ಭಾಷಣ ಮಾಡುವ ಕ(ಕೊ)ಲೆ
– ಅರೆಹೊಳೆ ಸದಾಶಿವ ರಾವ್
ಇದೇನು ಹೊಸ ರೀತಿಯ ಕೊಲೆ ಎಂದು ಹುಬ್ಬೇರಿಸಬೇಡಿ. ಶೀರ್ಷಿಕೆ ಹೇಳುವಂತೆ ಈ ಭಾಷಣ ಎನ್ನುವುದು ಒಂದು ಕಲೆಯೂ ಹೌದು, ಸ್ವಲ್ಪ ವ್ಯಾಕರಣ ದೋಷ ಕಾಣಿಸಿಕೊಂಡರೆ ಅದು ಕೊಲೆಯೂ ಹೌದು.
ಉತ್ತಮವಾದ ಮಾತುಗಾರಿಕೆ, ಮಾತುಗಾರಿಕೆಯಲ್ಲಿ ವ್ಯಾಕರಣ ಬದ್ಧ, ತೂಕಸಹಿತ ಮಾತು, ಸಿಹಿಯಾದ ನುಡಿಮುತ್ತು, ಸಾಹಿತ್ಯದ ಸಾಂಗತ್ಯ, ಹದಕ್ಕೆ ಬೇಕಾದಷ್ಟು ಏರಿಳಿತ ಮತ್ತು ನಿರರ್ಗಳತೆ, ಇವು ಮೇಳೈವಿಸಿದರೆ ಅದು ಭಾಷಣ ಮಾಡುವ ‘ಕಲೆ’ ಎನಿಸಿಕೊಳ್ಳುತ್ತದೆ. ಇದರಲ್ಲಿ ಯಾವುದಾದರೂ ಒಂದು ಕೈ ಕೊಟ್ಟರೆ ಅದು ಭಾಷಣ ಮಾಡುವ ‘ಕೊಲೆ’ ಆಗುತ್ತದೆ.
ಭಾಷಣ ಮಾಡುವ ‘ಕೊಲೆ’ಯಲ್ಲಿ ಮೊದಲ ಬಲಿಪಶುವಾಗುವುತು ಭಾಷೆ. ನಮ್ಮ ಕರುನಾಡ ಮಾತೃ ಭಾಷೆಯ ಪರಿಸ್ಥಿತಿಯಂತೂ ಇಂದು ಹೇಳತೀರದಷ್ಟು ಹದಗೆಟ್ಟಿದೆ. ಮೊದಲೇ ತಮಿಳು, ಮಲಯಾಳಿ, ಮರಾಠಿ, ತೆಲುಗರಿಂದಾಗಿ ಕನ್ನಡವನ್ನು ಹುಡುಕಿದರೂ, ಹುಡುಕಿದಾತನೇ ಹಾಸ್ಯಾಸ್ಪದವಾಗುತ್ತಿದ್ದಾನೆ. ದುರಂತವೆಂದರೆ ಈ ಭಾಷೆಗಳ ಹೊಡೆತದ ನಡುವೆಯೂ ಅಲ್ಲಲ್ಲಿ ಉಳಿದಿರುವ ಕನ್ನಡಕ್ಕೆ ಇಂಗ್ಲೀಷ್‍ನ ಬೆರಕೆಯಾದ ನಂತರ ಕನ್ನಡವೆನ್ನುವುದು ಕಲಬೆರಕೆ ಆಗಿಬಿಟ್ಟಿದೆ.
ಅದಿರಲಿ ಬಿಡಿ. ನಾವಿಲ್ಲಿ ಭಾಷಾ ಸಮಸ್ಯೆಗಿಂತ ಭಾಷಣದ ಸಮಸ್ಯೆಯ ಬಗ್ಗೆ ಮಾತಾಡ ಹೊರಟಿದ್ದೇವೆ. ಅಳಿದುಳಿದ ಕನ್ನಡದ ಭಾಷೆಯನ್ನು ತನ್ನ ಹರಿಬಿಟ್ಟ ನಾಲಿಗೆಯಿಂದ ಭಾಷಣಕಾರ ಕೊಲ್ಲುತ್ತಲೇ ಇದ್ದರೆ ಹರಿಯೂ ಅದನ್ನು ರಕ್ಷಿಸಲಾರ. ಹಾಗೆಂದಾಗ ಅದು ಭಾಷಣ ಮಾಡುವ ಕೊಲೆಯಾಗುತ್ತದೆ.