ವೈದ್ಯೋ ನಾರಾಯಣೋ ಹರಿ
ಮಧುಚಂದ್ರ ಭದ್ರಾವತಿ
ಪ್ರತಿ ಸೇವೆಗೆ ಸೇವಾ ಶುಲ್ಕವೆಂದು ಪ್ರತಿಯೊಂದು ಕಾರ್ಮಿಕ ವರ್ಗವು ಪಡೆಯುತ್ತದೆ . ಇಂದು ಸೇವಾ ಶುಲ್ಕದಲ್ಲಿ ಸೇವೆ ಎನ್ನುವ ಪದ ತಾನಾಗೆ ಬೇರ್ಪಟ್ಟಿದೆ. ಈಗ ಶುಲ್ಕದ ಮೇಲೆ ಮತ್ತೊಂದು ರೀತಿಯ ಶುಲ್ಕವನ್ನು ಹಾಕಿ ಹಲ್ಕಿರಿಯುತ್ತ ಗ್ರಾಹಕರನ್ನು ಶೋಷಣೆ ಮಾಡುವ ವ್ಯಾಮೋಹಕ್ಕೆ ತಮ್ಮ ಸಂಸ್ಕಾರವನ್ನು ಮರೆತು ಬಿಟ್ಟು ಹಗಲು ದರೋಡೆಯಲ್ಲಿ ಹಲವು ಕಾರ್ಮಿಕ ವರ್ಗಗಳು ನಿರತವಾಗಿವೆ. ಕೆಳ ಮಟ್ಟದ ಕಾರ್ಮಿಕ ವರ್ಗದಿಂದ ಹಿಡಿದು ಅತ್ಯುತ್ತಮ ಮಟ್ಟದ ಕಾರ್ಮಿಕ ವರ್ಗದವರೆಗೂ ಈ ಸಂಸ್ಕಾರ ಅಂಟಿಕೊಂಡಿದೆ(ಎಲ್ಲರು ಈ ವರ್ಗಕ್ಕೆ ಸೇರುವುದಿಲ್ಲ ,ಕೆಲವರು ಇದಕ್ಕೆ ಅಪವಾದ ).
ಅದಕ್ಕೆ ” ವೈದ್ಯ ” ಎಂಬ ಕಾರ್ಮಿಕ ವರ್ಗವು ಸಹ ತಡವಾಗಿ ಸೇರಿದರು ಎಲ್ಲ ವರ್ಗವನ್ನು ಮಿರಿ ಅತ್ಯಂತ ವೇಗವಾಗಿ ಮುನ್ನುಗುತ್ತಿದೆ. ಬಹುಶ ನಮ್ಮ ಸುತ್ತಮುತ್ತಲಿರುವ ವೈದ್ಯರನ್ನು ಮತ್ತು ಆಸ್ಪತ್ರೆಗಳನ್ನು ನೀವಾಗಿ ನಿಮ್ಮ ಮನದಲ್ಲಿ ಪ್ರಸ್ತಾಪಿಸಿದರೆ ಅದಕ್ಕೆ ತಕ್ಕ ಮಟ್ಟಿಗೆ ಉತ್ತರ ನಿಮಗೆ ದೊರೆಯುತ್ತದೆ . ಸೇವಾ ಮನೋಭಾವ ಎಂಬುದನ್ನು ಮರೆತು, ಕೇವಲ ಹಣಕ್ಕಾಗಿ ತಮ್ಮನ್ನು ಮಾರಿಕೊಂಡು ತಮ್ಮ ಮೂಲ ವೃತ್ತಿಗೆ ದ್ರೋಹ ಬಗೆಯುತ್ತ ಜೀವನವೆಂಬ ರಥವನ್ನು ಎಳೆಯುತ್ತಾ ರೋಗಿಗಳ ರಕ್ತವನ್ನು ಕುಡಿಯುತ್ತಿರುತ್ತಾರೆ. ವಾಸ್ತವ ಹೇಗಿದೆ ಎಂದರೆ ಇಂದು ವೈದ್ಯನೆಂದರೆ ಹಣ ಕೀಳುವ ಜಿಗಣೆ ಎಂಬಂತಾಗಿದೆ.
