ವಿಷಯದ ವಿವರಗಳಿಗೆ ದಾಟಿರಿ

ಜುಲೈ 3, 2014

’ಪಟ್ಟು’ ಬಿಡದೆ ಗೆದ್ದವನು

‍ನಿಲುಮೆ ಮೂಲಕ

– ಶೈಲೇಶ್ ಕುಲ್ಕರ್ಣಿ

ಮಾರ್ವನ್ ಅಟಪಟ್ಟುದೇಶೀಯ ಕ್ರಿಕೆಟ್ನಲ್ಲಿ ಭರವಸೆಯ ಆಟಗಾರನಾಗಿ ಅದಾಗಲೇ ಆತ ಒಳ್ಳೆ ಹೆಸರು ಸಂಪಾದಿಸಿದ್ದ.ಅಂತರ್-ರಾಷ್ಟ್ರೀಯ ಸ್ತರದಲ್ಲಿ ತನ್ನ ಹೆಸರಿನ ಭೇರಿಭಾರಿಸುವ ಭರಪೂರ ಉತ್ಸಾಹದಿಂದ ರಾಷ್ಟ್ರೀಯತಂಡಕ್ಕೆ ಪದಾರ್ಪಣೆ ಮಾಡಿದ.

ತನ್ನ ಟೆಸ್ಟ್ ಜೀವನದ ಮೊಟ್ಟಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ಆಡಲಿಳಿದಾಗ ಅವಗಳಿಸಿದ್ದು ಬರೋಬ್ಬರಿ “0”.
ಹೊಸಹುರುಪಿಂದ ಎರಡನೇ ಇನ್ನಿಂಗಿನಲ್ಲಿ ಕಣಕ್ಕೆ ಬಂದಾಗ ಮತ್ತೆಬಾರಿಸಿದ್ದು “0”.
ಸ್ವಾಭಾವಿಕವಾಗಿ ಆತನನ್ನ ತಂಡದಿಂದ ಕೈಬಿಟ್ರು .

೨೨ ತಿಂಗಳ ಕಠಿಣ ಪರಿಶ್ರಮ ನಡೆಸಿದ  ನಂತರ ತಂಡಕ್ಕೆ ಮರು ಆಯ್ಕೆ ಆದ .
ತನ್ನ ದ್ವಿತೀಯ ಟೆಸ್ಟಿನ ಪ್ರಥಮ ಇನ್ನಿಂಗ್ಸ್ನಲ್ಲಿ ಆತನ ಶೂನ್ಯಪ್ರೇಮ ಮರುಕಳಿಸಿತ್ತು. ಸ್ಕೋರ್ಬೋರ್ಡ್ ನಲ್ಲಿ ಆತನ ಹೆಸರಿನೆದುರಿಗೆ ನೇತಿದ್ದು ಮತ್ತದೇ “0”.
ಎರಡನೇ ಇನ್ನಿಂಗ್ಸ್ ನಲ್ಲಿ ತನ್ನಪಾಲಿಗೆ ಬೇತಾಳನಂತೆ ಬೆನ್ನಟ್ಟಿದ್ದ ಶೂನ್ಯ ಸಂಪಾದನೆಯ ಈ ಭಾರವನ್ನ ಹೇಗೋ ಕಳೆದುಕೊಂಡು ಬಿಡಬೇಕು ಅಂದುಕೊಂಡಿದ್ದವ ಗಳಿಸಿದ್ದು “೧” ರನ್ ಮಾತ್ರ.
ಪರಿಣಾಮ …ಪುನಃ ತಂಡದಿಂದ ಅರ್ಧಚಂದ್ರ ಪ್ರಯೋಗ.

ಆತ ಮೈದಾನಕ್ಕೆ ಮರಳಿ ಮತ್ತೆ ಅಭ್ಯಾಸಕ್ಕಿಳಿದ ಮತ್ತು ಈ ಬಾರಿ ತಂಡದಿಂದ ಪುನರಾಯ್ಕೆಯ ಕರೆಬಂದಾಗ ಆತನ ಕ್ರೀಡಾಜೀವನದ ೧೭ ತಿಂಗಳು ಉರುಳಿಹೋಗಿತ್ತು .
ಆತನ ಟೆಸ್ಟ್ ಕರಿಯರ್ನ ತೃತೀಯ ಟೆಸ್ಟ್.. ಭರವಸೆಯ ಆಣೆಕಟ್ಟು ಹೊತ್ತು ಬಂದವನಿಂದ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲಿ ಅಮೋಘ “ಶೂನ್ಯ” ಸಂಪಾದನೆ .
ನಿಸ್ಸಂಕೋಚವಾಗಿ ಆತನನ್ನು ತಂಡದಿಂದ ಹೊರದಬ್ಬಿದ್ರು.

ಒಂದಾನೊಂದು ಕಾಲದಲ್ಲಿ ದುರ್ಬಲವವೆನಿಸಿದ್ದ ಲಂಕಾ ಕ್ರಿಕೇಟ್ ತಂಡಕ್ಕೆ ಅದು  ಬದಲಾವಣೆಯ ಪರ್ವ.
ಆ ಹೊತ್ತಿಗೆ ಜಯಸೂರ್ಯ, ರಣತುಂಗ , ಅರವಿಂದಡಿಸಿಲ್ವಾರಂಥ ದಿಗ್ಗಜರಿಂದ; ಚಮಿಂಡ ವಾಸ್, ಮುರಳೀಧರನ್ ರಂಥ ಜಾಜ್ವಲ್ಯ ಪ್ರತಿಭೆಗಳಿಂದ ಸಮತೋಲಿತ ಸಂಮಿಶ್ರಣ ಕಂಡುಕೊಂಡು ಜಾಗತಿಕಸ್ತರದ ಪೈಪೋಟಿಯ ತಂಡವಾಗಿ ಬೆಳೆದಿತ್ತು.
ಇಂತಹ ಸಮಯದಲ್ಲಿ ತನಗೆ ಸಿಕ್ಕ ಕಳೆತಹಣ್ಣಿನಂಥ ಅವಕಾಶಗಳನ್ನ ಕೈಯ್ಯಾರೆ ಗುಂಡಿತೋಡಿ ಮಣ್ಣುಮಾಡಿ ಹೂತುಹಾಕಿದ ಆ ಆಟಗಾರನ ಟೆಸ್ಟ್ ಕ್ರಿಕೇಟ್ ಜೀವನದಬಗ್ಗೆ ಯಾರಿಗೂ ಭರವಸೆ ಉಳಿದಿರಲಿಲ್ಲ.

ತನ್ನ ಕ್ರಿಕೇಟ್ ಭವಿಷ್ಯದ ಮೇಲೆ ಎಲ್ಲರಿಂದ, ಎಲ್ಲಕಡೆಯಿಂದ ಹರಿದುಬರುತ್ತಿದ್ದ ನಿರರ್ಗಳ ಅಭಿಪ್ರಾಯಗಳನ್ನ ಆತ ತಲೆಗೆ ಹಚ್ಚಿಕೊಂಡಿದ್ದೆ ಆದಲ್ಲಿ ಮೊದಲೇ ಪ್ರತಿಭಾವಂತರಿಂದ ತುಂಬಿತುಳುಕುತ್ತಿದ್ದ ರಾಷ್ಟ್ರೀಯತಂಡಕ್ಕೆ ವಾಪಸಾತಿಯ ಸ್ವಪ್ನವನ್ನ ಮರೆತುಬಿಡಬೇಕಾಗಿತ್ತು.ಅವನ ಬ್ಯಾಟ್,ಕಿಟ್ ಬ್ಯಾಗಿನ ಚೈನ್ ಎಳೆದುಕೊಂಡು ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು .

ಆದರೆ ಆತನ ರೀತಿಯೇ ಬೇರೆ…

ಮತ್ತೆ ಅಭ್ಯಾಸಕ್ಕಿಳಿದನೇ ಪುನಃ ಚೆಂಡಿನಮೇಲೆ ಪ್ರಭುತ್ವ ಸಾಧಿಸುವ ಅದಮ್ಯ ಬಯಕೆಯಲ್ಲಿ ಭರ್ತಿ ೩ ವರ್ಷದ ಪರಿಶ್ರಮಹಾಕಿದ .
೩ ವರ್ಷದ ನಂತರ ರಾಷ್ಟ್ರೀಯ ತಂಡವನ್ನ ಪುನಃಪ್ರತಿನಿಧಿಸಿದಾಗ ಹಿಂದೆನಡೆದ ತಪ್ಪನ್ನ ಮರೆಗೆಸರಿಸಿ ತನ್ನೊಳಗಿದ್ದ ಅದ್ಭುತ ಬ್ಯಾಟ್ಸ್ಮನ್ ನ ಪರಿಚಯ ಜಗತ್ತಿಗೇ ಮಾಡಿಸಿದ .
ಇಲ್ಲಿಂದ ಮೇಲೆ ತಂಡದಲ್ಲಿ ಗಟ್ಟಿನೆಲವೂರಿದ್ದೆ ಅಲ್ಲ ೧೬ ಟೆಸ್ಟ್ ಮತ್ತು ೧೧ ಏಕದಿನ ಶತಕಗಳನ್ನು, ೩೯.೦೨ ಸರಾಸರಿಯ ಟೆಸ್ಟ್ ಮತ್ತು ೩೭.೫೭ರ ಸರಾಸರಿಯ ಸಾರ್ಥಕ ಏಕದಿನ ಕ್ರಿಕೇಟ್ ಜೀವನದ ಸಾಧನೆಯೊಂದಿಗೆ ರಾಷ್ಟ್ರೀಯತಂಡವನ್ನ ನಾಯಕನಾಗಿ ಪ್ರತಿನಿಧಿಸುವಷ್ಟರ ಮಟ್ಟಿಗೆ ಬೆಳೆದುನಿಂತ .

ತನ್ನ ಕ್ರಿಕೇಟ್ ಜೀವನದ ಎರಡನೇ ರನ್ ಗಳಿಸಲು ೬ ವರ್ಷಗಳ ಸುದೀರ್ಘಸಮಯ ವ್ಯಯಿಸಿದ ಅಟಪಟ್ಟು,ಕೊನೆಗಾಣದ ಸತತ ಸೋಲುಗಳಿಂದ ಹೈರಾಣಾಗಿ ಆಟಕ್ಕೇ ದೀರ್ಘದಂಡ ನಮಸ್ಕಾರ ಹೇಳಬೇಕಾಗಿದ್ದ ಅಟಪಟ್ಟು,ಇಂದು ಆಟದ ಹೊಸಹೊಸ ಪಟ್ಟುಗಳನ್ನು ಕಲಿಸಿಕೊಡುವ,ಸೋಲನ್ನ ಗೆಲುವಾಗಿ ಮಾರ್ಪಡಿಸಿಕೊಡುವ ಮಾನಸಿಕತೆ ಬೆಳೆಸುವ ಸಾಮರ್ಥ್ಯಶಾಲಿ ಸಾರಥಿ. ಅರ್ಥಾತ್ ತನ್ನ ರಾಷ್ಟ್ರೀಯ ತಂಡದ ಕೋಚ್.

ಮಾರ್ವನ್ ಅಟಪಟ್ಟು ಕ್ರೀಡಾಜೀವನದ ಈ ಕೆಚ್ಚು ಮನುಷ್ಯ ಪ್ರಯತ್ನದಲ್ಲಿ ನಂಬಿಕೆ ಇರುವ ಎಲ್ಲರಿಗೂ ಸ್ಪೂರ್ತಿಯಾಗಿದೆ.

ಚಿತ್ರಕೃಪೆ :news.bbc.co.uk

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments