ವಿಷಯದ ವಿವರಗಳಿಗೆ ದಾಟಿರಿ

Archive for

28
ಜುಲೈ

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 1

ಪ್ರೊ.ರಾಜಾರಾಮ್ ಹೆಗಡೆ, ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ಣಾಟಕ ಶಬ್ದದ ವ್ಯುತ್ಪತ್ತಿ ಹಾಗೂ ಇತಿಹಾಸದ ಕುರಿತು ಏಕೀಕರಣ ಹೋರಾಟ ಕಾಲದಲ್ಲಿ ಶಂಬಾ ಜೋಶಿಯವರಾದಿಯಾಗಿ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಈ ಶಬ್ದದ ಉಲ್ಲೇಖವನ್ನು ಬಹುಶಃ ಕ್ರಿಸ್ತಶಕದ ಆದಿಯಿಂದ ವಿಭಿನ್ನ ಸಂಸ್ಕೃತ ಗ್ರಂಥಗಳಲ್ಲಿ ಗುರುತಿಸಬಹುದು. ಕನ್ನಡ ಶಾಸನಗಳಲ್ಲಿ ಈ ಶಬ್ದವು ರಾಷ್ಟ್ರಕೂಟರ ಕಾಲದಿಂದ ಕಾಣಿಸಿಕೊಳ್ಳುವುದಾಗಿ ತಿಳಿದುಬರುತ್ತದೆ. ತದನಂತರ ಇಲ್ಲಿಯ ರಾಜರನ್ನು ಕರ್ಣಾಟ ರಾಜರೆಂದೂ, ಸೈನ್ಯವನ್ನು ಕರ್ಣಾಟ ಬಲವೆಂದೂ ಸಂಸ್ಕೃತದಲ್ಲಿ ಕರೆದರೆ, ಕನ್ನಡ ನುಡಿ, ಕನ್ನಡನಾಡು ಎಂಬುದಾಗಿ ಇಲ್ಲಿಯ ಜನರು ರಾಷ್ಟ್ರಕೂಟರ ಕಾಲದಿಂದಲೇ ಕನ್ನಡ ಸಾಹಿತ್ಯದಲ್ಲಿ ಈ ಶಬ್ದವನ್ನು ಬಳಸಿದ್ದಾರೆ. ತಮಿಳರು ಇವರನ್ನು ಕನ್ನಡಿ, ಕನ್ನಡಿ ಅರಸರ್ ಎಂದು ಕರೆದಿರುವುದೂ ಕಂಡುಬರುತ್ತದೆ. ಈ ಕುರಿತು ಇಲ್ಲಿ ನೀಡಿದ ವಿವರಗಳಿಗೆ ಇನ್ನಷ್ಟು ಈಚೆಗಿನ ಹಾಗೂ ಮುಂದಿನ ವಿವರಗಳು ಸೇರಿ ಈ ಶಬ್ದ ಇನ್ನೂ ಪ್ರಾಚೀನವೆಂದು ಸಿದ್ಧವಾಗಲೂಬಹುದು. ಅದರಿಂದ ಕರ್ನಾಟಕವೊಂದು ಭೂಪ್ರದೇಶ, ಹಾಗೂ ಅದರಲ್ಲಿ ಆಡುತ್ತಿದ್ದ ಭಾಷೆ ಕನ್ನಡ ಎಂಬ ಸತ್ಯಗಳಿಗೇನೂ ಕುಂದುಬರಲಾರದೆಂಬ ತರ್ಕದಿಂದ ಮುಂದುವರಿಯೋಣ.

ನಮಗೆ ಇಲ್ಲಿರುವ ಸಮಸ್ಯೆ ಎಂದರೆ ಈ ಶಬ್ದವನ್ನು ಇಂದಿನ ನಮ್ಮ ವ್ಶೆಜ್ಞಾನಿಕ ಇತಿಹಾಸದ ಪರಿಕಲ್ಪನೆಗೆ ನಾವು ಹೇಗೆ ಒಗ್ಗಿಸಿದ್ದೇವೆ ಹಾಗೂ ಅದು ಆ ಕಲ್ಪನೆಗೆ ಎಷ್ಟರಮಟ್ಟಿಗೆ ಒಗ್ಗುತ್ತದೆ ಎಂಬ ವಿಚಾರ. ಕರ್ನಾಟಕದ ಏಕೀಕರಣ ಕಾಲದಲ್ಲಿ ಕರ್ನಾಟಕದ ಇತಿಹಾಸವನ್ನು ವ್ಶೆಜ್ಞಾನಿಕವಾಗಿ ರಚಿಸಲಾಯಿತು. ಈ ರಚನೆಯಲ್ಲಿ ಇದ್ದ ಪೂರ್ವಗೃಹೀತಗಳೆಂದರೆ: 1) ಕನ್ನಡ ಭಾಷೆಯ ಮೂಲಕ ಒಂದು ಪ್ರದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯ, ಅಂಥ ಪ್ರದೇಶವೇ ಕರ್ನಾಟಕವಾಗಿದೆ. ಕರ್ನಾಟಕ ಎಂಬುದು ಒಂದು ಪ್ರಕಾರದ ರಾಷ್ಟ್ರ ಕಲ್ಪನೆ ಹಾಗೂ ಅದು ಭಾರತ ಎಂಬ ರಾಷ್ಟ್ರದ ಅಂಗಭೂತವಾಗಿದೆ. 2) ಇದೊಂದು ಸಾಂಸ್ಕೃತಿಕ ಪ್ರಭೇದವಾಗಿದೆ ಹಾಗೂ ಇದು ಭಾಷೆಯನ್ನು ಆಧರಿಸಿದೆ, ಅಂದರೆ ಕನ್ನಡ ಬಾಷೆಯ ಮೂಲಕ ಕನ್ನಡ ಸಂಸ್ಸೃತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯ. 3) ಈಗ ಈ ಎರಡೂ ಸಂಗತಿಗಳನ್ನು ನಾವು ಮರೆತಿರುವುದರಿಂದ ಅವನ್ನು ಕಲ್ಪಿಸಿಕೊಳ್ಳುವ ಅವಸ್ಥೆ ಬಂದಿದೆ. ಆದರೆ ಅವು ಸತ್ಯವಾಗಿದ್ದಲ್ಲಿ ಅವು ಇತಿಹಾಸದಲ್ಲಿ ಸಿಕ್ಕಲೇಬೇಕು. 4) ಈ ಸಂಸ್ಕೃತಿ ಈ ಕರ್ನಾಟಕವೆಂಬ ಪ್ರದೇಶದ ಇತಿಹಾಸದ ಮೂಲಕ ಮೈದಳೆದಿರುವುದರಿಂದ ಇದರ ಇತಿಹಾಸವನ್ನು ತಿಳಿದುಕೊಂಡರೆ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. 5) ಹಾಗಾಗಿ ಕರ್ನಾಟಕದ ಇತಿಹಾಸದ ಕುರಿತ ತಿಳುವಳಿಕೆಯಿಂದ ಅದರ ಸಂಸ್ಕೃತಿಯ ಕುರಿತ ಜಾಗೃತಿ ಮೂಡುತ್ತದೆ. 6) ಈ ಜಾಗೃತಿ ಏಕೆ ಬೇಕೆಂದರೆ: ಈ ಭಾಷೆ, ಪ್ರದೇಶ, ಸಂಸ್ಕೃತಿ ಹಾಗೂ ಇತಿಹಾಸದ ಆಧಾರದ ಮೇಲೆ ಒಂದು ಪ್ರಭುತ್ವವನ್ನು ರಚಿಸುವುದು ಸಾಧ್ಯ ಹಾಗೂ ಅಂಥ ಪ್ರಭುತ್ವವು ಈ ಭಾಷೆಯನ್ನಾಡುವ ಜನರ ಸರ್ವತೋಮುಖ ಏಳ್ಗೆಗೆ ಮಾರ್ಗವಾಗಲು ಸಾಧ್ಯ. ಈ ರೀತಿ ಇಲ್ಲಿಯ ಜನರ ಏಳ್ಗೆಗೂ ಇವರ ಇತಿಹಾಸಕ್ಕೂ ಅವಿನಾಭಾವಿ ಸಂಬಂಧ ಇದೆ ಎಂದು ನಂಬಿಕೊಂಡು ಕರ್ನಾಟಕದ ಇತಿಹಾಸದ ರಚನೆಯಾಯಿತು. ಮತ್ತಷ್ಟು ಓದು »