ಯಾವ್ ಜಾತಿಯ ಮುಖ್ಯಮಂತ್ರಿ ಬೇಕು!?
– ರಾಕೇಶ್ ಶೆಟ್ಟಿ
ಯಡ್ಡಿ ಕೆಳಗಿಳಿದಾಗ ಬರೆದಿದ್ದು.. ಈಗ ಸದಾ ಇಳಿಯುವಾಗಲೂ ಅಪ್ಪ್ಲೈ ಆಗುತ್ತೆ…! ಅತಿ ಕೆಟ್ಟ ರಾಜಕಾರಣಕ್ಕೆ ನಮ್ಮ ರಾಜ್ಯ ಸಾಕ್ಷಿಯಾಗಿರುವುದು ದೌರ್ಭಾಗ್ಯ…!
———————————————————————————————————————————————-
ಅಂತು ಬಿಜೆಪಿ ಹೈಕಮಾಂಡ್ ಧೈರ್ಯ ಮಾಡಿದೆ…! ಯಡ್ಯೂರಪ್ಪನವ್ರಿಗೆ ಕುರ್ಚಿ ಬಿಡಿ ಅನ್ನುವ ಸಂದೇಶವನ್ನ ರವಾನಿಸಿದೆ.ಸಂದೇಶ ಮಾಧ್ಯಮದ ಮೂಲಕ ಬಂದಿದ್ದು ನಿನ್ನೆ ಬೆಳಿಗ್ಗೆಯೇ.ಆದ್ರೆ ಇನ್ನ ಯಡ್ಯೂರಪ್ಪ ಮಾತ್ರ ಜಪ್ಪಯ್ಯ ಅನ್ನುತ್ತಿಲ್ಲ..!
ಕಳೆದ ೧೦-೧೫ ದಿನಗಳಿಂದ ಕರ್ನಾಟಕ ಸರ್ಕಾರ ಜನರ ಸಮಸ್ಯೆಯನ್ನ ನೋಡೋದು ಬಿಟ್ಟು ತನ್ನ ಬುಡ ಭದ್ರ ಮಾಡಿಕೊಳ್ಳುವ ಬಗ್ಗೆಯೇ ತಲೆಕೆಡಿಸಿಕೊಂಡು ಕೂತಿದೆ.ಕಳೆದ ಹತ್ತು ದಿನ ಬಿಡಿ, ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನ ತುತ್ತು ಅನ್ನಕ್ಕೆ ಸೂರಿಗೆ ಪರದಾಡುತ್ತಿರುವಾಗಲೇ ರೆಡ್ಡಿಗಳು ಬಂಡಾಯದ ಬಾವುಟ ಹಾರಿಸಿದಾಗಲೂ ಜನ ಸತ್ತರೆ ಸಾಯಲಿ ಕುರ್ಚಿ ಉಳಿದರೆ ಸಾಕು ಅಂತ ಬಿಜೆಪಿ ಸರ್ಕಾರವೇ ದೆಹಲಿಗೆ ಓಡಿ ಹೋಗಿತ್ತು…! ಹಾಗೇನಾದರೂ ಯಡ್ಯೂರಪ್ಪ ಬಂಡಾಯಕ್ಕೆ ಬಗ್ಗದೇ ರಾಜೀನಾಮೆ ಕೊಟ್ಟಿದ್ದರೆ ಜನ ಮತ್ತೆ ಗೆಲ್ಲಿಸಿ ಕಳಿಸುತಿದ್ದರೇನೋ.ಆದರೆ ಯಡ್ಯೂರಪ್ಪ ಶರಣಾಗಿ ಕುರ್ಚಿಯ ಮುಂದೆ ಬೋರಲು ಬಿದ್ದಿದ್ದರು..!
ಹಾಗೇ ನೋಡಿದರೆ ಈ ಸರ್ಕಾರ ರೆಡ್ಡಿಗಳ ಬಂಡಾಯದ ಸಮಯದಲ್ಲಿ ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಕ್ಕಿ ತತ್ತರಿಸುತ್ತಿದ್ದರೂ ಹಾಳು ಬಿದ್ದು ಹೋಗಿ ಅನ್ನುವಂತೆ ಸುಮ್ಮನಿದ್ದಿದ್ದೇ ಕಡೆ ಬಾರಿಯೇನಲ್ಲ,ಅದಾದ ಮೇಲೆ ರೆಸಾರ್ಟ್ನಲ್ಲಿ ಕತ್ತೆ ವ್ಯಾಪರಕ್ಕಿಳಿದಾಗಲೂ ತಿಂಗಳುಗಟ್ಟಲೇ ರಾಜ್ಯ ಅನಾಥವಾಗಿತ್ತು.ಸರ್ಕಾರಿ ಯಂತ್ರಕ್ಕೆ ತುಕ್ಕು ಹಿಡಿದಿತ್ತು.
ಮತ್ತೆ ಮುಖ್ಯಮಂತ್ರಿಯ ವಿರುದ್ಧ ಪ್ರಾಸಿಕ್ಯೂಶನ್ಗೆ ರಾಜ್ಯಪಾಲರು ಅನುಮತಿ ನೀಡಿದಾಗ ಖುದ್ದು ಆಡಳಿತ ಪಕ್ಷವೇ ಬಂದ್ ಕರೆ ಕೊಟ್ಟೂ ವೋಟ್ ಹಾಕಿ ಕಳುಹಿಸಿದ ಜನಸಾಮಾನ್ಯರಿಗೆ ತೊಂದರೆ ಕೊಟ್ಟಿದ್ದು ಮಹಾನ್ ಸಾಧನೆಯೇ (?) ಸರಿ.ಅದೆಲ್ಲಾ ಆಗಿ ಮತ್ತೆ ಸುಪ್ರಿಂ ಕೋರ್ಟ್ ತೀರ್ಪು ಬಂದ ಮೇಲೂ ಮತ್ತೆ ದೆಹಲಿಯಲ್ಲಿ ಕುರ್ಚಿ ಸವಾರಿ ಮಾಡಿ ಬಂದಾಗಲೂ ಕರ್ನಾಟಕ ಅನಾಥವಾಗಿತ್ತು.
ಮತ್ತೀಗ ಲೋಕಾಯುಕ್ತರ ವರದಿ ಯಡ್ಯೂರಪ್ಪರ ನಿರ್ಗಮನಕ್ಕೆ ದಾರಿ ತೋರಿಸಿದೆ.ಮುಂದಿನ ಮುಖ್ಯಮಂತ್ರಿ ಯಾರು ಅನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ರೇಸಿನಲ್ಲಿ ಶೋಭಾ,ಸುರೇಶ್ ಕುಮಾರ್,ಶೆಟ್ಟರ್,ಸದಾನಂದ ಗೌಡ,ಅನಂತ್ ಕುಮಾರ್ ಇದ್ದಾರೆ.ಜನರೂ ಈ ಬಗ್ಗೆ ಕೂತುಹಲಿಗಾಳಾಗಿದ್ದರೆ,ಆಗಲೆ ಮತ್ತೆ ಸರ್ವಸಂಘ ಪರಿತ್ಯಾಗಿಗಳಾದ ಸ್ವಾಮಿಗಳೂ ಕಾವಿ ಹಾಕಿಕೊಂಡೇ ಖಾದಿಗಳ ತರ ಜಾತಿ ರಾಜಕಾರಣದ ಮಾತು ಶುರುವಿಟ್ಟುಕೊಂಡಿದ್ದಾರೆ.
ಉತ್ತರ ಕರ್ನಾಟಕದ ಆ ಸ್ವಾಮೀಜಿಯ ವರಸೆ ನೋಡಿ. ’ಬಿಜೆಪಿಯಲ್ಲಿ ಹೆಚ್ಚು ಲಿಂಗಾಯಿತರಿದ್ದಾರೆ ಅದಿಕ್ಕೆ ಲಿಂಗಾಯಿತ ಮುಖ್ಯಮಂತ್ರಿಯಾಗಲಿ” ಅನ್ನುತಿದ್ದಾರೆ…!
ಆ ಸ್ವಾಮೀಜಿ ಸೇರಿದಂತೆ ಉಳೀದ ಜಾತಿಯ ಅಷ್ಟೂ ಸ್ವಾಮಿಜಿಗಳಿಗೆ ಈ ಮಾತನ್ನ ಹೇಳಲಿಚ್ಚಿಸುತ್ತೇನೆ.ಅಷ್ಟಕ್ಕೂ,ನಮಗೀಗ ಬೇಕಿರುವುದು ಲಿಂಗಾಯಿತ,ಒಕ್ಕಲಿಗ,ಬಂಟ,ಬ್ರಾಹ್ಮಣ ಅಥವಾ ಇನ್ಯಾವುದೇ ಜಾತಿಯ ಮುಖ್ಯಮಂತ್ರಿಯಲ್ಲ ಸ್ವಾಮಿಗಳೇ …
ಮೊದಲೇ ಸಿಎಂ ಕುರ್ಚಿ ಅನ್ನುವುದನ್ನ Granted ಅನ್ನುವಂತೆ ಯಡ್ಯೂರಪ್ಪ ಸೇರಿದಂತೆ ಹಿಂದೆ ಬಂದು ಹೋದ ಹಲವರು ಬಳಸಿಕೊಂಡಿದ್ದಾಗಿದೆ. “ನೀನು ತಿಂದಿದ್ದೀಯಾ” ಅಂದ್ರೆ, “ಯಾಕೇ? ಹಿಂದೆ ಬಂದೋರ್ಯಾರು ತಿಂದಿಲ್ವಾ?” ಅಂತ ಜನರ ಹಣ ನುಂಗುವುದು ಆಜನ್ಮ ಸಿದ್ಧ ಹಕ್ಕು ಅನ್ನುವಂತ ಮಾತಾನಾಡುವ ಕೆಟ್ಟ ಕಾಲಘಟ್ಟಕ್ಕೆ ಬಂದು ಮುಟ್ಟಿದ್ದೇವೆ ನಾವುಗಳು.
ಅಸಲಿಗೆ ಇವತ್ತು ಅಪರಾಧಿ ಸ್ಥಾನದಲ್ಲಿ ನಿಂತಿರುವುದು ಯಡ್ಯೂರಪ್ಪ ಅಲ್ಲ ಅವರನ್ನ ಆರಿಸಿಕಳುಹಿಸಿ ನಂಬಿಕೆ ಭಂಗ ತಂದುಕೊಂಡಿರುವ ಮತದಾರ ಅನ್ನುವುದೆಲ್ಲ ನಿಮಗೆ ಅರ್ಥವಾಗುತ್ತದಾ ಸ್ವಾಮಿಗಳೇ!? ಇಲ್ಲ ತಾನೆ. ಮತ್ಯಾಕೆ ನಿಮಗೆ ರಾಜಕೀಯದ ಸುದ್ದಿ? ಯಾರೋ ಏನೋ ಆಪಾದನೆ ಮಾಡುತ್ತಾರೆ ಅದಿಕ್ಕೆ ಆಣೆ-ಪ್ರಮಾಣ ಅಂತೇಳಿ ಪ್ರಜಾಪ್ರಭುತ್ವದ ಮಾನ ಹರಾಜು ಹಾಕಿ ಕಡೆಗೆ ದೇವರ ಸನ್ನಿಧಾನಕ್ಕೆ ಹೋಗಿ ದೇವರೇ ಬುದ್ದಿ ಕಲಿಸಲಿ ಅನ್ನುವಾಗ ಅದಕ್ಕೂ ಕಲ್ಲು ಹಾಕಿ ನಿಲ್ಲಿಸಿದ್ಯಾಕೆ? ಧರ್ಮ ಸಂಸ್ಥಪಾನಾರ್ಥಯ ಸಂಭವಾಮಿ ಯುಗೇ ಯುಗೇ ಅಂತ ಆವೊತ್ತು ಟೀವಿ ಸ್ಟುಡಿಯೋ ಮುಂದೆ ಕುಳಿತು ಹೇಳಿದವರಿಗೆ ಇಂದು ತಮ್ಮ ಧರ್ಮದ ಬಗ್ಗೆ ಉತ್ತರ ಸಿಕ್ಕಿರಬೇಕಲ್ವಾ?
ನಿಮ್ಮ ಜಾತಿಯನ್ನ,ಜಾತಿ ರಾಜಕೀಯವನ್ನ ನಿಮ್ಮ ನಿಮ್ಮ ಮಠದ ಆವರಣದೊಳಗೆ ಇಟ್ಟುಕೊಳ್ಳಿ. ಜನಸಾಮಾನ್ಯರ ಸುಖ-ದುಖಃ ಅರ್ಥಮಾಡಿಕೊಳ್ಳಬಲ್ಲ ಮುಖ್ಯಮಂತ್ರಿಯೇ ನಮಗೆ ಬೇಕಾದವನು. ನಮಗೆ ಬೇಕಾದವನು ದಶಕಗಳಿಂದ ಧೂಳು ತಿನ್ನುತ್ತ ಬಿದ್ದಿರುವ ಸರೋಜಿನಿ ಮಹೀಷಿ,ನಂಜುಂಡಪ್ಪ ವರದಿಗಳನ್ನ ಜಾರಿಗೆ ತರಬಲ್ಲ ಮುಖ್ಯಮಂತ್ರಿ.ನಮಗೆ ಬೇಕಾದವನು ಕೇಂದ್ರದ ಜುಟ್ಟು ಹಿದಿದು ಅನುದಾನಗಳನ್ನ ತಂದು ಕರ್ನಾಟಕ,ಕನ್ನಡಿಗನ ಏಳಿಗೆಗೆ ದುಡಿಯಬಲ್ಲ ಮುಖ್ಯಮಂತ್ರಿ.ನಮಗೆ ಬೇಕಾದವನು ಕಂಡೋರ ಹಣ – ಪಾಷಾಣ ಅನ್ನುವಂತ ಮುಖ್ಯಮಂತ್ರಿ.
ನಮಗೇ ಅವನಿಂದ ಆಗಬೇಕಿರುವುದು ಕೆಲಸ,ಅದಕ್ಕಾಗೇ ನಾವು ಅವನನ್ನ ಆರಿಸಿಕಳಿಸಿರುವುದು.ಹಾಗೆ ಕೆಲಸ ಮಾಡುವವ ಮುಖ್ಯವೇ ಹೊರತು ಅವನ ಜಾತಿ ಜನ ಸಾಮಾನ್ಯರಿಗೆ ಮುಖ್ಯವಲ್ಲ ಅನ್ನುವುದು ನಿಮಗೆ ಅರ್ಥವಾಗುತ್ತದೇಯೇ!? ಈ ವಿಷ್ಯದಲ್ಲಿ ಸ್ವಾಮೀಜಿಗಳ ಜೊತೆಗೆ ಮಾಧ್ಯಮಗಳಿಗೂ ಪ್ರಶ್ನೆ ಕೇಳಬೇಕಿದೆ. ಜಾತಿ ರಾಜಕೀಯದ ದರ್ಬಾರಿಗೆ ಮಾಧ್ಯಮಗಳ ಪುಕಾರು ಸಹ ಕಾರಣ.
ಅದ್ಯಾವುದೇ ಪಕ್ಷಕ್ಕೆ ಅಧ್ಯಕ್ಷನೋ ಅಥವಾ ಇನ್ಯಾವುದೋ ಮುಖ್ಯ ಹುದ್ದೆಯೋ,ಮಂತ್ರಿಗಿರಿಯೋ ಸಿಕ್ಕ ತಕ್ಷಣ ಇವನ ಜಾತಿ ಇಂತದ್ದು ಅಂತ ಬರೆಯುವುದೇ ಈ ಮಾಧ್ಯಮದ ಮಂದಿ,ಯಾವನ್ ಬಂದು ಕೇಳಿದ್ದ ಇವರನ್ನ ಇವನ ಜಾತಿ ಯಾವುದು ಅಂತ!? ಏನು ಗೊತ್ತಿಲ್ಲದ ಓದುಗನ ಮನಸ್ಸಿನಲ್ಲಿ ಯಡ್ಯೂರಪ್ಪ ಅಂದ್ರೆ ಲಿಂಗಾಯಿತ ಅಂತಲೋ,ಖರ್ಗೆ ದಲಿತ ಅಂತಲೋ,ಆಚಾರ್ಯ ಬ್ರಾಹ್ಮಣ ಅಂತಲೋ ಅಚ್ಚೊತ್ತುವುದು ಇಂತ ಪತ್ರಿಕೆ ಅದರಲ್ಲೂ ಮುಖ್ಯವಾಗಿ ಟ್ಯಾಬೋಲಾಯ್ಡುಗಳು.(ಇದಕ್ಕೂ ಏನಾದರು ಸಾಮಾಜಿಕ ನ್ಯಾಯದ ಸಬೂಬು ಕೊಡುವವರು ಇರಬಹುದು..!)
ಜಾತಿ ಬಿಟ್ಟ ಮುಖ್ಯಮಂತ್ರಿಯಾದರೂ ನಮಗೇ ಓಕ್,ಆದರೆ ಜನರನ್ನ ಬಿಟ್ಟಿರದ ಮುಖ್ಯಮಂತ್ರಿಯೇ ಬೇಕು ನಮಗೆ. ಜಾತಿಗೊಬ್ಬ ಮುಖ್ಯಮಂತ್ರಿ ಬೇಕು ಅನ್ನುವುದಾದರೆ ರಾಜ್ಯ ಸಾಲದು. ಮಠಗಳಿಗೊಬ್ಬ ಮುಖ್ಯಮಂತ್ರಿಯನ್ನ ಮಾಡಬೇಕಾದೀತು! ಆಗ ಸಾಮಾಜಿಕ ನ್ಯಾಯ ಸಿಗುತ್ತದೆ.ಏನಂತೀರಾ?





ತಮಿಳರು ತಮ್ಮ ರಾಜ್ಯವನ್ನ ಭದ್ರಪಡಿಸಿಕೊಂಡಿದ್ದು ‘ಭಾಷಾ ರಾಜಕೀಯ’ದಿಂದ. ನಮ್ಮ ರಾಜ್ಯ ‘insecure’, ‘vulnerable’ ಆಗಿದ್ದು ಜಾತಿ ರಾಜಕೀಯದಿಂದ. ಈ ಸತ್ಯ ಆದಷ್ಟು ಬೇಗ ಎಲ್ಲರಿಗೂ ಅರ್ಥವಾಗಲಿ.
ತಮಿಳು ನಾಡಲ್ಲಿ ಜಾತಿಗೊಂದು ಪಾರ್ಟಿ ಇದೆ. ಅಲ್ಲಿಯ ರಾಜಕೀಯ ಹಗೆ-ಸೇಡು ನಮ್ಮ ರಾಜ್ಯಕ್ಕೆ ಬರೋದು ಬೇಕಾ?
ನಮ್ಮ ರಾಜ್ಯದಲ್ಲಿ ಈಗ ಆಗ್ತಾ ಇರೋದು ರಾಜಕೀಯ ಮೆಚುರಿಟಿಯಾ ಒಂದು ಹಂತ. ಈ ಹಂತದಿಂದ ನಮ್ಮ ಜನಕ್ಕೆ ತಮ್ಮ ಮತ ಯಾವ ಸಿದ್ಧಾಂತ, ಹಾಗು ಪ್ರಣಾಳಿಕೆಗೆ ಕೊಡಬೇಕು ಏನು ತಿಳಿಯಾಗಬಹುದು.
ಇಷ್ಟೆಲ್ಲಾ ರಾಜಕೀಯ ಅಲ್ಲೋಲ-ಕಲ್ಲೋಲ ಬೇರೆ ದೇಶಗಳ ಹಾಗೆ ಹಿಂಸೆ ಹಾಗು ಆಯುಧಕಾಳಗಕ್ಕೆ ತಿರುಗದೆ ಇರೋದು ನಮ್ಮ ಹೆಗ್ಗಳಿಕೆ.!
ಲೋಕಾಯ್ತು ಎಂಬ ಸಂಸ್ತೆ ಭಾರತದ ಹಲವು ರಾಜ್ಯಗಳಲ್ಲಿ ಇಲ್ಲ. ಆದರೆ ಅದು ಕರ್ನಾಟಕದಲ್ಲಿ ಇದೆ. ಇದಕ್ಕೆ ಕಾರಣ ನಮ್ಮ ಹಿಂದಿನ ಶಾಸಕರ ಮುಂದಾಲೋಚನೆ ಹಾಗು ಸಮಾಜಹಿತದ ಮನಸ್ಸು.
ತಮಿಳು ನಾಡಲ್ಲಿ ಲೋಕಾಯುತ್ಕ ಇಲ್ಲ.
http://en.wikipedia.org/wiki/Lokayukta
ತಮಿಳರು ತಮ್ಮ ರಾಜ್ಯವನ್ನ ಭದ್ರಪಡಿಸಿಕೊಂಡಿದ್ದು ‘ಭಾಷಾ ರಾಜಕೀಯ’ದಿಂದ.
ತಮಿಳು ನಾಡಲ್ಲಿ ಮೊದಲು ಭಾಷೆಗೆ ಚಳುವಳಿ ಏನು ನಡೆಯಲ್ಲಿಲ್ಲ. ಪೆರಿಯಾರ್ ಶುರು ಮಾಡಿದ್ದೆ ಬ್ರಾಹ್ಮಣ-ವಿರೋಧಿ ಆಂದೋಳನೆ. ಅವರ ಬಗ್ಗೆ ನಾನು ತಿಳಿದಿರುವಂತೆ ..
ಪೆರಿಯಾರ್ ಕಾಶಿಗೆ ಹೋಗಿ ಯಾವುದಕ್ಕೋ ಬ್ರಾಹ್ಮಣರ ಮೇಲೆ ಮುನಿಸಿಕೊಂಡು ಬಂದು, ತಮಿಳು ನಾಡಲ್ಲಿ, ಬ್ರಾಹ್ಮಣರ ವಿರುದ್ಧ ಹಲ-ಜಾತಿಗಳನ್ನು ಹುರಿದುಂಬಿಸಿ ಛೂ ಬಿಡುತ್ತಾರೆ. ಅದಕ್ಕೆ ತಮಿಳು-ರಾಷ್ಟ್ರೀಯತೆಯ ಮುಖವಾಡ ಹಾಕುತ್ತಾರೆ. ಸ್ವಾಭಿಮಾನದ ಚಳುವಳಿ ಎಂದು “ದುರಹಂಕಾರ” ಹಾಗು “ಸಂಕುಚಿತ ಮನಸ್ಸು”ಗಳನ್ನೂ ಬೆಳೆಸುತ್ತಾರೆ, ಎಂದು ಅನಿಸಿಕೆ ಇದೆ..
ಇಂದು ತಮಿಳು ನಾಡಲ್ಲಿ ಜಾತಿಗೊಂದು ರಾಜಕೀಯ ಪಕ್ಷವಿದ್ದೂ, ಅಲ್ಲಿಯ ರಾಜಕೀಯ ಹಗೆ, ಸೇಡು, ಸೆರೆ, ಹೊಡೆದಾಟ, ರಾಮ ರಾಮ! ಅಲ್ಲ ರಾವಣ ರಾವಣ!
ಆದರೆ, ನಮ್ಮ ರಾಜದಲ್ಲಿ ಇನ್ನೂ ಆ ಮಟ್ಟದ ಸಂಕುಚಿತ ಹಾಗು ಒಡಕಿನ ಮನಸ್ಸು ಬಿತ್ತುವವರೂ ಇಲ್ಲ ಬೆಳೆಸುವವರೂ ಇಲ್ಲ. ನಮ್ಮ ಪುಣ್ಯಕ್ಕೆ.
ಅತಿಹೆಚ್ಚು ಇರುವ ಪಂಗಡದಿಂದಲೇ ನಾಯಕನಾಗಿ ಒಬ್ಬರು ಪಟ್ಟಕ್ಕೆ ಬರಬೇಕು ಎಂಬುದು ಸಾಮಾನ್ಯ ಮಾನವಮನಸ್ಸು. ಇದು ಎಲ್ಲಾ ದೇಶ, ಹಾಗು ಕಾಲದಲ್ಲೂ ಇದ್ದ/ಇರುವ ಸಂಗತಿ.
ಕರ್ನಾಟಕದಲ್ಲಿ ದಲಿತರಿಂದ ಬ್ರಾಹ್ಮಣರವರಗೆ ಎಲ್ಲ ಪಂಗದದವರೂ ಮುಖ್ಯಮಂತ್ರಿಗಲಾಗಿದ್ದಾರೆ, ಆಗುತ್ತಾರೆ. ಈಗಿನ ಘಟನಾವಳಿಗಳನ್ನು ನಮ್ಮ ಮಾಧ್ಯಮ ಮಾಹಾಪ್ರಳಯೋಪಾದಿ ಕಿವಿ, ಕಣ್ಣು ಹಾಗು ಮನಸ್ಸಿಗೆ ರಾಚಿದರೆ, ಅದಕ್ಕೆ ಬೇಸತ್ತು ಬೇಸರಿಸಿಕೊಳ್ಳುವ ಅವಸರ ನಾ ಕಾಣೆ.!
ನನ್ನೀ.
ಒಳ್ಳೆ ಕಮೆಂಟು ಮಾಯ್ಸ 🙂
ಏನ್ ಮಾಡೋದು ಹೇಳಿ ಈ ಸ್ವಾಮಿಗಳು ಎಲ್ಲ ತ್ಯಾಗ ಮಾಡಿರು ಜಾತಿ ತ್ಯಾಗ ಮಾಡೋದಿಲ್ವಲ್ಲ ಅಂತ ಜಿಗುಪ್ಸೆಯಾಗುತ್ತೆ
ರಾಕೇಶ್ ಶೆಟ್ಟರೆ,
ಅವರು ಜಾತಿ-ತ್ಯಾಗ ಮಾಡಲಿ ಎಂಬ ಅಭಿಲಾಷೆ/ಜಿಗುಪ್ಸೆ ನಮಗೇಕೆ?
ಒಬ್ಬ ವ್ಯಕ್ತಿಗೆ ಮತ ನೀಡಲು ಸ್ಪರ್ಧಿಯ ಜಾತಿ ಕಾರಣ ಎಂದು ಒಬ್ಬರು ಅಂದುಕೊಂಡಿದ್ದಾರೆ, ಅದು ಅವರ ಸಾಂವಿಧಾನಿಕ ಹಕ್ಕು. ನಾಮ ಪ್ರಜೆಗಳನ್ನು ಜಾತ್ಯಾತೀತರನ್ನಾಗಿಸುವುದಕ್ಕಿಂತ ಆಳ್ವಿಕೆ/ಸರಕಾರವನ್ನು ಜಾತ್ಯಾತೀತ/ಸೆಕ್ಯುಲರ್ಆಗಿ ಸಂಭಾಳಿಸಿಕೊಂಡು ಹೋಗುವುದು ಮುಖ್ಯ.
ಸರಕಾರ ಒಂದು ಮತ/ಧರ್ಮಕ್ಕೆ ಮಾತ್ರ ಹೆಚ್ಚು ಒಟ್ಟು ಕೊಟ್ಟರೆ ಆದ ದೇಶ/ಸಮಾಜ ಒಡೆಯುವುದು.
http://www.prajavani.net/web/include/story.php?news=1790§ion=30&menuid=14
ಇಗೋ ನೋಡಿ… ಬ್ರಾಹ್ಮಣರ ದಾನವೀಕರಣ.! ತಾವು ಇದಕ್ಕೆ ಏನು ಅನ್ನುವಿರಿ. ಯಡಿಯೂರಪ್ಪನವರು ವೈದಿಕತೆ ಮರೆದರಂತೆ!
ರಾಕೇಶ್ ಹೀಗೆ ಎಷ್ಟು ಸ್ವಾಮಿ, ಪ್ರತ್ರಿಕೆ ಹಾಗು ಜನರನ್ನು ಬದಲಿಸಲು ಹೋಗುವಿರಿ! ಇಂಡಿಯ ದೇಶದ ಎಲ್ಲ ಜಾತಿ ರಾಜಕೀಯಗಳೂ ಕೊನೆಗೆ ಅಲ್ಪ-ಸಂಖ್ಯಾತರಾದ ಬ್ರಾಹ್ಮಣರ ಕಡೆಗೆ ತಿರುಗುವುದು. 😦
“ಯಡ್ಡಿ ನೈತಿಕವಾಗಿ ಗಟ್ಟಿಯಾಗಿದಿದ್ದರೇ ಯಾವ ಬ್ರಾಹ್ಮಣ,-ಆರೆಸೆಸ್ ಏನು ಮಾಡುತಿತ್ತು!?” …
ಜಾತಿಯ ಹಗ್ಗವನ್ನ ಕೊರಳಿಗೆ ಹಾಕಿಕೊಳ್ಳುವವರು ಹಾಕಿಕೊಂಡು ಸಾಯಲಿ… ಅದೆಲ್ಲ ಇರಲಿ…
ನಿರ್ಮೂಲನೆಗೆಂದೆ ಬಸವಣ್ಣ ಸ್ಥಾಪಿಸಿದ ವೀರಶೈವ ಧರ್ಮದೊಳಗೆ ಜಾತಿಗಳು ಉಂಟಾಗಿದ್ದು ಹೇಗೆ ಅನ್ನುವುದು ನನ್ನ ಪ್ರಶ್ನೆ, ಬಹುಷಃ ನಿಮ್ಮಿಂದ ಉತ್ತರ ಸಿಗಬಹುದು ಅನ್ನುವ ನಿರೀಕ್ಷೆಯಿಂದ ಕೇಳುತಿದ್ದೇನೆ.
ಇಲ್ಲಿ ಇನ್ನೊಂದು ಇದೇ ತರದ ವಾದವಿದೆ ನೋಡಿ
http://www.facebook.com/notes/chethan-ka/%E0%B2%AC%E0%B3%8D%E0%B2%B0%E0%B2%BE%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF-%E0%B2%B8%E0%B2%82%E0%B2%9A%E0%B2%BF%E0%B2%97%E0%B3%86-%E0%B2%AC%E0%B2%B2%E0%B2%BF%E0%B2%AF%E0%B2%BE%E0%B2%A6-%E0%B2%B2%E0%B2%BF%E0%B2%82%E0%B2%97%E0%B2%BE%E0%B2%AF%E0%B2%A4-%E0%B2%A8%E0%B2%BE%E0%B2%AF%E0%B2%95/227512450623367
ಮೊದಲನೆಯಾಗಿ ಪರಮ-ಬ್ರಾಹ್ಮಣ-ವಿರೋಧಿ ತಮಿಳು-ನಾಡಿನ ಮುಖ್ಯ-ಮಂತ್ರಿ ಒಬ್ಬಳು ಬ್ರಾಹ್ಮಣತಿ. 🙂
ಇನ್ನೂ “ನಿರ್ಮೂಲನೆಗೆಂದೆ ಬಸವಣ್ಣ ಸ್ಥಾಪಿಸಿದ ವೀರಶೈವ ಧರ್ಮದೊಳಗೆ ಜಾತಿಗಳು ಉಂಟಾಗಿದ್ದು ಹೇಗೆ ” ಇದು.
ಮೊದಲು ಬಸವಣ್ಣ ಎಂಬ ಬ್ರಾಹ್ಮಣನು, ವೀರಶೈವ ಎಂಬ ಮತ/ಜಾತಿಗೆ ಸೇರಿದರೋ, ಇಲ್ಲ್ಲವೇ ಲಿಂಗಾಯತ ಎಂಬ ಹೊಸ ಧರ್ಮ/ರಿಲಿಜನ್ ಶುರು-ಮಾಡಿದರೋ ಅದೇ ಇನ್ನು ವಿವಾದದಲ್ಲಿದೆ.
ಇನ್ನೂ ವಿಚಿತ್ರ ಅಂದರೆ, ಅವೈದಿಕ ಮತ ಎಂದು ಕೆಲವರು ವೀರಶೈವ/ಲಿಂಗಯತವನ್ನು ಕರೆದರೆ, ನನಗೆ ತಿಳಿದ ಮೈಸೂರಿನ ಲಿಂಗಾಯತ/ವೀರಶೈವ ಮಠದಲ್ಲೇ ವೇದ-ಆಗಮ-ಸಂಸ್ಕೃತದ ಪಾಠ ಜೋರಾಗಿ ನಡೆಯುವುದು. 🙂
ಕೊಂಡಿಯಲ್ಲಿದ್ದ ಬರಹ ಓದಿದೆ.ಕಣ್ಮುಂದೆ ಬ್ರಷ್ಟಾಚಾರ ತಾಂಡವವಾಡುತ್ತಿರುವಾಗ ಈ ರಾಜಕಾರಣಿಗಳು ತಮ್ಮ ಕುರ್ಚಿಯಾಸೆಯಿಂದ ಮಠಮಂದಿರಗಳಿಗೆ,ಚರ್ಚ್ ಮದಸೀದಿಗಳಿಗೆ ಹಣ ಚೆಲ್ಲುತ್ತಿದ್ದಾರೆ. ಇಲ್ಲಿ ಕುರ್ಚಿಯುಳಿಸಿಕೊಳ್ಳುವ ಏಕಮಾತ್ರ ಉದ್ಧೇಶವೇ ಹೊರತು ವೈದಿಕ ಅವೈದಿಕ ಪ್ರಶ್ನೆ ಬರುವುದಿಲ್ಲ. ಬಹುತೇಕ ಯಾವ ಮಠಮಾನ್ಯಗಳೂ ಧರ್ಮವನ್ನು ಉಳಿಸುವ ಕೆಲಸ ಮಾಡುತ್ತಿಲ್ಲ. ಹೆಚ್ಚೆಂದರೆ ಆಯಾ ಜಾತಿಗಾಗಿ ಸಂಘಟನೆಯ ಕೆಲಸವನ್ನು ಆಯಾಮಠಗಳು ಮಾಡುತ್ತಿರಬಹುದು ಅಷ್ಟೆ. ವೈದಿಕ ಎಂದರೆ ವೇದವನ್ನು ಅನುಸರಿಸುವಂತವನಾಗಬೇಕು.ವೇದವೆಂಬುದು ನೆಮ್ಮದಿಯ ಬದುಕಿಗೆ ಸೂತ್ರಗಳೇ ಹೊರತು ಈಗ ಕಾಣುತ್ತಿರುವಂತೆ ಆಷಾಢಬೂತಿತನವಲ್ಲ.ನಿಜವಾದ ವೈದಿಕ ತನ್ನಹಿತದ ಜೊತೆಗೆ ಸಮಾಜದ ಹಿತದ ಚಿಂತನೆ ಮಾಡುತ್ತಾ ಬದುಕಬೇಕು.ಬ್ರಷ್ಟಾಚಾರದಲ್ಲಿ ತೊಡಗಿ ದೇಶದ ಸಂಪತ್ತನ್ನು ಲೂಟಿ ಹೊಡೆಯುವವರು ಯಾರೇ ಆದರೂ ಅವರು ವೇದವಿರೋಧಿಗಳೂ ಹೌದು, ದೇಶಬ್ರಷ್ಟರೂ ಹೌದು.
ಯಾರೇ ಆದರೂ ಆತ ಮೂಲ “ರಾಜಕಾರಣಿ ಜಾತಿ”ಯವನಾಗದಿದ್ದರೆ ಸಾಕು ಅನ್ನುವ ಆಶಯ ನನ್ನದು!
ನಿಮ್ಮ ಜಾತಿಯನ್ನ,ಜಾತಿ ರಾಜಕೀಯವನ್ನ ನಿಮ್ಮ ನಿಮ್ಮ ಮಠದ ಆವರಣದೊಳಗೆ ಇಟ್ಟುಕೊಳ್ಳಿ. ಜನಸಾಮಾನ್ಯರ ಸುಖ-ದುಖಃ ಅರ್ಥಮಾಡಿಕೊಳ್ಳಬಲ್ಲ ಮುಖ್ಯಮಂತ್ರಿಯೇ ನಮಗೆ ಬೇಕಾದವನು. ನಮಗೆ ಬೇಕಾದವನು ದಶಕಗಳಿಂದ ಧೂಳು ತಿನ್ನುತ್ತ ಬಿದ್ದಿರುವ ಸರೋಜಿನಿ ಮಹೀಷಿ,ನಂಜುಂಡಪ್ಪ ವರದಿಗಳನ್ನ ಜಾರಿಗೆ ತರಬಲ್ಲ ಮುಖ್ಯಮಂತ್ರಿ.ನಮಗೆ ಬೇಕಾದವನು ಕೇಂದ್ರದ ಜುಟ್ಟು ಹಿದಿದು ಅನುದಾನಗಳನ್ನ ತಂದು ಕರ್ನಾಟಕ,ಕನ್ನಡಿಗನ ಏಳಿಗೆಗೆ ದುಡಿಯಬಲ್ಲ ಮುಖ್ಯಮಂತ್ರಿ.ನಮಗೆ ಬೇಕಾದವನು ಕಂಡೋರ ಹಣ – ಪಾಷಾಣ ಅನ್ನುವಂತ ಮುಖ್ಯಮಂತ್ರಿ.
ಅತ್ಯುತ್ತಮ ಸಾಲುಗಳು…
ನಮಗೆ ಜಾತಿ ಬಿಟ್ಟವರು (ಮಾನ ಬಿಟ್ಟವರಲ್ಲ) ಯಾರಾದ್ರು ಇದ್ರೆ ಒಳ್ಳೇದಿತ್ತು 🙂
ರಾಕೇಶ್ ಶೆಟ್ಟಿ ಯವರೇ…. ಚುನಾವಣೆಯಲ್ಲಿ ಈ ಕ್ಷೇತ್ರ ಇಂತಹ ಜಾತಿಗೆ – ಈ ಕ್ಷೇತ್ರ ಇಂತಹ ಪಂಗಡಕ್ಕೆ ಅಂತ ಸಂವಿದಾನ ಬದ್ದವಾಗಿ ಚುನಾವಣಾ ಆಯೋಗವೇ ನಿರ್ದರಿಸುತದೆ… ಅಂತದರಲ್ಲಿ ನಮ್ಮ ಜಾತಿಯ ಮುಖಂಡ ಮುಖ್ಯಮಂತ್ರಿ ಅಗಲಿ ಅಂತ ಒಂದು ಜಾತಿಗೆ ಮೀಸಲಾದ ಸ್ವಾಮಿಗಳು ಬಯಸುದು ತಪ್ಪಾ ? 🙂 (ಜಸ್ಟ್ ತಮಾಷೆ )
ನಿಮ್ಮ ತಮಾಷೆಯಲ್ಲಿ ಸತ್ಯವಿದೆ ಅಜಿತ್, ನಮ್ಮ ಚುನಾವಣ ನೀತಿಯಲ್ಲಿ ಬಹಳಷ್ಟು ಸುಧಾರಣೆಯಾಗಬೇಕಿದೆ
ರಾಕೇಶ್ ಶೆಟ್ರೆ -ಈ ಸ್ವಾಮೀಜಿಯಾಗಲಿ ,ಅಥವಾ ಯಾವ ಧರ್ಮದ್ದೆ ಗುರುಗಳಗಾಲಿ ರಾಜಕೀಯದಲ್ಲಿ ತನ್ನದೇ ಜಾತಿ ಮೇಲೆಬರಬೇಕೆಂದು ಯೋಚಿಸುತ್ತಾರೆ ,ಸ್ವಾಮೀಜಿಯವರಿಗೆ ಜಾತಿ ಉಂಟೇನೋ ???
ಎಲ್ಲರೂ ಒಂದೇ ಮಾನವಜಾತಿ ಎಂಬ ಮಾತನ್ನೇ ಮರೆತು ಬಿಡುವುದು ನಿಜಕ್ಕೂ ನಮ್ಮ ದುರಾದ್ರಷ್ಟ .ಅನ್ಯರಿಗೆ ಮಠ ,ಮಂದಿರ ,ಸ್ವಾಮಿಗಳ ,ಮೇಲಿದ್ದ ಗೌರವ ,ಪ್ರೀತಿ ,ಎಲ್ಲವನ್ನು ಕಳೆದು ಕೊಳ್ಳುವಂತೆ ಮಾಡುತಿದ್ದಾರೆ ಈ ಸ್ವಾಮಿಗಳು ,
Nange alsetian, german shepherd atva doberman JAATIYA CM beku…
ಸುರೇಶಕುಮಾರ ಆದ್ರೆ ಒಳ್ಳೆಯದಿತ್ತು..ಆದ್ರೆ ಅವರು ಬ್ರಾಹ್ಮಣರು. ಶೋಭಕ್ಕ ಕೂಡ ಒಳ್ಳೆಯ ಆಯ್ಕೆ, ಜನಪರ ಕಾಳಜಿಯುಳ್ಳ ವ್ಯಕ್ತಿ..ಆದರೆ ಯಡಿಯೂರಪ್ಪನ ನೆರಳಿನಲ್ಲಿರುವುದರಿಂದ ‘ಕೋತಿ ಮೊಸರು ತಿಂದ’ ಕಥೆ ಕೇಳಬೇಕಾಗಿ ಬರುತ್ತೆ. ಈ ಎಲ್ಲ ಗದ್ದಲದಲ್ಲಿ .ಜಾತಿ ಲೆಕ್ಕಾಚಾರದಲ್ಲಿ ಜಗದೀಶ ಶೆಟ್ಟರ ಪ್ರತಿಷ್ಟಾಪನೆಯಾಗುವ ಸಾಧ್ಯತೆಯಿದೆ. ಇವರು ಕೂಡ ನುಂಗುವೀರರೆ..ಆದರೆ ಬಾಯಿಯ ಗಾತ್ರ ಮತ್ತು ವೇಗ ಯಡಿಯೂರಪ್ಪನವರಿಗೆ ಹೋಲಿಸಿದರೆ ಅರ್ಧದಷ್ಟು, ಅಷ್ಟಕ್ಕೂ ಮಾಡಲು/ ಮಾರಲು ಯಡಿಯೂರಪ್ಪನವರು ಉಳಿಸಿಹೋಗಿದ್ದು ಕಡಿಮೆ.
ಯಾವ ಜಾತಿಯವನಾದರೆ ಏನಾಯಿತು., ಎಷ್ಟೆಲ್ಲಾ ಲಿಂಗಾಯತರು, ಗೌಡರು, ಬೇರೆ ಜಾತಿಯವರು ರಾಜ್ಯ ಆಳಿ ಹೋದರು.. ಆದರೇನು ಬಂತು ?, ನಾಡಿನ ಎಲ್ಲಾ ಲಿಂಗಾಯಿತರು, ಎಲ್ಲಾ ಗೌಡರು, ಬೇರೆ ಜಾತಿಯವರು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದಾರಾ ?,, ಅವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯಾ .. ?,
21ನೇ ಶತಮಾನದಲ್ಲಾದರೂ ನಮ್ಮ ಜನ ಈ ಜಾತಿಯ ಮಾಯೆಯಿಂದ ಹೊರಬರಬೇಕೆಂದು ಕೋರಿಕೊಳ್ಳುತ್ತೇನೆ.
rajya sarkarada bagegina nimma e matugalannu opputtene aadare kendradalli ashtondu hagarana ittukondu kurchiyannu bhadra padisikondidare alva. adara bagge nimma abhipraya enu ? sansattinalli ee hagaranagala bagge kelida prashnege yarindalu samaarpaka uttra illa . idara bagge nivenantire?
ಕೇಂದ್ರ ಸರ್ಕಾರದ ನೀತಿಯ ಬಗ್ಗೆ ನನ್ನ ಹಿಂದಿನ ಲೇಖನವನ್ನ ನಿಳುಮೆಯಲ್ಲಿ ಓದಿ ನೋಡಿ