ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 24, 2011

ಅವನಲ್ಲಿನ ಅವಳ ಕಥೆ

‍ನಿಲುಮೆ ಮೂಲಕ

-ಕಾಲಂ ೯

ಅವನು ಅವನಲ್ಲ, ಅವನು ’ಅವಳು’!

ಅವಳು? ನಿಜಕ್ಕೂ ಅವಳೇನಾ?

ಈ ಅವನಲ್ಲಿನ ಅವಳ ಕಥೆಯೇ – ಬದುಕು ಬಯಲು – ಹಿಜ್ಡಾ ಒಬ್ಬಳ ಆತ್ಮಕಥೆ.

ನಾಲ್ಕು ವರ್ಷದ ಹಿಂದಿನ ಮಾತು. ಗಾಂಧಿಬಜಾರಿನ ’ಅಂಕಿತ’ದಲ್ಲಿ ಗೆಳೆಯನೊಬ್ಬನ ಬರುವಿಕೆಗೆ ಕಾಯ್ತಾ ಇದ್ದೆ ಪುಸ್ತಕಗಳನ್ನು ತಡವುತ್ತಾ. . . . ಸಂಜೆ ೪ ರ ಸಮಯ, ಕಂಬತ್ತಳ್ಳಿ – ಪ್ರಭಾ ಇಬ್ಬರೂ ಇರಲಿಲ್ಲ. ಗಲ್ಲಾದಲ್ಲಿ ಕೂತ ಸಹಾಯಕ ಹುಡುಗಿಯೊಬ್ಬಳು ಕಿವಿಗೆ ಫೋನ್ ಹಚ್ಚಿಕೊಂಡಿದ್ದಳು. ನಾನು ಪುಸ್ತಕ ತಡವುತ್ತಿದ್ದ ಜಾಗದಿಂದ ಮತ್ತೂ ಒಳಗೆ ಹಿರಿಯೊಬ್ಬರು ಧಾರ್ಮಿಕ ಪುಸ್ತಕಗಳಲ್ಲಿ ಕಳೆದುಹೋಗಿದ್ದರು. ಆ ಕ್ಷಣ ಇಬ್ಬರು ಹಿಜ್ಡಾಗಳು ಅಂಕಿತದೊಳಗೆ ನುಗ್ಗಿದರು. ಫೋನಿನಲ್ಲಿದ್ದ ಗಲ್ಲಾದ ಹುಡುಗಿ ಗಲಾಟೆ ಮಾಡದಂತೆ ಸನ್ನೆ ಮಾಡಿದಳು. ನಾನು ಮತ್ತೂ ಒಳಗೆ ಹೋದರೂ ದೃಷ್ಟಿ ಇತ್ತಲೇ ನೆಟ್ಟಿದ್ದೆ. ಗಲ್ಲಾದ ಹುಡುಗಿ ಕೊಟ್ಟ ಐದೋ ಎರಡೋ ರೂಪಾಯಿ ಹಿಜ್ಡಾಗಳಿಗೆ ಸಮಾಧಾನ ತರಲಿಲ್ಲ. ಅವರು ತಮ್ಮ ನಖ್ರಾ ತೋರಿಸುತ್ತಲೇ ಪುಸ್ತಕಗಳಿಗೆ ಕೈ ಹಾಕಿದರು. ಮತ್ತೆ ಗಲ್ಲಾದ ಹುಡುಗಿ ಅದನ್ನೆಲ್ಲ ಮುಟ್ಟಬಾರದೆಂದು ತಾಕೀತು ಮಾಡಿದಳು. ಆಗ ಈ ಹಿಜ್ಡಾಗಳು ತಮಗೊಂದು ಪೆನ್ನು ಕೊಡುವಂತೆ ಕೇಳಿದರು. ಗಲ್ಲಾದ ಹುಡುಗಿ ನಿರಾಕರಿಸಿದಳಾದರೂ ಕೊನೆಗೆ ಇಬ್ಬರಿಗೂ ಒಂದೊಂದು ಪೆನ್ನು ಕೊಟ್ಟು ಸಾಗು ಹಾಕಿದಳು. ಒಳಗಿನಿಂದ ಇದೆಲ್ಲವನ್ನೂ ನೋಡುತ್ತಿದ್ದ ನನಗೆ ಅವರೇನಾದರೂ ಪೆನ್ನನ್ನು ಬಳಸಿಯೇ ಬಿಟ್ಟರೇ? ತಮ್ಮ ಅನುಭವಗಳನ್ನೆಲ್ಲ ಕೆತ್ತಿಯೇ ಬಿಟ್ಟರೆ? ಅಲ್ಲೇ ಪುಸ್ತಕಗಳಾಗಿ ಬಿದ್ದಿದ್ದ ಮೊಗಳ್ಳಿ, ಜೋಗಿ, ವಸುಧೇಂದ್ರ ಎಲ್ಲ ಏನಾಗಬಹುದು? ಎಂದೆಲ್ಲ ಅನ್ನಿಸಿತ್ತು.

ಅದು ಅಂದಿನ ಮಾತಾಯಿತು. ವಾಪಸ್ ಆತ್ಮಕಥೆಗೆ ಬರೋಣ.

ಪಕ್ಕದ ತಮಿಳುನಾಡಿನ ಸೇಲಂ ಜಿಲ್ಲೆಯ ನಮಕ್ಕಲ್ ತಾಲೂಕಿನ ಹಳ್ಳಿಯೊಂದರಲ್ಲಿ ಹುಟ್ಟಿದ ಹುಡುಗನೊಬ್ಬ ತನ್ನ ಸ್ವಭಾವ, ನಡವಳಿಕೆಗಳಿಂದ ’ಹೆಣ್ಣಿಗ’ನೆನಿಸಿ ಸುತ್ತಲಿನವರಿಂದ ತಾತ್ಸಾರಕ್ಕೆ ಒಳಗಾಗಿ ಕೊನೆಗೆ ಊರುಬಿಟ್ಟು ದಿಲ್ಲಿ, ಮುಂಬೈ ಅಲೆದು ’ಹಿಜ್ಡಾ’ ಆದ ಕಥೆ ಇದೀಗ ಕನ್ನಡಕ್ಕೆ ಬಂದಿದೆ.

ಆಗ ತಮಿಳಿನಲ್ಲಿ ಜನಪ್ರಿಯ ನಟಿಯನಿಸಿದ್ದ ರೇವತಿಯಂತೆ ಕಾಣುತ್ತಿದ್ದ ಈ ’ದೊರೈಸ್ವಾಮಿ’ಯನ್ನು ಜನ ರೇವತಿಯೆಂದೇ ಕೀಟಲೆ ಮಾಡುತ್ತಿದ್ದರು. ಊರುಬಿಟ್ಟ ಈ ರೇವತಿ ಮೈಮಾರಿಕೊಳ್ಳುವ ದಂಧೆಗೆ ಇಳಿದು, ಆ ಜಗತ್ತಿನ ನರಕ ಕಂಡು ಹೇಗೋ ಬೆಂಗಳೂರಿಗೆ ತಲುಪಿದ್ದು ಈ ಆತ್ಮಕಥೆ ಬರಲು ಕಾರಣವಾಯಿತು.

ರೇವತಿ ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ದುಡಿಯುವ ’ಸಂಗಮ’ ಸಂಸ್ಥೆಯ ಒಡನಾಟಕ್ಕೆ ಬಂದದ್ದು ಅವಳ ಜೀವನದ ದಿಕ್ಕನ್ನು ಬದಲಾಯಿಸಿತು. ರೇವತಿ ತಮಿಳಿನಲ್ಲಿ ಬರೆದ ಆತ್ಮಕಥೆಯ ಇಂಗ್ಲೀಷ್ ಅನುವಾದ ’ಟ್ರೂತ್ ಎಬೌಟ್ ಮಿ – ಎ ಹಿಜ್ಡಾ ಲೈಪ್ ಸ್ಟೋರಿ’ ಯನ್ನು ’ಪೆಂಗ್ವಿನ್’ ಪ್ರಕಟಿಸಿದೆ.

ಹಿಜ್ಡಾ ಜಗತ್ತಿನ ವಿಲಕ್ಷಣ ಸಂಕಟಗಳನ್ನು ತೆರೆದಿಟ್ಟು ಎಲ್ಲೆಡೆ ಚರ್ಚೆಗೆ ಕಾರಣವಾದ ಈ ಪುಸ್ತಕವನ್ನು ಕವಿಯತ್ರಿ ದು.ಸರಸ್ವತಿ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.

ಊರೂರಿಗೆ ತೆರಳಿ ಹಾಲಿನ ವ್ಯಾಪಾರ ಮಾಡುತ್ತಿದ್ದ ತಂದೆ ರಾತ್ರಿ ಎಷ್ಟೋ ಹೊತ್ತಿಗೆ ಬಂದು ಊಟ ಮಾಡುವಾಗ ಕೊನೆಯಲ್ಲಿ ಮೊಸರನ್ನ ಕಲೆಸಿ ’ಪುಟಾಣಿ ಮರಿ ಎದ್ದೇಳು, ಕಣ್ ಬಿಡು, ಒಂದು ತುತ್ತು ತಿನ್ನು ಎಂದು ಬಾಯಿಗಿಟ್ಟ ತುತ್ತನ್ನು ನಾನು ನಿದ್ದೆಯಲ್ಲೇ ತಿನ್ನುತ್ತಿದ್ದೆನೇ ಹೊರತು ಏಳುತ್ತಿರಲಿಲ್ಲ’ – ಬಾಲ್ಯದ ದಿನಗಳ ಈ ನೆನಪು ಆತ್ಮಕಥೆಯಲ್ಲಿ ಬರುತ್ತದೆ. ಈಗ ರೇವತಿ ಬೆಂಗಳೂರನ್ನು ಬಿಟ್ಟು ಸೇಲಂನ ಹಳ್ಳಿಗೆ ತೆರಳಿದ್ದಾರೆ. ವೃದ್ಧಾಪ್ಯದಲ್ಲಿ ಅಣ್ಣಂದಿರೂ ದೂರಮಾಡಿರುವ ತಂದೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಕೊನೆ ಕಾಣದ ಬಯಲಾಗಿರುವ ಹಿಜ್ಡಾ ಬದುಕನ್ನು ಪತ್ರಕರ್ತೆ ಗೌರಿ ಲಂಕೇಶ್ ವಿಶೇಷ ಆಸ್ಥೆವಹಿಸಿ ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಇಂಗ್ಲೀಷ್ ಆವೃತ್ತಿ ಓದಿದ ೮೦ ವರ್ಷದ ವೃದ್ಧೆಯೊಬ್ಬರು ’ಸಾಯುವ ಮೊದಲಾದರೂ ನನಗೆ ನೀವೆಲ್ಲ ಅರ್ಥವಾದಿರಿ’ ಎಂದು ಮರುಗಿದರಂತೆ.

ಓದಿದ ಯಾರನ್ನಾದರೂ ಈ ಪುಸ್ತಕ ಕಾಡದೇ ಬಿಡದು.

———

’ಅಂಕಿತ’ದಲ್ಲಿ ಅವತ್ತು ಪೆನ್ನು ಒಯ್ದವರು ಬಿಟ್ಟ ಹೋದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು!

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments