ಪದವೀಧರೆಯಾದೆ
– ಮೂಲ್ಕಿ ನಾಗ
ಉಲ್ಲಾಸ ಮಹದೊಲ್ಲಾಸ ಆಹ್ಲಾದ
ಲಾಸ್ಯ ನಾಟ್ಯವಾಡುತಿದೆ ಇಂದು
ಪದ ವಾಕ್ಯಗಳಿಂದ ವರ್ಣಿಸಲಾಗದು
ಗದ್ಯ ಪದ್ಯಗಳಿಂದ ಬಣ್ಣಿಸಲಾಗದು
ಈ ಧರೆಯಲೊಂದು ಒಂದು ಪದವಿ
ಪಡೆದ ವೀರೇ ಪದವೀಧರೆಯಾದೆ
ಅದೆಷ್ಟೂ ಪರೀಕ್ಷೆಗಳೋ
ಅದೇನೋ ನಿರೀಕ್ಷೆಗಳೋ
ಏನೇನೋ ಅನಿರೀಕ್ಷೆಗಳೋ
ಮುಗಿಯಿತೊಂದು ಶುರುವಾಯಿತು
ಇನ್ನೊಂದು ಮತ್ತೊಂದು
ಬರುವುದು ಹೋಗುವುದು
ವಾಲದೆ ಜಾರದೆ ಮುನ್ನಡೆದರೆ
ಪರಿ ಪರಿಯ ಪರಿಶ್ರಮ ಕ್ರಮವಾಗಿ
ಫಲ ಸಫಲ ಪ್ರತಿಫಲ ಸುಫಲ
ಹೆತ್ತವರ ತೆತ್ತವರ ಹಕ್ಕಿನವರ
ಕಥೆ ವ್ಯಥೆ ಗಾಥೆ ಗಾದೆ ಹಕ್ಕಿಗಳ
ಸುರ ಪುರ ಗೋಪುರ ಆಶಾಗೋಪುರ
ಅರ್ಥೈಸು! ವ್ಯರ್ಥ ಅನರ್ಥವಾಗದೆ
ನೋಡು ನಮ್ಮ ಕಿರಣ ಆಶಾಕಿರಣ
ಹಂತ ಹಂತವಾಗಿ ಅನಂತವಾಗಿ
ಆತಂಕ ಮಂಕ ಶಂಕೆಗಳ ಕಳೆದು
ಗಿಡ ಬೆಳೆ ಬೆಳೆದು ಹೆಮ್ಮರವಾಗಿ
ಹೂ ಹಣ್ಣು ನೆರಳು ಆಸರೆ
ಗಾಳಿ ತಂಗಾಳಿ ಮಳೆ ಬರಿಸು
ವಿಶ್ವಾಸಿನಿ, ವಿಶ್ವ ಕುಟುಂಬಕ್ಕೆಲ್ಲಾ
ಕಕ್ಷೆಯಿಲ್ಲದ ನಕ್ಷೆ ಕಾಂಕ್ಷೆ ಆಕಾಂಕ್ಷೆ
ಗುರಿ ಮುಟ್ಟಿದಾ ಕ್ಷಣ ಲಕ್ಷಣ ವಿಲಕ್ಷಣ
ನಿ ಹಿಂದೆ ಹಿಂದೆ ಹೊಸ ಗುರಿ ಮುಂದೆ ಮುಂದೆ
ಹಿಂಬಾಲಿಸಿ ಮುಂದೆ ಮುಂದುವರಿಸೆನ್ನುವುದು
ಇದೊಂದು ಮರೀಚೆಕೆ ಮಾರೀಚ
ಮರಿ ಮಾಯಾ ಹೊನ್ನ ಜಿಂಕೆ
ಆಗಲು ಹೋಗಲು ಬೀಳಲು
ಓಡಲು ಬೇಡ ಓಡಿಸಬೇಡ
ಮಂಕು ಮಂಕಲಿ ತ್ರಿಶಂಕಾಗದೆ
ಸಂಕ ತೃಪ್ತಿ ಸಂತೃಪ್ತಿ ದೀಪ್ತಿಯಲಿ
ಗುರು ಗುರುತರ ಗುರಿ ಸಾಧಕಿಯಾಗು
ಉನ್ನತ ಪದವಿಯ ಅರಸಿ
ಪದವಿ ಅಡವಿಯಲ್ಲಿ ಅಡವಿಟ್ಟೆ
ವ್ಯಯ ಸಮಯ ನಿನ್ನ ಜ್ಞಾನ
ವ್ಯಾಪಾರ ವ್ಯವಹಾರ ಮಾಡಿ
ಗಳಿಸು ಉನ್ನತೊನ್ನತ ಪದವಿ
ಉರಿಸು ಹರಿಸು ಜ್ಞಾನ ನಂದಾದೀಪ
ಜ್ಞಾನ ವಿಜ್ಞಾನ ಸೂರ್ಯ ನೀನಾಗು
ಈ ಕವಿದ ಕತ್ತಲ ಜಗಕೆ ಬೆಳಕಾಗು
ನೀ ಸುಖಿಯಾಗಿ ಬೆಳದಿಂಗಳಾಗಿ
ಎಲ್ಲರ ಸುಖಕ್ಕೆ ಸಖಿಯಾಗು ನೀನು
ಮಗಳು ಅನುಷಾ ಮೂಲ್ಕಿ
ಈ ವರುಷ ಪದವೀಧರೆಯಾದಾಗ (ಮೇ, ೨೦೧೨) ಬರೆದ ಕವನ.
ಚಿತ್ರ ಕೃಪೆ : wasudo.deviantart.com





bahala chennaagide.
Arthagarbita vaagide nimma ee kavite 🙂