ಮೇಲಿನ ಎಲ್ಲ ಅಪವಾದಗಳನ್ನು ಮೆಟ್ಟಿ ನಿಂತು ಶುಲ್ಕವಿಲ್ಲದೆ ತಮ್ಮ ಜೀವನವನ್ನು ಜನರಿಗಾಗಿ ಸೇವೆಯನ್ನು ನೀಡುತ್ತ ” ವೈದ್ಯೋ ನಾರಾಯಣೋ ಹರಿ (ಅರ್ಥಾತ್ ವೈದ್ಯನು ದೇವರಿಗೆ ಸಮಾನ ) ಎಂಬ ಶ್ಲೋಕಕ್ಕೆ ಅನ್ವರ್ಥವಾಗಿ ಹಲವರು ಇದ್ದಾರೆ ಅವರಲ್ಲಿ ಒಬ್ಬರು ” ನಾರಾಯಣ ಮೂರ್ತಿ ” .
ನಾರಾಯಣ ಮೂರ್ತಿ ಪದ ಕಿವಿಗೆ ಬಿಳುತ್ತಾ ಇದ್ದ ಹಾಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರಾ ಎನ್ನುವ ಪ್ರಶ್ನೆ ಸಹಜವಾಗಿ ಮೂಡಿ ಬರುತ್ತೆ .
ಉತ್ತರ ಇವರಂತೂ ಅಲ್ಲ.
ವೈದ್ಯ ನಾರಾಯಣ ಮೂರ್ತಿ ಎಂದು ಚಿರಪರಿಚಿತರಾಗಿರುವ ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಹೋಬಳಿಯ ನರಸೀಪುರವೆಂಬ ಕುಗ್ರಾಮದಲ್ಲಿ ಸುಮಾರು ನಲವತ್ತು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಕ್ಯಾನ್ಸರ್ , ಹೃದಯಕ್ಕೆ ಸಂಬಂದಿಸಿದ ಕಾಯಿಲೆ,ಕಿಡ್ನಿ ಸಂಬಂದಿಸಿದ ಕಾಯಿಲೆ, ಡಯಾಬಿಟಿಕ್ ಹಲವರು ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತ ಬಂದಿದ್ದಾರೆ. ಕೇವಲ ಸುತ್ತ ಮುತ್ತಲಿನ ಗ್ರಾಮಗಳ ಜನರು ಮಾತ್ರವಲ್ಲ ದೇಶ ವಿದೇಶಗಳಿಂದ ಜನರು ಬಂದು ನಾರಾಯಣ ಮೂರ್ತಿಯವರ ಚಿಕಿತ್ಸೆಯಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡಿದ್ದಾರೆ.
ಮೂಲತಹ ಕೃಷಿಕರಾದ ನಾರಾಯಣ ಮೂರ್ತಿಯವರಿಗೆ ಅನುವಂಶಿಕವಾಗಿ ಬಂದ ಕಾಯಕವನ್ನು ಒಂದು ರುಪಾಯಿ ಪಡೆಯದೇ ಜನ ಸೇವೆಯೇ ಜನಾರ್ದನನ ಸೇವೆ ಎಂದು ಪಾಲಿಸುತ್ತಾ ಬಂದಿದ್ದಾರೆ. ಸೋಮವಾರ ಮತ್ತು ಗುರುವಾರ ಮಾತ್ರ ಚಿಕಿತ್ಸೆ ನೀಡುವ ಇವರು ಉಳಿದ ದಿನಗಳಲ್ಲಿ ಮದ್ದುಗಳನ್ನು ತಯಾರಿಸುವ ಕಾಯಕದಲ್ಲಿ ತೊಡಗಿರುತ್ತಾರೆ. ತಾವೇ ಸ್ವತಹ ಕಾಡಿಗೆ ಹೋಗಿ ಗಿಡ ಮೊಲಿಕೆಗಳನ್ನು ಆಯ್ದು ತಂದು ಮದ್ದು ತಯಾರಿಸಿ ಕಾಯಿಲೆಗಳಿಗೆ ತಕ್ಕ ಮದ್ದು ನೀಡುತ್ತಾರೆ . ಕೆಲವೊಮ್ಮೆ ಕಾಯಿಲೆಯ ಸ್ವರೋಪ ಅರಿಯಲು ಹಿಂದಿನ ವೈದ್ಯರು ನೀಡಿದ ರಿಪೋರ್ಟ್ ಪರೀಕ್ಷಿಸಿ ತಮ್ಮ ಚಿಕಿತ್ಸೆ ನೀಡುತ್ತಾರೆ.
ಇವರ ಹತ್ತಿರ ಚಿಕಿತ್ಸೆ ಪಡೆಯಲು ನಸುಕಿನ ನಾಲ್ಕು ಗಂಟೆಗೆ ಅವರ ಮನೆ ಮುಂದೆ ಜನರು ಸಾಲು ಸಾಲಾಗಿ ತಮ್ಮ ಸರದಿಗಾಗಿ ಕಾಯುತ್ತ ನಿಂತು ಮದ್ದು ಪಡೆದು ಹೋಗುತ್ತಾರೆ. ಇಲ್ಲಿಗೆ ರೋಗಿಯೇ ಬರಬೇಕೆಂದು ಕಡ್ಡಾಯವಿಲ್ಲ, ರೋಗಿಯ ಕಡೆಯವರು ಬಂದರು ಸಾಕು ಮತ್ತು ಮುಂಗಡ ಕಾಯ್ದಿರುಸುವಿಕೆ ಕೂಡ ಇಲ್ಲ.
ನಿಮ್ಮ ಚಿಕಿತ್ಸೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದು ನಾರಾಯಣ ಮೂರ್ತಿಯವರನ್ನು ಕೇಳಿದಾಗ ಅವರ ಉತ್ತರ “ಕೇವಲ ನಂಬಿಕೆ ಅಷ್ಟೇ ಬೇರೆನು ಇಲ್ಲ”.
ನೀವು ವೈದ್ಯ ನಾರಾಯಣ ಮೂರ್ತಿ ಭೇಟಿ ಮಾಡಬೇಕೆ ಕೆಳಗಿನ ಸಂಖ್ಯೆಗೆ ಕರೆ ಮಾಡಿ, ಅವರು ಸಿಗದೇ ಇರಬಹುದು ನಾನು ಬ್ಯುಸಿ ಎನ್ನ ಬಹುದು. ಕಾರಣ ಇಷ್ಟೇ , ನೀವೇ ಅರ್ಥ ಮಾಡಿಕೊಳ್ಳಿ ” ದೇವರು ಯಾವಾಗಲು ಬ್ಯುಸಿ ಇರುತ್ತಾನೆ ” ಎಂದು.
ನಾರಾಯಣ ಮೂರ್ತಿ – (+91) 08183 258033.
ನರಸೀಪುರ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
* * * * * * * * *
ಚಿತ್ರ ಕೃಪೆ : ಅಂತರ್ಜಾಲ





ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಳೇವರೇ|
ಔಷಧಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ||
ಶರೀರ ಜೀರ್ಣವಾಗಿ ಹೋಗಿದೆ. ದೇಹದಲ್ಲಿ ಅನೇಕ ರೋಗಗಳು ಸೇರಿಕೊಂಡಿವೆ. (ಅರ್ಥಾತ್ ಮುಪ್ಪು ಬಂದಿದೆ). ಮುದುಕ ಹಾಸಿಗೆ ಹಿಡಿದಿದ್ದಾನೆ. ಅಂತಹ ಹೊತ್ತಿನಲ್ಲಿ ಬಂದವರು ಯಾರೋ ಕೇಳುತ್ತಾರೆ: “ಯಾರು ವೈದ್ಯರು? ಏನು ಔಷಧಿ?” ಅದಕ್ಕೆ ಮುದುಕನ ಉತ್ತರ: “ಔಷಧ ಗಂಗಾಜಲ; ವೈದ್ಯ ಆ ನಾರಾಯಣ!”
ನಮ್ಮಲ್ಲಿ ವೈದ್ಯರನ್ನು ದೇವರೆಂದು ತಿಳಿದಂತಿಲ್ಲ. ವೈದ್ಯರ ಕುರಿತ ಒಂದು ಶ್ಲೋಕ ಹೀಗಿದೆ:
ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ|
ಯಮಸ್ತು ಹರತಿ ಪ್ರಾಣಾನ್ ವೈದ್ಯಃ ಪ್ರಾಣಾನ್ ಧನಾನಿ ಚ||
ಯಮರಾಜನ ಸಹೋದರನಾದ ವೈದ್ಯರಾಜನೇ ನಿನಗೆ ನಮಸ್ಕಾರ! ಯಮನಾದರೋ ಕೇವಲ ಪ್ರಾಣವನ್ನು ಒಯ್ಯುತ್ತಾನೆ. ವೈದ್ಯನು ಪ್ರಾಣ, ಧನ ಎರಡನ್ನೂ ಒಯ್ಯುತ್ತಾನೆ!