ಮುಸ್ಲಿಮರ ವಿರುದ್ಧ ಕೆಂಡಕಾರುವುದಕ್ಕಷ್ಟೇ ಹಿಂದೂ ಜಾಗೃತಿ ಸೀಮಿತವಾಗಬೇಕಾ?
– ಡಾ. ಅಶೋಕ್ ಕೆ.ಆರ್
ಅನಾಗರೀಕ, ಹಿಂದುಳಿದ ರಾಜ್ಯಗಳೆಂಬ ಹಣೆಪಟ್ಟಿ ಹೊತ್ತ ದೂರದ ಬಿಹಾರ, ಉತ್ತರಪ್ರದೇಶದಲ್ಲಿ ನಡೆಯುತ್ತದೆಂದು ಕೇಳುತ್ತಿದ್ದ ಅಮಾನವೀಯ ಘಟನೆಯೊಂದು ನಮ್ಮ ಕರ್ನಾಟಕದ ಮಂಡ್ಯಜಿಲ್ಲೆಯಲ್ಲಿ ನಡೆದುಹೋಗಿದೆ. ನಾಲ್ವರು ಯುವಕರು ಯಶವಂತಪುರ – ಮೈಸೂರು ರೈಲಿನಲ್ಲಿ ಮಹಿಳೆಯೊಬ್ಬಳನ್ನು ಚುಡಾಯಿಸಿದ್ದಾರೆ. ಬೇಸತ್ತ ಯುವತಿ ಬಾಗಿಲಿನ ಬಳಿ ಬಂದು ನಿಂತಿದ್ದಾಳೆ. ಅಲ್ಲಿಗೂ ಬಂದು ರೇಗಿಸಲಾರಂಭಿಸಿದವರಿಗೆ ಪೋಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾಳೆ. ಕೋಪಗೊಂಡ ಆ ನಾಲ್ಕು ಮನುಷ್ಯರೂಪಿ ರಾಕ್ಷಸರು ಚಲಿಸುವ ರೈಲಿನಿಂದ ಆಕೆಯನ್ನು ಹೊರತಳ್ಳಿಬಿಟ್ಟಿದ್ದಾರೆ. ರೈಲಾಗ ಮದ್ದೂರಿನ ಶಿಂಷಾ ನದಿಯ ಸೇತುವೆಯ ಮೇಲೆ ಚಲಿಸುತ್ತಿತ್ತು. ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಬೆನ್ನುಹುರಿಗೆ ಬಿದ್ದ ಏಟು, ಮೂಳೆಮುರಿತದಿಂದ ಎಷ್ಟರ ಮಟ್ಟಿಗೆ ಆ ಯುವತಿ ಚೇತರಿಸಿಕೊಳ್ಳುತ್ತಾಳೆ ಎಂಬುದನ್ನು ಕಾದುನೋಡಬೇಕಷ್ಟೇ.
ಆ ನಾಲ್ಕೂ ಯುವಕರನ್ನು ಪೋಲೀಸರು ಬಂಧಿಸಿದ್ದಾರೆ. ಮಾರನೇ ದಿನ ನ್ಯಾಯಾಲಯಕ್ಕೆ ಅವರನ್ನು ಕರೆದೊಯ್ಯುವಾಗ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮುತ್ತಿಗೆ ಹಾಕಿ ಅಪರಾಧಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಊರಿನ ಹೆಣ್ಣುಮಗಳ ಜೀವಕ್ಕೆ ಅಪಾಯತಂದ ಯುವಕರ ಮೇಲಿನ ಕೋಪ ಸಹಜವಾದುದು. ಆದರೆ? ಹಿಂದೂ ಜಾಗರಣ ವೇದಿಕೆ ಜಾಗೃತಗೊಂಡು ಆ ನಾಲ್ವರನ್ನು ಥಳಿಸಿದ್ದು ಯುವತಿಯ ಮೇಲೆ ಹಲ್ಲೆಯಾದ ಕಾರಣಕ್ಕೆ ಮಾತ್ರವಲ್ಲ! ಹಲ್ಲೆ ಮಾಡಿದ ನಾಲ್ವರು ಮುಸ್ಲಿಮರೆಂಬುದೇ ಇವರು ಜಾಗೃತಿಯಾಗಲು ಕಾರಣ! ಹಲ್ಲೆ ಮಾಡಿದವರು ಮುಸ್ಲಿಮರಾಗದೇ ಹಿಂದೂಗಳಾಗಿದ್ದಲ್ಲಿ ಅದರಲ್ಲೂ ಯಾವುದೋ ‘ಮೇಲುಜಾತಿಗೆ’[?] ಸೇರಿದವರಾಗಿದ್ದಲ್ಲಿ ಖಂಡಿತವಾಗ್ಯೂ ಹಿಂದೂ ಜಾಗರಣ ವೇದಿಕೆ ಜಾಗೃತವಾಗುತ್ತಿರಲಿಲ್ಲ ಎಂಬುದೇ ಇಂಥ ಸಂಘಟನೆಗಳ – ಹಿಂದೂ ಧರ್ಮದ ವೈಫಲ್ಯ.
‘ಮುಸ್ಲಿಮರ ಮೇಲೆ ಹಿಂದೂ ಸಂಘಟನೆಗಳು ಹಲ್ಲೆ ಮಾಡಿದ ತಕ್ಷಣ ಲೇಖನ ಬರೆದು ಸಂಘಟನೆಗಳನ್ನು ಜರಿಯುತ್ತಾರೆ’ ಎಂದಾಗಲೇ ನಿಮ್ಮಲ್ಲಿ ಬಹಳಷ್ಟು ಮಂದಿ ಯೋಚಿಸುತ್ತಿರಬಹುದು! ಒಂದಷ್ಟು ತಿಂಗಳಿನ ಹಿಂದೆ ಅದೇ ಮಂಡ್ಯ ಜಿಲ್ಲೆಯ ಅದೇ ಮದ್ದೂರು ತಾಲ್ಲೂಕಿನ ಹಳ್ಳಿಯೊಂದರಲ್ಲಿ ಇನ್ನೊಂದು ಅಮಾನವೀಯ ಘಟನೆ ನಡೆದಿತ್ತು. ಹೆತ್ತ ತಂದೆಯೇ ತನ್ನ ಮಗಳನ್ನು ಊರ ಜನರ – ಸಂಬಂಧಿಕರ ಜೊತೆ ಸೇರಿ ಸಾಯುವಂತೆ ಬಡಿದು ತನ್ನ ಹೊಲದಲ್ಲಿಯೇ ಬೆಂಕಿ ಕೊಟ್ಟು ಸಾಯಿಸಿಬಿಡುತ್ತಾನೆ. ಕಾರಣ? ಒಕ್ಕಲಿಗ ಗೌಡರ ಜಾತಿಗೆ ಸೇರಿದ ಈ ಹುಡುಗಿ ಪರಿಶಿಷ್ಟ ಜಾತಿಯ ಹುಡುಗನೊಬ್ಬನನ್ನು ಪ್ರೇಮಿಸಿದ್ದಳು. ಆ ಹುಡುಗನ ಮೇಲೆ ಹಲ್ಲೆಯಾಗಿತ್ತು. ಮನೆಯವರು ನೋಡಿದ ತನ್ನ ಜಾತಿಯದೇ ಹುಡುಗನನ್ನು ಮದುವೆಯಾಗುವುದಾಗಿ ನಂಬಿಸಿ ಕೊನೆಯ ಕ್ಷಣದಲ್ಲಿ ತನ್ನ ಪ್ರೇಮಿಯ ಜೊತೆ ಓಡಿಹೋಗುವ ನಿರ್ಧಾರ ಮಾಡಿದ್ದಳು. ನಿರ್ಧಾರ ತಿಳಿಯುತ್ತಿದ್ದಂತೆ ಅವಳ ‘ಅವಮರ್ಯಾದೆ’ ಹತ್ಯೆ ಮಾಡಲಾಗಿತ್ತು. ಹಿಂದೂ ಧರ್ಮದೊಳಗಿನ ಎರಡು ಜಾತಿಗಳ ನಡುವಿನ ಈ ಹೀನ ಕೃತ್ಯ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಯಾವ ಹಿಂದೂ ಸಂಘಟನೆಗಳನ್ನೂ ಜಾಗೃತಗೊಳಿಸಲಿಲ್ಲ. ಕೊನೇ ಪಕ್ಷ ಆ ಘಟನೆಗಳನ್ನು ಖಂಡಿಸುವ ಪತ್ರಿಕಾ ಹೇಳಿಕೆಗಳನ್ನೂ ನೀಡಲಿಲ್ಲ. ಮುಂದೆ ನಡೆದಿದ್ದೂ ಇನ್ನಷ್ಟು ಅಸಹ್ಯಕರ ಸಂಗತಿ. ಹೋರಾಟಗಳಿಗೆ ಹೆಸರಾದ ಮಂಡ್ಯ ಜಿಲ್ಲೆಯ ಅವನತಿ ಸೂಚಿಸುವ ಕೆಲಸ ನಡೆದುಹೋಯಿತು. ಡಾ ಲೋಕೇಶ್ ಬಾಬು ಎಂಬುವವರ ನೇತ್ರತ್ವದಲ್ಲಿ ‘ಒಕ್ಕಲಿಗರ ಸ್ವಾಭಿಮಾನಿ ಸಂಘವನ್ನು ರಚಿಸಿ ಮಗಳನ್ನು ಕೊಂದ ತಂದೆಯನ್ನೇ ಬೆಂಬಲಿಸುವ ಮೆರವಣಿಗೆ ಜಾಥಾ ನಡೆದುಬಿಟ್ಟವು.
ಹಿಂದೂ ಜಾಗರಣ ವೇದಿಕೆಯವರು ನಿನ್ನೆ ನಾಲ್ವರು ಯುವಕರನ್ನು ಥಳಿಸಿದ್ದು ನ್ಯಾಯ – ಕಾನೂನಿನ ದೃಷ್ಟಿಯಿಂದ ತಪ್ಪಿರಬಹುದು; ಆದರೆ ಅಂಥ ನೀಚರಿಗೆ ಥಳಿಸಿದ್ದನ್ನು ವೈಯಕ್ತಿಕವಾಗಿ ಯಾರೂ ಹೆಚ್ಚು ವಿರೋಧಿಸಲಾರರು. ಈ ಸಂಘಟನೆಗಳ ಮನಸ್ಸುಗಳು ತನ್ನದೇ ಧರ್ಮದ ಪರಿಧಿಯಲ್ಲಿ ನಡೆಯುವ ಅತ್ಯಾಚಾರ ಅನಾಚಾರಗಳ ಬಗ್ಗೆಯೂ ಜಾಗೃತವಾಗಬೇಕಲ್ಲವೇ? ಅನ್ಯಧರ್ಮೀಯರ ಮೇಲಿನ ಹಲ್ಲೆಯೇ ಧರ್ಮರಕ್ಷಣೆಯಾ? ಸ್ವಧರ್ಮದೊಳಗಿನ ಹುಳುಕುಗಳನ್ನು ನಿವಾರಿಸದೆ ಧರ್ಮರಕ್ಷಣೆಯಾಗುವುದಾದರೂ ಹೇಗೆ ಸಾಧ್ಯ?





ಮಾನ್ಯರೇ, ಇಂಥಹ ಘಟನೆಗಳು ನಮ್ಮ ದೇಶದಲ್ಲಿ ನಡೆಯುತ್ತಿರುವುದು ವಿಪರ್ಯಾಸ. ಇದು ಪಿಡುಗು ಸಹ ಹಾಗು ನಮ್ಮ ದೇಶದ ದುರಾದ್ರುಷ್ಟ. ಇದರಲ್ಲಿ ಇನ್ನು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ. ಇಂಥಹ ಘಟನೆಗಳು ನಡೆದಾಗ ಜಾತಿ, ಮತ ಪರಿಗಣಿಸುವುದು ತಪ್ಪು. ಯಾರು ತಪ್ಪು ಮಾಡಿದರೂ ತಪ್ಪೇ. ನಮ್ಮ ದೇಶದ ಕಾನೂನಿನಲ್ಲಿ ಬೇದಭಾವ ಎಂಬುದಿಲ್ಲ.
ಆದರೆ ಸುದ್ದಿ ಮಾಧ್ಯಮಗಳಲ್ಲಿ ಜಾತಿ ಮತಗಳನ್ನು ಪ್ರಚೋದಿಸುವುದು ಸರಿಯಲ್ಲ. ಒಟ್ಟಿನಲ್ಲಿ ತಪ್ಪಿತಸ್ತರು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು.
ಪೋಷಕರೂ ಸಹ ತಮ್ಮ ಮಕ್ಕಳಿಗೆ ಇಂತಹ ಕೃತ್ಯಗಳ ಬಗ್ಗೆ ತಿಳುವಳಿಕೆ ನೀಡಿ, ಮುಂದಾಗುವ ತೊಂದರೆಗಳ ಬಗ್ಗೆ ತಿಳುವಳಿಕೆ ನೀಡಬೇಕು.
ಮಕ್ಕಳೂ ಸಹ ಹೆಣ್ಣಾಗಲಿ, ಗಂಡಾಗಲಿ, ನಾವು ಏನು ಮಾಡುತ್ತಿದ್ದೇವೆ, ಇದರ ಪರಿಣಾಮ ಏನಾಗಬಹುದು ಎಂಬುದನ್ನು ಯೋಚಿಸಿ ಹೆಜ್ಜೆ ಇಡಬೇಕು. ಇದರಿಂದ ಅವರ ಕುಟುಂಬದಲ್ಲಿ, ಸಮಾಜದಲ್ಲಿ, ಪೋಷಕರಿಗೆ ಆಗುವ ನೋವು, ಅನಾನುಕೂಲಗಳ ಬಗ್ಗೆ ಯೋಚಿಸಬೇಕು. ಅಲ್ಲವೇ?