ಪ್ರಶಾಂತ ಹಿಮಾಲಯದ ಅಶಾಂತ ಗಡಿ….
-ಪ್ರೇಮ ಶೇಖರ್
(ಶನಿವಾರ, ಡಿಸೆಂಬರ್ ೧, ೨೦೧೨ರಂದು ಭಾರತ – ಚೀನಾ ಗಡಿಸಮಸ್ಯೆಯ ಬಗೆಗಿನ ನನ್ನ “ಪ್ರಶಾಂತ ಹಿಮಾಲಯದ ಅಶಾಂತ ಗಡಿ” ಕೃತಿ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆ ಪುಸ್ತಕದ ಮೊದಲ ಅಧಯಾಯ ಇಲ್ಲಿದೆ )
ಮೂವತ್ತೆರಡು ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ನೆಲದೊಂದಿಗೆ ವಿಶ್ವದಲ್ಲಿ ಭೌಗೋಳಿಕವಾಗಿ ಏಳನೆಯ ದೊಡ್ಡ ದೇಶವಾದ ಭಾರತ ಸುಮಾರು ಹದಿನಾಲ್ಕು ಸಾವಿರ ಕಿಲೋಮೀಟರ್ ಉದ್ದದ ನೆಲಗಡಿಯನ್ನೂ, ಐದುಸಾವಿರದ ಐನೂರು ಕಿಲೋಮೀಟರ್ ಉದ್ದದ ಜಲಗಡಿಯನ್ನೂ ಹೊಂದಿದೆ. ಬಹುತೇಕ ಈ ಎಲ್ಲಾ ನೆಲಗಡಿಗಳು ಹಿಂದಿನ ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಸ್ವತಂತ್ರ ಭಾರತಕ್ಕೆ ಬಂದ ಬಳುವಳಿಗಳಾಗಿವೆ.
ನೇಪಾಲ ಜತೆಗಿನ ೧,೬೯೦ ಕಿಲೋಮೀಟರ್ ಗಡಿಯನ್ನು ಬ್ರಿಟಿಷರು ರೂಪಿಸಿದ್ದಂತೇ ಸ್ವತಂತ್ರ ಭಾರತ ಉಳಿಸಿಕೊಂಡರೆ ಭೂತಾನದ ಜತೆಗಿನ ೬೦೫ ಕಿಲೋಮೀಟರ್ ಗಡಿಯಲ್ಲಿ ಮಾತ್ರ ಸ್ವಲ್ಪ ಬದಲಾವಣೆಯನ್ನು ಮಾಡಲಾಯಿತು. ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಬ್ರಿಟಿಷರು ಆಕ್ರಮಿಸಿಕೊಂಡಿದ್ದ ದಕ್ಷಿಣ ಭೂತಾನದ ಕೆಲವು ಪ್ರದೇಶಗಳನ್ನು ಆ ದೇಶಕ್ಕೆ ಮರಳಿಸುವ ನಿರ್ಧಾರವನ್ನು ಸ್ವತಂತ್ರ ಭಾರತ ಮಾಡಿದ್ದು ಆ ಬದಲಾವಣೆಗೆ ಕಾರಣ. ಮಿಯಾನ್ಮಾರ್(ಹಿಂದಿನ ಬರ್ಮಾ) ಜತೆಗಿನ ಗಡಿಯ ಬಗ್ಗೆ ಹೇಳುವುದಾದರೆ ೧೯೩೭ರಲ್ಲಿ ಬ್ರಿಟಿಷರು ಆ ದೇಶವನ್ನು ಭಾರತದಿಂದ ಬೇರ್ಪಡಿಸಿದಾಗ ರೂಪಿಸಿದ ಗಡಿಯಲ್ಲಿದ್ದ ಕೆಲವು ಗೊಂದಲಗಳನ್ನು, ಮುಖ್ಯವಾಗಿ ಅರುಣಾಚಲ ಪ್ರದೇಶ ಮತ್ತು ಉತ್ತರ ಬರ್ಮಾದ ನಡುವಿನ ತಿರಾಪ್ ಕಣಿವೆ ಮತ್ತು ಮಣಿಪುರದ ಗಡಿಯ ಬಗ್ಗೆ ಇದ್ದ ಅಸಮರ್ಪಕತೆಗಳನ್ನು ಸ್ವಾತಂತ್ರಾನಂತರ ದ್ವಿಪಕ್ಷೀಯ ಮಾತುಕತೆಗಳು ಮತ್ತು ಒಪ್ಪಂದದ ಮೂಲಕ ಸ್ನೇಹಯುತವಾಗಿ ಸರಿಪಡಿಸಿಕೊಳ್ಳಲಾಯಿತು. ಬಾಂಗ್ಲಾದೇಶದ ಜತೆಗಿನ ೪,೦೫೩ ಕಿಲೋಮೀಟರ್ ಉದ್ದದ ಗಡಿ ನಲವತ್ತೇಳರಲ್ಲಿ ಸರ್ ಸಿರಿಲ್ ರ‍್ಯಾಡ್‌ಕ್ಲಿಫ್ ನೇತೃತ್ವದ “ಗಡಿ ಸಮಿತಿ” (Boundary Commission) ಭಾರತ ಮತ್ತು ಪೂರ್ವ ಪಾಕಿಸ್ತಾನಗಳ ನಡುವೆ ಎಳೆದ ಗಡಿಯಾಗಿದೆ. ಈ ಗಡಿಯ ಐತಿಹಾಸಿಕ ಹಿನ್ನೆಲೆಯನ್ನು ಅನ್ವೇಷಿಸಿದರೆ ಇದು ೧೯೦೫ರಲ್ಲಿ ವೈಸ್‌ರಾಯ್ ಲಾರ್ಡ್ ಕರ್ಜನ್ ಬಂಗಾಲವನ್ನು ವಿಭಜಿಸಿದಾಗ ಎಳೆದ ರೇಖೆ ಮತ್ತು ೧೯೪೩ರಲ್ಲಿ ವೈಸ್‌ರಾಯ್ ಲಾರ್ಡ್ ವೇವಲ್ ದೇಶವಿಭಜನೆಗಾಗಿ ಸೂಚಿಸಿದ ರೇಖೆಗಳ ಆಧಾರದ ಮೇಲೆ ರಚಿತವಾದದ್ದು ಎಂಬ ಅಂಶ ಸ್ಪಷ್ಟವಾಗುತ್ತದೆ. ಈ ಧೀರ್ಘ ಗಡಿ ಬಹುತೇಕ ವಿವಾದಾತೀತವಾಗಿದ್ದರೂ ಅದರ ಕೆಲವು ಪುಟ್ಟ ತುಣುಕುಗಳು ಢಾಕಾದಲ್ಲಿ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಮರ್ಜಿಗನುಗುಣವಾಗಿ ಆಗಾಗ ಸುದ್ಧಿಯಾಗುತ್ತದೆ.
ದೇಶವಿಭಜನೆಯ ದುರಂತದೊಂದಿಗೆ ಜನ್ಮತಾಳಿದ ಪಾಕಿಸ್ತಾನದ ಜತೆಗಿನ ಗಡಿ ಕಳೆದ ಅರವತ್ತೈದು ವರ್ಷಗಳಲ್ಲಿ ಮೂರು ಯುದ್ಧಗಳು ಮತ್ತು ಅಸಂಖ್ಯಾತ ಸಣ್ಣಪುಟ್ಟ ಘರ್ಷಣೆಗಳನ್ನು ಕಂಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಎರಡಾಗಿ ವಿಭಜಿಸುವ ನಿಯಂತ್ರಣ ರೇಖೆಯನ್ನೂ ಸೇರಿದಂತೆ ಸುಮಾರು ಮೂರುಸಾವಿರ ಕಿಲೋಮೀಟರ್‌ಗಳಷ್ಟು ಧೀರ್ಘವಾದ ಈ ಗಡಿಯ ಪರಸ್ಪರ ವೈಷಮ್ಯಕ್ಕೆ ಕಾರಣವಾಗಿರುವ ಬಗ್ಗೆ ಸ್ವಲ್ಪ ವಿವರ ಅಗತ್ಯವೆನಿಸುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಭಾರತ-ಪಾಕಿಸ್ತಾನ ಗಡಿಯ ಸ್ವರೂಪದ ಅವಲೋಕನ ಭಾರತ-ಚೀನಾ ಗಡಿಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಒಂದು ಸೂಕ್ತ ಪೀಠಿಕೆಯಾಗುತ್ತದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಾಂಸ್ಕೃತಿಕ ಸಾಮ್ಯತೆಗಳು ಹಲವಾರಿದ್ದರೂ ಹಾಗೂ ಈ ಸಾಮ್ಯತೆಗಳು ಎರಡೂ ದೇಶಗಳ ಸಾಮಾನ್ಯ ಜನತೆಗಳ ನಡುವೆ ಪ್ರೀತಿ ವಿಶ್ವಾಸಗಳನ್ನು ಉಳಿಸಿ ಬೆಳೆಸುತ್ತಿರುವುದಕ್ಕೆ ಅಗಣಿತ ಉದಾಹರಣೆಗಳು ದಿನನಿತ್ಯವೂ ನಮ್ಮ ಗಮನಕ್ಕೆ ಬರುತ್ತಿದ್ದರೂ ಎರಡೂ ದೇಶಗಳ ನಡುವೆ ಸತತವಾಗಿ ಮುಂದುವರೆಯುತ್ತಿರುವ ವೈಷಮ್ಯಕ್ಕೆ ಧರ್ಮದ್ವೇಷವೇ ಕಾರಣ ಎಂಬ ವಾದ ಜನಜನಿತವಾಗಿದೆ. ಈ ವಾದದಲ್ಲಿ ಹುರುಳಿಲ್ಲ. ಈ ದ್ವೇಷದ ಹಿಂದಿರುವುದು ಎರಡೂ ದೇಶಗಳ ನಡುವಿನ ಗಡಿಯ ಸ್ವರೂಪ. ನಿಜ ಹೇಳಬೇಕೆಂದರೆ ಎರಡೂ ದೇಶಗಳ ಜನತೆಗಳ ಧರ್ಮ ಒಂದೇ ಆಗಿದ್ದರೂ ಗಡಿಯ ಸ್ವರೂಪದಿಂದಾಗಿ ಪರಸ್ಪರ ದ್ವೇಷ ಉಂಟಾಗುತ್ತಿತ್ತು. ಇರಾನ್ ಮತ್ತು ಇರಾಕ್‌ಗಳ ಜನತೆ ಮುಸ್ಲಿಮರಾಗಿದ್ದರೂ ಷಟ್ ಅಲ್ ಅರಬ್ ನೆಲ ಹಾಗೂ ಜಲ ಗಡಿಯ ಸ್ವರೂಪದಿಂದಾಗಿ ಅವೆರಡು ದೇಶಗಳ ನಡುವೆ ಅತ್ಯುಗ್ರ ವೈಷಮ್ಯ ಸೃಷ್ಟಿಯಾಗಿರುವ ಉದಾಹರಣೆಯನ್ನು ಈ ಸಂದರ್ಭದಲ್ಲಿ ನಾವು ನೆನಪಿಗೆ ತಂದುಕೊಳ್ಳಬೇಕು.
ಮಹಮದ್ ಬಿನ್ ಖಾಸಿಮ್ ನೇತೃತ್ವದ ಅರಬ್ ಧಾಳಿಕಾರರು ಮತ್ತು ಯೂರೋಪಿಯನ್ ಸಾಮ್ರಾಜ್ಯಶಾಹಿಗಳ ಹೊರತಾಗಿ ಇತಿಹಾಸದ ಆದಿಕಾಲದಿಂದಲೂ ಭಾರತಕ್ಕೆ ಬಂದ ವಲಸೆಗಾರರಾಗಲೀ, ಧಾಳಿಕಾರರಾಗಲೀ ಈ ದೇಶವನ್ನು ಪ್ರವೇಶಿಸಿದ್ದು ವಾಯುವ್ಯದ ಖೈಬರ್ ಕಣಿವೆಯ ಮೂಲಕ. ಈ ಅಂಶವನ್ನು ಮನಗಂಡಿದ್ದ ಉತ್ತರ ಭಾರತದ ಎಲ್ಲ ಪ್ರಮುಖ ಅರಸೊತ್ತಿಗೆಗಳೂ ತಮ್ಮ ಸಾಮ್ರಾಜ್ಯದ ಹಿತರಕ್ಷಣೆಯ ದೃಷ್ಟಿಯಿಂದ ತಮ್ಮ ಹತೋಟಿಯನ್ನು ಖೈಬರ್ ಕಣಿವೆಯಿಂದಾಚೆಗೆ ಅಂದರೆ ಹಿಂದೂಕುಷ್ ಪರ್ವತಗಳವರೆಗೆ ವಿಸ್ತರಿಸಲು ಬಯಸುತ್ತಿದ್ದವು. ಭಾರತೀಯ ಉಪಖಂಡದ ರಕ್ಷಣೆಯ ದೃಷ್ಟಿಯಿಂದ ಹೇಳುವುದಾದರೆ ಈ ಪ್ರದೇಶವನ್ನು ರಕ್ಷಿಸಲು ಅತ್ಯುತ್ತಮವಾದ “ವೈಜ್ಞಾನಿಕ ಗಡಿರೇಖೆ”ಯೆಂದರೆ ಹಿಂದೂಕುಷ್ ಪರ್ವತಗಳಿಗೆ ಹೊಂದಿಕೊಂಡಂತೆ ಕಾಬೂಲ್, ಘಝನಿ ಹಾಗೂ ಕಂದಹಾರ್‌ಗಳನ್ನು ಹಾದುಹೋಗುವಂತಹ ಗಡಿರೇಖೆ. ಈ ರೇಖೆಯನ್ನು ನಾನು “ಹಿಂದೂಕುಷ್ ರೇಖೆ” ಎಂದು ಕರೆಯುತ್ತೇನೆ. ಈ ಹಿಂದೂಕುಷ್ ಪರ್ವತಗಳು ಮತ್ತು ಖೈಬರ್ ನಡುವೆ ನೀಳವಾದ ಆದರೆ ಕಿರಿದಾದ ಕಣಿವೆ ಪ್ರದೇಶವಿದೆ. ಇದನ್ನು ನಾನು ಹಿಂದೂಕುಷ್ – ಖೈಬರ್ ಕಾರಿಡಾರ್ ಎಂದು ಹೆಸರಿಸಿದ್ದೇನೆ. ಈ ಹಿಂದೂಕುಷ್ – ಖೈಬರ್ ಕಾರಿಡಾರ್ ವೈರಿಗಳ ಹತೋಟಿಗೆ ಒಳಪಟ್ಟಾಗಲೆಲ್ಲಾ ಭಾರತದ ರಕ್ಷಣೆಗೆ ಧಕ್ಕೆಯೊದಗುತ್ತಿತ್ತು. ವೈರಿ ಸೇನೆ ನಿರಾಯಾಸವಾಗಿ ಖೈಬರ್ ಕಣಿವೆಯನ್ನು ದಾಟಿ ಪಂಜಾಬ್ ಬಯಲಿಗೆ ನುಗ್ಗುತ್ತಿತ್ತು. ಬಯಲುಪ್ರದೇಶದಲ್ಲಿ ಮುಖಾಮುಖಿಯಾದರೆ ಆ ನಿರ್ದಿಷ್ಟ ಗಳಿಗೆಯಲ್ಲಿ ಯಾವುದೇ ಕಾರಣದಿಂದಾಗಲೀ ಮೇಲುಗೈ ಪಡೆದಿರುವ ಒಂದು ಸೇನೆ ಜಯಗಳಿಸುವುದು ಸಹಜವಾದ ಸಂಗತಿ. ಭಾರತದ ಇತಿಹಾಸದಲ್ಲಿ ಮತ್ತೆಮತ್ತೆ ಘಟಿಸಿರುವ ಘಟನೆಯೆಂದರೆ ಖೈಬರ್ ಅನ್ನು ವಶಪಡಿಸಿಕೊಂಡ ಸೇನೆ ಅನತೀ ಕಾಲದಲ್ಲಿ ಪಂಜಾಬನ್ನು ಸುಲಭವಾಗಿ ಪದಾಕ್ರಾಂತಗೊಳಿಸಿಕೊಳ್ಳುತ್ತಿತ್ತು ಮತ್ತು ಪಂಜಾಬಿನ ಆಳರಸರು ಅತಿಶೀಘ್ರದಲ್ಲಿ ದೆಹಲಿಯ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸುತ್ತಿದ್ದರು.
ಹೀಗಾಗಿ ವೈರಿಯನ್ನು ಯಾವುದೇ ನೈಸರ್ಗಿಕ ತಡೆಗಳಿಲ್ಲದ ಪಂಜಾಬ್ ಬಯಲುಪ್ರದೇಶಕ್ಕೆ ಬರಗೊಟ್ಟರೆ ತಮ್ಮ ರಕ್ಷಣಾಸ್ಥಿತಿ ಹದಗೆಟ್ಟುಹೋಗುತ್ತದೆ ಎಂದು ಅರಿತಿದ್ದ ಉತ್ತರ ಭಾರತದ ಸಾಮ್ರಾಜ್ಯಗಳು ತಮ್ಮ ಹತೋಟಿಯನ್ನು ಹಿಂದೂಕುಷ್ ರೇಖೆಯವರೆಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದವು. ಒಂದುವೇಳೆ ಇದು ಸಾಧ್ಯವಾಗದೇ ಹೋದರೆ ಕೊನೇಪಕ್ಷ ಹಿಂದೂಕುಷ್ – ಖೈಬರ್ ಕಾರಿಡಾರ್ ತಮ್ಮ ಹಿಡಿತದಲ್ಲಿ ಅಥವಾ ತಮ್ಮ ಮಿತ್ರರ ಹಿಡಿತದಲ್ಲಿ ಉಳಿಯುವಂತೆ ನೋಡಿಕೊಳ್ಳುತ್ತಿದ್ದವು. ಮೌರ್ಯರು ಹಾಗೂ ಮೊಘಲರಂತಹ ಉತ್ತರ ಭಾರತದ ಬಲಾಢ್ಯ ಸಾಮ್ರಾಜ್ಯಗಳು ತಮ್ಮ ಹತೋಟಿಯನ್ನು ಹಿಂದೂಕುಷ್ ರೇಖೆಯವರೆಗೆ ಯಶಸ್ವಿಯಾಗಿ ವಿಸ್ತರಿಸಿದ್ದವು. ವಾಸ್ತವವಾಗಿ ಭಾರತದ ರಕ್ಷಣೆಯಲ್ಲಿ ಹಿಂದೂಕುಷ್ ರೇಖೆಯ ಮಹತ್ವವನ್ನು ಮೊಟ್ಟಮೊದಲಿಗೆ ಅರಿತವನೆಂದರೆ ಸಾಮ್ರಾಟ್ ಅಶೋಕ. ತಕ್ಷಶಿಲಾದ ರಾಜ್ಯಪಾಲನಾಗಿದ್ದಾಗಲೇ ಇದನ್ನು ಮನಗಂಡಿದ್ದ ಅವನು ತಾನು ಸಾಮ್ರಾಟನಾದ ನಂತರ ತನ್ನ ಅಧಿಪತ್ಯವನ್ನು ಈಗಿನ ಪೂರ್ವ ಅಫಘಾನಿಸ್ತಾನದ ಜಲಾಲಾಬಾದ್‌ವರೆಗೆ ವಿಸ್ತರಿಸಿದ. ಆದರೆ ಉತ್ತರ ಭಾರತದ ಎಲ್ಲಾ ಸಾಮ್ರಾಜ್ಯಗಳಿಗೂ, ಎಲ್ಲಾ ಸಾಮ್ರಾಟರಿಗೂ ಮೌರ್ಯರು ಮತ್ತು ಮೊಘಲರ ಶಕ್ತಿ ಸಾಮರ್ಥ್ಯಗಳಿರಲಿಲ್ಲ. ಯಾವಾಗ ಇವರು ಹಿಂದೂಕುಷ್ – ಖೈಬರ್ ಕಾರಿಡಾರ್ ಅನ್ನು ಕಡೆಗಣಿಸುತ್ತಿದ್ದರೋ ಆವಾಗೆಲ್ಲಾ ಪಂಜಾಬ್ ಬಯಲು ವಿದೇಶೀಯರ ಆಕ್ರಮಣಕ್ಕೆ ತುತ್ತಾಗುತ್ತಿತ್ತು ಮತ್ತು ಉತ್ತರ ಭಾರತದ ಗದ್ದುಗೆ ಅಲ್ಲಾಡತೊಡಗುತ್ತಿತ್ತು. ದುರದೃಷ್ಟವಷಾತ್ ಈ ದೇಶದ ಧೀರ್ಘ ಇತಿಹಾಸದಲ್ಲಿ ಇಂಥದು ಮತ್ತೆ ಮತ್ತೆ ಆಗಿದೆ.
ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ರಶಿಯನ್ನರೊಡನೆ ಮಧ್ಯ ಏಶಿಯಾದಲ್ಲಿ ಸೆಣಸಾಟಕ್ಕಿಳಿದ ಬ್ರಿಟಿಷರು ತಮ್ಮ ಭಾರತ ಸಾಮ್ರಾಜ್ಯದ ರಕ್ಷಣೆಯಲ್ಲಿ ಹಿಂದೂಕುಷ್ ರೇಖೆಯ ಮಹತ್ವವನ್ನು ಅರಿತು ತಮ್ಮ ಹತೋಟಿಯನ್ನು ಅಲ್ಲಿಯವರೆಗೆ ವಿಸ್ತರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಇವರೆಲ್ಲಾ ಪ್ರಯತ್ನಗಳೂ ಅಫ್ಘನ್ನರ ಉಗ್ರ ಪ್ರತಿರೋಧದಿಂದಾಗಿ ವಿಫಲವಾದವು. ಕೊನೇಪಕ್ಷ ಹಿಂದೂಕುಷ್ – ಖೈಬರ್ ಕಾರಿಡಾರನ್ನಾದರೂ ತಮ್ಮ ಕೈಯಲ್ಲಿಟ್ಟುಕೊಳ್ಳುವುದು ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಆ ಪ್ರದೇಶಗಳ ಮೇಲೆ ಅಫ್ಘನ್ನರ ಸಾರ್ವಭೌಮತ್ವನ್ನು ಒಪ್ಪಿಕೊಂಡು ಅವರೊಡನೆ ಸ್ನೇಹ ಬೆಳೆಸಿ ತಮ್ಮ ಕಡೆ ಇರಿಸಿಕೊಂಡರು. ತಮ್ಮ ನಿಯಂತ್ರಣವನ್ನು ಹಿಂದೂಕುಷ್ – ಖೈಬರ್ ಕಾರಿಡಾರಿನ ಪೂರ್ವದಂಚಿಗೆ ಸೀಮಿತಗೊಳಿಸಿ ಅಷ್ಟಕ್ಕೇ ತೃಪ್ತಿಗೊಂಡರು. ಇಲ್ಲಿಂದ ನಿರ್ಗಮಿಸುವಾಗ ದೇಶವನ್ನು ತುಂಡರಿಸಿ, ಯಾವ ನೈಸರ್ಗಿಕ ಅಡೆತಡೆಯೂ ಇಲ್ಲದ ಸಮತಟ್ಟಾದ ಸಿಂಧೂ ಬಯಲಿನಲ್ಲಿ ಅಂತರರಾಷ್ಟ್ರೀಯ ಗಡಿರೇಖೆಯನ್ನೆಳೆದು ಹೊರಟುಹೋದರು. ಅವರು ಎಳೆದ ಈ ಗಡಿರೇಖೆ, ಮುಖ್ಯವಾಗಿ ಎರಡೂ ಪಂಜಾಬ್‌ಗಳನ್ನು ವಿಭಾಗಿಸುವ ರೇಖೆ, ೧೯೪೭ರ ಆಗಸ್ಟ್‌ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದರೂ ಅದರ ಇತಿಹಾಸ ಸುಮಾರು ಏಳು ಶತಮಾನಗಳಷ್ಟು ಹಳೆಯದು. ವಾಸ್ತವವಾಗಿ ಅದು ಅನಧಿಕೃತವಾಗಿ ಅಸ್ತಿತ್ವಕ್ಕೆ ಬಂದದ್ದು ಹದಿಮೂರನೆಯ ಶತಮಾನದ ಆದಿಭಾಗದಲ್ಲಿ. ಇನ್ನೂ ವಿವರವಾಗಿ ಹೇಳಬೇಕೆಂದರೆ ೧೨೨೧ರಲ್ಲಿ ಮಂಗೋಲ್ ಸಾಮ್ರಾಟ ಚೆಂಗೀಸ್ ಖಾನ್ ಲಾಹೋರ್ ಮೇಲೆ ನಡೆಸಿದ ಧಾಳಿಯ ಪರಿಣಾಮವಾಗಿ.
ಮಧ್ಯ ಏಶಿಯಾದ ಪ್ರಸಿದ್ಧ ಖ್ವಾರಿಝ್ಮಿಯನ್ ಸಾಮ್ರಾಜ್ಯವನ್ನು ಪದಾಕ್ರಾಂತಗೊಳಿಸಿಕೊಂಡ ಚೆಂಗೀಸ್ ಖಾನ್, ತಲೆತಪ್ಪಿಸಿಕೊಂಡು ಓಡಿದ ಸೋತ ರಾಜಕುಮಾರ ಜಲಾಲುದ್ದೀನ್ ಮಂಗ್‌ಬರ್ನಿಯ ಬೆನ್ನು ಹತ್ತಿ ತನ್ನ ಬೃಹತ್ ಸೇನೆಯೊಂದಿಗೆ ಭಾರತದತ್ತ ಧಾವಿಸಿದ. ದಿಕ್ಕೆಟ್ಟ ಜಲಾಲುದ್ದೀನ್ ದೆಹಲಿಯ ಸುಲ್ತಾನ್ ಇಲ್ತಮಷ್‌ನ ಆಶ್ರಯ ಬೇಡಿದ. ಕುತ್ಬುದ್ದೀನ್ ಐಬಕ್ ೧೨೦೬ರಲ್ಲಿ ದೆಹಲಿಯಲ್ಲಿ ಸ್ಥಾಪಿಸಿದ್ದ ಭಾರತದ ಮೊಟ್ಟಮೊದಲ ಮುಸ್ಲಿಂ ಸಾಮ್ರಾಜ್ಯಕ್ಕೆ ಆಗ ಕೇವಲ ಹದಿನೈದು ವರ್ಷಗಳ ಎಳವೆ. ಅದರ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳು ಸೀಮಿತವಾಗಿದ್ದವು. ವಾಯುವ್ಯ ದಿಸೆಯೊಂದನ್ನುಳಿದು ಬೇರೆಲ್ಲಾ ದಿಕ್ಕುಗಳಲ್ಲೂ ರಜಪೂತ್ ವೈರಿಗಳಿಂದ ಆವರಿಸಲ್ಪಟ್ಟ ಈ ದೆಹಲಿ ಸುಲ್ತನೇಟ್‌ನ ಮಿಲಿಟರಿ ಹಾಗೂ ಆರ್ಥಿಕ ಸಾಮರ್ಥ್ಯ ಅಲ್ಪ. ಅಂತಹ ಪರಿಸ್ಥಿತಿಯಲ್ಲಿ ಸುಲ್ತಾನ್ ಇಲ್ತಮಷ್ ಏನಾದರೂ ಜಲಾಲುದ್ದೀನ್ ಮಂಗ್‌ಬರ್ನಿಗೆ ಆಶ್ರಯ ನೀಡಿ ಚೆಂಗೀಸ್ ಖಾನ್‌ನ ವೈರ ಕಟ್ಟಿಕೊಂಡಿದ್ದರೆ ಆ ಮಂಗೋಲ್ ಕಿರಾತಕ ತನ್ನ ಕುಪ್ರಸಿದ್ದ ಯುದ್ಧಕೋರ ಸೇನೆಯೊಂದಿಗೆ ದೆಹಲಿಯ ಮೇಲೆ ಎರಗಿಬಿಡುತ್ತಿದ್ದ. ಅಲ್ಲಿಗೆ ಭಾರತದ ಮೊಟ್ಟಮೊದಲ ಮುಸ್ಲಿಂ ಸಾಮ್ರಾಜ್ಯದ ಕಥೆ ಮುಗಿಯುತ್ತಿತ್ತು. ಆದರೆ ವಾಸ್ತವವನ್ನು ಅರಿತಿದ್ದ ವಿವೇಕಿ ಸುಲ್ತಾನ್ ಇಲ್ತಮಷ್, ಜಲಾಲುದ್ದೀನ್‌ನಿಗೆ ಆಶ್ರಯ ಕೊಡಲು ನಿರಾಕರಿಸಿದ. ನಿರಾಶೆಗೊಂಡ ಜಲಾಲುದ್ದೀನ್ ದಿಕ್ಕು ಬದಲಿಸಿ ಸಿಂಧ್ ಕಡೆ ಓಡಿಹೋಗಿ ಅಲ್ಲಿನ ಖೋಕರ್ ಮುಖಂಡನೊಬ್ಬನ ಮಗಳನ್ನು ಮದುವೆ ಮಾಡಿಕೊಂಡು ಅಲ್ಲೇ ಎಲ್ಲೋ ಒಂದು ಕಡೆ ಭೂಗತನಾಗಿಹೋದ. ಒಟ್ಟಿನಲ್ಲಿ ದೆಹಲಿಯ ಮೇಲೆ ಈ ಬೆಳವಣಿಗೆಗಳ ಪರಿಣಾಮ ಒಳ್ಳೆಯದೇ ಆಯಿತು. ಚೆಂಗೀಸ್ ಖಾನ್ ದೆಹಲಿಯನ್ನು ಮರೆತು ಹಿಂತಿರುಗುತ್ತಾ ಹಾದಿಯಲ್ಲಿ ಎದುರಾದ ಲಾಹೋರ್ ಪಟ್ಟಣವನ್ನು ತನ್ನ ಮಾಮೂಲೀ ಸ್ವಭಾವದಂತೆ ಲೂಟಿ ಮಾಡಿ ಬೆಂಕಿ ಹಚ್ಚಿ ಹಾಳುಗೆಡವಿ ಹೊರಟುಹೋದ. ಹೋಗುವ ಮೊದಲು ತನ್ನ ಚಟುವಟಿಕೆಗಳಿಂದಾಗಿ ಭಾರತದ ಇತಿಹಾಸದ ಮೇಲೆ ತನ್ನ ಅಚ್ಚಳಿಯದ ಗುರುತು ಬಿಟ್ಟುಹೋದ.
ಮಾನವತೆಯ ಕಿಂಚಿತ್ತೂ ಕುರುಹಿಲ್ಲದಿದ್ದ ಚೆಂಗೀಸ್ ಖಾನ್‌ನ ಸೇನೆಯ ಪಾಶವೀ ಕೃತ್ಯಗಳಿಂದಾಗಿ ಲಾಹೋರ್ ಸೇರಿದಂತೆ ಸಿಂಧೂ ನದೀ ಬಯಲಿನ ಪ್ರದೇಶಗಳ ಮೇಲೆ ದೆಹಲಿಯ ಹಿಡಿತ ಸಡಿಲಾಗಿ ಅವು ಅರಾಜಕತೆಗೆ ಒಳಗಾದವು. ತತ್ಪರಿಣಾಮವಾಗಿ ತಮ್ಮತಮ್ಮಲ್ಲೇ ಕಚ್ಚಾಡಿಕೊಳ್ಳುತ್ತಿದ್ದ ಹಲವಾರು ಸಣ್ಣಪುಟ್ಟ ಮುಸ್ಲಿಂ ರಾಜರುಗಳು ಆ ಪ್ರದೇಶದಲ್ಲಿ ತಲೆಯೆತ್ತಿದರು. ಆ ಪ್ರಕ್ಷುಬ್ಧ ಪ್ರದೇಶಗಳನ್ನು ದೆಹಲಿಯ ಆಳ್ವಿಕೆಗೊಳಪಟ್ಟ ಪ್ರದೇಶಗಳಿಂದ ಬೇರ್ಪಡಿಸಿದ ರೇಖೆ ಲಾಹೋರ್, ದೀಪಾಲ್‌ಪುರ್, ಉಚ್ಛ್, ಸಮಾನಾ ಮತ್ತು ಮುಲ್ತಾನ್ ಪಟ್ಟಣಗಳ ಮೂಲಕ ಹಾದುಹೋಗಿತ್ತು. ಈ ಗಡಿರೇಖೆಯನ್ನು ನಾನು “ಲಾಹೋರ್ – ಮುಲ್ತಾನ್ ರೇಖೆ” ಎಂದು ಕರೆಯುತ್ತೇನೆ.
ಆನಂತರದಿಂದ ಇದುವರೆಗೆ ಈ ಲಾಹೋರ್ – ಮುಲ್ತಾನ್ ರೇಖೆಯಿಂದಾಚೆಗಿನ ಪ್ರದೇಶಗಳು ದೆಹಲಿ ಅಥವಾ ಆಗ್ರಾದ ನೇರ ಆಡಳಿತಕ್ಕೆ ಒಳಪಟ್ಟದ್ದು ಆಗೊಮ್ಮೆ ಈಗೊಮ್ಮೆಯಷ್ಟೇ, ಅಲ್ಲಾವುದ್ದೀನ್ ಖಾಲ್ಜಿ ಮತ್ತು ಮೊಘಲರ ಕಾಲದಲ್ಲಿ ಸುಮಾರು ಒಂದೂವರೆ ಶತಮಾನದಷ್ಟು ಕಾಲ ಮಾತ್ರ. ಉಳಿದೆಲ್ಲಾ ಆವಧಿಗಳಲ್ಲಿ ಆ ಪ್ರದೇಶಗಳು ಒಮ್ಮೊಮ್ಮೆ ಪರ್ಷಿಯನ್ನರ, ಅಫ್ಘನ್ನರ ಅಥವಾ ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡು ಅಲ್ಲಿ ಕೆಲಕಾಲ ನೆಲೆನಿಂತ ಮಂಗೋಲರ ಹಿಡಿತಕ್ಕೆ ಸಿಕ್ಕಿಬೀಳುತ್ತಿದ್ದವು. ಅವರ‍್ಯಾರ ತಂಟೆಯೂ ಇಲ್ಲದಿದ್ದಾಗ ಹಲವು ಹತ್ತು ಸ್ವತಂತ್ರ ಮುಸ್ಲಿಂ ರಾಜ್ಯಗಳಾಗುತ್ತಿದ್ದವು. ದೆಹಲಿ ಸಾಮ್ರಾಜ್ಯ, ಪರ್ಶಿಯನ್ ಸಾಮ್ರಾಜ್ಯ ಮತ್ತು ಮಂಗೋಲರು- ಮೂವರೂ ಏಕಕಾಲದಲ್ಲಿ ಪ್ರಬಲರಾಗಿದ್ದರೆ ಈ ಪ್ರದೇಶಗಳು ಸುತ್ತಲಿನ ಮೂರೂ ದೈತ್ಯರ ನಡುವಿನ ನಿರಂತರ ಕಾಳಗದ ಕಣವಾಗುತ್ತಿದ್ದವು. ಅದರಲ್ಲೂ ದೆಹಲಿ ಮತ್ತು ಪರ್ಶಿಯನ್ ಸಾಮ್ರಾಜ್ಯಗಳ ನಡುವೆ ಇಲ್ಲಿ ಹಗ್ಗ ಜಗ್ಗಾಟ ಸಾಮಾನ್ಯವೆನಿಸುವ ಮಟ್ಟಿಗೆ ನಡೆಯುತ್ತಿತ್ತು.
ಈ ನಿರಂತರ ಅರಾಜಕತೆಯ ಪರಿಣಾಮವಾಗಿ ಈ ಪ್ರದೇಶದಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ಜೀವನಶೈಲಿ ಮುಂದಿನ ಶತಮಾನಗಳಲ್ಲಿ ಬದಲಾಗಿಹೋಯಿತು. ಲಾಹೋರ್ – ಮುಲ್ತಾನ್ ರೇಖೆಯ ಈ ಕಡೆಯ ಭಾರತ ಹೆಚ್ಚಿನಂಶ ಹಿಂದೂ ಮೌಲ್ಯಗಳನ್ನು ಉಳಿಸಿಕೊಂಡರೆ ರೇಖೆಯ ಆ ಕಡೆಯ ಭಾರತ ಮುಸ್ಲಿಂ ಮೌಲ್ಯಗಳನ್ನು ಆಳವಡಿಸಿಕೊಂಡು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಪರ್ಷಿಯಾ ಮತ್ತು ಮಧ್ಯ ಏಶಿಯಾಗಳಿಗೆ ಹತ್ತಿರವಾಯಿತು. ನಲವತ್ತೇಳರಲ್ಲಿ ಪಾಕಿಸ್ತಾನ (ಅಂದು ಪಶ್ಚಿಮ ಪಾಕಿಸ್ತಾನ) ಸ್ಥಾಪನೆಯಾದದ್ದು ಈ ಪ್ರದೇಶದಲ್ಲಿ.
ಬ್ರಿಟಿಷ್ ಆಳರಸರ ವ್ಯವಸ್ಥಿತ ಯೋಜನೆಗಳಿಂದಾಗಿ ನಲವತ್ತೇಳರಲ್ಲಿ ಪಾಕಿಸ್ತಾನ ಸ್ಥಾಪನೆಯಾದಾಗ ಸುಮಾರು ಏಳು ಶತಮಾನಗಳಿಂದ ಭಾರತದ ಎರಡು ಭಾಗಗಳನ್ನು ಅನಧಿಕೃತವಾಗಿ ಪ್ರತ್ಯೇಕಿಸಿದ್ದ “ಲಾಹೋರ್ – ಮುಲ್ತಾನ್ ರೇಖೆ”ಗೆ ಸರಿಸುಮಾರು ಹೊಂದಿಕೊಂಡಂತೇ ಹೊಸ ಅಂತರರಾಷ್ಟ್ರೀಯ ಗಡಿರೇಖೆ ಎಳೆಯಲ್ಪಟ್ಟಿತು. ಈ ರೇಖೆ ಸಾಗುವುದು ಸಿಂಧೂ ನದೀಬಯಲಿನ ನಡುಮಧ್ಯದಲ್ಲಿ. ಅಂದರೆ ಸಮತಟ್ಟಾದ ನೆಲದಲ್ಲಿ. ಇದೇ ಎರಡು ದೇಶಗಳ ನಡುವಿನ ವೈಷಮ್ಯಕ್ಕೆ ಮೂಲ.
ಯಾವುದೇ ನೈಸರ್ಗಿಕ ತಡೆಗಳಿಲ್ಲದ, ಸಮತಟ್ಟಾದ ಬಯಲಿನಲ್ಲಿ ಸಾಗುವ ಗಡಿರೇಖೆ ಎರಡು ಅಲುಗಿನ ಕತ್ತಿಯಂತೆ, ಮೂರು ಗಡಿಗಳ ಸಿದ್ದಾಂತದ ಪ್ರಕಾರ ಎರಡು ಅಲುಗಿನ ಗಡಿ. ಇದು ಎರಡು ದೇಶಗಳಿಗೂ ಸೇನಾ ದೃಷ್ಟಿಯಿಂದ ಸಮಾನ ಅನುಕೂಲ, ಅವಕಾಶಗಳನ್ನೊದಗಿಸುತ್ತದೆ. ಹೀಗಾಗಿ ಇಂತಹ ರೇಖೆಯ ಎರಡೂ ಕಡೆ ಇರುವ ದೇಶಗಳ ನಡುವೆ ಸಹಜವಾಗಿಯೇ ಅಪನಂಬಿಕೆಯನ್ನೂ, ಪರಸ್ಪರರ ಹಂಚಿಕೆ ಹಾಗೂ ಹುನ್ನಾರಗಳ ಬಗ್ಗೆ ನಿರಂತರ ಸಂದೇಹಗಳನ್ನೂ ಮೂಡಿಸುತ್ತದೆ. ಇದರ ಮುಂದಿನ ಪರಿಣಾಮವಾಗಿ ಎರಡೂ ದೇಶಗಳೂ ಕಟ್ಟೆಚ್ಚರದಲ್ಲಿ ಗಡಿಯನ್ನು ಕಾಯುತ್ತವೆ ಮತ್ತು ಯಾವಾಗಲೂ ಯುದ್ಧಕ್ಕೆ ತಯಾರಾಗಿರುತ್ತವೆ. ಈ ನಿರಂತರ ಯುದ್ಧಸನ್ನದ್ಧ ಸ್ಥಿತಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಯಾವಾಗಲೂ ಸೂಕ್ಷ್ಮವಾಗಿರಿಸಿಬಿಡುತ್ತದೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಆಗುತ್ತಿರುವುದು ಇದೇ.
ಎರಡೂ ದೇಶಗಳ ನಡುವಿನ ಈ ಎರಡು ಅಲುಗಿನ ಕತ್ತಿಯಂತಹ ಗಡಿಯಿಂದಾಗಿ ಉಂಟಾಗಿರುವ ಈ ವೈಮನಸ್ಯ ಧರ್ಮವನ್ನು ಮೀರಿದ್ದು. ಒಂದುವೇಳೆ ಎರಡೂ ರಾಷ್ಟ್ರಗಳ ಜನರು ಒಂದೇ ಧರ್ಮಕ್ಕೆ ಸೇರಿದ್ದರೂ ಈ ಗಡಿಯ ಸ್ವರೂಪದಿಂದಾಗಿ ಎರಡೂ ಜನತೆಗಳ ನಡುವೆ ಅಪನಂಬಿಕೆ ಮತ್ತು ದ್ವೇಷ ಮೂಡುತ್ತಿತ್ತು, ಇರಾನ್ ಮತ್ತು ಇರಾಕ್ ನಡುವೆ ನಡೆಯುತ್ತಿರುವಂತೆ.
ಭಾರತ ಮತ್ತು ಚೀನಾಗಳ ನಡುವೆ ಅಭೇದ್ಯ ಹಿಮಾಲಯ ಪರ್ವತಗಳು ಶತಮಾನಗಳಿಂದ ಗಡಿಪ್ರದೇಶಗಳ ಸ್ವರೂಪ ಹಾಗೂ ಸ್ಥಾನವನ್ನು ಪಡೆದುಕೊಂಡಿದ್ದವು. ನೂರಿನ್ನೂರು ಕಿಲೋಮೀಟರ್‌ಗಳಷ್ಟು ಅಗಲದ ಈ ಪರ್ವತೀಯ ಗಡಿಪ್ರದೇಶದಲ್ಲಿ ಗಡಿರೇಖೆ ಅಥವಾ ರೇಖಾಗಡಿ (linear boundary) ಎನ್ನುವುದು ಇತಿಹಾಸದ ಯಾವ ಹಂತದಲ್ಲೂ ಅಸ್ತಿತ್ವದಲ್ಲಿರಲಿಲ್ಲ. ಹಾಗೆ ನೋಡಿದರೆ ಗಡಿರೇಖೆಗಳನ್ನು ಸ್ಥಾಪಿಸುವ ಸಂಪ್ರದಾಯವೇ ಏಶಿಯಾದಲ್ಲಿರಲಿಲ್ಲ. ಗಡಿರೇಖೆ ಎನ್ನುವುದು ಮೂಲತಃ ಯೂರೋಪಿಯನ್ ಪರಿಕಲ್ಪನೆ. ಏಶಿಯಾಟಿಕ್ ಸಾಮ್ರಾಜ್ಯಗಳನ್ನು ಬೇರ್ಪಡಿಸುತ್ತಿದ್ದಂತಹವು ಸಾಮಾನ್ಯವಾಗಿ ಭೌಗೋಳಿಕ ಹೆಗ್ಗುರುತುಗಳಾದ ಪರ್ವತಸ್ತೋಮಗಳು, ಮರುಭೂಮಿಗಳು ಮುಂತಾದುವು. ಇಂತಹವುಗಳನ್ನು ಗಡಿಪ್ರದೇಶ ಅಥವಾ ಸೀಮಾಪ್ರದೇಶಗಳೆಂದು ಕರೆಯಬಹುದು. ಇಂತಹ ಪ್ರದೇಶಗಳಲ್ಲಿ ಜನಸಾಂದ್ರತೆ ವಿರಳವಾಗಿರುತ್ತಿದ್ದುದರಿಂದ ಸಂಖ್ಯಾಬಲ ಹಾಗೂ ಸೇನಾಸಾಮರ್ಥ್ಯಗಳಲ್ಲಿ ಗೌಣವಾಗಿದ್ದ ಅಲ್ಲಿನ ಜನ ತಾವು ಪ್ರತ್ಯೇಕಿಸುತ್ತಿದ್ದ ಸಾಮ್ರಾಜ್ಯಗಳ ಹಿತಾಸಕ್ತಿಗಳಿಗೆ ಯಾವುದೇ ಗಂಭೀರ ಅಪಾಯವೊಡ್ಡುವ ಸ್ಥಿತಿಯಲ್ಲಿರುತ್ತಿರಲಿಲ್ಲ.
ಸೀಮಾಪ್ರದೇಶಗಳ ಮೇಲಿನ ಹತೋಟಿ ನಿರಂತರವಾಗಿ ಬದಲಾಗುತ್ತಿದ್ದುದು ಏಶಿಯಾದಲ್ಲಿ ರೇಖಾಗಡಿಗಳ ಅನುಪಸ್ಥಿತಿಗೆ ಬಹುಮುಖ್ಯ ಕಾರಣ. ಸಾಮ್ರಾಜ್ಯಗಳ ನಡುವಿನ ನಿರಂತರ ಕದನಗಳು ಯಾವುದೇ ಒಂದು ಸೀಮಾಪ್ರದೇಶ ಕೊನೇಪಕ್ಷ ಸಾಂಪ್ರದಾಯಿಕ ಅಧಿಕೃತತೆಯ ಮನ್ನಣೆಯನ್ನಾದರೂ ಪಡೆಯಲು ಅಗತ್ಯವಾದ ಸಮಯಾವಕಾಶವನ್ನೂ ನೀಡುತ್ತಿರಲಿಲ್ಲ. ಹೀಗಾಗಿ, ಖಾಯಂ ಸೀಮಾಪ್ರದೇಶಗಳ ಅನುಪಸ್ಥಿತಿಯಿಂದಾಗಿ ಏಶಿಯಾದಲ್ಲಿ ಖಾಯಂ ಗಡಿಗಳು ಸಹಾ ಅಸ್ತಿತ್ವಕ್ಕೆ ಬರಲಾಗಲಿಲ್ಲ.
ಭಾರತ ಮತ್ತು ಚೀನಾಗಳ ನಡುವಿನ ಗಡಿಪ್ರದೇಶಗಳ ಸಂಬಂಧದಲ್ಲಿ ಆದದ್ದೂ ಇದೇ. ಉನ್ನತ ಹಿಮಾಲಯ ಪರ್ವತಶ್ರೇಣಿಗಳು ಈ ಎರಡು ಪ್ರಾಚೀನ ನಾಗರೀಕತೆಗಳ ನಡುವಿನ ಸಾಂಪ್ರದಾಯಿಕ ಗಡಿಪ್ರದೇಶಗಳಾಗಿದ್ದುದೇನೋ ನಿಜ. ಆದರೆ ಈ ಗಡಿಪ್ರದೇಶ ಇತಿಹಾಸದಲ್ಲಿ ಹೆಚ್ಚಿನ ಸಮಯ ಶಾಂತವಾಗಿರಲಿಲ್ಲ. ಟಿಬೆಟ್, ನೇಪಾಲ, ಪಂಜಾಬ್ (ಸಿಖ್), ಕಾಂಗ್ರಾ, ಜಮ್ಮು, ಲಡಾಖ್, ಹುಂಝಾ, ಬಾಲ್ಟಿಸ್ತಾನ್, ಮತ್ತು (ಆಗೊಮ್ಮೆ ಈಗೊಮ್ಮೆ) ಚೀನಾದ ಸೇನೆಗಳು ಈ ಪ್ರದೇಶದಲ್ಲಿ ಕಾಳಗನಿರತವಾಗಿರುತ್ತಿದ್ದವು. ಪರಿಣಾಮವಾಗಿ ಹಿಮಾಲಯ ಗಡಿಪ್ರದೇಶದಲ್ಲಿ ಹತೋಟಿರೇಖೆಗಳು ನಿರಂತರವಾಗಿ ಬದಲಾಗುತ್ತಿದ್ದವು ಮತ್ತು ಯಾವೊಂದು ನಿರ್ದಿಷ್ಟ ಅಧಿಕೃತ ಗಡಿರೇಖೆಯೂ ಅಸ್ತಿತ್ವಕ್ಕೆ ಬರಲಾಗಲಿಲ್ಲ. ಹೀಗಾಗಿ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತ ಗಣರಾಜ್ಯ (Republic of India) ಮತ್ತು ಚೀನೀ ಜನತಾ ಗಣರಾಜ್ಯ (People’s Republic of China) ಅಸ್ತಿತ್ವಕ್ಕೆ ಬಂದಾಗ ಅವುಗಳ ಮುಂದೆ ಎದುರಾದ ಸಮಸ್ಯೆ- “ತಮ್ಮ ನಡುವಿನ ಗಡಿಪ್ರದೇಶಗಳನ್ನು ಕಾನೂನುಬದ್ಧ ಗಡಿಗಳಾಗಿ ಬದಲಾಯಿಸುವುದು ಹೇಗೆ?”
ಎರಡೂ ದೇಶಗಳ ನಡುವೆ ಅಧಿಕೃತ ಗಡಿರೇಖೆಯನ್ನು ಅಸ್ತಿತ್ವಕ್ಕೆ ತರುವ ಪ್ರಯತ್ನ ಹಿಂದೆ ನಡೆದಿರಲಿಲ್ಲವೆಂದಲ್ಲ. ಅಂತಹ ಪ್ರಯತ್ನಗಳನ್ನು ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಭಾರತ ಮಾಡಿತ್ತು. ಈ ಪ್ರಯತ್ನಗಳು ಗಡಿಪ್ರದೇಶದ ಪಶ್ಚಿಮ ವಿಭಾಗದಲ್ಲಿ ವಿಫಲವಾದರೆ, ಪೂರ್ವದಲ್ಲಿ ಅರೆಯಶಸ್ಸು ಕಂಡಿದ್ದವು. ಆ ಪ್ರಯತ್ನಗಳ ಪರಿಚಯ ಮುಂದಿನ ಅಧ್ಯಾಯಗಳಲ್ಲಿದೆ.
****************





