ಅವರ ಹಿಂಸೆಗೆ ನನ್ನಲ್ಲಿ ಉತ್ತರವಿರಲಿಲ್ಲ
– ಚಿತ್ರಾ ಸಂತೋಷ್
ನನ್ನ ಕಳೆದೆರಡು ಅಂಕಣದಲ್ಲಿ ಅನ್ಯಾಯದ ಕುಲುಮೆಯಲ್ಲಿ ಬೆಂದ ಹೆಣ್ಣು ಮಕ್ಕಳಿಬ್ಬರ ಕಥೆ ಹೇಳಿದ್ದೆ. ಈಗ ಮತ್ತೊಂದು ಕಥೆ ಹೇಳುತ್ತಿದ್ದೇನೆ. ಹೆಣ್ಣು ಮುಂದುವರಿದರೂ ಆಕೆಯ ಮೇಲಿನ ಅನ್ಯಾಯಗಳಿನ್ನೂ ಕೊನೆಯಾಗಲಿಲ್ಲ. ಈಕೆಯ ಹೆಸರು ಸುಲೇಖಾ ಮಹಿಪಾಲ್ . ಊರು ಡೆಹ್ರಾಡೂನ್. ಹುಟ್ಟಿದ್ದು ಜಾಡಮಾಲಿ ಕುಟುಂಬದಲ್ಲಿ. ಅಪ್ಪ ಅಮ್ಮನನ್ನು ವಿಷ ನೀಡಿ ಕೊಂದಾಗ ಸುಲೇಖಾಳಿಗೆ ಇನ್ನೂ ೧೩ ವರ್ಷ. ಅಪ್ಪನಿಂದ ದೂರಾದ ಸುಲೇಖಾಳ ಬದುಕು ಪ್ರತಿಕ್ಷಣವೂ ಶೋಷಣೆಗೊಳಗಾಯಿತು. ಭರವಸೆ ಕಳೆದುಕೊಂಡ ಅವಳ ಬದುಕಿನಲ್ಲಿ ಮತ್ತೆ ಭರವಸೆ ತುಂಬಿದ್ದು ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆ ಮತ್ತು ತನ್ನ ಭಾ ಪತಿ. ಈಗ ಅನ್ಯಾಯದ ವಿರುದ್ಧ ಸುಲೇಖಾ ಹೋರಾಟಕ್ಕೆ ಭಾ ಪತಿಯೂ ಕೈ ಜೋಡಿಸಿದ್ದಾರೆ.
ಅಮ್ಮನನ್ನು ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗಲಿಲ್ಲ. ಅಪ್ಪನ ರೌದ್ರವತಾರೆದುರು ಮಗಳು ಅಸಹಾಯಕಳಾಗಿ ಮೌನವಾಗಿದ್ದಳು. ಆಕೆಗಿನ್ನೂ ೧೩ ವರ್ಷ. ಆ ಪುಟ್ಟ ಹೆಣ್ಣು ಮಗಳ ಎದುರು ಅಮ್ಮ ಹತಳಾದಳು.





