ವಿಷಯದ ವಿವರಗಳಿಗೆ ದಾಟಿರಿ

ಜೂನ್ 30, 2014

2

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮

‍ನಿಲುಮೆ ಮೂಲಕ

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭

‘ಆವರಣ’ ಎಂಬ ವಿ-ಕೃತಿ  —   ಸಂಗ್ರಹ : ಗೌರಿ ಲಂಕೇಶ್   (ಭಾಗ–೩)
————————————————————————
‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನದಲ್ಲಿ ಒಟ್ಟು ಇಪ್ಪತ್ತೊಂದು ಲೇಖನಗಳಿವೆ. ಇವುಗಳಲ್ಲಿ ಎಂಟು ಲೇಖನಗಳ ಬಗ್ಗೆ ಈಗಾಗಲೇ ಎರಡು ಭಾಗಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದಾಗಿದೆ. ಇನ್ನು ಉಳಿದಿರುವ ಹದಿಮೂರು ಲೇಖನಗಳು ಎರಡು ರೀತಿಯವು. (೧) ‘ಆವರಣ’ ಕಾದಂಬರಿಗೆ ನೇರವಾಗಿ ಸಂಬಂಧಿಸಿರುವಂತಹವು. (೨) ‘ಆವರಣ’ ಕಾದಂಬರಿಯನ್ನು ನೆಪ ಮಾತ್ರಕ್ಕೆ ಇಟ್ಟುಕೊಂಡು ಭೈರಪ್ಪನವರ ನಡೆ-ನುಡಿಗಳನ್ನು ಹೇಳುವಂತಹವುಗಳು.

‘ಆವರಣ’ ಕಾದಂಬರಿಗೆ ಸಂಬಂಧಿಸಿರುವಂತಹ ಲೇಖನಗಳಲ್ಲಿ ಸಹ ಈ ಹಿಂದಿನ ಎರಡು ಭಾಗಗಳಲ್ಲಿ ಚರ್ಚಿತವಾದ ವಿಷಯಗಳನ್ನು ಬಿಟ್ಟು ವಿಶೇಷವಾದ,ಹೊಸದಾದ ಅಂಶಗಳು ಇಲ್ಲ. ಆದ್ದರಿಂದ ಅವುಗಳ ಬಗ್ಗೆ ವಿವರವಾದ ಚರ್ಚೆ ಪುನರುಕ್ತಿಯಾಗುತ್ತದೆ. ಪುನರುಕ್ತಿಯಾಗದಂತಹ ಕೆಲವು ಅಂಶಗಳ ಬಗ್ಗೆ ಮಾತ್ರ ಈ ಭಾಗದಲ್ಲಿ ಒತ್ತು ನೀಡಲಾಗಿದೆ.

ಹಿಂದಿನದನ್ನೆಲ್ಲ ‘ಆವರಣ’ದಲ್ಲಿ ಪೇರಿಸುವ ಪ್ರಯತ್ನ ಲೇಖನ ಬರೆದಿರುವ ಬಿ. ಎಸ್. ವೆಂಕಟಲಕ್ಷ್ಮಿಯವರಿಗೆ  ‘…… ಕಾದಂಬರಿಯೊಂದನ್ನು ಉಲ್ಲಾಸಕ್ಕಾಗಿಯೋ ಅಥವಾ ತಮ್ಮ ವೈಚಾರಿಕತೆಯನ್ನು ಹಿಗ್ಗಿಸಿಕೊಳ್ಳುವ ಸಲುವಾಗಿಯೋ ಕೈಗೆತ್ತಿಕೊಳ್ಳುವ ಸಾಮಾನ್ಯ ಓದುಗರಿಗೆ ಕಾದಂಬರಿಯೊಂದು ಸಹಜವಾಗಿ ಓದಿಸಿಕೊಂಡಾಗ ಮಾತ್ರ ಒಂದು ಬಗೆಯ ತೃಪ್ತಿ …….. ಸಾರ್ಥಕ ಭಾವನೆ ಮೂಡುತ್ತದೆ……… ‘ಆವರಣ’ದಲ್ಲಿ ಯಾವೊಂದು ಕಥೆಯನ್ನೂ ಸುಸೂತ್ರವಾಗಿ ಹೇಳದೆ ಅಹಿತಕರ ಘಟನೆಗಳಿಗೆ ಮಾತ್ರ ಒತ್ತುಕೊಟ್ಟಿದೆ ‘ ಎಂಬ ಅಸಮಾಧಾನ. ಉಲ್ಲಾಸ, ಸುಸೂತ್ರವಾದ ಕಥೆ ಇವುಗಳ ಜತೆ ವೈಚಾರಿಕತೆಯನ್ನೂ ಬಯಸುವುದು ತೀರಾ ದುಬಾರಿಯಾಗುತ್ತದೆ. ಕಾದಂಬರಿಯೊಂದರಲ್ಲಿ ‘ವೈಚಾರಿಕತೆ’ ಎಂಬುದು ವಿಶಾಲ ವ್ಯಾಪ್ತಿಯ ಚರ್ಚೆಯನ್ನು ಬೇಡುವಂತಹುದು. ಈಗಾಗಲೇ ಭೈರಪ್ಪನವರ ಮೇಲೆ  ಅವರು  ತಮ್ಮ’ ವೈಚಾರಿಕತೆ ‘ಯನ್ನು ಓದುಗರಿಗೆ ಹೇಳುವುದುಕ್ಕೊಸ್ಕರ  ಕಾದಂಬರಿಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪ ನಮ್ಮ ಸಾಹಿತ್ಯವಲಯದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಓದುಗ ಬಯಸುವ ‘ವೈಚಾರಿಕತೆ’ ಯಾವ ರೀತಿಯದು ಎಂಬುದು ಸ್ಪಷ್ಟವಾಗಿಲ್ಲ. ‘ಆವರಣ’ದಮಟ್ಟಿಗೆ ಹೇಳುವುದಾದರೆ ವೆಂಕಟಲಕ್ಷ್ಮಿ ಅವರ ದೃಷ್ಟಿಯಲ್ಲಿ ಅಹಿತಕರ ಘಟನೆಗಳನ್ನು ಹೇಳುವುದು ವೈಚಾರಿಕತೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಕಾದಂಬರಿಯೊಂದರ ಓದು ಕಾಲ ಕಳೆಯಲು ಅಲ್ಲ ಎಂದು ಭಾವಿಸಿರುವವರಿಗೆ ವೆಂಕಟಲಕ್ಷ್ಮಿ ಅವರ ವಿಚಾರಗಳು ತೀರಾ ತೆಳುವಾದವುಗಳು ಎಂದು ಅನಿಸುತ್ತದೆ.

ಶಿವಸುಂದರ್ ಅವರು ‘ದ್ವೇಷದ ಅನಾವರಣ, ಸತ್ಯದ ವಿಕ್ಷೇಪ’ ಎಂಬ ಲೇಖನದಲ್ಲಿ ಭೈರಪ್ಪನವರು ‘ಆವರಣ’ದಲ್ಲಿ ನೀಡಿರುವ ಐತಿಹಾಸಿಕ ಪುರಾವೆಗಳ ಬಗ್ಗೆ ಮಾತಾಡುತ್ತಾ ‘ಅವು ಯಾವುವೂ ಪುರಾವೆಗಳೆಂದು ಸಾಬೀತೇ ಆಗಿಲ್ಲ ಎಂಬುದು ಬೇರೆ ಮಾತು’ ಎಂದಿದ್ದಾರೆ.   ಅದು  ಸಂಘ ಪರಿವಾರದ ಪ್ರಚಾರಕ್ಕೊಂದು ಸಾಮಗ್ರಿಯಾಗಿದೆ ಅಷ್ಟೇ ಎಂಬ ತೀರ್ಮಾನಕ್ಕೆ ಬಂದಿದ್ದಾರೆ .  ‘ಆವರಣ’ ಕಾದಂಬರಿ ಬರೆಯಲು ಭೈರಪ್ಪನವರು ಆಧಾರವಾಗಿ ಉಪಯೋಗಿಸಿದ ಗ್ರಂಥಗಳ ಬಗ್ಗೆ ಸಾಮಾನ್ಯವಾಗಿ  ಯಾವ .ವಿಮರ್ಶಕರಿಗೂ ಸಮ್ಮತಿಯಿಲ್ಲ. ಈ ಬಗ್ಗೆ ಭೈರಪ್ಪನವರ ನಿಲುವು ಏನು ಎಂಬುದನ್ನು ಈಗಾಗಲೇ ನಾವು ಗಮನಿಸಿದ್ದೇವೆ. (‘ನಿಲುಮೆ ‘ಯಲ್ಲಿ  ೧-೪-೨೦೧೪ರಂದು ಪ್ರಕಟವಾದ  ‘….. ಮುಖಾಮುಖಿ-೬’).  ಭೈರಪ್ಪನವರು ಕೊನೆಪಕ್ಷ ಒಂದಷ್ಟು ಗ್ರಂಥಗಳನ್ನು ಅಭ್ಯಾಸಮಾಡಿ ಒಂದು ಕಾದಂಬರಿ ಬರೆದಿದ್ದಾರೆ. ಅದು ವಿಮರ್ಶಕರಿಗೆ ಮತ್ತು ಹಲವು ಓದುಗರಿಗೂ ಇಷ್ಟವಾಗಿಲ್ಲ. ಆದರೆ ವಿಮರ್ಶಕರು  ತಮ್ಮ ವಿರೋಧಕ್ಕೆ ಆಧಾರ ನೀಡದೆ ಆ ಕಾದಂಬರಿಯನ್ನು ಟೀಕಿಸಿರುವುದು ಗಮನಿಸಬೇಕಾದ ಅಂಶ. ಕೇವಲ ದೇಶಾವರಿ ಮಾತುಗಳನ್ನೇ play, replay ,rewind,forward ಮತ್ತು backward ಮಾಡುತ್ತಾ ಬಂದಿದ್ದಾರೆ. (ನಾನು ಗಮನಿಸಿದಂತೆ ಅಜಕ್ಕಳ ಗಿರೀಶ್ ಭಟ್ ಅವರ “ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ” ವಿಮರ್ಶಾಕೃತಿ ಮಾತ್ರ ಅಂತಹ ಸವಕಲು ಮಾತುಗಳಿಗೆ ಹೊರತಾಗಿ ‘ಆವರಣ’ವನ್ನು ವಸ್ತುನಿಷ್ಠವಾಗಿ ವಿಮರ್ಶಿಸಿದೆ). ಕೆಲವರು ಒಂದಷ್ಟು ಇತಿಹಾಸಕಾರ ಹೆಸರಿನ ಪಟ್ಟಿ ನೀಡಿದ್ದಾರೆ. ಅವರು ಮಾರ್ಕ್ಸ್ ವಾದಿ ಚಿಂತನೆಯ ಹಿನ್ನೆಲೆಯಲ್ಲಿ ಭಾರತದ ಇತಿಹಾಸವನ್ನು “ಪುನರ್ರಚಿಸಿದವರು” ಎಂಬ ಅಭಿಪ್ರಾಯವಿರುವುದನ್ನು ಸಹ ನಾವು ಗಮನದಲ್ಲಿಟ್ಟುಕೊಳ್ಳಬೇಕು.   ಒಂದು ದೇಶದ ಚರಿತ್ರೆ ಒಂದೊಂದು ವಾದಕ್ಕೆ ತಕ್ಕಂತೆ   ಬದಲಾಗುವ ವಸ್ತುವೇ?. ಇಂತಹ ಅನುಮಾನ ಒಬ್ಬ ಸಾಮಾನ್ಯ ಓದುಗನಿಗೂ ಬರುವುದು ಸಹಜವಾದದ್ದೇ. ಇಂತಹ ಸನ್ನಿವೇಶದಲ್ಲಿ ಶಿವಸುಂದರ್ ಅವರು ‘ಇವು ನಿಜವಾಗಲೂ ಐತಿಹಾಸಿಕ ಎಂದು ಸಾಬೀತಾಗಿದೆ’ ಎಂಬ ಒಂದೆರೆಡು ಪುಸ್ತಕಗಳನ್ನಾದರೂ ಹೆಸರಿಸಬೇಕಿತ್ತು. ಅದನ್ನು ಮಾಡದೆ ಕೇವಲ Hit and Run ಮಾದರಿಯ ಮಾತುಗಳಿಂದ ಏನೂ ಪ್ರಯೋಜನವಿಲ್ಲ. ಆದರೆ ಭೈರಪ್ಪನವರು  ‘ಆವರಣ’ ಕಾದಂಬರಿಯ ರಚನೆಗಾಗಿ ಐವತ್ತೊಂದು ಗ್ರಂಥಗಳನ್ನು ಅಭ್ಯಾಸಮಾಡಿದ್ದಾರೆ. ಆ ಐವತ್ತೊಂದು ಅಕರ ಗ್ರಂಥಗಳಲ್ಲಿ ನಾಲ್ಕು ಮುಸ್ಲಿಂ ಲೇಖಕರುಗಳು ಬರೆದಿದ್ದು. ಪಾಶ್ಚಾತ್ಯ ಲೇಖಕ Martin Lings ಅವರ Muhammad (His Life Based on the Earliest Sources) ಕೃತಿಗೆ ಪಾಕಿಸ್ತಾನಿ ಸರ್ಕಾರವು ಒಂದು ಬಹುಮಾನ ಕೊಟ್ಟಿದ್ದಲ್ಲದೆ ೧೯೮೩ರಲ್ಲಿ ಇಸ್ಲಾಮಾಬಾದಿನಲ್ಲಿ ನಡೆದ National Seerat Conferenceನಲ್ಲಿ ಪ್ರವಾದಿಗಳನ್ನು ಕುರಿತು ಇಂಗ್ಲಿಷಿನಲ್ಲಿ ಬರೆದ ಅತ್ಯುತ್ತಮ ಜೀವನ ಚರಿತ್ರೆ ಎಂದು ಆಯ್ಕೆ ಮಾಡಿತು.  ನಂತರ ಈ ಕೃತಿಯ ಲೇಖಕರಾದ Martin Lings ಅವರಿಗೆ  ೧೯೯೦ರಲ್ಲಿ ಈಜಿಪ್ಟಿನ ರಾಷ್ಟ್ರಾಧ್ಯಕ್ಷರು ಪ್ರಶಸ್ತಿ ಕೊಟ್ಟು ಗೌರವಿಸಿದರು.   (ಆವರಣ ಪುಟ ೨೬೯ ೨೦೦೭). ಜತೆಗೆ ಕುರಾನ್ ನ ಕನ್ನಡ ಅನುವಾದ ‘ಪವಿತ್ರ ಕುರ್ ಆನ್’ ಅನ್ನೂ ಭೈರಪ್ಪನವರು ಅಭ್ಯಾಸಮಾಡಿದ್ದಾರೆ.

ತಮ್ಮನ್ನು ಸ್ತ್ರೀ ವಾದಿಯೆಂದು ಹೇಳಿಕೊಂಡಿರುವ ಚಂಪಾವತಿ ಎಚ್. ಎಸ್. ಅವರು ‘ಭೈರಪ್ಪನವರಿಗೆ ಒಂದು ಬಹಿರಂಗ ಪತ್ರ’ ಬರೆಯುವ ಮೂಲಕ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಆವರಣ’ದಲ್ಲಿನ ಧರ್ಮ ರಾಜಕಾರಣವನ್ನು ಎತ್ತಿ ಹಿಡಿಯಲು ಹೆಣ್ಣು ನಾಯಕಿಯಾಗುವ ಅಗತ್ಯವಿತ್ತೇ? ಒಬ್ಬ ಗಂಡಸನ್ನು ಏಕೆ ನಾಯಕನನ್ನಾಗಿ ಮಾಡಲಿಲ್ಲ? ವಕ್ಕಲಿಗ ಜಾತಿಯ ಹುಡುಗಿಯ  ಬದಲು ಒಬ್ಬ ದಲಿತ ಹುಡುಗಿಯನ್ನು ಏಕೆ ನಾಯಕಿಯನ್ನಾಗಿ ಮಾಡಲಿಲ್ಲ? ಇತ್ಯಾದಿ. ಒಂದು ಕಾದಂಬರಿಯ ಗುಣ-ದೋಷಗಳನ್ನು ಸಕಾರಣವಾಗಿ ಹೇಳಬೇಕಾದ್ದು ವಿಮರ್ಶೆಯ ಕೆಲಸ. ಅದರಲ್ಲಿ ಎರಡು ಮಾತಿಲ್ಲ. ಆದರೆ ಕಾದಂಬರಿಯೊಂದರ ಪಾತ್ರಗಳ ಜಾತಿ/ಲಿಂಗ  ಅದರ ಕಥೆ/ಘಟನೆಗಳು  ನಡೆಯುವ ಸ್ಥಳಗಳನ್ನು ಈ ರೀತಿ  ಬದಲಾಯಿಸಿ  ಏಕೆ ಬರೆಯಲಿಲ್ಲ ಎಂದು ಕೇಳುವುದು ವಿಮರ್ಶೆಯೆನಿಸಿಕೊಳ್ಳುವುದಿಲ್ಲ. ಒಬ್ಬ ಕಾದಂಬರಿಕಾರನಿಗೆ ತನ್ನ ಕೃತಿಯ ಪಾತ್ರಗಳನ್ನು ಕಾದಂಬರಿಯ ವಸ್ತುವಿಗೆ ತಕ್ಕಂತೆ ರೂಪಿಸುವ ಸ್ವಾತಂತ್ರ್ಯವೂ ಇಲ್ಲವೇ? ಕಾದಂಬರಿಯೊಂದನ್ನು ಬರೆಯುವ ಮುಂಚೆ ಅದರ ಪಾತ್ರ/ಪಾತ್ರಗಳು,ಜಾತಿ ಸದ್ಯದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಸಾಹಿತ್ಯಿಕ,ಸಾಮಾಜಿಕ ವಾದಗಳು ಮತ್ತು ಮೀಸಲಾತಿಯ ನಿಯಮಗಳಿಗೆ ಅನುಸಾರವಾಗಿ ಇದೆಯೇ ಎಂದು ಪರೀಕ್ಷಿಸಿಕೊಂಡ ನಂತರವೇ ಬರೆಯಲು ಪ್ರಾರಂಭಿಸಬೇಕೆ? ‘ಅವಧಿ’ ಎಂಬ ಕನ್ನಡ ಬ್ಲಾಗಿನಲ್ಲಿ ೧೧-೨-೧೪ರಂದು ಬಿ ಎಂ ಬಶೀರ್ ಅವರು ‘ಬೊಳುವಾರರ ಮುತ್ತುಪಾಡಿಯಲ್ಲಿ ದಲಿತರಿಗೇಕೆ ಪ್ರವೇಶವಿಲ್ಲ?’ ಎಂಬ ಶೀರ್ಷಿಕೆಯಲ್ಲಿ ಒಂದು ಕಿರು ಲೇಖನ ಬರೆದಿದ್ದಾರೆ.ಬೊಳುವಾರರು ತಮ್ಮ  ‘ಸ್ವಾತಂತ್ರದ ಓಟ’ ಕಾದಂಬರಿಯಲ್ಲಿ ದಲಿತರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ ಯಾಕೆ? ಅನ್ನುವುದು ಅವರ ಪ್ರಶ್ನೆ. ಬಶೀರ್ ಅವರು ಬೊಳುವಾರರನ್ನು ಕೇಳಿದಾಗ ಅವರು ಒಂದು ಪಾತ್ರವನ್ನು ತೋರಿಸಿ ಅಲ್ಲಿ ಒಬ್ಬ ಇದ್ದಾನಲ್ಲ ಎಂದು ಮೆಲ್ಲಗೆ ಜಾರಿಕೊಂಡಿದ್ದರಂತೆ. ‘ಸ್ವಾತಂತ್ರದ ಓಟ’ ಕೃತಿ ಈ ನೆಲೆಯಲ್ಲೂ ಚರ್ಚೆಯಾಗಬೇಕು ಎನ್ನುವುದು ತಮ್ಮ  ಆಶಯ. ಆಗ ಓಟ ಇನ್ನಷ್ಟು ಅರ್ಥಪೂರ್ಣವಾಗುತ್ತದೆ ಅಥವಾ ಬೊಳುವಾರರು ಇನ್ನೊಂದು ಸ್ವಾತಂತ್ರದ ಓಟ ಬರೆಯುವಂತಹ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ಬಶೀರ್ ಅವರು. ಈ ಮಾತುಗಳನ್ನೇ serious ಆಗಿ ತೆಗೆದುಕೊಂಡರೆ ಕೇವಲ ಸ್ವಾತಂತ್ರದ ಓಟ ಅಲ್ಲ ನಮ್ಮ ಇತರ ಎಲ್ಲಾ ಮುಖ್ಯ ಕಾದಂಬರಿಕಾರರ ಕೃತಿಗಳನ್ನು ಪುನರ್ರಚಿಸಬೇಕಾಗುತ್ತದೆ!! ನಮ್ಮ ವಿಮರ್ಶಕರು ಸಾಹಿತ್ಯದಲ್ಲೂ ಮೀಸಲಾತಿ ಎಂಬ ರಾಜಕೀಯದಲ್ಲಿ ಏಕೆ ಇಷ್ಟೊಂದು busy ಆಗಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ.

‘ಹೇಸಿಗೆಯ ಸ್ವಾತಂತ್ರ್ಯಕ್ಕೆ’ ಚಿನ್ನದ ಮುಖವಾಡ ಲೇಖನದ ಕರ್ತೃವಾದ ಡಾ ವಿ ಎಸ್ ಶ್ರೀಧರ ಅವರು ‘ಆವರಣ’ ಕಾದಂಬರಿಯಲ್ಲಿನ ‘ಭಾಷೆ’ಯ  ಉಪಯೋಗ ಕುರಿತೇ ಹೆಚ್ಚು  ಬರೆದಿದ್ದಾರೆ ಇಂತಹ ಪದ,ವಾಕ್ಯ,ಪ್ಯಾರ,ಪುಟಗಳು ಧ್ವನಿಸುವ  ಅರ್ಥ ಎಂತಹುದು? ಇದು ಸರಿಯೇ? ಈ ಅಂಶಗಳ  ಬಗ್ಗೆ ಅವರು ಹೆಚ್ಚಿನ ಒತ್ತು  ನೀಡಿದ್ದಾರೆ. ‘ಆವರಣ’ದ ಮುನ್ನುಡಿಯಲ್ಲಿ ಭೈರಪ್ಪನವರು ಹೇಳಿರುವ ‘ಹಿಂದಿನವರು ಮಾಡಿದ ತಪ್ಪುಗಳಿಗೆ ಇಂದಿನವರು ಜವಾಬ್ದಾರರಲ್ಲ. ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು ತಾವು ಅವರ ವಾರಸುದಾರರು ಎಂಬ ರಾಗಕ್ಕೆ(=ಪ್ರೀತಿ,ಸಂತೋಷ) ಸಿಕ್ಕಿಕೊಂಡರೆ ಹಿಂದಿನವರ ತಪ್ಪಿನ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ’ ಎಂಬ ಮಾತುಗಳು ‘….. ವಿಕೃತಿ’ ವಿಮರ್ಶಾಸಂಕಲನದಲ್ಲಿನ ಬಹುಪಾಲು ವಿಮರ್ಶಕರ ನಾನಾ ರೀತಿಯ ವ್ಯಾಖ್ಯೆಗಳಿಗೆ ಸಾಮಗ್ರಿಯನ್ನು ಒದಗಿಸಿದೆ. ಶ್ರೀಧರ ಅವರೂ ತಮ್ಮ ಲೇಖನದಲ್ಲಿ ಈ ವಿಷಯದ ಬಗ್ಗೆ ತಮ್ಮ ಅಸಮಾಧಾನವನ್ನು ‘ಇದು ಯಾರನ್ನು ಉದ್ದೇಶಿಸಿ ನೀಡಿದ ಎಚ್ಚರಿಕೆ?’ ಎಂದು ಪ್ರಶ್ನಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ಇಡೀ ಕಾದಂಬರಿಯಲ್ಲಿ ಒಬ್ಬ ವಿವೇಚನೆ ಇರುವ ಮುಸ್ಲಿಂ ಇಲ್ಲ. ಜತೆಗೇ ವರ್ತಮಾನದ ಮುಸ್ಲಿಂ ಸಮುದಾಯಕ್ಕೂ ಕಾದಂಬರಿಯೊಳಗಣ ಕಾದಂಬರಿಯ ಐತಿಹಾಸಿಕ ಮುಸ್ಲಿಂ ಲೋಕಕ್ಕೂ ಅನೇಕ ಸಮೀಕರಣದ ಸೂಚನೆಗಳಿವೆ …..’ಎಂದು ಆಕ್ಷೇಪಿಸಿದ್ದಾರೆ. “ವರ್ತಮಾನ” ಎಂಬ ಕನ್ನಡ ಬ್ಲಾಗಿನಲ್ಲಿ ಇರ್ಷಾದ್ ಎಂಬುವವರು ೨೦-೫-೧೪ರಂದು ‘ಧರ್ಮ ರಕ್ಷಕರ ಮದುವೆ ಫತ್ವಾ’ ಎಂಬ ಲೇಖನದಲ್ಲಿ ‘ಬೇಕಲ್ ಇಮಾದ್ದುದ್ದೀನ್ ಇಸ್ಲಾಂ ಕಮಿಟಿ (ಬಿ ಐ ಐ ಸಿ) ಕಾಸರಗೋಡು  ಇವರು ೨೦೧೩ರಲ್ಲಿ ಅದರ ವ್ಯಾಪ್ತಿಯಲ್ಲಿ ಬರುವ  ಮುಸ್ಲಿಂ ಕುಟುಂಬಗಳು ತಮ್ಮ ಮಕ್ಕಳ ವಿವಾಹದ ನಿಶ್ಚಯ ಮತ್ತು ವಿವಾಹದ ಸಮಯದಲ್ಲಿ ಕಡ್ಡಾಯವಾಗಿ ಪಾಲಿಸಲೇಬೇಕಾದ ಏಳು ಷರತ್ತುಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಆ ಷರತ್ತುಗಳ ಪ್ರಕಾರ ಒಂದು ವೇಳೆ ವಿವಾಹದಿನದಂದು ಆ ಷರತ್ತುಗಳನ್ನು ಉಲ್ಲಂಘಿಸಿದರೆ ಆ ಕುಟುಂಬವನ್ನು ಎರಡು ವರ್ಷಗಳ ಕಾಲ ಬಹಿಷ್ಕಾರ ಮಾಡಲಾಗುತ್ತದೆ. ಕಳೆದ ಒಂದು ವರ್ಷದಿಂದ ಈ ಫತ್ವಾ(ನಿರ್ಣಯ) ಜಾರಿಯಲ್ಲಿದೆ ವಿವಾಹದ ವೇಳೆ ಆ ಷರತ್ತುಗಳನ್ನು ಪಾಲಿಸದ ಒಂದು ಕುಟುಂಬವನ್ನು ಬಿ ಐ ಐ ಸಿ ಬಹಿಷ್ಕಾರ ಹಾಕಿತ್ತಂತೆ. ನಂತರ ಆ ಕುಟುಂಬದವರು ಕ್ಷಮೆ ಕೇಳಿದ್ದರಿಂದ ಬಹಿಷ್ಕಾರ ತೆರವು ಮಾಡಲಾಯಿತಂತೆ. ಆದರೆ ಆ ಷರತ್ತುಗಳಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ( ಧರ್ಮದ ಹೆಸರಿನಲ್ಲಿ ) ಬಾಧಿಸುತ್ತಿರುವ ತಮ್ಮ ಗಂಡಂದಿರ ಬಹುಪತ್ನಿತ್ವ ಮತ್ತು ತಲಾಕ್ ಬಗ್ಗೆ ಚಕಾರವಿಲ್ಲ!.(ಆಸಕ್ತರು ವಿವರಗಳಿಗೆ  ‘ವರ್ತಮಾನ’ ಬ್ಲಾಗಿನಲ್ಲಿ ಆ ಲೇಖನವನ್ನು ಗಮನಿಸಬಹುದು)  ಇಂದಿನ ಮತ್ತು ಹಿಂದಿನ ಮುಸ್ಲಿಂ ಲೋಕದ ಸಮೀಕರಣದ ಬಗ್ಗೆ ಮಾತನಾಡುವಾಗ ಇತ್ತೀಚಿಗೆ ಇಸ್ಲಾಂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಈ ಮೂಲಭೂತವಾದವನ್ನೂ ಗಮನಿಸಬೇಕು. ಧರ್ಮದ ಹೆಸರಿನಲ್ಲಿ ಒಂದು ಕುಟುಂಬವನ್ನು ಬಹಿಷ್ಕಾರ ಹಾಕುವವರಿಗೆ  ಭಾರತ ಸಂವಿಧಾನ ಕುರಿತಾದ ಅರಿವಾದರೂ ಇದೆಯೇ? ಎಂದು ಇರ್ಷಾದ್ ಅವರು ಪ್ರಶ್ನಿಸಿದ್ದಾರೆ. ಶ್ರೀಧರ್ ಅವರಿಗೆ ಇತರ ಪ್ರಗತಿಪರರಂತೆ ಸಹಜವಾಗಿ ಮಾರ್ಕ್ಸಿಸ್ಟ್ ಇತಿಹಾಸಕಾರರ ಬಗ್ಗೆ ಒಲವಿದೆ. ‘…….. ಮಾರ್ಕ್ಸಿಸ್ಟ್ ಚರಿತ್ರೆಗಾರರು ತಮ್ಮ ವ್ಯಾಖ್ಯಾನ ನಿಂತಿರುವ ಸಿದ್ಧಾಂತ ಹಾಗು ತಮ್ಮ ವಿಶ್ಲೇಷಣೆಯ ವಿಧಾನದ ಗತಿ-ತಾರ್ಕಿಕತೆಯನ್ನು ಮುಚ್ಚಿಟ್ಟು ತಮ್ಮ ನೋಟವೇ ಸಂಪೂರ್ಣ ಸತ್ಯ ಎಂದು ಘೋಷಿಸಿಲ್ಲ ಹಾಗೆ ಘೋಷಿಸಿಕೊಂಡಿರುವ ವಲ್ಗರ್ ಮಾರ್ಕ್ಸಿಸ್ಟ್ ರ ಬರಹಗಳ ಬಗ್ಗೆ ಎಡಪಂಥೀಯ ಬರವಣಿಗೆಯಲ್ಲೇ ವಿಪುಲವಾದ ವಾದ-ವಿವಾದ ನಡೆದಿದೆ,ನಡೆಯುತ್ತಲಿದೆ . ಆದರೆ ಬಲಪಂಥೀಯ/ಮೂಲಭೂತವಾದಿಗಳ  ನಡುವೆ ಈ ರೀತಿ ಚರ್ಚೆ ವಿವಾದಗಳು ನಡೆದಿವೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಶತಾವಧಾನಿ ಆರ್ ಗಣೇಶ್ ಅವರು ಪ್ರಸ್ತಾಪಿಸಿರುವ ಈ ಎರಡು ಅಂಶಗಳನ್ನು ಗಮನಿಸಬಹುದು.

(೧) ‘ಬಾಬ್ರಿ ಮಸೀದಿ’ಯ ವಿವಾದದಲ್ಲಿ ಮಂದಿರವಾದಿಗಳು ತಂದ ವಾಸ್ತವ-ಐತಿಹಾಸಿಕ ಪುರಾವೆಗಳೆದುರು ಮಸೀದಿವಾದಿಗಳ ಬೆಂಬಲಿಗರಾಗಿ ನಿಂತ ‘ಸೆಕ್ಯುಲರ್’ ಬಣದವರು ತಂದೊಡ್ಡಿದ್ದು ಬರಿಯ ಪತ್ರಿಕಾವರದಿಗಳ, ಹೇಳಿಕೆಗಳ ರಾಶಿಯನ್ನು ಮಾತ್ರ-ಎಂದು ಗುರುತಿಸಿದ ಎಲ್ ಸ್ಟರವರ ಮಾತು ಸ್ಮರಣೀಯ .

(೨) ಹೊಸ ಹೊಸ ಸಾಕ್ಷ್ಯಗಳು-ಪುರಾವೆಗಳು ಸಿಕ್ಕಂತೆ ಇತಿಹಾಸವನ್ನು ತಿದ್ದಬೇಕಲ್ಲದೆ ಹೊಸ ಹೊಸ ವಾದಗಳು ಬಂದಂತಲ್ಲ. ಇದಕ್ಕೆ ಹಿಂದೂ,ಮುಸ್ಲಿಂ,ಕ್ರೈಸ್ತ,ಬಂಡವಾಳಶಾಹಿ,ಸಮಾಜವಾದಿ , ರಾಷ್ಟ್ರೀಯ ಮುಂತಾದ ಯಾವ ಇಸಂಗಳೂ ಬದ್ಧವಾಗಬೇಕು. (ಸಂದರ್ಭ:ಸಂವಾದ, ಪುಟ ೩೧೪, ೨೦೧೧)

ಎಂ ಎಸ್ ಆಶಾದೇವಿ ಅವರ ‘ನಾಗರಿಕತೆಯ ಕೇಡು’ .ಲೇಖನದ ಬಗ್ಗೆ ಹೇಳುವಂತಹುದೇನೂ ಇಲ್ಲ. ಇವರ ಲೇಖನದಲ್ಲಿನ ಅಂಶಗಳ ಬಗ್ಗೆ ‘……. ವಿಕೃತಿ’ ಕುರಿತ ಈ ಹಿಂದಿನ ಮುಖಾಮುಖಿ ಸರಣಿಯ ಚರ್ಚೆಗಳಲ್ಲಿ ಸಾಕಷ್ಟು ವಿವರವಾಗಿ ಗಮನಹರಿಸಲಾಗಿದೆ.

‘ಆವರಣ’ದ ಒಳಗಣ  ಲೇಖನ ಬರೆದಿರುವ ನಗರಗೆರೆ ರಮೇಶ್ ಅವರು ‘ಆವರಣ’ ಕಾದಂಬರಿಯನ್ನು ಸರಿಯಾಗಿ ಓದಿಲ್ಲ ಅಥವಾ ಓದಿದ್ದರೂ ಪೂರ್ವಗ್ರಹ ಪೀಡಿತರಾಗಿ ಓದಿರಬಹುದುದೆಂಬುದಕ್ಕೆ ಅವರ ಲೇಖನದಲ್ಲಿನ ಈ ಒಂದೆರೆಡು ಸಾಲುಗಳೇ ಸಾಕ್ಷಿಯಾಗಿವೆ. ‘ಅಮೀರನ ಮಗ ಹಲವು ವರ್ಷಗಳ ನಂತರ ಮಗ ತನ್ನ ತಾಯಿಯನ್ನು ನೋಡಲು ಬಂದಾಗ ಅವನು ತಾಯಿಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವುದಿಲ್ಲ. ಬದಲಾಗಿ ಇಸ್ಲಾಂ ಧರ್ಮದ ಶ್ರೇಷ್ಠತೆಯ ಬಗ್ಗೆ ಭಾಷಣ ಬಿಗಿಯುತ್ತಾನೆ’ ಎಂಬುದು ಅವರ ಆಕ್ಷೇಪ. ಆದರೆ   ‘ಆವರಣ’ ಕಾದಂಬರಿಯ ಅಧ್ಯಾಯ ಒಂಭತ್ತರ  ಪುಟ ೧೩೮ ರಿಂದ ೧೪೬ರ ನಡುವೆ ತಾಯಿ (ರಜಿಯಾ ಆಲಿಯಾಸ್ ಲಕ್ಷ್ಮಿ) ಮತ್ತು ಮಗ ನಜೀರನ ಮಧ್ಯೆ ನಡೆದ ಮಾತುಕತೆಯ ಮುಖ್ಯಾಂಶಗಳು ಮತ್ತು ಸನ್ನಿವೇಶಗಳು ಹೀಗಿವೆ.

(೧) ನಜೀರ ಹಳ್ಳಿಗೆ  ಬಂದಾಗ ರಜಿಯಾ(ಲಕ್ಷ್ಮಿ) ತೋಟದಲ್ಲಿರುತ್ತಾಳೆ. ಮಗ ಬಂದ ವಿಷಯ ತಿಳಿದು ಮನೆಗೆ ಬರುವ ವೇಳೆಗೆ ನಜೀರ ಪ್ರಾರ್ಥನೆ ಮಾಡುತ್ತಿದ್ದ. ಪ್ರಾರ್ಥನೆಯ ಸಮಯದಲ್ಲಿ ಮಧ್ಯೆ ಮಾತಾಡಿಸಬಾರದೆಂದು ಅವಳು ಮಾತಾಡಲಿಲ್ಲ. ಅವನೂ ಸಹ ತಾನು ಮಾಡುತ್ತಿದ್ದ ಪ್ರಾರ್ಥನೆ ಮುಗಿಯುವ ತನಕ ತಾಯಿಯ ಜತೆ ಮಾತಾಡಲಿಲ್ಲ.
(೨) ಪ್ರಾರ್ಥನೆ ಮುಗಿದ ಬಳಿಕ ಅವನಾಗೇ ಅದರ ಮಹತ್ವ ಹೇಳಿದ ಮೇಲೆ ರಜಿಯಾ ಪ್ರಾಸಂಗಿಕವಾಗಿ ಪ್ರಾರ್ಥನೆ ಇಸ್ಲಾಂ  ಕುರಿತಂತೆ ಒಂದೆರೆಡು ಮಾತುಗಳನ್ನು ಮಗನೊಡನೆ ಆಡುತ್ತಾಳೆ.  ನಂತರ ‘ಅಮ್ಮಾ ಜಾನ್ ಅಷ್ಟು ದೂರದಿಂದ ಬಂದು ತಾಯಿಯ ಕೈಲಿ ಧಾರ್ಮಿಕ  ವಿಷಯದ ವಾಗ್ವಾದ ಹೂಡುವುದು ಸಂತೋಷದ ಮಾತಲ್ಲ.. ಆದರೂ ನೀವು ಅದೇ ಮಾತನ್ನು ಎತ್ತಿದ್ದರಿಂದ ಹೇಳ್ತಿದೀನಿ’ ಎಂದು ಪ್ರಾರಂಭಿಸಿ ಏಕದೇವತೋಪಾಸನೆ ,ಬಹುದೇವತೊಪಾಸನೆ ಇತ್ಯಾದಿಗಳ ಬಗ್ಗೆ ಮಾತಾಡುತ್ತಾನೆ.
(೩) ಒಂದೇ ಸಲ ವಾಗ್ವಾದ ಶುರುಮಾಡಿದರೆ ಸಂಬಂಧವನ್ನೇ ಹರಿದುಕೊಂಡು ಹೋಗಲೂಬಹುದು ಎಂದು ಯೋಚಿಸಿದ ರಜಿಯಾ(ಲಕ್ಷ್ಮಿ).ವಿಷಯಾನಂತರಿಸಲು ಕೇಳಿದಳು: ‘ಬೇಟಾ ಊಟಕ್ಕೆ ಏನು ತಿಂತೀಯ?’ ಸುಮಾರು ಮೂರು ಪುಟಗಳಲ್ಲಿ ತಾಯಿ ರಜಿಯಾ ಮತ್ತು ಮಗ ನಜೀರಣ ನಡುವೆ ಮಾತು ಕಮ್ಮಿ; ಅವರಿಬ್ಬರ ಮನಸ್ಸಿನಲ್ಲಿನ ಯೋಚನೆಗಳ,ವಿಚಾರಗಳ ಹೊಯ್ದಾಟಕ್ಕೆ ಒತ್ತು ಜಾಸ್ತಿ. ಕೊಲ್ಲಿ ದೇಶಗಳಲ್ಲಿ ಆಜಾನ್ ಕೂಗು ಕೇಳಿದ ತಕ್ಷಣ ಜನಗಳು ತಮ್ಮ ಕೆಲಸಗಳನ್ನು ಅಷ್ಟಕ್ಕೇ ಬಿಟ್ಟು ಓಡುವುದು ಸಾಮಾನ್ಯ …… ಕೆಲವರು ತಮ್ಮ ತಮ್ಮ ಕೆಲಸದ ಜಾಗಗಳಲ್ಲೇ ನಿಂತು ನಮಾಜು ಮಾಡುತ್ತಾರಂತೆ. ಮಾಡದೇ ಇರುವವರೂ ಇದ್ದಾರಂತೆ. ಆದರೆ ಅಲ್ಲಿಗೆ ನೌಕರಿಗೆ ಹೋಗಿರುವ ಭಾರತ,ಪಾಕಿಸ್ತಾನ,ಬಾಂಗ್ಲಾ ದೇಶಿಯ ಮುಸ್ಲಿಮರು ತಾವು ಅರಬರಿಗಿಂತ ಹೆಚ್ಚು ನಿಷ್ಠರೆಂದು ತೋರಿಸಿಕೊಳ್ಳಲು ಒಬ್ಬನೂ ತಪ್ಪದಂತೆ ಪ್ರತಿಸಲವೂ ಹತ್ತಿರದ ಮಸೀದಿಗೆ ಓಡುತ್ತಾರಂತೆ. ಹಾಗೆಂದು ಅವಳು (ರಜಿಯಾ ಆಲಿಯಾಸ್ ಲಕ್ಷ್ಮಿ)ಹಲವರಿಂದ ಕೇಳಿ ತಿಳಿದಿದ್ದಳು. ಸೌದಿಯಲ್ಲಿ ಕೆಲಸಮಾಡಿಕೊಂಡಿರುವ ಭಾರತೀಯನಾದ ನಜೀರನಿಗೆ ‘ ಇಸ್ಲಾಂ ಧರ್ಮದ ‘ ಬಗ್ಗೆ ಹೆಚ್ಚಿನ ಒಲವು ಮೂಡಿರುವುದು ಸಹಜವಾಗಿದೆ. ಅವನು ಹಳ್ಳಿಯಲ್ಲಿ ಇದ್ದ ಅಲ್ಪ ಸ್ವಲ್ಪ ಸಮಯದಲ್ಲೂ  ಸಹ  ಪ್ರಾರ್ಥನೆಯ ಸಮಯಕ್ಕೆ ತಕ್ಕ ಹಾಗೆ ಎರಡು ಸಲ ನಮಾಜು ಮಾಡುತ್ತಾನೆ ಎಂಬುದು ಗಮನಾರ್ಹ. ಭೈರಪ್ಪನವರು ‘ಆವರಣ’ ಕಾದಂಬರಿಯ ರಚನೆಗೆ ಮುನ್ನ ಲೇಖಕಿ ಬಾನು ಮುಷ್ತಾಕ್ ಅವರ ಮನೆಯಲ್ಲಿ ಐದು ದಿನಗಳು ಇದ್ದ ಬಗ್ಗೆ ಜತೆಗೆ ಬಾನು ಮುಷ್ತಾಕ್ ಅವರ ವಿದ್ಯಾವಂತ ಮಕ್ಕಳು ಮತ್ತು ಪತಿ ಮುಸ್ಲಿಮರ ಆಚಾರ,ವಿಚಾರ ತಿಳಿಸಿದ್ದಲ್ಲದೆ ನಮಾಜ್ ಮಾಡುವಾಗ ಮಸೀದಿಗೂ ಕರೆದುಕೊಂಡು ಹೋಗಿದ್ದರಂತೆ. ಮುಸ್ಲಿಂ ಧರ್ಮದ ಕುರಿತು ಪುಸ್ತಕಗಳನ್ನು ಕೊಡಿಸಿದ್ದಲ್ಲದೆ ಅವುಗಳಲ್ಲಿ ಮುಖ್ಯವಾದವುಗಳನ್ನು ಓದಿ ವಿವರಿಸಿ ಉಪಕಾರ ಮಾಡಿದರು ಎಂದು ಭೈರಪ್ಪನವರು ಮುನ್ನುಡಿಯಲ್ಲಿ ಕೃತಜ್ಞತೆಯಿಂದ ಹೇಳಿದ್ದಾರೆ. ಜತೆಗೆ ಉತ್ತರ ಭಾರತದ, ಅದರಲ್ಲಿಯೂ ಬನಾರಸಿನ ಮುಸ್ಲಿಮರ ರೀತಿ ರಿವಾಜುಗಳನ್ನು ತಮ್ಮ  ಸಹೋದ್ಯೋಗಿಯಾಗಿದ್ದ ಡಾ. ಸಿದ್ದಿಕ್ಕಿಯವರು ದಿನಗಟ್ಟಲೆ ವಿವರಿಸಿದರು ಎಂದೂ ಸಹ ಅದೇ ಮುನ್ನುಡಿಯಲ್ಲಿ ಹೇಳಿದ್ದಾರೆ. ನಗರಗೆರೆ ರಮೇಶ್ ಅವರು  ‘ಆವರಣ’  ಕಾದಂಬರಿಯ ಜತೆ ಅದರ ಮುನ್ನುಡಿಯನ್ನೂ ಸಹ ಸರಿಯಾಗಿ ಓದಿಲ್ಲ ಎಂದು ಅವರ ಲೇಖನದಿಂದಲೇ ತಿಳಿಯುತ್ತದೆ.
**************
‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನದ  ಉಳಿದ ಲೇಖನಗಳ ಬಗ್ಗೆ ಮಾತುಕತೆ ಮುಖಾಮುಖಿಯ  ಮುಂದಿನ ಭಾಗದಲ್ಲಿ.

————————————————————————————————————————————

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments