ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 21, 2012

4

ಟಾಯ್ಲೆಟ್ ವಾಸು ಅಂದ್ರೆ ಯಾರು ಗೊತ್ತಾ?

‍ನಿಲುಮೆ ಮೂಲಕ

-ಚಕ್ರವರ್ತಿ ಸೂಲಿಬೆಲೆ

”ಪ್ರಚಾರದ ಹೆಸರಲ್ಲಿ ಹೊಸಹೊಸ ಮಾರ್ಗಗಳನ್ನು ಹುಡಕಲಾಯ್ತು. ನಾಟಕಗಳು, ಕಥೆಗಳು, ಎಲ್ಲವೂ ಶೌಚಾಲಯದ ಕುರಿತಂತೆಯೇ. ಕುಂತರೂ ನಿಂತರೂ ಶೌಚಾಲಯಗಳೇ. ಕೊನೆಗೆ ಕನಸಿನಲ್ಲೂ ವಾಸು ದೇಶ್‌ಪಾಂಡೆ ಶೌಚಾಲಯವನ್ನೆ ಕಂಡಿದ್ದರೆ ಅಚ್ಚರಿಯಿಲ್ಲ! ಈ ಕಾರಣದಿಂದಲೇ ಸ್ಥಳೀಯ ಆರು ಜಿಲ್ಲೆಗಳಲ್ಲಿ ವಾಸು ದೇಶ್‌ಪಾಂಡೆ `ಟಾಯ್ಲೆಟ್ ವಾಸು’ವಾಗಿಯೇ ಜನಪ್ರಿಯರಾದರು”

ವಾಸು ದೇಶ್‌ಪಾಂಡೆ ಅಲಿಯಾಸ್ ಟಾಯ್ಲೆಟ್ ವಾಸು! ಗುಲ್ಬರ್ಗಾದ ಸೇಡಮ್ಮಿನ ಹುಡುಗ. ಬಡತನದಲ್ಲಿ ಬೆಳೆದ, ಕಷ್ಟಪಟ್ಟು ಓದಿದ. ಕೊನೆಗೆ ಇಂಜಿನಿಯರ್ರೂ ಆದ. ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ಚೆನ್ನಾಗಿ ದುಡಿದ. ಇಷ್ಟೇ ಆಗಿದ್ದರೆ ಇದೊಂದು ಕನ್ನಡ ಫಿಲಮ್ಮಿನ ಕಥೆಯಂತಾಗಿ ಮುಗಿದುಹೋಗುತ್ತಿತ್ತು. ಹಾಗಾಗಲಿಲ್ಲ. ಊರಿನ ಕೆಲಸ ವಾಸುವನ್ನು ಬಿಡಲಿಲ್ಲ. ಬೆಂಗಳೂರು ಎಲ್ಲರನ್ನು ಕಾಡಿದಂತೆ ಮೋಹವಾಗಿ ಕಾಡಲಿಲ್ಲ.

ಉತ್ತರ ಕರ್ನಾಟಕಕ್ಕೆ ನೆರೆ ಹಾವಳಿ ಅಪ್ಪಳಿಸಿದಾಗ ಇನ್ಫೋಸಿಸ್ ಗುಲ್ಬರ್ಗಾದ ನೆರೆ ಪೀಡಿತ ಪ್ರದೇಶಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಮನೆ ಕಟ್ಟಿಕೊಡುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಮುಂದೆ ಬಂತು. ಸ್ಥಳೀಯವಾಗಿ ಸಾಥ್ ಕೊಡಲು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಂತಹ ಪ್ರಾಮಾಣಿಕ ಸಂಸ್ಥೆಯೇನೋ ಸಿಕ್ಕಿತು. ಆದರೆ ಈ ಕೆಲಸವನ್ನು ತನ್ನದೆಂದುಕೊಂಡು ಸಮರ್ಥವಾಗಿ ಮಾಡುವವರು ಯಾರಾದರೊಬ್ಬರು ಬೇಕಲ್ಲ? ಆಗ ಇನ್ಫೋಸಿಸ್‌ಗೆ ಕಂಡ ಬೆರಗುಗಣ್ಣಿನ ಇಂಜಿನಿಯರ್ ವಾಸು ದೇಶ್‌ಪಾಂಡೆ. ಅಮೆರಿಕಾದಲ್ಲೆಲ್ಲ ಇದ್ದು ಬಂದ ಹುಡುಗ; ಮತ್ತೆ ಮರಳಿ ಹೊರಡಲು ಸಜ್ಜಾಗಿದ್ದ. ಆದರೆ ಈಗ ಹೊಸತೊಂದು ಆಸಕ್ತಿಕರ ಯೋಜನೆ ಕೈಬೀಸಿ ಕರೆಯಿತು. ಹುಟ್ಟೂರಿನ, ಜಿಲ್ಲೆಯ, ಕೊನೆಗೆ ಹಿಂದುಳಿದ ಎಂಬ ಹಣೆಪಟ್ಟಿ ಹೊತ್ತ ತನ್ನ ಭಾಗದ ಸೇವೆ ಮಾಡುವ ಅವಕಾಶ ಬಯಸಿಬಂದಾಗ ಆಗುವುದಿಲ್ಲ ಎನ್ನುವುದು ಹೇಗೆ?

ವಾಸುವಿನ ಸೂಟ್‌ಕೇಸ್ ತಯಾರಾಯಿತು. ಮನೆಯವರೊಂದಿಗೆ ಒಪ್ಪಂದ. `ವಾರಕ್ಕೆರಡು ದಿನ ಬೆಂಗಳೂರಿನಲ್ಲಿರಬೇಕು. ಹೆಂಡತಿ ಮಕ್ಕಳೊಡನೆ ಕಾಲ ಕಳೆಯಬೇಕು.’ ಬಹುಶಃ ೨೦೦೯ರ ಡಿಸೆಂಬರ್ ಇರಬಹುದು. ವಾಸು ಗುಲ್ಬರ್ಗಕ್ಕೆ ಬಂದು ಠಿಕಾಣಿ ಹೂಡಿದ. ಪ್ರತಿದಿನ ಬೆಳಗಿನಿಂದ ಸಂಜೆಯವರೆಗೆ ನೆರೆಪೀಡಿತ ಪ್ರದೇಶಗಳಲ್ಲಿ ತಿರುಗಾಟ. ಊಟ, ರಗ್ಗು, ಚಪ್ಪಲಿ ಕೊಟ್ಟವರು ಬಹಳವಿದ್ದರು. ಆದರೆ ಮನೆ ಕಟ್ಟಿ ಧೈರ್ಯ ತುಂಬುವ ಹೊಣೆ ಈತನ ಹೆಗಲೇರಿತ್ತು. ಕೆಲಸ ಭರದಿಂದ ಸಾಗಿತು. ಅಂದುಕೊಂಡಷ್ಟು ಮನೆಗಳು ಬೇಗಬೇಗನೆ ನಿರ್ಮಾಣಗೊಂಡವು. ಹಸ್ತಾಂತರವೂ ಆಯಿತು. ಆ ಹೊತ್ತಿಗೆ ವಾಸುವಿನ ಮನಸ್ಸು ಹಳ್ಳಿಗಳನ್ನು ನೋಡಿ ಬಹಳ ನೊಂದಿತ್ತು. ಪ್ರತಿ ಸಂಜೆ ಹಳ್ಳಿಗಳಲ್ಲಿ ಸುತ್ತಾಡುವಾಗ ಕಾಣುತ್ತಿದ್ದ ದೃಶ್ಯಗಳು ಅತ್ಯಂತ ಸಂಕಟದಾಯಿಯಾಗಿದ್ದವು. ರಸ್ತೆ ಬದಿಯಲ್ಲಿ ಸಂಡಾಸಿಗೆಂದು ಕುಳಿತುಕೊಳ್ಳುವ ಹೆಣ್ಣುಮಕ್ಕಳು; ಹೆಡ್‌ಲೈಟ್ ಕಂಡೊಡನೆ ಗಕ್ಕನೆದ್ದು ನಿಂತುಬಿಡುವವರು; ಲಾರಿ ಹೋಗುವಾಗಲೂ ತಲೆ ತಗ್ಗಿಸಿ ಕುಳಿತುಕೊಂಡೇ ಇರುವವರು…. ಇವೆಲ್ಲ ನೋಡಿ ಯಾರಿಗೆ ತಾನೆ ಸಂತೋಷವಾಗುತ್ತೆ ಹೇಳಿ? ಈಗಲೂ ರಾಷ್ಟ್ರೀಯ ಹೆದ್ದಾರಿ ದಾಟಿ ರಾಜ್ಯ ಹೆದ್ದಾರಿಗೆ ಇಳಿದ ಕೂಡಲೆ ಹಳ್ಳಿಗಳಗುಂಟ ಈ ದೃಶ್ಯ ಸಾಮಾನ್ಯ. ಕೆಲವೊಮ್ಮೆ ವಾಕರಿಕೆ ಬರುತ್ತೆ. ಮೊದಲೆಲ್ಲ ಈ ಮಂದಿ ಬಡವರು, ಶೌಚಾಲಯ ಕಟ್ಟಿಕೊಳ್ಳಲು ಹಣವಿಲ್ಲದವರು ಎಂದು ಯೋಚಿಸುತ್ತಿದ್ದರು. ಹಳ್ಳಿಗಳನ್ನು ತಿರುಗಾಡುತ್ತ ತಿರುಗಾಡುತ್ತ ಅರಿವಾಯಿತು- ಕೊರತೆ ಹಣದ್ದಲ್ಲ, ಮನಸ್ಸಿನದ್ದು ಅಂತ. ತಿಂಗಳಿಗೆ ೫೦೦ ರೂಪಾಯಿ ಹಣ ಕರೆನ್ಸಿಗಾಗಿ ಖರ್ಚು ಮಾಡುವ ಮನೆಯವರಿಗೆ ಕೇಬಲ್ಲಿಗೆಂದು ಇನ್ನೂರು ರೂಪಾಯಿ ದಂಡ ಕಟ್ಟುವ ಜನರಿಗೆ ಅತ್ಯವಶ್ಯಕವಾದ ಶೌಚಾಲಯವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲವೆ? ಹಾಗಂತ ವಾಸು ದಬಾಯಿಸಿ ಕೇಳುತ್ತಾರೆ. ಅಲ್ಲವೆ ಮತ್ತೆ?

ಚಿಂತೆ, ಚಿಂತನೆಯಾಯ್ತು. ವಿಷಯ ಚರ್ಚೆಗೆ ಬಂತು. ಸಾಫ್ಟ್ ಮನಸ್ಸಿನ ಸುಧಾ ಮೂರ್ತಿ ವಿಷಯದ ಸೂಕ್ಷ್ಮತೆ ಅರಿತುಕೊಂಡು ಹತ್ತು ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಗೆ ಹಸಿರು ನಿಶಾನೆ ತೋರಿದರು. ಒಂದು ಶೌಚಾಲಯ ನಿರ್ಮಾಣಕ್ಕೆ ಸುಮಾರು ಇಪ್ಪತ್ತು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಅರ್ಧ ಕಟ್ಟಿಕೊಳ್ಳುವವರು ಕೊಡಬೇಕು. ಇನ್ನರ್ಧ ಇನ್ಫೋಸಿಸ್ ಭರಿಸಬೇಕು ಎಂದು ನಿರ್ಧಾರವಾಯ್ತು. ಒಟ್ಟಾರೆ ಒಂದು ವರ್ಷದ ಅವಧಿ. ಈ ಕಾಲಮಿತಿಯೊಳಗೆ ಒಟ್ಟಾರೆ ಒಂದು ಲಕ್ಷ ಜನರಲ್ಲಿ ಶೌಚಾಲಯ ಬಳಸುವ ಕುರಿತು ಅರಿವು ಮೂಡಿಸಬೇಕು. ನಲವತ್ತು ಹಳ್ಳಿಗಳನ್ನಾದರೂ ನೂರಕ್ಕೆ ನೂರು ಶೌಚಾಲಯಯುಕ್ತ ಗ್ರಾಮಗಳನ್ನಾಗಿಸಬೇಕು. ಸ್ಥಳೀಯರನ್ನೆ ನಿರ್ಮಾಣ ಕಾರ್ಯಕ್ಕೆ ತೊಡಗಿಸಬೇಕು. ಇವಿಷ್ಟನ್ನೂ ಹರವಿಕೊಂಡು ವಾಸು ಮತ್ತು ಗೆಳೆಯರು ಕುಂತರು. ಮತ್ತೆ ಪ್ರವಾಸಗಳು ಶುರುವಾದವು. ಹಳ್ಳಿಯಿಂದ ಹಳ್ಳಿಗೆ ಓಡಾಟ. ಶೌಚಾಲಯಗಳ ಕುರಿತಂತೆ ಮಾಹಿತಿ. ರಸ್ತೆ ಬದಿಯಲ್ಲಿ ಕೂರುವುದು ಅಸಹ್ಯವೆಂದು ಮನವೊಲಿಸುವ ಯತ್ನ. ತಿಪ್ಪರಲಾಗ ಹಾಕಿದರೂ ಮೊದಲ ಆರು ತಿಂಗಳಲ್ಲಿ ಒಂದು ಸಾವಿರದಷ್ಟೂ ಜನ ಶೌಚಾಲಯ ಬೇಕೆಂದು ಬಳಿಗೆ ಬರಲಿಲ್ಲ.

ಸುಲಭವೆಂದುಕೋಬೇಡಿ. ನಮ್ಮಹಳ್ಳಿಗಳಲ್ಲಿ ಇಂದಿಗೂ ಸಂಡಾಸಿಗೆ ಹೋಗೋದು ಅಶುಚಿಯೇಂಬ ಭಾವನೆ ಇದೆ. ಮನೆಯೊಳಗಂತೂ ದೂರ ಉಳಿಯಿತು. ಆವರಣದಲ್ಲಿಯೂ ಶೌಚಾಲಯವಿರೋದನ್ನ ವಿರೋಧಿಸುವವರು ಇದ್ದಾರೆ. ವಾಸ್ತುವಿನ ಪ್ರಕಾರ ಮನೆಯಿಂದ ನೂರು ಅಡಿ ದೂರದಲ್ಲಿ ಶೌಚಾಲಯವಿರಬೇಕಂತೆ. (ಬೆಂಗಳೂರಿನಲ್ಲಿ ತಜ್ಞರೊಬ್ಬರು ಹೀಗೆ ಹೇಳಿದ್ದಕ್ಕೆ, ನಮ್ಮನೆ ಶೌಚಾಲಯ ಪಕ್ಕದ ಮನೆಯಲ್ಲಿ ಕಟ್ಟೋಣ, ಪಕ್ಕದ ಮನೆಯವರು ನಮ್ಮ ಮನೆಯೊಳಗೆ ಕಟ್ಟಿಕೊಳ್ಳಲಿ ಎಂದು ಲೇವಡಿ ಮಾಡಿದ್ದರು!) ಹಳ್ಳಿಯ ಜನರಂತೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಕೆರೆ ದಂಡೆ, ನದೀತೀರ, ಸಾಗರದ ಮರಳ ರಾಶಿ, ಏನೂ ಇಲ್ಲವಾದಾಗ ಒಂದು ಚೊಂಬು ನೀರು ಮತ್ತು ರಸ್ತೆ ಬದಿ. ಊಟ ಮಾಡುವುದು ಮತ್ತು ಜೀರ್ಣವಾದ್ದನ್ನು ಹೊರಹಾಕುವುದು- ಎರಡೂ ಬದುಕು – ಸಾವಿನಷ್ಟೆ ಸತ್ಯ. ಹೀಗಿರುವಾಗ ಊಟಕ್ಕೆ ಕೊಟ್ಟ ಪ್ರಾಮುಖ್ಯತೆ ಇದಕ್ಕೇಕಿಲ್ಲವೆಂದು ಕೇಳಿ. `ಅಯ್ಯೋ! ಸಂಡಾಸು ಕಟ್ಟಲು ಸಾವಿರಾರು ರೂಪಾಯಿ ಏಕೆ ಖರ್ಚು ಮಾಡಬೇಕು ಬಿಡಿ’ ಅಂತ ಮೂದಲಿಸಿಬಿಡುತ್ತಾರೆ. ಪಾಪ. ಅವರ ಪಾಲಿಗೆ ಸಂಡಾಸೆಂದರೆ ಬೆಳಗಿನ ಅಥವಾ ಸಂಜೆಯ ವಾಕಿಂಗ್, ಹರಟೆಯ ವೇದಿಕೆ – ಎಲ್ಲವೂ ಹೌದು.

ಇಂಥವರನ್ನು ಬದಲಿಸುವುದು ತಮಾಷೆಯ ಮಾತೇನು? ವಾಸು ಹೊಸಹೊಸ ಮಾರ್ಗ ಬಳಸತೊಡಗಿದರು. ತಮಟೆ ಬಡಿಯುವ ತಂಡ ಕರೆದುಕೊಂಡು ಊರೂರಿಗೆ ಅಲೆದರು. `ಸಂಡಾಸು ಕಟ್ಟೋವ್ರು ಬಂದವರೆ ಬರ್ರಪ್ಪೋ’ ಎನ್ನುವ ಗೌಜು ಕೇಳಿ ಬಂದವರಿಗೆ ವಾಸು ಅರ್ಧ ಗಂಟೆ ಪಾಠ ಮಾಡಿ, ತಲೆಯೊಳಗೆ ಸಂಡಾಸನ್ನೆ ಕೊರೆದುಬಿಡುತ್ತಿದ್ದರು. ಎಷ್ಟೋ ಬಾರಿ ತಮಟೆ ಬಡಿಯುವವರು ಸಿಗದೆ ತಾವೇ ತಮಟೆ ಹಿಡಿದು ಹೊರಟಿದ್ದೂ ಇದೆ. ಅಷ್ಟಾದರೂ ಜನ ಬಗ್ಗಲಿಲ್ಲ. ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಸಜ್ಜಾಯಿತು. ಸ್ಥಳೀಯರೊಬ್ಬರ ಬಳಿ `ಶೌಚಗೀತೆ’ ಬರೆಸಲಾಯಿತು. `ಗೌಡರ ಮನೆ ಸೊಸೆಯಾದ್ರೂ ಸಂಡಾಸಿಗೆ ರಸ್ತೆಗೆ ಹೋಗೋದು ತಪ್ಲಿಲ್ವಲ್ಲಾ…’ ಎಂಬ ಹಾಡು ಊರೂರಲ್ಲಿ ಹಾಡಿಸಲಾಯ್ತು. ಗಂಡಸರ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು ಸ್ವಲ್ಪ ಕೆಲಸ ಮಾಡಿತು. ಎಲ್ಲೋ ಕೆಲವರು ಮಾತ್ರ ಬಂದು, `ಶೌಚಾಲಯ ಕಟ್ಟಿಕೊಡ್ರಿ’ ಎಂದರು.

ಇಡಿಯ ತಂಡ ಹತಪ್ರಭವಾಯ್ತು. ಹತ್ತು ಸಾವಿರದ ಗುರಿ ಮುಟ್ಟುವುದಿರಲಿ, ಬೇಡಿಕೆಯೂ ಇಲ್ಲವಲ್ಲ!? ಆಗ ಹೊಳೆದ ಯೋಜನೆ ಅನನ್ಯವಾದುದು. ತಮ್ಮ ಜನರನ್ನು ಹತ್ತಿರದಿಂದ ಬಲ್ಲ ವಾಸು ಪ್ರಚಾರದ ಶೈಲಿ ಬದಲಿಸಿದರು. `ನೀವು ಹತ್ತು ಸಾವಿರ ಕೊಡಿ, ಉಳಿದದ್ದು ನಾವು ಹಾಕಿ ಸಂಡಾಸು ಕಟ್ಟಿಸುತ್ತೇವೆ’ ಎಂದು ಹೇಳುತ್ತಿದ್ದುದನ್ನು ಬದಲಿಸಿದರು. `ನೀವೇ ಕಟ್ಟಿಕೊಳ್ಳಿ, ನಾವು ಹಣ ಕೊಡುತ್ತೇವೆ’ ಎಂದರು. ಮ್ಯಾಜಿಕ್ ನಡೆದೇ ಬಿಟ್ಟಿತು. ಕೆಲವೇ ದಿನಗಳಲ್ಲಿ ಇಪ್ಪತ್ತೆರಡು ಸಾವಿರ ಜನ ನಮಗೂ ಒಂದು ಶೌಚಾಲಯ ಬೇಕು ಎಂದು ಅರ್ಜಿ ಗುಜರಾಯಿಸಿದರು. ಕೆಲಸ ಶುರುವಾಯ್ತು. ಭರದಿಂದ ಸಾಗಿತು. ವಾಸುವಿನ ಓಡಾಟವೂ ತೀವ್ರವಾಯಿತು. ಹಳ್ಳಿಗೆ ಪ್ರಚಾರದ ಹೆಸರಲ್ಲಿ ಹೊಸಹೊಸ ಮಾರ್ಗಗಳನ್ನು ಹುಡಕಲಾಯ್ತು. ನಾಟಕಗಳು, ಕಥೆಗಳು, ಎಲ್ಲವೂ ಶೌಚಾಲಯದ ಕುರಿತಂತೆಯೇ. ಕುಂತರೂ ನಿಂತರೂ ಶೌಚಾಲಯಗಳೇ. ಕೊನೆಗೆ ಕನಸಿನಲ್ಲೂ ವಾಸು ದೇಶ್‌ಪಾಂಡೆ ಶೌಚಾಲಯವನ್ನೆ ಕಂಡಿದ್ದರೆ ಅಚ್ಚರಿಯಿಲ್ಲ! ಈ ಕಾರಣದಿಂದಲೇ ಸ್ಥಳೀಯ ಆರು ಜಿಲ್ಲೆಗಳಲ್ಲಿ ವಾಸು ದೇಶ್‌ಪಾಂಡೆ `ಟಾಯ್ಲೆಟ್ ವಾಸು’ವಾಗಿಯೇ ಜನಪ್ರಿಯರಾದರು.

ಜೊತೆಗಾರ ಮಿತ್ರರು ಏನು ಕೆಲಸ ಮಾಡುತ್ತಿರುವೆ ಎಂದು ಕೇಳಿದರೆ, ಆರ್ಥಿಕ ಸಂಪತ್ತಿನ ಅಭಿವೃದ್ಧಿ ಎನ್ನುತ್ತಿದ್ದರು ವಾಸು. ಹೇಗೆ ಗೊತ್ತೇನು? ಹಳ್ಳಿಗಳಲ್ಲಿ ಸಂಡಾಸುಗಳಿದ್ದರೆ ಆರೋಗ್ಯ. ಹಳ್ಳಿಗರ ಆರೋಗ್ಯ ಚೆನ್ನಾಗಿದ್ದರೆ ಸಾಮರ್ಥ್ಯ. ಸಮರ್ಥರು ಹೆಚ್ಚು ಕೆಲಸ ಮಾಡುತ್ತಾರೆ. ತನ್ಮೂಲಕ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ. ಅದಕ್ಕೆ ಮೂಲವೇ ಶೌಚಾಲಯ. ನಾನು ಅವುಗಳನ್ನು ಕಟ್ಟುತ್ತಿದ್ದೇನೆ ಎಂದು ಬಲವಾಗಿ ವಾದ ಮಂಡಿಸುತ್ತಿದ್ದರು. ಅವರೀಗ ಸಾಧನೆಯ ಸರದಾರರಾಗಿ ಎದೆಯುಬ್ಬಿಸಿ ನಡೆಯುತ್ತಿದ್ದರು.
ಸಂಡಾಸಿನ ವಿಷಯ ಮುಂದಿಟ್ಟುಕೊಂಡೇ ವಾಸು ಅಂತಾರಾಷ್ಟ್ರೀಯ ಸೆಮಿನಾರುಗಳಿಗೆ ಹೋಗಿ ಬಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಟಾಯ್ಲೆಟ್ಟುಗಳ ಮಹತ್ವ ವಿವರಿಸಿ ಬಂದಿದ್ದಾರೆ. ಕೇಂದ್ರ ಸಚಿವ ಜೈರಾಮ್ ರಮೇಶ್‌ರೊಂದಿಗೆ ಗಂಟೆಗಟ್ಟಲೆ ಕಿತ್ತಾಡಿ, ಶೌಚಾಲಯಕ್ಕೆಂದು ಮೀಸಲಿಟ್ಟ ಹಣವನ್ನು ಕನಿಷ್ಟ ಪಕ್ಷ ಮೂರು ಪಟ್ಟು ಹೆಚ್ಚಿಸುವಂತೆ ಮಾಡಿದ್ದಾರೆ. ಅವರ ಲೆಕ್ಕಾಚಾರ ಬಹಳ ಸರಳ. ದೇಶದ ೪೦% ಜನರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಹೆಚ್ಚುಕಡಿಮೆ ಹದಿನೈದು ಕೋಟಿ ಜನರ ಪಾಲಿಗೆ ಬಯಲೇ ಶೌಚಾಲಯವಾಗಿದೆ ಎಂದಾಯ್ತು. ಒಂದು ಶೌಚಾಲಯ ಕಟ್ಟಿಸಲು ೨೦ಸಾವಿರ ರೂಪಾಯಿಯಂತೆ ಲೆಕ್ಕ ಹಾಕಿದರೆ ಸರಿ ಸುಮಾರು ಮೂವತ್ತು ಲಕ್ಷ ಕೋಟಿ ರೂಪಾಯಿಯಷ್ಟು ವಹಿವಾಟು ನಡೆಯಬಲ್ಲ ಕ್ಷೇತ್ರ ಇದು. ಸಂಡಾಸಿನ ಬೇಸಿನ್ನಿನಿಂದ ಹಿಡಿದು ಮೇಲೆ ಹೊದೆಸುವ ತಗಡು ಶೀಟಿನವರೆಗೆ ಹತ್ತಾರು ಬಗೆಯ ವಸ್ತುಗಳು ಬೇಕು. ಹಳ್ಳ ತೋಡುವವನಿಂದ ಹಿಡಿದು ನಲ್ಲಿ ಜೋಡಿಸುವವನವರೆಗೆ ಹತ್ತಾರು ಜನರಿಗೆ ಕೈತುಂಬ ಕೆಲಸ. ವಾಸು ಹೇಳುತ್ತಿದ್ದರೆ, ನಿರುದ್ಯೋಗ ನಿವಾರಣೆಗೆ ಶೌಚಾಲಯ ಕಟ್ಟುವುದೊಂದೇ ಮಾರ್ಗ ಎನ್ನಿಸಿಬಿಡುತ್ತೆ. ಹೌದು… ಆತ ಅಷ್ಟೊಂದು ಮುಳುಗಿಹೋಗಿದ್ದಾರೆ. ಈಗಲೂ ದೆಹಲಿಯ ಪಡಸಾಲೆಗಳಲ್ಲಿ ಅಲೆದಾಡುತ್ತಾ ಸದನಕ್ಕೆಂದು ಬಂದ ಮಂತ್ರಿಗಳ ಬಳಿ ಸಮಯ ಪಡೆದು ಚರ್ಚೆ ಮಾಡುತ್ತಾರೆ. ಹಳ್ಳಿಗಳಲ್ಲಿ ರಸ್ತೆ ಬದಿಯಲ್ಲಿ ಸಂಡಾಸಿಗೆ ಕೂರುವ ಹೆಣ್ಣುಮಕ್ಕಳ ಸಂಖ್ಯೆ ಸೊನ್ನೆಯಾಗಿಸುವ ಪಣ ಅವರದು. ಅದಕ್ಕೇ ಯೋಜನೆಗಳನ್ನು ರೂಪಿಸಿ ಸರ್ಕಾರದ ಜೋಳಿಗೆಗೆ ಹಾಕುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ ಎರಡು ವರ್ಷಗಳಲ್ಲಿ ಬದಲಾವಣೆ ಬರೋದು ನಿಶ್ಚಿತ ಎನ್ನುವ ಭರವಸೆ ಅವರದು.

ನಾವಿಬ್ಬರು ಮಾತನಾಡುತ್ತಿರುವಾಗಲೇ ವಾಸುವಿನ ಮೊಬೈಲ್ ಸದ್ದು ಮಾಡಿತು. ಅದೊಂದು ರಿಮೈಂಡರ್. `ಇಬ್ಬರು ಮಕ್ಕಳು, ಒಬ್ಬ ಹೆಂಡತಿಯನ್ನು ಮರೆಯಬೇಡಿ’ ಎಂದು ಅದರಲ್ಲಿ ಬರೆದಿತ್ತು. ಅದನ್ನು ತೋರಿಸಿ ವಾಸು ನಕ್ಕರು. `ಮನೆಯವರು ಹಾಗೆ ಫೀಡ್ ಮಾಡಿಟ್ಟಿದ್ದಾರೆ. ದಿನಕ್ಕೊಂದು ಕರೆ ಮಾಡಲೇಬೇಕು’ ಎನ್ನುತ್ತಾ ಮಾತು ಮುಗಿಸಿದರು. ವಾರಕ್ಕೆರಡು ದಿನ ಮನೆಯಲ್ಲಿ ಕಳೆಯಬೇಕು. ಸಂಜೆ ಬಸವ ಎಕ್ಸ್‌ಪ್ರೆಸ್ ಹತ್ತಿ, ನೇರ ಗುಲ್ಬರ್ಗಾಕ್ಕೆ ವಾಸು ವಾಪಸ್ಸು.

* * * * * * * * *

ಚಿತ್ರಕೃಪೆ : ಚಕ್ರವರ್ತಿ ಸೂಲಿಬೆಲೆ

4 ಟಿಪ್ಪಣಿಗಳು Post a comment
  1. ಉಮೇಶ ಏನ್ ಶೆಟ್ಟಿ
    ಆಗಸ್ಟ್ 21 2012

    ವಾಸು ದೇಶಪಾಂಡೆ ಇನ್ ಫೋಸಿಸ್ ನಲ್ಲಿ ನನ್ನ ಸಹೋದ್ಯೋಗಿ ಮತ್ತು ಆತ್ಮೀಯ ಗೆಳೆಯ.
    ವಾಸುವಿನಂತಹ “ಅಪ್ಪಟ ಸೇವಾ ಮನೋಭಾವ”ವುಳ್ಳವರು ಅಪರೂಪ.
    ವಾಸುವಿನ ಕೆಲಸ ೨೦೦% ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
    ಇತೀ, ಉಉನಾಶೆ

    ಉತ್ತರ
  2. Raghu
    ಆಗಸ್ಟ್ 21 2012

    Vasu, you are god’s own child. years to come, re-births to happen, you, your family, and kids will always be blessed by the almighty. You deserve a ‘Padma’ award of our country.

    ಉತ್ತರ
  3. subhash
    ಆಗಸ್ಟ್ 22 2012

    VAASU NIMAGE YASHASSU SIGALI. EEREETI TEVALUGALINDA KELASA MAADUVAVARU BAHALA KADIME AADARU NIMMANTAVARU BEKU.
    SUBHASH, CHAMARAJANAGAR

    ಉತ್ತರ
  4. Bindu
    ಆಗಸ್ಟ್ 25 2012

    ಚಕ್ರವರ್ತಿ ಸೂಲಿಬೆಲೆ ಅವರೇ, ವಾಸು ಅವರ ಮಿಂಚಂಚೆ ಅಥವಾ ವಿಳಾಸ ದೂರವಾಣಿ ಇತ್ಯಾದಿ ಇದ್ದಾರೆ ತಿಳಿಸುತ್ತೀರಾ? ಮುಂದೊಂದು ದಿನ ನಮ್ಮೂರನ್ನು ಉದ್ದಾರ ಮಾಡುವಷ್ಟು ಸದ್ಬುದ್ದಿ ಧೈರ್ಯ ನನಗೆ ಆ ದೇವರು ಕೊಟ್ಟರೆ ಅವರ ಮಾರ್ಗದರ್ಶನ ಪಡೆಯುತ್ತೇನೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments