ಕೊಲೆಯಾದ ದಶ,ದಶಾಂತರ ಲಕ್ಷ ಮಾನವ ಜೀವಿಗಳನ್ನು ಆಲೋಚಿಸಿ !……’
(‘ಆವರಣ ,ಪುಟ ೨೭೪–೨೭೫, ೨೦೦೭). ಇನ್ನುಳಿದಂತೆ ಕೋ.ಚೆ. ಅವರ ಲೇಖನ ಕೇವಲ ಕಥಾಕಾಲಕ್ಷೇಪದಂತಿದೆ. ವಿಶೇಷವೇನಿಲ್ಲ. 
ಎಚ್. ಪಟ್ಟಾಭಿರಾಮಸೋಮಯಾಜಿ ಅವರ ‘ಫ್ಯಾಸಿಸ್ಟ್ ಆವರಣ’ ಲೇಖನ ಭೈರಪ್ಪನವರನ್ನು ಕೀಳುಮಟ್ಟದಲ್ಲಿ ನಿಂದಿಸುವುದು ಮತ್ತು ‘ಆವರಣ’ದ ಮುನ್ನುಡಿಯಲ್ಲಿ ಭೈರಪ್ಪನವರು ಪ್ರಸ್ತಾಪಿಸಿರುವ ವಿಷಯಗಳಲ್ಲಿನ ಕೆಲವು ಪದಗಳು ಮತ್ತು ವಾಕ್ಯಗಳನ್ನು ತೆಗೆದುಕೊಂಡು ಅವುಗಳ permutation ಮತ್ತು combination ಮಾಡುತ್ತಾ ‘ಆವರಣ’ವನ್ನು ಅಶ್ಲೀಲ ಕಾದಂಬರಿ ಎಂದು ತೀರ್ಮಾನಿಸುವ ಕಸರತ್ತಿನಲ್ಲಿ ತನ್ನನ್ನು ತೊಡಗಿಸಿಕೊಂಡು ತೃಪ್ತಿಪಟ್ಟುಕೊಂಡಿದೆ  .ಜತೆಗೆ ‘ಆವರಣ’ ಒಂದೇ ತಿಂಗಳಲ್ಲಿ ನಾಲ್ಕಾರು ಮುದ್ರಣಗಳನ್ನು ಕಂಡಿರುವುದಕ್ಕೆ ಕಾರಣ  ‘……. ಸಂಘ ಪರಿವಾರದ ಜನ ಪುಸ್ತಕವನ್ನು ಬಿಸಿ ದೋಸೆಗಳಂತೆಕೊಂಡು ತಿನ್ನುತ್ತಿದ್ದಾರೆ …… ‘ .(……. ವಿ-ಕೃತಿ ಪುಟ ೬೨)  ಎಂದಿದ್ದಾರೆ . ಈ ರೀತಿ  ಟೀಕಿಸಿರುವವರಲ್ಲಿ  ಸೋಮಯಾಜಿಯವರು ಮೊದಲನೆಯವರೇನಲ್ಲ. ಅವರಿಗೂ ಮುಂಚೆ ಸಾಕಷ್ಟು ಜನ ಈ ಮಾತನ್ನು ಹೇಳಿಯಾಗಿದೆ. ಸೋಮಯಾಜಿ ಮತ್ತು ಅವರಂತಹ ಹಲವು ಪ್ರಗತಿಪರರ  ಈ ಮಾತಿನ ಹಿನ್ನೆಲೆಗೆ ಇರುವ  ಕಾರಣ ‘ಆವರಣ’ದಲ್ಲಿ ಇಸ್ಲಾಂ,ಮುಸ್ಲಿಮರು ಮತ್ತು ಮುಸ್ಲಿಂ ರಾಜರುಗಳ ಚಿತ್ರಣ “ಸರಿಯಾಗಿ”ಮೂಡಿ ಬಂದಿಲ್ಲ ಎಂಬ ಆಕ್ರೋಶ.  ಇತಿಹಾಸವನ್ನು ಪ್ರಗತಿಪರು ಮತ್ತು ಜಾತ್ಯಾತೀತವಾದಿಗಳು ಮೆಚ್ಚುವಂತೆ ಯಾವ ರೀತಿ “ಸರಿಯಾಗಿ” ಚಿತ್ರಿಸಬಹುದುದು /ಚಿತ್ರಿಸಬೇಕು  ಎಂಬ ಬಗ್ಗೆ ‘ಆವರಣ ‘ ಕಾದಂಬರಿಯನ್ನು ಕುರಿತು  ಬಂದಿರುವ  ವಿಮರ್ಶೆಗಳ ಮುಖಾಮುಖಿಯ ಪ್ರಾರಂಭದಲ್ಲಿ ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಅಜಕ್ಕಳ ಗಿರೀಶ ಭಟ್ ಅವರ ‘ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ’ (೨೦೦೭)  ಕೃತಿಯಲ್ಲಿನ ಈ ಉಲ್ಲೇಖಗಳನ್ನೂ  ಗಮನಿಸಬಹುದು. 
(ಅ) ಸಂಘ ಪರಿವಾರದ ಉಗ್ರ ಟೀಕಾಕಾರರಾದ  ಕಾಂಚ ಐಲಯ್ಯ ಅವರು ೨೦೦೭ ಆಗಸ್ಟ್ ೨೨ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬರೆದ ‘ದ ಟನ್ನೆಲ್ಡ್ ಮೈಂಡ್ ಸೆಟ್’ಎಂಬ ಲೇಖನದ ಈ ಸಾಲುಗಳನ್ನು ಗಮನಿಸಿ ‘ The Muslim civil society did not produce intellectuals who could negotiate between religious fundamentalism and religious rationalism from within Islam. Their political formations have no intellectual inputs that are needed for any party operating within the realm of democracy. There is a total tunneled mindset among them,which is not allowing them to negotiate with reason while keeping their spiritual belief intact………Islam as of now has not developed an internal discourse of human rights…..Islam’s problem is its intellectual failure to negotiate between faith,reason and the scientific criticism……..’ ಇದು ಭೈರಪ್ಪನವರು ಹೇಳಿದುದಕ್ಕಿಂತ ಭಿನ್ನವಾಗಿದೆಯೇ ? ( ಪುಟ ೭೮)
(ಬ) ಹನ್ನೊಂದನೇ ಶತಮಾನದಲ್ಲಿ ಘಜನಿ ಘಜನಿ ಮಹಮ್ಮದ್ ನು ಭಾರತದಲ್ಲಿ ಭಾರತದಲ್ಲಿ ಮಾಡಿದ ವಿನಾಶದ ಬಗ್ಗೆ ಅವನ ಜೊತೆಗೇ ಭಾರತಕ್ಕೆ ಬಂದಿದ್ದ ಅಲ್ ಬೆರೂನಿ ವಿವರಿಸಿದ್ದಾನೆ. ಮಧ್ಯಕಾಲದ ಮುಸ್ಲಿಂ ಚರಿತ್ರಕಾರರ ಎಲ್ಲ ಮಾತುಗಳನ್ನೂ ನಂಬಬಾರದು; ಅವರನ್ನು ಹೆಚ್ಚು ನಂಬುವವರು ಹಿಂದೂ ಕೋಮುವಾದಿ ಚರಿತ್ರಕಾರರು ಎಂಬೆಲ್ಲ ವಾದಗಳಿವೆ. ಹಾಗಿದ್ದರೂ ಅಲ್ ಬೆರೂನಿಯನ್ನು ನಂಬದಿರಲು ಸಾದ್ಯವಿಲ್ಲ. ಆತನನ್ನು ಮತಾಂಧನೆಂದಾಗಲೀ ಪಕ್ಷಪಾತಿಯೆಂದಾಗಲೀ ಅಮರ್ತ್ಯಸೇನ್ ಕೂಡ ಪರಿಗಣಿಸುವುದಿಲ್ಲ. ಆದ್ದರಿಂದಲೇ ಅವರು ಅಲ್ ಬೆರೂನಿಯ ಈ ಮಾತುಗಳನ್ನು ಉದ್ಧರಿಸುತ್ತಾರೆ. ‘ಮಹಮ್ಮದ್ ಭಾರತದ ಸಮೃದ್ಧಿಯನ್ನು ಸಂಪೂರ್ಣವಾಗಿ ನಾಶಮಾಡಿದ. ಅವನು ದೇಶದಲ್ಲಿ ಕೈಗೊಂಡ ವಿನಾಶಕಾರಿ ಕ್ರಮಗಳಿಂದಾಗಿ ಹಿಂದುಗಳು ಧೂಳಿನ ಕಣಗಳಂತೆ ಎಲ್ಲಾ ದಿಕ್ಕುಗಳಲ್ಲೂ ಚದುರಿಹೋದರು. ಮಹಮ್ಮದ್ ನ ಈ ವಿನಾಶಕಾರೀ ನಡೆಗಳಿಂದಾಗಿಯೇ ಹಿಂದೂಗಳು ಮುಸ್ಲಿಮರ ಬಗ್ಗೆ ತಿರಸ್ಕಾರ ಭಾವನೆಯನ್ನು ಹೊಂದುವಂತಾಯಿತು ………'(ಅದೇ ಪುಟ ೧೦೫)
(ಕ) ಅಂಬೇಡ್ಕರ್ ಅವರು, ಪಾಕಿಸ್ತಾನದ ಸೃಷ್ಟಿಗಾಗಿ ಇದ್ದ ಬೇಡಿಕೆಯ ಕುರಿತು ‘ಏಕತೆಯ ಭಂಗ’ ಎಂಬ ಲೇಖನದಲ್ಲಿ, ಕ್ರಿ.ಶ. ೭೧೧ರಿಂದ ಭಾರತದ ಮೇಲೆ ಅರಬರು,ಟಾರ್ಟರರು, ಮೊಗಲರು,ಅಫ್ಘನರು ಹೀಗೆ ಬೇರೆ ಬೇರೆ ಕಡೆಯ ಆಕ್ರಮಣಕಾರರು ದಾಳಿ ಮಾಡಿದ ಬಗ್ಗೆ ಆಧಾರಗಳ ಸಹಿತ ವಿವರಿಸಿದ್ದಾರೆ. ಕೇವಲ ಕೊಳ್ಳೆ ಹೊಡೆಯುವ ಅಥವಾ ಜಯಗಳಿಸುವ ಲೋಭದಿಂದಲೇ ಈ ಮುಸಲ್ಮಾನ ಧಾಳಿಗಳು ನಡೆಯಲಿಲ್ಲ; ಭಾರತದಲ್ಲಿ ಇಸ್ಲಾಂ ಅನ್ನು ಸ್ಥಾಪಿಸುವುದೂ ಕೂಡಾ ಈ ದಂಡಯಾತ್ರೆಯ ಉದ್ದೇಶಗಳಲ್ಲೊಂದಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ ಎನ್ನುತ್ತಾ ಘಜನಿ ಮಹಮ್ಮದನ ಕಾಲದ ಕೆಲವು ಆಧಾರಗಳನ್ನು ನೀಡಿದ್ದಾರೆ.  (ಅದೇ ಪುಟ  ೧೦೫)
 
ಕೆ. ಫಣಿರಾಜ್ ಅವರ ‘ದೇಶವನ್ನು ಸುಡುವುದು ಕೋಶವನ್ನು ಬಿಡುವುದೇ? ಎಂಬ ಲೇಖನ (…… ವಿಕೃತಿ ಪುಟ ೬೬) ಈಗಾಗಲೇ ಫಣಿರಾಜರ ಚಿಂತನೆಯ,ಆಲೋಚನೆಯ ಮಾದರಿಗಳನ್ನು ಓದಿದವರಿಗೆ ತಿಳಿದಿರುವಂತಹುದೆ. ಇವರು ತಮ್ಮ ವಾದಕ್ಕೆ ತಕ್ಕಂತೆ ಏನನ್ನು ಬೇಕಾದರೂ ‘ಪ್ರಗತಿಪರ’,ಮಾನವೀಯತೆ’,’ಸತ್ಯದರ್ಶನ ‘ ಎಂದು ಸಮರ್ಥವಾಗಿ ಸಾಧಿಸಿ ತೋರಿಸಿಬಿಡುವ ಪಾಂಡಿತ್ಯಪೂರ್ಣರು. ‘ಆವರಣ’ವನ್ನು ಟೀಕಿಸುವುದಕ್ಕೆ ಅವರು ಉದಾಹರಣೆಯಾಗಿ ತೆಗೆದುಕೊಂಡಿರುವುದು ‘ಆರ್ಷೇಯ ಬ್ರಾಹ್ಮಣ’ಪರಂಪರೆ ಮತ್ತು ‘ವರ್ಣಾಶ್ರಮ’,ಕುಲಧರ್ಮಗಳನ್ನು ಒಂಚೂರೂ ಉಲ್ಲಂಘಿಸದೇ ಬದುಕಿದ, ೨೦೦೧ರಲ್ಲಿ ನಿಧನರಾದ ರಾಣಿ ನರಸಿಂಹ ಶಾಸ್ತ್ರಿಗಳ ಜೀವನ ಚರಿತ್ರೆಯನ್ನು. (ಮೂಲ ತೆಲುಗು ಕೃತಿ -‘ರಾಣಿ ಶಿವ ಶಂಕರ ಶರ್ಮ ,ಇಂಗ್ಲಿಷ್ ಭಾಷಾಂತರ The Last Brahmin by ಡಿ. ವೆಂಕಟರಾವ್  ೨೦೧೨) . ಈ ಆತ್ಮಕಥಾನಕದ ಆಯ್ದ ಭಾಗಗಳ ಅನುವಾದವನ್ನು ಹೆಗ್ಗೋಡಿನ ಅಕ್ಷರ ಪ್ರಕಾಶನದವರು ೨೦೦೬ರಲ್ಲಿ ಪ್ರಕಟಿಸಿದ್ದಾರೆ. ಫಣಿರಾಜರು ಈ ಕೃತಿಯ ಬಗ್ಗೆ ಹೇಳುತ್ತಾ ‘ಶಾಸ್ತ್ರಿಗಳ ಬದುಕನ್ನೂ,ಅವರ ಜೀವನ ಚರಿತ್ರೆ ಬರೆದ ಅವರ ಮಗ ಶಿವಶಂಕರಶರ್ಮ ಅವರು ತಮ್ಮ ತಂದೆಯವರ ಬದುಕನ್ನು ಅರಿಯುವ ಬಗೆಯನ್ನೂ ನಾವು ಒಪ್ಪಿಕೊಳ್ಳದಿದ್ದರೂ ಬರವಣಿಗೆ ನಮ್ಮನ್ನು ಕಚ್ಚಿ ಹಿಡಿದು ಬಿಡುತ್ತದೆ; ನಮ್ಮ ವೈಚಾರಿಕ ನಂಬಿಕೆಗಳನ್ನು ಕೆದಕಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತದೆ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಇಲ್ಲಿ ಫಣಿರಾಜರಿಗೆ ‘ಆವರಣ’ವನ್ನು ಹಣಿಯಲು ಅವರು ಸದಾ ಟೀಕಿಸುವ ಮೂಲಭೂತವಾದಿ,ಅವೈಚಾರಿಕ,ಮೂಢನಂಬಿಕೆಗಳ ಆಗರವಾದ ಬ್ರಾಹ್ಮಣ ಧರ್ಮದ ವಕ್ತಾರರೊಬ್ಬರ ಜೀವನ ಚರಿತ್ರೆಯ ಆಶ್ರಯ ಬೇಕಾಗುತ್ತದೆ!. ಆ ಬ್ರಾಹ್ಮಣಧರ್ಮದ ಮೌಲ್ಯಗಳನ್ನು ಒಪ್ಪಲಾಗದಿದ್ದರೂ “ಅಂದದ ಬರವಣಿಗೆಗೆ” ಮಾರು ಹೋಗುತ್ತಾರೆ. ಆದರೆ ಅಂತಹ ಯಾವುದೇ ಸುಂದರ ಚೌಕಟ್ಟಿಲ್ಲದೆ ‘ಆವರಣ’ದಲ್ಲಿರುವ  ಮುಸ್ಲಿಂ,ಬ್ರಾಹ್ಮಣ,ಒಕ್ಕಲಿಗರ (ಗೌಡರು) ಇಂದಿನ ಮತ್ತು ಹಿಂದಿನ ಜೀವನ ಚಿತ್ರಣಗಳು ಫಣಿರಾಜರಿಗೆ  “ಹಿಂದುತ್ವವಾದಿ ವಿಚಾರಕ್ರಮಕ್ಕೆ ಮಕ್ಕಿಕಾಮಕ್ಕಿ ನಿಷ್ಠೆ ,ಈ ವಿಚಾರಕ್ರಮವನ್ನು ಒಪ್ಪಿಕೊಳ್ಳದವರ ಬಗ್ಗೆ ತೀವ್ರ ಅಸಹನೆ,ಎರಡನೇ ದರ್ಜೆಯ ಹೀಯಾಳಿಕೆಗಳ ಮೂಲಕ ಅಸಹನೆಯ ಅಭಿವ್ಯಕ್ತಿ,ಕೆರೆದರೆ ಉದುರಿಬೀಳುವಂತಹ ‘ಸ್ವಸಂಸ್ಕೃತಿ’ಯ ಅಭಿಮಾನದ ಸೋಗು, ………. ” ಅನಿಸುತ್ತದೆ. (…ವಿಕೃತಿ  ಪುಟ ೬೬). ಫಣಿರಾಜರ ಈ ಲೇಖನದ ಉಳಿದ ಭಾಗಗಳಿಗೆ ಈಗಾಗಲೇ ಕೊಟ್ಟಿರುವ ಸಾಕಷ್ಟು ಉಲ್ಲೇಖಗಳು ಉತ್ತರ ನೀಡುತ್ತವೆ. ಅದರ ಜತೆಗೆ ಇನ್ನೆರೆಡು ಉಲ್ಲೇಖಗಳನ್ನೂ ಗಮನಿಸಬಹುದು.
(೧) ನಂಬಿಕೆ ಮತ್ತು ವೈಚಾರಿಕತೆ ಇವೆರೆಡು ಯಾವಾಗಾಲೂ ಒಂದನ್ನೊಂದು ಎದುರಿಸಿ ಮೇಲೆ ಬರಬೇಕಾಗುತ್ತದೆ. ಇವೆರಡರ ಮುಖಾಮುಖಿಯು ಸಮುದಾಯಗಳ ಅಥವಾ ಧರ್ಮದ ಒಳಗಡೆ ಹೇಗೆ ನಡೆಯುತ್ತದೆ ಎಂಬುದೇ ಆಯಾ ಸಮುದಾಯಗಳ ಅಥವಾ ಧರ್ಮಗಳ ಸ್ವಾಸ್ಥ್ಯವನ್ನು ನಿರ್ಧರಿಸುತ್ತದೆ. ಇಸ್ಲಾಂನಲ್ಲಿ ಯಾವ ರೀತಿಯ ವೈಚಾರಿಕ ಸ್ವಾತಂತ್ರ್ಯವಿದೆ ಎಂಬುದನ್ನು ತಿಳಿಯಲು, ಮುಸ್ಲಿಂ ಬುದ್ಧಿಜೀವಿ ಎಂದೇ ಹೆಸರಾದ ಜಿಯಾವುದ್ದೀನ್ ಸರ್ದಾರ್ ಅವರ ಮಾತುಗಳನ್ನು ಒಮ್ಮೆ ನೋಡೋಣ. Islam gives full freedom of rational and intellectual enquiry within the circumference of its norms and values.(ಇಸ್ಲಾಂನಲ್ಲಿ ಸಂಪೂರ್ಣ ವೈಚಾರಿಕ ಮತ್ತು ಬೌದ್ಧಿಕ ಸ್ವಾತಂತ್ರ್ಯ ಇದೆ ;ಆದರೆ  ಧರ್ಮದ ಪರಿಧಿಯ ಒಳಗೆ ).  (ಅಜಕ್ಕಳ ಗಿರೀಶ ಭಟ್ ಅವರ “ಬುದ್ಧಿಜೀವಿ ……… ‘ಕೃತಿ  ಪುಟ ೭೮)
(೨) ಪ್ರದೀಪ್ ಕುಮಾರ್ ಪರೀದ ಎಂಬ ಇನ್ನೊಬ್ಬ ವಿದ್ವಾಂಸರ ಅಭಿಪ್ರಾಯ–‘ಹಿಂದೂ ಬುದ್ಧಿಜೀವಿಗಳು (intellectuals) ಮುಸ್ಲಿಂ ಬುದ್ಧಿಜೀವಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೂಲಭೂತವಾದಿ ಸಂಘಟನೆಗಳ ಮೇಲೆ ವಾಗ್ದಾಳಿ ಮಾಡುತ್ತಾರೆ. ಮುಸ್ಲಿಂ ಬುದ್ಧಿಜೀವಿಗಳು ಯಾವುದೋ ಕಾರಣಕ್ಕೆ ಸುಮ್ಮನೆ (dormant) ಇದ್ದು ಬಿಡುತ್ತಾರೆ.(ಅದೇ ಪುಟ ೭೯). 
ಈ ವಿಷಯಗಳು ಫಣಿರಾಜರಿಗೆ ಗೊತ್ತಿರುವಂತಹುದೇ. ಆದರೆ ಸರಕಾರೀ ಪ್ರಾಯೋಜತ್ವಕದ ಪರಿಭಾಷೆಗಳಾದ ‘ಅಲ್ಪ ಸಂಖ್ಯಾತ’ ಮತ್ತು ‘ಬಹು ಸಂಖ್ಯಾತ’ಎಂಬ ಎರಡು ನೆಲೆಗಳಿಂದ ಅವರು ಚಿಂತನೆ ನಡೆಸುತ್ತಿರುವುದರಿಂದ ಸ್ವಲ್ಪ ಗೊಂದಲದಲ್ಲಿದ್ದಾರೆಂದು ಕಾಣಿಸುತ್ತದೆ. 
 
‘ಆವರಣದೊಳಗೆ ಸಿಕ್ಕಿಕೊಂಡ ಜಾಣೆ’ ಎಂಬ ಶೀರ್ಷಿಕೆಯ  ಲೇಖನ ಬರೆದಿರುವ ಬಾಗೇಶ್ರೀ ಅವರು ‘ ಈ ಕಾದಂಬರಿಯ ಬಗ್ಗೆ ‘ಏನು ಬರೆಯಬೇಕು,ಹೇಗೆ ಬರೆಯಬೇಕು ಎನ್ನುವುದರ ಬಗ್ಗೆಯೇ ನನಗೆ ಗೊಂದಲ ……….. ಕೆಲವು ಪತ್ರಿಕೆಗಳಲ್ಲಂತೂ ವಿಮರ್ಶೆಗಳು ಧಾರಾವಾಹಿಯಂತೆ ಇನ್ನೂ ಬರುತ್ತಲೇ ಇವೆ. ಒಂದರ್ಥದಲ್ಲಿ ಹೊಸದೇನೂ ಹೇಳುವುದಕ್ಕೆ ಉಳಿದಿಲ್ಲ ‘ಎಂಬ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಪ್ರಾರಂಭದಲ್ಲೇ ಹೇಳಿಬಿಟ್ಟಿದ್ದಾರೆ. (…… ವಿಕೃತಿ ಪುಟ ೫೩) ಆದರೂ ಕೋಮುದ್ವೇಷ ,ಸಂಘಪರಿವಾರ,ಸ್ತ್ರೀವಾದ ……….. ಇವುಗಳನ್ನು ಜತೆಗೆ ಸಾದ್ವಿರಿತಾಂಬರ, ಉಮಾಭಾರತಿ ಅವರುಗಳನ್ನು ಆಗಾಗ ಪ್ರಸ್ತಾಪಿಸಿದ್ದಾರೆ. ಜತೆಗೆ ‘ಆವರಣ’ದ ನಾಯಕಿ ರಜಿಯಾ(ಲಕ್ಷ್ಮಿ)ಯ ಪಾತ್ರದ ಕಿರು ಪರಿಚಯವನ್ನು ಮಾಡಿ ತಮ್ಮ ಕೆಲಸ ಪೂರೈಸಿದ್ದಾರೆ. ಬಾಗೇಶ್ರೀ ಅವರ ಈ ಲೇಖನದ ಬಗ್ಗೆ  ಚರ್ಚಿಸುವ ಅಂಶಗಳು ಏನೂ ಇಲ್ಲ. 
 
ಜಿ. ಕೆ. ಗೋವಿಂದರಾವ್ (ಜಿಕೆಜಿ) ಅವರ “ಸ್ವಯಂ ನಿರ್ಮಿತ ‘ಆವರಣ’ದೊಳಗೆ ಜೀವಾವಧಿ ಬಂಧಿ ಭೈರಪ್ಪ”  ಲೇಖನದ ಕೆಲವು ಮುಖ್ಯಾಂಶಗಳು ಹೀಗಿವೆ.
(೧) ಇತಿಹಾಸದ ಪುಟಗಳಿಂದ ಭೈರಪ್ಪನವರು ಆಯ್ದು ಶೇಖರಿಸಿದ ಮಾಹಿತಿಗಳು ‘ಸತ್ಯ’ಗಳಲ್ಲ. ಅವು ಕೇವಲ ‘ವಾಸ್ತವಾಂಶಗಳು’  ‘ಫ್ಯಾಕ್ಟ್(fact) ಅಷ್ಟೆ. ವಾಸ್ತವ ಎಂಬುದು ಸತ್ಯವಲ್ಲ. 
(೨) ಸತ್ಯವೆಂಬುದು ಅಹಿಂಸಾಧರ್ಮದ ಇನ್ನೊಂದು ಮುಖ …….. ಹಾಗೆಂದ ಮಾತ್ರಕ್ಕೆ ನಡೆದು ಬಂದ ದಾರಿ,ಪರಂಪರೆ , ಇತಿಹಾಸ ನಮೂದಿಸುವ ಘಟನೆಗಳು ಇವು ಪ್ರಸ್ತುತಗಳಲ್ಲವೆಂದಲ್ಲ (=ಪ್ರಸ್ತುತವೆ ). ಅವೆಲ್ಲವೂ ನಾವು ಉಸಿರಾಡುವ ಗಾಳಿಯ ಭಾಗವೇ ಆಗಿರುತ್ತದೆ. ಆದರೆ ಇವು ಯಾವುವೂ ಸತ್ಯಗಳಲ್ಲ. 
(೩) ಇತಿಹಾಸದಲ್ಲಿ ಕೆಲವು ಘಟನೆಗಳು ಜರುಗಿಹೊಗುತ್ತವೆ. ಶೈವರು,ವೈಷ್ಣವರು ಇಬ್ಬರೂ ಸೇರಿ ಬೌದ್ಧ,ಜೈನರ ಮಂದಿರಗಳು, ವಿಹಾರಗಳು,ಬಸದಿಗಳನ್ನು ನಾಶಮಾಡಿರಬಹುದಾದರೆ ಹೊರಗಿನಿಂದ ಬಂದ ಧರ್ಮ ಪ್ರಸಾರವೇ ಪ್ರಧಾನಗುರಿಯಾಗಿರುವ ಶಕ್ತಿಗಳನ್ನು (=ಮೊಘಲರು) ಬೇರೆ ರೀತಿ ನಡೆದುಕೊಳ್ಳಲು ಬಯಸುವುದು ಎಷ್ಟು ಸರಿ?. ಧರ್ಮಾಂಧತೆಯೊಂದೇ ಅವರನ್ನು ಉತ್ತೇಜಿಸುವ,ಕುಮ್ಮಕ್ಕು ನೀಡುವ ಚಾಲನಶಕ್ತಿಯಾಗಿರುವಾಗ ಜೊತೆಗೆ ಅಧಿಕಾರ,ತೋಳುಬಲವೂ ಇರುವಾಗ ಸ್ಥಳಿಯರಿಗಿಂತ ಹೆಚ್ಚುಪಟ್ಟು ಅನಾಹುತಗಳನ್ನು ಮಾಡಿಯೇಮಾಡುತ್ತಾರೆ. ಇತಿಹಾಸ ತಿಳಿದ ಯಾವನೇ ಸಾಮಾನ್ಯನಿಗೂ ಈ ವಿಷಯ ಅರ್ಥವಾಗುತ್ತದೆ. ಭೈರಪ್ಪನವರಂಥ ಸಂಶೋಧನಾಶೀಲ ಪಂಡಿತರಿಗೆ ಹೇಗೆ ಇದು ಹೊಳೆಯುವುದೂ ಇಲ್ಲ?. (……. ವಿಕೃತಿ  ಪುಟಗಳು ೭೮, ೭೭, ೮೦). ‘ಆವರಣ’ಓದಿದ ಯಾವನೇ ಸಾಮಾನ್ಯನಿಗೂ ಜಿಕೆಜಿ ಅವರು ಪ್ರಸ್ತಾಪಿಸಿದ ಅಂಶಗಳನ್ನೇ  ಅಲ್ಲವೆ ಭೈರಪ್ಪನವರು ಹೇಳಿರುವುದು?. ಮತ್ತೇಕೆ ಜಿಕೆಜಿ ಅವರು ತಕರಾರು ಅರ್ಜಿ ಹಾಕಿರುವುದು ಎಂದು ಅನಿಸುವುದು ಸಹಜ. ಬಹುಶಃ ಶ್ರೀ ಸಾಮಾನ್ಯನಿಗೆ ಅರ್ಥವಾಗದಿರುವುದು ‘ವಾಸ್ತವಾಂಶಗಳು’ಮತ್ತು ‘ಸತ್ಯ’ ಇವುಗಳ ನಡುವಿನ  ಕೂದಲು ಸೀಳುವ ಮೀಮಾಂಸೆ. ಜಿಕೆಜಿ ಅವರ ತಕರಾರಿರುವುದು ಇದನ್ನೆಲ್ಲಾ ಹೇಳಬಾರದಿತ್ತು ಅಥವಾ ಹೇಳಿದ್ದರೂ ವಾಸ್ತವಾಂಶಗಳನ್ನು ಶೋಧಿಸಿ  (filter)  ಅವುಗಳಲ್ಲಿ ಅಡಗಿಕೂತಿರುವ ‘ಸತ್ಯಗಳನ್ನು’ ಮಾತ್ರ ಹೇಳಬೇಕಾಗಿತ್ತು ಎಂಬುದಷ್ಟೇ. ಇಂತಹ filtered ಸತ್ಯಶೋಧನೆಗೆ ಒಂದು ಉದಾಹರಣೆಯನ್ನು ಭೈರಪ್ಪನವರೇ ಕೊಟ್ಟಿದ್ದಾರೆ. 
NCERT ಪಠ್ಯಪುಸ್ತಕ Ancient India, New Delhi  ೧೯೯೨ p ೧೧೨ರಲ್ಲಿ ಅದರ ಕರ್ತೃ ಮಾರ್ಕ್ಸಿಸ್ಟ್  ಆರ್.ಎಸ್. ಶರ್ಮರು ಬರೆಯುತ್ತಾರೆ, ‘ಅವುಗಳ ಸಂಪತ್ತಿಗಾಗಿ ಬೌದ್ಧ ವಿಹಾರಗಳು ಟರ್ಕಿಷ್ ದಾಳಿಕೋರರನ್ನು ಆಕರ್ಷಿಸಿದವು. ಅವು ದಾಳಿಕೋರರ ದುರಾಶೆಯ ವಿಶೇಷ ಗುರಿಗಳಾದವು. ಟರ್ಕರು ತುಂಬ ಜನ ಬೌದ್ಧ ಸನ್ಯಾಸಿಗಳನ್ನು ಕೊಂದರು. ಆದರೂ ಕೆಲವು ಸನ್ಯಾಸಿಗಳು ನೇಪಾಳ ಮತ್ತು ಟಿಬೇಟುಗಳಿಗೆ ತಪ್ಪಿಸಿಕೊಂಡು ಹೋದರು’. ಇಲ್ಲಿ ಮಾರ್ಕ್ಸಿಸ್ಟ್ ಜಾಣರು (ಬೌದ್ಧ) ವಿಹಾರಗಳನ್ನು ನಾಶಮಾಡಿದವರನ್ನು ಟರ್ಕಿಶ್ ಎಂಬ ಬುಡಕಟ್ಟು (tribal) ಹೆಸರಿನಿಂದ ಕರೆದು ಅವರು ಮುಸ್ಲಿಮರು,ಮುಸ್ಲಿಂ ಧರ್ಮದ ಅಣತಿಯಂತೆ ಅವರು ಈ ಧರ್ಮ ಕ್ಷೇತ್ರಗಳನ್ನು ನಾಶಮಾಡಿದರು ಎಂಬ ಅಂಶವನ್ನು ಮುಚ್ಚಿಹಾಕಿದ್ದಾರೆ. 
(ಸಂದರ್ಭ:ಸಂವಾದ ಪುಟ ೩೨೩, ೨೦೧೧) . ಬಹುಶಃ ಜಿಕೆಜಿ ಅವರು ಬಯಸುವ  ‘ಸತ್ಯಶೋಧನೆ/ ಸತ್ಯದರ್ಶನ ‘ ಈ ಮಾದರಿಯದ್ದು ಅನಿಸುತ್ತದೆ. ಹೀಗಾದರೆ ಮಾತ್ರ ವಾಸ್ತವಾಂಶ=ಸತ್ಯ ಆಗುತ್ತದೆ. ಇಲ್ಲವಾದರೆ ಇಲ್ಲ. ಜಿಕೆಜಿ ಅವರಂತಹವರ ದೃಷ್ಟಿಯಲ್ಲಿ  ಒಮ್ಮೊಮ್ಮೆ  ವಾಸ್ತವಾಂಶ=ಸತ್ಯವೂ  ಆಗುತ್ತದೆ. ಒಂದು ಉದಾಹರಣೆ ನೋಡಿ.   
ಕೃಷ್ಣದೇವರಾಯನನ್ನು ಕನ್ನಡ ರಮಾರಮಣನೆಂದೂ, ಆಂಧ್ರಭೋಜನೆಂದೂ ಕೊಂಡಾಡಿರುವ ಜನರೇ ಆತನು ಪುತ್ರ ವ್ಯಾಮೋಹಾಂಧತೆಯಿಂದ ಅಪ್ರಾಪ್ತ ವಯಸ್ಕನಾದ ತನ್ನ ಮಗನಿಗೆ ಪಟ್ಟಕಟ್ಟಿದ್ದನ್ನು,ಮಂತ್ರಿ ತಿಮ್ಮರಸನ್ನನ್ನು ಅವಿಚಾರತೆಯಿಂದ ಹಿಂಸಿಸಿದ್ದನ್ನೂ ಬರೆದಿದ್ದಾರೆ. ಇದಕ್ಕೆ ಯಾರ ಪ್ರತಿಭಟನೆಯೂ ಬಂದಿಲ್ಲ. ವಿಜಯನಗರ ಸಾಮ್ರಾಜ್ಯ-ಗುಪ್ತ ಸಾಮ್ರಾಜ್ಯಗಳ ಉನ್ನತಿಯ ಹಾಗೂ ಅವನತಿಯ ಕಾರಣಗಳನ್ನು ನೀಡಿದ ಇತಿಹಾಸಜ್ಞರನ್ನು  ಯಾರೂ ದೂರಿಲ್ಲ. ನಮ್ಮ ಪಠ್ಯ ಪುಸ್ತಕಗಳೂ ಅವನ್ನು –ವಿಶೇಷವಾಗಿ  ಅವನತಿಯನ್ನು ವರ್ಣಿಸಲು ಹಿಂದೆಗೆದಿಲ್ಲ. ಆದರೆ  ಟಿಪ್ಪುವನ್ನೋ, ತುಘಲಕನನ್ನೋ, ಬಾಬರನನ್ನೋ,ಔರಂಗಜೇಬನನ್ನೊ,ವಸ್ತುನಿಷ್ಥ ಆಧಾರಗಳಿಂದ ಚಿತ್ರಿಸಹೊರಟರೆ ಅದೇಕೆ ಕೋಲಾಹಲ? ಎಂದು ಶತಾವಧಾನಿ ಆರ್. ಗಣೇಶ್ ಅವರು ಪ್ರಶ್ನಿಸುತ್ತಾರೆ. (ವಿವರಗಳಿಗೆ  ಸಂದರ್ಭ-ಸಂವಾದ ಪುಟ ೩೧೩ ನೋಡಬಹುದು)
 
(ಈ ವಿಮರ್ಶಾಸಂಕಲನದ ಉಳಿದ ಲೇಖನಗಳನ್ನು ಕುರಿತ ಮುಖಾಮುಖಿ ಮುಂದಿನ ಭಾಗದಲ್ಲಿ ಮುಂದುವರಿಯುತ್ತದೆ)
12 ಟಿಪ್ಪಣಿಗಳು Post a comment
 1. Nagshetty Shetkar
  ಮೇ 21 2014

  ಸರಿ, ಮೋದಿ ಸರಕಾರ ಭೈರಪ್ಪನವರ ‘ಸಾಧನೆ’ಗಳನ್ನು ಗಣಿಸಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಕೊಡುತ್ತದೆ ಬಿಡಿ. ಹಾಗೆ ನಿಮ್ಮ ಶತಾವಧಾನಿಗೆ ಪದ್ಮಭೂಷಣ.

  ಉತ್ತರ
 2. ಮೇ 22 2014

  ಷೆತ್ಕರರಿಗೆ ಪ್ರಶಸ್ತಿಗಳ ಪ್ರಸ್ತಾಪವೇ ಮುಖ್ಯ ಅನ್ನಿಸುತ್ತೆ. ಇದು ಸದಭಿರುಚಿಯಲ್ಲ.

  ಉತ್ತರ
  • Nagshetty Shetkar
   ಮೇ 22 2014

   ಮೋದಿ ಸರಕಾರದ ‘ಆಸ್ಥಾನರತ್ನ’ಗಳು ಬಿರುದು ಬಾವಲಿ ಮನ್ನಣೆ ಪಡೆದು ವಿಜ್ರುಮ್ಭಿಸಲಿ ಅಂತ ಆಶಿಸುವುದೂ ತಪ್ಪೇ???

   ಉತ್ತರ
   • Nagshetty Shetkar
    ಮೇ 22 2014
   • ಮೇ 23 2014

    ಮು ಅ ಶ್ರೀರಂಗರ ಬರಹದಿಂದ ಸರಿದು, ಮೋದಿ ಸರ್ಕಾರದ ಬಗೆಗೆ ಜಾರಿದ್ದು ಎಷ್ಟು ಸರಿ? ಒಂದು ಉತ್ತಮ ಚರ್ಚೆಗೆ ಮತ್ತೊಂದು ಚರ್ಚೆಯೇ ಉತ್ತರ ಅಲ್ಲವೆ? ಹಾಗೆಯೇ, ಇದುವರೆಗಿನ ’ಬಿರುದುಬಾವಲಿಗರು’ ಹಿಂದಿನ ಸರ್ಕಾರದ ಕೃಪಾಪೋಷಿತರೆಂದು ಸೂಚ್ಯವಾಗಿ ನೀವೇ ತಿಳಿಸಿದಂತೆ ಆಗಲಿಲ್ಲವೆ?

    ಉತ್ತರ
    • Nagshetty Shetkar
     ಮೇ 23 2014

     ದರ್ಗಾ ಸರ್ ಅವರಿಗೆ ಬಸವಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅವರ ಸಾಧನೆಗಳಿಗೆ.

     ಉತ್ತರ
     • viji
      ಮೇ 23 2014

      ಮೂರ್ತಿಯವರಿಗೆ ಬಸವಶ್ರೀ ಪ್ರಶಸ್ತಿ ಸಿಗುತ್ತಿರುವದು ಸರ್ಕಾರದ ವಂದಿ ಮಾಗಧರಾಗಿದ್ದರಿಂದಲೇ. ನಿಮ್ಮದೆ ಉತ್ತರ ನನ್ನದಲ್ಲ.

      ಉತ್ತರ
    • ಮೇ 23 2014

     ಇವರ ವಿಷಯಾಂತರ ಹೊಸದೇನಲ್ಲ ಬಿಡಿ… ಕೆಲವು ರಾಜಕಾರಣಿಗಳಿಗೆ ಪಕಾ಼ಂತರ ಎಷ್ಟು ಸುಲಭವೋ ಇವರಿಗೆ ವಿಷಯಾಂತರವೂ ಹಾಗೆ..

     ಉತ್ತರ

Trackbacks & Pingbacks

 1. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮ | ನಿಲುಮೆ
 2. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯ | ನಿಲುಮೆ
 3. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ | ನಿಲುಮೆ
 4. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯ – ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments