ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 11, 2011

2

ಮಿಂಚು ಮರೆಯಾದಾಗ…

‍ನಿಲುಮೆ ಮೂಲಕ

– ಅಬ್ದುಲ್ ಸತ್ತಾರ್,ಕೊಡಗು

ಅದು ನಿರ್ಜನವಾದ ಒಂಟಿ ಮನೆ. ಸುತ್ತಲೂ ಹಸಿರಲ್ಲದೆ ದೂರದಲ್ಲೊಂದು ಬೆಟ್ಟ, ಮನೆಯ ಬೇಲಿ ದಾಟಿದಾಗ ನೆಟ್ಟಗೆ ಹಾದು ಹೋಗಿರುವ ರೈಲು ಕಂಬಿ. ಮಳೆ ಸುರಿಸೀ ಸುರಿಸೀ ಸುಸ್ತಾಗಿದ್ದ ಮಳೆರಾಯ ಅಂದು ಸುಮ್ಮನಾಗಿದ್ದ. ಮರ – ಗಿಡ – ಬಳ್ಳಿಗಳೆಲ್ಲಾ ಕೊಟ್ಟಿಕ್ಕುತ್ತಾ ಹಾಯಾಗಿದ್ದವು. ತಂಪು ತಂಪು ಗಾಳಿ, ಚಿಲಿ-ಪಿಲಿ ನಾದ. ವಾತಾವರಣ ನೋಡಿ ಸಮಯವೆಷ್ಟೆಂದು ಅಂದಾಜಿಸುವುದು ಅಸಾಧ್ಯ.

ಆ ಮನೆಯಿಂದ ಇಬ್ಬರು ಹೊರಬಂದರು. ಹೆಣ್ಣು-ಗಂಡು ಅಥವಾ ಪ್ರೇಯಸಿ-ಪ್ರಿಯತಮ ಅಥವಾ ಗಂಡಾ-ಹೆಂಡಿರಿರಬಹುದು. ಅವಳಿಗೆ ತಲೆ ತುಂಬಾ, ಮೈ ತುಂಬಾ ಶಾಲು ಹೊದಿಸಲಾಗಿತ್ತು. ಒಂದು ಕಯ್ಯಲ್ಲಿ ಮಡಚಿದ ಕೊಡೆ, ಮತ್ತೊಂದು ಕಯ್ಯಿಂದ ಅವಳ ತೋಳನ್ನ ಬಳಸಿಕೊಂಡಿದ್ದ. ವಿಶಾಲ ಜಗುಲಿ ದಾಟಿ ಗೇಟು ಮುಚ್ಚಿ ರೈಲು ಕಂಬಿಯಲ್ಲಿ ನಡೆಯಲು ಶುರುವಾದರು.

“ಆಗೋಲ್ಲ ಕಣೋ, ತುಂಬಾ ಚಳಿಯಾಗ್ತಿದೆ”, “ಏನೂ ಆಗೋಲ್ಲ ಪುಟ್ಟ, ಇಷ್ಟು ದಿನ ಜ್ವರ ಹಿಡುಕೊಂಡು ಮಲಗಿದ್ದ ನಿನಗೆ ಇದೊಳ್ಳೆ ಬಿಡುವು ಕೊಡುತ್ತೆ, ಇನ್ನು ಸ್ವಲ್ಪೇ ಸ್ವಲ್ಪ ನಡೆಯೋಣ”ಅಂದ. ಗೊರ ಗೊರ ಕೆಮ್ಮಿದಳು. ಪೂರ್ತಿ ನಿಶ್ಯಕ್ತಳಾಗಿದ್ದಳು. ಕೊಡೆಯನ್ನ ಹಳಿಯಲ್ಲಿ ಬಿಟ್ಟು ಅವಳನ್ನ ಗಟ್ಟಿಯಾಗಿ ತಬ್ಬಿಕೊಂಡ. ಅವಳು ಅಳುಮುಖದೊಂದಿಗೆ ಅವನನ್ನ ದಿಟ್ಟಿಸಿದಳು. ಕಣ್ಣು ಕೆಂಪಾಗಿತ್ತು. ಅವನ ಕಣ್ಣೂ ಯಾಕೋ ಹನಿಗೂಡಿತು. ಸ್ವಲ್ಪ ಹೊತ್ತು ಹಾಗೇ….,

ಆಗಲೇ ಎಲ್ಲೊ ಅಡಗಿದ್ದ ಗುಡುಗೂ ಮಿಂಚೂ ಆರ್ಭಟಿಸಿತ್ತು. ದೂರದಿಂದ ಮಳೆಹನಿಗಳು ಅವರಿದ್ದಲ್ಲಿಗೇ ಓಡೋಡಿ ಬಂದವು. ಅಯ್ಯೋ ದೇವರೇ, ತುಂಬಾ ದೂರ ಬಂದಿದ್ದೀವಲ್ಲ ಎಂದೆನಿಸಿತವನಿಗೆ. ಕೊಡೆಯನ್ನ ತೋಳಿಗೆ ಸಿಗುಸಿ ಅವಳನ್ನ ಆನಿಸಿಕೊಂಡು ನಿಧಾನಕ್ಕೆ ನಡೆಯಲು ಶುರುವಾದ.

ಚಂಡೀ ಕೋಳಿಯಾಗಿದ್ದ ಅವಳನ್ನ ಸ್ನಾನ ಮಾಡಿಸಿ ಇದ್ದ ರಗ್ಗನ್ನೆಲ್ಲಾ ಹೊದಿಸಿ ಮಲಗಿಸಿದ್ದ. ಅವಳು ಅವಳದೇ ಶೂನ್ಯ ಲೋಕದಲ್ಲಿದ್ದಳು. ಚುರುಗುಡುತ್ತಿದ್ದ ಹೊಟ್ಟೆಗೆ, ಅವಳಿಗೆ ಏನೋ ಮಾಡಲು ಎಣ್ಣೆ ದೀಪ ಹೊತ್ತುಕೊಂಡು ಅಡುಗೆ ಮನೆಗೆ ನಡೆದ. ಏನೋ ಆತಂಕ, ದುಃಖ, ಆತುರದಲ್ಲಿ ಏನನ್ನೋ ಮಾಡಿ, ತಿಂದು, ತಿನ್ನಿಸಿ ಅವಳನ್ನ ತಬ್ಬಿಕೊಂಡು ಮಲಗಿದ. ದೀಪ ಆರಿತ್ತು, ಕತ್ತಲೆಯಾಗಿತ್ತು.

ಈಗವನಿಗೆ ಎಚ್ಚರಾಯಿತು. ಬಾಯಿ ಆಕಳಿಸಿ ಮೈ ಮುರಿದು ಅವಳನ್ನ ಕೂಗಿದ. ಉತ್ತರವಿಲ್ಲ. ಪಕ್ಕಕ್ಕೆ ಕೈ ಹಾಕಿ ತಡಕಾಡಿದ. ಅವಳಿರಲಿಲ್ಲ. ಬಾಗಿಲ ಸಂಧಿನಿಂದ ಬೆಳಗ್ಗಿನ ಬೆಳಕು ಪ್ರಕಾಶವಾಗಿ ಒಳಬಂದಿತ್ತು. ಅವಳನ್ನ ಕೂಗುತ್ತಾ ಕತ್ತಲಮನೆಯಿಂದ ಹೊರಬಂದ. ಅವನಿಗೇನೂ ಅರ್ಥವಾಗಲಿಲ್ಲ. ಗಾಬರಿಯಿಂದ ಜಗುಲಿದಾಟಿ ಗೇಟಿನವರೆಗೂ ಬಂದ. ಅನುಮಾನದೊಂದಿಗೆ ತಿರುಗಿ ನೋಡಿದ. ಒಣ ತರಗೆಲೆಗಳಮಧ್ಯೆ ತಾನು ನಡೆದುಬಂದ ಗುರುತು ಮಾತ್ರ ಕಂಡನು. ಅವಳನ್ನ ಕೂಗುತ್ತಾ ಮತ್ತೆ ಮನೆಯ ಒಳ ಓಡಿಹೋದ. ಒಳಗಿನಿಂದ ಘಾಟು ಬಾಸನೆ ಬರುತ್ತಿತ್ತು. ಹೆಂಚು ಒಡೆದು, ಕಿಟಕಿ ಮುರಿದು ಎಲ್ಲಿಂದೆಲ್ಲೆ ಸೂರ್ಯನ ಬೆಳಕು ಚೆಲ್ಲಾಡಿತ್ತು. ಅದು ಪಾಳು ಮನೆ ಎಂದು ಗೊತ್ತಾಯಿತವನಿಗೆ. ಮುಖ ಮುಟ್ಟಿಕೊಂಡ. ಗಡ್ಡ, ಮೀಸೆ, ಕೂದಲು ಬಿಟ್ಟು ಸಾಧುವಂತಾಗಿದ್ದ.

2 ಟಿಪ್ಪಣಿಗಳು Post a comment
  1. ರವಿ ಮೂರ್ನಾಡು,ಕ್ಯಾಮರೂನ್, ಮಧ್ಯ ಆಫ್ರೀಕಾ's avatar
    ರವಿ ಮೂರ್ನಾಡು,ಕ್ಯಾಮರೂನ್, ಮಧ್ಯ ಆಫ್ರೀಕಾ
    ಸೆಪ್ಟೆಂ 12 2011

    ವಿಶಿಷ್ಟವಾಗಿ ತನ್ನ ವಯಸ್ಸಿನ ಅಂತರವನ್ನು ಪದಗಳಲ್ಲಿ ಎಳೆದು ತೋರಣ ಕಟ್ಟುವ ಶೈಲಿಗೆ ನಾನು ಸಲಾಮು ಹಾಕುತ್ತೇನೆ.ಕನಸು ಎಲ್ಲರಿಗೂ ಸಹಜವಾಗಿ ಬೀಳುತ್ತದೆ. ಅದನ್ನು ನೆನಪಿಟ್ಟುಕೊಳ್ಳುವುದು ಅಷ್ಟೇ ಶ್ರೇಷ್ಠವಾದುದು ಅಂತ ಈ ಬರಹ ಓದಿದಾಗ ಆನಿಸಿತು. ಎಲ್ಲೋ ಸಿನಿಮಾ ನೋಡಿದ ರೀತಿ, ಅದರಲ್ಲಿ ಕಂಡುಕೊಂಡಿ ತನ್ನ ಅನುಭವವನ್ನು ತನ್ನದೇ ಎಂಬಂತೆ ವ್ಯಕ್ತಪಡಿಸಿದ ಹಾಗೆ ಭಾಸವಾಯಿತು. ಗಡ್ಡ, ಮೀಸೆ ಉದ್ದುದ್ದವಾಗಿ ಬೆಳೆದಿದೆ ಅಂತ ಗೊತ್ತಾದಗಲೇ ನಾನೂ ಕನಸಿನ ಲೋಕದಿಂದ ಒಂದು ವಿಷಣ್ಣ ಭಾವದಿಂದ ಹೊರಗೆ ಬಂದೆ. ಅಭಿನಂದನೆಗಳು ಸತ್ತಾರ್.

    ಉತ್ತರ

Trackbacks & Pingbacks

  1. ಮಿಂಚು ಮರೆಯಾದಾಗ « ಕನವರಿಕೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments