ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 19, 2013

ಸಿರಿಯಾದಲ್ಲಿ ಶಬ್ದವಿಲ್ಲದ ಯುದ್ಧವಂತೂ ನಡೆಯಲಿದೆ

‍ನಿಲುಮೆ ಮೂಲಕ

– ಎಸ್.ಸುನಿಲ್ ಕುಮಾರ್

ರಾಷ್ಟೀಯ ಪ್ರಧಾನ ಕಾರ್ಯದರ್ಶಿ, YOUTH FOR NATION

ಸೈಬರ್ ಯುದ್ಧಈ ಬಾರಿ ಸಿರಿಯಾ ಮೇಲೆ ಕ್ಷಿಪಣಿ ಯುದ್ಧವೇರ್ಪಟ್ಟರೂ, ಕ್ಷಿಪಣಿ ಬಳಸದೇ ಇದ್ದರೂ ಸೈಬರ್ ಯುದ್ಧವಂತೂ ನಿಶ್ಚಿತವಾಗಿ ನಡೆಯಲಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಯಾರ ಸಮ್ಮತಿಗೂ ಕಾಯಬೇಕಿಲ್ಲ. ಏಕೆಂದರೆ ಇದೊಂದು ಮಾಯಾಯುದ್ಧ. ಇಲ್ಲಿ ಶತ್ರು ಎಲ್ಲಿರುವನು ಎಂದು ತಿಳಿಯುವುದೇ ಇಲ್ಲ. ದಾಳಿ ನಡೆಯುವುದೆ ಗೊತ್ತಾಗುವುದಿಲ್ಲ, ದಾಳಿ ಎಂದು ಶುರುವಾತು, ಎಲ್ಲಿ ಮುಗಿತು ಒಂದೂ ತಿಳಿಯುವುದಿಲ್ಲ. ತಿಳಿಯುವುದೊಂದೆ ಅದರಿಂದಾಗುವ ಹಾನಿ ಮಾತ್ರ, ಸೈಬರ್ ಯುದ್ಧದ ಪರಿಣಾಮ ಅತ್ಯಂತ ಅಪಾಯಕಾರಿ.

ಜೂನ್ ೨೦೧೦ ರಲ್ಲಿ ಇರಾನಿನ ಅಣುಸ್ಥಾವರಗಳು ಸ್ಟಕ್ಸ್‌ನೆಟ್ ಎಂಬ ಕಂಪ್ಯೂಟರ್ ವೈರಸ್ ದಾಳಿಂದ ನಿಷ್ಕ್ರಿಯಗೊಳ್ಳುತ್ತದೆ. ನಿರ್ದಿಷ್ಟವಾಗಿ ಅಣುಸ್ಥಾವರದ ಸೆಂಟ್ರಿಫ್ಯೂಜ್‌ಗಳನ್ನೆ ಗುರಿಯಾಗಿರಿಸಿ ಇರಾನಿನ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದ ಸ್ಟಕ್ಸ್‌ನೆಟ್  ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನಿನ ವಿರುದ್ಧ ಬಳಸಲು ತಯಾರಿಸಿದ ಸೈಬರ್ ಅಸ್ತ್ರ ಎಂದು ಜೂನ್ ೧. ೨೦೧೨ ರಂದು “ನ್ಯೂಯಾರ್ಕ್ ಟೈಮ್ಸ್” ವರದಿ ಮಾಡುತ್ತದೆ. ಹಾಗೆಯೆ ಈ ಕಾರ್ಯಾಚರಣೆಯ ಹೆಸರು “ಆಪರೇಷನ್ ಒಲಂಪಿಕ್ ಗೇಮ್ಸ್” ಎಂಬುದನ್ನು ಉಲ್ಲೇಖಿಸುತ್ತದೆ.
ದೇಶವೊಂದು ಯಾವುದೇ ಸೈನಿಕರನ್ನು ಕಳುಹಿಸದೆ, ವಾಯುಪಡೆ ನೌಕಾಪಡೆಗಳನ್ನು ನಿಯೋಜಿಸದೆ ಗುಂಡಿನ ಆರ್ಭಟವೂ ಇಲ್ಲದೆ ಹೇಗೆ ಯುದ್ಧ ಮಾಡಬಹುದು ಹಾಗೂ ಇದರಿಂದ ಹೇಗೆ ಶತ್ರು ರಾಷ್ಟ್ರವನ್ನು ಹಣೆಯಬಹುದೆಂಬ ಪಾಠವನ್ನು ಅಮೆರಿಕಾ ಮತ್ತು ಇಸ್ರೇಲ್ ಜಗತ್ತಿಗೆ ಹೇಳಿಕೊಟ್ಟವು.

ಈ ಬಾರಿಯೂ ಸಿರಿಯಾದ ಮೇಲೆ ಇಂತಹುದೇ ಒಂದು ದಾಳಿ ಆಯೋಜಿಸುವುದರಲ್ಲಿ ಸಂಶಯವೇ ಇಲ್ಲ. ಆದರೆ ಈ ಬಾರಿ ಸೈಬರ್ ಯುದ್ಧವೊಂದನ್ನೇ ನೆಚ್ಚಿಕೊಳ್ಳದೆ ಕ್ಷಿಪಣಿಗಳ ಸಹಾಯವನ್ನು ಪಡೆಯಲು ಅಧ್ಯಕ್ಷ ಒಬಾಮ ಯೋಜಿಸಿದ್ದಾರೆ.ಹೇಗೆ ಸಾಂಪ್ರದಾಕ ಯುದ್ಧಗಳಲ್ಲಿ ವಾಯುದಾಳಿಂದ ಭೂಸೇನೆ ಮುನ್ನಡೆಯಲು ಸುಗಮವಾಗುವುದೋ ಹಾಗೆಯೇ ಈ ಬಾರಿ ಸೈಬರ್ ಸೇನೆ ವಾಯುಸೇನೆಗೆ ಮುನ್ನಡೆ ದೊರಕಿಸಿಕೊಡುತ್ತದೆ.

ಈಗೊಂದು ವೇಳೆ ಯುದ್ಧ ಪ್ರಾರಂಭವಾದರೆ ಅಮೆರಿಕಾದ ಯುದ್ಧ ವಿಮಾನಗಳು ಸಿರಿಯಾದ ಮೇಲೆ ದಾಳಿ ಮಾಡುತ್ತವೆ ಹಾಗೆಯೆ ಅದನ್ನು ಹೊಡೆದುರುಳಿಸುವ ಸಾಮರ್ಥ್ಯವುಳ್ಳ ರಷ್ಯಾ ನಿರ್ಮಿತ ಕ್ಷಿಪಣಿಗಳು ಸಿರಿಯಾ ಬಳಿವೆ.ಈಗ ಅಮೆರಿಕಾದ ಸೈಬರ್ ಸೈನ್ಯ ಸಿರಿಯಾದ ಮಿಲಿಟರಿ ರಾಡಾರ್‌ಗಳ ಮೇಲೆಯೆ ದಾಳಿ ಮಾಡಿ ಅದನ್ನು ಹಾಳುಗೆಡವುತ್ತದೆ. ಇದರಿಂದ ಅಮೆರಿಕ ಯುದ್ಧವಿಮಾನಗಳನ್ನು ಗುರುತಿಸುವಲ್ಲಿ ರಾಡರ್‌ಗಳು ವಿಫಲವಾಗುತ್ತವೆ. ಸಿರಿಯಾದ ವಾಯುಸೇನೆ ನಿರುತ್ತರವಾಗುತ್ತದೆ. ಅಮೆರಿಕದ ಕ್ಷಿಪಣಿಗಳು ಅತ್ಯಂತ ಸುಲಭವಾಗಿ ಯಾವುದೇ ಪ್ರತಿರೋಧವಿಲ್ಲದೆ ಗುರಿಗಳನ್ನು ನಾಶಪಡಿಸುವ ಮೂಲಕ ವಾಯುಸೇನೆ ಮುನ್ನಡೆಯುತ್ತದೆ.

ಹೀಗೆ ಮಿಲಿಟರಿ ರಾಡಾರ್‌ಗಳಲ್ಲದೆ, ಪವರ್‌ಗ್ರಿಡ್‌ಗಳು, ದೂರಸಂಪರ್ಕ, ಇಂಟರ್ನೆಟ್, ನೀರಿನ ಕೊಳವೆಗಳು ಇವೆಲ್ಲವನ್ನು ಗುರಿಯಾಗಿರಿಸಿ ದಾಳಿ ಮಾಡಬಹುದು.ಅಷ್ಟಕ್ಕೂ ಸಿರಿಯಾ ವಿದ್ಯುತ್‌ಗಾಗಿ ಇರಾನಿನ ಪವರ್‌ಗ್ರಿಡ್‌ಗಳ ಮೇಲೆಯೆ ಅವಲಂಬಿತವಾಗಿದೆ.  ಹಾಗಾಗಿ ಸೈಬರ್ ದಾಳಿಗೆ ಪವರ್‌ಗ್ರಿಡ್‌ಗಳು ಅನುಕೂಲಕರವಾಗಿ ಗುರಿಯಾಗುತ್ತವೆ. ಹಾಗಾಗಿ ದಾಳಿಯ ಸಂದರ್ಭದಲ್ಲಿ ಅಮೆರಿಕದ ಸೈಬರ್ ಸೇನೆ ಈ ಪವರ್‌ಗ್ರಿಡ್‌ಗಳನ್ನು ಅಶಕ್ತಗೊಳಿಸಬಹುದು. ಇದು ಕ್ಷಿಪಣಿಯಿಂದ ಧ್ವಂಸ ಮಾಡುವುದಕ್ಕಿಂತ ಸುಲಭ ಹಾಗು ಕಡಿಮೆ ಹಾನಿಕರ.

ಮತ್ತು ಈ ಎಲ್ಲಾ ದಾಳಿಗಳು ಮಾನವ ಹಕ್ಕುಗಳು ಮತ್ತು ಜಿನಿವಾ ಒಪ್ಪಂದಗಳಿಗೆ ಪೂರಕವಾಗಿರುತ್ತದೆ. ಏಕೆಂದರೆ ಈ ದಾಳಿಗಳು ಜನಸಾಮಾನ್ಯರಿಗೆ ಸಾವು ನೋವು ಉಂಟು ಮಾಡುವುದಿಲ್ಲ. ಬದಲಾಗಿ ಸಾಂಪ್ರದಾಕ ಯುದ್ಧಕ್ಕಿಂತ ಅತೀ ಕಡಿಮೆ ಹಾನಿ ನಾಗರಿಕರ ಮೇಲಾಗುತ್ತದೆ.

ಇತ್ತ ಅಮೆರಿಕವು ಸೈಬರ್ ದಾಳಿಂದ ಹೊರತಾಗಿಲ್ಲ, ಸೆ. ೨, ೨೦೧೩ ರಂದು ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿ ( ಸಿರಿಯಾದ ಹ್ಯಾಕರ್ ತಂಡ ) ಅಮೆರಿಕ ಸೈನ್ಯದ ಭಾಗವಾದ ಯು.ಎಸ್.ಮೆರೈನ್ ಕಾರ್ಪ್ಸ್‌ನ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ ಅದೇ ವೆಬ್‌ಸೈಟ್‌ನಲ್ಲಿ ಸಿರಿಯಾ ಆಲ್ ಖೈದಾ ವಿರುದ್ಧ ಹೋರಾಡುತ್ತಿರುವುದಾಗಿಯೂ ಹಾಗು ಆಲ್ ಖೈದದ ಪರವಾಗಿ ಅಧ್ಯಕ್ಷ ಒಬಾಮರವರು ಸಿರಿಯಾದ ಮೇಲೆ ಯುದ್ಧಕ್ಕೆ ಸಜ್ಜಾಗಿದ್ದಾರೆ, ಆದರಿಂದ ಆಧ್ಯಕ್ಷರು ಆಜ್ಞಾಪಿಸಿದರೂ ಯುದ್ಧ ಮಾಡಬಾರದೆಂದೂ, ಅಧ್ಯಕ್ಷರು  ಸೈನಿಕರನ್ನು ಸಾವಿನೆಡೆಗೆ ದೂಡುತ್ತಿದ್ದಾರೆಂದು ತಿಳಿಸುವ ಸಂದೇಶವನ್ನು ಸೇರಿಸಲಾಗಿದೆ. ನಾನು ಆಲ್ ಖೈದಾ ಪರವಾಗಿ ಯುದ್ಧ ಮಾಡುವುದಿಲ್ಲ ಎಂಬ ಘೋಷಣೆಗಳನ್ನು ಮಾಡಿದ ಸೈನಿಕರ ಭಾವಚಿತ್ರಗಳನ್ನು ಹಾಕಲಾಗಿತ್ತು.

ಏಪ್ರಿಲ್ ತಿಂಗಳಲ್ಲಿ ಅಸೊಸಿಯೆಟೆಡ್ ಪ್ರೆಸ್‌ನ ಟ್ವೀಟರ್ ಅನ್ನು ಹ್ಯಾಕ್ ಮಾಡಿದ ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿ ಶ್ವೇತ ಭವನದಲ್ಲಿ ಸಂಭವಿಸಿದ ಎರಡು ಸ್ಪೋಟದಿಂದ ಅಧ್ಯಕ್ಷ ಒಬಾಮ ಗಾಯಗೊಂಡಿದ್ದಾರೆಂಬ ಹುಸಿ ಸಂದೇಶವನ್ನು ಹಾಕುತ್ತಾರೆ. ಇದರ ಪರಿಣಾಮವಾಗಿ ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗುತ್ತದೆ. ಕೆಲವೇ ಸಮಯದಲ್ಲಿ ನೂರು ಬಿಲಿಯನ್ ಡಾಲರಿಗೂ ಹೆಚ್ಚು ನಷ್ಟ ಉಂಟಾಗುತ್ತದೆ .ಹಾಗೆಯೆ “ನ್ಯೂಯಾರ್ಕ್ ಟೈಮ್ಸ್” ವೆಬ್‌ಸೈಟ್ ಸೇರಿದಂತೆ ಹಲವಾರು ವೆಬ್‌ಸೈಟ್ ಗಳನ್ನು ಸಿರಿಯಾದ ಹ್ಯಾಕರ್‌ಗಳು ಹ್ಯಾಕ್ ಮಾಡಿರುತ್ತಾರೆ.

ಇತ್ತೀಚೆಗೆ ಅಮೆರಿಕದ ಹಲವು ಬ್ಯಾಂಕುಗಳ ಮೇಲಾದ ಸೈಬರ್ ದಾಳಿಯು ಇರಾನಿಯನ್ ಸೈಬರ್ ಆರ್ಮಿಯ ಸಹಾಯದಿಂದ ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿಯೇ ಮಾಡಿದೆ ಎಂದು ಶಂಕಿಸಲಾಗಿದೆ. ದಾಳಿಗೊಳಗಾದ ಬ್ಯಾಂಕುಗಳಲ್ಲಿ ವೆಲ್ಸ್ ಫ಼ಾರ್ಗೊ ಅಂಡ್ ಕೋ, ಸಿಟಿ ಗ್ರೂಪ್ ಇಂಕ್, ಜೆ.ಪಿ.ಮಾರ್ಗನ್ ಚೇಸ್ ಆಂಡ್ ಕೋ, ಬ್ಯಾಂಕ್ ಆಪ್ ಅಮೆರಿಕ ಕಾರ್ಪ್‌ಗಳು ಸೇರಿರುತ್ತವೆ.

ಸಿರಿಯಾದ ಮಿತ್ರ ರಾಷ್ಟ್ರ ಇರಾನ್‌ನ ಸೈಬರ್ ಆರ್ಮಿ ವಿಶ್ವದಲ್ಲೇ ನಾಲ್ಕನೆ ದೊಡ್ಡ ಸೈಬರ್ ಆರ್ಮಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇತ್ತೀಚಿನ ಸೌದಿ ಅರೇಬಿಯಾದ ತೈಲ ಕಂಪನಿ ಆರಾಮ್ಕೊದ ಮೂವತ್ತು ಸಾವಿರ ಕಂಪ್ಯೂಟರ್‌ಗಳನ್ನು ಹಾಳುಗೆಡವಿದ್ದು ಇರಾನಿಯನ್ ಸೈಬರ್ ಆರ್ಮಿಯೆ ಎಂದು ನಂಬಲಾಗಿದೆ.

ಹೀಗೆ ಎರಡೂ ದೇಶಗಳೂ ಸೈಬರ್ ಯುದ್ಧಕ್ಕೆ ತಯಾರಾಗಿದ್ದು “ಹ್ಯಾಕ್ ರೀಡ್” ನಲ್ಲಿ ಪ್ರಕಟವಾದ ಲೇಖನ ಒಂದರಲ್ಲಿ ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿಯ ವಕ್ತಾರರೊಬ್ಬರು ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿ ಅಮೆರಿಕದ ಸೇನೆಯ ಮೇಲೆ ಸೈಬರ್ ದಾಳಿ ನಡೆಸಲಿದ್ದು ಜಗತ್ತಿಗೆ ಅನಿರಿಕ್ಷಿತ ಫಲಿತಾಂಶಗಳನ್ನು ಕೊಡುವುದಾಗಿ ಹೇಳಿದ್ದಾರೆ. ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿಯು ಅಮೆರಿಕದ ಬ್ಯಾಂಕಿಂಗ್, ಪರಮಾಣು ಕೇಂದ್ರಗಳು, ಪವರ್‌ಗ್ರಿಡ್‌ಗಳು, ವಿಮಾನ ನಿಲ್ದಾಣಗಳು ನಮ್ಮ ಗುರಿ ಎಂದು ಗುಡುಗಿದ್ದಾರೆ. ಹಾಗೆಯೆ ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿಯಲ್ಲಿ ಸಾವಿರಾರು ಹ್ಯಾಕರ್‌ಗಳಿದ್ದಾರೆಂದು ಹೇಳಿಕೊಂಡಿದ್ದಾರೆ.

ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಅಮೆರಿಕ ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿ ಕೇವಲ ಇಪ್ಪತ್ತು ಮಂದಿ ಸಿರಿಯಾದ ಕಂಪ್ಯೂಟರ್ ವಿದ್ಯಾರ್ಥಿಗಳಿಂದ ಕೂಡಿದ್ದು ಸಿರಿಯಾಗೆ ದೊಡ್ಡ ಮಟ್ಟದ ಸೈಬರ್ ದಾಳಿ ಮಾಡುವ ಸಾಮರ್ಥ್ಯವಿಲ್ಲವೆಂದು ಹೇಳಿದೆ.

ಇವೆಲ್ಲದರ ನಡುವೆ ರಷ್ಯಾದ ಹ್ಯಾಕರುಗಳು ಈ ಸಮರವನ್ನು ಪ್ರವೇಶಿಸಿದರೆ ಪರಿಸ್ಥಿತಿ ನಿಜಕ್ಕೂ ಬಿಗಡಾಯಿಸಲಿದೆ. ಸಿರಿಯಾದ ಸರ್ವರ್‌ಗಳೆಲ್ಲಾ ರಷ್ಯಾದಲ್ಲೆ ಇರುವುದರಿಂದ ಅದರ ಮೇಲೆ ಮಾಡುವ ದಾಳಿಗೆ ಪ್ರತಿಕಾರವಾಗಿ ಸರ್ಕಾರವಲ್ಲದಿದ್ದರೂ ಕೆಲವು ದೇಶಭಕ್ತ ಹ್ಯಾಕರ್‌ಗಳು ಪ್ರತಿದಾಳಿ ಮಾಡಬಹುದು

ಚಿತ್ರ ಕೃಪೆ :historiesofthingstocome.blogspot.com

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments