ಎಲ್ಲಾ ಅನಿಷ್ಟಗಳಿಗೂ ಶನೀಶ್ಚರ ಕಾರಣನಲ್ಲ!
– ರಾಘವೇಂದ್ರ ಅಡಿಗ ಎಚ್ಚೆನ್.
ಮೊನ್ನೆ ತಾನೇ ಕೋಲಾರದಲ್ಲಿ ನಡೆದ ಘಟನೆ.
ಆ ಮನೆಯಲ್ಲಿನ ಎರಡರಿಂದ ಎರಡೂವರೆ ವರ್ಷಗಳಿರಬಹುದಾದ ಹೆಣ್ಣು ಮಗುವೊಂದು ಜೋರಾಗಿ ಅಳುತ್ತಲಿತ್ತು. ಮಗುವಿನ ತಾಯಿ ಒಳಗೆಲ್ಲೋ ಇದ್ದವಳು ಬಂದು ನೋಡಿದಾಗ ಮಗುವಿನ ಮೈಮೇಲೆಲ್ಲಾ ಉಗುರಿನಿಂದ ಪರಚಿದಂತೆ ಗಾಯಗಳಾಗಿದ್ದವು. ಆ ತಾಯಿಗೆ ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಯಿತು. ಮಗುವನ್ನು ಕೇಳಿದಳು.. “ಕಂದಾ ಏನಾಯ್ತು, ಯಾಕೆ ಅಳ್ತಾ ಇದ್ದೀಯಾ?”
ಮಗು ಮುಗ್ದತೆಯ ದನಿಯಲ್ಲಿ ಹೇಳಿತು, “ಅಮ್ಮಾ… ಅಣ್ಣ ಅಬ್ಬು ಮಾಡಿದ!”
ನಮ್ಮ ಸಾಮಾಜಿಕ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ದೂರದ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಗಳಂತಹಾ ಘಟನೆಗಳು ಇಂದು ದಿನನಿತ್ಯವೂ ನಮ್ಮ ರಾಜ್ಯದಲ್ಲಿಯೂ ನಡೆಯುತ್ತಿರುವುದು ಖಂಡಿತವಾಗಿಯೂ ಸುಸಂಸ್ಕೃತಿಗೆ ಹೆಸರಾದ ಕನ್ನಡಿಗರಿಗೆ ಶೋಭಿಸುವ ವಿಚಾರವಲ್ಲ.
ಇಷ್ಟಕ್ಕೂ ನಮ್ಮ ಯುವಜನತೆಯಲ್ಲಿ ಇಂತಹಾ ಕ್ರೌರ್ಯವು ಮೂಡುವಂತಾಗಲು ಮೂಲ ಪ್ರೇರಣೆ ಏನು? ಇಂದಿನ ಕುಟುಂಬದಲ್ಲಿಯೂ, ಮಾದ್ಯಮದಲ್ಲಿಯೂ, ಶಾಲಾ ಪರಿಸರದಲ್ಲಿಯೂ ಗಂಡಸಿಗೆ ಯಾವ ಬಗೆಯ ನೈತಿಕತೆಯ ಸಂದೇಶ ರವಾನಿಸಲಾಗುತ್ತಿದೆ? ಅತ್ಯಾಚಾರ ಪ್ರಕರಣಗಳು ವರದಿಯಾದಾಗ ಮೊದಲಿಗೆ ಎಲ್ಲರ ದೃಷ್ಟಿ ಬೀಳುವುದೂ ಸಹ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಮೇಲೆ. ಅದಾಕ್ಷಣದಲ್ಲಿ ಅವಳ ಮೇಲೆ ಅನುಕಂಪ, ಕರುಣೆಗಳು ತಾನಾಗಿ ಉಕ್ಕಿ ಹರಿಯುತ್ತದೆ. ಅದೇನೋ ಸರಿಯಾದುದೆ, ಆದರೆ ಇದರ ಫಲಿತವು ಮಾತ್ರ ಶೂನ್ಯ. ಕಾರಣವೇನೆಂದರೆ ಜನರು ಅದಾವುದನ್ನೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ! ಜನರ ಮನಸ್ಸು ಹೃದಯ ಅಷ್ಟೊಂದು ಕಠಿಣವಾಗಿದೆ, ಅಥವಾ ಅವರಿಗೆ ಅದರ ಬಗೆಗೆ ಚಿಂತಿಸಿ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವಷ್ಟು ಸಮಯವಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಸಮೂಹ ಮಾದ್ಯಮಗಳು ಅವರನ್ನು ಆ ಮನಸ್ಥಿತಿಗೆ ತಂದು ನಿಲ್ಲಿಸಿವೆ!