ನಾಡು-ನುಡಿ : ಮರುಚಿಂತನೆ – ಹಿಂದೂ ಶಬ್ದಕ್ಕೆ ನಕಾರಾತ್ಮಕ ಅರ್ಥವೇಕೆ?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ದಲಿತರನ್ನು ಹಿಂದೂ ಸಮಾಜದ ಒಳಗೆ ತರಬೇಕೆಂಬ ಪ್ರತಿಪಾದನೆ ಕಳೆದ ನೂರಾರು ವರ್ಷಗಳಿಂದ ನಡೆದು ಬಂದಿದೆ. ಹಿಂದೂ ಸಮಾಜದ ಐಕ್ಯತೆಯನ್ನು ಸಾಧಿಸಬೇಕೆನ್ನುವ ರಾಷ್ಟ್ರೀಯ ನಾಯಕರೆಲ್ಲರೂ ಇಂಥ ಕಾರ್ಯಕ್ರಮಗಳ ಮಹತ್ವವನ್ನು ಒಪ್ಪಿದ್ದಾರೆ. ಮತ್ತೊಂದೆಡೆ ಈ ಕಾರ್ಯಕ್ರಮವನ್ನು ಒಂದು ಹುನ್ನಾರವೆಂಬಂತೆ ನೋಡುವ ಹಾಗೂ ಆ ಕಾರಣದಿಂದ ಅದನ್ನು ತಿರಸ್ಕರಿಸುವ ಪ್ರಯತ್ನಗಳೂ ನೂರಾರು ವರ್ಷಗಳಿಂದ ನಡೆದಿವೆ. ಹುನ್ನಾರವೇಕೆಂದರೆ, ಜಾತಿ ವ್ಯವಸ್ಥೆಯ ಹಿಂದೂ ಸಮಾಜದೊಳಗೆ ದಲಿತರನ್ನು ಮತ್ತೆ ಸೇರಿಸಿ ಶೋಷಿಸುವ ಉದ್ದೇಶದಿಂದ ಸಂಪ್ರದಾಯಸ್ಥ ಹಿಂದೂಗಳು ಈ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ ಎಂಬ ಆರೋಪ. ಆದರೆ ಜಾತಿ ವ್ಯವಸ್ಥೆಯು ಹಿಂದೂ ಸಮಾಜದ ಲಕ್ಷಣವಾದರೆ, ಹಾಗೂ ದಲಿತರು ಹಿಂದೂ ಸಮಾಜದೊಳಗೆ ಇಲ್ಲ ಅಂತಾದರೆ ಅವರು ಇದುವರೆಗೆ ಜಾತಿ ವ್ಯವಸ್ಥೆಗೆ ಒಳಪಟ್ಟಿಲ್ಲ ಎಂದು ಇಂಗಿತವೆ? ಅಥವಾ ಜಾತಿವ್ಯವಸ್ಥೆಯ ಹೊರಗಿದ್ದೂ ಅವರನ್ನು ಸಾವಿರಾರು ವರ್ಷಗಳ ವರೆಗೆ ಶೋಷಿಸಲು ಹಿಂದೂಗಳಿಗೆ ಸಾಧ್ಯವಾಗಿದ್ದೇ ಹೌದಾದಲ್ಲಿ ಆ ಕೆಲಸವನ್ನೇ ಮಾಡಲು ಹಿಂದೂ ಸಮಾಜದೊಳಗೆ ಅವರನ್ನು ಹೊಸತಾಗಿ ಸೇರಿಸಿಕೊಳ್ಳುವ ಅಗತ್ಯವೇಕೆ? ಒಟ್ಟಿನಲ್ಲಿ ಇದು ಒಂದು ಒಗಟಾಗಿ ಬಿಡುತ್ತದೆ.
ಈ ಒಗಟು ಏಕೆ ಹುಟ್ಟುತ್ತದೆಯೆಂದರೆ ನಮ್ಮ ಸಂಸ್ಕೃತಿಯ ಇತಿಹಾಸವನ್ನು ಕಟ್ಟುವಾಗ ಪರಸ್ಪರ ಸುಸಂಬದ್ಧವಲ್ಲದ ಅನೇಕ ವಿವರಗಳನ್ನು ಒಟ್ಟಿಗೆ ತರಲಾಗಿದೆ. ಅವುಗಳಲ್ಲಿ ಒಂದು ಹಿಂದೂಯಿಸಂ ಎಂಬ ರಿಲಿಜನ್ನಿನ ಕಲ್ಪನೆ, ಮತ್ತೊಂದು ಆರ್ಯರ ಆಕ್ರಮಣದ ಕಥೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನಿದೆ, ಅದಕ್ಕೆ ಬ್ರಾಹ್ಮಣರು ಪುರೋಹಿತಶಾಹಿಗಳು, ಇದರಲ್ಲಿ ಮೂರ್ತಿಪೂಜೆ ಜಾತಿ ವ್ಯವಸ್ಥೆಗಳಂಥ ಅನಿಷ್ಟ ಆಚರಣೆಗಳಿವೆ ಎಂಬ ಕಥೆ 19ನೆಯ ಶತಮಾನದಲ್ಲೇ ಗಟ್ಟಿಯಾಯಿತು. ಪಾಶ್ಚಾತ್ಯರು ಕ್ಯಾಥೋಲಿಕ್ ಚರ್ಚಿನಂತೇ ಇದೊಂದು ಭ್ರಷ್ಟವಾದ ರಿಲಿಜನ್ನು ಎಂದು ಭಾವಿಸಿದ್ದರು. ಆ ಸಂದರ್ಭದಲ್ಲಿ ರಾಜಾ ರಾಮಮೋಹನರಾಯರಂಥವರು ಹಿಂದೂಯಿಸಂ ಮೂಲತಃ ಉದಾತ್ತವಾದ ರಿಲಿಜನ್ನಾಗಿದೆ ಎಂಬ ನಿರೂಪಣೆಯನ್ನು ಗಟ್ಟಿಮಾಡತೊಡಗಿದರು.ಈ ನಿರೂಪಣೆಗೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಏಕದೇವತಾ ತತ್ವವೇ ಆಧಾರವಾಯಿತು.ಅಂದರೆ ಹಿಂದೂಯಿಸಂನ ಶುದ್ಧ ರೂಪವು ವೇದಾಂತದಲ್ಲಿ ಇದೆ ಎಂದಾಯಿತು.
ಮಾನ ಕಳೆದುಕೊಂಡ ಸನ್ಮಾನಗಳು
– ರೋಹಿತ್ ಚಕ್ರತೀರ್ಥ
ನಾನು ಮಾಡಿದ ಕೆಲಸ ಸರಿಯಿದೆ ಎಂದು ಒಪ್ಪಿದರೆ ಸಾಕು. ಅದೇ ನನಗೆ ಬಹುದೊಡ್ಡ ಪ್ರಶಸ್ತಿ. ಬೇರೆ ಬಹುಮಾನ ಏಕೆ? – ಎಂದ ಗ್ರೆಗೊರಿ ಪೆರೆಲ್ಮನ್. ಅವನ ಕೆಲಸದ ಔನ್ನತ್ಯವನ್ನು ಮೆಚ್ಚಿ ಒಂದು ಮಿಲಿಯ ಡಾಲರ್‍ಗಳನ್ನು (ಅಂದರೆ, ಆರು ಕೋಟಿ ರುಪಾಯಿ!) ಹಿಡಿದು ನಿಂತಿದ್ದವರಿಗೆ ಬಾಗಿಲು ಕೂಡ ತೆರೆಯಲಿಲ್ಲ ಆ ಮಹರಾಯ! ನಿಮ್ಮನ್ನು ಒಳಬಿಟ್ಟೆನೆಂದರೆ, ಹಿಂದೆಯೇ ಪತ್ರಕರ್ತರು ತೂರಿಕೊಂಡು ಒಳಸೇರುತ್ತಾರೆ. ನೂರೆಂಟು ಪ್ರಶ್ನೆ ಕೇಳಿ ತಲೆ ತಿನ್ನುತ್ತಾರೆ. ಇನ್ನು ಪತ್ರಿಕೆಗಳಲ್ಲಿ, ಟಿವಿಯಲ್ಲಿ ನನ್ನ ಮುಖ ಕಂಡರೆ ಸಾಕು, ಬೀದಿಯಲ್ಲಿ ಆರಾಮಾಗಿ ನಡೆದುಹೋಗಲಿಕ್ಕೂ ತೊಂದರೆ. ಪ್ರಶಸ್ತಿ ಬಂತು ಅಂತ ಕೈಗೊಂದು-ಕಾಲಿಗೊಂದು ಗೆಳೆಯರು, ನೆಂಟರು ಹುಟ್ಟಿಕೊಳ್ಳುತ್ತಾರೆ. ಇದೆಲ್ಲ ಬೇಕಾ? ಪ್ರಶಸ್ತಿಯೂ ಬೇಡ, ಅದು ತರುವ ನೂರೆಂಟು ತಾಪತ್ರಯಗಳೂ ಬೇಡ ಎಂದು ಎಲ್ಲರನ್ನೂ ಗೇಟ್‍ಪಾಸ್ ಮಾಡಿದ್ದ ಜಗತ್ತಿನ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬನಾದ ಪೆರೆಲ್ಮನ್.
“ದುಡ್ಡೇ ಎಲ್ಲ ತೊಂದರೆಗಳಿಗೆ ಬೇರು” ಎಂದು ಸ್ವಾಮೀಜಿಗಳು ಹೇಳಿದಾಗ ಭಕ್ತರೆಲ್ಲ ಒಂದೇ ಧ್ವನಿಯಲ್ಲಿ “ನಮಗೆ ಆ ಬೇರು ಬೇಕು!” ಎಂದು ಕೂಗಿದ್ದರಂತೆ. ಬಹುಶಃ ಈಗ, “ಪ್ರಶಸ್ತಿಯೇ ಎಲ್ಲ ತಾಪತ್ರಯಗಳಿಗೂ ಮೂಲ” ಎಂದು ಹೇಳಿದರೆ, ಸರಕಾರ ಕೊಟ್ಟ ಗೆಡ್ಡೆಗೆಣಸುಗಳಲ್ಲೇ ಉಸಿರು ಹಿಡಿದುಕೊಂಡಿರುವ ಬುದ್ಧಿಜೀವಿಗಳು ನಮಗೂ ಆ ಕಂದಮೂಲ ಬೇಕು ಎಂದು ಪಟ್ಟುಹಿಡಿದಾರು. ಅರ್ಹರನ್ನು ಅನ್ಯರು ಗುರುತಿಸಿ ಪ್ರಶಸ್ತಿಯ ಕಿರೀಟ ತೊಡಿಸಿ ಶಾಲುಹೊದಿಸಿ ಒಂದಷ್ಟು ದುಡ್ಡೋ ಸ್ಮರಣಿಕೆಯೋ ಕೈಯಲ್ಲಿಟ್ಟು ಕೃತಾರ್ಥರಾಗುವ ಕಾಲ ಒಂದಿತ್ತು. ಆದರೆ, ಈಗ ಪ್ರಶಸ್ತಿಗಳನ್ನು ಕೂಡ ಬಿಕರಿಗಿಡಲಾಗಿದೆ. ರಾಜ್ಯ ಅಥವಾ ಕೇಂದ್ರದಲ್ಲಿ ಸರಕಾರ ಬದಲಾದ ಕೂಡಲೇ, ಆಯಾಯಾ ಪಕ್ಷಗಳನ್ನು ಬೆಂಬಲಿಸುವ ಪ್ರತಿಭಾವಂತರು ಚುರುಕಾಗುತ್ತಾರೆ. ಇಷ್ಟು ವರ್ಷ ಆಗದೇ ನೆನೆಗುದಿಗೆ ಬಿದ್ದ ಕೆಲಸವನ್ನು ಈಗ ಹೇಗಾದರೂ ಮಾಡಿಸಿಕೊಳ್ಳಬೇಕು ಎಂದು ಸರಕಾರವೆಂಬ ವೃಂದಾವನಕ್ಕೆ ಸುತ್ತುಬರುತ್ತಾರೆ. ಕಾಯಿ ಒಡೆಯುತ್ತಾರೆ. ಹಣ್ಣು ನೈವೇದ್ಯ ಸಮರ್ಪಣೆ ಮಾಡುತ್ತಾರೆ. ಅಷ್ಟಶತೋತ್ತರ ನಾಮಾವಳಿಯೂ ನಡೆಯುತ್ತದೆ. ಇಷ್ಟೆಲ್ಲ ಪಾಡುಪಟ್ಟ ಭಕ್ತನನ್ನು ಸಂಪ್ರೀತಗೊಳಿಸಲು ಸರಕಾರ ಅವನಲ್ಲಿ ಯಾವ ಪ್ರಶಸ್ತಿ ಬೇಕು ವತ್ಸಾ ಎಂದು ಕೇಳಲೇಬೇಕಾದ ಪರಿಸ್ಥಿತಿ ಬರುತ್ತದೆ. ಪೂಸಿ ಹೊಡೆದು ಗಾಳಿ ಖಾಲಿಯಾದವರು ಯಾವುದಾದರೂ ನಡೆದೀತು ಎಂಬ ಹಂತಕ್ಕೆ ಬಂದಿರುತ್ತಾರೆ. ಆದರೆ, ಕೆಲವು ಜಗಜಟ್ಟಿಗಳು ಇಂಥದ್ದೇ ಬೇಕು, ಅದು ಕೊಡೋದಿಲ್ಲವಾದರೆ ಯಾವುದೂ ಬೇಡ ಎಂದು ರಚ್ಚೆ ಹಿಡಿಯುತ್ತಾರೆ. ಇಂತಹ ಕಂದಮ್ಮಗಳನ್ನು ರಮಿಸಿ ಮುದ್ದಿಸಿ ಹಾಲುಕೊಟ್ಟು ತಣ್ಣಗಾಗಿಸುವ ಹೊತ್ತಿಗೆ ಕೆಲವು ಸಲ ಸರಕಾರಕ್ಕೆ ಹೆಣ ಬಿತ್ತೆನ್ನಿಸುವಷ್ಟು ಸುಸ್ತು ಹೊಡೆಯುವುದೂ ಉಂಟು. ಆದರೇನು ಮಾಡೋಣ? ಸರಕಾರಕ್ಕೆ ತನ್ನ ಪರಾಕುಪಂಪು ಒತ್ತಿಸಿಕೊಳ್ಳಲು ಈ ವಂಧಿಮಾಗಧರ ಗಡಣ ಬೇಕು. ಮತ್ತು ಈ ಗಡಣಕ್ಕೆ ತನ್ನಗಂಟಲನ್ನು ಸದಾ ತೇವವಾಗಿಟ್ಟುಕೊಳ್ಳಲು ನೆರವು ನೀಡುವ ರಾಜಾಶ್ರಯ ಬೇಕು. ಇದು ಸಾರ್ವಜನಿಕ ತೆರಿಗೆ ದುಡ್ಡಿನ ಕೃಪಾಪೋಷಿತ ಪರಸ್ಪರ ಸಹಕಾರ ಸಂಘ.
ರೈತರ ಆತ್ಮಹತ್ಯೆ, ಹೀಗೊಂದು ಚಿಂತನೆ
– ಭರತ್ ಎನ್ ಶಾಸ್ತ್ರಿ
ಆತ್ಮಹತ್ಯೆಗಳು ಘೋರನಿರ್ಧಾರಗಳು ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ಸಾವು ತರುವ ಶೂನ್ಯತೆ, ಮತ್ತು ಬಂಧುಮಿತ್ರರಿಗೆ ಅಥವಾ ಪ್ರೀತಿಪಾತ್ರರಿಗೆ ತರುವ ಯಾತನೆ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ಆತ್ಮಹತ್ಯೆ ತರುವ ಸಂಕಟ ಮಾತ್ರ ಹಲವು ಆಯಾಮಗಳದ್ದು.
ಆದರೆ, ಭಾರತದಲ್ಲಿ ರೈತರ ಆತ್ಮಹತ್ಯೆಗಳು ವಿಚಿತ್ರಕಾರಣಗಳಿಂದ ಮಾಧ್ಯಮಗಳ ದೊಡ್ಡಗಂಟಲಿನಿಂದ ಜನರ ಗಮನ ಸೆಳೆಯುತ್ತವೆ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕಲು ನಡೆಸಿದ ವೈಜ್ಞಾನಿಕ ಮತ್ತು ಭಾವೋದ್ವೇಗರಹಿತ ಅಧ್ಯಯನಗಳು ಒಂದೋ ಅವಗಣಿಸಲ್ಪಟ್ಟಿವೆ, ಅಥವಾ ರಾಜಕೀಯ ಕಾರಣಗಳಿಂದ ಆಳುವವರ ಮತ್ತು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿವೆ.
ಹೆಚ್ಚುತ್ತಿರುವ ಜನಸಂಖ್ಯೆ, ದುಡಿಯುವ ಯುವಜನತೆಯ ಕೈಗೆ ಉದ್ಯೋಗಗಳ ಅಭಾವ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಕುಸಿಯುತ್ತಿರುವ ಮಹಾನಗರ/ ನಗರಗಳು ಇವೆಲ್ಲ ಸಮಸ್ಯೆಯ ಜತೆ ಸಕ್ಷಮವಲ್ಲದ ಕೃಷಿಕ್ಷೇತ್ರ ಕೂಡ ಭಾರತದ ಹಿಂದುಳಿಕೆಯ ಕಾರಣವಾಗಿದೆ.
ಆತ್ಮಹತ್ಯೆಗಳ ಬಗ್ಗೆ ಭಾರತದ ಒಟ್ಟೂ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ಮೂರುದಶಕಗಳ ಹಿಂದೆ ಸುಮಾರು ೪೦,೦೦೦(ಒಂದು ವರ್ಷಕ್ಕೆ) ದಷ್ಟಿದ್ದ ಆತ್ಮಹತ್ಯೆಗಳ ಸಂಖ್ಯೆ ೨೦೦೯ ಕ್ಕೆ ೧೨೭,೧೫೧ ಕ್ಕೆ ಏರಿತು. ಅದೇ ೨೦೧೩ ರಲ್ಲಿ ಒಟ್ಟು ಆತ್ಮಹತ್ಯೆಗಳ ಸಂಖ್ಯೆ ೧,೩೪,೭೯೯! ಈ ಐದು ವರ್ಷಗಳಲ್ಲಿ ಕರ್ನಾಟಕದ ಕೊಡುಗೆ ಹತ್ತಿರ ಹತ್ತಿರ ೮.೪%. ಕರ್ನಾಟಕದಲ್ಲಿ ೨೦೦೯ ರ ವರ್ಷದಲ್ಲಿ ಸಂಭವಿಸಿದ ಆತ್ಮಹತ್ಯೆಗಳು ಸುಮಾರು ೧೦,೬೮೦. ಇದರಲ್ಲಿ ರೈತರ ಸಂಖ್ಯೆ ೩೩೭, ಎಂದರೆ ೩.೧೫%. ಇದರ ಅರ್ಥ ಪ್ರತಿ ೩೦ ಆತ್ಮಹತ್ಯೆಗಳಲ್ಲಿ ಒಬ್ಬ ರೈತನ ಜೀವನಷ್ಟವಾಗಿದೆ. ಇನ್ನುಳಿದವರ ವೃತ್ತಿ ಏನಿತ್ತು? ಸೋಜಿಗವೆಂದರೆ ರೈತರ ಆತ್ಮಹತ್ಯೆಯ ಬಗ್ಗೆ ಅಂತರ್ಜಾಲದಲ್ಲಿ ಸುಲಭವಾಗಿ ಸಿಕ್ಕುವ ಮಾಹಿತಿ ಮಿಕ್ಕ ವೃತ್ತಿಯಲ್ಲಿರುವವರ ಬಗ್ಗೆ ಸಿಗುವುದಿಲ್ಲ. ಬೆಂಗಳೂರನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಸಾಫ್ಟ್ ವೇರ್ ಉದ್ಯಮದಲ್ಲಿ ಮಿತಿಮೀರಿದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಎಷ್ಟು ಎಂದು ನೀವು ಹುಡುಕಾಡಿದರೆ ಅಂಕಿ-ಅಂಶಗಳನ್ನು ಪಡೆಯಲು ಕಷ್ಟ ಪಡಬೇಕಾಗುತ್ತದೆ!
ಯತ್ರ ನಾರ್ಯಸ್ತು ಪೂಜ್ಯಂತೇ
– ಮಯೂರಲಕ್ಷ್ಮಿ,ಮೈಸೂರು
ನೂರಾರು ವರ್ಷಗಳಿಂದ ಭಾರತವನ್ನು ಎಷ್ಟೇ ಪ್ರಯತ್ನಿಸಿದರೂ ವಶಪಡಿಸಿಕೊಳ್ಳಲಾಗದ ಪಾಶ್ಚಾತ್ಯರು ಹತಾಶರಾಗಿ ತಮ್ಮ ಪ್ರಯತ್ನಗಳನ್ನು ಕೈಬಿಡದಿದ್ದರೂ ಅಸಹಾಯಕರಾಗಿ ಮತ್ತೆ ಮತ್ತೆ ಭಾರತದ ಮೇಲೆ ಬೇರೆ ಬೇರೆ ರೀತಿಯಲ್ಲಿ ಆಕ್ರಮಣಗಳಲ್ಲಿ ತೊಡಗಿದರು. ಸ್ವತಂತ್ರ ಬಂದ ಹೊಸದರಲ್ಲಿ ಆರ್ಥಿಕವಾಗಿ ಬಲಹೀನವಾಗಿದ್ದೇನೋ ನಿಜ, ಆದರೆ ಎಂತಹ ಪರಿಸ್ಥಿತಿಯಲ್ಲೂ ತನ್ನ ಅಂತ:ಶಕ್ತಿ ಮತ್ತು ಸತ್ಯ ಧರ್ಮಗಳ ಆಧಾರದಿಂದಲೇ ತಲೆಯೆತ್ತಿ ನಿಂತ ಈ ದೇಶ ನಂತರ ಸಾಧಿಸಿದ್ದು ಅಪಾರ.
ಸನಾತನ ಸಂಸ್ಕೃತಿಯ ಸಾಕಾರ ಅಡಿಪಾಯವೇ ಈ ದೇಶವನ್ನು ಎಷ್ಟೆಲ್ಲಾ ಘೋರ ಆಕ್ರಮಣ, ದೌರ್ಜನ್ಯಗಳು ನಡೆದರೂ ಮತ್ತೆ ಮತ್ತೆ ತಲೆಯೆತ್ತಿ ವಿಶ್ವಮಾನ್ಯ ರಾಷ್ಟ್ರವಾಗಿಸಿದ್ದು. ಅಲೆಕ್ಸಾಂಡರಿನಿಂದ ಹಿಡಿದು ಡಚ್, ಪೋರ್ಚುಗೀಸ್ ಮತ್ತು ಬ್ರಿಟಿಷರವರೆಗೂ ಭಾರತವನ್ನು ವಶಪಡಿಸಿಕೊಳ್ಳಲಾಗದ ಸೋಲಿನ ಕಥೆಗಳೇ ಸಾಕ್ಷಿಯಾಗಿರುವುದು ಇತಿಹಾಸದ ಪುಟಗಳಲ್ಲಿ.ಭಾರತವನ್ನು ಹಾವಾಡಿಗರ ದೇಶ, ಜಾತಿಯಾಧಾರಿತ ಸಮಾಜ ವ್ಯವಸ್ಥೆಯ ದೇಶ, ಮೂಢನಂಬಿಕೆಗಳ ನೆಲೆವೀಡು…. ಎಂದೆಲ್ಲಾ ಬಿಂಬಿಸಿದ್ದಾಯ್ತು… ಒಂದು ದೇಶವು ವಿಶ್ವಶಕ್ತಿಯಾಗಿ ಹೊರಹೊಮ್ಮುವುದನ್ನು ನಿರ್ಬಂಧಿಸುವ ಗುರಿಯು ತನ್ನ ದಿಕ್ಕನ್ನು ಬದಲಿಸಿ ಸಾಂಸ್ಕೃತಿಕವಾಗಿ ಭಾರತವನ್ನು ಪಾಶ್ಚಾತ್ಯ ಸಂಸ್ಕೃತಿಯ ಪ್ರತಿರೂಪವನ್ನಾಗಿ ಮಾಡುವತ್ತ ತಿರುಗಿದ್ದು, ಇದಕ್ಕಾಗಿ ಕಳೆದ ನೂರು ವರ್ಷಗಳಿಂದ ಪ್ರಯತ್ನ ಹೊಸ ರೀತಿಯಲ್ಲಿ ನಡೆಯುತ್ತಲೇ ಇದೆ.
ರಾಜ್ ಕುಮಾರ್: ನಾಡಿನ ಸೃಜನಶೀಲ ಆಯಾಮ
– ರಾಜಕುಮಾರ.ವ್ಹಿ.ಕುಲಕರ್ಣಿ,ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
‘ಐದು ಕೋಟಿ ಕನ್ನಡಿಗರನ್ನು ಜಾಗೃತಗೊಳಿಸಲು ಇಡೀ ಕನ್ನಡ ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಇದ್ದಾಗ,ಕಲಾವಿದನಾಗಿ ರಾಜ್ ಕುಮಾರ್ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನಸ್ಸನ್ನು ತಲುಪಿದರು’ ಕನ್ನಡದ ವರನಟ ರಾಜ್ ಕುಮಾರ್ ಕುರಿತು ಡಾ.ಯು.ಆರ್.ಅನಂತಮೂರ್ತಿ ಅವರು ಹೇಳಿದ ಮಾತಿದು.ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಮತ್ತು ಇದು ಮುಖಸ್ತುತಿಯೂ ಅಲ್ಲ.
ನಿಜ.ಯಾರಿಗೂ ಸಾಧ್ಯವಾಗದೇ ಇರುವುದನ್ನು ರಾಜ್ ಕುಮಾರ್ ಒಬ್ಬ ಕಲಾವಿದನಾಗಿ ಸಾಧಿಸಿದರು.ರಾಜ್ ಕುಮಾರ್ ಎಂದರೆ ಕನ್ನಡ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರು ಅನಿವಾರ್ಯವಾದರು.ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಜ್ ಕುಮಾರ್ ಪೂರ್ವದಲ್ಲಿ ಮತ್ತು ರಾಜ್ ಕುಮಾರ್ ನಂತರ ಎನ್ನುವ ರೀತಿ ಕನ್ನಡ ಸಿನಿಮಾ ಪ್ರಪಂಚದ ಅವಿಭಾಜ್ಯ ಅಂಗವಾದರು.ಕನ್ನಡ ಚಿತ್ರರಂಗದ ಈ ಮೇರುನಟ ಎಪ್ರಿಲ್ ೧೨ ರಂದು ತೀವ್ರ ಹೃದಯಾಘಾತದಿಂದ ನಿಧನರಾದಾಗ ಸಿನಿಮಾ ಲೋಕ ಮಾತ್ರವಲ್ಲ ಇಡೀ ಕನ್ನಡ ನಾಡು ಆಘಾತದಿಂದ ತತ್ತರಿಸಿ ಹೋಯಿತು.ಬದುಕಿದ್ದರೆ ಈ ದಿನ (ಏಪ್ರಿಲ್ ೨೪) ತಮ್ಮ ೮೬ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.
ವಿಶ್ವವಿದ್ಯಾಲಯಗಳಲ್ಲಿ ಜಾತಿಪ್ರೇಮ
– ರಾಜಕುಮಾರ.ವ್ಹಿ.ಕುಲಕರ್ಣಿ,ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಕೆಲವು ವರ್ಷಗಳ ಹಿಂದೆ ನನ್ನ ಪರಿಚಯದ ಹುಡುಗನೊಬ್ಬ ಪಿಹೆಚ್.ಡಿ ಪದವಿಗಾಗಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೊಂದಾಯಿಸಿದ್ದ. ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಡಾಕ್ಟರೇಟ್ ಕನಸು ಕಾಣುತ್ತಿದ್ದವನಿಗೆ ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ ಅಧ್ಯಯನಕ್ಕೆ ಪ್ರವೇಶ ದೊರೆತದ್ದು ಸಹಜವಾಗಿಯೇ ಖುಷಿ ನೀಡಿತ್ತು. ಸಮಾಜ ವಿಜ್ಞಾನ ವಿದ್ಯಾರ್ಥಿಯಾದ ಅವನಿಗೆ ತನ್ನ ಸಂಶೋಧನೆಯಿಂದ ಸಮಾಜಕ್ಕೊಂದು ವಿಶಿಷ್ಟ ಕೊಡುಗೆ ನೀಡುವ ಆಸೆಯಿತ್ತು. ಓದಿನಲ್ಲಿ ಜಾಣ ವಿದ್ಯಾರ್ಥಿಯಾಗಿದ್ದ ಆತ ಹಲವು ಕನಸುಗಳನ್ನು ಕಟ್ಟಿಕೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ. ಹತ್ತಿರದಿಂದ ಅವನ ಏಳ್ಗೆಯನ್ನು ಗಮನಿಸುತ್ತ ಬಂದಿದ್ದ ನನಗೆ ಕೂಡಾ ಅವನಿಗೆ ದೊರೆತ ಆ ಅವಕಾಶ ಸಂತಸ ತಂದಿತ್ತು. ಅದಾದ ನಂತರ ಹಲವು ತಿಂಗಳುಗಳ ಕಾಲ ನಾನು ನನ್ನ ಕೆಲಸದ ನಡುವೆ ಆ ವಿಷಯವನ್ನು ಮರೆತು ಬಿಟ್ಟೆ. ಅವನೂ ಸಹ ತನ್ನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನನ್ನನ್ನು ಅನೇಕ ತಿಂಗಳುಗಳ ಕಾಲ ಸಂಪರ್ಕಿಸಲಿಲ್ಲ.
ಈ ನಡುವೆ ವೈಯಕ್ತಿಕ ಕೆಲಸಕ್ಕೆಂದು ನನ್ನೂರಿಗೆ ಹೋಗುತ್ತಿದ್ದ ಸಮಯ ಬಸ್ ನಿಲ್ದಾಣದಲ್ಲಿ ಚಹಾ ಕುಡಿಯಲೆಂದು ಇಳಿದಾಗ ಇದ್ದಕ್ಕಿದ್ದಂತೆ ಅನೀರಿಕ್ಷಿತವಾಗಿ ಅವನ ಭೇಟಿಯಾಯಿತು. ದೈಹಿಕವಾಗಿ ತುಂಬಾ ಬಳಲಿದವನಂತೆ ಕಾಣುತ್ತಿದ್ದ. ಮಾತಿನ ನಡುವೆ ಅವನ ಸಂಶೋಧನಾ ವಿಷಯ ಚರ್ಚೆಗೆ ಬಂದಿತು. ಎಲ್ಲಿಯವರೆಗೆ ಬಂದಿದೆ ನಿನ್ನ ಸಂಶೋಧನಾ ಕಾರ್ಯ ಎಂದು ಕೇಳಿದ ನನ್ನ ಪ್ರಶ್ನೆಗೆ ಅಳುವೇ ಅವನ ಉತ್ತರವಾಗಿತ್ತು. ಮಾರ್ಗದರ್ಶಕರು ಸಹಕರಿಸುತ್ತಿಲ್ಲವೆಂದು ತಾನು ಸಂಶೋಧನಾ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟು ಬಿಡಲು ನಿರ್ಧರಿಸಿರುವುದಾಗಿ ಹೇಳಿದ. ಜೊತೆಗೆ ವಿಶ್ವವಿದ್ಯಾಲಯದಲ್ಲಿ ಜಾತಿಯತೆಯ ಲಾಬಿ ಬಹಳಷ್ಟಿದೆ ಎಂದು ಮತ್ತು ಆ ವಾತಾವರಣದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ. ನಿರುತ್ಸಾಹಗೊಳ್ಳದಿರೆಂದು ಧೈರ್ಯ ಹೇಳಿ ಅವನನ್ನು ಬಿಳ್ಕೊಟ್ಟು ನಾನು ಹೋಗಬೇಕಿದ್ದ ಬಸ್ ಹತ್ತಿದೆ.
ಮತ್ತಷ್ಟು ಓದು
ಸೆಮೆಟಿಕ್ ರಿಲಿಜನ್ನಿನ ಪವಿತ್ರ ಗ್ರಂಥಗಳೂ ಮತ್ತು ಹಿಂದೂ ಧರ್ಮದ ವೇದಗಳೂ
– ವಿನಾಯಕ ಹಂಪಿಹೊಳಿ
ಸೆಮೆಟಿಕ್ ರಿಲಿಜನ್ನಿನ ಅನುಯಾಯಿಗಳು ತಮ್ಮ ಪವಿತ್ರ ಗ್ರಂಥಗಳ ರಚನೆಯನ್ನು ಕಾಲದ ಪರಿಧಿಯೊಳಗೇ ಕಾಣುತ್ತಾರೆ.ಸೃಷ್ಟಿಯ ನಂತರವೇ,ಆಡಮ್,ಮೋಸಸ್ ಬರುವದರಿಂದ ಸೃಷ್ಟಿ ಮೊದಲು, ಹಳೆ ಒಡಂಬಡಿಕೆ ನಂತರ ಎಂಬುದು ಅವರ ನಂಬಿಕೆ ಮತ್ತು ಅದು ತರ್ಕಕ್ಕೆ ಒಪ್ಪತಕ್ಕದ್ದೂ ಆಗಿದೆ. ಜೀಸಸ್ ನಂತರವೇ ಹೊಸ ಒಡಂಬಡಿಕೆ, ಪೈಗಂಬರರ ನಂತರವೇ ಖುರಾನ್ ಆವೃತ್ತಿ ಎಂಬುದನ್ನೂ ಒಪ್ಪುತ್ತಾರೆ. ಇವರೆಲ್ಲರಿಗೂ ಸೃಷ್ಟಿ ಒಂದೇ ಆಗಿರುತ್ತದೆ. ಕೇವಲ ಒಮ್ಮೆ ಮಾತ್ರ ಸೃಷ್ಟಿಯಾಗಿರುವ ಇಲ್ಲಿ ಪ್ರಳಯದ ನಂತರ ಇನ್ನೊಂದು ಸೃಷ್ಟಿ, ನಂತರ ಮತ್ತೊಂದು ಸೃಷ್ಟಿ, ಈ ಸೃಷ್ಟಿಯ ಹಿಂದಿನ ಇನ್ನೊಂದು ಸೃಷ್ಟಿ ಇವುಗಳ ಬಗ್ಗೆ ಅವರು ನಂಬುವದೇ ಇಲ್ಲವಾದ್ದರಿಂದ, ಅವರ ಪವಿತ್ರ ಗ್ರಂಥಗಳಿಗೆ ಕಾಲದ ಎಲ್ಲೆಕಟ್ಟುಗಳು ಇರುವದು ಯುಕ್ತವೇ ಆಗಿದೆ ಎಂದರೂ ತಪ್ಪಿಲ್ಲ.
ಗಮನಿಸಬೇಕಾದ ಅಂಶವೆಂದರೆ, ನಂತರ ಬಂದ ಸೆಮೆಟಿಕ್ ರಿಲಿಜನ್ ಹಿಂದಿನಿಂದ ಬಂದ ರಿಲಿಜನ್ ಅನ್ನು ತಿರಸ್ಕರಿಸದೇ, ಕೇವಲ ಅದರ ಪರಿಷ್ಕೃತ ಆವೃತ್ತಿ ಎಂಬುದಾಗಿ ಮಾತ್ರ ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಹಳೇ ಒಡಂಬಡಿಕೆಯಲ್ಲಿ ಪ್ರಕ್ಷೇಪಗಳಾಗಿರುವದರಿಂದ ಜೀಸಸ್ ಮುಖಾಂತರ ಮೂಲ ಬೋಧನೆಗಳನ್ನು ಹೊಸ ಒಡಂಬಡಿಕೆಯಲ್ಲಿ ನೀಡಲಾಗಿದೆ ಎಂದು ಕ್ಯಾಥೋಲಿಕ್ ಜನರೂ,ಎರಡೂ ಒಡಂಬಡಿಕೆಯಲ್ಲಿ ಪ್ರಕ್ಷೇಪಗಳಾಗಿರುವದರಿಂದ ಖುರಾನಿನಲ್ಲಿ ಇನ್ನೊಮ್ಮೆ ಮೂಲ ಬೋಧನೆಗಳನ್ನು ನೀಡಲಾಗಿದೆ ಎಂದು ಮುಸ್ಲಿಮ್ ಜನರೂ ಭಾವಿಸುತ್ತಾರೆ. ವಿಶೇಷವೆಂದರೆ ಖುರಾನು ತನ್ನ ಹಿಂದಿನ ಗ್ರಂಥಗಳಂತೆ ಭವಿಷ್ಯದಲ್ಲಿ ಇನ್ನೊಬ್ಬ ದೇವದೂತನ ಆಗಮನವನ್ನು ಅಲ್ಲಗಳೆದು ಅದೇ ಅಂತಿಮ ಎಂದು ಹೇಳಿಕೊಂಡಿದೆ.
ಮತ್ತಷ್ಟು ಓದು
ಸರಳ ಯೋಚನೆ ಕಾಲದ ಅನಿವಾರ್ಯ
– ಡಾ.ಕಿರಣ್.ಎಂ ಗಾಜನೂರು
ಗೌರವಾನ್ವಿತ ಮು.ಅ ಶ್ರೀರಂಗ ಅವರೆ ತಾವು ನನ್ನ ಲೇಖನಕ್ಕೆ ನೀಡಿದ ಸಹಸ್ಪಂದನಕ್ಕೆ ಧನ್ಯವಾದಗಳು.ನೀವು ಎತ್ತಿರುವ ಪ್ರಶ್ನೆಗಳು ನಿಮ್ಮೊಬ್ಬರವೆ ಅಲ್ಲ ಜಗತ್ತಿನ ಬಹಳಷ್ಟು ಜನ ಇದೆ ಮಾದರಿಯ ಪ್ರಶ್ನೆಗಳನ್ನು ಹೊಂದಿದ್ದಾರೆ.ಆದರೆ,ಉತ್ತರ ಮತ್ತು ಪರಿಹಾರದ ಪ್ರಯತ್ನಗಳಿಂದ ದೂರ ಉಳಿದಿದ್ದಾರೆ.ನಮ್ಮ ನಡುವೆಯೇ ಇರುವ ಪ್ರಸನ್ನ ಅವರಂತಹ ಕೆಲವರಿಂದ ನಮ್ಮ ಆಧುನಿಕತೆಯ ವ್ಯಸನಗಳಿಗೆ ಪರಿಹಾರದ ಪ್ರಯತ್ನಗಳು ನಡೆದಾಗ ಅದನ್ನು ನೈತಿಕವಾಗಿ ಸಮರ್ಥಿಸುವುದು ನನ್ನ ನೈತಿಕತೆ ಎಂಬುದು ನನ್ನ ನಿಲುವು.ಇನ್ನು ನಾನು ನಿಮಗೆ ಎರಡು ಉದಾಹರಣೆಗಳ ಮೂಲಕ ಸುಸ್ಥಿರ ಬದುಕನ್ನು ವಿವರಿಸುವ ಪ್ರಯತ್ನ ಮಾಡುತ್ತೇನೆ.
೧) ಒಂದು ಜಗತ್ತಿನ ಶ್ರೇಷ್ಟ ನಟ ಚಾರ್ಲಿ ಚಾಂಪ್ಲೀನ್ ನ ಒಂದು ಸಿನಿಮಾ ಇದೆ ಮಾಡ್ರನ್ ಟೈಮ್ಸ್ ಅಂತ.ಅದರಲ್ಲಿ ಆತನೊಂದು ಕಾರ್ಖಾನೆಯ ನೌಕರ, ಆ ಉದ್ದಿಮೆಯ ಮಾಲಿಕನಿಗೆ ತನ್ನ ನೌಕರರು ಊಟ ಮಾಡುವ ಸಮಯದಲ್ಲಿ ಕೆಲಸ ನಿಲ್ಲಿಸುತ್ತಿದ್ದಾರೆ ಇದರಿಂದ ನಷ್ಟವಾಗುತ್ತಿದೆ ಅನ್ನಿಸುತ್ತದೆ ಆದ್ದರಿಂದ ಊಟ ಮಾಡುತ್ತಲೇ ಕೆಲಸ ಮಾಡುವ ಒಂದು ಯಂತ್ರವನ್ನು ರೂಪಿಸುವ, ಅಳವಡಿಸುವ ಪ್ರಯತ್ನ ಮಾಡುತ್ತಾನೆ ಮತ್ತು ಪರೀಕ್ಷಾರ್ಥವಾಗಿ ಅದನ್ನು ಚಾರ್ಲಿಯ ಮೇಲೆ ಪ್ರಯೋಗಿಸಲಾಗುತ್ತದೆ ಮುಂದಿನದು ಹಾಸ್ಯದ ಮೂಲಕವೇ ತನ್ನ ಕಾಲದ ಉದ್ಯಮಿಗಳ ಆಸೆಬುರುಕ ತನವನ್ನು ವಿಡಂಬನೆ ಮಾಡುವ ಚಿತ್ರ ಆಧುನಿಕತೆಯ ಪ್ರಭಾವಕ್ಕೆ ಒಳಗಾದ ಮನುಷ್ಯ ಹೇಗೆ ತನ್ನ ಸಹಜೀವಿಯಾದ ಇನ್ನೂಬ್ಬ ಮನುಷ್ಯನನ್ನು ನೌಕರ, ಕಾರ್ಮಿಕ, ಕೂಲಿ ಇತ್ಯಾದಿ ಚೌಕಟ್ಟುಗಳಲ್ಲಿ ನೋಡುತ್ತಾನೆ ಮತ್ತು ಲಾಭದ ಕಾರಣಕ್ಕೆ ಮಾನವೀಯತೆಯನ್ನು, ವ್ಯಕ್ತಿ ಗೌರವವನ್ನು ನಗಣ್ಯಗೊಳಿಸುತ್ತಾನೆ ಎಂಬುದನ್ನು ಚಿತ್ರ ಅಚ್ಚುಕಟ್ಟಾಗಿ ಕಟ್ಟಿಕೊಡುತ್ತದೆ.