‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೨
–ಮು. ಅ. ಶ್ರೀರಂಗ,ಬೆಂಗಳೂರು
“ಹೆಗ್ಗುರುತು”ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹೀರೆಮಠರು ಆ ಕತೆಗಳ ಸಾರಾಂಶ / ತಾತ್ಪರ್ಯ/ ಭಾಷ್ಯ ಹೀಗೆ ಬರೆದಿರುವುದರಿಂದ ಅದರಲ್ಲಿ ಚರ್ಚಿಸುವ ಅಂಶಗಳು ಅಷ್ಟಾಗಿ ಇಲ್ಲ. “ನಿಜಕವಲು”ಜತೆಗೆ ಸ್ತ್ರ್ರೀ ವಾದಿಗಳೂ ಸೇರಿದಂತೆ ಹಲವರ ಕೋಪಕ್ಕೆ ಕಾರಣವಾದ ಭೈರಪ್ಪನವರ “ಕವಲು”ಕಾದಂಬರಿಯನ್ನು ಹೋಲಿಸಿದ್ದಾರೆ. ಈ ತೌಲನಿಕ ಅಧ್ಯಯನ ಹೇಗೆ ಸಾಧ್ಯವೋ ತಿಳಿಯದಾಗಿದೆ. ಕವಲು ಮತ್ತು ನಿಜಕವಲುವಿನ ನೆಲೆಗಳೇ ಬೇರೆ ಬೇರೆ. ಕಾನೂನಿಗೂ ನ್ಯಾಯ-ನೀತಿಗೂ ನಡುವೆ ಇರುವ ಕಂದರ ಕವಲುವಿನ ಮುಖ್ಯ ಸಮಸ್ಯೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ,ಜನ ಹಿತಕ್ಕಾಗಿ ಮಾಡಿದ ಕಾನೂನನ್ನೇ ಅದಕ್ಕೆ ವಿರುದ್ದವಾಗಿಯು ಉಪಯೋಗಿಸಿದಾಗ ಏನಾಗಬಹುದು ಎಂಬುದರಕದೆಗೆ ನಮ್ಮ ಗಮನವನ್ನು ಸೆಳೆಯುವುದು ಆ ಕಾದಂಬರಿಯ ಉದ್ದೇಶ. ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುದು ಕೇವಲ ಗಂಡಸಿಗೆ ಮಾತ್ರ ಸೇರಿದ್ದಲ್ಲ;ಹೆಣ್ಣಿಗೂ ಆ ಕರ್ತವ್ಯದಲ್ಲಿ ಪಾಲಿದೆ. ತೀರ ಸಹಿಸಲು ಆಸಾಧ್ಯವಾದಾಗ ಬಿಡುಗಡೆ ಪಡೆಯುವುದರಲ್ಲಿ ತಪ್ಪೇನಿಲ್ಲ. ಇದನ್ನು ಭೈರಪ್ಪನವರು ವಿರೋಧಿಸುತ್ತಾರೆ ಎಂದು ಊಹಿಸುವುದು ತಪ್ಪಾಗುತ್ತದೆ.”ನಿಜ ಕವಲು”ವಿನಲ್ಲಿ ಬರುವ ಮಹಿಳಾ ಕಂಡಕ್ಟರ್ ರೀತಿಯಲ್ಲೇ ಇತರೆ ಉದ್ಯೋಗಸ್ಥ ಮಹಿಳೆಯರೂ ಸಹ ಒಂದಲ್ಲ ಒಂದು ವಿಧದಲ್ಲಿ ಸನ್ನಿವೇಶದಲ್ಲಿ :ವಾರೆ ನೋಟ”ಕ್ಕೆ ತುತ್ತಾಗ ಬಹುದಾದಂತಹವರೆ.”ಚಿಕ್ಕತಾಯಿ”ಕತೆ ಇದಕ್ಕೆ ಉದಾಹರಣೆ. ಕೊನೆಯಲ್ಲಿ ಅದು ಬೇರೆ ತಿರುವು ಪಡೆದರು ಸಹ ಪ್ರಾರಂಭದ ಹಂತಗಳನ್ನು ಮರೆಯಬಾರದಲ್ಲವೆ ಹೀಗಾಗಿ ದುಡಿಯುವ ಆಧುನಿಕ ಮಹಿಳೆಯ ಬಗ್ಗೆ ಭೈರಪ್ಪನವರದ್ದು “ವಾರೆ ನೋಟ”ಎಂಬ ಹಿರೇಮಠರ ಅಭಿಪ್ರಾಯ ಸರಿಯಿಲ್ಲ. ಜತೆಗೆ ಆಧುನಿಕ ಉದ್ಯೋಗಸ್ಥ ಮಹಿಳೆಯಿಂದಾಗಿ ನಮ್ಮ ಸನಾತನ ಸಂಸ್ಕೃತಿ ಕವಲು ದಾರಿ ಹಿಡಿದು ಹಾಳಾಗುತ್ತಿದೆ ಎಂಬ ಆತಂಕ ಭೈರಪ್ಪನವರನ್ನು ಕಾಡುತ್ತಿದೆ ಎಂಬ ಹಿರೇಮಠರ ಆರೋಪದಲ್ಲೂ ಹುರುಳಿಲ್ಲ. ಸನಾತನ ಸಂಸ್ಕೃತಿ ನಂಬಿಕೆಗಳಿಗೆ ಮುಜುಗುರ ತಂದಂತಹ “ಪರ್ವ”(ಮಹಾಭಾರತವನ್ನು”ಆಧರಿಸಿದ್ದು) ಕಾದಂಬರಿಯನ್ನು ಬರೆದ ಭೈರಪ್ಪನವರನ್ನು “ಸನಾತನ ಮಠದ ಸ್ವಾಮಿಗಳ ಪೀಠ”ದಲ್ಲಿ ಕೂರಿಸುವುದು ಕುಚೋದ್ಯವಾಗಬಹುದು. ಅಷ್ಟೆ.
ಶೋಷಕ-ಶೋಷಿತರ stereotype ದಲಿತ ಕತೆ ಕಾದಂಬರಿಗಳು ಓದುಗರಿಗೆ ಈಗಾಗಲೇ ಸಾಕಷ್ಟು ಪರಿಚಯವಾಗಿದೆ. ಈಗಲೂ ಸಹ ಕೆಲವು ಬುದ್ದಿಜೀವಿಗಳು,ಸಾಹಿತಿಗಳು ವಿಮರ್ಶಕರ ದೃಷ್ಟಿಯಲ್ಲಿ ಇದು ಬದಲಾಗಿಲ್ಲ. ಮೇಲ್ಜಾತಿಯವರು ಮಾಡಿರುವ ಪಾಪ ನೂರು ಜನ್ಮ ಕಳೆದರೂ ಹೋಗದಷ್ಟಿದೆ. ಇತ್ಯಾದಿ ಧಾಟಿಯ ಮಾತುಗಳು ಕೇಳಿಬರುತ್ತಿರುತ್ತದೆ. ಹಿಂದಿದ್ದ ಪರಿಸ್ಥಿತಿ ಈಗಿಲ್ಲ ಸ್ವಲ್ಪವಾದರೂ ಸುಧಾರಿಸಿದೆ ಎಂದು ಹೇಳಿದರೆ ದಲಿತರಿಗೆ ಕೊಡುತ್ತಿರುವ ಮೀಸಲಾತಿ ಬಗ್ಗೆ ನಿಮಗೆ ಹೊಟ್ಟೆ ಉರಿ ಎಂಬಂತಹ ಮಾತುಗಳು ತೂರಿ ಬರುತ್ತವೆ. ಸ್ವಾತಂತ್ರ್ಯಾನಂತರದ ದಲಿತರ ಮನಸ್ಥಿತಿಯನ್ನು ಎರಡು ಭಿನ್ನ ನೆಲೆಗಳಲ್ಲಿ ಚಿತ್ರಿಸುವ “ಪೂರ್ವನಾಮದವಲಸೆ”ಮತ್ತು “ಕೋನ” ವಿಶಿಷ್ಟವಾಗಿದೆ. ಹಿಂದಿನ ದಿನಗಳ ನೆನಪು ತನಗೆ ಬೇಕಿಲ್ಲವೆಂದು ವರ್ತಿಸುವ,ತಾನು ತನ್ನ ಮಕ್ಕಳು ಯಾರಿಗಿಂತ ಕಮ್ಮಿಯೇನಲ್ಲ ಎಂದು ಬೇರೆಯವರ ಜತೆ ವರ್ತಿಸುವ ಹೆಸರನ್ನು ಚುಟುಕಾಗಿಸಿಕೊಂಡ ಕೆ ಎಂ ಸ್ವಾಮಿ ಒಂದೆಡೆಯಾದರೆ “ಕೋನ”ದ ರವೀಂದ್ರಕುಮಾರ್ ಕತೆಯ ಕೊನೆಯ ತನಕ ‘ಮಿಲಿಟೆಂಟ್ ‘ದಲಿತನಾಗೆ ಕಂಡವನು; ಸಂಗೀತ ಕಚೇರಿಯೊಂದರಲ್ಲಿ ವೇಣುವಾದಕರೊಬ್ಬರ ನಿಷ್ಟಾವಂತ ಶಿಷ್ಯನಾಗಿ ಕಂಡುಬರುತ್ತಾನೆ.ತಾನು ಹಾಗೂ ಇರಬಲ್ಲೆ ಹೀಗೂ ಇರಬಲ್ಲೆ ಎಂದು ತೋರಿಸಿಕೊಳ್ಳುತ್ತಾನೆ. ಇದು ಸದ್ಯದ ಸ್ಥಿತಿ.
ನೋಡುವ ಮನಸ್ಸು ಸಾಹಿತಿಗಳಿಗೆ ಇರಬೇಕಷ್ಟೆ.
ಇಂದು ಜಾಗತೀಕರಣದ ಬಗ್ಗೆ ಮಾತನಾಡುವುದು ಮಾಮುಲಾಗಿಬಿಟ್ಟಿದೆ. ಆದರೆ ಇದಕ್ಕೆ ಪರ್ಯಾಯವೇನು ಎಂಬುದರ ಬಗ್ಗೆ ನಾನಾ ರೀತಿಯ ಉತ್ತರಗಳು ಆಗಾಗ ಚಿಂತಕರಿಂದ ಬರುತ್ತಿರುತ್ತದೆ. ಗಾಂಧೀಜಿ ಅವರ ಚರಕ,ಗ್ರಾಮ ಸ್ವರಾಜ್ಯ ಇತ್ಯಾದಿಗಳು ಇಂದಿನ ದಿನಗಳ ಸಮಸ್ಯೆಗೆ ಉತ್ತರವಾಗಲಾರದು. ಏರುತ್ತಿರುವ ಜನಸಂಖ್ಯೆ,ಅವರಿಗೆ ಶಿಕ್ಷಣ,ನಂತರ ಉದ್ಯೋಗ,ತಲೆಯ ಮೇಲೊಂದು ಸೂರು ಇತ್ಯಾದಿಗಳೆಲ್ಲವನ್ನೂ ಹೊಂದಿಸುವುದು ಆ ಮಾದರಿಯ ಚಿಂತನೆಗಳಿಂದ ಆಗದ ಮಾತು.ಪಟ್ಟಣವಾಗಿದ್ದದ್ದು ನಗರ ನಂತರ ಮಹಾನಗರವಾಗಲೇ ಬೇಕಾದಂತಹ ಅನಿವಾರ್ಯ ಸ್ಥಿತಿಯಲ್ಲಿ ನಾವಿಂದು ಸಿಕ್ಕಿಹಾಕಿಕೊಂಡಿದ್ದೇವೆ. ಈ ಸಮಸ್ಯೆ ಒಬ್ಬ ಶ್ರೀಸಾಮಾನ್ಯನ ಬದುಕಿನಲ್ಲಿ ತರಬಹುದಾದಂತಹ ಮಾನಸಿಕ ಗೊಂದಲಗಳು,ಅದಕ್ಕೆ ಹೇಗೆ,ಯಾವ ರೀತಿಯಲ್ಲಿ ಹೊಂದಿಕೊಳ್ಳಬಹುದು ಎಂಬ ಚಿಂತೆಯನ್ನು “ಒಬಳಯ್ಯನ ಸುತ್ತ ಮುತ್ತ”ಕತೆ ಚಿತ್ರಿಸಿದೆ. ನಾನು ನನ್ನ ಜೀವನದ ಸುಮಾರು ಐವತ್ತು ವರ್ಷಗಳನ್ನು ತಾಲ್ಲೂಕು ಮಟ್ಟದ ಪಟ್ಟಣಗಳಲ್ಲೇ ಕಳೆದವನು. ತೀರಾ ಇತ್ತೀಚಿಗೆ ಅನಿವಾರ್ಯವಾಗಿ ಬೆಂಗಳೂರಿಗೆ ವಾಸಿಸಲು ಬರಬೇಕಾಯ್ತು.ಬಡಾವಣೆ ಚೆನ್ನಾಗಿದೆ,ಫ್ಲಾಟ್ ಚೆನ್ನಾಗಿದೆ, ಇಪ್ಪತ್ತನಾಲ್ಕು ಗಂಟೆ ನೀರು ಅಷ್ಟಾಗಿ ಕೈಕೊಡದ ವಿದ್ಯುತ್ ಎಲ್ಲಾ ಸರಿ. ಎಲ್ಲಿದ್ದರೂ ನನಗೆ ಪಿಂಚಣಿ ಬರುತ್ತದೆ. ಅದು ಬೇರೆ ಪ್ರಶ್ನೆ. ಆದರೂ ನಾನು ಇಲ್ಲಿಗೆ ಹೊಂದಿಕೊಳ್ಳಲು ಸುಮಾರು ಒಂದು ತಿಂಗಳು ಬೇಕಾಯ್ತು. ಆಗ ನನಗೆ ನೆನಪಾದದ್ದು ಒಬಳ್ಳಯ್ಯನ ಕತೆ. ಒಂದು ವೇಳೆ ಅವನ ಫುಟ್ಪಾತಿನ ಟೀ ಅಂಗಡಿಗೆ ಧಕ್ಕೆ ಬಂದ್ದಿದ್ದರೂ ,ಆತನ ಮಗ ಬ್ಯಾಂಕಿನಲ್ಲಿ ಅಪ್ಪನ ಹೆಸರಿನಲ್ಲಿ ಇಟ್ಟಿದ್ದ ಹಣ ಸಾಕಷ್ಟಿದೆ. ಆದರೂ ಸಹ ತಾನು ಏನನ್ನೋ ಕಳೆದುಕೊಳ್ಳುತ್ತಿದ್ದೇನೆ ಎಂಬ ಕೊರಗು. ಒಂದು ಕತೆ ಓದುಗನ ಮನಸನ್ನು ಇಷ್ಟು ಗಾಢವಾಗಿ ಕಲಕುವುದು ಕತೆಗಾರರ ಸೃಜನಶೀಲತೆಗೆ ಸಾಕ್ಷಿ.
ಕೆ. ಸತ್ಯನಾರಾಯಣರು ತಮ್ಮ ಉನ್ನತ ಹುದ್ದೆಯ ಕಾರಣದಿಂದಾಗಿ ಭಾರತದ ಏಳೆಂಟು ನಗರ ಮಹಾನಗರಗಳಲ್ಲಿ ವಾಸಿಸಿ ಬಂದಿದ್ದಾರೆ. ಒಂದೆರೆಡು ಬಾರಿ ವಿದೇಶಕ್ಕೂ ಹೋಗಿದ್ದಾರೆ. ಎಲ್ಲಿ ಹೋದರೂ ಅವರ ಜತೆ ಸದಾ ಇರುವ “ಕತೆಗಾರ” ಅವರ ಸಂಪರ್ಕಕ್ಕೆ ಬಂದವರ ನಡೆ ನುಡಿಗಳನ್ನು ಗಮನಿಸುತ್ತಲೇ ಇರುವಂತಹವನು. ಹೀಗಾಗಿ ಅವರು ಬೆಂಗಳೂರಿನವರ ಕತೆ ಬರೆಯಲಿ ಮುಂಬೈನವರ ಕತೆ ಬರೆಯಲಿ ಅವರ ಓದುಗರಿಗೆ ಇಂತಹ ಪಾತ್ರಗಳನ್ನು ತಾವು ನೋಡಿರುವ ಹಾಗೆ ಇದೆಯಲ್ಲ ಎಂದು ಅನಿಸುತ್ತದೆ. ಅವರ ಮುಂದಿನ ಕತೆಯಲ್ಲಿ ನಾವೋ,ನಾವು ಕಂಡ ಇತರರೊ ಯಾವ ರೀತಿ ಚಿತ್ರಿತವಾಗಿದ್ದೇವೆ ಎಂದು ಕಾಣುವ ಹಂಬಲವಾಗಿ ಆ ಬರಲಿರುವ ಕತೆಗಾಗಿ ಕಾಯುವಂತೆ ಮಾಡುತ್ತವೆ. ಸಾಹಿತಿ ಮತ್ತು ಓದುಗರ ಈ ತಾದಾತ್ಮ್ಯ ಮುಖ್ಯವೆಂದು ನನಗನ್ನಿಸುತ್ತದೆ.
ಈ ಎರಡು ಕಥಾ ಸಂಕಲದ ಉಳಿದ ಕತೆಗಳ ಬಗ್ಗೆ ಈಗಾಗಲೇ ಬೇರೆ ಬೇರೆ ಪತ್ರಿಕೆಗಳಲ್ಲಿ/ಸಾಹಿತ್ಯಿಕ ಪತ್ರಿಕೆಗಳಲ್ಲಿ ಚರ್ಚೆಯಾಗಿದೆ. ನಾನೂ ಸಹ ಮತ್ತೆ ಬರೆಯುವುದು ಪುನರುಕ್ತಿಗಳಾಗಬಹುದು. ಹೀಗಾಗಿ ನನ್ನನ್ನು ತೀವ್ರವಾಗಿ ಕಾಡಿದ ಕತೆಗಳ
ಬಗ್ಗೆ ಮಾತ್ರ ಬರೆದಿದ್ದೇನೆ.





Liked your writing. It has a freshness not seen in standard reviews. Please continue to write on Kannada literature.