ವಿಷಯದ ವಿವರಗಳಿಗೆ ದಾಟಿರಿ

Archive for

18
ಜುಲೈ

ಐನೂರಾತೊಂಬತ್ತೇಳು ಅಡಿ ಎತ್ತರದ ಕನಸು ಮತ್ತದರ ಅಗತ್ಯತೆ:

– ರಾಘವೇಂದ್ರ ಸುಬ್ರಹ್ಮಣ್ಯ

Ek Bharath Shresht Bharathಮಾನವರು ಅನಾದಿಕಾಲದಿಂದಲೂ ದೇವರು, ಪ್ರಾಣಿಗಳು ಹಾಗೂ ಇನ್ನಿತರ ನಿರ್ಜೀವಿ ವಸ್ತುಗಳ ವಿಗ್ರಹ ಹಾಗೂ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದಾರೆ. 1939ರಲ್ಲಿ ಜರ್ಮನಿಯ ಗುಹೆಯೊಂದರಲ್ಲಿ ಪತ್ತೆಯಾದ ಜಗತ್ತಿನ ಅತ್ಯಂತ ಪುರಾತನವಾದ ‘ಸಿಂಹಮಾನವ (Lion Man)’ನ ವಿಗ್ರಹ ಸರಿಸುಮಾರು ನಲವತ್ತು ಸಾವಿರ ವರ್ಷಗಳಷ್ಟು ಹಳೆಯದು. ವಿಗ್ರಹ ಹಾಗೂ ಪ್ರತಿಮೆಗಳ ಬಗೆಗಿನ ನಮ್ಮ ಒಲವು ಎಷ್ಟು ಹಳೆಯದು ಎಂದು ಇದರಿಂದಲೇ ತಿಳಿದುಬರುತ್ತದೆ. ಅಂದಿನಿಂದಲೂ ನಾವು ಹಲವಾರು ಕಾರಣಗಳಿಗಾಗಿ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದೇವೆ.

ನಾಗರೀಕತೆ ಬೆಳೆದಂತೆ, ಮುಂದುವರೆದಂತೆ ಮಾನವರು ದೇವರಿಗೆ ಮಾತ್ರವಲ್ಲದೆ, ಕೆಲವೊಂದು ಐತಿಹಾಸಿಕ ಘಟನೆಗಳು (ಯುದ್ಧದ ಗೆಲುವು, ಸ್ವಾಂತತ್ರ್ಯ), ಗಣ್ಯವ್ಯಕ್ತಿಗಳು (ಚಿಂತಕರು, ಅತೀಂದ್ರೀಯ ಶಕ್ತಿಯುಳ್ಳವರು) ಹಾಗೂ ಸ್ಮರಣೀಯ ಪ್ರಾಣಿ (ಸ್ಫಿಂಕ್ಸ್, ಬ್ಯಾರಿ ದ ಸೈಂಟ್ ಬರ್ನಾರ್ಡ್)ಗಳ ನೆನಪು ದೀರ್ಘಕಾಲ ಉಳಿಯಲು, ಹಾಗೂ ಆ ನೆನಪುಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಸಹ ಶಿಲ್ಪಕಲಾಕೃತಿಗಳು ಒಂದು ಒಳ್ಳೆಯ ಮಾರ್ಗ ಎಂಬುದನ್ನು ಅರಿತುಕೊಂಡರು. ಆ ಕಾರಣಕ್ಕಾಗಿಯೇ ಝೀಯಸ್ ನ ಮೂರ್ತಿ, ಲಿಬರ್ಟಿ ಪ್ರತಿಮೆ, ಸಾಂಚೀ ಸ್ತೂಪ, ಕಮಕೂರದ ಬುದ್ದ, ಕೋಪನ್ ಹೇಗನ್ನಿನ ಮತ್ಯಕನ್ಯೆ, ರೀಯೋದ ವಿಮೋಚಕ ಕ್ರಿಸ್ತ (ಇತ್ತೀಚಿನ ಉದಾಹರಣೆಯಲ್ಲಿ ಮಾಯಾವತಿ ಹಾಗೂ ಆಕೆಯ ಆನೆಗಳು ) ಮುಂತಾದುವು ಸೃಷ್ಟಿಸಲ್ಪಟ್ಟವು. ಮುಂದೆ ಲೋಹಯುಗದಲ್ಲಿ ಈ ಕಾರ್ಯಕ್ಕಾಗಿ ಕಲ್ಲಿನಬದಲು ಲೋಹವೂ ಉಪಯೋಗವಾಯಿತು. ನಾಗರೀಕತೆಯ ಮಟ್ಟ ಹಾಗೂ ಗಣ್ಯತೆಯ ಮಟ್ಟಕ್ಕನುಗುಣವಾಗಿ ಕಬ್ಬಿಣ, ಕಂಚು, ಉಕ್ಕು, ಹಾಗೂ ಚಿನ್ನ ಈ ಕೆಲಸಕ್ಕಾಗಿ ಬಳಕೆಯಾಗಲಾರಂಭಿಸಿದವು. ಪಿರಮಿಡ್ಡುಗಳಲ್ಲಿ ಫೆರ್ಹೋಗಳ ಪ್ರತಿಮೆಗಳು ಚಿನ್ನದಲ್ಲೂ, ಹಾಗೂ ಸೇವಕರು ಹಾಗೂ ಕಾವಲಿಗಾರರ ಪ್ರತಿಮೆಗಳು ಕಬ್ಬಿಣ/ಕಂಚಿನಲ್ಲಿ ಇರುವುದನ್ನು ನೀವು ಗಮನಿಸರಬಹುದು. ಹಲವಾರು ಬಾರಿ ನಾಗರೀಕತೆಯ ಚಿಂತನೆಗಳನ್ನೂ ಕೂಡ ಶಿಲ್ಪಗಳಲ್ಲಿ ಬೆಸೆಯಲು ಪ್ರಯತ್ನಗಳು ನಡೆದವು. ಉದಾಹರಣೆಗೆ, ಈಸ್ಟರ್ ದ್ವೀಪದಲ್ಲಿರುವ ನೂರಾರು ಮಾನವರೂಪಿ ನಿಗೂಡ ಶಿಲ್ಪಗಳು ಏನನ್ನೋ ಹೇಳಲು ಬಯಸುತ್ತಿವೆ ಎಂದು ನೋಡುಗರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ಇತಿಹಾಸದುದ್ದಕ್ಕೂ ಒಂದು ನಗರದ, ದೇಶದ, ಹಾಗೂ ನಾಗರೀಕತೆಯ ಔನ್ನತ್ಯವನ್ನು ಪ್ರತಿಮೆ ಹಾಗೂ ಕಲಾಕೃತಿಗಳು ಸಾರಲು ಪ್ರಯತ್ನಿಸಿವೆ ಎಂದರೆ ತಪ್ಪೇನಿಲ್ಲ. ಹತ್ತಾರುಸಾವಿರ ವರ್ಷಗಳಿಂದ ಮಾನವರು, ನಾಗರೀಕತೆಗಳು, ದೇಶಗಳು ಹಾಗೂ ಪ್ರದೇಶಗಳು ತಮ್ಮ ಅಸ್ಮಿತೆಯನ್ನು ಕೆಲ ಪ್ರತಿಮೆಗಳ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿವೆ.

Read more »