ವಿಷಯದ ವಿವರಗಳಿಗೆ ದಾಟಿರಿ

ಜುಲೈ 30, 2012

5

ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?

‍ನಿಲುಮೆ ಮೂಲಕ

-ರಶ್ಮಿ ಕಾಸರಗೋಡು

ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ, ಅಬಲೆಯಲ್ಲ ಸಬಲೆ ಎಂದು ನಾನೂ ಸೇರಿದಂತೆ ಮಹಿಳೆಯರೆಲ್ಲಾ ಗಟ್ಟಿಯಾಗಿ ಕೂಗಿ ಹೇಳುತ್ತಿದ್ದೇವೆ. ಹೆಣ್ಣು ಅಬಲೆಯಿಂದ ಸಬಲೆಯಾಗಿ ಬಡ್ತಿ ಪಡೆದಿದ್ದರೂ ದೌರ್ಜನ್ಯ , ಕಿರುಕುಳಗಳು ಮಾತ್ರ ಅವಳ ನೆರಳಂತೆ ಹಿಂಬಾಲಿಸುತ್ತಿವೆ. ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮಹಿಳೆ ದೌರ್ಜನ್ಯಕ್ಕೊಳಗಾಗುವುದು ತಪ್ಪಿಲ್ಲ. ಅಲ್ಲಿ ಹಾಗಾಯ್ತು, ಇಲ್ಲಿ ಹೀಗಾಯ್ತು ಎಂದು ಎಂಬ ವರದಿಗಳನ್ನೋದಿದಾಗ ಅಯ್ಯೋ ಪಾಪ ಎಂದು ಎನಿಸುತ್ತದೆ. ಆದರೆ ಇದಕ್ಕೆ ಪರಿಹಾರ ಏನು? ಎಂಬುದರ ಬಗ್ಗೆ ಚಿಂತಿಸತೊಡಗಿದಾಗಲೇ ಸಮಸ್ಯೆಯ ಗಂಭೀರತೆ ಅರಿವಿಗೆ ಬರುವುದು. ಇತ್ತೀಚೆಗೆ ನಮ್ಮ ದೇಶದಲ್ಲಿ ಇಂಥಾ ದೌರ್ಜನ್ಯಗಳ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಅದರಲ್ಲೂ ಬೆಂಗಳೂರು ಸುರಕ್ಷಿತವಲ್ಲ ಎಂದು ಹೇಳಲಾಗುತ್ತದೆ. ಎನ್ ಸಿಆರ್ ಬಿ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರದಿ ಪ್ರಕಾರ 2011ರಲ್ಲಿ ಬೆಂಗಳೂರಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ದಾಖಲಾದ ಪ್ರಕರಣಗಳ ಸಂಖ್ಯೆ 1,890, ಇನ್ನು ದಾಖಲಾಗದೇ ಇರುವ ದೌರ್ಜನ್ಯಗಳ ಸಂಖ್ಯೆ ಎಷ್ಟಿರಬಹುದೇನೋ. ನವದೆಹಲಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 4,489. ಅಂದರೆ ದೆಹಲಿಯ ನಂತರ ಬೆಂಗಳೂರು ನಗರವೇ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದಕ್ಕೆ ಈ ಪ್ರಕರಣಗಳ ಸಂಖ್ಯೆಯೇ ಸಾಕ್ಷಿ.

ಎನ್ ಸಿಆರ್ ಬಿ ನೀಡಿರುವ ಅಂಕಿ ಅಂಶಗಳ ಪ್ರಕಾರ 2011ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಲೆಕ್ಕಾಚಾರ ಹೀಗಿದೆ.

ಪತಿಯಿಂದ ದೌರ್ಜನ್ಯ -458, ಕಿರುಕುಳ -250,ಅಪಹರಣ -206, ಅತ್ಯಾಚಾರ -97, ವರದಕ್ಷಿಣೆ ಕಿರುಕುಳದಿಂದ ಸಾವು -53,ಲೈಂಗಿಕ ದೌರ್ಜನ್ಯ -40. 2010ರಲ್ಲಿ ಈ ಎಲ್ಲ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಹಾಗಾದರೆ ವರ್ಷದಿಂದ ವರ್ಷಕ್ಕೆ ಇಂಥಾ ದೌರ್ಜನ್ಯಗಳು ಯಾಕೆ ಹೆಚ್ಚುತ್ತಾ ಹೋಗುತ್ತವೆ? ನಾವು ಮೊದಲಿನಂತಿಲ್ಲ, ಗಟ್ಟಿಗಿತ್ತಿಯರು, ವಿದ್ಯಾವಂತೆಯರು, ನಮ್ಮ ಕಾಲ ಮೇಲೆ ನಾವೇ ನಿಲ್ಲಲು ತಾಕತ್ತು ಇರುವ ‘ಇಂದಿನ’ ಮಹಿಳೆಯರು. ಹೀಗಿದ್ದರೂ, ದೌರ್ಜನ್ಯಗಳ ಸಂಖ್ಯೆಗೆ ಲಗಾಮು ಹಾಕಲು ಸಾಧ್ಯವಾಗದೇ ಇರುವುದು ಯಾಕೆ?

ಉದಾಹರಣೆಗೆ ಹೆಣ್ಣಿನ ಮೇಲೆ ದೌರ್ಜನ್ಯ ಎಂಬ ಸುದ್ದಿ ಪ್ರಕಟವಾಗಿದೆ. ನಾವು ಓದುತ್ತೇವೆ, ಆಮೇಲೆ ಹೀಗಾಗಬಾರದಿತ್ತು ಎಂದು ಹೇಳಿ ಸುಮ್ಮನಾಗುತ್ತೇವೆ. ಹೆಚ್ಚೆಂದರೆ ಸಾಮಾಜಿಕ ತಾಣದಲ್ಲಿ ಸುದ್ದಿ ಶೇರ್ ಮಾಡುತ್ತೇವೆ, ಲೈಕ್, ಕಾಮೆಂಟ್ ಮಾಡಿ ನಮ್ಮ ನಿಲುವು ತಿಳಿಸುತ್ತೇವೆ. ದೃಶ್ಯ ಮಾಧ್ಯಮದವರು ಕಿರುಕುಳಕ್ಕೊಳಗಾದ ಹೆಣ್ಮಗಳನ್ನು ಸ್ಟುಡಿಯೋಗೆ ಕರೆಸಿ ಏನಮ್ಮಾ ನಿನ್ ಪ್ರಾಬ್ಲಂ? ಅಂತಾ ಕೇಳ್ತಾರೆ. ಮಹಿಳಾವಾದಿಗಳು ಗಂಟೆಗಟ್ಟಲೆ ದೌರ್ಜನ್ಯದ ಬಗ್ಗೆ ಭಾಷಣ ಕೊರೆದು, ಗಂಡು ವರ್ಗವನ್ನು ಹಿಗ್ಗಾಮುಗ್ಗ ಬೈತಾರೆ, ಇನ್ನು ಕೆಲವರು ಅನಾದಿಕಾಲದಿಂದಲೂ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಈಗಲೂ ನಡೆಯುತ್ತಿರುವುದು ದುರದೃಷ್ಟಕರ ಎಂದು ಪುಟಗಟ್ಟಲೆ ಬರೆಯುತ್ತಾರೆ. ಆದರೆ, ಈ ದೌರ್ಜನ್ಯವನ್ನು ತಡೆಗಟ್ಟಲು ನಾವೇನು ಮಾಡಬೇಕು ಎಂಬ ಪ್ರಶ್ನೆ ಕೇಳಿದರೆ ಮೊದಲು ಬರುವ ಉತ್ತರ ಪ್ರಕರಣ ದಾಖಲಿಸಬೇಕು. (ಅಲ್ಲಿಯೂ ನಮಗೆ ನ್ಯಾಯ ಸಿಗುತ್ತೆ ಎಂದು ಖಾತ್ರಿ ಇಲ್ಲ) ಅದೂ ಮಾಡಿದ್ದಾಯ್ತು! ಮುಂದೆ? ಯಾವುದೋ ಟಿವಿ ಚಾನೆಲ್ ಮುಂದೆ ಹೋಗಿ ನಡೆದದ್ದೆಲ್ಲಾ ವಿವರಿಸುವುದು! ನಂತರ? ಗೊತ್ತಿಲ್ಲ..ಯಾಕೆಂದರೆ  ಏನು ಮಾಡಬೇಕೆಂಬುದು ಯಾರೂ ಹೇಳಿಕೊಟ್ಟಿಲ್ಲವಲ್ಲಾ…

ನಾವು ಎಡವಿದ್ದು ಇಲ್ಲಿಯೇ. ಯಾವುದೇ ಹೆಣ್ಣು ಮಗಳು ದೌರ್ಜನ್ಯಕ್ಕೊಳಗಾದಾಗ ಅವಳಿಗೆ ಏನಾಯ್ತು? ಎಂದು ಕೇಳುತ್ತೇವೆಯೇ ವಿನಾ ಆಕೆ ಮುಂದೇನು ಮಾಡಬೇಕೆಂಬುದರ ಬಗ್ಗೆ ಯಾರೂ ಸಲಹೆ ಸೂಚನೆಯನ್ನು ಕೊಡುವುದಿಲ್ಲ. ಒಂದು ಪುಟ್ಟ ಉದಾಹರಣೆ ಕೊಟ್ಟು ವಿವರಿಸುವುದಾದರೆ, ಬಸ್ಸಿನಲ್ಲಿ ಪ್ರಯಾಣ ಮಾಡುವಾಗ  ಗಂಡಸು ಹಿಂದಿನಿಂದ ಅನುಚಿತವಾಗಿ ವರ್ತನೆ ಮಾಡುತ್ತಾನೆ. ಆತನ ಮುಂದೆ ನಿಂತಿದ್ದ ಹೆಣ್ಮಗಳು ಅಲ್ಲಿಂದ ದೂರ ಸರಿದು ನಿಲ್ಲುತ್ತಾಳೆಯೇ ಹೊರತು ಅವನ ವಿರುದ್ಧ ದನಿಯೆತ್ತಲು ಮುಂದಾಗುವುದಿಲ್ಲ. ಕಾರಣ, ದನಿಯೆತ್ತಿದರೆ ಏನಾಗುವುದೋ ಎಂಬ ಭಯ ಆಕೆಯನ್ನು ಆವರಿಸಿ ಬಿಟ್ಟಿರುತ್ತದೆ. ಆಕೆ ಈ ವಿಷಯವನ್ನು ಮನೆಯವರಲ್ಲಿ ಹೇಳುತ್ತಾಳೆ ಅಂತಿಟ್ಟುಕೊಳ್ಳಿ. ಅವರೂ ಕೂಡಾ ನೀನು ಜಗಳ ಮಾಡೋಕೆ ಹೋಗ್ಬೇಡಮ್ಮಾ…ಬಸ್್ನಲ್ಲಿ ತುಂಬಾ ಹಿಂದೆ ಹೋಗಿ ನಿಲ್ಬೇಡ…ಎಂಬ ಸಲಹೆಯನ್ನೇ ನೀಡುತ್ತಾರೆ. ಆದರೆ ಯಾರೊಬ್ಬರೂ, ಬಸ್ಸಿನಲ್ಲಿ ನಿನ್ನ ಜತೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ ನೀನು ತೀವ್ರವಾಗಿ ಪ್ರತಿಕ್ರಿಯಿಸು ಎನ್ನಲ್ಲ, ಕಪಾಳಕ್ಕೆ ಬಾರಿಸು ಎಂದು ಹೇಳಲ್ಲ.

ಬಸ್ಸಿನಲ್ಲಿ ಕಿರುಕುಳಕ್ಕೊಳಗಾದರೆ ಹೆಣ್ಮಗಳು ಗಟ್ಟಿ ಪ್ರತಿಕ್ರಿಯೆ ನೀಡಲಿ ನೋಡೋಣ, ಜನರೆಲ್ಲಾ ಅವಳ ಬೆಂಬಲಕ್ಕೆ ನಿಲ್ಲುತ್ತಾರೆ. ಹೆಣ್ಮಕ್ಕಳಿಗೆ ಇದೊಂದು ಅಡ್ವಾಂಟೇಜ್. ಆದರೆ ಬಹುತೇಕ ಹೆಣ್ಮಕ್ಕಳು ಇದನ್ನು ಕಡೆಗಣಿಸಿ, ಮೌನದ ಮೊರೆ ಹೋಗುತ್ತಾರೆ. ಪರಿಣಾಮ, ಗಂಡಸರು ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ. ಹೀಗಿರುವಾಗ ಯಾರಾದರೊಬ್ಬ ಹೆಣ್ಮಗಳು ತೀವ್ರ ತಿರುಗೇಟು ನೀಡಲಿ ನೋಡೋಣ, ಆ ಪುಣ್ಯಾತ್ಮ ಮತ್ತೆ ಆ ಕೆಲಸಕ್ಕೆ ಕೈ ಹಾಕುವ ಧೈರ್ಯ ತೋರಲ್ಲ.

ಇನ್ನು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಅವರು ತೊಡುವ ಬಟ್ಟೆಗಳೇ ಕಾರಣ ಎಂಬ ವಾದವಿದೆ. ಆದರೆ ಮೊನ್ನೆ ಮದ್ದೂರಲ್ಲಿ ಗಾರ್ಮೆಂಟ್ ಕೆಲಸದಲ್ಲಿರುವ ಆಶಾ ಎಂಬ ಯುವತಿಯನ್ನು ಚುಡಾಯಿಸಿ, ರೈಲಿನಿಂದ ಹೊರದಬ್ಬಿದ ಘಟನೆಗೆ ಏನೆನ್ನಬೇಕು? ಆ ಹೆಣ್ಮಗಳು ಯಾವುದೇ ಪ್ರಚೋದನಾಕಾರಿ ಬಟ್ಟೆ ತೊಟ್ಟಿರಲಿಲ್ಲ. ಆದರೂ ಆಕೆ ಕಿರುಕುಳಕ್ಕೊಳಬೇಕಾಗಿ ಬಂತು. ಅಷ್ಟೇ ಯಾಕೆ ಎಳೆ ಮಕ್ಕಳನ್ನೂ, ಅಜ್ಜಿಯಂದಿರನ್ನೂ ಹಾಸಿಗೆಗೆಳೆಯುವ ಕಾಮುಕರು ನಮ್ಮ ಸಮಾಜದಲ್ಲಿರುವಾಗ ಅಲ್ಲಿ ಪ್ರಚೋದನಾಕಾರಿ ಬಟ್ಟೆಯ ವಿಷ್ಯ ಬರುವುದೇ ಇಲ್ವವಲ್ಲಾ? ಆದರೂ, ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣಿಸುತ್ತಿದ್ದ ಆಶಾಗೆ ಹುಡುಗರು ಕಿರುಕುಳ ನೀಡುತ್ತಿದ್ದಾಗ ಸಹ ಪ್ರಯಾಣಿಕರ್ಯಾರೂ ಸಹಾಯಕ್ಕೆ ಬಂದಿಲ್ಲವೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ಇತ್ತೀಚೆಗೆ ಶಿವಾಜಿನಗದಿಂದ ನವರಂಗ್ ರೂಟ್ ನಲ್ಲಿ ರಾತ್ರಿ 8ರ ವೇಳೆಗೆ ಪ್ರಯಾಣಿಸುತ್ತಿದ್ದಾಗ, ನಡು ವಯಸ್ಸಿನ ವ್ಯಕ್ತಿಯೊಬ್ಬ ಹೆಂಗಸರ ಮಧ್ಯೆ ನಿಂತು ಮೈಮೇಲೆ ಬೀಳುತ್ತಿದ್ದ. ಮೊದಲಿಗೆ ನನ್ನ ಮುಂದೆ ನಿಂತಿದ್ದ ಹುಡುಗಿಯ ಪಕ್ಕ ನಿಂತು ವಾಲುತ್ತಿದ್ದ. ಆಕೆ ಅಲ್ಲಿಂದ ಜಾಗ ಬದಲಿಸಿದಾಗ ಆ ಭೂಪ ನನ್ನತ್ತ ವಾಲುತ್ತಿದ್ದ. ಆತ ಕುಡಿದಿದ್ದ. ಕೆಟ್ಟ ವಾಸನೆ ಬೇರೆ…ಸ್ವಲ್ಪ ಸರಿಯಾಗಿ ನಿಂತ್ಕೊಳ್ಳಿ ಅಂದೆ. ಅವ ಕೇಳಿಸದಂತೆ ನಟಿಸಿದ. ಆಫೀಸು ಮುಗಿಸಿ ಹೋಗುವ ವೇಳೆ ಸುಸ್ತಾಗಿದ್ದುದರಿಂದ ಸಿಟ್ಟೂ ಬಂದಿತ್ತು. ಗಟ್ಟಿಯಾಗಿ ಹೇಳಿದೆ ನಿಮ್ಗೇನು ಭಾಷೆ ಅರ್ಥ ಆಗಲ್ವ? ಹಿಂದೆ ಹೋಗಿ ನಿಂತ್ಕೊಳ್ರಿ…ಕುಡಿದು ಬಂದು ಮೈಮೇಲೆ ಬೀಳ್ತಾರೆ ಎಂದೆ. ಅವ ನಾನೇನು ಮಾಡಿದೆ? ನೀನೇ ಈ ಕಡೆ ವಾಲುತ್ತಿದ್ದಿ ಅಂದು ಬಿಟ್ಟ. ನನ್ನ ಪಕ್ಕ ನಿಂತಿದ್ದ ಹುಡುಗಿಯರೆಲ್ಲಾ ಮುಸಿ ಮುಸಿ ನಗತೊಡಗಿದರು. ಅದನ್ನು ನೋಡಿ ಕೋಪ ಇನ್ನಷ್ಟು ಬಂದ್ಬಿಟ್ಟಿತ್ತು. ಕಣ್ಣಲ್ಲಿ ನೀರು…

ಬಸ್ಸಿನಲ್ಲಿ ಕಂಡೆಕ್ಟರಾಗಲೀ, ಸಹ ಪ್ರಯಾಣಿಕರಾಗಲೀ ಏನೂ ಅನ್ನುತ್ತಿಲ್ಲ. ಆವಾಗಲೇ ದೂರದ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಉರ್ದು ಮಿಶ್ರಿತ ಹಿಂದಿಯಲ್ಲಿ ಆತನಿಗೆ ಹಿಗ್ಗಾಮುಗ್ಗ ಬೈಯ್ಯತೊಡಗಿದರು. ಅವ ಅಲ್ಲಿಂದ ಮುಂದೆ ಹೋಗಿ ಬಾಗಿಲ ಬಳಿ ನಿಂತು ‘ನಿನ್ನ ನೋಡಿ ಕೊಳ್ತೇನೆ’ ಎಂದು ಬೆದರಿಕೆ ಹಾಕಿ ಇಳಿದು ಹೋದ. ಮೈ ನಡುಗುತ್ತಿತ್ತು, ಸಹ ಪ್ರಯಾಣಿಕರು ಎಲ್ಲರೂ ನಾನೇನೋ ತಪ್ಪು ಮಾಡಿರುವಂತೆ ನೋಡುತ್ತಿದ್ದರು. ಈಗ ಅತ್ತು ಬಿಡುತ್ತೇನೆ ಎಂಬ ಸ್ಥಿತಿಯಲ್ಲಿದ್ದೆ ಆದರೆ ಸಂಭಾಳಿಸಿಕೊಂಡೆ…ಹಾಸ್ಟೆಲ್ ತಲುಪಿದಾಗಲೂ ಹೆದರಿಕೊಂಡಿದ್ದೆ. ಈ ವ್ಯಕ್ತಿಯ ಬೆದರಿಕೆ, ಸಹ ಪ್ರಯಾಣಿಕರ ಮುಸಿ ಮುಸಿ ನಗು ಮನದಲ್ಲೇ ಸುಳಿಯುತ್ತಿತ್ತು…ಆಮೇಲೆ ಎಲ್ಲ ಸರಿಹೋಯ್ತು. ಇದು ನನ್ನ ಅನುಭವ. ಹೀಗೆ ಅದೆಷ್ಟೋ ಹೆಣ್ಮಕ್ಕಳಿಗೆ ಇದಕ್ಕಿಂತ ಕೆಟ್ಟ ಅನುಭವವೂ ಆಗಿರಬಹುದು.

ಅದರಲ್ಲೂ ಸದ್ಯಕ್ಕೆ ಹೆಚ್ಚಾಗಿ ಸುದ್ದಿ ಮಾಡುತ್ತಿರುವ ದೌರ್ಜನ್ಯ ಎಂದರೆ ಲೈಂಗಿಕ ದೌರ್ಜನ್ಯ. ಬಾಸ್ ಹೀಗೆ ಮಾಡಿದ, ಸ್ವಾಮಿ ಹೀಗೆ ಮಾಡಿದ ಎಂದು ದೃಶ್ಯ ಮಾಧ್ಯಮದ ಮುಂದೆ ಅತ್ತು ಕರೆಯುವ ಸಾಕಷ್ಟು ಮಹಿಳೆಯರನ್ನು ನಾವು ನೋಡಿರುತ್ತೇವೆ. ಇವರೆಲ್ಲಾ ಹೇಳುವ ಒಂದೇ ಒಂದು ದೂರು ಅವ ನನ್ನನ್ನು ಬಳಸಿಕೊಂಡ!. ನನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಮಾಡಿದ!  ಹಾಗಾದರೆ ಇವರ್ಯಾಕೆ ಆತನಿಗೆ ಬಳಕೆ ವಸ್ತುವಾಗಿ ಬಿಟ್ಟರು? ಆತ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗುವಾಗ ಸುಮ್ಮನಿದ್ದರು? ಒಂದು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದರೆ, ಓಕೆ…ಆವಾಗ ಅವಳಿಗೆ ಏನು ಮಾಡಬೇಕೆಂಬುದು ಗೊತ್ತಾಗಲಿಲ್ಲ ಅಂತಿಟ್ಟುಕೊಳ್ಳೋಣ, ಆದರೆ ಎರಡನೇ ಬಾರಿ ಆತ ಮಂಚಕ್ಕೆ ಕರೆಯುವಾಗ ಪ್ರತಿಭಟಿಸದೇ ಇರುವುದು ತಪ್ಪಲ್ಲವೇ? ಲೈಂಗಿಕ ದೌರ್ಜನ್ಯಕ್ಕೀಡುಮಾಡಿದ ನಂತರ ಕೊಂದು ಬಿಡ್ತೀನಿ ಅಂತಾ ಆತ ಬೆದರಿಕೆ ಹಾಕ್ತಾನೆ ಎಂದಾದರೆ, ಕೊಂದು ಬಿಡು.. ಪದೇ ಪದೇ ನಿನ್ನೊಂದಿಗೆ ದೇಹ ಹಂಚಿ ಸುಮ್ಮನಿರುವುದಕ್ಕಿಂತ ಸಾಯುವುದೇ ಒಳ್ಳೇದು ಎಂದು ಉತ್ತರಿಸಿದ್ದರೆ ಆತನಿಗದು ತಿರುಗೇಟು ಆಗುತ್ತಿತ್ತು. ಆದರೆ ಇದ್ಯಾವುದನ್ನೂ ಮಾಡದೆ ಸುಮ್ಮನಿದ್ದು, ಕೊನೆಗೆ ಕಣ್ಣೀರು ಹಾಕಿದರೆ ಏನು ಪ್ರಯೋಜನ?

ಕಣ್ಣೀರು ಅಸ್ತ್ರವಾಗಿ ಬಳಸಬಹುದು ಆದರೆ ಅದೊಂದು ಅವಧಿಯವರೆಗೆ ಮಾತ್ರ. ಜೀವನ ಪರ್ಯಂತ ಕಣ್ಣೀರು ಹಾಕಿದರೆ ಏನೂ ದಕ್ಕಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದರ ಬದಲಿಗೆ ಒಂದು ಚಿಕ್ಕ ಅನುಭವವೇ ಆಗಿರಲಿ, ಅದರಿಂದ ಕಲಿಬೇಕು, ಆ ಬಗ್ಗೆ ಎಚ್ಚರ ವಹಿಸಬೇಕು, ಸಾಧ್ಯವಾದರೆ ಪ್ರತಿಭಟಿಸಬೇಕು. ಆದರೆ ಅದನ್ನು ಕಡೆಗಣಿಸಿ ಸುಮ್ಮನಾಗುವುದು ಸರಿಯಲ್ಲ. ಯಾಕೆಂದರೆ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿರುತ್ತದೆ. ಪರಿಹಾರ ಹುಡುಕುತ್ತಾ ಹೋದಂತೆ ಹೊಸ ಅನುಭವ ಸಿಗುತ್ತೆ. ಈ ಅನುಭವ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿ ಮಾಡುತ್ತೆ. ನಾವು ಪ್ರತಿಭಟಿಸುತ್ತೇವೆ ಎಂದಾಕ್ಷಣ ನಮ್ಮ ಬಗ್ಗೆ ಅಪವಾದಗಳು ಹರಡಬಹುದು, ಕೆಲವೊಮ್ಮೆ ಜೀವಕ್ಕೇ ಸಂಚಕಾರ ಬರಬಹುದು. ಆದರೆ ಎಲ್ಲವನ್ನು ಸಹಿಸಿ ಹೀಗೇ ಮುಂದುವರಿದರೆ ಮುಂದೆ ಇದಕ್ಕಿಂತ ದೊಡ್ಡ ದೌರ್ಜನ್ಯಗಳಿಗೆ ನಾವು ಬಲಿಯಾಗಬೇಕಾಗಿ ಬರಬಹುದು. ಆವಾಗ ನಾವು ಹೇಳುವ ಕಣ್ಣೀರ ಕಥೆ ಮಾಧ್ಯಮಗಳ ಟಿಆರ್ ಪಿ ಹೆಚ್ಚಿಸಬಹುದೇ ವಿನಾ ಕಳೆದು ಹೋದ ಕಾಲವನ್ನು ಮರಳಿ ತರಲಾರದು. ಏನಂತೀರಾ?
* * * * * * * *

ಚಿತ್ರಕೃಪೆ : ಅಂತರ್ಜಾಲ

5 ಟಿಪ್ಪಣಿಗಳು Post a comment
  1. Nanjunda Raju's avatar
    ಜುಲೈ 30 2012

    ಶ್ರೀಮತಿ ರಶ್ಮಿಯವರೇ, ತಾವು ಒಂದು ಹೆಣ್ಣಾಗಿ ಸಾಕಷ್ಟು ಅನುಭವಿಸಿ, ಲೇಖನ ಬರೆದಿದ್ದೀರಿ. ನಿಮಗೆ ನಮ್ಮ ಸಹಾನುಭೂತಿ ಇದೆ. ಆದರೆ ಅ ಸಮಯ ಸಂದರ್ಬಗಳಲ್ಲಿ ಬುದ್ದಿವಂತಿಕೆಯಿಂದ ತಪ್ಪಿಸಿಕೊಳ್ಳಬೇಕು. ಪ್ರತಿಭಟಿಸುತ್ತೇನೆ, ತಿರುಗಿ ಸರಿಯಾಗಿ ಹೇಳುತ್ತೇನೆ, ಜಗಳವಾಡುತ್ತೇನೆ. ಹೊಡೆದಾದುತ್ತೇನೆ, ನಾನು ಯಾರಿಗೂ ಹೆದರುವುದಿಲ್ಲ ಎಂದು ಉಗುರಿನಲ್ಲಿ ಹೋಗುವುದನ್ನು ಕೊಡಲಿ ತೆಗೆದುಕೊಂಡರೆ, ಕೆಲವುಸಾರಿ ತೀವ್ರ ಹಲ್ಲೆಯಿಂದಲೋ,ಕೊಲೆಯಿಂದಲೋ, ಪ್ರಕರಣ ಅಂತ್ಯವಾಗುತ್ತದೆ. ಹೆಣ್ಣು ಮಕ್ಕಲ್ಲಾದರಂತೂ ಮುಗಿದೇ ಹೋಯಿತು. ಈಗಿನ ಬೆಂಗಳೂರು ಹೆಣ್ಣಾಗಲಿ, ಗಂಡಾಗಲಿ, ಯಾರಿಗೂ ರಕ್ಷಣೆ ಇಲ್ಲವಾಗಿದೆ. ಪ್ರತಿದಿನ ಸುತ್ತಡುವವರಿಗೆ ಪ್ರತಿ ದಿನವೂ ಇದ್ದದ್ದೇ ಎನ್ನುವಂತಾಗಿದೆ. ಇತ್ತಿತ್ತಲಾಗಿ ಅಪರಾಧಿಗಳಿಗೆ, ಕಿಡಿಗೆಡಿಗಳಿಗೆ, ಕೊಲೆಗಾರರಿಗೆ, ರಕ್ಷಣೆ ಇದೆ. ಅದೇ ಸಜ್ಜನರಿಗೆ ಅಲ್ಲ. ಅಲ್ಲವೇ?

    ಉತ್ತರ
    • Rashmi Tendulkar's avatar
      ಆಗಸ್ಟ್ 1 2012

      @
      Nanjunda Raju
      ನೀವು ಹೇಳುವುದನ್ನು ನಾನು ಒಪ್ಪುತ್ತೇನೆ. ಯಾಕೆಂದರೆ ಎಲ್ಲ ಸಮಯದಲ್ಲೂ ಆಕ್ರಮಣಾಕಾರಿ ಗುಣ ವರ್ಕ್್ಔಟ್ ಆಗಲ್ಲ ಎಂಬುದು ನನಗೆ ಗೊತ್ತು. ಆದರೆ ಕಡೇಪಕ್ಷ ಹೊಡೆಯುವುದು ಬಡಿಯುವುದೇನು ಬೇಡ, ಮಾತಿನಿಂದಲೇ ಹೆದರಿಸಬಹುದಲ್ವಾ? ಹೆಣ್ಮಕ್ಕಳು ಅದನ್ನೂ ಮಾಡದೆ ಸುಮ್ಮನಿರ್ತರಲ್ವಾ….ಅದು ಬದಲಾಗಬೇಕೆಂಬುದೇ ನನ್ನ ಆಶಯ.

      ಪ್ರತಿಕ್ರಿಯೆಗೆ ನನ್ನಿ
      ರಶ್ಮಿ ಕಾಸರಗೋಡು

      ಉತ್ತರ
  2. ರವಿ's avatar
    ರವಿ
    ಜುಲೈ 31 2012

    ತಿರುಗಿ ಬೀಳೋದರಿಂದ ಸಮಸ್ಯೆ ಪರಿಹಾರವಾಗೋಲ್ಲ ರಶ್ಮಿಯವರೇ. ರಾಜು ರವರು ಹೇಳಿದಂತೆ ಉಪಾಯವಾಗಿ ಜಾಣ್ಮೆಯಿಂದ ಪರಿಹರಿಸಿಕೊಳ್ಳಬೇಕು ಅಷ್ಟೇ . ಯಾಕೆಂದರೆ ನಿಮ್ಮ ಅನುಭವದಲ್ಲೇ ನೋಡಿದರೆ ನೀವು ಆ ಕುಡುಕನಿಗೆ ಬೈ ದಿರಿ ಆದರೆ ಅಮಲಿನಲ್ಲಿದ್ದ ಅವನಿಗೆ ಅದು ಅರ್ಥವೇ ಆಗಿಲ್ಲ ,ಆಗುವುದೂ ಇಲ್ಲ ! ಅದೇ ಅವನು ತಿರುಗಿ ಬೈದರೇ ಅಥವಾ ಹೊಡೆದರೆ ನಿಮ್ಮ ಗತಿಯೇನಾಗುತ್ತಿತ್ತು? ಇದು ನಿಮಗೆ ಮಾತ್ರವಲ್ಲ ನಾವು ಗಂಡಸರಿಗೂ ಅನ್ವಯಿಸುತ್ತೆ! ನನಗೂ ಇಂತಹ ಅನುಭವ ಆಗಿದೆ, ಕುಡುಕರ ಅಥವಾ ತಲೆಹಿಡುಕರ ತಂಟೆಗೆ ಹೋಗಬಾರದು, ಅವರನ್ನು ನಿರ್ಲಕ್ಷಿಸಿ ಅಷ್ಟೇ ! ನಾನೂ ಕೂಡಾ ಇಂತಹವರನ್ನು ಆ ಕೂಡಲೇ ಪ್ರಟಿಭಟಿಸುತ್ತಿದ್ದೆ ಮತ್ತು ತಿರುಗಿ ಬೀಳುತ್ತಿದ್ದೆ , ಆದರೆ ಯಾವಾಗ ಒಮ್ಮೆ ತಿರುಗಿ ಬಿದ್ದಾಗ ಅವರು ನನ್ನ ಮೇಲೆ ಎರಗಿ ನನ್ನಲ್ಲಿದ್ದ ಎಲ್ಲವನ್ನೂ ಕಿತ್ತುಕೊಂಡು,ಹೊಡೆದು ಹೋದರೋ ಅವತ್ತಿನಿಂದ ತಿರುಗಿ ಬೀಳದೆ ನಾಜೂಕಾಗಿ,ಜಾಣ್ಮೆಯಿಂದ ತಪ್ಪಿಸಿಕೊಳ್ಳುವುದನ್ನು ರೂಧಿಸಿಕೊಂಡಿದ್ದೇನೆ! ಯಾಕೆಂದರೆ ನನಗೆ ಆಮೇಲೆ ಅರ್ಥ ಆಯಿತು ತಿರುಗಿಬಿದ್ದರೆ ಪ್ರಾಣ ತೆಗೆಯಲೂ ಅವರು ಹೇಸಲಾರರು ಯಾಕೆಂದರೆ ಅವರಿಗೆ ಮಾನ ಮರ್ಯಾದೆ ಇಲ್ಲಾ ! ಹಾಗಾಗಿ ತಿರುಗಿ ಬೀಳೋ ಬದಲು ಜಾಣ್ಮೆಯಿಂದ ತಪ್ಪಿಸಿಕೊಳ್ಳೋದೇ ಒಳ್ಳೆಯದು.! ಅದು ಹೆಂಗಸರಾಗಿರಬಹುದು ಅಥವಾ ಗಂಡಸರಾಗಿರಬಹುದು.

    ಉತ್ತರ
  3. Rashmi Tendulkar's avatar
    ಆಗಸ್ಟ್ 1 2012

    @ರವಿ

    ನಮ್ಮ ಎದುರಾಳಿ ಹೇಗಿದ್ದಾನೆ ಎಂಬುದನ್ನು ನೋಡಿದ ಮೇಲಷ್ಟೇ ಪ್ರತಿಕ್ರಿಯೆ ನೀಡಬೇಕು. ಯಾಕೆಂದರೆ ಅವರು ಬಲಿಷ್ಠರಾಗಿದ್ದಾರೆ ಸಮಸ್ಯೆಗೆ ಸಿಲುಕುವವರೂ ನಾವೇ. ಇನ್ನು, ಬಸ್್ನಲ್ಲಿ ಎಷ್ಟೋ ಗಂಡಸರು ಹಿಂದಿನಿಂದ ಬಂದು ಮೈ ಮುಟ್ಟಿ ತೊಂದರೆ ಕೊಟ್ಟರೂ ಸಹಿಸಿಕೊಂಡು ಸುಮ್ಮನಿರುವ ಮಹಿಳೆಯರಿದ್ದಾರೆ. ಇಂಥಾ ಸಂದರ್ಭದಲ್ಲಾದರೂ ಮಹಿಳೆಯರು ದಿಟ್ಟತನ ತೋರಬೇಕು ಅಲ್ವಾ?

    ಪ್ರತಿಕ್ರಿಯೆಗೆ ನನ್ನಿ

    -ರಶ್ಮಿ ಕಾಸರಗೋಡು

    ಉತ್ತರ
  4. Chethan's avatar
    Chethan
    ಆಗಸ್ಟ್ 2 2012

    ನಿಮ್ಮ ಬರವಣಿಗೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮೆಚುರಿಟಿ ಕಾಣಿಸ್ತಿದೆ. ವೆರಿ ಗುಡ್… ಮುಂದುವರೆಸಿ. ಆದರೆ, ಇನ್ನೊಂದು ವಿಷಯ. ತೊಂದರೆ ಕೊಡೊ ಒಬ್ಬ ಗಂಡಸನ್ನು ಪ್ರತಿರೋಧಿಸಿದ ಮೇಲೂ ನೀವು ಅನುಭವಿಸೋ ಸಂಕಟಗಳನ್ನು ದಯವಿಟ್ಟು ಬರೆಯಬೇಡಿ. ಇದರಿಂದ, ‘ಹೆಂಗಸರು ಎಷ್ಟೇ ಎಗರಾಡಿದರೂ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ’ ಅನ್ನೋ ‘ಕ್ಲೂ’ ಒಂದನ್ನು ಗಂಡು ಗೂಳಿಗಳಿಗೆ ಕೊಟ್ಟ ಹಾಗಾಗುತ್ತೆ. ಆದ್ದರಿಂದ, ದಯವಿಟ್ಟು ಇಂಥಾ ವಿಷಯಗಳನ್ನು ಆದಷ್ಟೂ ಹೇಳದಿರುವುದೇ ಲೇಸು.

    ಉತ್ತರ

Leave a reply to Rashmi Tendulkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments