ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 9, 2012

5

ಸಮಾಜ ಮತ್ತು ದೇಶಕ್ಕಾಗಿ ಸತ್ಯದೆಡೆಗಿನ ನಡೆ ಅನಿವಾರ್ಯ…

‍ನಿಲುಮೆ ಮೂಲಕ

-ಮಹೇಂದ್ರ ಕುಮಾರ್
ನಾನು ಅದೆಷ್ಟು ವರ್ಷ ಸಂಘ ಸಂಘ(ಆರ್ ಎಸ್ ಎಸ್) ಎಂದು ಕೆಲಸ ಮಾಡಿದ್ದೇನೆ. ನನ್ನ ತುಂಬು ಯೌವನವನ್ನು ಸಂಘ ಹೇಳುವ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಇಂದಿಗೂ ಅದೆಷ್ಟೋ ಯುವಕರು ಸಂಘ ಸಂಘ ಎಂದು ತಮ್ಮ ಸರ್ವಸ್ವವನ್ನೂ ಸಂಘಕ್ಕಾಗಿ ತ್ಯಾಗ ಮಾಡುತಿದ್ದಾರೆ. ಸಂಘದ ಮಾರ್ಗದರ್ಶನದಂತೆ ಬೀದಿಯಲ್ಲಿ ನಿಂತು ಹಿಂದುತ್ವ ಹಿಂದುತ್ವ  ಎಂದು ಬಡಿದಾಡಿ ಜೈಲುಸೇರಿ ಸಮಾಜದಲ್ಲಿ ರೌಡಿ ಪಟ್ಟ ಕಟ್ಟಿಕೊಂಡ ಅದೆಷ್ಟೋ ಯುವಕರು ತಮ್ಮ ಜೀವನದ ಹುಡುಕಾಟದಲ್ಲಿ ತೊಳಲುತಿದ್ದಾರೆ. ಇನ್ನು ಸಂಘ ಹೇಳುವ ದೇಶಭಕ್ತಿ ಹಿಂದುತ್ವದಿಂದ ಪ್ರೇರಣೆಗೊಂಡು ಪ್ರತಿವರ್ಷ ತಮ್ಮ ದುಡಿಮೆಯ ದೊಡ್ಡ ಭಾಗವನ್ನೇ ಧಾರೆ ಎರೆಯುವ ಅದೆಷ್ಟು ದಾನಿಗಳಿದ್ದಾರೆ. ದೊಡ್ಡ ದೊಡ್ಡ ಪದವಿಯನ್ನು ಪಡೆದುಕೊಂಡು ಮದುವೆಯೂ ಆಗದೆ ಸಂಘವೇ ಜೀವನ, ಸಂಘವೇ ಸರ್ವಸ್ವ ಎಂದು ನಂಬಿಕೊಂಡು ಮುಪ್ಪಿನಕಾಲದಲ್ಲಿ ಯಾರೂ ಇಲ್ಲದ ಅನಾಥರಂತೆ ಜೀವಿಸುವ ಅದೆಷ್ಟು ಮಹಾನ್ ಚೇತನಗಳಿವೆ.
ಇನ್ನು ತಮ್ಮ ಸ್ವಂತದ ಜೀವನ ನಡೆಸುತ್ತಲೇ ಸಂಘ ಎಂದರೆ ದೇಶ, ಸಂಘ ಎಂದರೆ ಹಿಂದುತ್ವ ಎಂದು ಸಂಘವನ್ನು ಸಾಮೂಹಿಕವಾಗಿ ಬೆಂಬಲಿಸುವ ಅಷ್ಟು ಲಕ್ಷ ಮುಗ್ದ ದೇಶವಾಸಿಗಳು… ಬೇಷ್, ಸುಮಾರು ಎಂಬತ್ತೇಳು ವರ್ಷಗಳ ಅಂತರದಲ್ಲಿ ಸಂಘದ ಸಾಧನೆ ಮೆಚ್ಚುವಂತದ್ದೇ.
ಸಂಘ ವ್ಯಾಪಿಸದ ಜಾಗವಿಲ್ಲ, ಈ ದೇಶದ ಪ್ರಭಲ ಸಂಘಟನೆಯಾಗಿ ಹೊರಹೊಮ್ಮಿರುವ ಸಂಘ ಇಷ್ಟು ದೊಡ್ಡಮಟ್ಟಕ್ಕೆ ಬೆಳೆದು ನಿಲ್ಲಲು ಬಳಸಿಕೊಡಿದ್ದು ಎರಡೇ ಎರಡು ವಿಚಾರಗಳನ್ನು, ದೇಶಭಕ್ತಿ ಮತ್ತು ಹಿಂದುತ್ವ. ಅದ್ಭುತ… ಇಂದು ಈ ದೇಶದಲ್ಲಿ ಯಾವುದೇ ಕಂಪೆನಿಗಳೂ, ರಾಜಕೀಯ ಪಕ್ಷಗಳೂ ಸೇರಿದಂತೆ ಯಾರೆಂದರೆ ಯಾರೂ ಸಾಧಿಸಲಾಗದ್ದನ್ನು ಸಂಘ ಸಾಧಿಸಿದೆ. ಟಾಟಾ, ರಿಲಯನ್ಸ್ ನಂತಹಾ ಕಂಪನಿಗಳನ್ನೆಲ್ಲಾ ಒಟ್ಟುಗೂಡಿಸಿ ಅವರ ಒಟ್ಟು ಆಸ್ಥಿಯ ಮೌಲ್ಯಮಾಪನ ಮಾಡಿದರೂ ಈ ದೇಶದಲ್ಲಿ ಸಂಘ ಹೊದಿರುವ ಆಸ್ಥಿಗಿಂತ ಕಡಿಮೆಯೇ…
ಆ ಕಂಪನಿಗಳು ದೇಶದಲ್ಲಿ ದಿನಕ್ಕೊಂದು ಮಾದರಿಯ ಉತ್ಫನ್ನಗಳನ್ನು, ಸೇವೆಗಳನ್ನು ಮಾರುಕಟ್ಟೆಗೆ ಬಿಟ್ಟು ಹಣ ಸಂಪಾದಿಸುತ್ತವೆ. ಆದರೆ ಸಂಘ ಅದ್ಯಾವುದನ್ನೂ ಮಾಡದೆಯೇ ಜನರನ್ನು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ದಿಕ್ಕು ತಪ್ಪಿಸುವುದರ ಮೂಲಕ ತನ್ನ ಅಸ್ಥಿತ್ವ ಸ್ಥಾಪನೆ ಮಾಡಿಕೊಂಡಿದೆ. ಈ ದೇಶದ ಜನ ಪರಂಪರಾಗತವಾಗಿ ಭಾವನೆಗಳ ಮೇಲೆ ಜೀವಿಸುತ್ತಾರೆ. ಮತ್ತು ಧರ್ಮ, ಪದ್ದತಿ, ಆಚರಣೆಗಳಿಗೆಹೆಚ್ಚಿನ ಮಹತ್ವಕೊಡುವುದನ್ನು ಸಂಘ ಅದ್ಭುತವಾಗಿ ಬಳಸಿಕೊಂಡಿದೆ.
ಈ ದೇಶದಲ್ಲಿ ssಎಂಬತ್ತು  ವರ್ಷಗಳ ಕಾಲ ಹಿಂದುತ್ವ ಹಿಂದುತ್ವ ಎಂದು ಬೊಬ್ಬೆ ಹೊಡೆದ ಆರ್ ಎಸ್ ಎಸ್ ನಿಜವಾಗಿಯೂ ಹಿಂದುತ್ವಕ್ಕಾಗಿ ಏನು ಮಾಡಿದೆ? ಸಂಘದ ದೃಷ್ಟಿಕೋನದಲ್ಲಿ ಹಿಂದುತ್ವ ಎಂದರೆ ಏನು? ಇದೊಂದು ಯಕ್ಷ ಪ್ರಶ್ನೆ.. ಹಿಂದೂ ಸಮಾಜ ಸಾವಿರಾರು ಜಾತಿಗಳನಡುವೆ ಹರಿದು ಹಂಚಿಹೋಗಿದೆ. ಇಂದಿನ ಆಧುನಿಕ ಕಾಲಘಟ್ಟದಲ್ಲೂ ಸಹಾ ಅಸ್ಪೃಶ್ಯತೆ ಎನ್ನುವುದು ಕಡಿಮೆಯಾಗಿಲ್ಲ. ಕಡಿಮೆಯಾಗುವ ಲಕ್ಷಣಗಳೂ ಕಾಣುತ್ತಿಲ್ಲ. ಹಿಂದೂ ಸಮಾಜದಲ್ಲಿ ಬಡವ ಶ್ರೀಮಂತ ಎಂಬ ದೊಡ್ಡ ಕಂದಕವಿದೆ, ಬಡವನ ಮಗ ಪ್ರತಿಭಾವಂತನಾಗಿದ್ದರೂ ಆತ ತಲುಪುವ ಜಾಗಕ್ಕೆ ತಲುಪಲಾಗುತ್ತಿಲ್ಲ. ತಲುಪಿಸುವ ವ್ಯವಸ್ಥೆಯೂ ನಮ್ಮ ಬಳಿಯಿಲ್ಲ. (ಒಬ್ಬ ಕ್ರೈಸ್ಥ ಧರ್ಮೀಯ ಬಡ ವಿದ್ಯಾರ್ಥಿಯನ್ನು ಅಲ್ಲಿನ ಮಿಷನರಿಗಳು ಆತ ತಲುಪುವ ಜಾಗಕ್ಕೆ ತಲುಪಿಸುವುದನ್ನು ಗಮನಿಸಬೇಕು). ಹಾಗೆಯೇ ಪೂರ್ವದಿಂದಲೂ ನಡೆದುಕೊಂಡುಬಂದಿರುವ ಹಿಂದೂ ಸಮಾಜದ ಯಾವುದೇ ನ್ಯೂನ್ಯತೆಗಳನ್ನೂ ಬದಲಿಸುವ ಪ್ರಯತ್ನ ಇದುವರೆಗೂ ನಡೆದಿಲ್ಲ.
ಹಾಗಿದ್ದಮೇಲೆ ಸಂಘ ಹಿಂದೂ ಸಮಾಜದೊಳಗೆ ಏನು ಮಾಡುತ್ತಿದೆ? ಹಿಂದೂ ಸಮಾಜದ ಅಂಗವಾದ ದಲಿತರ ಪರ ಯೋಚಿಸದ , ಹಿಂದೂ ಸಮಾಜದ ಯಾವುದೇ ನ್ಯೂನ್ಯತೆಗಳಿಗೂ ಸ್ಪಂದಿಸದ ಸಂಘ ಪ್ರತಿಪಾದಿಸುವ ಹಿಂದುತ್ವವಾದರೂ ಯಾವುದು? ನಾನು ತಿಳಿದಂತೆ(ನನ್ನ ಅರಿವಿಗೆ ಬಂದಂತೆ) ಸಂಘ ಪ್ರತಿಪಾದಿಸುವ ಹಿಂದುತ್ವ ಹಿಂದೂಗಳ ಭಾವನೆಗಳೊಂದಿಗೆ ಚಲ್ಲಾಟವಾಡುವ, ಬಿಜೆಪಿಯಂತಹಾ ರಾಜಕೀಯ ಪಕ್ಷವನ್ನು ಅಧಿಕಾರಕ್ಕೆ ತರುವ, ತನ್ನ ಆಸ್ಥಿಯ ಮೌಲ್ಯವನ್ನು ವಿಸ್ತರಿಸುವ, ದಲಿತ ಮತ್ತು ಶೂದ್ರ ಸಮುದಾಯವನ್ನು ಕೆರಳಿಸಿ ಮೇಲ್ವರ್ಗದ ಹಿತ ಕಾಪಾಡುವ ಅಂದರೆ ಸಂಘದ ಒಟ್ಟು ಕಾರ್ಯಚಟುವಟಿಕೆಯನ್ನು ಗಮನಿಸಿದರೆ ಎಂಥವರಿಗೂ ಅರ್ಥವಾಗುವ (ಅರ್ಥ ಮಾಡಿಕೊಳ್ಳಲೇಬೇಕಾದ) ಸಂಗತಿ!
ಸಂಘ ಪ್ರತಿಪಾದಿಸುವುದು ಮುಸಲ್ಮಾನರನ್ನು ವಿರೋಧಿಸುವ ಹಿಂದುತ್ವ, ಸಂಘದ ಬಳಿ ಹಿಂದೂಸಮಾಜದ ಬಗ್ಗೆ ಯಾವುದೇ ಕಳಕಳಿ ಇಲ್ಲ, ಸಂಘಕ್ಕೆ ತನ್ನ ಸಾಮ್ರಾಜ್ಯವನ್ನು ವಿಸ್ಥರಿಸುವ ಮಹತ್ವಾಕಾಂಕ್ಷೆಯನ್ನು ಹೊರತುಪಡಿಸಿ ಬೇರೆ ಯಾವುದೇ ಗುರಿ ಇಲ್ಲ. ಆರ್ ಎಸ್ ಎಸ್‌ನ ಸಾಮ್ರಾಜ್ಯದಲ್ಲಿ ಬಿಜೆಪಿ ಎಂಬ ರಾಜಕೀಯ ಪಕ್ಷ ಪ್ರಮುಖವಾಗಿ ಗೋಚರಿಸಿದರೆ ಬಿಜೆಪಿಯನ್ನು ಹೊರತುಪಡಿಸಿ ಈ ದೇಶದ ಉದ್ದಗಲಕ್ಕೂ ಸುಮಾರು ಮುನ್ನೂರ ಐವತ್ತಕ್ಕೂ ಹೆಚ್ಚಿನ ಅಂಗಸಂಸ್ಥೆಗಳು ಕೆಲಸ ಮಾಡುತಿದ್ದು, ಆರ್ ಎಸ್ ಎಸ್ ಸೇರಿದಂತೆ ಈ ಎಲ್ಲಾ ಅಂಗಸಂಸ್ಥೆಗಳ ಗುರಿ ಮತ್ತು ಉದ್ದೇಶ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು. ಆ ಮೂಲಕ ತಮ್ಮ(ಹಿಂದೂ ಸಮಾಜದ್ದಲ್ಲ) ಅಡಿಪಾಯವನ್ನು ಗಟ್ಟಿಗೊಳಿಸಿಕೊಳ್ಳುವುದು. ಒಟ್ಟಾರೆಯಾಗಿ ಗಮನಿಸಿ ಬಿಜೆಪಿ ಈ ದೇಶದ ಚುಕ್ಕಾಣಿಯನ್ನೂ ಹಿಡಿದಿದೆ, ರಾಜ್ಯದ ಚುಕ್ಕಾಣಿಯನ್ನೂ ಹಿಡಿದಿದೆ. ಆರ್ ಎಸ್ ಎಸ್‌ಗಾಗಿ ಬಿಜೆಪಿ ಕೆಲಸ ಮಾಡಿದ್ದುಂಟು ಆದರೆ  ಹಿಂದೂ ಸಮಾಜಕ್ಕಾಗಿ ಮಾಡಿದ ಒಂದೇ ಒಂದು ಉಪಕಾರವನ್ನೂ ನೀವು ಗುರುತಿಸಲು ಸಾಧ್ಯವೇ ಇಲ್ಲ..
ಮೇಲ್ನೋಟಕ್ಕೆ ಕಾಣುವಂತೆ ಗೋಹತ್ಯೆ ನಿಷೇಧ ಜಾರಿ ಪ್ರಯತ್ನ, ಶಾಲೆಗಳಲ್ಲಿ ಭಗವದ್ಗೀತಾ ಅಭಿಯಾನ. ಗಮನಿಸಿ, ಗೋ ಹತ್ಯೆ ನಿಷೇದ ಜಾರಿಯ ಹಿಂದೆ ಹಿಂದೂಗಳನ್ನ ದಿಕ್ಕು ತಪ್ಪಿಸುವ ಹೊರತಾಗಿ ಬೇರೆ ಯಾವುದೇ ಪ್ರಾಮಾಣಿಕ ಅಜೆಂಡಾ ನೀವು ಕಾಣಲು ಸಾಧ್ಯವೇ ಇಲ್ಲ.. ಯಾಕೆಂದರೆ ಈಗಾಗಲೇ ಕರ್ನಾಟಕದಲ್ಲಿ ಅಂತದ್ದೇ ಒಂದು ಕಾನೂನು ಜಾರಿಯಲ್ಲಿದೆ. ಬಿಜೆಪಿ ಸರ್ಕಾರ ಆ ಕಾನೂನನ್ನು ಎಷ್ಟು ಬಳಸಿಕೊಂಡಿದೆ? ಇವತ್ತಿಗೂ ಗೋಹತ್ಯೆಯ ವಿರುದ್ದ ಹೋರಾಡಿದ ಅದೆಷ್ಟು ಜನ ಯುವಕರು ಜೈಲು ಸೇರಿ ಬೀದಿಗೆ ಬಿದ್ದಿದ್ದಾರೆ? ಇನ್ನು ಗೋ ಹತ್ಯಾ ನಿಷೇಧ ಎಂಬುದು ಸಂಘಕ್ಕೂ ಮತ್ತು ಬಿಜೆಪಿಗೂ ಹಿಂದೂಗಳನ್ನ ಮುಸಲ್ಮಾನರ ವಿರುದ್ದ ಎತ್ತಿಕಟ್ಟಲು ಒಂದು ಪ್ರಮುಖ ಅಸ್ತ್ರ ಅಷ್ಟೆ…
ಉದಾಹರಣೆಗೆ ಶಾಲೆಗಳಲ್ಲಿ ಭಗವದ್ಗೀತಾ ಪಠಣ. ಭಾವನಾತ್ಮಕವಾಗಿ ಯೋಚಿಸುವವರಿಗೆ, ದೊಡ್ಡ ಸಂಖ್ಯೆಯ ಹಿಂದೂಗಳಿಗೆ ತಕ್ಷಣಕ್ಕೆ ಆಕ್ರೋಷಗೊಳ್ಳಲು ಇಷ್ಟು ಸಾಕಲ್ಲಾ… ಭಗವದ್ಗೀತೆ ನಮ್ಮ ಪವಿತ್ರ ಗ್ರಂಥ, ನೋಡಿ ಸರ್ಕಾರ ಪ್ರಾಮಾಣಿಕವಾಗಿ ಎಂತಹಾ ಮಹತ್ಕಾರ್ಯ ಮಾಡಲು ಹೊರಟಿದೆ. ಭಗವದ್ಗೀತಾ ಪಠಣ ಮಾಡಿದರೆ ಯಾರಿಗೇನು ನಷ್ಟ? ಇದನ್ನ ವಿರೋಧಿಸುವವರು ಹಿಂದೂ ವಿರೋಧಿಗಳು, ಇದನ್ನ ಸಾಕಾರಗೊಳಿಸಲು ಹೊರಟಿರುವ ಬಿಜೆಪಿ ಮತ್ತು ಸಂಘ ಹಿಂದೂ ಪರ. ಹಿಂದೂ ಸಮಾಜದ ವಿಶ್ವಾಸ ಗಳಿಸಲು ಇನ್ನೇನು ಬೇಕು..? ಸಂಘಕ್ಕೂ, ಬಿಜೆಪಿಗೂ ಬೇಕಾಗಿರುವುದೂ ಅದೇ.. ಭಗವದ್ಗೀತಾ ಪಠಣವಲ್ಲ!

ಶಾಲೆಗಳಲ್ಲಿ ಭಗವದ್ಗೀತಾ ಪಠಣ ನಡೆಸುವುದು ಅಸಾಧ್ಯ ಎಂಬ ಸಣ್ಣ ಅರಿವು ಸಂಘಕ್ಕಿಲ್ಲದಿರಲು ಸಾಧ್ಯವೇ ಇಲ್ಲ. ಸಂಘಕ್ಕೆ ಬೇಕಾಗಿರುವುದು ಹಿಂದೂಗಳು ಭಗವದ್ಗೀತೆ ಕಲಿಯುವುದಲ್ಲ. ಭಗವದ್ಗೀತೆ ಎಂಬ ಭಾವನೆಯ ಹೆಸರಿನ ವಿವಾದ.
ನಿಜವಾಗಿಯೂ ಸಂಘಕ್ಕೆ ಹಿಂದೂ ಸಮಾಜಕ್ಕೆ ಭಗವದ್ಗೀತೆಯ ಬಗ್ಗೆ ಅರಿವು ಮೂಡಿಸಬೇಕು ಎಂಬ ಪ್ರಾಮಾಣಿಕ ಕಳಕಳಿ ಇದ್ದಿದ್ದೇ ಆದಲ್ಲಿ ಅದನ್ನು ಶಾಲೆಗೆ ಕೊಂಡೊಯ್ಯುವುದಲ್ಲ. ಪ್ರತೀ ಗ್ರಾಮದಲ್ಲೂ ಭಗವದ್ಗೀತಾ ಪಠಣ ಕೇಂದ್ರ ಆರಂಭಿಸುವುದು ಸಂಘಕ್ಕೆ ದೊಡ್ಡ ಸಂಗತಿಯೇನಲ್ಲ. ಮುಸಲ್ಮಾನರ ಮಕ್ಕಳು  ಪ್ರತಿದಿನ ಕುರಾನ್ ಪಠಣ ಮಾಡುವಂತೆ, ಹಿಂದೂ ಮಕ್ಕಳು ಭಗವದ್ಗೀತೆಯನ್ನು ಪಠಣ ಮಾಡುವಂತೆ ಜಾಗೃತಿಗೊಳಿಸಬಹುದಲ್ಲ.
ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಲೆಯಲ್ಲಿ ಭಗವದ್ಗೀತಾ ಪಠಣ ಆರಂಭಿಸಿದ್ದೇ ಆದಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರು ಕುರಾನ್ ಮತ್ತು ಬೈಬಲ್ ಪಠಣಕ್ಕೆ ಅವಕಾಶ ಕೇಳಿದಲ್ಲಿ ಕೊಡದಿರಲು ಸಾಧ್ಯವೇ..? ಆಗ ಬಡಮಕ್ಕಳಿಗಾಗಿ ಉಳಿದಿರುವ ಒಂದಷ್ಟು  ಸರ್ಕಾರಿ ಶಾಲೆಗಳೂ ಧಾರ್ಮಿಕ ಕೇಂದ್ರಗಳಾಗಿ  ಪರಿವರ್ತನೆಯಾಗಿ ಮುಂದೆ ಅಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಗುರಿ ಸಾಧಿಸುವ ಬದಲು ಸಂಘದ ಗುಲಾಮಗಿರಿಯ ಕಟ್ಟಾಳುಗಳಾಗಬಹುದಷ್ಟೆ.
ಇನ್ನು ಸದಾ ಹಿಂದೂ ಧರ್ಮದ ಇತಿಹಾಸದ ಬಗ್ಗೆ ಮಾತನಾಡುವ ಸಂಘ ಇತಿಹಾಸವನ್ನು ಸೃಷ್ಟಿಸುವ ಪ್ರಯತ್ನ ಮಾಡಲೇ ಇಲ್ಲ. ನಾವೆಲ್ಲಾ ಒಂದು ; ನಾವೆಲ್ಲಾ ಹಿಂದೂ ಎಂಬ ಘೋಷವಾಖ್ಯ ಕೇವಲ ಘೋಷಣೆಗಷ್ಟೇ ಸೀಮಿತ. ಇಂದಿಗೂ ನಾನಾಕಡೆ ದಲಿತರ ಮೇಲಿನ ಬಹಿಷ್ಕಾರಗಳನ್ನ ಗಮನಿಸಬಹುದು. ಅಲ್ಲೆಲ್ಲಾ ಸಂಘ ಯಾವ ಪಾತ್ರವನ್ನು ನಿರ್ವಹಿಸಿದೆ? ಯಾವತ್ತಿಗೂ ಜಾತಿ ಜಾತಿಗಳ ನಡುವಿನ ಕಂದಕವನ್ನ ದೊಡ್ಡದು ಮಾಡುವ ಪ್ರಯತ್ನವನ್ನೇ ಮಾಡುತ್ತಿರುವ ಸಂಘ ಯಾವ ಆಧಾರದ ಮೇಲೆ ಅಖಂಡ ಹಿದುತ್ವವನ್ನು ಪ್ರತಿಪಾದಿಸುತ್ತದೆ? (ದಕ್ಷಿಣ ಕನ್ನಡದಲ್ಲಿ ಶೆಟ್ಟಿ ಮತ್ತು ಪೂಜಾರಿಗಳ ನಡುವೆ, ಒಕ್ಕಲಿಗ ಮತ್ತು ಲಿಂಗಾಯಿತರ ಮದ್ಯೆ ತಂದಿಟ್ಟಿದ್ದು). ಸಂಘ ತಕ್ಷಣಕ್ಕೆ ಇದೆಲ್ಲವನ್ನೂ ಬಿಜೆಪಿಯ ಮೇಲೆ ಹೊರಿಸಬಹುದು. ಆದರೆ ಒಂದು ಸತ್ಯ ಎಲ್ಲರಿಗೂ ಗೊತ್ತಿರಬೇಕು ಎಲ್ಲವನ್ನೂ ಮಾಡುವ ಸಂಘ ಸಮಾಜದ ಮುಖ್ಯವಾಹಿನಿಗೆ ಬರುವುದೇ ಇಲ್ಲ. ಅದರ ಲಾಭಾಂಶಗಳನ್ನು ಮಾತ್ರಾ ಪಡೆದುಕೊಳ್ಳುವ ಸಂಘ ನಷ್ಟವನ್ನೆಲ್ಲಾ ತನ್ನ ಅಂಗಸಂಸ್ಥೆಗಳ ಮೂತಿಗೆ ಸವರಿಬಿಡುತ್ತದೆ. ಸದಾ ಲೆಕ್ಕಾಚಾರದ, ಪಾರದರ್ಶಕತೆಯ ಬಗ್ಗೆ ಮಾತನಾಡುವ ಸಂಘ ತನಗೆ ಪ್ರತೀ ವರ್ಷ ಬೇರೆಬೇರೆ ಚಟುವಟಿಕೆಗಳಿಂದ (ಗುರುಪೂಜೆ ಇತ್ಯಾದಿ ಇತ್ಯಾದಿ..) ಬರುವ ಕೋಟ್ಯಾಂತರ ರೂಪಾಯಿ ಹಣವನ್ನ ಏನು ಮಾಡುತ್ತದೆ ಎಂದು ಸಮಾಜಕ್ಕೆ ಇದುವರೆಗೂ ತಿಳಿಸಿದೆಯಾ?
ಸ್ವಾಮಿ ವಿವೇಕಾನಂದರನ್ನ ಹಿಂದುತ್ವದ ಪ್ರತಿಪಾದಕರಂತೆ ಬಳಸಿಕೊಳ್ಳುವ ಸಂಘ, ತನ್ನ ಕಾರ್ಯಗಳಲ್ಲಿ, ಅಜೆಂಡಾಗಳಲ್ಲಿ ಎಲ್ಲಿಯೂ ಸ್ವಾಮಿ ವಿವೇಕಾನಂದರ ಹಿಂದುತ್ವದ ಪ್ರತಿಪಾದನೆ ಮಾಡುವುದಿಲ್ಲ. ಎದುರಿಗೆ ಕುಳಿತವರನ್ನು ಭ್ರಮೆಯಲ್ಲಿ ಮುಳುಗಿಸಲು ಮಾತ್ರಾ ವಿವೇಕಾನಂದರ ಹೆಸರನ್ನು ಸರಾಗವಾಗಿ ಬಳಕೆ ಮಾಡಿಕೊಳ್ಳುವ ಸಂಘ ಪರೋಕ್ಷವಾಗಿ ಸ್ವಾಮಿ ವಿವೇಕಾನಂದರಂತಹಾ ಮಹಾನ್ ಚೇತನವನ್ನ ಪ್ರತಿನಿತ್ಯ ಅವಮಾನಿಸುವ ಕೆಲಸ ಮಾಡುತ್ತದೆ. ಸ್ವಾಮಿ ವಿವೇಕಾನಂದರು ಪುರೋಹಿತ ಶಾಹಿ ವ್ಯವಸ್ಥೆಯನ್ನ ಬಲವಾಗಿ ವಿರೋಧಿಸಿದ್ದರು. ಆದರೆ ಸಂಘ ಅದೇ ಪುರೋಹಿತ ಶಾಹಿಗಾಗಿಯೇ ಉಳಿದೆಲ್ಲವನ್ನೂ ಬಳಸಿಕೊಳ್ಳುತ್ತದೆ. ದಲಿತರು ಮತ್ತು ಶೋಷಿತರ ಧ್ವನಿಯಾಗಿದ್ದ ಸ್ವಾಮಿ ವಿವೇಕಾನಂದರು ಬಲಪಂತೀಯ ಹಿಂದುತ್ವವನ್ನ ವಿರೋದಿಸುತ್ತಿದ್ದರು. ಆದರೆ ಸಂಘ ಹಿಂದೂ ಸಮಾಜದ ಏಳಿಗೆಗಾಗಿ ಕೆಲಸ ಮಾಡದೆ ಅದನ್ನ ಹೇಗೆಬೇಕೋ ಹಾಗೆ ಬಳಕೆ ಮಾಡಿಕೊಳ್ಳುತ್ತಿದೆಯಷ್ಟೆ. ಸಂಘದ ಕಬಂದ ಬಾಹುವಿನಲ್ಲಿ ಬಂದಿಯಾಗಿರುವ ಹಿಂದೂ ಸಮಾಜವನ್ನ ಅದರಿಂದ ಮುಕ್ತಗೊಳಿಸದೇ ಹೋದರೆ ಭವಿಶ್ಯದಲ್ಲಿ ಹಿಂದೂ ಸಮಾಜ ಹರಿದು ಹಂಚಿ ಹೋಗುವುದರಲ್ಲಿ ಸಂದೇಹವೇ ಇಲ್ಲ.

* * * *  * * * *

ಚಿತ್ರಕೃಪೆ : ಅಂತರ್ಜಾಲ

5 ಟಿಪ್ಪಣಿಗಳು Post a comment
  1. Kumar's avatar
    Kumar
    ಆಗಸ್ಟ್ 9 2012

    > ಸಂಘ ಅದೇ ಪುರೋಹಿತ ಶಾಹಿಗಾಗಿಯೇ ಉಳಿದೆಲ್ಲವನ್ನೂ ಬಳಸಿಕೊಳ್ಳುತ್ತದೆ
    ದಯವಿಟ್ಟು ಇದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಹುದೇ?

    > ದಲಿತರು ಮತ್ತು ಶೋಷಿತರ ಧ್ವನಿಯಾಗಿದ್ದ ಸ್ವಾಮಿ ವಿವೇಕಾನಂದರು ಬಲಪಂತೀಯ ಹಿಂದುತ್ವವನ್ನ ವಿರೋದಿಸುತ್ತಿದ್ದರು.
    ವಿವೇಕಾನಂದ ಕೃತಿಶ್ರೇಣಿಯಲ್ಲಿ ಇದಕ್ಕೆ ಸಂಬಂಧಿಸಿದ ಭಾಷಣವನ್ನೋ ಅಥವಾ ಬರಹವನ್ನೋ ತೋರಿಸುವಿರಾ?

    > ಯಾವತ್ತಿಗೂ ಜಾತಿ ಜಾತಿಗಳ ನಡುವಿನ ಕಂದಕವನ್ನ ದೊಡ್ಡದು ಮಾಡುವ ಪ್ರಯತ್ನವನ್ನೇ ಮಾಡುತ್ತಿರುವ ಸಂಘ
    ಯಾವ ಯಾವ ಜಾತಿಗಳ ನಡುವಿನ ಕಂದಕವನ್ನು ಸಂಘ ದೊಡ್ಡದು ಮಾಡಿದೆ ಮತ್ತು ಹೇಗೆ?

    > ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಲೆಯಲ್ಲಿ ಭಗವದ್ಗೀತಾ ಪಠಣ ಆರಂಭಿಸಿದ್ದೇ ಆದಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರು
    ಮುಸಲ್ಮಾನರು ಮತ್ತು ಕ್ರೈಸ್ತರಿಗೆ ಭಗವದ್ಗೀಗೆ ಏಕೆ ಬೇಡ?
    ಕೇವಲ ದೇವಸ್ಥಾನಗಳಲ್ಲಿ ಅಥವಾ ಮನೆಗಳಲ್ಲಿ ಭಗವದ್ಗೀತೆ ಪಠಣ ನಡೆದರೆ, ಮುಸಲ್ಮಾನರು ಮತ್ತು ಕ್ರೈಸ್ತರು ಅದರಿಂದ ವಂಚಿತರಾಗುತ್ತಾರಲ್ಲಾ!

    > ಹಾಗೆಯೇ ಪೂರ್ವದಿಂದಲೂ ನಡೆದುಕೊಂಡುಬಂದಿರುವ ಹಿಂದೂ ಸಮಾಜದ ಯಾವುದೇ ನ್ಯೂನ್ಯತೆಗಳನ್ನೂ ಬದಲಿಸುವ ಪ್ರಯತ್ನ ಇದುವರೆಗೂ ನಡೆದಿಲ್ಲ.
    ಹರಿಜನ ಕೇರಿಗಳಲ್ಲಿ, ಬೆಂಗಳೂರಿನಂತಹ ನಗರಗಳ ಸ್ಲಂಗಳಲ್ಲಿ, ದೂರದ ವನವಾಸಿ ಕ್ಷೇತ್ರಗಳಲ್ಲಿ ಸಂಘವು ನಡೆಸುತ್ತಿರುವಷ್ಟು ಶಾಲೆಗಳನ್ನು ಬೇರಾವ ಸಂಸ್ಥೆಯೂ ನಡೆಸುತ್ತಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಸೇವಾವ್ರತಿಗಳು ಯಾವುದೇ ಸಂಬಳವನ್ನೂ ಪಡೆಯುತ್ತಿಲ್ಲ; ತಮ್ಮ ಮನೆ-ಸಂಸಾರಗಳಿಂದ ದೂರವಿದ್ದು ನಿಸ್ವಾರ್ಥ ಸೇವೆ ಮಾಡುತ್ತಿರುವುದು ಸಮಾಜದ ನ್ಯೂನತೆಗಳನ್ನು ದೂರಗೊಳಿಸಲೆಂದೇ.
    ಇದೀಗ ಕಳೆದ ಕೆಲವು ವರ್ಷಗಳಿಂದ ಚಿಂದಿ ಆಯುವ ಮಕ್ಕಳಿಗಾಗಿ “ನೆಲೆ”ಯನ್ನೂ ಸ್ಥಾಪಿಸಲಾಗಿದೆ.
    ಸಂಘವು ಲಕ್ಷಾಂತರ ಸೇವಾಕಾರ್ಯಗಳನ್ನು ದೇಶದ ಉದ್ದಗಲಕ್ಕೂ ಮಾಡುತ್ತಿದೆ. ಇದಾವುದಕ್ಕೂ ಸರಕಾರದ ಸಹಾಯ ಪಡೆಯುತ್ತಿಲ್ಲ.
    ನಿಮಗೆ ಸಂಘವನ್ನು ಧೂಷಿಸುವುದೇ ಉದ್ದೇಶವಾದ್ದರಿಂದ, ಇಂತಹ ಸತ್ಕಾರ್ಯಗಳು ಹೇಗೆ ತಾನೆ ಕಾಣಬೇಕು?

    ಉತ್ತರ
  2. SIDDALINGESWARA's avatar
    SIDDALINGESWARA
    ಆಗಸ್ಟ್ 9 2012

    @ Mahendra Kumar,
    1. What Mr Mahendra Kumar really have you been enlightened after JOINING the JDS Party?
    2. is this your true face?
    3. if so what is your contribution for the changes you (expect) mention that RSS is not doing?
    4. Do you have a GUTS to talk on what your present political JDS so called secular party contribution to the state/nation? (which you expect in the society)
    5. Do you have a GUTS to talk on JDS MUSLIM CONVENTION. if it is secular why not CHRISTIAN, HINDU, BUDDHA CONVENTION?
    ……………

    ಉತ್ತರ
  3. ajay's avatar
    ajay
    ಆಗಸ್ಟ್ 9 2012

    ಮೂಲಧರ್ಮೀಯನಿಗಿಂತ ಮತಾಂತರ ಹೊಂದಿದವನು ಹೆಚ್ಚು ಕರ್ಮಠನಾಗುತ್ತಾನೆ ಅಥವಾ ಮತಾಂಧನಾಗುತ್ತಾನೆ ಎಂಬುದಕ್ಕೆ ಇದು ಉದಾಹರಣೆ. ಇದರಲ್ಲಿ ಪ್ರತಿ ವಾಕ್ಯಕ್ಕೂ ಉತ್ತರ ಕೊಡಬಹುದು. ಆದರೆ ಲೇಖಕರ ಮೂಲ ಚಿಂತನೆಯಲ್ಲೇ ಭಿನ್ನತೆ ಇರುವಾಗ ಅದನ್ನು ಅವರು ಅರ್ಥಮಾಡಿಕೊಳ್ಳಲಾರರು. ಸುಮ್ಮನೇ ವಾದವಾಗುತ್ತದೆ. ಮಹೇಂದ್ರ ಕುಮಾರರೇ ನಿಮಗೆ ಸಂಘ ಬಿಟ್ಟು ಬೇರೆಡೆ ಒಳ್ಳೆಯ ಕೆಲಸಗಳನ್ನು ಮಾಡಬೇಕು ಅನ್ನಿಸಿದರೆ ಅದಕ್ಕೆ ಸ್ವಾತಂತ್ರ್ಯವಿದೆ. ಆದರೆ ಸಂಘವನ್ನು ತೆಗಳುವುದನ್ನೇ ಜನೋಪಯೋಗಿ ಕೆಲಸ ಅಂದುಕೊಳ್ಳಬೇಡಿ ಎಂದಷ್ಟೇ ಹೇಳಿ ನಿಮಗೆ ಶುಭಹಾರೈಸುತ್ತೇನೆ.

    ಉತ್ತರ
  4. ರವಿ's avatar
    ರವಿ
    ಆಗಸ್ಟ್ 10 2012

    ಮಹೆಂದ್ರರವರೆ ನಿಮಗೆ ಬುದ್ದಿಭ್ರಮಣೆ ಆಗಿರೋದು ಸ್ಫಷ್ಟ ! ಸಂಘ ಮಾಡದ ಸಮಾಜದ ಸೇವೆ (ನೀವೇ ಅಂದಂತೆ) ನೀವೇ ಮಾಡಿ ತೋರಿಸಿ ಅದಕ್ಕೆ ನೀವು ಸರ್ವ ತಂತ್ರ ಸ್ವತಂತ್ರರು! ಅವರು ಯಾಕೆ ಮಾಡಿಲ್ಲ ಅನೋ ಬದಲು ನೀವೇ(ನಿಮ್ಮ ಪಕ್ಷದ ಮೂಲಕವೂ ಆಗಬಹುದು ) ಮಾಡಿ ತೋರಿಸಿ, ಸ್ವಲ್ಪ ಹೆಚ್ಹಾಗಿ ಹೇಳಬೇಕೆಂದರೆ ನೀವು ಈಗಿರುವ ಪಕ್ಷದ ಮುಖಂಡನ ಆಸ್ತಿ ಎಷ್ಟು? (ಚುನಾವಣಾ ಸಂದರ್ಭ diclare ಮಾಡಿದ್ದು ಮಾತ್ರ ಅಲ್ಲ!) ಮತ್ತೆ ಕೊನೆಯದಾಗಿ ಆನೆ ನಡೆಯುವಾಗ ನಿಮ್ಮಂತವರು ಗಲಾಟೆ ಮಾಡೋದು ಸಹಜ ಬಿಡಿ ,ನಮಗೂ ಅರ್ಥ ಆಗುತ್ತೆ., ಹೋಗಿ ಬದುಕಿ ಕೊಳ್ಳಿ…

    ಉತ್ತರ
  5. ಗಿರೀಶ್'s avatar
    ಗಿರೀಶ್
    ಆಗಸ್ಟ್ 14 2012

    ಆಲೂಗೆಡ್ಡೆ ಬೆಳೆಯುತ್ತಿದ್ದವರೊಬ್ಬರು ಕೇವಲ ೨೦ ವರ್ಷಗಳಲ್ಲಿ ಸಾವಿರಾರು ಕೋಟಿ ರೂಗಳ ಆಸ್ತಿ ಸಂಪಾದಿಸಿದ್ದು ಹೇಗೆ?
    ದಯವಿಟ್ಟು ಆ ಆಲೂಗೆಡ್ಡೆ ಬೆಳೆಯುತ್ತಿದ್ದ ರೈತರ ಪಕ್ಷದವರು ಅದರ ರಹಸ್ಯ ಬಿಚ್ಚಿಟ್ಟರೆ ಎಲ್ಲ ರೈತರೂ ಕೋಟ್ಯಾಧೀಶ್ವರರಾಗಿ ಸಂಘದ ಚಟುವಟಿಕೆಗಳು ತಾನಾಗೆ ನಿಂತು ಹೋಗುತ್ತವೆ. ದಯವಿಟ್ಟು ನೀವು ಸೇರಿರುವ ಪಕ್ಷದ ನಾಯಕರಿಂದ ಆ ಸತ್ಯ ಹೇಳಿಸಿ ದಯವಿಟ್ಟು. ಇಲ್ಲದಿದ್ದರೆ ನಿಮಗೆ ಸಿಗುವ ಪಾಲನ್ನು ಪದೆದು ಕೊಂಡು ತೆಪ್ಪಗಿರಿ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments