ಮತ್ತೆ ಮತ್ತೆ ಬರಲಿ ಮಗಳ ದಿನ!
– ತುರುವೇಕೆರೆ ಪ್ರಸಾದ್
ಪ್ರತಿವರ್ಷ ಜ.12, ಸೆ.4 ಮತ್ತು ಸೆಪ್ಟೆಂಬರ್ ಕೊನೆಯ ಭಾನುವಾರ ಹೀಗೆ ವಿವಿಧ ದಿನಗಳನ್ನು ವಿವಿಧ ಸಂಘಟನೆಗಳು ಮಗಳ ದಿನವನ್ನಾಗಿ ಆಚರಿಸುತ್ತವೆ. ಆದರೆ ಭಾರತೀಯ ಸಾರ್ವಜನಿಕ ಸಂಪರ್ಕ ಸಮಿತಿ ಅಂತರರಾಷ್ಟ್ರೀಯ ಖ್ಯಾತಿಯ ಭಾರತೀಯ ಖಗೋಳ ವಿಜ್ಞಾನಿ ದಿ.ಕಲ್ಪಾನಾಚಾವ್ಲಾ ಹುಟ್ಟಿದ ದಿನವನ್ನು (ಜುಲೈ 1) ಮಗಳ ದಿನವನ್ನಾಗಿ ಆಚರಿಸುವಂತೆ 2006ರಲ್ಲಿ ಕರೆನೀಡಿತ್ತು. ಆ ವರ್ಷ ಬಹಳಷ್ಟು ಸಂಘ ಸಂಸ್ಥೆಗಳು ಜುಲೈ ತಿಂಗಳು ಪೂರಾ ಕಲ್ಪನಾ ಚಾವ್ಲಾ ಅವರ ಜನ್ಮದಿನೋತ್ಸವವನ್ನು ಮಗಳ ದಿನದ ರೂಪದಲ್ಲಿ ಆಚರಿಸಿದ್ದ ವರದಿಗಳನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೆ. ಆದರೆ ಆ ನಂತರ ಆ ನಿಟ್ಟಿನಲ್ಲಿ ಯಾವುದೇ ಆಚರಣೆಗಳು ನಡೆದದ್ದು ನನ್ನ ಗಮನಕ್ಕೆ ಬಂದಿಲ್ಲ. ಇದಕ್ಕೆ ಆಡಳಿತಗಳಾಗಲೀ, ಸ್ಥಳೀಯ ಸಂಘ-ಸಂಸ್ಥೆಗಳಾಗಲೀ ಯಾವುದೇ ಮಹತ್ವ ನೀಡಿಲ್ಲ. ಹಾಗಾಗಿ ಈ ತಿಂಗಳಲ್ಲಿ ಮತ್ತೊಮ್ಮೆ ಕಲ್ಪನಾ ಚಾವ್ಲಾ ನೆನಪು ಮೂಡಿಸಿ ಕೋಟಿ ಕೋಟಿ ಹೆಣ್ಣುಮಕ್ಕಳಿಗೆ ಆಕೆ ಸ್ಪೂರ್ತಿಯ ಅನುಕರಣೀಯ ಮಾದರಿ ಆಗುವಂತೆ ಮಾಡಬೇಕಿದೆ.
ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣ ಕುರಿತ ನೂರಾರು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. ಮಹಿಳಾ ಆಯೋಗಗಳು ರಚನೆಯಾಗಿವೆ. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆಯೇ ಕಾನೂನುಬದ್ಧ ಆಸ್ತಿ ಹಕ್ಕು ನೀಡಲಾಗಿದೆ. ಆದರೂ ಇಂದಿಗೂ ಹೆಣ್ಣು ಮಕ್ಕಳ ಸಾಮಾಜಿಕ ಹಾಗೂ ಕೌಟುಂಬಿಕ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಎಂತಹ ಕಠಿಣ ಕಾನೂನು ಮಾಡಿದರೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಒಂದು ವರದಿ ಪ್ರಕಾರ ಭಾರತದಲ್ಲಿ ಪ್ರತಿ 22 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದೆ. ಎಷ್ಟೋ ಸಾವಿರಾರು ಪ್ರಕರಣಗಳು ದಾಖಲೆಯೇ ಆಗದೆ ಅರೋಪಿಗಳು ಕಾನೂನಿನ ಕೈಯ್ಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಂತಸ್ತು ಗೌರವದ ಹೆಸರಿನಲ್ಲಿ ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಮಹಿಳೆಯರಿಗೆ ರಾಜಕೀಯ ಶಕ್ತಿ ದೊರಕಿಸಿಕೊಡುವ ಶೇ.33 ಮೀಸಲಾತಿ ಮಸೂದೆ ವರುಷಗಳಿಂದ ನೆನೆಗುದಿಗೆ ಬಿದ್ದಿದೆ. ಏನೆಲ್ಲಾ ಹೋರಾಟದ ನಡುವೆಯೂ ಪುರುಷ ಪ್ರಧಾನ ವ್ಯವಸ್ಥೆಯ ಕಬಂಧ ಬಾಹುಗಳಿಂದ ಲಕ್ಷಾಂತರ ಮಹಿಳೆಯರು ಹೊರಬರಲಾಗಿಲ್ಲ. ಪರಿಪೂರ್ಣ ಸ್ವಾತಂತ್ಯ್ರದ ಬೆಳಕು ಕಾಣಲಾಗಿಲ್ಲ ಎಂಬುದೇ ದೊಡ್ಡ ದುರಂತ.
ಇದಕ್ಕೆಲ್ಲಾ ಕಾರಣ ಪರಂಪರಾಗತವಾಗಿ ಬಂದಿರುವ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಲಿಂಗತ್ವದ ಪರಿಕಲ್ಪನೆ. ನಮ್ಮ ವಿದ್ಯಾವಂತ ಸಮಾಜವೂ ಸಹ ಈ ಲಿಂಗತ್ವದ ಸಾಂಪ್ರದಾಯಿಕ ಪರಿಕಲ್ಪನೆಯಿಂದ ಹೊರಬರಲಾಗದೆ ತೊಳಲಾಡುತ್ತಿದೆ. ಖ್ಯಾತ ಸ್ತ್ರೀವಾದಿ ಆನ್ ಓಕ್ಲೆ ಪ್ರಕಾರ ಲಿಂಗ ಮತ್ತು ಲಿಂಗತ್ವದ ನಡುವಿನ ಸಂಬಂಧ ತೀರಾ ಅಸಹಜವಾದುದು. ಲಿಂಗತ್ವಕ್ಕೂ ಸಂಸ್ಕøತಿಗೂ ತಳುಕು ಹಾಕಿ ಅದನ್ನು ಸಂಪ್ರದಾಯದ ಹಿನ್ನಲೆಯಲ್ಲಿ ವರ್ಗೀಕರಿಸಿ ಸಾಂಸ್ಕøತಿಕ ಪರಿಭಾಷೆಯ ಚೌಕಟ್ಟಿನಲ್ಲಿ ತಾರತಮ್ಯದ ಜವಾಬ್ಧಾರಿಯನ್ನು ಆರೋಪಿಸಲಾಗಿದೆ. ಈ ಕಲ್ಪನೆಯ ಭಾಗವೇ ಗಂಡ್ತನ ಮತ್ತು ಹೆಣ್ತನ. ಪ್ರತಿಯೊಂದು ಸಮಾಜವೂ ವ್ಯವಸ್ಥಿತವಾಗಿ ಗಂಡು ಹೆಣ್ಣಿನಲ್ಲಿ ಈ ಲಿಂಗತ್ವದ ಗುಣಗಳನ್ನು ಹೇರಿ ಅವರ ಹಕ್ಕುಗಳು, ನೀರೀಕ್ಷೆಗಳು ಜವಾಬ್ಧಾರಿಗಳು ಎಲ್ಲದರಲ್ಲೂ ಶ್ರೇಷ್ಠ,ಕನಿಷ್ಟ ಎಂಬ ಭಾವನೆ ಮೂಡುವಂತೆ ಪರಿವರ್ತಿಸಲಾಗುತ್ತದೆ. ಇದಕ್ಕೇ ಸಂಸ್ಕøತಿ ಎಂಬ ಹೆಸರಿಟ್ಟು ಅವರ ವರ್ತನೆಗಳನ್ನು ಈ ಸಾಂಸ್ಕøತಿಕ ಮಾನದಂಡದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಸಾಂಸ್ಕøತಿಕ ಚಹರೆಗಳು,ಮಾನದಂಡಗಳು, ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಹಾಗಾಗಿ ಸಮಾಜ ಲಿಂಗದ ಸ್ಥಿರತೆಯನ್ನು ಒಪ್ಪಿಕೊಂಡಂತೆಯೇ ಲಿಂಗತ್ವದ ಬದಲಾಗುವ ಚಲನಶೀಲ ತಾರತಮ್ಯದ ಸ್ವರೂಪಗಳನ್ನೂ ಒಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ.