ವಿಷಯದ ವಿವರಗಳಿಗೆ ದಾಟಿರಿ

Archive for

17
ನವೆಂ

ಮತ್ತೊಮ್ಮೆ ಕಾರ್ನಾಡ್: ಸಂಸ್ಕೃತಿ ಚಿಂತನೆಯ ಮುಂದಿರುವ ಸವಾಲುಗಳು

-ಪ್ರೇಮಶೇಖರ
          ಗಿರೀಶ್ ಕಾರ್ನಾಡ್ ಮತ್ತೆ ಸುದ್ದಿಯಲ್ಲಿದ್ದಾರೆ.  ಸರ್ ವಿದಿಯಾಧರ್ ಸೂರಜ್‌ಪ್ರಸಾದ್ ನೈಪಾಲ್ ಅವರನ್ನು ಮುಸ್ಲಿಂ ವಿರೋಧಿ ಎಂದು ಮುಂಬೈ ಸಾಹಿತ್ಯೋತ್ಸವದಲ್ಲಿ ಟೀಕಿಸಿದ ಬಿಸಿ ಆರುವ ಮೊದಲೇ ನೆಲಮಂಗಲದಲ್ಲಿ ರವೀಂದ್ರನಾಥ್ ಟ್ಯಾಗೋರ್ ಎರಡನೆಯ ದರ್ಜೆಯ ನಾಟಕಕಾರ ಎಂದು ಹೇಳಿದ್ದಾರೆ.  ಕಾರ್ನಾಡ್ ಪರ/ವಿರೋಧ ಬಾಣಗಳ ಹಾರಾಟ ಸಾಗಿದೆ.
          ಎಸ್. ಎಲ್. ಭೈರಪ್ಪ, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡರಂಥ ಸಾಹಿತ್ಯಕ ದಿಗ್ಗಜಗಳ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದೇವೆಂಬುದರ ಆಧಾರದ ಮೇಲೆ ಸಾಹಿತ್ಯಕ್ಷೇತ್ರದಲ್ಲಿನ ಸ್ಥಾನಮಾನಗಳಿರಲಿ, ವೈಯುಕ್ತಿಕ ಸಂಬಂಧಗಳೂ ಸಹಾ ನಿರ್ಧರಿತವಾಗುವಂಥ ಉಸಿರುಕಟ್ಟುವ ವಾತಾವರಣ ಕನ್ನಡ ಸಾಂಸ್ಕೃತಿಕವಲಯದಲ್ಲಿ ನಿರ್ಮಾಣವಾಗಿರುವ ಕಾಲ ಇದು.  ಇಲ್ಲೀಗ ನೈಪಾಲರ ಬಗೆಗಿನ ಕಾರ್ನಾಡರ ಅಸಹನೆಯ ಹಿಂದಿನ ಕಾರಣಗಳಂಥ ವಿವಾದಾಸ್ಪದ ವಿಷಯವನ್ನು ಚರ್ಚೆಗೆತ್ತಿಕೊಳ್ಳುವುದು ಜಾರುವ ನೆಲದಲ್ಲಿ ಕಾಲಿಟ್ಟಂತೆ.  ಇಂಥಾ ಪರಿಸ್ಥಿತಿಯಲ್ಲಿ, ಕಾರ್ನಾಡರ ಬಗೆಗಿನ ನನ್ನ ವೈಯುಕ್ತಿಕ ಅನುಮಾನ, ಅಭಿಪ್ರಾಯಗಳ ಸುಳಿವು ನೀಡಿಯೇ ಮುಂದುವರೆಯುವುದು ಸೂಕ್ತ.
          ತುಘ್‌ಲಕ್ನ ಹಿಂದಿರುವುದು ಆಲ್ಬರ್ಟ್ ಕಮೂನ ಕಾಲಿಗುಲ ಎಂಬ ಆಪಾದನೆಯಂಥವುಗಳನ್ನು ಕೇಳಿಯೂ ಕಾರ್ನಾಡ್ ಒಬ್ಬ ಅತ್ಯುತ್ತಮ ನಾಟಕಕಾರ ಎಂದು ನಂಬಿದವನು ನಾನು.  ಹನ್ನೊಂದು ದಿನಗಳ ಹಿಂದಷ್ಟೇ ದೆಹಲಿಯ ಕೋಟ್ಲಾ ಮೈದಾನದಲ್ಲಿ ಆಸಕ್ತಿಯಿಂದ ತುಘ್‌ಲಕ್ ನೋಡಿ ಕಾರ್ನಾಡರ ಪ್ರತಿಭೆಯ ಬಗ್ಗೆ (ಅದೆಷ್ಟನೆಯ ಬಾರಿಯೋ) ವಿಸ್ಮಿತನಾದವನು ನಾನು.  ಆದರೆ ಅವರ ಸಾಹಿತ್ಯೇತರ ಚಿಂತನೆಗಳ ಬಗ್ಗೆ ನನ್ನಲ್ಲಿ ಅಸಹನೆ ಮೂಡಿದ ಉದಾಹರಣೆಗಳುಂಟು.  ಕಾವೇರಿ ವಿವಾದದ ಬಗೆಗಿನ ಅವರ ಹೇಳಿಕೆಗಳು, ಮೇಲೇರಲು ನನಗೆ ಯಾರೂ ಸಹಕರಿಸಲಿಲ್ಲ, ಹಾಗಾಗಿ ನಾನೂ ಯಾರಿಗೂ ಸಹಕರಿಸುವುದಿಲ್ಲ ಎಂಬ ಅವರ ಘನತೆಗೆ ತಕ್ಕುದಲ್ಲದ ಮಾತುಗಳು ಮೂಡಿಸಿದ ಬೇಸರದ ಹಿನ್ನೆಲೆಯಲ್ಲಿಯೇ ನಾಟಕಗಳ ಹೊರತಾದ ಅವರ ಸೃಜನಶೀಲ ಕೃತಿಗಳನ್ನೂ ಅನುಮಾನದಿಂದ ನೋಡುವವನು ನಾನು.  ಎರಡೂವರೆ ವರ್ಷಗಳ ಹಿಂದೆ ದೇಶ ಕಾಲ ತ್ರೈಮಾಸಿಕದ ವಿಶೇಷ ಸಂಚಿಕೆಯಲ್ಲಿ ಓದಿದ ಮುಸಲ್ಮಾನ ಬಂದ, ಮುಸಲ್ಮಾನ ಬಂದ ಎಂಬ ಅವರ ಸಣ್ಣಕಥೆಯಂತೂ ನನ್ನಲ್ಲಿ ಅತ್ಯಂತ ತಿರಸ್ಕಾರವನ್ನುಂಟುಮಾಡಿತ್ತು.  ನಮ್ಮ ಬುದ್ಧಿಜೀವಿಗಳು ಬಹಿರಂಗವಾಗಿ ಇಷ್ಟಪಡದ ಸೌಂದರ್ಯ ಸ್ಪರ್ಧೆಗಳಲ್ಲೊಂದು ನಿಯಮವಿದೆಯಂತೆ.  ವಿಶ್ವಸುಂದರಿಯಾಗಿ ಆಯ್ಕೆಯಾದವಳು ಆನಂತರ ತನಗೆ ಪ್ರಶಸ್ತಿ ತಂದುಕೊಟ್ಟ ಮೈಮಾಟದ ಅಂಕಿಅಂಶಗಳಲ್ಲಿ ತೀವ್ರತರದ ಬದಲಾವಣೆಗಳನ್ನು ತಂದುಕೊಂಡರೆ ಆಕೆಯಿಂದ ಪ್ರಶಸ್ತಿಯನ್ನು ಕಿತ್ತುಕೊಳ್ಳಲಾಗುತ್ತದಂತೆ.  ಇಂತಹ ನಿಯಮವನ್ನು ಜ್ಞಾನಪೀಠ ಪ್ರತಿಷ್ಠಾನವೂ ಜಾರಿಗೆ ತಂದು, ಪ್ರಶಸ್ತಿಯ ಮೌಲ್ಯವನ್ನು ಕುಗ್ಗಿಸುವ ಕೃತಿಗಳನ್ನು ರಚಿಸುವ ಜ್ಞಾನಪೀಠಿಗಳಿಂದ ಪ್ರಶಸ್ತಿಯನ್ನು ಕಿತ್ತುಕೊಳ್ಳುವಂತಾದರೆ ಎಷ್ಟು ಒಳ್ಳೆಯದು ಎಂದು ಯೋಚಿಸಿದ್ದೆ.