ಈ ಸಮಸ್ಯೆಗೆ ಉತ್ತರವಿದೆಯೋ ಇಲ್ಲವೋ?
– ರಾಘವೇಂದ್ರ ಸುಬ್ರಹ್ಮಣ್ಯ
(*) ಲೈಂಗಿಕ ಶಿಕ್ಷಣ ಕೊಟ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನ ನಾನೊಪ್ಪಲ್ಲ.
(*) ಹುಡುಗೀರು ಗಿಡ್ಡವಾದ, ಬಿಗಿಯಾದ ಉಡುಪು ತೊಡೋದನ್ನ ನಿಲ್ಲಿಸಿದ್ರೆ, ಮೊಬೈಲ್ ಉಪಯೋಗ ಕಡಿಮೆ ಮಾಡಿದ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನೂ ನಾನೊಪ್ಪಲ್ಲ.
(*) ಯಾವನೋ ಎರೆಕ್ಷನ್ ತಡೆಯಲಾಗದವ ಮಾತ್ರ ರೇಪ್ ಮಾಡ್ತಾನೆ ಅನ್ನೋದನ್ನೂ ನಾನೊಪ್ಪಲ್ಲ.
ಹೆಣ್ಣು ಬೈಕ್ ಓಡಿಸಿದ್ರೂ ಮರುಳಾಗ್ತಾಳೆ, ಡಿಯೋ ಹಾಕಿದ್ರೂ ಆಕರ್ಷಿತಳಾಗ್ತಾಳೆ, ಹೇರ್ ಜೆಲ್ ಹಾಕಿಯೂ ಹುಡುಗಿಯರನ್ನ ಪಟಾಯಿಸಬಹುದು ಅನ್ನೋ ಮೂರನೇ ದರ್ಜೆಯ ಜಾಹೀರಾತಿನ ಬಗ್ಗೆ ಕಮಕ್-ಕಿಮಕ್ ಎನ್ನದ ನಮ್ಮ ಮಹಿಳಾವಾದಿಗಳು ಹಾಗೂ ಬುದ್ಧಿಜೀವಿಗಳು, ಅತ್ಯಾಚಾರ ನಡೆದಾಗ ಮಾತ್ರ ಬೊಬ್ಬಿರಿಯುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ನಮ್ಮ ಸಮಾಜ ಉದ್ಧಾರವಾಗುವುದರೆಡೆಗೆ ಮೊದಲ ಹೆಜ್ಜೆ ಇಡಬಹುದೇನೋ. ಇನ್ನು ನಮ್ಮ ಸಿನಿಮಾಗಳೋ, ಅದರ ಸೂಪರ್ ಸ್ಟಾರ್ ಕಪೂರ್, ಖಾನ್ ಮಹಾಶಯರ ಕಥೆಯಂತೂ ಕೇಳುವುದೇ ಬೇಡ. ಸಿನಿಮಾಗಳಲ್ಲಿ ತಮ್ಮ ಮಕ್ಕಳ ವಯಸ್ಸಿನ ಹೆಂಗೆಳೆಯರನ್ನು ಚೀಪ್-ಟ್ರಿಕ್ ಉಪಯೋಗಿಸಿ ಬಲೆಗೆ ಬೀಳಿಸುವುದಲ್ಲದೇ, ಚಡ್ಡಿ-ಬನಿಯಾನ್ ಜಾಹಿರಾತಿನಲ್ಲೂ ಹೆಣ್ಣುಗಳು ತಮ್ಮನ್ನು ಮುತ್ತುವುದರಂತಹ ಸಂದೇಶವನ್ನು ಜನರಿಗೆ ಕೊಡುತ್ತಾರೆ. ಇಂತಹ ಟೀವಿ ಜಾಹೀರಾತುಗಳು, ದ್ವಂದ್ವಾರ್ಥ ಸಂಭಾಷಣೆಯ ಚಿತ್ರಗಳನ್ನು ನೋಡಿ ಬೆಳೆದ ಮಕ್ಕಳು ಇನ್ನೆಂತಹ ಪಾಠ ಕಲಿಯಲು ಸಾಧ್ಯ!? ಸಧ್ಯಕ್ಕೆ ಲೈಂಗಿಕ ಶಿಕ್ಷಣಕ್ಕಿಂತ ಮುಖ್ಯವಾಗಿ ಬೇಕಿರುವುದು, ನಮ್ಮ ಕುಲಗೆಟ್ಟ ಟಿವಿ ಸಿನಿಮಾ ಮಾಧ್ಯಮದ ಮೇಲಿನ ಹಿಡಿತ ಹಾಗೂ ಸ್ವಲ್ಪ ನೈತಿಕತೆಯ ಪಾಠಗಳು.
ಇನ್ನೊಂದು ಮಾತು ತಿಳಿಯೋಣ. ಅತ್ಯಾಚಾರಿಯ ಮನಸ್ಸು ವಿಕೃತಿಯಿಂದ ತುಂಬಿರುವಂತದ್ದು. ಅದೊಂದು ಮಾನಸಿಕ ರೋಗಗಳ ಗೂಡು. ವಿಕ್ಷಿಪ್ತ ವಾಂಛೆಗಳ ಕೂಪ. ಆ ವ್ಯಕ್ತಿಗೆ ‘ಆ ಸಮಯಕ್ಕೆ’ ಏನೋ ಒಂದು ಸಿಕ್ಕಿದರಾಯ್ತು. ಮಗುವೋ, ಹೆಂಗಸೋ, ವೃದ್ಧೆಯೋ ಯಾವುದಾದರೂ ಸರಿ. ಅದು ಸಿಗಲಿಲ್ಲವೆಂದಾದಲ್ಲಿ ಗಂಡಸರ ಮೇಲೂ, ಪ್ರಾಣಿಗಳ ಮೇಲೂ ಏರಿದವರ ಬಗ್ಗೆ ನಾವು ಕೇಳಿದ್ದೇವೆ. ನಿಜವಾದ ಗಂಡಸು ಹೆಣ್ಣಿನ ಮೈಮೇಲೆ ಏರುವುದಿಲ್ಲ. ಮೃಗದಂತೆ ಬಳಸಿ ಬಿಸಾಡುವುದಿಲ್ಲ. ಆದ್ದರಿಂದ ನನ್ನ ಪ್ರೀತಿಯ ಮಹಿಳಾವಾದಿಗಳೇ….ಯಾವನೋ ಒಬ್ಬ ಝಿಪ್ ನಿಲ್ಲದವ ಪ್ಯಾಂಟ್ ಬಿಚ್ಚಿದ್ದಕ್ಕೆ ಇಡೀ ಗಂಡುಕುಲದ ಮೇಲೆ ಹರಿಹಾಯ್ದು, ಮನುಸ್ಮೃತಿಯನ್ನು ಚರ್ಚೆಗೆ ಎಳೆದು ನಿಲ್ಲಿಸುವ ಅಗತ್ಯವಿಲ್ಲ. ಯಾವುದೋ ಒಂದು ಹೆಣ್ಣು ರಾತ್ರಿ ಹನ್ನೆರಡಕ್ಕೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ ನಿಂತದ್ದಕ್ಕೆ ‘ರಾತ್ರಿ ಹನ್ನೆರಡಕ್ಕೆ ಗಂಡಸಿನೊಡನೆ ಮನೆಯ ಹೊರಗೆ ಇವಳಿಗೇನು ಕೆಲಸ!?’ ಎಂದು ಅನುಮಾನಿಸುವ ಅಗತ್ಯವೂ ಇಲ್ಲ. ಅತ್ಯಾಚಾರಕ್ಕೆ ಹೆಣ್ಣಿನ ಸ್ವಾತಂತ್ರ್ಯಹರಣ ಉತ್ತರವಲ್ಲ. ಹಾಗಂತ ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯ ಮಧ್ಯದ ಅಂತರವನ್ನೂ fairer sex ಅರ್ಥೈಸಿಕೊಳ್ಳಬೇಕು.