ವಿಷಯದ ವಿವರಗಳಿಗೆ ದಾಟಿರಿ

Archive for

19
ಜುಲೈ

ಅಸಂವಿಧಾನಿಕ ಡಬ್ಬಿಂಗ್ ನಿಷೇಧದಿಂದ ಕನ್ನಡಕ್ಕಿಲ್ಲದ ಹ್ಯಾರಿ ಪಾಟರ್..!

-ಮಹೇಶ್ ಎಂ ಆರ್

ಇತ್ತೀಚಿಗೆ ಬಂದ ಸುದ್ದಿಯಂತೆ, ಹ್ಯಾರಿ ಪಾಟರಿನ ಹೊಸ ಚಿತ್ರ ತೆರೆಗೆ ಬಂದಿದೆ. ಅಶ್ಟೆ ಅಲ್ಲ ಇದು ಬಾರತದ ಪ್ರಾದೇಶಿಕ ಬಾಶೆಗಳತ್ತ ತನ್ನ ಗಮನವನ್ನು ಹರಿಸುತ್ತ, ಚಿತ್ರವನ್ನು ಇಂಗ್ಲೀಶಿನ ಜೊತೆಗೆ ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆ ಮಾಡುತ್ತಿದೆ. ಇದರರ್ಥ ಆಂದ್ರಪ್ರದೇಶ, ತಮಿಳುನಾಡಿನ ಮತ್ತು ಉತ್ತರ ಬಾರತದ ಅನೇಕ ರಾಜ್ಯಗಳ ಜನರು ಹ್ಯಾರಿ ಪಾಟರನ್ನು ತಮ್ಮ ತಾಯ್ನುಡಿಯಲ್ಲೇ ನೋಡಿ ಸವಿಯಬಹುದಾಗಿದೆ. ಆದರೆ ಈ ಸೌಬಾಗ್ಯ ಕನ್ನಡ ಬಾಶೆಯನ್ನಾಡುವ, ಕನ್ನಡದಲ್ಲೇ ಮನರಂಜನೆಯನ್ನು ಬಯಸುವ ನಮಗೆ ಇಲ್ಲ.
ಕರ್ನಾಟಕದಲ್ಲಿನ ಪರಿಸ್ಥಿತಿ:
ಕರ್ನಾಟಕದಲ್ಲಿ ಇಂಗ್ಲೀಶ ಚಿತ್ರಗಳು ಇಂಗ್ಲೀಶಿನಲ್ಲೇ ಬಿಡುಗಡೆಯಾಗಬೇಕು ಎಂಬ ನಿಯಮವೇನು ಇಲ್ಲ. ಅದರರ್ಥ ಈ ಚಿತ್ರ ಕರ್ನಾಟಕದಲ್ಲಿ ಇಂಗ್ಲೀಶ ಜೊತೆಗೆ ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆ ಆಗಬಹುದು. ಹೀಗೆ ಕರ್ನಾಟಕದಲ್ಲಿ ಇಂಗ್ಲೀಶ ಚಿತ್ರ ಇಂಗ್ಲೀಶೇತರ ಇತರ ಬಾಶೆಗಳಲ್ಲಿ ಬಿಡುಗಡೆಯಾದರೆ ಅಲ್ಲಿಗೆ ಡಬ್ಬಿಂಗ್ ನಿಶೇದವಿದೆ ಎಂಬ ಮಾತು ಶುದ್ದ ಸುಳ್ಳಾಗುತ್ತದೆ. ಅದರರ್ಥ ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಅನುಮತಿಯಿದೆ, ಆದರೆ ಕನ್ನಡಕ್ಕೆ ಡಬ್ ಆದ ಚಿತ್ರಗಳಿಗೆ ಅನುಮತಿಯಿಲ್ಲ. ಹ್ಯಾರಿ ಪಾಟರ್ ತೆಲುಗು, ತಮಿಳು, ಹಿಂದಿಗಳಿಗೆ ಡಬ್ ಆಗಿ ಕರ್ನಾಟಕದಲ್ಲಿ ಬಿಡುಗಡೆಯಾದರೆ ಓಕೆ,, ಆದರೆ ಅದೇ ಚಿತ್ರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿ ಅಂದ್ರೆ ಯಾಕೆ.? ಅಂತ ಕೇಳ್ತಾರೆ ನಮ್ಮ ಚಲನಚಿತ್ರ ಮಂಡಳಿ. ಈ ಪ್ರಶ್ನೆಯಲ್ಲಿ ಸ್ವಲ್ಪನಾದ್ರೂ ನ್ಯಾಯ ಇದೆಯಾ.!

ಅಸಂವಿಧಾನಿಕ ನಿಯಮ:
ಆಂಗ್ಲ ಬಾಶೆಯ ಬಹುಕೋಟಿ ವೆಚ್ಚದ, ಉನ್ನತ ತಂತ್ರಜ್ನಾನ, ಗ್ರಾಫಿಕ್ಸ್ ಇರುವ ಚಿತ್ರಗಳನ್ನು ಬರೀ ಇಂಗ್ಲೀಶ ಬಲ್ಲವರಶ್ಟೇ ನೋಡಬೇಕು ಎಂಬಂತಿದೆ ನಮ್ಮ ಚಿತ್ರರಂಗದ ಈಗಿನ ನಿಯಮ. ಕರ್ನಾಟಕದಲ್ಲಿ ಇಂಗ್ಲೀಶ್ ಬಾರದವರು ಈ ಚಿತ್ರ ನೋಡಬೇಕೆಂದರೆ ಅವರು ತಮಿಳು, ತೆಲುಗು, ಹಿಂದಿಗೆ ಮೊರೆ ಹೋಗಬೇಕಾದ ಪರಿಸ್ಥಿತಿಯನ್ನು ಈ ಡಬ್ಬಿಂಗ್ ನಿಶೇದದ ನಿಯಮ ತಂದೊಡ್ಡಿದೆ. ಚಿತ್ರರಂಗದ ಈ ಅಸಂವಿದಾನಿಕ ಡಬ್ಬಿಂಗ್ ನಿಶೇದದ ನಿಯಮದಿಂದ ಕೆಲವು ಒಳ್ಳೆಯ ಮನರಂಜನೆಯಿಂದ ಕರ್ನಾಟಕದ ಜನರು ವಂಚಿತರಾಗುತ್ತಿದ್ದಾರೆ. ಈ ಹ್ಯಾರಿ ಪಾಟರ್ ಚಿತ್ರ ಹೆಚ್ಚು ಮಕ್ಕಳ ಮನರಂಜನೆ ಉದ್ದೇಶಿಸಿ ಮಾಡಿರೋದ್ರಿಂದ ಡಬ್ಬಿಂಗ್ ನಿಶೇದದಿಂದಾಗಿ ಕನ್ನಡದ ಮಕ್ಕಳಿಗೆ ಮೋಸವಾಗ್ತಿದೆ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಪ್ರೇಕ್ಷಕನಿಗೆ ನೀನು ಇದನ್ನೇ ನೋಡು ಅಥವಾ ಇದೇ ಬಾಶೆಯಲ್ಲಿ ನೋಡು ಎಂದು ಡಬ್ಬಿಂಗ್ ನಿಶೇದ ಎಂಬ ಅಸ್ತ್ರದ ಮೂಲಕ ಒತ್ತಾಯಿಸುವುದು ಸಂವಿದಾನ ವಿರೋದಿಯಾದ ನಡೆ. ಜಗತ್ತಿನ ಎಲ್ಲ ಒಳ್ಳೆಯ ಮನರಂಜನೆಯನ್ನು ತನ್ನ ನುಡಿಯಲ್ಲಿ ನೋಡುವ ಹಕ್ಕು ಅವನಿಗಿದೆ. ಡಬ್ಬಿಂಗ್ ನಿಶೇದದಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಡಬ್ಬಿಂಗ್ ಬರಲಿ. ಒಳ್ಳೆಯ ಮನರಂಜನೆ ಅನ್ನೋದು ನಗರ ಪ್ರದೇಶಗಳ ಅಥವಾ ಇಂಗ್ಲೀಶ್ ಬಲ್ಲ ಕೆಲವ್ರಿಗೆ ಮಾತ್ರ ಸೀಮಿತ ಆಗದೇ ರಾಜ್ಯದ ಎಲ್ಲರಿಗೂ ಅವರು ಆಡುವ ನುಡಿಯಲ್ಲೇ ಅದುಸಿಗುವಂತಾಗಲಿ. ಕರ್ನಾಟಕದಲ್ಲಿ ಎಲ್ಲರಿಗೂ ಕನ್ನಡದಲ್ಲಿ ಮನರಂಜನೆ ಸಿಗುತ್ತದೆ ಎಂಬ ಉದ್ದೇಶವನ್ನು ಡಬ್ಬಿಂಗ್ ಹೊಂದಿದೆ ಎಂಬ ಸಾಮಾನ್ಯ ತಿಳುವಳಿಕೆಯನ್ನು ಡಬ್ಬಿಂಗ್ ವಿರೋದಿಗಳು ಅರಿಯಬೇಕಿದೆ.!

***************
19
ಜುಲೈ

ಎಂಥ ಫೋಟೊ ತೆಗೆಯೋಕೆ ನನಗಿಷ್ಟ-ಪೋಟೊಗ್ರಫಿ ಲೇಖನ-4

-ಶಿವು.ಕೆ

ನಾವು ಕ್ಯಾಮೆರವನ್ನು ಕೊಂಡು ಯಾವ ವಿಧದ ಫೋಟೊಗ್ರಫಿ ಮಾಡಬೇಕು ಎಂದು ನಂತರ ತೀರ್ಮಾನಿಸಬೇಕಾ? ಅಥವ ಫೋಟೊಗ್ರಫಿ ಆಯ್ಕೆ ಮಾಡಿಕೊಂಡು ನಂತರ ಅದಕ್ಕೆ ತಕ್ಕಂತ ಕ್ಯಾಮೆರ ಕೊಳ್ಳಬೇಕಾ? ಇದೊಂತರ ಮದುವೆಯಾಗುವವರೆಗೂ ಹುಚ್ಚು ಬಿಡೋಲ್ಲ, ಹುಚ್ಚು ಬಿಡುವವರೆಗೂ ಮದುವೆಯಾಗೋಲ್ಲ ಅನ್ನುವ ಗಾದೆಯನ್ನು ಉದಾಹರಿಸಿ,. ಮುಂದೇನು ಮಾಡಬೇಕೆನ್ನುವುದನ್ನು ಒಬ್ಬ ಛಾಯಾಗ್ರಾಹಕನ ಪುಟ್ಟಕತೆಯ ಮೂಲಕ ಮುಂದಿನ ಭಾಗದಲ್ಲಿ ಹೇಳುತ್ತೇನೆ ಅಂದಿದ್ದೆನಲ್ಲ., ಆ ಕತೆಗೆ ಮೊದಲು ಒಂದು ಪುಟ್ಟವಿಚಾರವನ್ನು ಚರ್ಚಿಸೋಣ.

ಇಂಥ ಸಮಯದಲ್ಲಿ ಫೋಟೊಗ್ರಫಿ ಸಾಧನೆ ಮಾಡಿದ ಗೆಳೆಯರನ್ನು ಹುಡುಕಿಕೊಂಡು ಹೋಗುತ್ತೀರಿ. ಅವರ ಬಳಿ ಈ ವಿಚಾರವನ್ನು ಚರ್ಚಿಸುತ್ತೀರಿ. ಆಗ ನಿಮಗೆ ಸಿಗುವ ಉತ್ತರ ಎಂತದ್ದು ಗೊತ್ತ? ಅವರ ಕ್ಯಾಮೆರ ಮತ್ತು ಅದರಿಂದ ತೆಗೆದ ಫೋಟೊಗ್ರಫಿ ಅನುಭವದ ಅಧಾರದ ಮೇಲೆ ಅವರಿಂದ ನಿಮಗೆ ಉತ್ತರ ಸಿಗುತ್ತದೆ. ಅದು ಆ ಕ್ಷಣಕ್ಕೆ ಸಮಾಧಾನವೆನಿಸಿದರೂ ನೀವು ಏಕಾಂತದಲ್ಲಿ ಯೋಚಿಸಿದಾಗ ಇಷ್ಟವಾಗದಿರಬಹುದು. ಇಂಥ ಸಮಯದಲ್ಲಿ ನೀವೊಬ್ಬ ಫೋಟೊಗ್ರಫಿ ಗುರುವನ್ನು ಹುಡುಕಿಕೊಳ್ಳಬೇಕು. ಇಲ್ಲೂ ಕೂಡ ಎಂಥ ಗುರುವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದು ಮುಖ್ಯ. ಏಕೆಂದರೆ ಗುರುಗಳಲ್ಲಿ ಎರಡು ವಿಧ. ನಿಮ್ಮನ್ನು ಓಲೈಸಲು, ಮೆಚ್ಚಿಸಲು, ಅಥವ ಸಮಾಧಾನಿಸಲು, ಅಥವ ಸಾಗಹಾಕಲು ಇಂಥ ಕಾರಣಗಳಿಗಾಗಿ ಸಿಗುವ ಗುರುಗಳು ಒಂದು ರೀತಿ. ಇವರು ಏನು ಮಾಡುತ್ತಾರೆಂದರೆ ತಮಗೆ ಗೊತ್ತಿಲ್ಲದನ್ನು ಗೊತ್ತು ಎನ್ನುವ ರೀತಿ ಭಾಷಣ ಮಾಡಿ ನಿಮ್ಮನ್ನು ಚಕಿತಗೊಳಿಸುತ್ತಾರೆ. ಆ ಪ್ರೇರಣೆಯಿಂದಾಗಿ ನೀವು ಮೈಮರೆತು ಅವರ ಮಾತಿನಿಂದಾಗಿ ನಿಮ್ಮ ದಾರಿ ತಪ್ಪಿರುತ್ತೀರಿ. ಇನ್ನೂ ಕೆಲವೊಮ್ಮೆ ಅವರು ಪುಸ್ತಕದ ಬದನೆಕಾಯಿ ಎನ್ನುವಂತೆ ಎಲ್ಲವನ್ನು ಓದಿ ತಿಳಿದಿರುತ್ತಾರೆ. ಅದರ ಬಗ್ಗೆ ಅದ್ಬುತವಾಗಿ ಮಾತಾಡುತ್ತಾರೆ. ಅವರ ಮಾತುಗಳನ್ನು ಕೇಳಿದಾಗಲೂ ನೀವು ಪುಳಕಗೊಳ್ಳುವುದು ಖಚಿತ. ಎಷ್ಟೋವರ್ಷಗಳಿಂದ ಫೋಟೊಗ್ರಫಿ ಸಾಧನೆ ಮಾಡದೆ ಪ್ರಸ್ತುತ ಪರಿಸ್ಥಿತಿಯಲ್ಲಿನ ಹೊಸ ತಂತ್ರಜ್ಜತೆಯನ್ನು ತಿಳಿದುಕೊಳ್ಳದೇ ಮತ್ತು ಅದನ್ನು ನಿತ್ಯ ಫೋಟೊಗ್ರಫಿ ಮಾಡುತ್ತ ಕಲಿಯದೇ ಹಳೇ ಓಬಿರಾಯನ ಕಾಲದ ದಂತಕತೆಯನ್ನು ನಿಮ್ಮ ಮುಂದೆ ಮಂಡಿಸುತ್ತಾ ನಿಮ್ಮನ್ನು ಅಚ್ಚರಿಗೊಳಿಸುವುದರಿಂದ ನೀವು ಖಂಡಿತ ದಾರಿ ತಪ್ಪಿದಂತಾಗುತ್ತದೆ. ಅಂತ ಗುರುಗಳಿಂದ ದೂರವಾಗುವುದು ಒಳ್ಳೆಯದು.

 

Read more »