ವಿಷಯದ ವಿವರಗಳಿಗೆ ದಾಟಿರಿ

ಜುಲೈ 19, 2011

ಎಂಥ ಫೋಟೊ ತೆಗೆಯೋಕೆ ನನಗಿಷ್ಟ-ಪೋಟೊಗ್ರಫಿ ಲೇಖನ-4

‍ನಿಲುಮೆ ಮೂಲಕ

-ಶಿವು.ಕೆ

ನಾವು ಕ್ಯಾಮೆರವನ್ನು ಕೊಂಡು ಯಾವ ವಿಧದ ಫೋಟೊಗ್ರಫಿ ಮಾಡಬೇಕು ಎಂದು ನಂತರ ತೀರ್ಮಾನಿಸಬೇಕಾ? ಅಥವ ಫೋಟೊಗ್ರಫಿ ಆಯ್ಕೆ ಮಾಡಿಕೊಂಡು ನಂತರ ಅದಕ್ಕೆ ತಕ್ಕಂತ ಕ್ಯಾಮೆರ ಕೊಳ್ಳಬೇಕಾ? ಇದೊಂತರ ಮದುವೆಯಾಗುವವರೆಗೂ ಹುಚ್ಚು ಬಿಡೋಲ್ಲ, ಹುಚ್ಚು ಬಿಡುವವರೆಗೂ ಮದುವೆಯಾಗೋಲ್ಲ ಅನ್ನುವ ಗಾದೆಯನ್ನು ಉದಾಹರಿಸಿ,. ಮುಂದೇನು ಮಾಡಬೇಕೆನ್ನುವುದನ್ನು ಒಬ್ಬ ಛಾಯಾಗ್ರಾಹಕನ ಪುಟ್ಟಕತೆಯ ಮೂಲಕ ಮುಂದಿನ ಭಾಗದಲ್ಲಿ ಹೇಳುತ್ತೇನೆ ಅಂದಿದ್ದೆನಲ್ಲ., ಆ ಕತೆಗೆ ಮೊದಲು ಒಂದು ಪುಟ್ಟವಿಚಾರವನ್ನು ಚರ್ಚಿಸೋಣ.

ಇಂಥ ಸಮಯದಲ್ಲಿ ಫೋಟೊಗ್ರಫಿ ಸಾಧನೆ ಮಾಡಿದ ಗೆಳೆಯರನ್ನು ಹುಡುಕಿಕೊಂಡು ಹೋಗುತ್ತೀರಿ. ಅವರ ಬಳಿ ಈ ವಿಚಾರವನ್ನು ಚರ್ಚಿಸುತ್ತೀರಿ. ಆಗ ನಿಮಗೆ ಸಿಗುವ ಉತ್ತರ ಎಂತದ್ದು ಗೊತ್ತ? ಅವರ ಕ್ಯಾಮೆರ ಮತ್ತು ಅದರಿಂದ ತೆಗೆದ ಫೋಟೊಗ್ರಫಿ ಅನುಭವದ ಅಧಾರದ ಮೇಲೆ ಅವರಿಂದ ನಿಮಗೆ ಉತ್ತರ ಸಿಗುತ್ತದೆ. ಅದು ಆ ಕ್ಷಣಕ್ಕೆ ಸಮಾಧಾನವೆನಿಸಿದರೂ ನೀವು ಏಕಾಂತದಲ್ಲಿ ಯೋಚಿಸಿದಾಗ ಇಷ್ಟವಾಗದಿರಬಹುದು. ಇಂಥ ಸಮಯದಲ್ಲಿ ನೀವೊಬ್ಬ ಫೋಟೊಗ್ರಫಿ ಗುರುವನ್ನು ಹುಡುಕಿಕೊಳ್ಳಬೇಕು. ಇಲ್ಲೂ ಕೂಡ ಎಂಥ ಗುರುವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದು ಮುಖ್ಯ. ಏಕೆಂದರೆ ಗುರುಗಳಲ್ಲಿ ಎರಡು ವಿಧ. ನಿಮ್ಮನ್ನು ಓಲೈಸಲು, ಮೆಚ್ಚಿಸಲು, ಅಥವ ಸಮಾಧಾನಿಸಲು, ಅಥವ ಸಾಗಹಾಕಲು ಇಂಥ ಕಾರಣಗಳಿಗಾಗಿ ಸಿಗುವ ಗುರುಗಳು ಒಂದು ರೀತಿ. ಇವರು ಏನು ಮಾಡುತ್ತಾರೆಂದರೆ ತಮಗೆ ಗೊತ್ತಿಲ್ಲದನ್ನು ಗೊತ್ತು ಎನ್ನುವ ರೀತಿ ಭಾಷಣ ಮಾಡಿ ನಿಮ್ಮನ್ನು ಚಕಿತಗೊಳಿಸುತ್ತಾರೆ. ಆ ಪ್ರೇರಣೆಯಿಂದಾಗಿ ನೀವು ಮೈಮರೆತು ಅವರ ಮಾತಿನಿಂದಾಗಿ ನಿಮ್ಮ ದಾರಿ ತಪ್ಪಿರುತ್ತೀರಿ. ಇನ್ನೂ ಕೆಲವೊಮ್ಮೆ ಅವರು ಪುಸ್ತಕದ ಬದನೆಕಾಯಿ ಎನ್ನುವಂತೆ ಎಲ್ಲವನ್ನು ಓದಿ ತಿಳಿದಿರುತ್ತಾರೆ. ಅದರ ಬಗ್ಗೆ ಅದ್ಬುತವಾಗಿ ಮಾತಾಡುತ್ತಾರೆ. ಅವರ ಮಾತುಗಳನ್ನು ಕೇಳಿದಾಗಲೂ ನೀವು ಪುಳಕಗೊಳ್ಳುವುದು ಖಚಿತ. ಎಷ್ಟೋವರ್ಷಗಳಿಂದ ಫೋಟೊಗ್ರಫಿ ಸಾಧನೆ ಮಾಡದೆ ಪ್ರಸ್ತುತ ಪರಿಸ್ಥಿತಿಯಲ್ಲಿನ ಹೊಸ ತಂತ್ರಜ್ಜತೆಯನ್ನು ತಿಳಿದುಕೊಳ್ಳದೇ ಮತ್ತು ಅದನ್ನು ನಿತ್ಯ ಫೋಟೊಗ್ರಫಿ ಮಾಡುತ್ತ ಕಲಿಯದೇ ಹಳೇ ಓಬಿರಾಯನ ಕಾಲದ ದಂತಕತೆಯನ್ನು ನಿಮ್ಮ ಮುಂದೆ ಮಂಡಿಸುತ್ತಾ ನಿಮ್ಮನ್ನು ಅಚ್ಚರಿಗೊಳಿಸುವುದರಿಂದ ನೀವು ಖಂಡಿತ ದಾರಿ ತಪ್ಪಿದಂತಾಗುತ್ತದೆ. ಅಂತ ಗುರುಗಳಿಂದ ದೂರವಾಗುವುದು ಒಳ್ಳೆಯದು.

 

ಕೆಲವು ಗುರುಗಳಿಗೆ ನಿಮ್ಮ ಬಗ್ಗೆ ಕಾಳಜಿ, ಪ್ರೀತಿ, ಒಳ್ಳೆಯ ಭಾವನೆಗಳಿದ್ದಲ್ಲಿ ಈ ವಿಭಾಗದಲ್ಲಿ ಇರುವ ಎಲ್ಲಾ ವಿಧಗಳು ಮತ್ತು ಅದರ ಸಾಧ್ಯಾಸಾಧ್ಯತೆಗಳನ್ನು ವಿವರಿಸಿ ನಿಮ್ಮ ಶಕ್ತಿ ಸಾಮರ್ಥ ಮತ್ತು ದೌರ್ಬಲ್ಯಗಳನ್ನು ಅರಿತು ಅದಕ್ಕೆ ಸಾಗುವ ದಾರಿಯನ್ನು ತೋರುತ್ತಾರೆ. ಇಂಥ ಗುರುಗಳು ನಮಗೆ ಬೇಕು. ಇದಲ್ಲದೇ ಒಬ್ಬ ಪ್ರಾಮಾಣಿಕ ಗುರು ಖಂಡಿತ ತನ್ನ ಶಿಷ್ಯನಿಗೆ ನೀನು ಇಂಥದ್ದೇ ಮಾಡು ಎಂದು ಹೇಳುವುದಿಲ್ಲ. ಮತ್ತು ತನ್ನ ಅನುಭವವನ್ನು ಏರುವುದಿಲ್ಲ. ಅದಕ್ಕೆ ಬದಲಾಗಿ ಈಗಿನ ಪರಿಸ್ಥಿತಿಯನ್ನು ಚೆನ್ನಾಗಿ ವಿವರಿಸಿ ಇರುವ ಅವಕಾಶವನ್ನು ತಿಳಿಸಿ ನಿಮಗಿಷ್ಟವಾದ ಆಯ್ಕೆಯನ್ನು ನೀವೇ ಮಾಡಿಕೊಳ್ಳುವಂತೆ ಹುರಿದುಂಬಿಸುತ್ತಾನೆ. ಇದರಿಂದ ನಮ್ಮ ಮನಸ್ತಿತಿ, ದೇಹಸ್ಥಿತಿ, ಸಾಮರ್ಥ್ಯ, ಬುದ್ದಿಶಕ್ತಿಯನ್ನು ಓರೆಗೆ ಹಚ್ಚಲು ಪರೋಕ್ಷವಾಗಿ ಪ್ರೇರೇಪಿಸುತ್ತಾನೆ. ಇಂಥ ಗುರುವೂ ನಮಗೆ ಸಿಗಬೇಕು. ಈ ಗುರುವಿಗೆ ನೀವು ಬೇರೆಯವರಿಗಿಂತ ವಿಭಿನ್ನವಾಗಬೇಕೆನ್ನುವ ಆಸೆಯಿರುತ್ತದೆ. ಯಾರೂ ಏನೇ ಹೇಳಿದರೂ ಕೊನೆಯಲ್ಲಿ ಆಗುವುದು ನಿಮಗಿಷ್ಟದಂತೆಯೇ ಅಂತ ಆ ಗುರುವಿಗೆ ತಿಳಿದಿರುತ್ತದೆ. ಮತ್ತೆ ನೀವು ಕಲಿಯುತ್ತಲೇ ಬೆಳೆಯಬೇಕೆನ್ನುವುದು ಆ ಪ್ರಾಮಾಣಿಕ ಗುರುವಿನ ಅಭಿಲಾಶೆ. ಹೌದು ಈ ಫೋಟೊಗ್ರಫಿ ಅನುಭವಗಳು ಮತ್ತು ಸಾಧನೆಗಳು ಒಬ್ಬರಿಂದ ಒಬ್ಬರಿಗೆ ಬೇರೆಬೇರೆಯಾಗಿರಬೇಕು. ಆಗಲೇ ಫೋಟೊಗ್ರಫಿ ಎನ್ನುವ ಏಕತೆಯಲ್ಲಿ ಆನೇಕತೆಯನ್ನು ಪ್ರಪಂಚಕ್ಕೆ ಕೊಡಲು ಸಾಧ್ಯ. ಇಂಥ ಅನೇಕ ಸಂದರ್ಭಗಳಲ್ಲಿ ಗುರುವಿನ ಮಾತಿನ ಒಳಾರ್ಥವನ್ನು ಗ್ರಹಿಸದೇ ಇರುವವರು ಸುಲಭದ ದಾರಿಯನ್ನು ಹಿಡಿಯುತ್ತಾರೆ. ಸುಲಭದ ದಾರಿ ಯಾವತ್ತು ಸಾಧನೆಗೆ ಹೇಳಿಮಾಡಿಸಿದ್ದಲ್ಲವಾದ್ದರಿಂದ ಅವರು ಈ ವಿಚಾರದಲ್ಲಿ ವಿಫಲರಾಗುತ್ತಾರೆ. ಮತ್ತೆ ಕೆಲವೇ ದಿನಗಳಲ್ಲಿ ಈ ಫೋಟೊಗ್ರಫಿಯೆನ್ನುವ ಹವ್ಯಾಸವನ್ನು ಬಿಟ್ಟುಬಿಡುತ್ತಾರೆ. ಅದಕ್ಕೆ ಅವರು ಕೊಡುವ ಕಾರಣಗಳು ಹತ್ತಾರು. ಬಿಡುವಿಲ್ಲ, ದುಬಾರಿ ಹವ್ಯಾಸ, ಸಮಯವಿಲ್ಲ, ಕೆಲಸದ ಒತ್ತಡವಿದೆ…ಹೀಗೆ ನಾನಾ ಕಾರಣಗಳನ್ನು ಹೇಳುತ್ತಾರೆ. ಸಾಧಿಸಬೇಕೆನ್ನುವವನಿಗೆ ಯಾವ ಕಾರಣಗಳೂ ಇರುವುದಿಲ್ಲ. ಇದರಿಂದಾಗಿ ನೂರಕ್ಕೆ ತೊಂಬತ್ತೊಂಬತ್ತು ಶೇಕಡ ಇಂಥ ಜೊಳ್ಳುಗಳೆಲ್ಲಾ ಉದುರಿಹೋಗಿ ಕೇವಲ ಶೇಕಡ ಒಂದು ಭಾಗ ಮಾತ್ರ ಸಾಧನೆಯ ಹಾದಿಯಲ್ಲಿ ನಡೆಯುತ್ತಾರೆ. ತಮ್ಮ ಗುರುವಿನ ಮಾತಿನ ಒಳಾರ್ಥಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡಿರುತ್ತಾರೆ. ಹೀಗೆ ನೀವು ಕೂಡ ಇಂಥ ಸಮಯದಲ್ಲಿ ತಾಳ್ಮೆಯಿಂದ ನಿಮಗೆ ನೀವೇ ಗುರುವಾಗಬೇಕು.

ಹೌದು. ನಮಗೆ ನಾವೆ ಗುರುವಾಗುವುದು ಹೇಗೆ?

ಅದನ್ನು ಅರಿಯಲು ಒಬ್ಬ ಛಾಯಾಗ್ರಾಹಕನ ಪುಟ್ಟ ಕತೆಯನ್ನು ಹೇಳುತ್ತೇನೆ. ಆತನ ಹೆಸರು ಕಿರಣ್. ಸಾದ ಸೀದ ಹುಡುಗ. ಬಡತನವಿದ್ದರೂ ಮನೆಯಲ್ಲಿ ಕೊಟ್ಟ ಖರ್ಚಿನ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸಿ ನೂರೈವತ್ತು ರೂಪಾಯಿ ಸೇರಿದಾಗ ಒಂದು ಪುಟ್ಟ ಕ್ಯಾಮೆರವನ್ನು ಕೊಂಡುಕೊಂಡಿದ್ದ. ಫೋಟೊಗ್ರಫಿ ಕುತೂಹಲ ಅವನಿಗೆ ಕಾಲೇಜು ದಿನಗಳಲ್ಲೇ ಅಂಟಿಕೊಂಡಿತ್ತು. ಕಾಲೇಜಿನ ಕ್ಯಾಂಪುಗಳಲ್ಲಿ ಕಾರ್ಯಕ್ರಮಗಳಲ್ಲಿ ಆತ ತನ್ನ ಪುಟ್ಟ ಕ್ಯಾಮೆರದಿಂದ ಫೋಟೊ ತೆಗೆಯುತ್ತಿದ್ದ. ಮತ್ತೆ ರಜಾ ದಿನಗಳಲ್ಲಿ ಗೆಳೆಯರೊಂದಿಗೆ ಪ್ರವಾಸ ಬೆಟ್ಟಗುಡ್ಡಗಳು, ಜಲಪಾತಗಳು, ಜಾತ್ರೆಗಳಿಗೆ ಹೊರಟಾಗ ಈತ ತನ್ನ ಪುಟ್ಟ ಕ್ಯಾಮೆರದಲ್ಲಿ ಫೋಟೊ ತೆಗೆಯುವ ವಿಚಾರದಲ್ಲಿ ಮುಂದಿರುತ್ತಿದ್ದ. ಬೇರೆಯವರಿಗೆ ಫೋಟೊ ತೆಗೆಯಲು ತನ್ನ ಪುಟ್ಟ ಕ್ಯಾಮೆರವನ್ನು ಕೊಡುತ್ತಲೇ ಇರಲಿಲ್ಲ. ಈ ಕಾರಣದಿಂದಾಗಿ ಆತ ಜೊತೆಗೂಡಿ ಹೋಗುವ ಪ್ರವಾಸಗಳಲ್ಲಿ ತನ್ನ ಗೆಳೆಯರ ಫೋಟೊಗಳೇ ಹೆಚ್ಚಿರುತ್ತಿದ್ದವು. ತನ್ನ ಫೋಟೊಗಳು ಒಂದೋ ಎರಡೋ ಇದ್ದಿದ್ದಕ್ಕೆ ಆತನಿಗೆ ಸ್ವಲ್ಪವೂ ಬೇಸರವಾಗುತ್ತಿರಲಿಲ್ಲ. ಅದರ ಬದಲು ತಾನು ಎಲ್ಲರ ಫೋಟೊವನ್ನು ಎಷ್ಟು ಚೆನ್ನಾಗಿ ಕ್ಲಿಕ್ಕಿಸಿದ್ದೇನೆ ಅನ್ನುವ ಕುತೂಹಲದಲ್ಲಿಯೇ ಸಂತೋಷಪಡುತ್ತಿದ್ದ.

ಪಿ ಯು ಸಿ ಮುಗಿದ ಮೇಲೆ ಪದವಿಗೆ ಸೇರಿಕೊಂಡರೂ ಮನೆಯಲ್ಲಿನ ಬಡತನದ ಪರಿಸ್ಥಿತಿಯಿಂದಾಗಿ ತನ್ನ ಓದು ಇನ್ನಿತರ ಖರ್ಚಿಗಾಗಿ ಏನಾದರೂ ಸಣ್ಣ ಪಾಳಿ ಕೆಲಸವನ್ನು ಮಾಡಲೇಬೇಕಾಗಿತ್ತು. ಮಾಡುವ ಉತ್ಸಾಹವಿದ್ದಲ್ಲಿ ಖಂಡಿತ ಯಾವುದಾದರೂ ಕೆಲಸ ಸಿಕ್ಕೇ ಸಿಗುತ್ತದೆಯಲ್ಲವೇ ಹಾಗೆ ಇವನಿಗೂ ಒಂದು ಪಾರ್ಟ್ ಟೈಮ್ ಕೆಲಸ ಸಿಕ್ಕಿತ್ತು. ಓದು ಮುಂದುವರಿಸಿ ಪದವಿ ಗಳಿಸಿದ ಈತನಿಗೆ ಮುಂದೆ ಓದುವ ಅವಕಾಶ ಸಿಕ್ಕಿದರೂ ಮತ್ತೆ ಒಂದೆರಡು ಸರ್ಕಾರಿ ಉದ್ಯೋಗದ ಅವಕಾಶ ಸಿಕ್ಕಿದರೂ ಕೂಡ ಇಷ್ಟಪಡದೇ ತಾನು ಮಾಡುವ ಕೆಲಸದ ಅನುಭವದಿಂದಾಗಿ ಆತ ತನ್ನದೇ ಒಂದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದ. ಹಾಗೆ ಪ್ರಾರಂಭಿಸಲು ಕಾರಣ ಆತನಿಗೆ ಯಾರ್ ಕೈಕೆಳಗೂ ಕೆಲಸ ಮಾಡಲು ಆಸೆಯಿರಲಿಲ್ಲ. ಏಕೆಂದರೆ ಒಮ್ಮೆ ಅಂತ ಕೆಲಸಕ್ಕೆ ಸೇರಿಕೊಂಡುಬಿಟ್ಟರೆ ಬೆಳಿಗ್ಗೆ ಹೊರಟರೆ ಸಂಜೆ ಮನೆಗೆ ಬರಬೇಕಾಗುತ್ತದೆ. ಇದರಿಂದ ತನ್ನ ಫೋಟೊಗ್ರಫಿ ಇತ್ಯಾದಿ ವಿಚಾರಗಳಿಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದರೆ ಯಾವಾಗ ಬೇಕಾದರೂ ತನಗಾಗಿ ಸಮಯವನ್ನು ಉಳಿಸಿಕೊಳ್ಳಬಹುದು ಇದೇ ಆತನ ದೂರಾಲೋಚನೆ. ಆತನ ಪರಿಶ್ರಮದಿಂದಾಗಿ ಆತ ಪ್ರಾರಂಭಿಸಿದ ಸ್ವಂತ ಉದ್ಯೋಗ ಸ್ವಲ್ಪ ಕಷ್ಟಕರವಾಗಿದ್ದರೂ ಚೆನ್ನಾಗಿ ನಡೆಯಲಾರಂಭಿಸಿ ಪೂರ್ತಿ ಮನೆಯ ಜವಾಬ್ದಾರಿಯನ್ನು ಈತನೇ ನಿಬಾಯಿಸುವಂತಾಗಿ ಮನೆಯವರೆಲ್ಲರ ಖುಷಿ ಕಾರಣವಾಗಿದ್ದ.

ಮುಂದೆ ಕೆಲವೇ ದಿನಗಳಲ್ಲಿ ತನ್ನ ಇಷ್ಟದ ವಿಚಾರವಾದ ಫೋಟೊಗ್ರಫಿಗಾಗಿ ಒಂದು ಎಸ್ ಎಲ್ ಅರ್ ಕ್ಯಾಮೆರವನ್ನು ಕೊಂಡುಕೊಂಡ. ಆತನ ಉದ್ದೇಶ ಮೊದಲು ತನ್ನ ಇಷ್ಟದ ಫೋಟೋಗ್ರಫಿಯಾದರೂ ಕ್ಯಾಮೆರಕ್ಕೆ ಹಾಕಿದ ಬಂಡವಾಳವಾದ ಹದಿನೈದು ಸಾವಿರರೂಪಾಯಿಯನ್ನು ವಾಪಸ್ಸು ತೆಗೆಯುವುದು ಹೇಗೆ ಎಂದು ಚಿಂತಿಸಿದ. ಆಗ ಅವನಿಗೆ ಹೊಳೆದಿದ್ದೆ. ಮದುವೆ ಫೋಟೊಗ್ರಫಿ. ಗೆಳೆಯರ ಬಳಿ ಹೇಳಿ ಸಣ್ಣ ಪುಟ್ಟ ಕಾರ್ಯಕ್ರಮಗಳ ಫೋಟೊ ತೆಗೆಯುವ ಅವಕಾಶ ಗಿಟ್ಟಿಸಿಕೊಂಡ ಈತ ಮುಂದೆ ಮದುವೆ ಕಾರ್ಯಕ್ರಮದ ಪೋಟೊಗಳನ್ನು ತೆಗೆಯುವ ಅವಕಾಶವನ್ನು ಪಡೆದು ಅದರಲ್ಲಿ ಸಂಪಾದನೆಯಲ್ಲಿ ಒಂದು ವರ್ಷದಲ್ಲೇ ತನ್ನ ಕ್ಯಾಮೆರ ಮತ್ತು ಇತ್ಯಾದಿ ವಸ್ತುಗಳ ಬಂಡವಾಳವನ್ನು ವಾಪಸ್ಸು ಪಡೆದುಕೊಂಡ. ಆತ ಇದೇ ವೃತ್ತಿಯಲ್ಲೇ ಮುಂದುವರಿಯಬಹುದಿತ್ತು. ಆದ್ರೆ ಅವನ ಮನಸ್ಸಿಗೆ ಖುಷಿಕೊಡುವ ಫೋಟೊ ತೆಗೆಯಬೇಕಲ್ಲ. ಅದಕ್ಕಾಗಿ ಮತ್ತೊಂದು ಹೊಸದಾಗ ಕ್ಯಾಮೆರವನ್ನು ಕೊಂಡುಕೊಂಡ. ಮೊದಲ ಕ್ಯಾಮೆರ ಹಣ ಸಂಪಾದನೆಗಾದರೆ ಹೊಸದಾಗಿ ಕೊಂಡುಕೊಂಡ ಅತ್ಯುತ್ತಮ ತಾಂತ್ರಿಕತೆಯ ಕ್ಯಾಮೆರ ತನ್ನ ಇಷ್ಟದ ಫೋಟೊ ತೆಗೆಯಲು ಇಟ್ಟುಕೊಂಡಿದ್ದ.

ಎಲ್ಲಾ ಸರಿ ತನ್ನ ಇಷ್ಟದ ಪೋಟೋ ಯಾವುದು? ಈ ವಿಚಾರದಲ್ಲಿ ಎಲ್ಲರಿಗೂ ಅವರದ್ದೇ ಆದ ಆಸೆ ಆಕಾಂಕ್ಷೆಗಳಿರುತ್ತವೆ. ಆದ್ರೆ ಅದರಿಂದ ಪ್ರಯೋಜನವೇನು? ಅಂತ ಪ್ರಶ್ನಿಸಿಕೊಂಡಾಗ ಉತ್ತರವೇನೆಂದರೆ ಖಂಡಿತ ಫೋಟೊ ತೆಗೆದವನ ಮನಸ್ಸಿಗೆ ಸಂತೋಷವಾಗುವುದು. ಆತನ ಮನಸ್ಸಿಗೆ ಸಂತೋಷವಾದರೆ ಸಾಕಾ, ಅದನ್ನು ಮನೆಯವರು, ಗೆಳೆಯರು ಮೆಚ್ಚಬೇಕಲ್ಲವೇ..ಈ ಹಂತವನ್ನು ಆಗಲೇ ದಾಟಿದ್ದರಿಂದ ಇದೆಲ್ಲವನ್ನು ಮೀರಿ ಆತನ ಪೋಟೋಗ್ರಫಿಯನ್ನು ಯಾರು ಮೆಚ್ಚಬಹುದು ಅಂತ ಪ್ರಶ್ನಿಸಿಕೊಂಡಾಗ ಅವನಿಗೆ ಹೊಳೆದಿದ್ದು ಕಾಣದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಇತರ ಅನುಭವಿ ಛಾಯಾಗ್ರಾಹಕರು ನನ್ನ ಫೋಟೊಗ್ರಫಿಯನ್ನು ಗುರುತಿಸಬೇಕು ಎನ್ನುವ ಆಸೆ ಆತನಿಗೆ ಉಂಟಾಯಿತು. ಅದ್ಯಾಕೆ ಈ ಆಸೆಯುಂಟಾಯಿತೆನ್ನುವುದಕ್ಕೆ ಅದರದೇ ಆದ ಕಾರಣವಿದೆ. ಆತ ನಿತ್ಯ ಪತ್ರಿಕೆಗಳನ್ನು ಓದುವಾಗ ನೂರಾರು ಸಾವಿರಾರು ಕಿಲೋಮೀಟರ್ ದೂರದ ಊರು, ನಗರಗಳಲ್ಲಿ ನಡೆಯುವ ಫೋಟೊಗ್ರಫಿ ಸ್ಪರ್ಧೆಗಳು ತಿಳಿಯುತ್ತವಲ್ಲ.. ಆಗ ಆ ಸ್ಪರ್ಧೆಗೆ ಕಳಿಸಬೇಕೆನ್ನುವ ಆಸೆ ಸಹಜವಾಗಿ ಆತನಲ್ಲಿ ಉಂಟಾಗುತ್ತಿತ್ತು. ತಾನು ಈ ಮೊದಲು ಖುಷಿಗಾಗಿ ತೆಗೆದ ಹತ್ತಾರು ಪೋಟೊಗಳಲ್ಲಿ ಚೆನ್ನಾಗಿದೆ ಅನ್ನಿಸಿದನ್ನು ಈ ಸ್ಪರ್ಧೆಗೆ ಕಳಿಸತೊಡಗಿದ. ಉತ್ಸಾಹದಿಂದ ಕಳಿಸಿದ್ದ ಹತ್ತಾರು ಪೋಟೋಗಳಲ್ಲಿ ಯಾವುದೂ ಪ್ರದರ್ಶನಕ್ಕೆ ಆಯ್ಕೆಯಾಗಲಿಲ್ಲ! ಐದಾರು ಸ್ಪರ್ಧೆಗಳಿಗೆ ಕಳಿಸಿದರೂ ಇದೇ ಪಲಿತಾಂಶ ಬಂದಾಗ ಭ್ರಮ ನಿರಸನ ಉಂಟಾಯಿತು. ಬೇರೆಯವರಾಗಿದ್ದರೆ ಈ ಇದು ನಮಗೆ ಆಗಿಬರುವುದಿಲ್ಲವೆಂದು ಕೈಬಿಟ್ಟು ಬೇರೆ ಕೆಲಸದಲ್ಲಿ ತೊಡಗಿಕೊಂಡು ಇದನ್ನು ಮರೆತುಬಿಡುತ್ತಿದ್ದರೋ ಏನೋ. ಆದ್ರೆ ಈತನಲ್ಲಿ ಅದು ಒಂದು ಫ್ಯಾಶನ್ ಆಗಿಬಿಟ್ಟಿತ್ತಲ್ಲ…ತನ್ನ ವಿಫಲತೆ ಕಾರಣಗಳೇನು ಅಂತ ಪ್ರಶ್ನಿಸಿಕೊಂಡಾಗ ಅವನಿಗೆ ಆ ಕ್ಷಣಕ್ಕೆ ಉತ್ತರ ಸಿಗಲಿಲ್ಲ. ತಾನು ತೆಗೆದ ಹತ್ತಾರು ಫೋಟೊಗಳನ್ನು ಅನೇಕ ಹಿರಿಯ ಛಾಯಾಗ್ರಾಹಕರ ಬಳಿ ತೋರಿಸಿದರೂ ಅವರಿಂದ ಮೆಚ್ಚುಗೆ ಸಿಗುತ್ತಿದ್ದರೂ ಸ್ಪರ್ಧೆಯಲ್ಲಿ ಯಾಕೆ ಇವು ಯಶಸ್ವಿಯಾಗುತ್ತಿಲ್ಲವೆಂದು ಗೊತ್ತಾಗುತ್ತಿರಲಿಲ್ಲ. ಅನೇಕ ಹಿರಿಯ ಛಾಯಾಗ್ರಾಹಕರ ಬಳಿ ನನಗೆ ಪೋಟೋಗ್ರಫಿ ಕಲಿಸಿಕೊಡಿ ಅಂತ ಅಂಗಲಾಚಿದಾಗ ಇವನ ಪರಿಸ್ಥಿತಿಯನ್ನು ನೋಡಿ ತಮ್ಮ ಫೋಟೊಗ್ರಫಿ ಸಮಯದಲ್ಲಿ ಇವನನ್ನು ಜೊತೆಯಲ್ಲಿ ಕರೆದುಕೊಂಡು ಹೋದರು. ಅವರೊಂದಿಗೆ ಇದ್ದ ಸಮಯದಲ್ಲಿ ಈಗ ತೆಗೆದ ಚಿತ್ರಗಳು ನೋಡಲು ತುಂಬಾ ಚೆನ್ನಾಗಿ ಇದ್ದು ಅದ್ಬುತವಾಗಿದ್ದವು. ಇನ್ನೇನು ಮುಂದೆ ನನ್ನ ಚಿತ್ರಗಳು ಎಲ್ಲಾ ಸ್ಪರ್ಧೆಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗುತ್ತವೆ, ಮೆಚ್ಚುಗೆ ಪಡೆಯುತ್ತವೆ, ಪ್ರಶಸ್ಥಿಗಳಿಸುತ್ತವೆ ಎಂದು ಸಂಭ್ರಮಿಸಿದ್ದ ಈತನಿಗೆ ಕೆಲವೇ ದಿನಗಳಲ್ಲಿ ಎಲ್ಲಾ ವಿಫಲವಾಗಿ ನಿರಾಸೆಯಾಗಿತ್ತು. ಗುರುಗಳ ಹಾಗೆ ತಿಳಿದು ಹಿರಿಯ ಛಾಯಾಗ್ರಾಹಕರ ಜೊತೆ ಹೋಗಿ ಫೋಟೊಗ್ರಫಿಯನ್ನು ಮಾಡಿದರೂ ಆ ಫೋಟೊಗಳು ಏನು ಪಲಿತಾಂಶವನ್ನು ಕೊಡಲಿಲ್ಲವಲ್ಲ ಏಕೆ? ಪ್ರಶ್ನಿಸಿಕೊಂಡಾಗ ಉತ್ತರ ಸಿಗಲಿಲ್ಲ. ಹೋಗಲಿ ಅವರ ಸಹವಾಸವೇ ಬೇಡ ಎಂದುಕೊಂಡು ನನ್ನಷ್ಟೆ ಅನುಭವವಿರುವ ಗೆಳೆಯರ ಜೊತೆ ಫೋಟೊ ತೆಗೆಯಲು ಹೋದರೆ ಎಲ್ಲರೂ ಹೊಸಬರರಾದ್ದರಿಂದ ಏನಾದರೂ ಹೊಸತು ಸಿಗಬಹುದು ಅಂತ ಗೆಳೆಯರ ಜೊತೆ ಫೋಟೋಗ್ರಫಿ ಮಾಡಲು ಹೊರಟ. ಇಲ್ಲೂ ಕೂಡ ಪಲಿತಾಂಶ ವಿಫಲವಾಗಿತ್ತು.

ಇಷ್ಟೆಲ್ಲಾ ವಿಫಲತೆ ಕಂಡಮೇಲೆ ನಾನು ಪೋಟೊಗ್ರಫಿ ಬಿಡಬೇಕು ಅಂತ ಆತ ನಿರ್ಧರಿಸಬೇಕೆನ್ನುವಷ್ಟರಲ್ಲಿ ಯಾರೋ ಆತನ ಹಿತೈಸಿಗಳು ಫೋಟೊಗ್ರಫಿ ಸಾಧನೆ ಮಾಡಬೇಕೆಂದರೆ ಮೊದಲಿಗೆ ಕ್ಯಾಮೆರವನ್ನು ಹಿಡಿಯುವುದಲ್ಲ. ಅದನ್ನು ಇಷ್ಟು ದಿನ ಹಿಡಿದು ತೆಗೆದ ಫೋಟೋಗಳ ಪಲಿತಾಂಶ ನಿನಗೆ ಗೊತ್ತಿದೆ. ನಿನ್ನ ಎಲ್ಲಾ ಕ್ಯಾಮೆರಗಳನ್ನು ಬೀರುವಿನಲ್ಲಿ ಬಂದಿಸಿಡು. ನಾನು ಒಂದು ವಿಳಾಸವನ್ನು ಕೊಡುತ್ತೇನೆ. ಅಲ್ಲಿ ಹೋಗು ಅದೊಂದು ಫೋಟೊಗ್ರಫಿ ಕ್ಲಬ್. ಅದಕ್ಕೆ ಮೆಂಬರ್ ಆಗಿಬಿಡು. ನಂತರ ಅಲ್ಲಿ ನಡೆಯುವ ಕಾರ್ಯಕ್ರಮವನ್ನು ವೀಕ್ಷಿಸು. ಅಲ್ಲಿ ತರಾವರಿ ಕಾರ್ಯಕ್ರಮಗಳು ಪೋಟೊಗ್ರಫಿ ಪ್ರದರ್ಶನಗಳು, ಸಂವಾದಗಳು ನಡೆಯುತ್ತಿರುತ್ತವೆ. ಮೊದಲು ಅಲ್ಲಿಗೆ ಹೋಗು ಅಂತ ಆತನನ್ನು ಕಳಿಸಿಕೊಟ್ಟರು.

ಆತ ಅಲ್ಲಿಗೆ ಹೋಗಿ ಸದಸ್ಯನಾದ. ಮುಂದೆ ಅಲ್ಲಿ ನಡೆಯವ ಕಾರ್ಯಕ್ರಮಗಳು, ಸ್ಪರ್ಧೆಗಳು, ಸಂವಾದಗಳು, ಚರ್ಚೆಗಳು, ಅಲ್ಲಿ ಸಿಗುವ ಕಿರಿಯ ಮತ್ತು ಹಿರಿಯ ಛಾಯಾಗ್ರಾಹಕರು, ಕೆಲವೊಮ್ಮೆ ಪ್ರಖ್ಯಾತ ಛಾಯಾಗ್ರಾಹಕರ ಬೇಟಿ, ಅವರ ಪೋಟೊಗಳನ್ನು ನೋಡುವ ಅವಕಾಶ.. ಹೀಗೆ ದಿನಗಳು ಕಳೆಯುತ್ತಿದ್ದವು. ಹೀಗೆ ಈತ ಸುಮಾರು ಎರಡು ವರ್ಷ ಆ ಕ್ಲಬ್ಬಿಗೆ ಸುಮ್ಮನೇ ಹೋಗಿಬರುತ್ತಿದ್ದ. ಈ ಎರಡು ವರ್ಷಗಳಲ್ಲಿ ಆತ ಒಮ್ಮೆಯೂ ಕ್ಯಾಮೆರವನ್ನು ತನ್ನ ಬೀರುವಿನಿಂದ ಹೊರತೆಗೆದಿರಲಿಲ್ಲ. ನಡುವೆ ಹತ್ತಾರು ಕಾರ್ಯಕ್ರಮಗಳಲ್ಲಿ ಪ್ರಚೋದನೆಯುಂಟಾಗಿ ಈತ ಅಲ್ಲಿ ಕಲಿಯುತ್ತಿರುವ ಹತ್ತಾರು ವಿಚಾರಗಳಲ್ಲಿ ಒಂದನ್ನು ಆಯ್ಕೆಮಾಡಿಕೊಂಡು ಪೋಟೊಗ್ರಫಿ ಪ್ರಾರಂಬಿಸಬಹುದಿತ್ತು. ಆದ್ರೆ ಈತ ಮಾಡಲಿಲ್ಲ. ಏಕೆಂದರೆ ಈ ಎರಡು ವರ್ಷಗಲ್ಲಿ ನೂರಾರು ಪ್ರಖ್ಯಾತ ಹಿರಿಯ ಛಾಯಾಗ್ರಾಹಕರು ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದರೂ ತನಗೆ ಇಷ್ಟವಾದ ವಿಚಾರ ಯಾವುದು ಮತ್ತು ಅದರಿಂದ ತನಗೆ ಖುಷಿಯಾಗುತ್ತದೆಯೇ? ಮತ್ತು ಈ ವಿಚಾರವನ್ನು ಆಯ್ಕೆಮಾಡಿಕೊಂಡರೆ ನನಗೆ ಸಾಧನೆ ಮಾಡಲು ಅವಕಾಶವಿದೆಯೇ ಇತ್ಯಾದಿ ವಿಚಾರಗಳನ್ನು ತನ್ನಳೊಗೆ ಅವಲೋಕಿಸಿಕೊಳ್ಳಲು ಆತ ಎರಡು ವರ್ಷಗಳನ್ನು ತೆಗೆದುಕೊಂಡಿದ್ದ.

ಕ್ಯಾಮೆರದಲ್ಲಿ ಫೋಟೊ ತೆಗೆಯುವ ಅನುಭವ ಮೊದಲಾಗಿ ಪಡೆದ ಅನುಭವಕ್ಕಿಂತ ಕ್ಯಾಮೆರವಿಲ್ಲದೇ ಪಡೆದ ಈ ಎರಡು ವರ್ಷದ ಅನುಭವ ಅವನಿಗೆ ಈ ವಿಚಾರದಲ್ಲಿ ಒಂದು ಸ್ಪಷ್ಟತೆಯನ್ನು ಮೂಡಿಸಿತ್ತು. ತನ್ನ ಇಷ್ಟದ ಫೋಟೊಗ್ರಫಿ ಯಾವುದು ಅಂತ ಅವನಿಗೆ ಖಚಿತವಾಗಿ ಗೊತ್ತಾಗಿಬಿಟ್ಟಿತ್ತು. ಈಗ ತನ್ನಲಿರುವ ಕ್ಯಾಮೆರ ಉಪಕರಣಗಳು ಹೊಂದಿಕೊಳ್ಳುತ್ತವೆಯೇ ಅಂತ ಪರೀಕ್ಷಿಸಿಕೊಂಡ. ಕೆಲವು ಹೊಂದಿಕೆಯಾದರೆ ಮತ್ತೆ ಕೆಲವು ಉಪಕರಣಗಳು ಹೊಂದಿಕೆಯಾಗಲಿಲ್ಲ. ಮನೆಯ ಜವಾಬ್ದಾರಿ, ಫೋಟೊಗ್ರಫಿ ಕಲಿಕೆಯ ಜೊತೆಗೆ ಸ್ವಲ್ಪ ಹಣ ಉಳಿಕೆಯ ಹವ್ಯಾಸವನ್ನು ಮಾಡಿಕೊಂಡಿದ್ದ ಆತನಿಗೆ ಈಗ ಹೊಸ ಕ್ಯಾಮೆರ ಉಪಕರಣಗಳನ್ನು ಕೊಂಡುಕೊಳ್ಳುವುದು ಆತನಿಗೆ ದೊಡ್ಡದೆನಿಸಲಿಲ್ಲ. ಮುಂದೆ ತನ್ನದೇ ವಿಚಾರ ಅದಕ್ಕೆ ತಕ್ಕಂತೆ ಪಡೆದ ಅನುಭವ ಮತ್ತು ಹೊಂದಿಸಿಕೊಂಡ ಕ್ಯಾಮೆರಗಳೊಂದಿಗೆ ಫೋಟೊಗ್ರಫಿ ಮಾಡಲು ಪ್ರಾರಂಭಿಸಿದನಲ್ಲ. ಆತ ಮಾಡುವ ಪ್ರತಿ ಛಾಯಾಗ್ರಾಹಣವೂ ಸಂತೋಷಕೊಡುತ್ತಿತ್ತು. ಸ್ಪರ್ಧೆಗಳಿಗೆ ಕಳಿಸಿದಾಗ ಖಚಿತವಾದ ಪ್ರಶಸ್ತಿ ದೊರೆತು ಮತ್ತಷ್ಟು ಫೋಟೊಗ್ರಫಿಗೆ ಪ್ರೋತ್ಸಾಹ ದೊರೆತಂತಾಗುತ್ತಿತ್ತು.

ಈಗ ಹೇಳಿ ಆತ ತನಗೆ ತಾನೆ ಗುರುವಾಗಿ ಕಲಿತು ಸಾಧಿಸಿದ ಸಾಧನೆ ಎಲ್ಲರಿಗೂ ಅನುಕರಣೀಯ ಅನ್ನಿಸುವುದಿಲ್ಲವೇ? ಈಗ ಕ್ಯಾಮೆರ ಮೊದಲೋ ಅಥವ ನೀವು ಆಯ್ಕೆ ಮಾಡಿಕೊಳ್ಳುವ ಪೋಟೋಗ್ರಫಿ ಮೊದಲೋ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆಯೆಂದುಕೊಳ್ಳುತ್ತೇನೆ.

ಇಷ್ಟು ಕಲಿತ ಮೇಲೆ ಮುಂದಿನದಲ್ಲವೆ ಮಾರಿಹಬ್ಬ! ಇದುವರೆಗೂ ನೀವು ಕಲಿತಿದ್ದು ಮನಸ್ಸು ಮತ್ತು ಬುದ್ದಿವಂತಿಕೆಗೆ ಸಂಭಂದಿಸಿದ್ದು. ಇನ್ನು ಅದನ್ನು ಕಾರ್ಯಗತಗೊಳಿಸಲು ನೀವು ಆಖಾಡಕ್ಕೆ ಇಳಿಯಬೇಕಾಗುತ್ತದೆ. ಅಂದರೆ ನೀವು ನೇರವಾಗಿ ಫೋಟೊಗ್ರಫಿ ಮಾಡಲು ಹೊರಪ್ರಪಂಚಕ್ಕೆ ಬರಬೇಕಾಗುತ್ತದೆ. ಅದಕ್ಕಾಗಿ ನೀವು ಎಂಥ ಜಾಗದಲ್ಲಿ ಫೋಟೊಗ್ರಫಿ ಮಾಡಬೇಕು. ಆ ಸಮಯದಲ್ಲಿ ಎದುರಾಗುವ ಸವಾಲುಗಳೇನು? ಇನ್ನೂ ಸ್ವಾರಸ್ಯಕರ ವಿಚಾರಗಳು ಮುಂದಿನಭಾಗದಲ್ಲಿ.

ಚಿತ್ರಗಳು : ಶಿವು.ಕೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments