ವಿಷಯದ ವಿವರಗಳಿಗೆ ದಾಟಿರಿ

ಜೂನ್ 20, 2013

2

ಜಾನ್ ಮೆಕೇನ್ ಸ್ಪರ್ಧಿಯಾಗುವ ಮುನ್ನವೇ ಗೆದ್ದಿದ್ದರು ಒಬಾಮಾ, ಹಾಗೆಯೇ ಮೋದಿಯೂ!

‍ನಿಲುಮೆ ಮೂಲಕ

– ಗೋಪಾಲ ಕೃಷ್ಣ

MoObಅದು 2008ರ ನವೆಂಬರ್ 04ನೇ ತಾರೀಖು.  ಹಲವು ಕಾರಣಗಳಿಗೆ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವಿಶೇಷತೆ ಪಡೆದುಕೊಂಡಿತ್ತು.  ಅದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಬರಾಕ್ ಒಬಾಮಾ.  ಎಲ್ಲಾ ಅಡೆತಡೆಗಳನ್ನು ದಾಟಿ ಚುನಾವಣೆಯ ಹೊಸ್ತಿಲಲ್ಲಿ ನಿಂತ ಒಬಾಮಾಗೆ ರಿಪಬ್ಲಿಕನ್ ಪಕ್ಷದ ಜಾನ್ ಮೆಕೇನ್ ಪ್ರತಿಸ್ಪರ್ಧಿಯಾಗಿದ್ದರು.  ಒಬಾಮಾ ಅವರೇ ಗೆಲ್ಲುತ್ತಾರೆ ಎನ್ನುವುದು ಚುನಾವಣೆಗೂ ಮುನ್ನವೆ ಅಮೇರಿಕಾದಲ್ಲಿ ಮಾತ್ರವಲ್ಲ ಇಡಿ ವಿಶ್ವದಲ್ಲೇ ನಿರೀಕ್ಷೆಗಳನ್ನು ಹುಟ್ಟಿಸಿತ್ತು.  ಆ ಪರಿಯ ಸಂಚಲನ ಮೂಡಿಸಿದ್ದರು ಒಬಾಮಾ.  ಅವರ ಪ್ರಚಾರ ವೈಖರಿ, ಬದಲಾವಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದು, ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡದ್ದು ಎಲ್ಲವೂ ಒಬಾಮಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದವು.  ಅಂತೆಯೇ ಗೆದ್ದು, ಅಧ್ಯಕ್ಷರಾದರು.

ಒಬಾಮಾ ಗೆಲುವಿನ ಹಾದಿಗೆ ಸಾಮ್ಯತೆ ಎನಿಸುವಂತಹ ಬೆಳವಣಿಗೆಗಳು ಭಾರತದಲ್ಲಿಯೂ ಗೋಚರಿಸುತ್ತಿವೆ, ಅದು ಮುಂದಿನ ಲೋಕಸಭಾ ಚುನಾವಣೆಗೆ.  ಇದಕ್ಕೆ ಕಾರಣವಾಗಿರುವುದು ನರೇಂದ್ರ ಮೋದಿಯವರ ನಡೆಗಳು ಮತ್ತು ಅವರ ವಿರೋಧಿಗಳ ಅಡ್ಡಗಾಲುಗಳು.

ಒಬಾಮಾ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗುವುದು ಸುಲಭವಾಗಿರಲಿಲ್ಲ.  ಜಾನ್ ಎಡ್ವಡ್ರ್ಸ್ ಮತ್ತು ಹಿಲರಿ ಕ್ಲಿಂಟನ್ ಅವರಿಂದ ಭಾರೀ ಸ್ಪರ್ಧೆಯನ್ನೇ ಎದುರಿಸಬೇಕಾಯಿತು.  ಅದರಲ್ಲೂ ಹಿಲರಿ ಕ್ಲಿಂಟನ್ ಕೊನೆಯ ಕ್ಷಣದವರೆಗೂ ಒಬಾಮಾ ಹಾದಿಗೆ ಮುಳ್ಳಾಗುತ್ತಲೇ ಇದ್ದರು.  ಅಧ್ಯಕ್ಷೀಯ ಚುನಾವಣೆಗಿಂತಲೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯೇ ಅಮೇರಿಕಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.  ಇದು ಒಬಾಮಾ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿತ್ತು.  ‘We ಓeeಜ ಅhಚಿಟಿge’ ‘ಅಊಂಓಉಇ, ತಿe ಛಿಚಿಟಿ’  ಎಂಬ ಘೋಷವಾಕ್ಯಗಳೊಂದಿಗೆ ಒಬಾಮಾ ಜನರ ಬಳಿಗೆ ಹೋದರು.  ಹಿಲರಿ ಕ್ಲಿಂಟನ್ ‘ಇxಠಿeಡಿieಟಿಛಿe’ ಬಗ್ಗೆ ಮಾತನಾಡುತ್ತ ಜನರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದರು.  ಮೊದಮೊದಲು ಜನರ ಭಾವನೆಗಳು ಅನುಭವಿ ಎಂಬ ಕಾರಣಕ್ಕೆ ಹಿಲರಿಯತ್ತ ವಾಲುತ್ತಿದ್ದವು.  ಒಬಾಮಾರಾದರೂ ಹೊಸಬರು, ಇನ್ನು ಕಲಿಯಬೇಕಾದ್ದು ಬಹಳಷ್ಟಿದೆ ಎಂಬ ಅಭಿಪ್ರಾಯವೂ ಮೂಡಿತ್ತು.  ಆದರೆ ವಾಸ್ತವವನ್ನರಿತು ಬದಲಾವಣೆ ತರಲು ತನ್ನಲ್ಲಿರುವ ಸಾಮಥ್ರ್ಯವನ್ನು ಜನರಿಗೆ ಬಿಡಿಬಿಡಿಯಾಗಿ ಬಿಚ್ಚಿಟ್ಟರು ಒಬಾಮಾ.  ಹಿಲರಿ ತಮ್ಮ ಅನುಭವದ ಬಗ್ಗೆ ಹೇಳಿದರೆ ಹೊರತು, ಬದಲಾವಣೆಯ ಬಗ್ಗೆ ಜನರನ್ನು ಸೆಳೆಯಲಿಲ್ಲ.  ಅಭ್ಯರ್ಥಿ ಆಯ್ಕೆಯಲ್ಲಿ ಒಬಾಮಾಗೆ ಶೇ.52ರಷ್ಟು ಮತ ಬಂದಿದ್ದರೆ, ಹಿಲರಿ ಶೇ.42 ಮತಗಳಿಗೆ ತೃಪ್ತಿಪಡಬೇಕಾಯಿತು.  ಹಿರಿತನಕ್ಕಿಂತಲೂ ಇಚ್ಛಾಶಕ್ತಿಯೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದರು.  ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಅವಕಾಶವನ್ನು ಒಬಾಮಾಗೆ ತಂದಿತ್ತಿತು.

1947ರಲ್ಲಿ ಹುಟ್ಟಿದ ಮತ್ತು ಬಿಲ್ ಕ್ಲಿಂಟನ್ ಪತ್ನಿಯಾದ ಹಿಲರಿಯ ಅನುಭವಕ್ಕಿಂತಲೂ, 1961ರಲ್ಲಿ ಹುಟ್ಟಿದ ತನ್ನ ಶಕ್ತಿ-ಸಾಮಾಥ್ರ್ಯಗಳಿಗೆ ಬಲ ಹೆಚ್ಚು ಎಂಬುದನ್ನು ತೋರಿಸಿದರು ಒಬಾಮಾ.  ಇದರ ಪರಿಣಾಮ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜಾನ್ ಮೆಕೇನ್ ಅವರ ಹಿನ್ನಡೆಗೂ ಕಾರಣವಾಯಿತು.  ಮೆಕೇನ್ ಹುಟ್ಟಿದ್ದು 1936ರಲ್ಲಿ.  ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯಂತೆಯೇ ಸಾಗುತ್ತಿದೆ ಭಾರತದಲ್ಲಿ ಎನ್.ಡಿ.ಎ. ಪ್ರಧಾನಿ ಅಭ್ಯರ್ಥಿ ಆಯ್ಕೆ.  ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದರೂ, ಎಲ್.ಕೆ.ಅಡ್ವಾಣಿ ಸೇರಿದಂತೆ ಕೆಲವು ನಾಯಕರುಗಳ ನಿರ್ಧಾರಗಳು ಕುತೂಹಲ ಹುಟ್ಟಿಸಿವೆ.  ಅಡ್ವಾಣಿಯವರು ಹಿರಿಯರಾದರು, ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದರೂ, 2009ರಲ್ಲಿಯೇ ದೊರೆತ ಅವಕಾಶವನ್ನು ಕಳೆದುಕೊಂಡಿದ್ದಾರೆ.  ಅಲ್ಲದೆ ನರೇಂದ್ರ ಮೋದಿ ದೇಶಾದ್ಯಂತ ಸೃಷ್ಟಿಸುತ್ತಿರುವ ಬದಲಾವಣೆಯ ಗಾಳಿ ಬಲವಾಗಿಯೇ ಬೀಸುತ್ತಿದೆ.  ಕಾರಣ ಗುಜರಾತ್‍ನಲ್ಲಿನ ಅಭಿವೃದ್ಧಿ ಮತ್ತು ಯು.ಪಿ.ಎ.ಯನ್ನು ಎದುರಿಸುವ ತನ್ನ ಶಕ್ತಿ-ಸಾಮಥ್ರ್ಯಗಳನ್ನು ಪ್ರದರ್ಶಿಸುತ್ತಿರುವುದು.  1957ರಲ್ಲಿಯೇ ಲೋಕಸಭಾ ಸದಸ್ಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು 1989ರಿಂದಲೂ ಲೋಕಸಭೆಗೆ ಆಯ್ಕೆಯಾಗುತ್ತ ಬಂದಿರುವ ಎಲ್.ಕೆ. ಅಡ್ವಾಣಿ ಅವರ ಅನುಭವವನ್ನು ಮೋದಿಯವರೊಂದಿಗೆ ಹೋಲಿಸಿ, ಅನನುಭವಿ ಎಂಬ ಪಟ್ಟ ಕಟ್ಟುವವರೂ ಇದ್ದಾರೆ.  ಆದರೆ ಯಾವುದೇ ಅನುಭವವೂ ಇರದ ನರೇಂದ್ರ ಮೋದಿ ಆಕಸ್ಮಿಕವಾಗಿ ದೊರೆತ ಗುಜರಾತ್ ಮುಖ್ಯಮಂತ್ರಿ ಹುದ್ದೆಯನ್ನು ಸಂಭಾಳಿಸಿದ ರೀತಿ ಮತ್ತು ಸತತ ನಾಲ್ಕನೇ ಬಾರಿಗೂ ಗೆದ್ದು ಬಂದದ್ದನ್ನು ನೋಡಿದರೆ ಮೋದಿಯ ಸಾಮಥ್ರ್ಯದ ಅರಿವಾಗುತ್ತದೆ.  ಸದ್ಯ ಎನ್.ಡಿ.ಎ. ಪ್ರಧಾನಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ದಿನದಿಂದ ದಿನಕ್ಕೆ ಚರ್ಚೆಗೆ ಗ್ರಾಸವಾಗುತ್ತಿರುವುದು ಚುನಾವಣೆಯಲ್ಲಿ ಮೋದಿಯವರಿಗೆ ಅನುಕೂಲಕರವೇ ಆಗಲಿದೆ.

ಒಬಾಮಾ ಅವರು ಅಭ್ಯರ್ಥಿ ಆಯ್ಕೆಯ ಸ್ಪರ್ಧೆ ಮತ್ತು ಚುನಾವಣೆಯಲ್ಲಿ ಪ್ರಚಾರಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡದ್ದು ಸಾಮಾಜಿಕ ಜಾಲತಾಣಗಳನ್ನು.  ಅದರಲ್ಲೂ ಮೈಸ್ಪೇಸ್ ಮತ್ತು ಫೇಸ್‍ಬುಕ್.  2008ರ ನವೆಂಬರ್ ವೇಳೆಗೆ 8,94,000 ಜನರು ಬರಾಕ್ ಒಬಾಮಾ ಅವರ ಫೇಸ್‍ಬುಕ್ ಪೇಜ್‍ನಲ್ಲಿದ್ದರು.  ‘ಬರಾಕ್ ಒಬಾಮಾ’ ಸ್ಟೂಡೆಂಟ್ಸ್ ಫಾರ್ ಬರಾಕ್ ಒಬಾಮಾ’ ತರಹದ ಫ್ರೊಫೈಲ್‍ಗಳ ಮೂಲಕ ಒಬಾಮಾ ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದರು.  ಒಂದು ಅಂದಾಜಿನ ಪ್ರಕಾರ ಫೇಸ್‍ಬುಕ್‍ನಲ್ಲಿ ಒಬಾಮಾ ಮತ್ತು ಹಿಲರಿ ಕ್ಲಿಂಟನ್ ಅಭಿಮಾನಿಗಳು 6:1 ರಷ್ಟಿದ್ದರು.  ತಾವು ನ್ಯೂಹಾಂಪ್‍ಶೈರ್‍ನಲ್ಲಿ ಮಾಡಿದ ಭಾಷಣವನ್ನೇ ಗ್ರ್ಯಾಮ್ಮಿ ಪ್ರಶಸ್ತಿ ವಿಜೇತರೊಬ್ಬರಿಂದ ಹಾಡಿಸಿದ್ದರು.  ತಿಂಗಳು ಕಳೆಯುವುದರೊಳಗೆ ಯುಟ್ಯೂಬ್‍ನಲ್ಲಿ ಅದನ್ನು ನೋಡಿದವರು 17 ಮಿಲಿಯನ್‍ಗಿಂತಲೂ ಹೆಚ್ಚಿನ ಜನರು.  ಸದ್ಯ ಭಾರತದಲ್ಲಿ ಫೇಸ್‍ಬುಕ್, ಟ್ವಿಟರ್ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಾದರೂ ರಾಜಕಾರಣಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ ಮೊದಲಿಗರು.  ಸೋಷಿಯಲ್ ಬೇಕರ್ಸ್ ಎಂಬ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಮೋದಿಯನ್ನು ಬೆಂಬಲಿಸಿ ಫೇಸ್‍ಬುಕ್‍ನಲ್ಲಿ 25 ಲಕ್ಷಕ್ಕೂ ಹೆಚ್ಚು ಮತ್ತು ಟ್ವಿಟರ್‍ನಲ್ಲಿ 16 ಲಕ್ಷಕ್ಕೂ ಹೆಚ್ಚಿನ ಜನರಿದ್ದಾರೆ.  ಟ್ವಿಟರ್‍ನಲ್ಲಿ ಪ್ರಧಾನಿ ಮನಮೋಹನ್‍ಸಿಂಗ್ ಅವರನ್ನು ಬೆಂಬಲಿಸಿರುವವರು 5 ಲಕ್ಷ ಜನರು.  ‘ನರೇಂದ್ರ ಮೋದಿ’, ನರೇಂದ್ರ ಮೋದಿ ಫಾರ್ ಪಿ.ಎಂ.’ ಎಂಬ ಪ್ರೋಫೈಲ್‍ಗಳು, ವೆಬ್‍ಸೈಟ್, ಬ್ಲಾಗ್‍ಗಳ ಮೂಲಕ ಮೋದಿಯವರೇ ಏಕೆ ಪ್ರಧಾನಿಯಾಗಬೇಕು ಎಂಬುದನ್ನು ಯುವ ಜನರಿಗೆ ತಿಳಿಸುವ ಕಾರ್ಯವೂ ನಡೆಯುತ್ತಿದೆ.

ಒಬಾಮಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆಡಳಿತ ವಿರೋಧಿ ಅಲೆ.  ಅಮೇರಿಕಾ ಆರ್ಥಿಕವಾಗಿ ಮುಗ್ಗರಿಸುವ ಲಕ್ಷಣಗಳಿದ್ದರೂ, ಇರಾಕ್ ಮೇಲಿನ ಯುದ್ಧ ಮತ್ತು ಆಡಳಿತದಲ್ಲಿ ವೈಫಲ್ಯದಿಂದ ಜಾರ್ಜ್ ಬುಷ್ ಜನಪ್ರೀಯತೆ ಕಳೆದುಕೊಂಡಿದ್ದರು.  ಅಮೇರಿಕನ್ನರು ಬದಲಾವಣೆ ಬಯಸುತ್ತಿರುವುದು ಸ್ಪಷ್ಟವಾಗಿತ್ತು.  ಸಾರ್ವತ್ರಿಕ ಆರೋಗ್ಯ ಪಾಲನೆಗೆ ಒತ್ತು, ಸಂಪೂರ್ಣ ಉದ್ಯೋಗ, ಗ್ರೀನ್ ಅಮೇರಿಕಾ, ಅಮೇರಿಕಾದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಕಠಿಣ ಕ್ರಮಗಳು ಹೀಗೆ ಒಬಾಮಾ ತಾವು ಅಧಿಕಾರಕ್ಕೆ ಬಂದರೆ ತರಲಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಜನರ ಮುಂದಿಡುತ್ತಾ ಹೋದರು. ಇದು ಅಭ್ಯರ್ಥಿ ಆಯ್ಕೆಯಲ್ಲಿ ಹಿಲರಿ ಕ್ಲಿಂಟನ್ ಮತ್ತು ಚುನಾವಣೆಯಲ್ಲಿ ಮೆಕೇನ್ ಸೋಲಿಗೆ ಕಾರಣವಾಯಿತು.  ಸದ್ಯ ಭಾರತದಲ್ಲಿಯೂ ಆಡಳಿತ ವಿರೋಧಿ ಅಲೆಯದ್ದೇ ಚರ್ಚೆಗಳು ನಡೆಯುತ್ತಿವೆ.  ಯುಪಿಎ ಸರ್ಕಾರದಲ್ಲಿ ನಡೆದಿರುವ ಭಾರೀ ಹಗರಣಗಳು, ಆರ್ಥಿಕ ತಜ್ಞರೇ ಪ್ರಧಾನಿಯಾದರೂ ಆರ್ಥಿಕವಾಗಿ ಭಾರತ ಯಶ ಗಳಿಸದಿರುವುದು, 19 ಕಿ.ಮೀ. ವರೆಗೆ ಚೀನಾ ದೇಶದೊಳಗೆ ಸೈನ್ಯ ಕಳುಹಿಸಿದ್ದು, ಆಂತರಿಕವಾಗಿ ಹಲವು ಗಲಭೆಗಳ ನಿಯಂತ್ರಣದಲ್ಲಿನ ವೈಫಲ್ಯಗಳು ಆಡಳಿತ ಪಕ್ಷದ ಮೇಲೆ ಬೊಟ್ಟು ಮಾಡಿ ತೋರಿಸುತ್ತಿವೆ.  ವಿರೋಧ ಪಕ್ಷಗಳು ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿದ್ದೇ ಆಯಿತು.  ಮೋದಿ ಯುಪಿಎ ಸರ್ಕಾರವನ್ನು ಟೀಕಿಸುವುದಷ್ಟೇ ಅಲ್ಲ, ಮುಂದೆ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆಯೂ ಪ್ರಸ್ತಾಪಿಸುತ್ತಿದ್ದಾರೆ.  ‘ಇಪ್ಪತ್ತೊಂದನೆಯ ಶತಮಾನವೆಂದರೆ ಅದು ಜ್ಞಾನದ ಕಾಲ.  ಜ್ಞಾನವೇ ಬಡತವನವನ್ನು ತೊಲಗಿಸುತ್ತದೆ’ ಎನ್ನುತ್ತಾರೆ ಮೋದಿ.  ಸರ್‍ಕ್ರೀಕ್ ಗಡಿ ವಿವಾದವೆದ್ದಾಗ ಪಾಕಿಸ್ತಾನದೊಂದಿಗೆ ಮಾತುಕತೆಯನ್ನೇ ನಿಲ್ಲಿಸಿ ಎಂದು ಪ್ರಧಾನಿಗೆ ಒತ್ತಾಯಿಸಿದ್ದರು.ಜೊತೆಗೆ ಗುಜರಾತ್‍ನ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸುತ್ತಿದ್ದಾರೆ.  ಇದು ಮೋದಿಯವರು ಜನರಲ್ಲಿ ಕೆಲವು ಭರವಸೆಗಳನ್ನು ಮೂಡಿಸುತ್ತಿರುವುದಕ್ಕೆ ಕೈಗನ್ನಡಿ.

ಒಬಾಮಾರ ಕಾಲೆಳೆಯುವ ಸಲುವಾಗಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆದವು.  ಬರಾಕ್ ಹುಸೇನ್ ಒಬಾಮಾ ಹೆಸರೇ ವಿರೋಧಿಗಳಿಗೂ ಅಸ್ತ್ರವಾದಂತಿತ್ತು.  ನೈತಿಕವಾಗಿ ಅಮೇರಿಕಾದ ಸ್ಥೈರ್ಯವನ್ನು ಕಸಿದದ್ದು ಮುಸ್ಲಿಂ ಭಯೋತ್ಪಾದಕರು ನಡೆಸಿದ 09/11ರ ದಾಳಿ.  ಮುಸ್ಲಿಂ ಹೆಸರಿನ ಜೊತೆಗೆ ಒಬಾಮಾ ಕುಟುಂಬ ಮೂಲತ: ಆಫ್ರಿಕನ್ನರು (ಆಫ್ರಿಕನ್-ಅಮೇರಿಕನ್) ಎಂಬುದು ಸೇರಿದಂತೆ, ಪಾಸ್‍ಪೋರ್ಟ್ ವಿವಾದ, ನಾಫ್ತಾ ವಿಚಾರಗಳನ್ನು ಮುಂದಿಟ್ಟುಕೊಂಡು ವೈಯಕ್ತಿಕವಾಗಿ ಒಬಾಮಾರನ್ನು ಕುಗ್ಗಿಸುವ ಪ್ರಯತ್ನಗಳು ನಡೆದವು.  ಆದರೆ ಒಬಾಮಾ ಮೂಡಿಸಿದ್ದ ಭರವಸೆಗಳ ನಡುವೆ ಇವೆಲ್ಲವೂ ಕೊಚ್ಚಿ ಹೋದವು.  ನರೇಂದ್ರ ಮೋದಿಯವರನ್ನು ಟೀಕಿಸಲು ವಿರೋಧಿಗಳು ಬಳಸುವುದು 2002ರ ಗುಜರಾತ್ ಹಿಂಸಾಚಾರ.  ಮೋದಿಯವರ ಹೆಸರಿನಲ್ಲಿ ಭ್ರಷ್ಟಾಚಾರದ ಆರೋಪಗಳಾಗಲಿ, ಆಡಳಿತದ ವೈಫಲ್ಯವಾಗಲಿ ಇಲ್ಲ.  ಹೀಗಾಗಿ 2002ರಿಂದ ಇಲ್ಲಿಯವರೆಗೂ ರಾಷ್ಟ್ರಮಟ್ಟದ ಮಾಧ್ಯಮಗಳಿಗೆ, ಕೆಲವು ಬುದ್ಧಿಜೀವಿಗಳಿಗೆ, ವಿರೋಧಿ ಪಕ್ಷಗಳಿಗೆ ಬೇರೆ ಕಾರಣಗಳು ಸಿಗುತ್ತಿಲ್ಲ.  ಒಂದೇ ವಿಚಾರವನ್ನು ಮುಂದಿಟ್ಟುಕೊಂಡು ಎಷ್ಟೇ ಅಪಪ್ರಚಾರ ನಡೆಸಿದರೂ, ಗುಜರಾತ್‍ನ ಅಭಿವೃದ್ಧಿಯ ಬಗ್ಗೆ ಪತ್ಯಕ್ಷವಾಗಿ ಮತ್ತು ತಾನು ಪ್ರಧಾನಿಯಾದರೆ ಬಯಸಬಹುದಾದ ಬದಲಾವಣೆಗಳ ಬಗ್ಗೆ ಪರೋಕ್ಷವಾಗಿ ತಿಳಿಸುತ್ತಾ ದೇಶವಾಸಿಗಳಲ್ಲಿ ಭರವಸೆ ಮೂಡಿಸುತ್ತಿದ್ದಾರೆ.  ಹೊರಗಿನ ಶತ್ರುಗಳ ಜೊತೆಗೆ ತಮ್ಮ ಪಕ್ಷದಲ್ಲೆ ಇರುವವರನ್ನೂ ಎದುರಿಸುತ್ತಿದ್ದಾರೆ.

ಪಕ್ಷದ ಅಭ್ಯರ್ಥಿ ಆಯ್ಕೆಯಾಗುವ ಬಗೆಗಿನ ಬೆಳವಣಿಗೆಗಳು ಮತ್ತು ಇದರ ಸುತ್ತ ದೇಶಾದ್ಯಂತ ಚರ್ಚೆಯಾಗುತ್ತಿರುವುದು ಪರೋಕ್ಷವಾಗಿ ನರೇಂದ್ರ ಮೋದಿಯವರಿಗೆ ಅನುಕೂಲವಾಗಲಿದೆ.  ತಮ್ಮ ಶಕ್ತಿ ಸಾಮಥ್ರ್ಯಗಳನ್ನು ತಮ್ಮದೇ ಪಕ್ಷದವರಿಗೆ ತೋರುತ್ತಲೇ, ದೇಶದ ಜನತೆಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.  ಇದು ಮುಂದಿನ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಿಸಲು ಪೂರಕವಾಗಲಿದೆ.

‘ಈ ಶತಮಾನ ಭಾರತೀಯರದ್ದು’ ಎಂಬುದನ್ನು ಕಾರ್ಯರೂಪಕ್ಕಿಳಿಸುವ ನಾಯಕನ ಅಗತ್ಯತೆ ಇದೆ.  1947ರಿಂದ 1991ರವರೆಗಿನ ಬೆಳವಣಿಗೆಯ ವೇಗಕ್ಕೂ, 1991ರಿಂದೀಚೆಗೆ ಆದ ಬೆಳವಣಿಗೆಗೂ ಅಜಗಜಾಂತರ ವ್ಯತ್ಯಾಸವಿದೆ.  ಭಾರತದ ಅರ್ಥವ್ಯವಸ್ಥೆ ಹಿಗ್ಗಿದೆ.  ಸಂಪರ್ಕ, ಸಾರಿಗೆ, ಹಣಕಾಸು ಹಾಗೂ ಹೈಟೆಕ್ ಕ್ಷೇತ್ರಗಳು ಭಾರತದಲ್ಲಿ ಗಟ್ಟಿ ನೆಲೆ ಕಂಡುಕೊಂಡಿವೆ.  ಅದರಲ್ಲೂ ಬೆಂಗಳೂರಿನ ಬೆಳವಣಿಗೆ ಕಂಡು ಬರಾಕ್ ಒಬಾಮಾ ಅವರೇ ಅಚ್ಚರಿಪಡುತ್ತಿದ್ದಾರೆ.  ಆದರೆ ಈ ಬದಲಾವಣೆಗಳು ಹೆಚ್ಚಿನ ಜನರಿಗೆ ಇನ್ನೂ ತಲುಪಿಲ್ಲ.  ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯುವಂತಹ ಕಾರ್ಯಗಳು ಇನ್ನಷ್ಟೇ ಆಗಬೇಕಿದೆ.  ಶ್ರೀಸಾಮಾನ್ಯನ ನಾಯಕನೆಂದರೆ ಆಟದ ನಿಯಮಗಳನ್ನಷ್ಟೇ ಬದಲಾಯಿಸುವವನಾಗಬಾರದು, ಜನಹಿತಕ್ಕಾಗಿ ಆಟವನ್ನೇ ಬದಲಾಯಿಸುವಷ್ಟು ತಾಕತ್ತಿರಬೇಕು.  ಇಂತಹ ಬದಲವಣೆಯನ್ನೇ ಅಮೇರಿಕಾದ ಜನರು 2008ರಲ್ಲಿ ಬಯಸಿದ್ದರು.  ಪ್ರತಿಫಲವೇ ಒಬಾಮಾ ಅಧ್ಯಕ್ಷರಾಗಿದ್ದು.  ಎರಡನೇ ಅವಧಿಗೂ ಆಯ್ಕೆಯಾಗಿದ್ದಾರೆ.  ಇಂತಹುದೇ ಹಾದಿಯಲ್ಲಿ ಸಾಗುತ್ತಿರುವ ನರೇಂದ್ರ ಮೋದಿ ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರ ಕೃಪೆ : hindi.oneindia.in

2 ಟಿಪ್ಪಣಿಗಳು Post a comment
  1. Kumar's avatar
    ಜೂನ್ 20 2013

    > 1989ರಿಂದಲೂ ಲೋಕಸಭೆಗೆ ಆಯ್ಕೆಯಾಗುತ್ತ ಬಂದಿರುವ ಎಲ್.ಕೆ. ಅಡ್ವಾಣಿ
    ????

    ಉತ್ತರ
  2. gopalkishna's avatar
    gopalkishna
    ಜೂನ್ 25 2013

    ಇದಕ್ಕೂ ಮೊದಲು ರಾಜ್ಯಸಭಾ ಸದಸ್ಯರಾಗಿದ್ದರು (ಲೋಕಸಭೆ ಎಂದರೆ ಜನರಿಂದ ನೇರವಾಗಿ ಆಯ್ಕೆಯಾಗುವುದರಿಂದ 1989ರಿಂದ ಎಂದು ಬರೆದಿದ್ದೇನೆ)

    ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments