ಸಿಂಗಂ ವಿವಾದ – ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳು..
-ವಸಂತ್ ಶೆಟ್ಟಿ
ಸಿಂಗಂ ಅನ್ನುವ ನಕಲು ಚಿತ್ರದಲ್ಲಿ ಕನ್ನಡಿಗರನ್ನು ನಾಯಿಗಳೆಂದು ಜರಿಯುವ ಡೈಲಾಗ್ನಿಂದ ಕರ್ನಾಟಕದಲ್ಲಿ ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿದ್ದು ಕಂಡೆ. ಕರ್ನಾಟಕದಲ್ಲಿ ವ್ಯಕ್ತವಾದ ಭಾರಿ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಿಂಗಂನಲ್ಲಿ ನಟಿಸಿರುವ ಕನ್ನಡ ಮೂಲದ ನಟ ಮಹಾಶಯರೊಬ್ಬರು “ಅದೇನು ದೊಡ್ಡ ವಿಷಯವೇ ಅಲ್ಲ. ಇದರ ವಿರೋಧಕ್ಕೆ ಅರ್ಥವಿಲ್ಲ” ಅಂದರು. ಘಟನೆ ಚಿಕ್ಕದೋ, ದೊಡ್ಡದೋ ಅನ್ನುವುದಕ್ಕಿಂತ ಇಂತಹ ಘಟನೆಯ ಹಿಂದೆ ಮನಸ್ಸಲ್ಲಿ ಏಳುವ ಕೆಲವು ಪ್ರಶ್ನೆಗಳು ಹಲವಾರು.
- ಇದೊಂದು ಚಿಕ್ಕ ಘಟನೆ ಅನ್ನುವ ಪ್ರಕಾಶ ರೈ ಅವರಿಗೆ ಕರ್ನಾಟಕ-ಮಹಾರಾಷ್ಟ್ರದ ನಡುವೆ ದಶಕಗಳಿಂದ ಗಡಿ ವಿವಾದವಿರುವುದು, ಅದು ಎರಡೂ ಕಡೆಯವರಿಗೆ ಭಾವನಾತ್ಮಕ ವಿಷಯವಾಗಿರುವುದರ ಅರಿವಿಲ್ಲವೇ? ಅರಿವಿದ್ದೂ ಇಂತಹದೊಂದು ಡೈಲಾಗ್ ಪ್ರಯೋಗ ಮಾಡಿರುವುದು ಪ್ರಚೋದಿಸಿ ಮರಾಠಿಗರನ್ನು ಈ ಹಿಂದಿ ಚಿತ್ರದತ್ತ ಸೆಳೆಯುವ playing to the gallery ಅನ್ನುವ ಮನಸ್ಥಿತಿಯಲ್ಲವೇ? ಇಲ್ಲದಿದ್ದರೆ ಚಿತ್ರದಲ್ಲಿ ಕರ್ನಾಟಕದಿಂದ ಸಾವಿರ ಜನರನ್ನು ಕರೆ ತರುವೆ ಎಂದು ಇವರು ಅನ್ನುವುದು, ಅದಕ್ಕೆ ಎದೆ ತಟ್ಟಿ ನಾನು ಮರಾಠ, ನಾನು ಮರಾಠ ಎಂದು ಕೂಗುತ್ತ ಕನ್ನಡಿಗರನ್ನು ನಾಯಿಗಳು ಎಂದು ಹೀರೊ ಬೊಬ್ಬಿರಿಯವುದು ಏನನ್ನು ತೋರಿಸುತ್ತದೆ? Artistic freedom ಹೆಸರಿನಲ್ಲಿ ಯಾವ ಅವಮಾನ ಮಾಡಿದರೂ, ಏನು ಮಾತನಾಡಿದರೂ ಸಹಿಸಿಕೊಳ್ಳಬೇಕೆ? ಅದನ್ನು ಪ್ರಶ್ನಿಸಿ ಬೀದಿಗಿಳಿಯುವುದು ಸಣ್ಣತನವೇ? ಸಂಕುಚಿತ ಮನೋಭಾವನೆಯೇ? ಪ್ರಕಾಶ್ ರೈಗೇನು ಬಿಡಿ, ಇವತ್ತು ಇಲ್ಲಿ ಕನ್ನಡಿಗ, ಅಲ್ಲಿ ತಮಿಳಿಗ, ಇನ್ನೆಲ್ಲೋ ತೆಲುಗ, ಮತ್ತೆಲ್ಲೋ ಇಂಡಿಯನ್ ಅಂದುಕೊಂಡು ತಮ್ಮ ಕೆಲಸ ಮಾಡ್ಕೊಂಡು ಮುಂದಕ್ಕೊಗ್ತಾರೆ. ಎಷ್ಟೇ ಅಂದರೂ ಕಲಾವಿದರಿಗ ಭಾಶೆಯ ಹಂಗಿಲ್ಲವಲ್ಲವೇ? 🙂
- ಇಂತದೇ ಡೈಲಾಗ್ ಪ್ರಕಾಶ ರೈ ಕೈಯಲ್ಲಿ ಮರಾಠರ ವಿರುದ್ದ ಉದುರಿಸುವ ಧೈರ್ಯ ನಿರ್ದೇಶಕರಿಗೆದೆಯೇ? ಅಂತಹ ಪ್ರಯತ್ನ ಮಾಡಿದ್ದಲ್ಲಿ ಮಹಾರಾಷ್ಟ್ರ ಇಷ್ಟೊತ್ತಿಗೆ ಹೊತ್ತಿ ಉರಿಯುತ್ತಿತ್ತೆನೋ..ಇದು ಕರ್ನಾಟಕ ನೋಡಿ, ಬಿಟ್ಟಿ ಬಿದ್ದಿರುವ ಊರು, ಜನರು. ಈ ರೀತಿ ಬೆಂಕಿ ಹಚ್ಚೋ ಯಾವ ಕೆಲಸ ಮಾಡಿದ್ರೂ ನಡೆಯುತ್ತೆ ಅನ್ನೋದು ಇದರ ಹಿಂದಿನ ನಂಬಿಕೆಯೇ?
- ಕಂಠಿ ಅನ್ನುವ ಕನ್ನಡ ಚಿತ್ರದಲ್ಲಿ ಮರಾಠಿಗರ ವಿರುದ್ಧ ಡೈಲಾಗ್ ಇದೆ ಅನ್ನುವ ಕಾರಣವೊಡ್ಡಿ ಎರಡೆರಡು ತಿಂಗಳು ಚಿತ್ರದ ಬಿಡುಗಡೆಯೇ ಆಗದಂತೆ ಮುಂದೂಡಿದ ಸೆನ್ಸಾರ್ ಮಂಡಳಿ ಈ ಚಿತ್ರದಲ್ಲಿ ಇಂತಹದೊಂದು ನೇರಾನೇರ ಪ್ರಚೋದನಕಾರಿ ಡೈಲಾಗ್ ಇದ್ದರೂ ಚಿತ್ರವನ್ನು ಸರ್ಟಿಫೈ ಮಾಡಿದ್ದು ಯಾಕೆ? ಹಿಂದಿ ಚಿತ್ರಕ್ಕೊಂದು, ಕನ್ನಡ ಚಿತ್ರಕ್ಕೊಂದು ಅಂತೇನಾದರೂ ನಿಯಮಗಳಿವೆಯಾ?
- ತಮಿಳಿನಲ್ಲಿ ಮೊದಲು ಬಂದು, ಆಮೇಲೆ ಕನ್ನಡದಲ್ಲಿ ಕೆಂಪೇಗೌಡನಾಗಿ ಬಂದ ಈ ಚಿತ್ರಕ್ಕೆ ಕರ್ನಾಟಕದಲ್ಲಿ ಸಿಕ್ಕಿದ್ದು ಬರೋಬರಿ 27 ಚಿತ್ರಮಂದಿರಗಳು. ನಿಯಮಾನುಸಾರ 21 ಚಿತ್ರಮಂದಿರಗಳಲ್ಲಿ ಮಾತ್ರವೇ ಪರಭಾಷಾ ಚಿತ್ರ ಬಿಡುಗಡೆಯಾಗಬೇಕು. ಇಲ್ಲಿ ಅದನ್ನು ಮೀರಿ ಬಿಡುಗಡೆ ಮಾಡಿದ ರಿಲಾಯನ್ಸ್ ಸಂಸ್ಥೆಯನ್ನು ಪ್ರಶ್ನಿಸಬೇಕಾದ KFCC ಏನ್ ನಿದ್ದೆ ಮಾಡ್ತಿದೆಯೇ? ಉದ್ಯಮದ ಏಳಿಗೆ, ಉಳಿವಿನ ಬಗ್ಗೆ ಕೆಲಸ ಮಾಡಬೇಕಾದ ಇವರ ಗಮನ ಏನಿದ್ದರೂ ರಿಮೇಕ್ ಚಿತ್ರಕ್ಕೂ ಸಬ್ಸಿಡಿ ಕೊಡಿ, ಅಸಂವಿಧಾನಿಕವಾಗಿ ಡಬ್ಬಿಂಗ್ ನಿಷೇಧಿಸಿ ಅನ್ನುವಂತಹ ಕೆಲಸಕ್ಕೆ ಬಾರದ ಬೇಡಿಕೆಗಳ ಬಗ್ಗೆ ಮಾತ್ರವೇನು?
ಇಂತದ್ದೆಲ್ಲ ಆದಾಗ ನಾವು ಸುಮ್ನೆ ಇದ್ರೆ ಇಂತದ್ದಕ್ಕೆಲ್ಲ ಕೊನೆಯೇ ಇರಲ್ಲ. ನಮ್ಮನ್ನೇ ಆಡ್ಕೊಂಡು, ನಮ್ ನಾಡಲ್ಲೇ ದಂಡಿಯಾಗಿ ಚಿತ್ರ ಬಿಡುಗಡೆ ಮಾಡಿ ನಮ್ ಕಾಸೇ ಬಾಚ್ಕೊಂಡು ಹೋಗೊ ಇಂತಹ ಹೇರಿಕೆಯ ಚಿತ್ರಗಳನ್ನು ನಾವೇ ಕೈಯಾರೆ ನೋಡಿ ಬೆಂಬಲಿಸಬೇಕೇ? ಆಯ್ಕೆ ನಮ್ ನಮ್ ಕೈಯಲ್ಲೇ ಇದೆ.





ಶೋಕಿ ಜೀವನ ಮತ್ತು ಅದಕ್ಕಾಗಿ ಹಣ ಸಂಪಾದನೆ, ಇವನ್ನೇ ಜೀವನದ ಮುಖ್ಯ ಉದ್ದೇಶವನ್ನಾಗಿಸಿಕೊಂಡು, ಕಲಾವಿದರೆನ್ನುವ ಮುಖವಾಡ ಹೊತ್ತು ಭಾಷೆಗೆ ಮತ್ತು ನಾಡಿಗೆ ಸೇವೆಗೈಯುತ್ತಿದ್ದೇವೆ ಅನ್ನುವ ಭ್ರಮೆಲ್ಲಿರುವ, ಚಿತ್ರರಂಗದಲ್ಲಿ ಸದ್ಯಕ್ಕೆ ಇರುವ ಹೆಚ್ಚಿನವರ ಬಗ್ಗೆ ಏನು ಹೇಳಲು ಸಾಧ್ಯ?
ಊಟದ ತಟ್ಟೆಯಲ್ಲಿ ಸಿಕ್ಕ ಕಲ್ಲನ್ನು ತೆಗೆದು ಬಿಸಾಕುವಂತೆ, ಖಾಸಗಿ ಸಂಬಂಧಗಳನ್ನು ಮುರಿದು, ಮರೆತು ಮುಂದುವರೆಯುವ ಈ ಜನಾಂಗದಿಂದ ನಾಡಿನ ಬಗ್ಗೆ ಅಥವಾ ಭಾಷೆಯ ಬಗ್ಗೆ ಗೌರವವನ್ನು ನಿರೀಕ್ಷಿಸುವುದೇ ನಮ್ಮ ದೊಡ್ಡ ತಪ್ಪು ಎಂದು ನನ್ನ ಅನಿಸಿಕೆ. ಇವರಿಗೆಲ್ಲಾ ಸರಿಯಾದ ಪಾಠ ಕಲಿಸಬೇಕಾದ ಆವಶ್ಯಕತೆ ನಿಜವಾಗಿಯೂ ಇದೆ. ಲೇಖನದಲ್ಲಿನ ಆಶಯಗಳಿಗೆ ನನ್ನ ಸಹಮತವಿದೆ.
ಯಂತ್ರನ್ ಚಿತ್ರದ ಸಂದರ್ಭದಲ್ಲಿಯೂ ಹೀಗೆಯೇ ಆಯಿತು, ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರತಿಗಳು ಬಿಡುಗಡೆಯಾಗಿದ್ದುವು. ಚಲನಚಿತ್ರ ವಾಣಿಜ್ಯ ಮಂಡಳಿ ಇರುವುದು ಹೆಸರಿಗೆ ಮಾತ್ರವೇ?
ಕಲಾವಿದರಿಗೆ ಭಾಷೆಯ ಹಂಗಿಲ್ಲ ಎನ್ನುವಾಗಲೇ ಇನ್ನೊಂದು ಸಮಸ್ಯೆಯೂ ಇದೆ. ಕನ್ನಡದ ಒಗ್ಗಟ್ಟನ್ನು ನಾವು ಕಂಡುಕೊಂಡಿರುವ ಬಗೆ ಮಲೆಯಾಳಿಗಳೋ ತಮಿೞರೋ ಕಂಡುಕೊಂಡಿರುವ ರೀತಿಯದ್ದಲ್ಲ. ಇತರ ರಾಜ್ಯಗಳಲ್ಲಿ ಆಗಿರುವಂತೆ ಕರ್ನಾಟಕದಲ್ಲಿ ಭಾಷೆಯೆಂಬುದು ಒಗ್ಗಟ್ಟಿನ ಸಾಧನವಾಗಲಿಲ್ಲ. ಕಲಾವಿದರು/ ನಟರು/ ರಾಜಕಾರಣಿಗಳು ಭಾಷೆಯ ಹಂಗಿಲ್ಲದಂತೆ ವರ್ತಿಸಲು ಇದುವೇ ಕಾರಣ.
ಆದರೆ ಈಗ ಕರ್ನಾಟಕದಲ್ಲಿ ಇರುವಂಥ ರೀತಿ ಒಂದು ಮಾದರಿಯಾಗಬಾರದು, ಭಾಷೆ ಒಗ್ಗಟ್ಟಿನ ಸಾಧನವಾಗಬೇಕು. ರಾಜಕೀಯದಲ್ಲಿ ಭಾಷೆಯನ್ನು ನುಸುಳಿಸಬಾರದು. ಎಲ್ಲಾ ರಾಜಕೀಯ ಪಕ್ಷಗಳ ಭಾಷೆ ಒಂದೇ ಆಗಬೇಕು. ಹಾಗೆಂದರೆ ಎಲ್ಲಾ ರಾಜಕೀಯ ಪಕ್ಷಗಳು ಭಾಷೆಯ ವಿಷಯದಲ್ಲಿ ಒಂದು ಅಭಿಪ್ರಾಯವನ್ನೇ ಹೊಂದಿರಬೇಕು.
ಸಹವರ್ತಿಯೊಬ್ಬನ ಮಗಳನ್ನು ನಂಬಿಸಿ ಗರ್ಭಿಣಿ ಮಾಡಿ ತಲೆ ತಪ್ಪಿಸಿಕೊಂಡವನನ್ನು ಎಳೆದುಕೊಂಡು ಬಂದು ಆ ಹುಡುಗಿಯೊಡನೆ ಮದುವೆ ಮಾಡಿದರು. ಈ ಮನುಷ್ಯ ನೈತಿಕತೆಯ ಪಾಠ ಹೇಳುತ್ತಿದ್ದಾನೆ. ಈತನ ಬಗ್ಗೆ ಅಭಿಮಾನವೆಲ್ಲ ಹೊರಟುಹೋಯಿತು.
ಚಿತ್ರದ ಮುಖ್ಯ ಪಾತ್ರ : ಭಾಜಿರಾವ ಸಿಂಗಮ್ (ಅಜಯ ದೇವಗನ್) ಶಿವಗಢ್ ಪ್ರದೇಶದಲ್ಲಿ ಹುಟ್ಟಿದವ, ಪೊಲೀಸ್ ಇನಸ್ಪೆಕ್ಟರ
ವಿಲನ್ : ಜಯಕಾಂತ ಶಿಕ್ರೆ (ಪ್ರಕಾಶ ರೈ ) , ಗೂಂಡಾ ರಾಜಕಾರಣಿ, ಸುಲಿಗೆಕೋರ
ಎರಡು ಪಾತ್ರಗಳು ಮರಾಠಿಯವೆ. ಮೊದಲು ಮಹಾರಾಷ್ಟ್ರದಲ್ಲಿ ನಡೆಯುವ ಕಥೆ ನಂತರ ಭಾಜಿರಾವ ಸಿಂಗಮ್ ಗೋವಾಕ್ಕೆ ವರ್ಗ ಆಗುವುದರೊಂದಿಗೆ ಅಲ್ಲಿಗೆ ಶಿಫ್ಟ ಆಗುತ್ತದೆ.
—
ವಿವಾದಾತ್ಮಕ ದೃಶ್ಯದ ವಿಡಿಯೊ ನೋಡಿಲ್ಲದವರು ನೋಡಿ..’ಕನ್ನಡಿಗರು ನಾಯಿ’ ಎನ್ನುವ ಡಯಲಾಗ್ ಎಲ್ಲಿ ಬರುತ್ತದೆಯೆಂದು ಗಮನವಿಟ್ಟು ಕೇಳಿ..ಆಮೇಲೆ ನಿರ್ಧರಿಸಿ.