ಸಾಹಿತ್ಯ ಕ್ಷೇತ್ರದ ಒಳಹೊರಗು – 5
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4
ಏನ ಬಂದಿರಿ, ಹದುಳವಿದ್ದಿರೆ ಎಂದೊಡೆ ನಿಮ್ಮ ಮೈಸಿರಿ ಹಾರಿ ಹೋಹುದೆ? ಎಂದು ಬಸವಣ್ಣನವರು ಅಂದೇ ಕೇಳಿದ್ದರು. ನಮ್ಮ ಜನರ ವರ್ತನೆಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು ಎನಿಸುತ್ತದೆ. ಮನೆಗೆ ಬಂದವರನ್ನು ಉಪಚರಿಸುವ ಸಂದರ್ಭದಲ್ಲಿ ಅವರು ಹೇಳಿದ ಜನರ ಸಣ್ಣತನದ ವರ್ತನೆ ಕುರಿತ ಈ ಮಾತಿನ ಆಶಯವನ್ನು ಬೇರೆ ಬೇರೆ ಕಡೆಗಳಲ್ಲೂ ಅನ್ವಯಿಸಬಹುದು. ಸಾಹಿತ್ಯ ಕ್ಷೇತ್ರದಲ್ಲಂತೂ ಇದಕ್ಕೆ ಮತ್ತೆ ಮತ್ತೆ ನಿದರ್ಶನಗಳು ದೊರೆಯುತ್ತವೆ. ಒಂದು ಘಟನೆ. ಸಮ್ಮೇಳನವೊಂದರಲ್ಲಿ ಹೊಸಬರೊಬ್ಬರು ಪ್ರಬಂಧ ಮಂಡಿಸಿದ್ದರು. ಉತ್ತಮ ಪ್ರಬಂಧವೆಂದು ಆ ಗೋಷ್ಠಿಯ ಅಧ್ಯಕ್ಷರೊಬ್ಬರು ಸಕಾರಣವಾಗಿ ವಿಶ್ಲೇಷಿಸಿ, ಅಭಿನಂದಿಸಿದರು. ಅದೇ ಪ್ರಬಂಧಕಾರರೊಂದಿಗೆ ಮತ್ತೆ ಮೂವರು ಪ್ರಬಂಧ ಮಂಡಿಸಿದ್ದರು. ಅವುಗಳಲ್ಲಿ ಒಂದು ಪ್ರಬಂಧ ನೀಡಲಾದ ವಿಷಯಕ್ಕೆ ಸಂಬಂಧವೇ ಇಲ್ಲದಂತಿದ್ದರೆ, ಮತ್ತೊಬ್ಬರು ಏನನ್ನೂ ಬರೆದುಕೊಂಡು ಬಂದಿರದೇ ಆಶುಕವಿತ್ವದಂತೆ ಅಲ್ಲೇ ತೋಚಿದ್ದನ್ನು ಒಂದಿಷ್ಟು ಹೇಳಿದ್ದರು. ಇನ್ನೊಬ್ಬರು ತಕ್ಕಮಟ್ಟಿಗೆ ವಿಷಯಕ್ಕೆ ನ್ಯಾಯ ಒದಗಿಸಿದ್ದರೆಂದು ಅಧ್ಯಕ್ಷತೆ ವಹಿಸಿದ್ದ ಹಿರಿಯರು ಹೇಳಿ ಅಂಥ ಗಂಭೀರ ಸಮ್ಮೇಳನಗಳಲ್ಲಿ ವಿಷಯ ಮಂಡನೆ ಹೇಗಿರಬೇಕೆಂದೂ ತಿಳಿಸಿದರು. ವೇದಿಕೆಯಿಂದ ಇಳಿದ ಮೇಲೆ ಉಳಿದ ಪ್ರಬಂಧಕಾರರು ಉತ್ತಮ ಪ್ರಬಂಧ ಮಂಡಿಸಿದ್ದ ವ್ಯಕ್ತಿಯನ್ನು ಅಭಿನಂದಿಸುವುದಿರಲಿ, ಸೌಜನ್ಯಕ್ಕೂ ಮಾತನಾಡಿಸದೇ ಆಜನ್ಮ ವೈರಿಯಂತೆ ಕಂಡು ಮುಖ ತಿರುಗಿಸಿಕೊಂಡು ಹೊರಟೇಹೋದರಂತೆ. ಅಧ್ಯಕ್ಷತೆ ವಹಿಸಿದ್ದವರಿಗೂ ಉತ್ತಮ ಪ್ರಬಂಧ ಮಂಡಿಸಿದ್ದವರಿಗೂ ಉಳಿದ ಪ್ರಬಂಧಕಾರರಿಗೂ ಮೊದಲು ಪರಿಚಯವೇ ಇರಲಿಲ್ಲ. ವೇದಿಕೆಯಲ್ಲೇ ಅವರೆಲ್ಲ ಮೊದಲಬಾರಿ ಮುಖ ನೋಡಿಕೊಂಡಿದ್ದು. ವಸ್ತುನಿಷ್ಠವಾಗಿ ಅಧ್ಯಕ್ಷರು ಹೇಳಿದ್ದರು ಅಷ್ಟೆ. ಆದರೆ ಅನಂತರ ಹೊರಗೆ ಖಾಸಗಿಯಾಗಿ ಉಳಿದ ಪ್ರಬಂಧಕಾರರು ಮಾತನಾಡುತ್ತ ಆ ಪ್ರಬಂಧ ಚೆನ್ನಾಗಿತ್ತು ಕಣ್ರೀ, ಅಲ್ಲೇ ಅವರಿಗೆ ಹೇಳಿದ್ದರೆ ಸುಮ್ಮನೇ ಅವರಿಗೆ ಸ್ಕೋಪು ಕೊಟ್ಟಂತಾಗುತ್ತದೆ ಎಂದು ಹೇಳಿಲ್ಲ ಅಷ್ಟೆ ಅಂದರಂತೆ! ಅದೇನೇ ಇರಲಿ. ಅಧ್ಯಕ್ಷತೆ ವಹಿಸಿದವರು ಹೇಳಿದ ಮಾತಿನಲ್ಲಿ ಹುರುಳಿರಲಿಲ್ಲ, ಅದೊಂದು ಕೆಟ್ಟ ಪ್ರಬಂಧವಾಗಿತ್ತು ಎಂದಾದರೆ ಅದರ ಚರ್ಚೆಗೆ ಅವಕಾಶವಿತ್ತು. ಆ ಕುರಿತು ಪ್ರಶ್ನೆಯೇ ಇರದಿದ್ದರೆ ಉತ್ತಮ ಪ್ರಬಂಧ ಮಂಡಿಸಿದವರನ್ನು ಅಭಿನಂದಿಸುವ ಔದಾರ್ಯವಾದರೂ ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ.